Monday, November 30, 2015

ಅಕ್ಕಯ್ಯ ಅಂಡ್ ಶಶಿ ಜನುಮದ ಜೋಡಿ

ಒಂದಾನೊಂದು ಕಾಲ.. ಒಂದು ರೀತಿಯ ವಿಚಿತ್ರ ಮನಸ್ಥಿತಿಯಲ್ಲಿದ್ದ ಪರ್ವ..
ಕೀಳರಿಮೆ, ಕಾಡುವ ಸಂಕಟಗಳು ಇದರಿಂದ ನೊಂದು ಬಳಲಿ ಬೆಂಡಾಗಿದ್ದ (ಈಗಲೂ ಹಾಗೆ ಅದು ಬೇರೆ  ವಿಷಯ) ಒಂದು ಮಹಾನ್ ಪರ್ವ ಅದು.

ಹಂಚಿಕೊಳ್ಳುವ ಸುಖವಿರಲಿಲ್ಲ, ಕಷ್ಟಗಳನ್ನು ಹೇಳಿಕೊಳ್ಳಲು ಅಭಿಮಾನ ಅಡ್ಡ ಬರುತ್ತಿತ್ತು. ಆದರೂ ನನಗೆ ಆ ಭಾವ ಬರದಂತೆ, ಬಂದರೂ ಅದನ್ನು ನನ್ನ ಕಾಡದಂತೆ ಮಾಡಲು ಶ್ರಮಿಸಿದವರು ನನ್ನ ಮನೆಯವರು.. ಹಾಗೂ ನನ್ನ ಜೀವದ ಗೆಳೆಯರಾದ ಪಂಚ ಪಾಂಡವರ ಪಡೆ.

ಶಶಿ, ವೆಂಕಿ, ಜೆಎಂ, ಲೋಕಿ ಮತ್ತು ನಾನು ಸೇರಿ ಪಂಚ ಪ್ರಾಣಗಳೇ ಆಗಿದ್ದೆವು. ಪ್ರತಿಭಾ ಎಂಬ ಅಪ್ಪಟ ಹೃದಯವಂತೆ ನಮ್ಮ ಗೆಳೆಯ ಶಶಿಯನ್ನು ವರಿಸಿದಾಗ, ನಮಗೆ ಕಾದಿದ್ದು ಶಶಿ ನಮ್ಮ ಗುಂಪಿನಿಂದ ಕಾಣೆಯಾದ ಹಾಗೆ ಎಂದು.

ಏಕೆಂದರೆ, ಅನೇಕ ಗೆಳೆಯರ ಗುಂಪುಗಳನ್ನು ನೋಡಿದ್ದೇನೆ, ಮದುವೆಯ ತನಕ ಚೆನ್ನಾಗಿದ್ದವರು ಆಮೇಲೆ ಹಠಾತ್ ಮಾಯಾ ಆಗಿಬಿಡುತ್ತಾರೆ. ಎಲ್ಲೋ ಒಂದು ವರ್ಷಕ್ಕೂ ಎರಡು ವರ್ಷಕ್ಕೊ ಹಾಯ್ ಬಾಯ್ ಅಂತ ಹೇಳಿಕೊಂಡು ತಿರುಗುವ ಅನೇಕ ಗುಂಪುಗಳ ಮಧ್ಯೆ ನಮ್ಮ ಗುಂಪಿನಲ್ಲಿ ಪ್ರತಿಭಾ ಬಂದ ಮೇಲೆ ಏನೂ ಎಂದರೆ ಏನೂ ಬದಲಾಗಲಿಲ್ಲ.

ಕಾರಣ, ಅವರು ನಮ್ಮೊಳಗೇ ಒಬ್ಬರಾಗಿ ಬಿಟ್ಟರು, ಅಣ್ಣ, ವೆಂಕಯ್ಯ, ಲೋಕಿ, ಜೆಎಂಗಾರು ಅಂತ ನಮ್ಮನ್ನು ಕರೆಯುತ್ತಾ ನಮ್ಮ ಗುಂಪಿನಲ್ಲಿ ಪುಟ್ಟ ತಂಗಿಯಾಗುವ ಬದಲು ನಮಗೆಲ್ಲಾ ಪ್ರೀತಿಯ ಅಕ್ಕಯ್ಯ ಆಗಿ ಬಿಟ್ಟರು. ನಮ್ಮನ್ನೆಲ್ಲ ಎಷ್ಟು ಹಚ್ಚಿ ಕೊಂಡಿದ್ದಾರೆ ಅಂದರೆ, ತಮ್ಮ ಇನಿಯ ಶಶಿಯ ಹತ್ತಿರ ನಮ್ಮ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ನಾವು ಅವರಿಗೆ ಹೊಸದಾಗಿ ಹೇಳುವ ಅವಶ್ಯಕತೆ ಏನೂ ಇರುವುದಿಲ್ಲ. ಆದರೆ ಅವರ ಹೃದಯಾ ಸಿರಿವಂತಿಕೆ ಎಂದರೆ, ನಮ್ಮ ಜೀವನದಲ್ಲಿ ಆಗುವ ಏನೇ ಘಟನೆ ಆದರೂ ನಾವು ಅವರಿಗೆ ಹೇಳಿದರೆನೆ ಏನೋ ಒಂದು ತರಹ ಖುಷಿ.

ಏನೇ ವಿಷಯ ಇದ್ದರೂ ಅಕ್ಕಯ್ಯನ ಬಳಿ ಹೇಳಿಕೊಂಡರೆ ಸಮಾಧಾನ... ಅಂಥಹ ಅಕ್ಕಯ್ಯ ನಮ್ಮ ಮುದ್ದು ಗೆಳೆಯ ಶಶಿಯ ಜೀವನಕ್ಕೆ ಬಂದು ಕಳೆದ ವಸಂತಗಳು ಹದಿನೇಳು. ನಿನ್ನೆ ಮೊನ್ನೆ ಮದುವೆ ಆಗಿದ್ದರೇನೋ ಅನ್ನುವಂಥಹ ಅನ್ಯೋನ್ಯತೆ, ನಗು, ಪ್ರೀತಿ ವಿಶ್ವಾಸ ಬೆಳೆಯುತ್ತಲೇ ಇದೆ. ನಮಗೆಲ್ಲ ಒಂದು ಮಾದರಿ ಜೋಡಿ ಅವರಿಬ್ಬರದು.

ಇವನು ಶಾಂತ ಸ್ವಭಾವದ ಹುಡುಗ, ಅಕ್ಕಯ್ಯ ಅಷ್ಟೇ ಮಂದಸ್ಮಿತೆ, ಇವನಿಗೆ ಗೆಳೆಯರು ಅಂದರೆ ಪಂಚಪ್ರಾಣ, ಅಕ್ಕಯ್ಯನಿಗೆ ಯಜಮಾನನ ಗೆಳೆಯರು ಅಂದ್ರೆ ಅಷ್ಟೇ ಪ್ರಾಣ.

ಅಕ್ಕಯ್ಯ ಮಾಡುವ ಅಡಿಗೆ ನೆನೆಸಿಕೊಂಡರೆ ಸದಾ ಹೊಟ್ಟೆ ಹಸಿಯುತ್ತದೆ. ಇವರಿಬ್ಬರ ಉಪಚಾರ ಒಂದು ರೀತಿಯಲ್ಲಿ ನಮಗೆ ದೇವರು ಕೊಟ್ಟ ವರ.

ಇಂಥಹ ಅದ್ಭುತ ಜೋಡಿಗೆ ಇಂದು ವಿವಾಹ ದಿನದ ಶುಭ ಸಂಭ್ರಮದಲ್ಲಿದ್ದಾರೆ. ನಾವೆಲ್ಲಾ ಮಾಡಬೇಕಾದ್ದು ಹಾಗೆ ಸುಮ್ಮನೆ ಹಾಯ್ ಅಕ್ಕಯ್ಯ ವಿವಾಹ ದಿನದ ಶುಭಾಶಯಗಳು ಅಂದರೆ ಸಾಕು.. ಹಾಯ್ ಶಶಿ ವಿವಾಹ ದಿನದ ಶುಭಾಶಯಗಳು ಅಂದರೆ ಸಾಕು.

ಇಷ್ಟೊತ್ತಿಗೆ ಅಕ್ಕಯ್ಯ ಶ್ರೀಕಾಂತ್ ಅಣ್ಣ ಏನೂ ಬರೆದಿಲ್ಲ.. ಅವರನ್ನು ಮಾತಾಡಿಸೋಲ್ಲ ಅಂತ ವೀರ ಪ್ರತಿಜ್ಞೆ ಮಾಡಿರುತ್ತಾರೆ, ಆ ಪ್ರತಿಭಾ ದೇವಿಗೆ ಶಾಂತ ಮಾದಪ್ಪ ಎಂದು ಆ ದುರ್ಗಾ ದೇವಿಯನ್ನು ಜಪಿಸುತ್ತಾ, ನಡುಗುವ ಸ್ವರದಲ್ಲಿ ಅಕ್ಕಯ್ಯ ತಡವಾಗಿದೆ ಆದರೆ ಕಚೇರಿಯ ಕೆಲಸದ ಒತ್ತಡ ಇದ್ದದರಿಂದ ತಡವಾಗಿ ಆದ್ರೆ ಮೂವತ್ತನೇ ನವೆಂಬರ್ ೨೦೧೫ ರಂದೇ ಶುಭ ಕೋರುತ್ತಿದ್ದೇನೆ ಒಪ್ಪಿಸಿಕೊಳ್ಳಿ ಈ ಭಕ್ತನ ಶುಭಾಶಯಗಳನ್ನು ಎಂದು ಕೋರುತ್ತೇನೆ.

ಅಕ್ಕಯ್ಯ ಅಂಡ್ ಶಶಿ ಜನುಮದ ಜೋಡಿ ನೀವು ಶುಭವಾಗಲಿ, ಪ್ರತಿಭೆಯ ಶೋಭೆ ಉದಯವಾಗುತ್ತಲೇ ಇರಲಿ 

Saturday, October 24, 2015

ನಿವಿ ಸ್ಪೆಷಲ್ ---- "ಅರ್ಪಿತ"ವಾಯ್ತು !!!

ಅದೊಂದು ಬೆಳಗಿನ ಜಾವ.. ದಿನಕರ ಆಗಷ್ಟೇ ಕಣ್ಣುಜ್ಜಿ ತನ್ನ ಸುಂದರ ಮೊಗವನ್ನು ತೋರಿಸಲೋ ಬೇಡವೋ ಎನ್ನುವಂತೆ ತಿಣುಕಾಡುತ್ತಿದ್ದ ಮೋಡಗಳ ಮರೆಯಲ್ಲಿ...

ಚಳಿಗಾಲ ಆರಂಭವಾಗಿತ್ತು. ಚುಮುಚುಮು ಚಳಿ ತಣ್ಣನೆ ನಡುಗಿಸುತ್ತಿತ್ತು

ಅಲ್ಲೊಂದು ಅರಳಿ ಮರ.. ಅದರಡಿಯಲ್ಲಿ ಸುಮಾರು ಮಂದಿ..

ಆ ಮರದ ವಿರುದ್ಧ ದಿಕ್ಕಿನಲ್ಲಿ ಒಂದು ಸಣ್ಣ ಚಹಾ ಅಂಗಡಿ.. ಕೆಲವರು ಚಳಿಯನ್ನು ಹೊಡೆದೋಡಿಸಲು ಚಹಾಕ್ಕೆ ಮೊರೆ ಹೋಗುತ್ತಿದ್ದರು.

ಹಕ್ಕಿಗಳ ಚಿಲಿಪಿಲಿ, ಹಸು ಕರುಗಳ ಅಂಬಾ ನಾದ, ಗೆಜ್ಜೆ ನಾದ, ಕೋಳಿಗಳ ಕುಕ್ಕುಕ್ ಕುಕ್ಕುಕ್ ಎನ್ನುವ ಸದ್ದನ್ನು ಮೀರಿ .. ಗುಜು ಗುಜು ಮಾತುಗಳ ಸದ್ದು ಬರುತ್ತಲೇ ಇತ್ತು..

ಹೆಸರಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು
ಯಾವ ಹೆಸರು, ಏನು ಹೆಸರು, ಹೆಂಗೆ ಇತ್ಯಾದಿ

ಮರದಡಿಯಲ್ಲಿ ನಿಂತು ಈ ವಿದ್ಯಾಮಾನವನ್ನೆಲ್ಲ ನೋಡುತ್ತಿದ್ದ ಅರ್ಪಿತ, ತನ್ನ ಕಡು ಕಪ್ಪು ನೀಳಗೂದಲನ್ನು  ಒಮ್ಮೆ ಅತ್ತಿತ್ತ ಸರಿ ಪಡಿಸಿಕೊಂಡು, ಬೆಕ್ಕಿನ ನಡಿಗೆಯಲ್ಲಿ ಬಂದಳು.

ಎಲ್ಲರಲ್ಲೂ ಕುತೂಹಲ, ಒಮ್ಮೆಲೇ ತಾವು ಚರ್ಚಿಸುತ್ತಿದ್ದ ವಿಚಾರವನ್ನು ಕ್ಷಣಕಾಲ ಮರೆತರೆನೋ ಎನ್ನುವಷ್ಟು ಸಹಜತೆಯಿಂದ ಆಕೆಯನ್ನು ನೋಡುತ್ತಾ ನಿಂತರು.

ಕಾರಣ, ಆಕೆಯ ಮುಗ್ಧ ಮುಖ... ಬ್ರಹ್ಮ ತುಂಬಾ ಯೋಚನೆ ಮಾಡಿ ಮಾಡಿ ಸೃಷ್ಟಿ ಮಾಡಿದ ಕಲಾರತ್ನ ಎನ್ನುವಂತಿತ್ತು.

"ನೋಡಿ, ಕೇಳಿ" ಎರಡೇ ಮಾತು ಆಡಿದ್ದು, ಅಲ್ಲಿದ್ದ ಜನರೆಲ್ಲಾ ಸುತ್ತಾ ಮುತ್ತಾ ನೋಡಿದರು, ವಸಂತ ಕಾಲ ಅಲ್ಲ, ಕೋಗಿಲೆ ಕುಹೂ ಕುಹೂ ಎನ್ನೋಕೆ.

ಇದೇನಪ್ಪ ಈ ಶರದೃತುವಿನಲ್ಲೂ ಕೋಗಿಲೆಯ ದನಿ ಸಾಧ್ಯವೇ ಎನ್ನುವಷ್ಟು ಕುತೂಹಲದ ಗಂಗೆ ಎಲ್ಲರ ಕಣ್ಣುಗಳಲ್ಲಿಯೂ ಉಕ್ಕುತ್ತಿತ್ತು.

ಆಕೆ ಮತ್ತೆ ತನ್ನ ಮಧುರ ದನಿಯಿಂದ...

"ನೋಡಿ ಇಲ್ಲಿ ಕೇಳಿ. ನಾ ಸುಮಾರು ಹೊತ್ತಿನಿಂದ ಈ ನಿಮ್ಮ ಚರ್ಚೆಯನ್ನು ಗಮನಿಸುತ್ತಿದ್ದೇನೆ.. ನಿಮ್ಮ ಚರ್ಚೆಯ ಮೂಲವಸ್ತು ಒಂದು ಹೆಸರಿನ ಅರ್ಥದ ಬಗ್ಗೆ ಅಲ್ಲವೇ.. ""

ಎಲ್ಲರೂ ಮಂತ್ರ ಮುಗ್ಧರಾದಂತೆ ನಿಂತೇ ಇದ್ದರು, ಯಾರು ಮಾತಿಲ್ಲ.. ವಶೀಕರಣ ಮಾಡಿದ್ದಾರೆಯೋ ಎನ್ನುವಷ್ಟು ಅಲ್ಲಿದ್ದವೆರೆಲ್ಲ ಆ ನೋಟದ ಮಾತಿನ ಬಂಧನಕ್ಕೆ ಒಳಗಾಗಿದ್ದರು.

ಆಕೆ ನಿಧಾನವಾಗಿ ಮರದ ಮರೆಯಲ್ಲಿ ಸಂಕೊಂಚದಿಂದ ನಿಂತಿದ್ದ ತನ್ನ ಆಪ್ತ ಗೆಳತಿಯನ್ನು ಕರೆದುತಂದು.. "ನೋಡಿ ಇವರೇ.. ಇವರೇ ಆ ಹೆಸರಿನ ಒಡತಿ.. ಈಗ ಹೇಳಿ, ನಿಮ್ಮ ಚರ್ಚೆ ಏನು ಎಂದು.... ಇವರು ಎರಡು ನಿಮಿಷಗಳಲ್ಲಿ ನಿಮ್ಮ ಚರ್ಚೆಗೆ ಒಂದು ಪೂರ್ಣ ವಿರಾಮ ಇಡುತ್ತಾರೆ.. "

ಭಗವಂತ ಅಚಾನಕ್ ಪ್ರತ್ಯಕ್ಷವಾದರೆ ಹೇಗಿರುತ್ತೋ ಆ ಸ್ಥಿತಿ ಅಲ್ಲಿ ನೆರೆದಿದ್ದ ಎಲ್ಲರದಾಗಿತ್ತು..

ಅರ್ಪಿತ ತಾನೇ ಮಾತಾಡಲು ಶುರುಮಾಡಿದರು "ನೋಡಿ.. ಕೇಳಿ.. (ಇವರೆಡೆ  ಪದಗಳು ಸಾಕಾಗಿತ್ತು ಅಲ್ಲಿದ್ದವರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು).. ನಾನು ಭಗವಂತನನ್ನು ನೋಡಿಲ್ಲ, ಆದರೆ ಆ ಕಾಣದ ಶಕ್ತಿಯ ಬಗ್ಗೆ ಕೇಳಿದ್ದೇನೆ... ನಾನು ಬ್ರಹ್ಮನ ಯಾವುದೋ ಸೃಷ್ಠಿಯ ಕಡತದಲ್ಲಿದ್ದೆ.. ಇವರೇ ನೋಡಿ ನನ್ನನ್ನು ಅಲ್ಲಿಂದ ಎಳೆದು ತಂದು ಬ್ರಹ್ಮನ ಸೃಷ್ಠಿಗೆ ಮರು ಸೃಷ್ಠಿ ಮಾಡಿದ್ದಾರೆ.. ನನ್ನ ಹೆಸರಿಗಿಂತ ಇವರ ಹೆಸರ ಮೇಲೆ ವ್ಯಾಮೋಹ ನನಗೆ.. "

ಮತ್ತೆ ಎಲ್ಲರ ದೃಷ್ಟಿ ಇನ್ನೊಬ್ಬ ಆಕೆಯ ಮೇಲೆ ನೆಟ್ಟಿತು.

"ದೇವರೇ ಒಮ್ಮೆ ತನಗೆ ತಾನೇ ಹೇಳಿಕೊಳ್ಳುತ್ತಾನೆ, ಅಥವಾ ನಿವೆದಿಸಿಕೊಳ್ಳುತ್ತಾನೆ .. ಅಥವಾ ತನ್ನ ಭಕ್ತರಿಗೆ ಶರಣಾಗುತ್ತಾನೆ. ಅಂಥಹ ಹೆಸರು ಇವರದು. ಪುರಾತನ, ಅವಿನಾಶ ಭಾವ ಹೊತ್ತಿರುವ ಇವರ ಹೆಸರಿನ ಅರ್ಥ ವಿಸ್ತಾರವನ್ನು ಹೇಳ ಹೊರಟರೆ ಮುಗಿಯಲಸಾಧ್ಯ. ನಾನು ಇವರ ಬಳಿ ನಿವೇದಿಸಿಕೊಳ್ಳೋಣ ಎಂದು ಕೊಂಡಿದ್ದೆ, ಆದರೆ ಅಷ್ಟರಲ್ಲಿಯೇ ನನ್ನ ಮನದಾಳದ ಬಯಕೆಯನ್ನು ಅರಿತು ಇವರು ನನಗೆ ಒಂದು ಪಾತ್ರವನ್ನೇ ಅರ್ಪಿಸಿದರು. ನನಗೆ ದೇವರು ಹೇಗೆ ಏನು ಗೊತ್ತಿಲ್ಲ ಆದರೆ ಇವರೇ ನನಗೆ ದೇವರು.. ಇವರ ಹೆಸರು ನಿವೇದಿತ ಚಿರಂತನ್ .. ಅಂದರೆ ದೇವರಿಗೆ ಅರ್ಪಿತವಾದ, ಕಲಾ ಸಾಮ್ರಾಜ್ಯಕ್ಕೆ ಅರ್ಪಿತವಾದ, ತಮ್ಮ ಪ್ರತಿಭೆಯನ್ನು ಕಲಾದೇವಿಗೆ ಅರ್ಪಿಸಿರುವ, ಅವಿನಾಶ ಭಾವ ಅಥವಾ ಶಾಶ್ವತ ಭಾವ ಹೊಂದಿರುವ ಸುಂದರ ಮಾನವ ಸೃಷ್ಠಿ ಎಂದು ಅರ್ಥ"

"ಇದೆ ಪದಕ್ಕೆ / ಹೆಸರಿಗೆ ಅಲ್ಲವೇ ನೀವೆಲ್ಲಾ ಚರ್ಚೆ ಮಾಡುತ್ತಿದ್ದದ್ದು.. ನೋಡಿ ನಿವೇದಿತ ಚಿರಂತನ್ ಎನ್ನುವ ಹೆಸರೇ ನನ್ನ ಪಾತ್ರದ ಉಗಮಕ್ಕೆ ಕಾರಣವಾಗಿದ್ದು.. ಅದಕ್ಕಾಗಿಯೆ ಕಪಾಟಿನಲ್ಲಿದ್ದ ನನ್ನ ಪಾತ್ರ ಚಳಿಯನ್ನು ಲೆಕ್ಕಿಸದೆ ಹೊರಗೆ ಬಂದು ನಿಮ್ಮಗಳ ಅನುಮಾನ ಪರಿಹರಿಸಿದೆ. "

ಮತ್ತೆ ಇನ್ನೊಂದು ವಿಷಯ.. ಇಂದು ನನ್ನ ಒಡತಿಯ ಜನುಮದಿನ.. ಅವರಿಗೆ ಶುಭಾಶಯ ಹೇಳಲು ನಾ ಹೊರಗೆ ಬರಬೇಕು ಎಂದುಕೊಂಡಿದ್ದೆ. ಅವರು ಸೃಷ್ಠಿಸಿದ್ದ ಪಾತ್ರಗಳೆಲ್ಲ ಜೊತೆಯಾಗಿ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು, ಆದರೆ ನನಗೆ ಇವರ ಮೇಲೆ ಅದೇನೋ ಪ್ರೀತಿ.. ಹಾಗೆಯೇ ಇವರಿಗೆ ನನ್ನ ಮೇಲೆ ಅದೇನೋ ಪ್ರೀತಿ.. ಅ ಕಾರಣಕ್ಕೆ ನಾ ಬೇಗ ಪುಸ್ತಕದಿಂದ ಧುಮುಕಿ ಹೊರಗೆ ಬಂದೆ.. ಬನ್ನಿ ಬನ್ನಿ ಎಲ್ಲರೂ ಈ ಚುಮುಚುಮು ಚಳಿಯಲ್ಲಿ ಚಹಾ ಕುಡಿದು, ಶುಭಾಷಯ ಹೇಳೋಣ, ಮತ್ತೆ ನನ್ನ ಸಹ ಪಾತ್ರಗಳೆಲ್ಲ ನಮ್ಮ ಒಡತಿಯ ಸಂಭ್ರಮದ ದಿನಕ್ಕೆ ಒಂದು ಪುಟ್ಟ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.. ನಾ ಬೇಗನೆ ಹೋಗಬೇಕು ಅಲ್ಲಿಗೆ"

ಜಾದುಗಾರನ ವಶೀಕರಣದ ಮಂತ್ರದ ನೋಗದಿಂದ ಕಳಚಿಕೊಂಡವರಂತೆ ಜೋರಾಗಿ ಆ ಚಳಿಗೆ ಅನುಕೂಲವಾಗುವಂತೆ "ನಿವೇದಿತ ಚಿರಂತನ್" ಮೇಡಂ ನಿಮ್ಮ ಕಲಾ ಸಾಮ್ರಾಜ್ಯ ಪ್ರಜ್ವಲಿಸಲಿ, ನೀವು ಸೃಷ್ಠಿಸಿದ ಪ್ರತಿ ಪಾತ್ರಗಳು ಜೀವಂತವಾಗಿ ಓಡಾಡಲಿ, ನಿಮ್ಮ ಬರಹಗಳು ಪ್ರಪಂಚದ ಮೂಲೆ ಮೂಲೆಗೂ ಮುಟ್ಟಲಿ. ನಿಮ್ಮ ಚಿತ್ರಕಲೆ ಇನ್ನಷ್ಟು ಬೆಳಗಲಿ. ನೀವು ಅಡಿ ಇಟ್ಟ ಪ್ರತಿ ಪಥದಲ್ಲೂ ಮಾತೆ ಸರಸ್ವತಿ ಮತ್ತು ಮಾತೆ ಲಕ್ಷ್ಮಿ ಇವರಿಬ್ಬರ ಅನುಗ್ರಹ ಶಾಶ್ವತವಾಗಿ ನೆಲಸಲಿ" ಎಂದು ಜೋರಾಗಿ ಒಕ್ಕುರುಲಿನಿಂದ ಶುಭಾಷಯಗಳ ಸಂದೇಶವುಳ್ಳ ತಾಳೆಗರಿಗಳನ್ನು ಒಬ್ಬೊಬ್ಬರಾಗಿ ನಾಚಿಕೆಯಿಂದ ನಿಂತಿದ್ದ ನಿವೇದಿತ ಚಿರಂತನ್  ಅವರಿಗೆ ಕೊಟ್ಟರು.

ನಿವೇದಿತ ಚಿರಂತನ್ ಎಂದಿನಂತೆ ಮಾತು ಕಮ್ಮಿ. ಅತ್ತಿತ್ತ ನೋಡಿದರು ಕೀಲಿ ಮಣೆ ಇದ್ದರೇ ಮಾತಾಡೋಣ ಎಂದು.. ಆದರೆ ಹೃದಯ ತುಂಬಿಬಂದಿತ್ತು.. ಪದಗಳು ಹುಡುಕಾಡುತ್ತಿದ್ದವು

ಚಹದ ಅಂಗಡಿಯಲ್ಲಿ ವಿವಿಧ ಭಾರತಿಯಲ್ಲಿ ಬರುತ್ತಿತು "ಇದು ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗ.. ಈಗ ಕೇಳಿ ನಮ್ಮೆಲ್ಲರ ಪ್ರೀತಿಯ ನಿವೇದಿತ ಚಿರಂತನ್ ಅವರ ಹುಟ್ಟು ಹಬ್ಬಕ್ಕೆ ಅರ್ಪಿತವಾದ ಈ ಸುಂದರ ಹಾಡು...

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಹಾಡದೆ ಉಳಿದಿಹ ಮಾತು ನೂರಿದೆ"

****

ಅಂತರ್ಜಾಲದಲ್ಲಿ ಸಿಕ್ಕ ಅದ್ಭುತ ಸ್ನೇಹಿತೆ ಇವರು. ಇವರು ಬರೆವ ಲೇಖನಗಳ ಅಭಿಮಾನಿ. ಅದ್ಭುತ ಅದ್ಭುತ ಎನ್ನಿಸುವ ಪಾತ್ರಗಳು, ಕಥೆಗಳನ್ನು ಹೆಣೆಯುವ ಇವರ ಕಲೆಗೆ ನಾ ಮೂಕನಾಗಿದ್ದೇನೆ. ಎಲ್ಲಾ ಕಥೆಗಳು ಕುತೂಹಲಕಾರಿಯಾಗಿರುತ್ತದೆ, ಒಂದು ಕಥೆ ಇನ್ನೊಂದರ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಬೆರಳುಗಳ ಹಾಗೆ, ಎಲ್ಲವೂ ವಿಭಿನ್ನ. ಇನ್ನು ಇವರು ಚಿತ್ರಕಲೆಯ ಬಗ್ಗೆ ಮಾತಿಲ್ಲ ಕಥೆಯಿಲ್ಲ, ನೋಡಿಯೇ ಆನಂದಿಸಬೇಕು.

ಇವರ ಮಾತಿನ ಶಕ್ತಿ ಬಹು ಪರಿಣಾಮಕಾರಿ. ಯಾವುದೇ ಗೊಂದಲವಿರಲಿ ಇವರ ಬಳಿ ಒಮ್ಮೆ ಮಾತಾಡಿದರೆ ಸಾಕು ಸ್ಪಟಿಕದಷ್ಟೇ ಸ್ಪಷ್ಟವಾಗುತ್ತದೆ. ಮಾತು ಮುಗಿದೊಡನೆ ಮನಸ್ಸು ನಿರಾಳವಾಗುತ್ತದೆ ಜೊತೆಯಲ್ಲಿ ಆ ಗೊಂದಲಗಳನ್ನು ಪರಿಹರಿಸುವ ಮಾರ್ಗವೂ ನಮಗೆ ಹೊಳೆದುಬಿಡುತ್ತದೆ. ಇದು ಅವರ ವಿಶ್ಲೇಷಣೆಯ ಚತುರಗಾರಿಕೆ.

ಹೊಗಳಿಕೆ ಅಲ್ಲಾ.. ಇದು ನನ್ನ ಮನದಾಳದ ಮಾತುಗಳು, ಲೇಖನವಾಗಿ ಮೂಡಿ ಬಂದಿದೆ. ದೇವರಿಗೆ ಒಂದು ದೊಡ್ಡ ಧನ್ಯವಾದ ಹೇಳಲೇ ಬೇಕು ಇಂಥಹ ಅದ್ಭುತ ಸ್ನೇಹಿತೆಯನ್ನು ಕೊಟ್ಟದ್ದಕ್ಕೆ, ಜೊತೆಯಲ್ಲಿ ಕುವೈತ್ ನಲ್ಲಿ ಪ್ರತಿಭಾ ಕಣಜವಾಗಿರುವ ಶ್ರೀ ಅಜಾದ್ ಅವರಿಗೂ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆ ಕಾರಣ, ಫೇಸ್ ಬುಕ್ ನಲ್ಲಿ ಅಜಾದ್ ಸರ್ ಕೊಟ್ಟ ನಿವೇದಿತ ಅವರ ಒಂದು ಬ್ಲಾಗ್ ಲೇಖನ ನನ್ನನ್ನು ಈ ನಿವೇದಿತ ಎಂಬ ಮಹಾನ್ ಪ್ರತಿಭೆಯ ಪರಿಚಯವಾಗಲುಕಾರಣವಾಯಿತು .

********

ನಿವಿ ಸಂಕೊಂಚ ಎನ್ನಿಸಿದರೆ ನನ್ನ ಕ್ಷಮೆ ಇರಲಿ.. ನಿಮ್ಮ ಹುಟ್ಟುಹಬ್ಬಕ್ಕೆ ಒಂದು ನಾಲ್ಕು ಸಾಲು ಬರೆಯಬೇಕೆಂಬ ಹಂಬಲ ಹೊತ್ತು ಶುರುಮಾಡಿದ್ದು ಒಂದು ಲೇಖನವೇ ಆಗಿ ಹೋಯಿತು.

*******

ಹುಟ್ಟು ಹಬ್ಬಕ್ಕೆ ಶುಭಾಶಯಗಳು ನಿವಿ, ನೀವು ಕಂಡ ಕನಸುಗಳೆಲ್ಲ ನನಸಾಗಲಿ. ಆ ನನಸಿನಲ್ಲಿ ನೆಮ್ಮದಿ, ಶಾಂತಿ, ನಗು ಎಲ್ಲವೂ ಸದಾ ನಿಮ್ಮ ಜೊತೆಯಲ್ಲಿ ಸಾಗಲಿ. ಮತ್ತೊಮ್ಮೆ ನನ್ನ ಪರಿವಾರದ ಸಮಸ್ತ ಅಭಿಮಾನಿ ದೇವರುಗಳ ಕಡೆಯಿಂದ ಶುಭಾಶಯಗಳು.. 

Sunday, August 2, 2015

ನೆನಪಿನ ಬುತ್ತಿಯನ್ನು ಹೊತ್ತು ಸಾಗಿದ್ದು ಮುತ್ತತ್ತಿಗೆ!!!!

ಸ್ನೇಹಿತರ ದಿನಕ್ಕೆ ಒಂದು ಲೇಖನ ಬೇಕು ಎಂದು ರಶ್ಮಿ ಪುಟ್ಟಿ ಕೇಳಿದಾಗ ಇಲ್ಲವೆನ್ನಲಾಗಲಿಲ್ಲ .. ಸ್ನೇಹ ಸ್ನೇಹಿತರ ಬಗ್ಗೆ ಬರೆಯಲು ಕಡಲಷ್ಟು ವಿಷಯಗಳು ಇರುವಾಗ ಹೇಗೆ ಇಲ್ಲ ಎನ್ನಲಿ.. ಅಲ್ಲವೇ

ಕನ್ನಡಪ್ರಭ ಅಂತರ್ಜಾಲ ಪತ್ರಿಕೆಗಾಗಿ ಬರೆದ ಲೇಖನ ಸ್ನೇಹಿತರ ದಿನಕ್ಕೆ ಮತ್ತು ನನ್ನೆಲ್ಲ ಸ್ನೇಹಿತರಿಗೆ ಅರ್ಪಿತ.. ಹಾಗೆಯೇ ರಶ್ಮಿ ಪುಟ್ಟಿ ಮತ್ತು ಕನ್ನಡ ಪ್ರಭ ಪತ್ರಿಕಾ ಬಳಗಗಕ್ಕೆ ಧನ್ಯವಾದಗಳನ್ನು ಹೇಳುತ್ತಾ ನನ್ನ ಪುರಾಣ ಶುರುಮಾಡುವೆ!

ಕನ್ನಡ ಪ್ರಭ ಅಂತರ್ಜಾಲ ಪತ್ರಿಕೆಯ ಕೊಂಡಿ

**************

ಅಂದಿಗೂ ಇಂದಿಗೂ ನ್ಯಾಷನಲ್ ಎಜುಕೇಶನ್ ಸೊಸೈಟಿ ತನ್ನದೇ ಆದ ಘನತೆ ಗಾಂಭೀರ್ಯ ಹೊತ್ತು ನಿಂತಿದೆ.. ನ್ಯಾಷನಲ್ ಪ್ರೌಢಶಾಲೆ ಬಸವನಗುಡಿ ಶಾಖೆಯಲ್ಲಿ ಕಳೆದ ಮೂರು ವರ್ಷ ನಮ್ಮ ಜೀವನಕ್ಕೆ ಒಂದು ಅತ್ಯುತ್ತಮ ಹಾದಿ ತೋರಿಸಿಕೊಟ್ಟಿತು.

ಅತ್ಯುತ್ತಮ ಶಿಕ್ಷಕ ವರ್ಗ, ಮುಂದಾಳತ್ವ, ಸದಾ ಹುಮ್ಮಸ್ಸಿನಿಂದ ಕೂಡಿದ್ದ ಶ್ರೀ ಹೆಚ್ ನರಸಿಂಹಯ್ಯ ಈ ಗೋಪುರದ ಕಳಶವನ್ನು ಸದಾ ಲಕ ಲಕ ಎನ್ನುವಂತೆ ಬೆಳಗಲು ಶ್ರಮವಹಿಸಿದ್ದರು.

ಸರಿ ಈಗ ವಿಷಯಕ್ಕೆ ಬರುತ್ತೇನೆ.. ೧೯೮೫ ರಿಂದ ೧೯೮೮ ರವರೆಗೆ  ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿಮೂರು ವರ್ಷ ಜೊತೆಯಲ್ಲಿ ಓದಿದ ಸಹಪಾಟಿಗಳನ್ನು ತಂತ್ರಜ್ಞಾನ ಎಲ್ಲೆಲ್ಲೂ ಹಬ್ಬಿರುವ ಈ ಕಾಲದಲ್ಲಿ ಹುಡುಕುವುದು ಕತ್ತಲೆಯಲ್ಲಿ ಕರಿಬೆಕ್ಕು ಹುಡುಕಿದಂತೆ. ಹೇಗೋ ಸಾಹಸದಿಂದ ಸುಮಾರು ಸಹಪಾಟಿಗಳನ್ನು ಹುಡುಕಿ ತಡಕಿ ಒಂದು ಅಡ್ಡದಲ್ಲಿ ಕೂಡಿ ಹಾಕಿ, ಪ್ರತಿ ವರ್ಷವೂ ಸೇರುವ ಕಾರ್ಯಕ್ರಮ ಆಯೋಜಿಸಿದ್ದು ಆಯ್ತು, ಇದು ನಾಲ್ಕು ವರ್ಷಗಳಿಂದ ನೆಡೆದು ಬರುತ್ತಿದೆ.

ಕಳೆದ ಭಾನುವಾರ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಮೆಲ್ಲುತ್ತಾ, ಹೊಟ್ಟೆಯೊಳಗೆ ಬಂದ ಒಂದು ಯೋಚನೆಯನ್ನು ಕಾರ್ಯಗತ ಮಾಡಲು ಹೊರಟಿದ್ದು ಕನಕಪುರದ ಮುತ್ತತ್ತಿ ಎಂಬ ಕಾವೇರಿ ಮಡಿಲಿನ ಕಾಡಿಗೆ.

ಆರು ಮಂದಿ, ಒಂದು ಕಾರು, ಕಾರಿನ ಡಿಕ್ಕಿಯಲ್ಲಿ ಒಂದು ದಿನದ ಅಡಿಗೆ ಮಾಡಿ ತಿನ್ನಲು ಬೇಕಾದ ಎಲ್ಲಾ ಸಲಕರಣೆಗಳು ತುಂಬಿ ಚಿಟಿಕೆ ಹೊಡೆದವು. ಇವತ್ತು ನಮಗೆ ಹಬ್ಬ ಕಣ್ರೋ ಎಂದು.

ಬ್ರಹ್ಮಾನಂದ ಕಾರಿನ ಚುಕ್ಕಾಣಿ ಹಿಡಿದ, ಬೆಳಿಗ್ಗೆ ಸುಮಾರು ಏಳು ಘಂಟೆಗೆ ಕಾರು ನಾಗಾಲೋಟದಿಂದ ಹೊರಟಿತು ಮುತ್ತತ್ತಿಯ ಕಡೆಗೆ. ಕಾರಿನಲ್ಲಿ ಹಾಡು ಬೇಕಿರಲಿಲ್ಲ, ಕಾರಣ ನಮ್ಮ ಮಾತುಗಳು ೩೦ ವರ್ಷಗಳಿಂದ ಶುರುವಾಗಿತ್ತು. ಹಲವಾರು ವಿಷಯಗಳು ಸುಮಾರು ನಾಲ್ಕು ವರ್ಷಗಳಿಂದ ಸೈಕಲ್ ಹೊಡೆದಿದ್ದರೂ ಯಾರಿಗೂ ಬೋರ್ ಅಥವಾ ಬೇಸರ ಎಂಬುದೇ ಇರಲಿಲ್ಲ.

ವಾಸುದೇವ್ ಅಡಿಗ ಹೋಟೆಲ್ನಲ್ಲಿ ಹೊಟ್ಟೆಗೆ ಅಷ್ಟು ಆಧಾರ ಮಾಡಿಕೊಂಡು, ಮುತ್ತತ್ತಿಗೆ ಬಂದು ಇಳಿದಾಗ ಸುಮಾರು ಹತ್ತು ಮೂವತ್ತು.

ಮುತ್ತತ್ತಿ ಹನುಮನ ಆಶೀರ್ವಾದ ಪಡೆದು ಸರ ಸರ ಗುಡಾರವನ್ನು ಸಿದ್ಧಪಡಿಸಿ, ತಂದಿದ್ದ ತರಕಾರಿ ಮುಂತಾದ ಪದಾರ್ಥಗಳನ್ನು ಸಿದ್ಧಪಡಿಸಿ ನಳಪಾಕಕ್ಕೆ ಕೈ ಹಾಕಿಯೇ ಬಿಟ್ಟೆವು. ಬಾಣಸಿಗನಾಗಿ ವೆಂಕಿ ಸೌಟನ್ನು ಕೈಯಲ್ಲಿ ಹಿಡಿದರೆ, ಅಗ್ನಿ ದೇವನನ್ನು ಕರೆತರುವ ಕಾರ್ಯ ನನಗೆ ಬಿಟ್ಟು, ಜುಗಳ ಬಂದಿ ಹಾಡಲು ಶಶಿ ವೆಂಕಿಗೆ ಜೊತೆಯಾದನು. ಬ್ರಹ್ಮ ಮತ್ತು ಶ್ರೀಧರ ತರಕಾರಿಯ ಪೋಸ್ಟ್ ಮಾರ್ಟಂ ಶುರು ಮಾಡಿದರು. ಪ್ರಸಾದ್ ತನ್ನ ಅಡುಗೆ ಸಾಹಸವನ್ನು ಹೇಳಿದ್ದರಿಂದ ಅವನಿಗೆ ಪೋಷಕ ಪಾತ್ರವನ್ನು ಕೊಟ್ಟು, ಆಹಾರ ಸಿದ್ಧವಾದ ಮೇಲೆ ಅದರ ಬಣ್ಣ ನೋಡಿ ಸರಿ ಇದೆಯಾ ಅಥವ ಇಲ್ಲ ಎಂದು ನಿರ್ಧರಿಸುವ ಗುಣಮಟ್ಟ ನಿರ್ದೇಶಕನನ್ನಾಗಿ ಮಾಡಿದೆವು.

ಸಾಮಾನ್ಯ ಅಳುವ ಮತ್ತು ಅಳಿಸುವ ಈರುಳ್ಳಿ ನಮ್ಮ ಸ್ನೇಹಲೋಕವನ್ನು ಕಂಡು, ನಮ್ಮ ಆತ್ಮೀಯತೆಯನ್ನು ಕಂಡು ಹೇಳಿದ ಮಾತು ಸೂಪರ್ ಇತ್ತು "ಗೆಳೆಯರೇ ಇಂದು ನಿಮ್ಮ ಕಣ್ಣಲ್ಲಿ ನೀರು ಬಂದರೆ ಅದಕ್ಕೆ ನಾ ಖಂಡಿತ ಕಾರಣ ಅಲ್ಲ, ಬದಲಿಗೆ ಆನಂದ ಭಾಷ್ಪ ಬರುವುದು ನಿಮ್ಮೆಲ್ಲರ ಹಾಸ್ಯಭರಿತ ಮಾತುಗಳು, ನಿಮ್ಮ ಶಾಲಾ ದಿನಗಳ ಅಪೂರ್ವ ಘಟನೆಗಳ ಬುತ್ತಿಯನ್ನು ನೀವು ಬಿಚ್ಚಿ ನಲಿಯುವ ಸಂಭ್ರಮದಿಂದ ಮಾತ್ರ".

ವೆಂಕಿ ಅಡಿಗೆ ಶುರುಮಾಡಿದ ರೀತಿ, ನಮ್ಮ ಹೊಟ್ಟೆಯೊಳಗೆ ಇದ್ದ ಹಸಿವಿನ ಹುಳುಗಳು, ನಾವು ಏನೂ ಮಾತಾಡೋಲ್ಲ ಎಂದು ನಮಗೆಲ್ಲಾ ಹೇಳಿ ಸುಮ್ಮನೆ ಬಚ್ಚಿತ್ತುಕೊಂಡವು. ಸುತ್ತಾ ಮುತ್ತಾ ಯಾವುದೇ ಪ್ರಾಣಿಯೂ ಕೂಡ ಹತ್ತಿರ ಬರಲಿಲ್ಲ. ಮಧ್ಯೆ ಮಧ್ಯೆ ನಮ್ಮ ತರಲೆ ಮಾತುಗಳು, ತುಂಟತನಗಳು, ಕಚೇರಿಯ ಒತ್ತಡದ ಕೆಲಸದ ಮಧ್ಯೆ ಮೊಗದಲ್ಲೂ ನಗೆ ಕಡಲು ಉಕ್ಕಬಹುದು ಎನ್ನುವುದನ್ನೇ ಮರೆತಿದ್ದ ನಮಗೆ ಮತ್ತೆ ನಗೆಗಡಲಿಗೆ ನಮ್ಮನ್ನು ಕರೆದೊಯ್ದು ಮುಳುಗಿಸಿಬಿಟ್ಟಿತು.

ಅನ್ನ, ಹುಳಿ (ಬೆಂಗಳೂರು ಭಾಷೆಯ ಸಾಂಬಾರ್), ಬೋಂಡ, ಬಜ್ಜಿ, ಜೊತೆಯಲ್ಲಿ ನೆಂಚಿಕೊಳ್ಳಲು ಉಪ್ಪಿನಕಾಯಿ, ಆಲೂ ಚಿಪ್ಸ್, ಕಡಲೇಕಾಯಿ ಬೀಜ (ಕಾಂಗ್ರೆಸ್), ಮೊಸರು ಎಲ್ಲವೂ ನಮ್ಮ ಹೊಟ್ಟೆಯೊಳಗೆ ಪ್ರವೇಶ ಮಾಡಲು ತವಕಿಸುತ್ತಿದ್ದವು, ಆದರೆ ಅವೆಲ್ಲ ಹೇಳಿದ್ದು ಒಂದೇ ಮಾತು.. ಲೋ ನಮಗೆಲ್ಲ ಎಲ್ರೋ ಜಾಗ ಕೊಟ್ಟಿದ್ದೀರಾ.. ನಕ್ಕು ನಕ್ಕು ನಗಿಸಿ ನಗಿಸಿ ಹೊಟ್ಟೆಯೊಳಗೆ ನೋಡು ಜಾಗವೇ ಇಲ್ಲ, ಎಲ್ಲಿ ನೋಡಿದರೂ ನಗೆ ಬಲೂನುಗಳು ದಾರ ಹಿಡಿದು ಓಡಾಡುತ್ತಿವೆ. ಅವುಗಳ ಮಧ್ಯೆ ಬೆಂಗಳೂರಿನ ವಾಹನ ದಟ್ಟಣೆಯ ಮಧ್ಯೆ ಆಟೋ ರಿಕ್ಷಾಗಳು, ಮೋಟಾರ್ ಬೈಕ್ ಗಳು ಜಾಗ ಮಾಡಿ ನುಗ್ಗುವ ಹಾಗೆ ನುಗ್ಗಬೇಕು ಅಷ್ಟೇ ಎಂದು ಹೇಳುತ್ತಾ ನಮ್ಮ ಅನುಮತಿ ಕಾಯದೆ ನುಗ್ಗಿಯೇ ಬಿಟ್ಟವು.

ಅಮೋಘ ದಿನವಾಗಿತ್ತು ಆ ಭಾನುವಾರ ೨೬ನೆ ಜುಲೈ ೨೦೧೫. ನಕ್ಕು ನಕ್ಕು ನನಗೆ ತಲೆ ನೋಯಲು ಶುರುವಾಗಿತ್ತು. ಒಬ್ಬರಾದ ಮೇಲೆ ಒಬ್ಬರು ನಗೆ ಬಾಂಬುಗಳನ್ನು ಸಿಡಿಸುತ್ತಲೇ ಇದ್ದರು.

ವೆಂಕಿ ಸಾಂಬಾರು ಮಾಡಿದ ರೀತಿ, ಅದನ್ನು ನೋಡಿ ಮನದೊಳಗೆ ಬಯ್ದುಕೊಂಡು ಅದನ್ನು ವಿಧಿಯಿಲ್ಲದೇ ತಿಂದದ್ದು, ಬ್ರಹ್ಮ ಹೇಳಿದ ತಿಳುವಳಿಕೆ ಮಾತುಗಳು, ಶಶಿಯ ಹಾಸ್ಯ ಭರಿತ ನಾಡಬಾಂಬುಗಳು. ಶ್ರೀಧರ ಏನೂ ತೋಚದೆ ಏನಾದರೂ ಮಾಡಿಕೊಳ್ಳಿ ಎಂದು ಹೇಳುತ್ತಲೇ ನಮ್ಮ ಜೊತೆಯಲ್ಲಿ ವೆಂಕಿಗೆ ಸಹಸ್ರಾರ್ಚನೆ ಮಾಡಿದ್ದು, ಪ್ರಸಾದ್ ತನ್ನ ಅಡುಗೆ ಪರಾಕ್ರಮ ಹೇಳಿದ್ದು, ಇದನ್ನೆಲ್ಲಾ ಸಂತಸದಿಂದ ಅನುಭವಿಸಿ ಒಂದು ಲೇಖನ ಮಾಡಲೇಬೇಕು ಎಂದು ಹೊರಟಾಗ ಅದಕ್ಕೆ ಸಹಾಯ ಮಾಡಿದ ಛಾಯಾಚಿತ್ರಗಳು ಸದಾ ನೆನಪಲ್ಲಿ ಉಳಿಯುತ್ತವೆ.

ಶ್ರೀಧರ್,  ಪ್ರಸಾದ್, ಶಶಿ, ವೆಂಕಿ, ಬ್ರಹ್ಮ & ಶ್ರೀ 

ಒಂದು ಸುಂದರ ಭಾನುವಾರವನ್ನು ಅಷ್ಟೇ ಸಮಯೋಚಿತವಾಗಿ ಮತ್ತು ಸುಂದರವಾಗಿ ಕಳೆದ ಬಗೆ ನಮಗೆ ಹೆಮ್ಮೆ ಇತ್ತು. ಮತ್ತು ಸ್ನೇಹ ಅಂದ್ರೆ ಹೀಗೆ ಇರಬೇಕು ಎನ್ನಿಸುವಷ್ಟು ಆಪ್ತವಾಗಿತ್ತು ಆ ದಿನ.

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ... ಅದೇ ಅಲ್ಲವೇ ಸ್ನೇಹದ ಸಂಕೋಲೆಯ ಮಜಾ.. !!!

ಸ್ನೇಹಿತರ ದಿನಕ್ಕೆ ಎಲ್ಲರಿಗೂ ಶುಭಾಶಯಗಳು. 

Wednesday, July 15, 2015

ಅಬ್ಬಬ್ಬಾ.. ಎಷ್ಟು ವರ್ಷಗಳಾಯಿತು!!!

ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಸುಮ್ಮನೆ ಕೂತಿರುತ್ತಾರೆ.. ಅಚಾನಕ್ ಒಂದು ದೂರವಾಣಿ ಕರೆ ಬರುತ್ತೆ..

"ಶಂಕ್ರು ಶಂಕ್ರು ನಾನು.. ನಿನ್ನ ಅಮ್ಮ ಕಣೋ"
ಇತ್ತ ಕಡೆಯಿಂದ ಅಣ್ಣಾವ್ರಿಗೆ ಗೊತ್ತಾಗುತ್ತದೆ ಶಂಕರನ ತಾಯಿ ಮಾತಾಡ್ತಾ ಇರೋದು.. ಅಂತ
"ಸುಮತಿ ನಾನು ನಿನ್ನ ರಾಜಶೇಖರ್ ಮಾತಾಡ್ತಾ ಇರೋದು"

ಅಬ್ಬಬ್ಬಾ.. ಎಷ್ಟು ವರ್ಷಗಳಾಯಿತು.. ಎಂದು ಹೇಳುವಾಗ ಅಬ್ಬಬ್ಬ ಎನ್ನುವ ಮಾತು ಕೇಳುವುದೇ ಒಂದು ಚಂದ..

ಹಾಗೆಯೇ ೧೯೯೩ ಏಪ್ರಿಲ್ ಮಾಸದಲ್ಲಿ ಪದವಿ ಶಿಕ್ಷಣ ಮುಗಿಸಿ.. ಜೀವನದ ಹಾದಿಗೆ ಎಲ್ಲರೂ ತಮ್ಮ ತಮ್ಮ ನಡೆಯನ್ನು ಅನುಸರಿಸುತ್ತಾ ಸಾಗಿದಾಗಿನ ಮಾತು

.. ಆ ನಮ್ಮ ಕಾಲದಲ್ಲಿ ಇಂದಿನ ದಿನಗಳ ಹಾಗೆ ಸಾಮಾಜಿಕ ತಾಣ ಎನ್ನುವ ಪದ ಅಂದರೆ .. ಬಸ್ ನಿಲ್ದಾಣ, ಹಳೆಯ ಹೋಟೆಲ್, ಆಟದ ಮೈದಾನ, ಕಾಲೇಜಿನ ಕ್ಯಾಂಟೀನ್ ಇದೆ ಆಗಿತ್ತು.. ಫೇಸ್ಬುಕ್, ಈ ಮೇಲ್, ವ್ಹಾಟ್ಸಾಪ್... ಇವೆಲ್ಲ ಪದಕೊಶದಲ್ಲಿಯೇ ಜಾಗವನ್ನು ಕಂಡಿರದ ಕಾಲವಾಗಿತ್ತು..

ಎಲ್ಲರನ್ನು ಒಂದು ನೆರಳಲ್ಲಿ ನಿಲ್ಲಸಬೇಕು ಎನ್ನುವ ಒಂದು ಸಣ್ಣ ಕಿಡಿ ನಮ್ಮ ತರಗತಿಯ ಆ ಕಾಲದ ಬಾಂಡ್ ಎಂದೇ ಹೆಸರಾಗಿದ್ದ ಹರಿನಾಥ್ ಶುರು ಮಾಡಿದ.. ಅವನಿಗೆ ಸಾತ್ ನೀಡಿದ್ದು ಚೆಲುವಾಂತ ಚೆನ್ನಿಗ ಅನಿಲ್.. ಹೀಗೆ ಕಳೆದ ಬುಧವಾರ ೭ ನೆ ತಾರೀಕು ಜುಲೈ ೨೦೧೫ ಶುರುವಾದ ಒಂದು ವಾಟ್ಸಾಪ್ ಗುಂಪಿಗೆ ಬಿದ್ದ ಸ್ನೇಹದ ಬಿಂಧುಗಳು ಇಂದಿಗೆ ೨೯.

ಹೀಗೆ ಶುರುವಾದ ನಮ್ಮ ಗುಂಪು.. ಇಂದು ಅಂದರೆ ಬುಧವಾರ ೧೫ ಜುಲೈ ೨೦೧೫ ಬೆಳಿಗ್ಗೆ ಒಬ್ಬರ ಕಾಲು ಒಬ್ಬರು ಎಳೆಯುತ್ತಾ ಕಾಫೀಗೆ ಸಿಗೋಣ ಅದು ಇದು ಎನ್ನುತ್ತಾ ಸಂಜೆ ಗಾಂಧಿ ಬಜಾರಿನ ನ್ಯೂ ಕೃಷ್ಣ ಭವನ್ ದಲ್ಲಿ ಭೇಟಿ ಆಗಿಯೇ ಬಿಟ್ಟೆವು..

ಕಾಲನ ದಾಳಿ.. ಸಂಸಾರದ ಜವಾಬ್ಧಾರಿ.. ಕಛೇರಿ ಕೆಲಸದ ಒತ್ತಡ, ಸಾಧಿಸಬೇಕು ಎನ್ನುವ ಛಲ... ದೇಹವನ್ನು, ಕೇಶವಿನ್ಯಾಸವನ್ನು, ಆಕಾರವನ್ನು ಅನೇಕ ಬಗೆಯಲ್ಲಿ ಬದಲಾಯಿಸಿತ್ತು.. ಆದರೆ ಇವರು ನಮ್ಮ ಗೆಳೆಯರು, ಇವರೊಡನೆ ಒಂದಷ್ಟು ಕಾಲ ಜೊತೆಯಾಗಿ ಓದಿದ್ದೆವು, ನಲಿದಾಡಿದ್ದೆವು .. ಇವನು ನಮ್ಮ ಆಪ್ತ ಮಿತ್ರ ಎನ್ನುವ ಆ ಮನಸ್ಥಿತಿ ಇಂದಿಗೂ ನಮ್ಮೆಲ್ಲರಲ್ಲಿ ಇದ್ದದ್ದು ವಿಶೇಷ..

ಹಳೆಯ ದಿನಗಳ ತಾಜಾ ನೆನಪನ್ನು ಮತ್ತೊಮ್ಮೆ ಕಾಲಗರ್ಭದಿಂದ ಹೊರತೆಗೆದು ಅದನ್ನು ಹೆಕ್ಕಿ, ಆರಿಸಿ, ನೆನಪಿಸಿಕೊಂಡ ಬಗೆ ಅಮೋಘ..,

ನಮ್ಮ ನಗು, ಕೇಕೆ, ಹಳೆಯ ಗೆಳೆಯರನ್ನು ಹೊಸರೂಪದಲ್ಲಿ ಕಂಡ ಆನಂದ ಎಷ್ಟು ಪರಿಮಿತಿ ಮೀರಿತ್ತು ಎಂದರೆ.. ಆ ಹೋಟೆಲಿಗೆ ಬಂದಿದ್ದ ಮಿಕ್ಕ ಅತಿಥಿಗಳು ನಮ್ಮನ್ನೆಲ್ಲ ಅನಾಗರೀಕರು ಎನ್ನುವ ಹಾಗೆ ನೋಡುತ್ತಾ.. ಮುಖದಲ್ಲಿ ಏನನ್ನೋ ಕಳೆದುಕೊಂಡ ರೀತಿಯನ್ನು ವ್ಯಕ್ತ ಪಡಿಸುತ್ತಾ ನಮ್ಮ ಬಗ್ಗೆ ಅತೃಪ್ತಿಯಿಂದ ನೋಡುತ್ತಿದ್ದರು.. ಆದರೆ ನ್ಯೂಟನ್ ಸಿದ್ದಾಂತವನ್ನು ಪ್ರತಿಪಾದಿಸುತ್ತಲೇ ಮಂಗನಿಂದ ಮಾನವ ಅಲ್ಲ ಕೆಲವೊಮ್ಮೆ ಮತ್ತೆ ಮಾನವ ತನಗೆ ಬೇಕಾದಾಗ ಮಂಗ ಆಗಬಲ್ಲ ಎಂದು ನಿರೂಪಿಸಿದ ಕ್ಷಣ ಅದು..

ಘಂಟೆ ಒಂಭತ್ತು ಮೂವತ್ತು ಆಗಿತ್ತು.. ಯಾರಿಗೂ ಮನೆಗೆ ಹೋಗಬೇಕು ಎನ್ನುವ ತವಕ (ಕೆಲವರನ್ನು) ಬಿಟ್ಟು ಮಿಕ್ಕವರಿಗೆ ಬಂದಿರಲೇ ಇಲ್ಲ...

ನಾನು ಪದವಿ ಶಿಕ್ಷಣಕ್ಕೆ ಸೇರ್ಪಡೆಯಾದ ಒಂದು ರೀತಿಯಲ್ಲಿ ದುಃಖಿತನಾಗಿದ್ದೆ.. ಪದವಿ ಪೂರ್ವ ತರಗತಿಗಳಲ್ಲಿ ಇದ್ದ ನನ್ನ ಆತ್ಮೀಯ ಸ್ನೇಹಿತರೆಲ್ಲ  ಉನ್ನತ ವಿದ್ಯಾಭ್ಯಾಸ ಎಂದು ತಾಂತ್ರಿಕ, ವೈದ್ಯಕೀಯ, ವ್ಯಾಪಾರ ಎಂದು ಬೇರೆ ಹಾದಿ ಹಿಡಿದಿದ್ದರು.. ಬೇಸರದಿಂದ, ಜೊತೆಯಲ್ಲಿ ಸರಿಯಾಗಿ ಓದಿ ನಾನು ಕೂಡ ಒಳ್ಳೆ ಅಂಕಗಳನ್ನು ಗಳಿಸಿದ್ದಾರೆ ನಾನು ಅವರ ಹಾಗೆ ಓದಬಹುದಿತ್ತಲ್ಲ ಎನ್ನುವ ಕೀಳರಿಮೆ, ಒಂದು ರೀತಿಯ ಬಡತನ, ರೂಪ ಇಲ್ಲ ಎನ್ನುವ ಕೀಳರಿಮೆ ಎಲ್ಲವೂ ಸೇರಿಕೊಂಡು.. ಪ್ರೇಮಲೋಕದ "ನೆಲ ನೋಡ್ಕೋತ ಬರಬೇಕು ನೆಲ ನೋಡ್ಕೋತಾ ಹೋಗ್ಬೇಕು.. ಆ ಅಂಡರ್ಸ್ಟ್ಯಾಂಡ್" ಎನ್ನುವ ಹಾಡಿನಂತೆ ಮೂರು ವರ್ಷವನ್ನು ಸಾಗಿ ಹಾಕಿದ್ದೆ.. ಪದವಿ ಶಿಕ್ಷಣದಲ್ಲಿ ಸ್ನೇಹಿತರ ಪಟ್ಟಿಯಲ್ಲಿ ಉಳಿದವನು ಹರಿನಾಥ್ ಮಾತ್ರ.. ನಂತರ ಫೇಸ್ ಬುಕ್ ಎನ್ನುವ ಮಾಯಾಜಾಲದಲ್ಲಿ ಒಂದಿಬ್ಬರು ಸ್ನೇಹಿತರಾಗಿದ್ದರು ಅಷ್ಟೇ..


ಆದರೆ ಇಂದು ಭೇಟಿಯಾದಾಗ ಎಲ್ಲರೂ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ ಆಗಿದ್ರೂ ಕೂಡ ಎಲ್ಲರ ಕಾಲುಗಳು ನೆಲದಲ್ಲಿಯೇ ಇದ್ದವು.. ಇದು ನನಗೆ ಹುರಪನ್ನು ನೀಡಿತು.. ಮೂರು ವರ್ಷ ಮಾತಾಡದೆ ಇದ್ದವನು ಇಂದು ಅಣೆಕಟ್ಟಿನಿಂದ ನೀರನ್ನು ಹರಿಯ ಬಿಟ್ಟಂತೆ ಸರಾಗವಾಗಿ ಹರಿದಿತ್ತು..

ತುಂಬಾ ಖುಷಿಕೊಟ್ಟ ಆ ಮೂರು ತಾಸುಗಳು ಆ ಮೂರು ವರ್ಷದ ನೋವನ್ನು ನುಂಗಿ ಹಾಕಿದವು.. ಇಂಥಹ ಸುಂದರ ಕ್ಷಣಗಳನ್ನು ಕೊಟ್ಟ ನನ್ನ ಗೆಳೆಯರೆಲ್ಲರಿಗೂ ನನ್ನ ಅನಂತ ಧನ್ಯವಾದಗಳು..

ಆ ಸುಂದರ ಕ್ಷಣಗಳು ನಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದದ್ದು ಹೀಗೆ...




ಮತ್ತೊಮ್ಮೆ ಸೇರೋಣ.. ಕಾಲೇಜಿನ ದಿನಗಳನ್ನು ಮೆಲುಕು ಹಾಕೋಣ.. ಅಲ್ಲವೇ.. ಮತ್ತೆ ಸಿಗುತ್ತೀರ ತಾನೇ.. !

Sunday, May 24, 2015

ಪ್ರಕಾಶಿಶ್ ಕುಟುಂಬಕ್ಕೆ ವಿವಾಹ ಮಹೋತ್ಸವದ ಶುಭಾಶಯಗಳು!!!


ಇವತ್ತೇ ನಾಂದಿ...ಬೆಳಿಗ್ಗೆ ಹತ್ತುಗಂಟೆಗೆ ಕಾರ್ಯಕ್ರಮಗಳು ಶುರುವಾಗುತ್ತದೆ....

ಬೇಗನೇ ನಾಷ್ಟಾ ಮಾಡಿ ಅಣ್ಣನ ಮುಂದೆ ನಿಂತೆ.. "ಅಣ್ಣಯ್ಯಾ..ಸಿರ್ಸಿ ಹೋಗಿ ಬರ್ತಿನಿ.. ಏನಾದರೂ ತರುವದು 
ಇದೆಯಾ ? "..

ಅಣ್ಣನಿಗೆ ಸಣ್ಣಕೆ ಕೋಪ ಬಂತು.. "ಮದುವೆ ಹುಡುಗ ನೀನು..ನೀನು ಯಾಕೆ ಹೋಗಬೇಕು... ? ಏನು ಅಂಥಹ ತುರ್ತು ಕೆಲಸ ?..."

ಅಣ್ಣನಿಗೆ ಹೇಗೆ ಹೇಳುವದು ? ಜಿಂಕೆಮರಿ ಸಂಗಡ ಮಾತನಾಡಬೇಕಿತ್ತು....ಬಹಳ ಕಷ್ಟಪಟ್ಟು ಅವಳ ಫೋನ್ ನಂಬರ್ ಸಂಪಾದಿಸಿದ್ದೆ...

ಹೇಗೋ ಹೇಗೋ ಒಪ್ಪಿಸಿ ಸಿರ್ಸಿಗೆ ಬಂದೆ

ಮನದೊಳಗೆ ಹಾಡು ಕಿರುಚುತಿತ್ತು " ಒಲಿದ ಜೀವ ಜೊತೆಯಲಿರಲು ಬಾಳು ಸುಂದರ" ಮುಂದಕ್ಕೆ ಹಾಡು ಹೊಳೆಯುತ್ತಲೇ ಇಲ್ಲ 

ಗೋಕರ್ಣಕ್ಕೆ ಫೋನ್ ಮಾಡಬೇಕಿತ್ತು...ಅವರ ತವರು ಮನೆಯವರು ಬಹಳ ಸಂಪ್ರದಾಯಸ್ಥರು....
ಇದು ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ನಡೆದದ್ದು..ಇದೇ ದಿನ...!

ಮದುವೆಗೆ ಮುಂಚೆ ಹುಡುಗ.. ಹುಡುಗಿ ನೋಡಬಾರದು..ಮಾತನಾಡಬಾರದು...ಶಾಸ್ತ್ರ...
ಸಂಪ್ರದಾಯ.. ಆಚರಣೆಗಳಲ್ಲಿ ಅವರು ಬಹಳ ಕಟ್ಟುನಿಟ್ಟು... 

"ಹಲ್ಲೊ...ನಾನು ಪ್ರಕಾಶ...ಕಾನಸೂರು..ದೇವಿಸರದಿಂದ..."...........

ಫೋನ್ ಎತ್ತಿದವರು ಬಹುಷಃ ಯಾರೋ ಹೊಸಬರು..."ಯಾರು ಬೇಕಿತ್ತು ?""ಮದು ಮಗಳು ಆಶಾ...."

"ಮದುಮಗಳು ಆಶಾ ??.. !..ಇಲ್ಲಿ ಆ ಹೆಸರಿನವರಾರು ಇಲ್ಲವಲ್ಲ..."....

ನನ್ನ ತಲೆಗೆ ನಾನು ಚಚ್ಚಿಕೊಂಡೆ.. ಆಶಾ ನಾನು ಇಟ್ಟ ಹೆಸರು..ಜಿಂಕೆಮರಿ ಮೂಲ ಹೆಸರು " ಲೀಲಾ "...

"ಕ್ಷಮಿಸಿ...ಲೀಲಾ ಹತ್ತಿರ ಮಾತನಾಡಬೇಕಿತ್ತು..."...ಅಷ್ಟರಲ್ಲಿ ಮಾತನಾಡುತ್ತಿದ್ದವರು ಬದಲಾದರು...

"ನಾನು ದೊಡ್ಡಪ್ಪ...ಹೇಳಿ..ನೀವ್ಯಾರು ?.."....ಗಡಸು ಧ್ವನಿ... ಕಿವಿಗೆ ಅಪ್ಪಳಿಸಿತು...

ನನ್ನ ಧ್ವನಿ ಸಣ್ಣಗೆ ಕಂಪಿಸಿದ್ದು ನನಗೂ ಗೊತ್ತಾಗಹತ್ತಿತು..

"ನಾನು...ನಾನು ನಿಮ್ಮನೆ ಅಳಿಯ ಆಗ್ತಾ ಇದ್ದೀನಿ...ನಾಡಿದ್ದು..ಮೇ ಇಪ್ಪತ್ತನಾಲ್ಕರಂದು...ಪ್ರಕಾಶ...
ದೇವಿಸರದ ಪ್ರಕಾಶ...."....ಈಗ ಬಹುಷಃ ಅವರಿಗೆ ಖುಷಿಯಾಯಿತು ಅಂತ ಅನ್ನಿಸಿತು..

"ಓಹೋ..ಹೋ.... ಅಳಿಯಂದಿರು...!!!! ಏನು ವಿಶೇಷ ..? ಕಾಶಿ ಗಂಟು ಕಸಿಯಲು ಹುಡುಗರು ಹೊರಟಿದ್ದಾರೆ....
ನೀವು ಚಿಂತಿಸಬೇಡಿ ಅಳಿಯಿಂದಿರೆ....ನಿಮ್ಮನ್ನು ಕಾಶಿಗೆ ಕಳಿಸುವದಿಲ್ಲ...ನಮ್ ಹುಡುಗಿ ಜೊತೆ ಮದುವೆ ಮಾಡಿಸಿಯೇ ಕಳಿಸುತ್ತೇವೆ...."...

ಈ ಹಿರಿಯರಿಗೆಲ್ಲ ಹೇಗೆ ಹೇಳುವದು ..? ಮನದೊಳಗಿನ ಹಾಡು ಮತ್ತು ಜೋರಾಯಿತು" ಒಲಿದ ಜೀವ ಜೊತೆಯಲಿರಲು ಬಾಳು ಸುಂದರ"

"ಅಲ್ಲ..ಅದಲ್ಲ ವಿಷಯ...ಅದು...ಅದೂ....ಲೀಲೂ ಹತ್ತಿರ ಸ್ವಲ್ಪ ಮಾತನಾಡಬೇಕಿತ್ತು...."...

"ಲೀಲು ಒಳಗಡೆ ಇದ್ದಾಳೆ... ನಾಡಿದ್ದೇ ಮದುವೆ ಅಲ್ವಾ... ? ಬ್ಯೂಸಿ ಇದ್ದಾಳೆ... ಏನು ವಿಷಯ ನನ್ನ ಹತ್ತಿರ ಹೇಳಿ. ಅವಳಿಗೆ ಹೇಳ್ತೀನಿ..."............

ನನ್ನ ದೊಡ್ಡ ಮಾವನ ಬಳಿ ಏನು ಹೇಳುವದು.... ? ಅವರು.....ಅವರ ವರ್ಚಸ್ಸು...ಗಾಂಭೀರ್ಯ.. ನೋಡಿಯೇ ಹೆದರಿಕೆ ಆಗುತ್ತಿತ್ತು...ಅಷ್ಟರಲ್ಲಿ ಮತ್ತೆ ಧ್ವನಿ ಬದಲಾಯಿತು...

ಈಗ ಬಂದವರು ನನ್ನ ಮಾವ... ! ಆಶಾ ಅಪ್ಪ..."ಪ್ರಕಾಶಾ...ಏನು.. ವಿಷಯ...?.."...

ನನ್ನ ಮಾವ ಏರ್ ಫೋರ್ಸ್ ಆಫೀಸರ್...ಬಹಳ ಶಿಸ್ತು... ದರ್ಪು....."ಪ್ಲೀಸ್..ಪ್ಲೀಸ್ ಲೀಲು ಹತ್ತಿರ ಮಾತನಾಡಬೇಕಿತ್ತು..."

"ಪ್ರಕಾಶೂ...ಇನ್ನು ಎರಡೇ ದಿನ...ಜೀವನ ಪೂರ್ತಿ ಅವಳು ನಿನ್ನ ಜೊತೆಯೇ ಇರ್ತಾಳೆ...ಏನು ಬೇಕಾದ್ರೂ ಮಾತನಾಡು...
ಎಷ್ಟು ಬೇಕಾದ್ರೂ ಮಾತನಾಡು..."...

ಥಥ್....! ನನ್ನ ಅದೃಷ್ಟವೇ ಸರಿ ಇಲ್ಲ..." ಅದಲ್ಲ ಮಾವಾ...ನನ್ನ ಬದುಕಿನಲ್ಲಿ ಮತ್ತೆ ...ಈ ದಿನ..ಈ ಸಂದರ್ಭ ...
ಈ ಕ್ಷಣ ಮತ್ತೆ ಬರೋದಿಲ್ಲ... ಪ್ಲೀಸ್.. ಪ್ಲೀಸ್..."....

ನನ್ನ ಮಾವನ ಹೃದಯ ಕರಗಿತು ಅಂತ ಅನ್ನಿಸಿತು..

"ಲೀಲೂ....ಲೀಲೂ... ಬಾ ಮಗಳೆ..."...ನನ್ನ ಜಿಂಕೆಮರಿ ಅಲ್ಲೇ ಇದ್ದಳು ಅಂತ ಅನ್ನಿಸುತ್ತದೆ..

ಛಕ್ಕನೆ ಧ್ವನಿ ಬದಲಾಯಿತು..."ಹಲೋ...." ಎನ್ನುವ ಬದಲು ಆ ಕಡೆಯಿಂದ "ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ" 
ವಾವ್ ! ಹೃದಯದ ಪದಕ್ಕೆ ಸುಂದರ ಮುಂದುವರಿಕೆ... 

ವಾವ್... .........!...

ಎಷ್ಟು ಸಿಹಿಯಾಗಿತ್ತು ..ಆ ಮಾತು... ಆ ಧ್ವನಿ .. ಆ ಕ್ಷಣ....!!....
"ಹಲ್ಲೋ....ನಾನು ಮಾತನಾಡ್ತಾ ಇರೋದು..." 

ನಾಚಿದಳು ಅನ್ನಿಸುತ್ತದೆ...ಸಣ್ಣಕೆ ಪಿಸುಗುಟ್ಟಿದಳು...."ಬೇಗ ಹೇಳೀ...ಇಲ್ಲಿ ಎಲ್ಲರೂ ಇದ್ದಾರೆ..."...

"ಹೇಳೋಕೆ ಆಗೋಲ್ಲ ಹಾಡ್ತೀನಿ ... "

ಶುರುವಾಯಿತು ಯುಗಳ ಗೀತೆ 

"ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ"

ಈ ಕಡೆ ಫೋನಿನಲ್ಲಿ ಮಾತನಾಡುವಾಗ ಜಗುಲಿ ತುಂಬಾ ಜನ ಇದ್ದರು....ಎಲ್ಲರೂ ಕಿವಿ...
ಬಾಯಿ ತೆರೆದು ಕೇಳುತ್ತಿದ್ದರು...​ಅವರ ಕಣ್ಣಲ್ಲಿ "ಮದುವೆ ಹುಡುಗ ಏನು ಮಾತನಾಡಿದ ? " ಅನ್ನುವ ಪ್ರಶ್ನೆ ಎದ್ದು ಕಾಣುತ್ತಿತ್ತು 
​ಏನು ಅಂತ ಹೇಳಲಿ ಅವರಿಗೆಲ್ಲ...?.. ಏನೂ ಮಾತಾಡಲಿಲ್ಲ ಬದಲಿಗೆ ಈ ಹಾಡು ಹಾಡಿದ ನೀವೇ ಕೇಳಿ ಎಂದು ಅಲ್ಲೇ ಇದ್ದ ಟೇಪ್ ರೆಕಾರ್ಡರ್ ಆನ್ ಮಾಡಿದರು

ಬೆಂಕಿಯ ಬಲೆ ಚಿತ್ರದ ಅದ್ಭುತ ಯುಗಳ ಗೀತೆ "ಒಲಿದ ಜೀವ ಜೊತೆಯಲಿರಲು ಬಾಳು ಸುಂದರ" ಹಾಡು ಜೋರಾಗಿ ಬರುತ್ತಿತ್ತು.. 

ಇತ್ತ ದೂರವಾಣಿ ಸಂಭಾಷಣೆ ಮುಂದುವರೆಯಿತು

ಸಿರ್ಸಿ ಕಡೆಯಿಂದ "ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ"

ಇತ್ತ ಗೋಕರ್ಣದ ಕಡೆಯಿಂದ "ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ"

ಆಶಾ ಇನ್ನು ಸ್ವಲ್ಪ ದಿನ .. ಆಮೇಲೆ ನಾವು ಹೀಗೆ ಹಾಡಬಹುದು "ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ"

ಆ ಕಡೆಯಿಂದಲೂ ಸವಾಲಿಗೆ ಸವಾಲು ಎನ್ನುವಂತೆ "ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ"

ದೂರವಾಣಿಯಲ್ಲಿ ಎರಡು ಧ್ವನಿಗಳು ಒಟ್ಟಿಗೆ ಮೊಳಗುತ್ತವೆ "ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ"

ರೀ ಹೊತ್ತಾಯಿತು.. ಬಹಳ ಸೆಕೆ ಆಗುತ್ತಿದೆ.. ಇನ್ನು ಬೇಕಾದಷ್ಟು ಕೆಲಸಗಳು ಇವೆ.. ಫೋನ್ ಇಡ್ತೀನಿ ಅಂದಾಗ.. 

"ಸ್ವಲ್ಪ ಹೊತ್ತು ಸ್ವಲ್ಪ ಹೊತ್ತು.. ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಹೀಗೆ ಆಲ್ವಾ ಹಾಡೋದು... "

ಜಿಂಕೆಯ ಕಣ್ಣು ಚೆನ್ನ,ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ,ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ"

"ಅಬ್ಬಾ ಎಂಥಾ ಮಾತು.. ಸುಂದರ ಅತಿ ಸುಂದರ.. ಆ ಕ್ಷಣಕ್ಕೆ ಕಾಯುತ್ತಿದ್ದೇನೆ.. ಗೋಕರ್ಣದ ಸೆಕೆ.. ಸಿರ್ಸಿಯ ಸೆಕೆ ಸೇರಿಸಿ ಸ್ವಲ್ಪ ಹಾಡಿ.. ಇಲ್ಲಿ ಎಲ್ಲಾ ಇನ್ನೂ ಆ ಹಾಡನ್ನೇ ಟೇಪ್ ರೆಕಾರ್ಡರ್ ನಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದಾರೆ.. ಸ್ವಲ್ಪ ಹೆಚ್ಚು ಸಮಯಸಿಗುತ್ತಿದೆ .. "

ದೂರವಾಣಿಯಿಂದ ಮತ್ತೆ ಗಾನ ಗಂಗೆ ಹರಿಯಿತು

"ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮೆತ್ತೆಯಂತೆ"

ವಾಹ್ ವಾಹ್ .. ಗೋಕರ್ಣದ ಫೋನ್ ನಿಧಾನವಾಗಿ ಕಂಪಿಸುತ್ತಿತ್ತು.. ಅರೆ ಒಂದು ಪ್ರೇಮ ನಿವೇದನೆ ಹೇಗೋ ಮಾಡಬಹುದೇ.. ಈ ಸವಾಲಿಗೆ ಇನ್ನೊಂದು ಪ್ರತಿ ಸವಾಲು ಹಾಕಬೇಕು ಎಂದು ಕೊಂಚ ಯೋಚಿಸಿ

"ಮೊಗದಿ ಹರಿವ ಬೆವರ ಹನಿಯು ಒಂದೊಂದು ಮುತ್ತಿನಂತೆ
ಮೊಗದಿ ಹರಿವ ಬೆವರ ಹನಿಯು ಒಂದೊಂದು ಮುತ್ತಿನಂತೆ
ಏನೋ ಉಲ್ಲಾಸ ಏನೋ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ ದಿನವೊಂದು ಕ್ಷಣವಂತೆ"

ಆ ಕಡೆಯಿಂದ ಸೂಪರ್ ಸೂಪರ್ ... ಬಹಳ ಇಷ್ಟವಾಯಿತು.. ಸರಿ ಸರಿ.. ಟೆಲಿಫೋನ್ ಬೂತ್ ಹೊರಗೆ ಗಲಾಟೆ ಮಾಡುತ್ತಿದ್ದಾರೆ.. ಮತ್ತೊಮ್ಮೆ ಈ ಹಾಡನ್ನು ಒಟ್ಟಿಗೆ ಹೇಳಿಬಿಡೋಣ 
"ಒಲಿದ ಜೀವ ಜೊತೆಯಲಿರಲು ಬಾಳು ಸುಂದರ.. 
ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ... ಒಲಿದ ಜೀವ ಜೊತೆಯಲಿರಲು ಬಾಳು ಸುಂದರ"

ಹೌದು ರೀ ಇಲ್ಲೂ ಕೂಡ ಟೇಪ್ ರೆಕಾರ್ಡ್ ನಲ್ಲಿ ಆ ಹಾಡು ಕೇಳಿ ಕೇಳಿ.. ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ.. ಸರಿ ಸಿಗೋಣ ಮದುವೆ ಮನೆಯಲ್ಲಿ :-)

ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆಯವರ ಅದ್ಭುತ ಪ್ರೀತಿ ಪ್ರೇಮ ಸಂಸ್ಕಾರ ಸಂಸಾರ.. ಇಪ್ಪತ್ತು ವರ್ಷಗಳ ಮೈಲಿಗಲ್ಲು ತುಳಿದು ಶತಕದ ಮೈಲಿಗಲ್ಲು ಕಡೆಗೆ ನಡೆಯುತ್ತಿರುವ ಅದ್ಭುತ ಜೋಡಿಗೆ ಈ ರೀತಿಯಲ್ಲಿ ಶುಭಾಷಯ ಕೋರಬೇಕು ಎನ್ನುವುದು ದೈವ ಪ್ರೇರಣೆ.. 

ಎಲ್ಲಾರೂ ಕೈಗೂಡಿಸಿ ಹಾರೈಸಿ.. 

ಪ್ರಕಾಶಿಶ್ ಕುಟುಂಬಕ್ಕೆ ವಿವಾಹ ಮಹೋತ್ಸವದ ಶುಭಾಶಯಗಳು!!! 

(ಪ್ರಕಾಶಣ್ಣ ಬರೆದ ಫೇಸ್ಬುಕ್ ಲೇಖನದಿಂದ ಸ್ಪೂರ್ತಿಗೊಂಡು.. ಅದರ ಕೆಲವು ಸಾಲುಗಳನ್ನು ಕದ್ದು.. ಕೆಲವು ಸಾಲುಗಳನ್ನು ಮಿದ್ದು .. ನನ್ನ ಕಲ್ಪನೆ ಸೇರಿಸಿ ಹುಯ್ದು ಸಿದ್ಧ ಪಡಿಸಿದ ಪಾಕ ಇದು.. ಇಷ್ಟವಾದರೆ ಇಷ್ಟವಾಯಿತು.. ಇಲ್ಲ ಅಂದರೆ ಇಲ್ಲ.. ಅಲ್ಲವೇ  ಅಕ್ಷತೆ ಬಣ್ಣದಲ್ಲಿ ಇರುವ ಪ್ರೀತಿ ಪ್ರೇಮ ತುಂಬಿದ ಅಕ್ಷರಗಳು ಭಾವಗಳು ಪ್ರಕಾಶಣ್ಣ ಅವರದು.. ಮಿಕ್ಕವು ಹಹಹ ಈ ಕೀಲಿ ಮನೆಯಿಂದ ಹರಿದದ್ದು )

Saturday, January 24, 2015

ಹೃದಯವಂತ ಹೃದಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.. !!!

ಸುನಾಮಿ ಅಲೆಗಳು ಕಡಲ ತಡಿಗೆ ಬಡಿದು ಬಡಿದು ಸುಸ್ತಾಗುತ್ತಿದ್ದವು.. ಕಡಲ ದಂಡೆಯಲ್ಲಿದ್ದ ಎಲ್ಲವನ್ನು ಸ್ವಾಹ ಮಾಡುತ್ತಿತ್ತು.. ಗಹಗಹಿಸಿ ನಗುತ್ತಿದ್ದವು ಅಲೆಗಳು. ಎಲ್ಲವನ್ನು ನುಂಗಿ ಬಿಡುತ್ತಿದ್ದೇವೆ ಎಂದು.

ಯಾಕೋ ಕಡಲ ತಡಿಯ ಮರಳಿನ ಹಾಸಿನ ಮೇಲೆ ಕಣ್ಣುಗಳು ಹೋದವು.. ಅಲೆಗಳಿಗೆ ಭಯಂಕರ ಸಿಟ್ಟು ಬಂದಿತು..

ಎಲಾ.. ಇರುವ ಬರುವ ಎಲ್ಲವನ್ನು ಆಪೋಶನ ಮಾಡುತ್ತಿದ್ದೇವೆ.. ಇದು ಯಾವುದು ನ(ನ)ಮಗೆ ಹೆದರದೆ ಕದಲದೆ ನಿಂತಿವೆ..

"ಏಯ್ ಯಾರು ನೀವೆಲ್ಲ ಯಾಕೆ ಹೀಗೆ ನಿಂತಿದ್ದೀರಿ.. ದೋಣಿಗಳು, ಮನೆಗಳು, ತೆಂಗಿನ ಮರ ಎಲ್ಲವು ನನ್ನ ಒಡಲಿಗೆ ಬಂದಾಯ್ತು.. ಬರುತ್ತಲಿವೆ.. ಬರಲೇಬೇಕು.. ನೀವು ಯಾಕೆ ಬರುತ್ತಿಲ್ಲ.. ನಿಮ್ಮನ್ನು ಅದು ಯಾವ ಶಕ್ತಿ ತಡೆದು ನಿಲ್ಲಿಸಿದೆ ಅಥವಾ ನಿಮಗೆ ಅದಾವ ಶಕ್ತಿ ಎದ್ದು ನಿಲ್ಲಲು ಚೈತನ್ಯ ತುಂಬುತ್ತಿದೆ.. ಹೇಳಿ ಹೇಳಿ ಹೇಳಿ"

ಎಲ್ಲವೂ ಒಂದೇ ಕಂಠದಲ್ಲಿ ಜೈ ಹೊ ಜೈ ಹೊ ಎಂದವೂ.,..

ಸುನಾಮಿ ಅಲೆಗಳು ಕಣ್ಣುಜ್ಜಿಕೊಂಡು ನೋಡಿದವು.. "ಅರೆ ಇದೇನು ಇದೇನಿದು... ವರ್ಣ ಮಾಲೆಯ ಸರವೇ ನಿಂತಿದೆ.. ಯಾರಪ್ಪ ನೀವೆಲ್ಲಾ ಯಾಕೆ ಹೀಗೆ ನಿಂತಿದ್ದೀರಿ.. ... ?"

ಗಹಗಹಿಸಿ ನಕ್ಕವು ವರ್ಣಮಾಲೆಗಳು.. "ಎಲೈ ಸುನಾಮಿಯೇ ನೀ ಹೊತ್ತು ತಂದ ಅಲೆಗಳು ಸ್ನೇಹದ ಅಲೆಗಳು.. ನೀ ಆಪೋಶನ ಮಾಡಿದ್ದು ಸ್ನೇಹದ ಹೃದಯಗಳನ್ನು.. ಎಲ್ಲವೂ ನಿನ್ನ ಒಡಲಿನ ಕಡಲಲ್ಲಿ ಈಜುತ್ತಿವೆ.. ಆದರೆ ನಾವು ಕಾದಿರುವುದು ಮತ್ತು ನಮಗೆ ಎದ್ದು ನಿಲ್ಲಲು.. ನಿನ್ನ ಸೆಳೆಯುವ ಶಕ್ತಿಯನ್ನು ದಿಟ್ಟತನದಿಂದ ಎದುರಿಸಿ ನಿಲ್ಲಲ್ಲು ಶಕ್ತಿ ನೀಡುತ್ತಿರುವುದು ಸ್ನೇಹದ ಕಡಲಿನ ತರಂಗದ ಶಕ್ತಿ.. ಅದೋ ಅಲ್ಲಿ ನೋಡಿ ಅವರಿಗಾಗಿ ನಾವೆಲ್ಲಾ ಕಾಯುತ್ತಿದ್ದೇವೆ.. "

ಕಣ್ಣರಳಿಸಿ ಅಲ್ಲಿ ನೋಡಿದರೆ.. ಗಾಬರಿ ಆಯಿತು ಅಜಾನುಭಾಹು.. ನೋಡಿದರೆ ತಟ್ಟನೆ ಈತ ಆರಕ್ಷಕನೆ ಇರಬೇಕು ಎನ್ನಿಸುವ ಮೈಕಟ್ಟು, ಬಿಟ್ಟರೆ ಗಿರಿಜಾ ಮೀಸೆ ಮೂಡುವಂತಹ ಅದ್ಭುತ ಮೊಗ ಚರ್ಯೆ.. ಹೊಳಪು ಕಣ್ಣುಗಳು.. ತುಟಿಯಲ್ಲಿ ಸದಾ ಮಂದಹಾಸ.. ಇವರ ಸುತ್ತಾ ಮುತ್ತಾ ನಗೆ ಬಾಂಬುಗಳು ಸಿಡಿಯುತ್ತಾ ಹೂ ಬಾಣಗಳನ್ನೇ ಬೀರುತ್ತಿದ್ದವು..

ಇವರ ಹೆಸರು.. ಛೆ ಬಿಡಿ ಇವರ ಹೆಸರ ಹೇಳಿದರೆ ವಿಷ್ಣು ದಶಾವತಾರ ನೋಡಿದಂತೆ ಆಗುತ್ತದೆ..

ಹೌದು ಹೌದು ಹೌದು ಇವರೇ ಪ್ರಕಾಶಣ್ಣ, ಪ್ರಕಾಶ ಮಾವ, ಪಕ್ಕು ಮಾವ, ಪ್ರಕಾಶ ಹೆಗ್ಗಡೆ, ಪ್ರಕಾಶ, ಡುಮ್ಮಣ್ಣ, ಪ್ರಕಾಶ್ ಸರ್, ಹೆಗ್ಡೆ ಸರ್,  ಬ್ಲಾಗ್ ಲೋಕದ ಅಧ್ಯಕ್ಷರು, ಛಾಯಾ ಪ್ರವೀಣ ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮನ ಬಾಲಕ್ಕಿಂಥ ಬೆಳೆಯುತ್ತದೆ..

ಸುಮಾರು ಒಂದು ವಾರದ ನಂತರ ಇವರಿಗೆ ಶುಭಾಷಯ ಪತ್ರ ಬರೆಯುತ್ತಿದ್ದೇನೆ.. ಅದಕ್ಕೆ ಕಾರಣವು ಇದೆ .. ಅಂತರ್ಜಾಲ ತೊಂದರೆ ಇತ್ತು ಮನೆಯಲ್ಲಿ.. ಜೊತೆಯಲ್ಲಿಯೇ ಕಳೆದ ಭಾನುವಾರ ಮೈ ಕಂಪನ ಆಗುವಂತಹ ಅಭೂತಪೂರ್ವ ಅನುಭವಕ್ಕೆ ಇವರೇ ನೆರವಾಗಿದ್ದರು.. ಅದರ ಬಗ್ಗೆ ಕೊಂಚ ಹೇಳಿ ಶುಭಾಷಯ ಪತ್ರ ಮುಗಿಸುತ್ತೇನೆ..

ಗಂಡು ಕಲೆ ಎಂದೇ ಹೆಸರಾದ ಯಕ್ಷಗಾನವನ್ನು ಪ್ರಕಾಶಣ್ಣನ ಜೊತೆಯಲ್ಲಿ ನೋಡಬೇಕೆಂಬ ಬಯಕೆ ಬಸುರಿ ಬಯಕೆ ಆಗಿತ್ತು ನನಗೆ.. ಅವರಿಗೂ ಅಷ್ಟೇ ನನಗೆ ಯಕ್ಷಗಾನ ಪ್ರಸಂಗವನ್ನು ತೋರಿಸಬೇಕೆಂಬ ಆಕಾಂಕ್ಷೆ.. ಕಾಲ ಕೂಡಿಬಂದಿರಲಿಲ್ಲ.. ಆದರೆ ಕಾಲ ಹೆಜ್ಜೆ ಹಾಕುತ್ತಾ ಹಾಕುತ್ತಾ ೧೮ನೆ ಜನವರಿ ೨೦೧೫ ಭಾನುವಾರದಂದು ಬಂದೆ ಬಿಟ್ಟಿತು.

ಅರೆ ಅಂತು ಬಂದೆಯಲ್ಲ.. ಬಾಳ ಕುಶಿ ಆಯಿತು ಎಂದರು ಎ ಏನ್ ಹೆಗಡೆಯವರು ಉದಯಭಾನು ಕಲಾ ಸಂಘದಲ್ಲಿ..
ಕಣ್ಣು ಪ್ರಕಾಶಣ್ಣನನ್ನು ಹುದುಕಿತು.. ಕಾಣಲಿಲ್ಲ.. ಹಿಂದಿನ ದಿನವಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡು ಜ್ವರ ಬರಿಸಿಕೊಂಡಿದ್ದರು..
ಸರಿ ಇನ್ನೇನು ಮಾಡುವುದು.. ಸುಮ್ಮನೆ ಕೂತೆ..

ಸಂದೇಶ ಬಂತು.. ತಮ್ಮಯ್ಯ.. ಪ್ರಸಾಧನ ಕೋಣೆಗೆ ಹೋಗು.. ಅಜ್ಜ ಇದ್ದಾರೆ.. ಫೋಟೋ ತೆಗೆಯಬಹುದು ಎಂದು..
ನಾ ಸಂಕೋಚದ ಮುದ್ದೆ.. ಹೋಗಲಿಲ್ಲ.. ಅಷ್ಟರಲ್ಲಿಯೇ ಮೊಬೈಲ್ ಕರೆ.. "ಶ್ರೀಕಾಂತ್ ಸರ್ ಹೊರಗೆ ಬನ್ನಿ... "
ಪರಿಚಯವಿಲ್ಲದ ಗೆಳೆಯ "ನಿರಂಜನ್"  ಕೆಲವೇ ನಿಮಿಷಗಳಲ್ಲಿ ಪರಿಚಯದವರಾಗಿಬಿಟ್ಟರು.. ಇವರೇ ಅಜ್ಜ..
ಮೈಯೆಲ್ಲಾ ಹಾಗೆ ಒಂದು ಕ್ಷಣ ಕಂಪಿಸಿತು.. ಯಕ್ಷಗಾನದ ದಂತಕತೆಯ ಮುಂದೆ ನಾ ನಿಂತಿದ್ದೇನೆ ಎನ್ನುವ ಒಂದು ಅನುಭವ ಜುಮ್ ಎಂದಿತು..

ನಿರಂಜನ್ ಯಕ್ಷಗಾನದ ಅಂದಿನ ಪ್ರಸಂಗದ ಬಗ್ಗೆ ಚಿಕ್ಕದಾಗಿ ಹೇಳಿದರು.. ನಂತರ ನನ್ನ ಆಸೆಯನ್ನು ಹೇಳಿದೆ.. ಅಜ್ಜ ಪೂರ ಸಿದ್ಧವಾದ ಮೇಲೆ ಫೋಟೋ ತೆಗಿರಿ ಅಂದರು..

ಪೂರ ಸಿದ್ಧವಾದರು ಅಜ್ಜ.. "ಅಜ್ಜ" ಎಂದೇ.. ಮುಂದೆ ನೋಡಿ ಸುಮಾರು ಇಪ್ಪತ್ತು ಸೆಕೆಂಡ್ ಗಳಲ್ಲಿ ಸುಮಾರು ಏಳೆಂಟು ಬಗೆಯ ಮುಖ ಭಾವ ತೋರಿಸಿದರು.. ಕಣ್ಣುಗಳು ಚಿತ್ರಗಳನ್ನು ತೆಗೆಯುತಿದ್ದವು.. ಮೈ ನಡುಗುತ್ತಿತ್ತು.. ಹೃದಯ ಶ್ರೀ ನೀನೆ ಧನ್ಯ ಎನುತ್ತಿತ್ತು.. ಅಜ್ಜನ ಚರಣಕಮಲಗಳನ್ನು ಮುಟ್ಟಿ ನಮಸ್ಕರಿಸಿ ಅಜ್ಜನ ಪದತಲದಲ್ಲಿಯೇ ಕೂತು ಒಂದು ಚಿತ್ರ ತೆಗೆಸಿಕೊಂಡೆ. ಅದ್ಭುತ ಅನುಭವ.
ಇಷ್ಟವಾದ ಚಿತ್ರ 

ಅದ್ಭುತ ಅನುಭವ 

ಶ್ರೀ ಎ ಎನ್ ಹೆಗಡೆ 
ಅವರನ್ನು ಸನ್ಮಾನಿಸುತ್ತಿರುವ 
ಶ್ರೀ ಚಿಟ್ಟಾಣಿ ಅಜ್ಜ 


ಮುಂದಿನ ಪ್ರಸಂಗದಲ್ಲಿ.. ಅಜ್ಜನ ಯಕ್ಷಗಾನ ಪ್ರತಿಭೆಯನ್ನು ನೋಡಿ ಮನಸ್ಸು ಹೇಳತೀರದಷ್ಟು ಸಂತಸಗೊಂಡಿತ್ತು. ಅಬ್ಬಾ ಯಕ್ಷಗಾನ ಪ್ರಪಂಚದ ಅನಭಿಷಿಕ್ತ ಚಕ್ರವರ್ತಿಯ ಜೊತೆಯಲ್ಲಿ ನಿಂತದ್ದು, ಅವರ ಜೊತೆಯಲ್ಲಿ ಚಿತ್ರ ತೆಗೆಸಿಕೊಂಡದ್ದು ನನ್ನ  ಪೂರ್ವಜನ್ಮದ ಪುಣ್ಯ ಎನ್ನಿಸಿತು.

ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಕಲಾ ಸಮುದ್ರದ ಅಲೆಯಲ್ಲಿ ತೇಲುವ ನಮ್ಮನ್ನು ತೇಲಿಸುವ ಅದ್ಭುತ ತರಂಗ.. ಅಂಥಹ ತರಂಗವನ್ನು ನನಗೆ ಒಂದು ದೂರವಾಣಿಯ ಕರೆಯ ಮೂಲಕ ನನ್ನನ್ನು ಅವರ ಸಂಪರ್ಕಕ್ಕೆ ತಂದು ಕೂರಿಸಿದ ಪ್ರಕಾಶಣ್ಣ ಅವರಿಗೆ ಕೋಟಿ ಕೋಟಿ ನಮನಗಳು..

ಅಂದಿನ ಯಕ್ಷಗಾನದ ಕೆಲ ತುಣುಕುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.. ಜೊತೆಯಲ್ಲಿ ಅಜ್ಜನ ಜೊತೆಯಲ್ಲಿ ನಿಲ್ಲಲ್ಲು ಶಕ್ತಿ ಸ್ಫೂರ್ತಿ ಕೊಟ್ಟ ಪ್ರಕಾಶಣ್ಣ ಅವರಿಗೆ ಧನ್ಯವವಾದಗಳನ್ನು ಅರ್ಪಿಸುತ್ತಾ ಜೊತೆಯಲ್ಲಿ ಗೆಳೆಯ ನಿರಂಜನ್ ಅವರಿಗೆ ನಾ ಚಿರ ಋಣಿ ಯಾಗಿದ್ದೇನೆ.
ಇಂಥಹ ಒಂದು ಸುಂದರ ಸಂಭ್ರಮವನ್ನು ಕೊಟ್ಟ ಶ್ರೀ ಎ ಎನ್ ಹೆಗಡೆ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು.

ಪ್ರಕಾಶಣ್ಣ ಒಂದು ಸುಂದರ ಅನುಭವ ಕೊಟ್ಟ ನಿಮ್ಮ ಹೃದಯವಂತ ಹೃದಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.. !!!

ಚಿತ್ರ ಕೃಪೆ ರಾಘವ ಶರ್ಮ
 (ಏನ್ ತಮ್ಮಯ್ಯ ಹೀಗೆಲ್ಲ ಬರೆದುಬಿಟ್ಟೆ)