Sunday, November 7, 2021

ಕೇಳು ಮಗುವೇ ಕಥೆಯ ... !

ಅಜ್ಜಿ ಅಜ್ಜಿ ಒಂದು ಕಥೆ ಹೇಳಜ್ಜಿ .. 

ಮಕ್ಕಳು, ದೊಡ್ಡವರು ಅನ್ನದ ಹಾಗೆ ಪೀಡಿಸಲು ಶುರು ಮಾಡಿದಾಗ.. ಕರುನಾಡಿನ ರಂಗ ಮಂದಿರಕ್ಕೆ ಹಾಗೂ ಚಿತ್ರರಂಗಕ್ಕೆ ಅಡಿಪಾಯ ಹಾಕಿಕೊಟ್ಟ ಶ್ರೀ ಗುಬ್ಬಿ ವೀರಣ್ಣ ಅವರ ವಂಶದ ಕುಡಿ 
ಶ್ರೀಮತಿ ಜಯಶ್ರೀಯವರು ಅವರ ಅದ್ಭುತ ಕಂಠದಲ್ಲಿ ಶುರು ಮಾಡಿದರು.. 

ನಾಟಕ ರಂಗದ ದೊಡ್ಡ ಘಂಟೆ ಢಣ ಢಣ ಬಾರಿಸಿತು.. ಆಗ ಶುರುವಾಯಿತು ಅದ್ಭುತ ಸಮಯ 

ಅನೇಕಾನೇಕ ಪ್ರತಿಭೆಗಳನ್ನು
ಎಚ್ಚರಿಸಿದ ಕರೆ ಘಂಟೆ 


ಪ್ರತಿಭಾ ಗಣಿ ಶ್ರೀಮತಿ ಜಯಶ್ರೀ 

ನಾಟಕದ ತಾಲೀಮು ನಮ್ಮ ಶಾಲೆಯಲ್ಲಿ 

"ನೋಡ್ರಪ್ಪಾ.. ಈ ಶಾಲೆ ಇದೆಯಲ್ಲ ಇದೊಂದು ಅದ್ಭುತ ಕಲಿಕಾ ಕೇಂದ್ರ.. ಬೆಳೆದು ಹೆಮ್ಮರವಾದ ಎಷ್ಟೋ ಮರಗಳಿಗೆ ಆಶ್ರಯತಾಣವಿದು.. ಇತ್ತೀಚಿಗೆ ತಾನೇ ಶತಮಾನೋತ್ಸವ ಆಚರಿಸಿದ ಈ ದೇಗುಲಕ್ಕೆ ಶ್ರೀಮತಿ ಆನಿಬೆಸಂಟ್ ಅಡಿಪಾಯವಿಟ್ಟರು  ನೀರೆರೆದು ತಾನು ಬೆಳೆದು, ಸಂಸ್ಥೆಯನ್ನು ಬೆಳೆಸಿದ ಶ್ರೀ ಎಚ್  ಎನ್ ಎಂದೇ ಖ್ಯಾತರಾಗಿರುವ ಪ್ರಾತಃ ಸ್ಮರಣೀಯರು ಎಚ್ ನರಸಿಂಹಯ್ಯ ಅವರ ಕನಸಿನ ಕೂಸಿದು.. 










ಅನೇಕಾನೇಕ ಪ್ರತಿಭೆಗಳನ್ನು ರಾಜ್ಯಕ್ಕೆ, ದೇಶಕ್ಕೆ ಕೊಟ್ಟಿರುವ ಈ ಶಾಲೆಯ ವಿದ್ಯಾರ್ಥಿಗಳ ಒಂದು ತಂಡವೇ ಇಲ್ಲಿ ಬಂದಿದೆ ನೋಡಿ.. 

ನೋಡಿ ಅವನೇ ನಿಂಬೀಯ ಅಂತ ತಾರಕ ಸ್ವರದಲ್ಲಿ ಹಾಡಿದ ವೆಂಕಿ, ಹೌದು ಬಾಲ ನಟ ಚೇತನ್ ತರಹ ಇದ್ದ ಶಶಿ, ಓದು ಬೇರೆ ಬದುಕು ಬೇರೆ ಎಂದು ತೋರಿಸಿದ ಎಚ್ ಡಿ ಗಿರೀಶ, ನಮ್ಮ ಅಭಿನವ ಭಾರ್ಗವ ವಿಷ್ಣುವಂತೆ ಎಡಗೈ ಖ್ಯಾತಿಯ ರಮೇಶ, ಯೋಗಾಸನವೆಂದರೆ ಪ್ರಸಾದ್, ಪ್ರಸಾದ್ ಎಂದರೆ ಯೋಗಾಸನ ಎಂದು ಹೆಸರಾಗಿರುವ ಪ್ರಸಾದ್, ಆ ಕಾಲದ ಜಯಂಟ್ ರೋಬೋಟ್ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಶ್ರೀಧರ, ಸದಾ ಸದ್ದಿಲ್ಲದೇ ಓದುತಿದ್ದ, ಬುದ್ದಿವಂತರಿಗೆ ಠಕ್ಕರ್ ಕೊಡುತ್ತಿದ್ದ ಲೀಲಾ, ಏಮ್ರಾ ನಾಯ್ಡು ಅಂದಾಗ ಸುಂದರ ನಗು ಕೊಡುವ ಶ್ರೀನಿವಾಸ ನಾಯ್ಡು, ಹೆಸರಲ್ಲಿ ಮಾತ್ರವಲ್ಲದೆ ತರಲೆಯಲ್ಲೂ ಚಕ್ರವರ್ತಿಯಾಗಿರುವ ಚಕ್ರವರ್ತಿ... ಬಂದಿದ್ದಾರೆ.. ಅವರುಗಳ ಮಾತಾಡುವ ಶೈಲಿ, ಆ ಗೆಳೆತನದ ಬಂಧ.. ಅದನ್ನು ಕೇಳುವುದೇ ಒಂದು ಚಂದ.. 



ಇಂದು ಅವರವರ ಶಕ್ತ್ಯಾನುಸಾರ ಬದುಕಲ್ಲಿ ಮಹತ್ತರ ಎತ್ತರ ಏರಿದ್ದಾರೆ.. ಆದರೆ ಅವರು ಇಂದು ಸೇರಿರುವುದು, ಇಂದು ಏನಾಗಿದ್ದಾರೆ ಅನ್ನೋದಕ್ಕಲ.. ಅವರು ಶಾಲೆಯಲ್ಲಿದ್ದಾಗ ನೆಡೆದ ಕೀಟಲೆ ಪ್ರಸಂಗಗಳು,ಸಾಧನೆಗಳು , ತರಲೆಗಳು ಇದನ್ನೆಲ್ಲಾ ಮತ್ತೆ ಮತ್ತೆ ಮೆಲುಕು ಹಾಕುತ್ತಾ, ಆ ದಿನಗಳಿಗೆ ಲಗ್ಗೆ ಹಾಕುತ್ತಿದ್ದಾರೆ.. ಅಂದರೆ ಅವರು ತಮ್ಮ ಇಂದಿನ ಸಾಧನೆ, ಹಣ, ಅಂತಸ್ತು, ಅಧಿಕಾರ ಎಲ್ಲವನ್ನೂ ಮರೆತು, ಆ ಶಾಲಾದಿನಗಳಲ್ಲಿ ಜೊತೆಯಾಗಿದ್ದ ಗೆಳೆತನವನ್ನು ನೆನಪಿಸಿಕೊಳ್ಳುವುದಕ್ಕೆ ಮಾತ್ರ ಇಲ್ಲಿ ಸೇರಿದ್ದಾರೆ.. 


ಇವರೆಲ್ಲರ ಮಾತುಕತೆಗಳನ್ನು ಕೇಳಿಸಿಕೊಂಡು ಒಂದು ಪುಟ್ಟ ಕತೆಯನ್ನು ಹೇಳುವೇ ಕೇಳಿ.. 

ಒಂದು ದಟ್ಟ ಕಾಡು.. ಅಲ್ಲೊಂದು ರಾಜ.. ಅಂದರೆ ಸಿಂಹರಾಜ.. ಅದಕ್ಕೆ ಜೀವನ ಬೇಸರವಾಗಿದೆ ಎಂದು ಹೇಳುತ್ತಾ.. ಎಲ್ಲಾ ಪ್ರಾಣಿ, ಪಕ್ಷಿಗಳನ್ನು ಕರೆಯಲು ನರಿಗೆ ಘಂಟೆ ಬಾರಿಸುತ್ತಾ ಸಂದೇಶವನ್ನು ಸಾರಲು ಹೇಳುತ್ತದೆ.. 



ನರಿ ಘಂಟೆ ಬಾರಿಸುತ್ತಾ  " ಕೇಳ್ರಪ್ಪ ಕೇಳ್ರಿ ನಮ್ಮ ಕಾಡಿನ ರಾಜ ಸಿಂಹರಾಜನಿಗೆ ಬೇಸರವಾಗಿರುವ ಕಾರಣ.. ಎಲ್ಲರೂ  ಮೃಗರಾಜನಿಗೆ ಸಂತಸ ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕಂತೆ.. "

ಮೃಗರಾಜನ ಅಪ್ಪಣೆ.. ಆದೇಶ.. ಏನಾದರೂ ಅಂದುಕೊಳ್ಳಿ.. ಅದಕ್ಕೆ ಬದ್ಧವಾಗಿರಲೇ ಬೇಕು ಎಂದು.. ಎಲ್ಲವೂ ಸೇರಿದವು.. ಅದಕ್ಕೆ ಜೊತೆಯಾಗಿ ತಾಲೀಮು ನೆಡೆಯುತ್ತಿದ್ದ ಒಂದು ತಂಡವು ಈ ಕೆಳಗಿನ ಚಿತ್ರದಂತೆ ದುಂಡಗೆ ಕೂತರು.. 

ಮೊದಲು ಪ್ರಾರ್ಥನೆ "ನಿಂಬೀಯ ಬನಾದ ಮ್ಯಾಗಡ ಚಂದ ಮಾ ಚಂಡಾಡಿದ" ಎಲ್ಲರೂ ಕಿವಿ ಮುಚ್ಚಿಕೊಂಡು ಆ ಸೊಗಸಾದ ಎತ್ತರ ಸ್ಥಾಯಿಯ ದನಿಯಲ್ಲಿ ಹಾಡಿದವರಿಗೆ  ಕರತಾಡನ ಮಾಡಿದರು.. ತನ್ನ ಹಾಡು ತನ್ನದು ತನ್ನ ರಾಗ ತನ್ನದು ಎಂದು ಹಾಡನ್ನು ಎಲ್ಲರ ಕಿವಿಗೆ ಹಾಗೂ ಹೃದಯಕ್ಕೆ ಮುಟ್ಟಿಸಿದಾಗ ಎಲ್ಲರ ಎದೆಯ ಬಡಿತ ಒಂದೆರಡು ಸಂಖ್ಯೆ ಹೆಚ್ಚಾಗಿದ್ದು ಸುಳ್ಳಲ್ಲ.. (ವೆಂಕಿ)

"ರೋಬಾಟ್.. ಜಯಂಟ್ ರೋಬೋಟ್.. " ಎಂದು ನಮ್ಮ ಪ್ರಪಂಚವನ್ನು ಹೇಗೆ ರಕ್ಷಿಸಿತು ಎಂಬುದನ್ನು ಜಯಂಟ್ ರೋಬೋಟ್ ನೋಡುವ ಸಲುವಾಗಿ ಗುರುವಾರ ಪಾಠದ ವೇಳೆಯನ್ನು ಬದಲಿಸಿಕೊಂಡು ಟಿವಿ ನೋಡುವಷ್ಟು ಹುಚ್ಚು ಹಿಡಿಸಿದ್ದ ಧಾರಾವಾಹಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ ಕಿವಿ ತೂತು ಬೀಳುವಷ್ಟು ಜೋರಾದ ಚಪ್ಪಾಳೆ..  (ಶ್ರೀಧರ)

"ಈ ಅಂಜದ ಎದೆಯಲ್ಲಿ ನಂಜೇ ಇಲ್ಲ ಬಗ್ಗುವ ಆಳಲ್ಲ ತಲೆ ತಗ್ಗಿಸಿ ಬಾಳೋಲ್ಲ" ಎಂದು ಹಾಡಿ ವಿಷ್ಣುವಿನ ತರಹವೇ ಅಭಿನಯ ಮಾಡುತ್ತಾ.. ಎಡಗೈಯಲ್ಲಿ ಬೌಲಿಂಗ್ ಅಭಿನಯ ಮಾಡಿದಾಗ ಮೃಗರಾಜನ ಮೊಗದಲ್ಲಿ ಮೆಲ್ಲನೆ ನಗು ಮೂಡಲು ಆರಂಭಿಸಿತು.. (ರಮೇಶ)

"ನೋಡ್ರಪ್ಪಾ.. ಬದುಕಲ್ಲಿ ಓದೋದೇ ಮುಖ್ಯವಲ್ಲ.. ಜಗತ್ತನ್ನು ಓದಬೇಕು .... ಅದರ ಇತಿಮಿತಿಗಳನ್ನುಅರಿತು . ಜಗತ್ತಿಗೆ ಸರಿಯಾದ ಮಾಹಿತಿ ನೀಡಬೇಕು" ಎಂದು ಜಗತ್ತನ್ನು ಅಂಗೈಯಲ್ಲಿ ತೋರಿಸಿದಾಗ ಮೃಗರಾಜ ಎದ್ದು ನಿಂತು ತಲೆಬಾಗಿ ವಂದಿಸಿತು.. (ಎಚ್ ಡಿ ಗಿರೀಶ)

"ಓದು ಮೆದುಳಿಗೆ.. ವ್ಯಾಯಾಮ ದೇಹಕ್ಕೆ.. ದೇಹವನ್ನು ಕೊಂಚ ದಂಡಿಸಿದಾಗ ಬುದ್ದಿ ನಮ್ಮ ಮಾತು ಕೇಳುತ್ತದೆ ಎಂದು ಮಯೂರಾಸನ ಮಾಡಿದಾಗ... ಮೃಗರಾಜ ಮೆಲ್ಲನೆ ನೆಡೆದು ಬಂದು ತಬ್ಬಿ ಮುದ್ದು ಮಾಡಿತು.. (ಪ್ರಸಾದ್)

"ಕಲಿಕೆಗೆ ಕೊನೆಯೇ ಇಲ್ಲ.. ಓದುವ ಹಾದಿ ಚೆನ್ನಾಗಿರಬೇಕು.. ಸಹಪಾಠಿಗಳ ಒಡನೆ ಓದುತ್ತಾ,  ಗೆಲ್ಲುತ್ತಾ ಹೋಗಬೇಕು .. ಅಂಕೆ ಇಲ್ಲದ ಜಗತ್ತಿನಲ್ಲಿ ಅಂಕ ಪಟ್ಟಿ ಬೇಕು" ಈ ಮಾತಿಗೆ ಸಿಂಹ ತಲೆಯಾಡಿಸಿ ಒಪ್ಪಿಗೆ ಸೂಚಿಸಿತು.. (ಲೀಲಾ)

"ತರಲೆ ಇಲ್ಲದ ಜೀವನ ಅದೊಂದು ಜೀವನವೇ.. .. ಸದಾ ನಗುತ್ತಿರಬೇಕು.. ನಮ್ಮ ಮುಂದಿನ ಬದುಕಲ್ಲಿ ಅಂಕ ಪಟ್ಟಿಗಿಂತ.. ತರಲೆ ಪಟ್ಟಿಗಳು ಯಾವತ್ತಿಗೂ ನೆನಪಲ್ಲಿ ಉಳಿದಿರುತ್ತೆ .. ನಗಬೇಕು.. ನಗುತ್ತಲಿರಬೇಕು.. ಅದುವೇ ಜೀವನ.. " ವಾಹ್ ಎನ್ನುತ್ತಾ ಎರಡೂ ಕೈಯಲ್ಲಿ ಚಪ್ಪಲ್ಲಿ ಬಾರಿಸಿತು..(ಚಕ್ರವರ್ತಿ) 

"ಸುಂದರವದನ ಅರವಿಂದವನ.. " "ಆಹಾ ಬೆಳದಿಂಗಳು ಚೆಲ್ಲುವ ಚಂದಮಾಮ ಇರುವಾಗ.. ಪ್ರತಿ ಕ್ಷಣವೂ ಸುಂದರವೇ.. ಆ ಮುದ್ದು ಮೊಗವನ್ನು ಸದಾ ನೋಡುವ ಆಸೆ " ಮೃಗರಾಜ ತನ್ನ ದೂರದಲ್ಲಿ ಒಂದು ಬಂಡೆಯ ಹಿಂದೆ ಕೂತಿದ್ದ ತನ್ನ ಇನ್ನೊಂದು ಸಿಂಹಕ್ಕೆ ಕಣ್ಣು ಹೊಡೆಯಿತು.. ಆ ಸಿಂಹ ತನ್ನ  ಸಿಂಹಿಣಿಯನ್ನು ಒಮ್ಮೆ ನೋಡಿದಾಗ.. ಸಿಂಹಿಣಿ ಮೆಲ್ಲನೆ ಗುರ್ ಎಂದಿತು.. ಆದರೆ ತಕ್ಷಣಕ್ಕೆ ಒಂದು ನಗೆ ಕೊಟ್ಟಿತು..  (ಶಶಿ)

ಒಂದೇ ನಾಡು ಒಂದೇ ಕುಲವು ಒಂದೇ ದೈವವು.. ಹೌದು ಭಾಷೆ ಯಾವುದಾದರೇನು ಭಾವ ನವೀನ.. ಸುಂದರ ನಗೆಯ ಸರದಾರನಿಗೆ ಎಂದೆಂದೂ ಶ್ರೀನಿವಾಸನ ಕೃಪೆ ಇದ್ದೆ ಇರುತ್ತದೆ ಎಂದು ಹೇಳಿದಾಗ ಮೃಗರಾಜನ ಮೊಗ ಅರಳಿತು .. (ಶ್ರೀನಿವಾಸ್ ನಾಯ್ಡು)

ಮೃಗರಾಜ ಒಂದು ಸಣ್ಣಗೆ ಕಣ್ ಹೊಡೆದಾಗ.. ಈ ಇಡೀ ಕಾರ್ಯಕ್ರಮವನ್ನು ತನ್ನ ಮೂರನೇ  ಕಣ್ಣಿನಲ್ಲಿ ಚಿತ್ರಿಸಿ ಎಲ್ಲರಿಗೂ ಬಿತ್ತರಿಸುವ ಕೆಲಸ ಶುರು ಮಾಡಿತು.. (ಶ್ರೀ)

"ನರಿರಾಯ ಈ ಪುಟ್ಟ ಕಾರ್ಯಕ್ರಮ ಬಹಳ ಖುಷಿ ಕೊಟ್ಟಿತು.. ನೋಡಿ ... ಬಂದವರಿಗೆಲ್ಲಾ ಶ್ರೀ ಕೃಷ್ಣನ ಗೋಕುಲಕ್ಕೆ ಕಳಿಸಿ.. ಅಲ್ಲಿ ಅವರಿಗಾಗಿ ರೊಟ್ಟಿ, ಹಪ್ಪಳ, ನಿಂಬೆ ರಸದ ಪಾನಕ, ಚಟಪಟ ಅನಿಸುವ ತಿನಿಸುಗಳು, ಮೇತಿ ಅನ್ನ, ಜೀರಿಗೆ ಅನ್ನ, ಮೊಸರನ್ನ..ಇದರ ಜೊತೆಗೆ ಹಿತವಾದ ವಾತಾವರಣವನ್ನು ಅಣಿಮಾಡಲು ಹೇಳಿದ್ದೇನೆ.. ಹೋಗಿ ಅವರಿಗೆ ಪ್ರಯಾಸವಾಗದ ಹಾಗೆ ನೋಡಿ ಕೊಳ್ಳಿ ಎನ್ನುತ್ತಾ ಮೃಗರಾಜ ಎದ್ದು ನಿಂತು.. ಜೋರಾಗಿ ಕೂಗಿ ಎಲ್ಲರಿಗೂ ಶುಭ ಹೇಳಿತು.. 








"ಮಕ್ಕಳಾ .. ನಾವು ಎಲ್ಲಿದ್ದರೇನು, ಹೇಗಿದ್ದರೇನು., ನಮ್ಮ ನಮ್ಮ ಗೆಳೆತನ ಅಂದಿಗೂ, ಇಂದಿಗೂ, ಎಂದೆಂದಿಗೂ ಮರಯಲಾರದ್ದು.. ಜೊತೆಯಾಗಿರಬೇಕು, ಜೊತೆಯಾಗಿ ಕಾಲ ಕಳೆಯಬೇಕು .. ಮಳೆ ಬಂದೆ ಬರುತ್ತದೆ.. ಮಳೆಗೆ ಕಾಯಬೇಕು ಅಷ್ಟೇ .. ಈಗಲೇ ಇಷ್ಟು ನಕ್ಕು ನಲಿಯುವ ಈ ಮುಗ್ಧ ಗೆಳೆಯರ ಸಡಗರ ಮಳೆ ಬಂದಾಗ ಹೇಗಿರುತ್ತದೆ ಊಹಿಸಿಕೊಳ್ಳಿ"

ಬಂದ ಮಕ್ಕಳಿಗೆ ಖುಷಿಯಾಯಿತು.. ಹಾಗೆಯೇ ಈ ಕ್ಷಣವನ್ನು ಆನಂದಿಸಿದ ಎಲ್ಲರಿಗೂ ಸಂತಸ ನೂರ್ಮಡಿಯಾಯಿತು.. 




****
ಗೆಳೆಯರ ಜೊತೆಗೂಡಿ ಕಳೆದ ಪ್ರತಿ ಕ್ಷಣವೂ ಇಮ್ಮಡಿಯಾಗುತ್ತಾ ಹೋಗುತ್ತದೆ.. ಆ ಸವಿ ಕ್ಷಣಗಳನ್ನು ತಿರುಗಿಸಿ, ತಿರುಗಿಸಿ ಮೆಲುಕು ಹಾಕಿದಾಗ ಪ್ರತಿಕ್ಷಣವೂ ಸುಂದರ ಅತಿ ಸುಂದರ