Thursday, November 30, 2017

ಶಶಿಯ ಪ್ರತಿ ನಿಶ್ಚಿತಾರ್ಥವಾದ ಮಧುರ ಕ್ಷಣ

ಶ್ರೀಕರ ಶುಭಕರ ಶಶಿಧರ ಮೊದಲ ಪ್ರತಿ ಮೊದಲ ಪ್ರತಿಭಾ ಮೊದಲ ಪ್ರತಿಭಾಕ್ಕ

ಏನಾಯಿತು ಅಂತೀರಾ .. ಕೈಗೆ  ಕಟ್ಟಿದ ಗಡಿಯಾರವನ್ನು ರಿವ್ ಅಂತ ತಿರುಗಿಸಿದೆ.. ೧೯೯೮ ರ ಆಸುಪಾಸಿಗೆ ಓಡಿತು.. 

"ಶಶಿ.. ನಿನ್ನ ಫ್ರೆಂಡ್ಸ್ ಬಂದ್ರ.. ಮೊದಲೇ ಲೇಟ್ ಆಗ್ತಾ ಇದೆ.. ಅಲ್ಲಿ ತನಕ ಹೋಗಬೇಕು"

"ಬರ್ತಾರೆ ಡ್ಯಾಡಿ..  ಅವರಿಗೆ ಹೇಳಿದ್ದೆ.. ಸರಿಯಾದ ಸಮಯಕ್ಕೆ ಬರಬೇಕು ಅಂತ.. "

"ಏನೂ ಬರ್ತಾರೋ.. ಯಾವಾಗಲೂ ನಿನ್ನ ಫ್ರೆಂಡ್ಸ್ ಲೇಟ್"

"ಹೂಂ.. ಹೂಂ"

ಶಶಿ ಮತ್ತು ಶಶಿಯ ಅಪ್ಪ ಆಡುತ್ತಿದ್ದ ಮಾತುಗಳು.. ನಿಶ್ಚಿತಾರ್ಥಕ್ಕೆ ಮಾಲೂರಿಗೆ ಹೋಗಲು ಸಿದ್ಧವಾಗಿದ್ದರು.. ನಾವು ಬೇಗ ಹೋಗಬೇಕಿತ್ತು.. ಕಾರಂತರಗಳಿಂದ ಕೊಂಚ ತಡವಾಗಿತ್ತು.. ಆಗ ಮೊಬೈಲ್, ಬೈಕ್ ಇರಲಿಲ್ಲ. ಬಸ್ಸೇ ಗಟ್ಟಿ.. ನಾನೂ ಲೋಕಿ ಕೊರವಂಗಲದ ಶಶಿ ಮನೆಗೆ ಹೋದೆವು.. ವೆಂಕಿ  ಬರಲ್ಲ ಅಂದಿದ್ದ.. ಆದರೂ ನಾವು ಬಿಡಲಿಲ್ಲ.. ಆಗ ಬಿಟಿಎಂ ಲೇಔಟ್ ನಲ್ಲಿದ್ದ ಅವನನ್ನು ಬಿಡದೆ ಕಾಡಿಸಿದೆವು.. ಅವನು ಸೀದಾ ಮಾಲೂರಿಗೆ ಬರುತ್ತೇನೆ ಎಂದು ಹೇಳಿದ ..  

ನಾನು, ಲೋಕಿ, ಶಶಿ ಜೊತೆಯಲ್ಲಿ  ಹರಟುತ್ತಾ ಮಾಲೂರಿಗೆ ವಾಹನ ಬಂದು ನಿಂತಿತು .. ಹೊಟ್ಟೆಗೆ ಒಂದಷ್ಟು ಆಧಾರವಾಯಿತು.. ನಿಶ್ಚಿತಾರ್ಥದ ಕಾರ್ಯಕ್ರಮ ಆರಾಮಾಗಿ ನೆರವೇರಿತು.. ನಾವು ಛತ್ರದ ಬಾಗಿಲಿನ ಕಡೆಗೆ ನೋಡುತ್ತಿದ್ದೆವು.. ವೆಂಕಿ ಬರ್ತಾನೆ ಅಂತ.. ಹಾಗೂ ಹೀಗೂ ವೆಂಕಿ ಆ ಬಸ್ಸು ಈ ಬಸ್ಸು ಅಂತ ಹಿಡಿದು ಮಾಲೂರಿಗೆ ಬಂದ.. 

ಕ್ಲೀನ್ ಶೇವ್ ಮಾಡಿದ ಮುಖ.. ಮಧ್ಯಕ್ಕೆ ಬೈತಲೆ ಬಾಚಿಕೊಂಡು.. ಕಡು ನೀಲಿ ಬಣ್ಣದ  ಶರ್ಟ್ ತೊಟ್ಟಿದ್ದ ಅವನು ಬಂದು ಕೂತಾಗ ನಗು ಬರುತ್ತಿತ್ತು.. ಅವನ ಪಕ್ಕದಲ್ಲಿ ಮಾಲೂರಿನ ಕೆಲವು ಸಾಬರು ಕೂತಿದ್ದರು.. ಇವನ ಮೊಗವನ್ನು ನೋಡಿ ಇವ ನಮ್ಮವ ಅಂದುಕೊಂಡು.. ಚೂರು ಪಾರು ಉರ್ದುವಿನಲ್ಲಿ ಮಾತಾಡಿದರು.. ಇವನೂ ಕಮ್ಮಿಯೇ ಉರ್ದು, ಹಿಂದಿ, ಕನ್ನಡ, ತೆಲುಗು ಸೇರಿಸಿ, ಬೆರೆಸಿ ಕಾಕ್ಟೈಲ್ ಭಾಷೆಯಲ್ಲಿ ಮಾತಾಡುತ್ತಿದ್ದ.. ನಮಗೆ ನಗು.. ಮಕ್ಕಳ ನಗ್ರಿ ನಗ್ರಿ ಅಂತ ಬಯ್ದ ವೆಂಕಿ.. 

ಪೊಗದಸ್ತಾದ ಊಟ ಆಯಿತು.. ಬನ್ರೋ ಪ್ರತಿ ಮನೆಗೆ ಹೋಗೋಣ ಅಂದ ಶಶಿ.. ನಮಗೆ ಸಂಕೋಚ.. ಹೋಗೋದಾ.. ಏನೋ ಮಾಡೋದು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.. ಬೇರೆ ದಾರಿ ಇರಲಿಲ್ಲ.. ಒಟ್ಟಿಗೆ ಗಾಡಿಯಲ್ಲಿ ಬಂದಿದ್ದೆವು.. ಗಾಡಿ ಎಲ್ಲಿ ಹೋಗುತ್ತೋ ನಾವು ಅಲ್ಲಿಗೆ ಹೋಗಲೇಬೇಕಿತ್ತು.. 

ವಾಹನ ಭವ್ಯವಾದ ಮನೆಯ ಮುಂದೆ ನಿಂತಿತು.. "ಲೋ ಇದೆ ಮೆಟ್ಟಿಲ ಮೇಲೆ ನಿಂತು ತೆಗೆದಿರೋ ಪ್ರತಿಭಾ ಫೋಟೋ ತೋರಿಸಿದ್ದು ಕಣೋ ಶಶಿ.." ಅಂದೇ.. ಹೌದು ಕಣೋ.. ಅಂದ ಶಶಿ.. ಮನೆಯೊಳಗೇ ಹೋದೆವು.. 

ಭಾರತದ ಅನಧಿಕೃತ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್ ಮ್ಯಾಚ್ ಬರುತ್ತಿತ್ತು.. ಮನೆಯೊಳಗೇ ಹೋದ ತಕ್ಷಣ ಒಂದು ರೀತಿಯ ಬಾವಿಯ ತರಹ ಅಂಗಣ.. ಟಿವಿ ಇತ್ತು.. ಟಿವಿ ಎದುರಿಗೆ ದೊಡ್ಡ ಸೋಫಾ ಸೆಟ್.. ಅಲ್ಲಿ ನಮ್ಮ ವಯಸ್ಸಿನ ಹಲವಾರು ಮಂದಿ ಕೂತಿದ್ದರು.. ಪ್ರತಿಭಾ ಅವರ ಅಣ್ಣಂದಿರು.. ಮತ್ತು ಸಂಬಂಧಿಕರು ಅಂತ ಆಮೇಲೆ ತಿಳಿಯಿತು.. 

ಸೋಫಾ ಪಕ್ಕದಲ್ಲಿ ಪುಟ್ಟ  ಮೆಟ್ಟಿಲುಗಳನ್ನು ಹತ್ತಿದರೆ .. ಅಲ್ಲಿ ಊಟ ಮಾಡುವ ಸ್ಥಳ.. ಎರಡು ಪಕ್ಕದಲ್ಲಿ ಕೋಣೆಗಳು ಇದ್ದವು.. ಸೋಫಾ ಪಕ್ಕದಲ್ಲಿ ವಿಷ್ಣು ಚಕ್ರ ಸುತ್ತುವ ಹಾಗೆ ಫ್ಯಾನ್ ಸುತ್ತುತ್ತಿತ್ತು.. ನನಗೆ ಬಿಸಿಲು.. ಪ್ರಯಾಣ.. ಕಾಫಿ ಇಲ್ಲದೆ..  ತಲೆ ನೋವು ಶುರುವಾಗಿತ್ತು.. ಮಿಕ್ಕವರಿಗೆ ಫ್ಯಾನ್ ಇಲ್ಲ ಅಂದ್ರೆ ಕೂರೋಕೆ ಆಗುತ್ತಿರಲಿಲ್ಲ.. ನಾನು ಆದಷ್ಟು ಫ್ಯಾನ್ ಇಂದ ದೂರ ಕೂತಿದ್ದೆ ಆದರೂ ಆ ಗಾಳಿ ನನಗೆ ಹಿಂಸೆ ಮಾಡುತ್ತಿತ್ತು.. 

ಛತ್ರದಲ್ಲಿ ನೋಡಿದ್ದ ಹುಡುಗಿ ಶಶಿಯ ಹಿಂದೆ ಬಂದರು.. ಇವನು ವೆಂಕಟಾಚಲ.. ಇವನು ಲೋಕೇಶ.. ಇವನು ಶ್ರೀಕಾಂತ.. ಪರಿಚಯವಾಯಿತು.. ಗಂಭೀರವಾದ ಧ್ವನಿಯಲ್ಲಿ ನಮಸ್ಕಾರ ಎಂದು ಹೇಳಿ ಆ ಹುಡುಗಿ ನಮ್ಮೆಲ್ಲರಿಗೂ ಕಾಫಿ, ಮತ್ತೆ ಮಿಕ್ಸ್ಚರ್ ಕೊಟ್ಟರು.. ಅವತ್ತಿನ ಮಿಕ್ಸ್ಚರ್ ರುಚಿ ಇನ್ನೂ ನೆನಪಾಗುತ್ತೆ.. 

ವೆಂಕಿ ಕ್ರಿಕೆಟ್ ಮ್ಯಾಚಿನಲ್ಲಿ ಮುಳುಗಿದ್ದ .. ಫೋರ್ ಸಿಕ್ಸ್ ಹೊಡೆದಾಗೆಲ್ಲ ಇವನ ಕಾಮೆಂಟರಿ ನೆಡೆಯುತ್ತಿತ್ತು.. ಅಲ್ಲಿದ್ದವರೊಡನೆ ಇವನು ಸೇರಿಕೊಂಡಿದ್ದ.. 

ಶಶಿ ನೆಡಿರೋ ಒಂದು ರೌಂಡ್ ಹೋಗಿ ಬರೋಣ ಅಂದ.. ಸರಿ ನಾವೆಲ್ಲ ಒಂದು ಪುಟ್ಟ ಸುತ್ತು ಮಾಲೂರು ದರ್ಶನವಾಯಿತು.. 

ಮತ್ತೆ ನಾವು ಬರುವ ಹೊತ್ತಿಗೆ.. ಮಿಕ್ಕವರು ಸಿದ್ಧವಾಗಿದ್ದರು.. ಅಲ್ಲಿದ್ದವರಿಗೆ ಬರುತ್ತೇವೆ ಎಂದು ಹೇಳಿ ಹೊರಟೆವು.. ನನ್ನ ತಲೆನೋವು ಕಾಡುತ್ತಲೇ ಇತ್ತು .. ಹಾದಿಯಲ್ಲಿ ಹಾಗೆ ಸಣ್ಣ ನಿದ್ದೆ ಮಾಡಿದೆ.. ಜೇಬಿನಲ್ಲಿದ್ದ ಮಾತ್ರೆಯನ್ನು ತೆಗೆದುಕೊಂಡಿದ್ದೆ.. ಬೆಂಗಳೂರಿಗೆ ಬರುವ ಹೊತ್ತಿಗೆ ಸ್ವಲ್ಪ ಸಮಾಧಾನವಾಗಿತ್ತು.. ಕೋರಮಂಗಲಕ್ಕೆ ಬಂದು.. ವಿಜಯನಗರದಲ್ಲಿದ್ದ ನನ್ನ ಮನೆಗೆ ಸೇರಿ.. ಮಲಗಿದ್ದೆ ಗೊತ್ತು.. 

ಮತ್ತೆ ಮಾರನೇ ದಿನದಿಂದ ಆಫೀಸ್ ಕೆಲಸ ಅದರಲ್ಲಿ ಬ್ಯುಸಿ.. ಅದಾದ ಕೆಲವು ತಿಂಗಳಾದ ಮೇಲೆ ಮದುವೆ ನೆಡೆಯಿತು.. ಮದುವೆ ದಿನದ ಸಂಭ್ರಮದ ಬಗ್ಗೆ ಕಳೆದ ವರ್ಷಗಳಲ್ಲಿ ಬರೆದಿದ್ದೇನೆ.. ಆದರೆ ಇಂದಿಗೂ ಆ ಮೆಟ್ಟಿಲ ಮೇಲೆ ನಿಂತ ಫೋಟೋದಲ್ಲಿದ್ದ ಪ್ರತಿಭಾಕ್ಕ ಇವರೇನಾ ಅನ್ನಿಸುತ್ತೆ.. ಭವ್ಯವಾದ ಬಂಗಲೆಯಲ್ಲಿ ರಣಚಂಡಿಯಂತೆ ಎಲ್ಲರನ್ನು ಗೋಳುಹುಯ್ಕೊಳ್ಳುತ್ತಾ.. ನಾ ಹೇಳಿದ್ದೆ ಆಗಬೇಕು ಎನ್ನುವ ಹಠದ ಅಕ್ಕ ಇಂದು.. ಎಲ್ಲರೊಡನೆ ನಾನು ಎಂದು ನಮ್ಮನ್ನು ಸ್ವಂತ ಅಣ್ಣಂದಿರನ್ನಾಗಿ ಮಾಡಿಕೊಂಡಿರುವ ಈ ಸುಂದರ ಮನಸ್ಸಿನ ಅಕ್ಕ ನಮ್ಮ ಅದ್ಭುತ ಗೆಳೆಯ ಶಶಿಯ ಬದುಕಲ್ಲಿ ಕಾಲಿಟ್ಟು ೧೯ ವರ್ಷಗಳು ಆದವು .. 

ನಮ್ಮ ಗೆಳೆಯನಿಗೆ ಸಿಕ್ಕ ಅದ್ಭುತ ಸಂಗತಿ ಪ್ರತಿಭಾಕ್ಕ.. ಜನುಮದ ಜೋಡಿಯಾಗಿರುವ ಶಶಿ ಪ್ರತಿಭಾ ಅವರಿಗೆ ವಿವಾಹ ದಿನದ ಶುಭ ಕೋರಲು ಗಡಿಯಾರವನ್ನು ಹಿಂದಕ್ಕೆ ಓಡಿಸಿದ್ದೆ.. ಈಗ ಗಡಿಯಾರ ಉಸ್ಸಪ್ಪ ಸಾಕಪ್ಪ ಅದೆಷ್ಟು ಬಾರಿ ನನ್ನ ಹಿಂದಕ್ಕೆ ಮುಂದಕ್ಕೆ ಓಡಿಸುತ್ತೀಯಾ ಶ್ರೀಕಿ ನೀನು ಎಂದು ಬಯ್ದು.. ಮತ್ತೆ  ತನ್ನ ಸುಸ್ಥಿತಿಗೆ ಬಂದು ನಿಂತು.. 

"ಶಶಿ ಪ್ರತಿಭಾ.. ಸಮಯದ ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ನಿಮಗೆ ನನ್ನ ಕಡೆಯಿಂದಲೂ ಶುಭಾಶಯಗಳು.. .. ಹೀಗೆ ಇರಿ.. ನಗುತ್ತಾ ಇರಿ.. ಜೊತೆಯಲ್ಲಿರುವವರನ್ನು ನಗಿಸುತ್ತಾ ಇರಿ.. ಮತ್ತೆ ಬಾಂಬೆ ಪ್ರವಾಸದ ಫೋಟೋಗಳನ್ನು ಮಾತ್ರ ಯಾರಿಗೂ ಕೊಡಬೇಡಿ . ವಿವಾಹಾದಿನದ ಶುಭಾಶಯಗಳು ಮತ್ತೊಮ್ಮೆ" ಎಂದು ಹೇಳಿ ಹಲ್ಲು ಕಿರಿಯಿತು.. 

ಶುಭಾಶಯಗಳು ಶಶಿ ಪ್ರತಿಭಾಕ್ಕ .. ವಿವಾಹ ದಿನದ ಆ ಮಧುರ ನೆನಪುಗಳ  ಮೆರವಣಿಗೆಯಲ್ಲಿ ಮಿಂದು ಬನ್ನಿ!!!
ಚಿತ್ರ ಕೃಪೆ ಶಶಿ

Saturday, October 28, 2017

ಶತಮಾನದ ಸಂಭ್ರಮದಲ್ಲಿ ನಮ್ಮ ಶಾಲೆ ಎನ್ನುವ ದೇಗುಲ - National High School 100 Years

"ಸಡಗರದಿಂದ ಗಗನದ ಅಂಚಿಂದ 
ಸುರರು ಬಂದು, 
ಹರಿಯ ಕಂಡು ಹರುಷದಿ 
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ 
ಎನುತಿರಲು ನಾದಮಯ ಈ ಲೋಕವೆಲ್ಲಾ"

ಎಷ್ಟು ನಿಜ ಈ ಸಾಲುಗಳು.. ಶ್ರೀ ಚಿ ಉದಯಶಂಕರ್ ಅವರ ಬರೆದ ಸರಳ ಸುಂದರ ಸಾಲುಗಳು ಇವು.. 
ನಮ್ಮನ್ನು ಸ್ವಾಗತಿಸಿದ ಫಲಕ 
ಈ ಭುವಿಯೇ ನಾದಮಯವಾಗಿರುವಾಗ..  ನಾದಕ್ಕೆ ಅಧಿದೇವತೆ ಶಾರದೆ....  ಅವಳ ವರಪ್ರಸಾದವೇ ಈ ವಿದ್ಯೆ. ಮನುಜನಿಗೆ ಜ್ಞಾನ ದಾಹವನ್ನು ಕೊಟ್ಟು ಅದನ್ನು ಇಂಗಿಸಿಕೊಳ್ಳಲು ಗುರುಗಳನ್ನು ಸೃಷ್ಟಿಸಿ.. ಆ ಗುರುಗಳು ಇರಲು ಗುರುಕುಲ ಸೃಷ್ಟಿಸಿ ಅಲ್ಲಿ ವಟುಗಳು ಎಂಬ ವಿದ್ಯಾರ್ಥಿಗಳನ್ನು ಉಳಿಸಿ ಬೆಳೆಸುವ  ಕಾರ್ಯವನ್ನು ಈ ಗುರುಕುಲಗಳು ಅರ್ಥಾತ್ ಶಾಲೆಗಳು ಮಾಡುತ್ತಲೇ ಇವೆ .. 

ಆಗಾಗ ಕತ್ತೆತ್ತಿ ಆಕಾಶ ನೋಡುತ್ತಿದ್ದೆ..  ನಿಮ್ಮ  ಊಹೆಗೆ ಉತ್ತರ ಕೊಡುವೆ.. ಬೆಂಗಳೂರನ್ನು ವಾರಗಳ ಗಟ್ಟಲೆ ಕಾಡಿದ ಮಳೆ ಬರುತ್ತದೆ ಎನ್ನುವ ಆತಂಕವಿರಲಿಲ್ಲ.. ಬದಲಿಗೆ ಮೇಲೆ  ಹೇಳಿದ ಹಾಡಿನ ಸಾಲಿನಂತೆ.. ನೆಡೆಯುತ್ತೇನೋ  ಅನ್ನುವ ಕುತೂಹಲ.. 
ಜನಸಾಗರ ಸೇರುತ್ತಿತ್ತು ಮೆಲ್ಲಗೆ 

ಉತ್ಸಾಹದಿಂದ ನೆರೆದಿದ್ದ ವಿದ್ಯಾರ್ಥಿ ವೃಂದ 
ಶ್ರೀಮತಿ ಆನಿಬೆಸಂಟ್ ಶುರುಮಾಡಿದ ಈ ಶಾಲೆಗೆ ಈಗ ಶತಮಾನದ ಸಂಭ್ರಮ..೧೯೧೭ ರಿಂದ ಅವಿರತವಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ವಿದ್ಯಾರ್ಥಿಗಳನ್ನು ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ನಾವು ಓಡಾಡಿದ್ದೇವೆ ಓದಿದ್ದೇವೆ ಎನ್ನುವುದೇ ನಮಗೆ ಹೆಮ್ಮೆಯೆನಿಸುತ್ತದೆ... ಅಂತಹುದರಲ್ಲಿ ಈ ಶಾಲೆಯ ಏಳಿಗೆಗೆ ತನು ಮನ ಧನ ಅರ್ಪಿಸಿದ ಸಾವಿರಾರು ಗುರುಗಳ ಮನಸಿಗೆ ಎಂಥಹ ಅನುಭವ ಅಲ್ಲವೇ ..! 

ಈ ಶಾಲೆಯಲ್ಲಿ ಸಿಕ್ಕಿದ ಜ್ಞಾನದ ಅನುಭವಾಮೃತವನ್ನು ಸವಿದು  ಸಮಾಜದಲ್ಲಿ ತಮ್ಮ ತಮ್ಮ ಸ್ಥಾನ ಕಂಡುಕೊಂಡ ಪ್ರತಿಭಾ ಪುಂಜವೇ ಇಲ್ಲಿದೆ.. ಏನನ್ನೂ ಹೇರದೆ.. ಭಾರವನ್ನು ಭಾರವೆಂದು ಗಮನ ಬಾರದ ಹಾಗೆ ಇಲ್ಲಿಯ ಗುರುಗಳು ಹೇಳಿಕೊಟ್ಟ ಪ್ರತಿ ಪದವೂ ನಮ್ಮ ಹೃದಯದೊಳಗೆ ಇಳಿದು ಕೂತಿದೆ.. 

ಬರಿ ಅಂಕಪಟ್ಟಿಯನ್ನು ತುಂಬಿಸೋದೇ ಶಾಲೆಯಲ್ಲ ಬದಲಿಗೆ ಅಂಕೆಗೆ ಸಿಗದ ಮನಸ್ಸಿಗೆ ಒಂದು ನಿರ್ದಿಷ್ಟ ಗುರಿಯನ್ನು  ಹಾಕಿಕೊಟ್ಟು ಅದನ್ನು ಸಾಧಿಸುವ ಪರಿ ಹೇಳಿಕೊಟ್ಟ ರೀತಿ ಅನನ್ಯ .. 

ನೂರರ ಸಂಭ್ರಮಕ್ಕೆ ಒಂದು ವೇದಿಕೆಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಹಿಂದೆ ಓದಿದ ವಿದ್ಯಾರ್ಥಿಗಳನ್ನು ಸೇರಿಸುವ ಒಂದು ಅವಕಾಶವಾಗಿ ಕೂಡಿ ಬಂದಿದ್ದು ಸಂಗೀತ ಸಂಜೆ.. ತಿಥಿ ವಾರ ನಕ್ಷತ್ರ ಹೇಗೆ ಕೂಡಿ ಬಂದಿದೆ ನೋಡಿ.. ಇಂದಿನ ವಾರ ಶುಭವಾರ ಇಂದಿನ ಕರಣ ಶುಭ ಕರಣ ಎನ್ನುವಂತೆ.. ಸುಂದರ ಸಂಜೆಗೆ ಸಜ್ಜಾಗಿತ್ತು ನ್ಯಾಷನಲ್ ಹೈ ಸ್ಕೂಲು.. 
ಇಂದಿನ ವಾರ ಶುಭವಾರ ಇಂದಿನ ಕರಣ ಶುಭಕರಣ 
ಶಾಲೆಯ ಆವರಣದಲ್ಲಿ ಬಂದಿದ್ದ ವಿದ್ಯಾರ್ಥಿಗಳ ಸಂಪರ್ಕ ವಿಳಾಸ ಸಂಗ್ರಹಿಸುತ್ತಿದ್ದ ತಂಡ.. ಬಂದವರನ್ನು ನಗುಮೊಗದಿಂದ ಸ್ವಾಗತಿಸಿ ಅವರ ವಿವರಗಳನ್ನು ಪಡೆದುಕೊಂಡು ಶಾಲೆಯ ಪ್ರಾರ್ಥನಾ ಗೀತೆಯನ್ನು ಕೊಡುತ್ತಿದ್ದರು .. 
ವಯಸ್ಸು ಬರಿ ಸಂಖ್ಯೆ ಅಷ್ಟೇ..
 ಉತ್ಸಾಹಕ್ಕೆ ಎಲ್ಲಿದೆ ಎಲ್ಲೇ 

ವಿವರಗಳನ್ನು  ತುಂಬುತ್ತಿರುವ ಸಹಪಾಠಿ 

ಶಾಲೆಯೊಳಗೆ ಹೆಜ್ಜೆ ಹಾಕಿದಾಗ.... "ಹೌದು ಇಲ್ಲೇನೋ ಇದೆ" ಎನ್ನುವ ಒಂದು ತರಂಗದ ಕಂಪನ ಅಲ್ಲಿಗೆ ಬಂದಿದ್ದವರನ್ನು ಒಮ್ಮೆ ಅಲುಗಾಡಿಸಿದದ್ದು ಸುಳ್ಳಲ್ಲ.. ಬಂದವರು ಶಾಲೆಯ ಒಳಗೆಲ್ಲ ಓಡಾಡುತ್ತಾ ತಮ್ಮ ಶಾಲೆಯ ಕೊಠಡಿಯನ್ನು ಕಂಡು ತೃಪ್ತರಾದವರು ಕೆಲವರು.. ತಮ್ಮ ಮಕ್ಕಳ ಜೊತೆಯಲ್ಲಿ ಬಂದು.. ನೋಡು ಮಗು ಇದೆ ಕೊಠಡಿಯಲ್ಲಿ ಓದುತ್ತಿದ್ದದು.. ಇಲ್ಲೇ ಕೂರುತ್ತಿದ್ದೆ... ಎಂದು ಒಂದು ಕ್ಷಣಕ್ಕೆ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿದ್ದರು.. 
 ನಾ ಒಂಭತ್ತು ಹತ್ತನೇ ತರಗತಿ ಓದಿದ ಕೊಠಡಿ 
ಪ್ರಾರ್ಥನಾ ಗೀತೆಯೊಂದಿಗೆ ಶುರುವಾದಾಗ.. ನನ್ನ ಮೈಮನ ನಿಧಾನವಾಗಿ ಕಂಪಿಸುತ್ತಿತ್ತು.. ರೋಮಾಂಚಕಾರಿ ಅನುಭವ ನನಗಾದದ್ದು ನಿಜ.. 
ಪ್ರಾರ್ಥನೆ 

ಕಾರ್ಯಕ್ರಮ ಶುರುವಾಯಿತು.. ದೀಪವ ಬೆಳಗುವ ಮೂಲಕ.. 

ಆರಂಭ 

ನಂತರ ಶ್ರೀ ಎ ಎಚ್ ಆರ್ ರವರು ಶಾಲೆಯ ಮುಂದಿನ ಯೋಜನೆಗಳನ್ನು ಹಾಗೂ ಶಾಲೆಯ ಶತಮಾನದ ಸಂಭ್ರಮಾಚರಣೆಯ ಬಗ್ಗೆ ಹೇಳಿದರು.. 

ಶ್ರೀ ಎಚ್ ಏನ್ ಆರ್ ರವರು ಫೋರಮ್ಮಿನ ಅಚ್ಚುಕಟ್ಟಾದ ಕಾರ್ಯಗಳನ್ನು ಹೇಳಿದರು.. 

ಅಗಲಿದ ಹಲವಾರು ಗುರುಗಳಿಗೆ ಒಂದು ಕ್ಷಣ ಕಾಲ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಿದೆವು.  

ನಂತರ ಶುರುವಾಯಿತು.. 

ನಾದಮಯ….
ಎನ್ ಎಚ್ ಎಸ್ ಎಲ್ಲಾ ನಾದಮಯ 
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಎನ್ ಎಚ್ ಎಸ್ ಎಲ್ಲಾ ನಾದಮಯ 

ಗುರುಗಳ ಮಾಧುರ್ಯ ಪಾಠದ ಸೌಂದರ್ಯ
ಶಿಷ್ಯರ ತಣಿಸೆ, ವಿದ್ಯಾರ್ಥಿಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ,
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು, ಹರಿಯ ಕಂಡು ಹರುಷದಿ
ಎನ್ ಎಚ್  ಎಸ್ ಸ್ವರ್ಗ...  ಎನ್ ಎಚ್ ಎಸ್ ಸ್ವರ್ಗ ಎನುತಿರಲು

ನಾದಮಯ ಈ ಎನ್ ಎಚ್ ಎಸ್ ಎಲ್ಲಾ 
ಶಿಕ್ಷಣದಿಂದ ಗುರುಗಳು ಆನಂದ ತಂದಿರಲು
ನಾದಮಯ....ಈ ಎನ್ ಎಚ್ ಎಸ್ 
ನಾದಮಯ  ನಾದಮಯ.. 

ಸಂಗೀತ ಸಾಗರದ ಹರಿಸಿದ ಪ್ರತಿಭಾವಂತರು 


ಗಾನ ಸುಧೆ 
 ಹೌದು ಹಿರಿಯ ವಿದ್ಯಾರ್ಥಿಗಳು ತಮ್ಮ ತಮ್ಮ  ಪ್ರಭೆಯನ್ನು ಅಂಗಣದಲ್ಲಿ ಹರಡಿದ ರೀತಿಗೆ ಕಂಬದ ಮೇಲೆ ಕೂತಿದ್ದ ತಾಯಿ ಶಾರದೆ ಕೂಡ ತಲೆದೂಗಿದ್ದಳು..  ಗಾಯಕಿ ಶ್ರೀಮತಿ ಎಂ ಡಿ ಪಲ್ಲವಿ ಅರುಣ್ ಅವರು ಕೆಲವು ಇಂಪಾದ ಗೀತೆಗಳನ್ನು ಹಾಡಿದರು.. ಜೊತೆಯಲ್ಲಿ ವಿದ್ಯಾರ್ಥಿಗಳು ಹಾಡುಗಾರಿಕೆಯಿಂದ ರಂಜಿಸಿದರು..

ನಲವತ್ತೈದು ಐವತ್ತು ನಿಮಿಷಗಳು ಕ್ಷಣಕಾಲದಂತೆ ಓಡಿತು.. ಸಂಗೀತ ಶಾರದೆಯನ್ನು ಧರೆಗೆ ಇಳಿಸಿದ್ದರೆ ..  ಕೆಲ ವಿದ್ಯಾರ್ಥಿಗಳ ತಂಡ ತಮ್ಮನ್ನು ಬೆಳೆಸಿದ ಶಾಲೆಗೇ ಅಳಿಲು ಸೇವೆ ಎಂದು ತಾಯಿ ಲಕ್ಷ್ಮಿ ಕಟಾಕ್ಷವನ್ನು ಶಾಲೆಯ ಮುಖ್ಯಸ್ಥರಿಗೆ ನೀಡಿದರು.. 

ರಂಗಿನಲ್ಲಿ ಸಂಭ್ರಮ 
ಜ್ಞಾನದ ಒಡತಿ ಮತ್ತು ಧನದ ಒಡತಿ  ಒಂದೇ ಕಡೆ ಸೇರಿ ಜ್ಞಾನ ಧನವಾದರು.. 

ಹೆಮ್ಮೆಯ ಕಲಾವಿದೆ 
ನೂರರ ಸಂಗೀತ ಸಂಜೆಗೆ ಇನ್ನಷ್ಟು ಮೆರುಗು ನೀಡಿದ್ದು  ಅಲ್ಲೇ ನಿಂತು ಬಿಡಿಸಿದ ಚಿತ್ರ.. ಶ್ರೀಮತಿ ಸುಮನ ಜಗದೀಶ್ ಅವರು ರಚಿಸಿದ ಸುಂದರ ಚಿತ್ರ.. ಇಲ್ಲಿ ಎಲ್ಲವೂ ಇತ್ತು.. ನೂರರ ಸಂಭ್ರಮ.. ಆದಿ ಪೂಜಿತ ಗಣಪ.. ನಮ್ಮ ಶಾಲೆಯ ಹೆಮ್ಮೆಯ ಗಡಿಯಾರದ ಗೋಪುರ.. ಎಲ್ಲವೂ ಒಳಗೊಂಡಿತ್ತು.. ಅವರಿಗೆ ಅಭಿನಂದನೆಗಳು .. 

ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಸುತ್ತುವರೆದು ತಮ್ಮ ತಮ್ಮ ಗೌರವಗಳನ್ನು ಸಲ್ಲಿಸಿದ್ದು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿತ್ತು.. 

 ಸುಮಾರು ಎರಡುಘಂಟೆಗಳು ಹೃದಯಕ್ಕೆ ಸಂತಸ ನೀಡಿದರೆ.. ಕಾರ್ಯಕ್ರಮದ ಅಂಚಿನಲ್ಲಿ ಉಪಹಾರ ನಾಲಿಗೆಯ  ರುಚಿಕೋಶಗಳನ್ನು ತಣಿಸಿದವು.. 

"ಸ್ನೇಹಿತರೆ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ 
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ"  ಅಕ್ಷರಶಃ ನಿಜಯಾಗಿತ್ತು .. 

ಮನೆಗೆ ಹೊರಟಾಗ ಮನಸ್ಸು ಹಾಡುತಿತ್ತು.. "ಈ ಭಾವ ಗೀತೆ ನಿನಗಾಗಿ ಹಾಡಿದೆ.. "

"ಓ ನನ್ನ ಗುರುಕುಲವೇ ನನ್ನ ಹೆಜ್ಜೆಗಳನ್ನು ರೂಪಿಸಿದ 
ನಿನಗೆ ಹೇಗೆ ಧನ್ಯವಾದಗಳನ್ನು ಅರ್ಪಿಸಲಿ 
ಧನದಿಂದಲೇ ಮನದಿಂದಲೇ ತನುವಿನಿಂದಲೇ?"

ಶಾಲೆ ಹೇಳಿತು.. 
ಶ್ರದ್ಧಾ ಹೀ ಪರಮಾಗತಿಹಿ!!!
ಶ್ರೀ HVR ವಿಶ್ವಮಹಾಯುಧ್ಧವನ್ನು
ಕಣ್ಣ ಮುಂದೆ ತಂದಿಟ್ಟ ಗುರುಗಳು
ಹೆಸರಾಂತ ವಿದ್ಯಾರ್ಥಿ 

ನೆಚ್ಚಿನ ಗುರುಗಳ ಜೊತೆಯಲ್ಲಿ ನನ್ನ ಗೆಳೆಯರು 

ಭದ್ರ ಬುನಾದಿ ಹಾಕಿಕೊಟ್ಟಾ ಗುರುಗಳು ಶ್ರೀ MKL 

ಗುರುಗಳ ಜೊತೆಯಲ್ಲಿ ಕಲಾವಿದೆ 

ಇನ್ನೊಂದು ವಿದ್ಯಾರ್ಥಿಗಳ ತಂಡ ನಮ್ಮ ಗುರುಗಳ ಜೊತೆಯಲ್ಲಿ 

ನೂರರ ಸಂಭ್ರಮದ ಒಂದು ಝಲಕ್ ನಮಗೆ ನೀಡಿದ ವಿದ್ಯಾರ್ಥಿ ತಂಡಕ್ಕೂ.. ಅಧ್ಯಾಪಕರ ತಂಡಕ್ಕೂ.... ಹೇಳುವ ಒಂದೇ ಮಾತು "ಎಂದರೋ ಮಹಾನುಭಾವುಲು ಅಂದರೇಕಿ ವಂದನಮೂ"
ಎಂದರೋ ಮಹಾನುಭಾವುಲು ಅಂದರೇಕಿ ವಂದನಮು

Sunday, October 15, 2017

ಸ್ನೇಹಕ್ಕೆ ಒಂದೇ ಮಾತು - ನ್ಯಾಷನಲ್ ಹೈ ಸ್ಕೂಲ್ ನಲ್ಲಿ ಬಂಗಾರದ ಕ್ಷಣಗಳು

"ಕಾಲವನ್ನು ತಡೆಯೋರು ಯಾರು ಇಲ್ಲ.. ಗಾಳಿಯನ್ನು  ಹಿಡಿಯೋರು ಎಲ್ಲೂ ಇಲ್ಲ.. ನಿಮ್ಮಿಂದ ನನ್ನ ನನ್ನಿಂದ ನಿಮ್ನ ದೂರ ಮಾಡಲು ಎಂದೂ ಆಗಲ್ಲ"  ಕಿಟ್ಟು ಪುಟ್ಟು ಚಿತ್ರದ ಹಾಡು ಪದೇ ಪದೇ ನೆನಪಾಗುತ್ತಿತ್ತು..

ಹೌದು ನೆನಪುಗಳು ಕೊಡುವ ಕಿಕ್ ಯಾವ ಮದ್ಯವೂ ಕೊಡೋಲ್ಲ.. ಆ ನೆನಪುಗಳ ದಿನಕ್ಕೆ ಹೋಗಿ ತೇಲಿಬರುವಾಗ ಸಿಗುವ ಖುಷಿ ಸದಾ ಅಮರ ಮಧುರ.. :-)

ಹಲವಾರು ಮಾಸಗಳೇ ಕಳೆದು ಹೋಗಿದ್ದವು.. ಶಾಲಾ ದಿನಗಳಿಗೆ ಮರಳುವ ಒಂದು ಅವಕಾಶ ಹಠಾತ್ ಒದಗಿಬಂತು.. ಸುಮ್ಮನೆ ಶುರುಮಾಡಿದ ಒಂದು ಸಂದೇಶದ ಸರಪಣಿ.. ಅನೇಕ ಸ್ನೇಹಿತರನ್ನು ಭೇಟಿ ಮಾಡುವ ಸದವಕಾಶ ಸಿಕ್ಕಿತು.. ನಾನು ಬರುವೆ ಅಂತ ಕಡ್ಡಿ ಮುರಿದಹಾಗೆ ಕೆಲವರು .. ನಾ ಬಂದರೆ ಬರುವೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಎರಡು ಕಡೆ ಪ್ರಕಾಶ ಚೆಲ್ಲುವ ದೀಪದಂತೆ ಉತ್ತರ ಕೊಟ್ಟವರು ಕೆಲವರು.. ಕರೆ ಮಾಡಿದ್ದಕ್ಕೆ ಕಾರಣಾಂತರಗಳಿಂದ ಬರಲು ಆಗದೆ ಇದ್ದವರು ಕೆಲವರು.. ಹೀಗೆ ನಮ್ಮ ಶಾಲಾ ಗುಂಪು ಒಂದು ಕಡೆ ಬೆಳೆಯುತ್ತಲೇ ಇದೆ..

ಸಾಮಾಜಿಕ ತಾಣ ನಮ್ಮ ಶಾಲಾದಿನಗಳಲ್ಲಿ ಇರಲಿಲ್ಲ.. ಆದರೆ ಒಬ್ಬರಿಗೊಬ್ಬರು ಸಂಪರ್ಕ ಹೊಂದಬೇಕು ಎಂಬ ತುಡಿತ ಅಂದಿನಿಂದ ಇದ್ದೆ ಇತ್ತು..

ಹೇ ಶ್ರೀ.. ಈ ಕಥೆ ಗೊತ್ತು ಬೇರೆ ಏನಾದರೂ ಹೇಳು..

ತಲೆ ತಿರುಗಿಸಿ ಧ್ವನಿ ಬಂದ ಕಡೆ ನೋಡಿದೆ.. ನನ್ನ ಕಪಾಟಿನಲ್ಲಿದ್ದ ******* ಕೂಗುತ್ತಿತ್ತು..  ಬರೋಬ್ಬರಿ ಮೂರುವರೆ ತಿಂಗಳು ಅದರಿಂದ ದೂರವಿರಬೇಕಿತ್ತು..

ಮೆಲ್ಲಗೆ ಅದರ ಮೈ ಸವರಿದೆ.. ತಕ ತಕ ಕುಣಿಯುವ ಅದರ ಹೃದಯ ಬಡಿದ ಕೇಳುತ್ತಿತ್ತು.. "ಎಷ್ಟು ದಿನ ಆಯಿತು ಶ್ರೀ "

"ಹೌದು ಹೌದು ಕಾರಣ ನಿನಗೆ ಗೊತ್ತಲ್ವಾ.. "

"ಶ್ರೀ.. ನಾನೇ ಹೇಳುತ್ತೇನೆ ಇಂದಿನ ಕಥೆಯನ್ನ"

ನಾ ಹೂಂ ಗುಟ್ಟದೆ ಬೇರೆ ದಾರಿಯಿರಲಿಲ್ಲ..

ಸರಿ ಮುಂದಿನ ಕಥೆ.... ಕಪಾಟಿನಲ್ಲಿದ ********** ಕಡೆಯಿಂದ

*****

ಹೊಟ್ಟೆ ಹಸಿದಿತ್ತು .. ಹಲವಾರು ದಿನಗಳಿಂದ ಕತ್ತಲೆ ಗೂಡಲ್ಲಿ ಕೂತಿದ್ದೆ.. ಒಂದು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದ ನಾನು ನನ್ನ ಯಜಮಾನನ ಬೇಡಪ್ಪ ಅನ್ನುವಂತಹ ಕ್ಷಣಗಳಿಗೂ ನಾ ಸಾಕ್ಷಿಯಾಗಿದ್ದೆ..

ಇಂದು ನನ್ನ ಯಜಮಾನ ನನ್ನ ಮೈ ಸವರಿದಾಗ.. ಏನೋ ಒಂದು ರೀತಿಯ ಪುಳಕ .. ತನ್ನ ಪ್ರಾಣದಂತೆ ನೋಡಿಕೊಂಡಿದ್ದ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟಿದ್ದ.. ತನ್ನ ಮಾಮೂಲಿ ಅಭ್ಯಾಸದಂತೆ ಬಾಸಿನ ಚಿತ್ರ ತೆಗೆದು ಹೊರಟಾಗ.. ಕುಪ್ಪಳಿಸಿ ಕುಪ್ಪಳಿಸಿ ಕುಣಿದಿದ್ದೆ.. ಅರೆ ಇದಕ್ಕಿಂತ ಮುಂಚೆ ನನ್ನ ಹೊಟ್ಟೆಗೆ ತುಂಬಾ ಊಟ ಹಾಕಿದ್ದ.. ನಾ ಸಿದ್ಧವಾಗಿದ್ದೆ..

ವಾಣೇಶ.. ವೆಂಕಿ ಮತ್ತು ರೂಪ ಶ್ರೀ ಕಾಯುತ್ತಲಿದ್ದರು.. ನಾ ಗಾಡಿಯಲ್ಲಿ ಬಂದಿದ್ದು ಚಳಿಯಾಗಿತ್ತು.. ಮೆಲ್ಲಗೆ ಮೈ ನಡುಗುತ್ತಿತ್ತು.. "ಯಾಕೋ ಶ್ರೀಕಿ ಚಳಿಯೇನೋ ಶ್ರೀಕಿ" ಅಂದ ವೆಂಕಿ... "ಹೌದು ಕಣೋ" ಎಂದು ಬಂದಿದ್ದವರಿಗೆ ವಿಶ್ ಮಾಡಿ ಇನ್ನೂ ಬರದಿದ್ದವರಿಗೆ ಕರೆ ಮಾಡಲು ಶುರುಮಾಡಿದ ನನ್ನ ಯಜಮಾನ!

ಒಬ್ಬೊಬ್ಬರಾಗಿ ಬರಲು ಶುರುಮಾಡಿದರು .. ಇಪ್ಪತ್ತು ನಿಮಿಷ.. ಶಾಲಾದಿನಗಳಲ್ಲಿ ಅಲ್ಲಿಗೆ ಹೋಗುವುದೇ ಒಂದು ಅಪರಾಧ ಅಥವಾ ಅಪರಾಧ ಮಾಡಿದವರು ಮಾತ್ರ ಅಲ್ಲಿಗೆ ಹೋಗುವುದು ಎನ್ನುವ ಭಾವ ಹುಟ್ಟಿಸಿದ್ದ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬಂದವರೆಲ್ಲ ಕೂತಿದ್ದರು.. !

ಶ್ರೀ ಡಿ ವಿ ಎನ್ ಸರ್ ಬಂದವರನ್ನು ಕರೆದು ಮಾತಾಡಿಸಿದರು.. ಉಭಕುಶಲೋಪರಿ ಸಾಂಪ್ರತ ಆಯಿತು.. ಒಂದು ಅದ್ಭುತವಾದ ವಿಚಾರ ಹೇಳಿದರು.. ಶಾಲಾದಿನಗಳ ಬಗ್ಗೆ ನಂತರ ಬದಲಾದ ಸಮಾಜದ ಸ್ಥಿತಿ ಗತಿ ಶಾಲೆಯ ಸ್ಥಿತಿ ಎಲ್ಲವನ್ನು ಹಾಗೆ ಕಣ್ಣ ಮುಂದೆ ತಂದರು.. ನಾನು ಅಲ್ಲಿನ ದೃಶ್ಯಗಳನ್ನು ನನ್ನ ಹೊಟ್ಟೆಯೊಳಗೆ ತುಂಬಿಸಿಕೊಳ್ಳುತ್ತಿದ್ದೆ..  ನನಗೇನೋ ಐತಿಹಾಸಿಕ ಕ್ಷಣಕ್ಕೆ ನಾ ಸಾಕ್ಷಿಯಾಗುತ್ತಿದ್ದೀನಿ ಅನ್ನುವ ಭಾವ..
ಇಂದಿನ ಕಥೆ ಹೇಳಿದ ನನ್ನ ಗೆಳೆಯ  :-)

ಒಂದು ರೀತಿಯಲ್ಲಿ ನಿಜವೂ ಆಗಿತ್ತು.. ಗೆಳೆತನ ಎಂಬುದು ಒಂದು ಐತಿಹಾಸಿಕ ಕ್ಷಣವೇ ಅಲ್ಲವೇ.. ಅಂದು ಅಲ್ಲಿ ಸೇರಿದ್ದವರು  ಅಸಾಧ್ಯವಾದ ರೀತಿಯಲ್ಲಿ ಒಬ್ಬರಿಗೊಬ್ಬರು ಸೆಳೆತಕ್ಕೆ ಒಳಗಾಗಿದ್ದರು . ೧೯೮೮ರಲ್ಲಿ ಶಾಲೆ ಮುಗಿಸಿ ಅವರವರ  ಬದುಕು ತೋರಿದಂತೆ ಅಥವಾ ಅವರವರ ಯೋಗ್ಯತೆಗೆ ತಕ್ಕಂತೆ ಸಮಾಜದಲ್ಲಿ ಅವರ ಸ್ಥಾನಕ್ಕೆ ತಲುಪುವ ಪಥಕ್ಕೆ ತೆರಳಿದ್ದೆರು . ಮತ್ತೆ ಆ ನಂಟು ಹೀಗೆ ಅನೇಕ ಭೇಟಿಗಳಲ್ಲಿ ಬೆಸೆದು ಬಂದಿತ್ತು..

ನನ್ನ ಯಜಮಾನನ ಸ್ನೇಹಿತ ಸತೀಶ ಟಿ ಎನ್ ಅನೇಕ ಭೇಟಿಗಳ ನಂತರ ಸಿಕ್ಕಿದ್ದ.. ಇವನ ನೆನಪಿನ ಶಕ್ತಿ ಅದ್ಭುತ.. ಶಾಲಾದಿನಗಳ ಚಿಕ್ಕ ಪುಟ್ಟ ಸಂಗತಿಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಹೇಳುತ್ತಿದ್ದ ರೀತಿ ಸಕತ್ ಖುಷಿ ಕೊಟ್ಟಿತ್ತು.. ಹೌದಾ ಇವೆಲ್ಲಾ ನೆಡೆದಿತ್ತಾ ಅಥವಾ ಹೌದು ಇವೆಲ್ಲ ನೆಡೆದಿತ್ತು.. ಆದರೆ ಅವರಿಗೆಲ್ಲಾ ಬೇಕಾದ ಹಾಗೆ ನೆನಪುಗಳ ಗುಚ್ಛ ಸಂತಸ ತಂದಿತ್ತು..

ಅಸಾಧಾರಣ ಎನ್ನುವ ರೀತಿಯಲ್ಲಿ ಒಬ್ಬೊಬ್ಬರು ತಮ್ಮ ನೆನಪಿನ ಬುಟ್ಟಿಗಳನ್ನು ಬಿಚ್ಚುತ್ತಾ ಹೋಗಿದ್ದು ಇಂದಿನ ದಿನಕ್ಕೆ ಇನ್ನಷ್ಟು ಉತ್ಸಾಹ ತುಂಬಿತ್ತು.. ಕೆಲವು ಘಟನೆಗಳು ಜೀವನವನ್ನು ಬದಲಿಸಿ ಬಿಡುತ್ತೆ.. ಹೌದು ಶಾಲಾದಿನಗಳ ಆ ಪಾಠಗಳು,ಆಟಗಳು ಎಲ್ಲರ ಹವ್ಯಾಸಗಳು ಬದುಕಿಗೆ ಒಂದು ತಿರುವು ಕೊಡುವಲ್ಲಿ ಸಫಲವಾಗಿತ್ತು.

ವೆಂಕಿಯ ನಗೆಚಟಾಕಿಗಳು, ಯೋಗೀಶನ ಎಲ್ಲಾ ಮರಗಳಿಗೂ ಕಲ್ಲು ಹೊಡೆಯುವ ತಾಕತ್ತು, ಪ್ರಸಾದ್ ಮತ್ತು ಶ್ರೀಧರನ ಜಯಂಟ್ ರೋಬಾಟ್ ಕಥೆಗಳು, ಕ್ರಿಶ್ನೋಜಿ ಕ್ರಿಕೆಟ್ ಕಥೆಗಳು.. ಶಶಿಯ ಹ್ಯಾಂಡ್ ಟೆನ್ನೀಸ್.. ಬಾಲಾಜಿಯ ಟೆನಿಸ್ ಫುಟ್ಬಾಲ್.. ನಮಮ್ ಉಪಾಧ್ಯಾಯರ ಪಾಠ ಹೇಳುವ ವೈಶಿಷ್ಟ್ಯ ಎಲ್ಲವೂ ಮಾತುಗಳಲ್ಲಿ ನುಗ್ಗಿ ಬಂದಿತ್ತು..

ಕೆಲವೊಮ್ಮೆ ಆ ದಿನಗಳಲ್ಲಿ ನೆಡೆದ  ಆದರೆ ಇವರ ಗಮನಕ್ಕೆ ಬಾರದ ಅಥವಾ ಇವರು ಆ ಘಟನೆಗಳ ಕಡೆಗೆ ಮುಖ ಮಾಡದ ಎಷ್ಟೋ ಕಥೆಗಳು ಇಂದು ಅನಾವರಣಗೊಳ್ಳುತ್ತಿದ್ದವು.. ಅವಿರತವಾಗಿ ಮಾತನಾಡುವ ಎಲ್ಲರ ತವಕ ಖುಷಿ ನೀಡಿತ್ತು..

ಶಾಲಾ ಉಪಾಧ್ಯಾಯರ ಜೊತೆಯಲ್ಲಿ ಮಾತುಕತೆ.. ಒಂದಷ್ಟು ಚಿತ್ರಗಳು.. ಈ ಘಟನೆಗಳಿಗೆ ಪುರಾವೆ ನೀಡಿದ್ದವು..
ಮುಖ್ಯೋಪಾಧ್ಯಾಯರು ಶ್ರೀ ಡಿ ವಿ ಎನ್  ಸರ್ 






ಎಷ್ಟು ಮಾತಾಡಿದರೂ ದಣಿಯದ ಮನಸ್ಸು.. ಇನ್ನಷ್ಟು ಹೊತ್ತು ಇರಬೇಕು ಎನ್ನುವ ಹಂಬಲ ಎಲ್ಲರಿಗೂ ಇತ್ತು.. ಆದರೆ... ರೇ ರೇ ರೇ..

ಮತ್ತೊಂದು ದಿನಕ್ಕೆ ಮನಸ್ಸು ಹಾತೊರೆಯುತ್ತಾ ಎಲ್ಲರಿಗೂ ಶುಭ ವಿದಾಯ ಹೇಳಿತು .

ನನ್ನ ಯಜಮಾನ ನನ್ನನ್ನು ಮತ್ತೆ ನನ್ನ ಗೂಡಿಗೆ ಸೇರಿಸಿದಾಗ ನನಗೆ ಅರಿವಾಗಿದ್ದು ಅನೇಕ ದಿನಗಳ ನನ್ನ ವನವಾಸ ಮುಗಿದು ಮತ್ತೆ ಮರಳಿ ಜಗತ್ತಿಗೆ ಬಂದಿದ್ದು ನನಗೆ ಹೊಸತನ ನೀಡಿತ್ತು..

ನನ್ನ ಲೇಖನ ಸಪ್ಪೆ ಅನ್ನಿಸುತ್ತಿದೆಯೇ.. ಇಲ್ಲಾ ಮಸಾಲೆ ಕಡಿಮೆ ಆಯಿತೇ.. ಹೌದು ಅಲ್ಲವೇ.. ನಾಲಿಗೆ ರುಚಿ ಕಡಿಮೆಯಾಗಿದ್ದಾಗ ಹೊಸ ರುಚಿ ನಾಲಿಗೆ ಹತ್ತದ ರೀತಿಯಿರಬಹುದೇ.. ಕತ್ತಲೆಯಲ್ಲಿದ್ದ ನಾನು ಈಗ ತಾನೇ ಹೊರಗೆ ಬಂದಿದ್ದೇನೆ.. ಮತ್ತೆ ಮರಳಿ ಬರುವ ಚೈತನ್ಯ ಸಿಕ್ಕಿದೆ ನನ್ನ ಯಜಮಾನನ ಹುಮ್ಮಸ್ಸಿನಿಂದ.. ಒಂದು ಅದ್ಭುತ ಭರ್ಜರಿ ಕಥೆಯೊಡನೆ ಮತ್ತೆ ಬರುವೆ.. ಅಲ್ಲಿಯ ತನಕ ನನಗೆ ಅನುಮತಿ ನೀಡಿ.. ಜೊತೆಯಲ್ಲಿ ನಾ ಇಂದು ತೆಗೆದ ಕೆಲವು ಚಿತ್ರಗಳನ್ನು ನೋಡಿ.. ಸಾಧಾರಣ ಅನ್ನಿಸುತ್ತೆ ಆದರೆ.. ಇದಕ್ಕೆ ಹೊಂದಿಕೊಂಡಿರುವ ಆ ಮಧುರ ನೆನಪುಗಳು ಹಾಡುವ ಹಾಡು ಒಂದೇ..

"ಸ್ನೇಹಕ್ಕೆ ಒಂದೇ ಮಾತು.. ಹೃದಯಗಳು ಆಡೋ ಮಾತು.. ಈ ಮೌನ ಇನ್ನೂ ಏತಕೆ.. ಕೂಡುವ ಹಾಡುವ ಹಾರುವ.. "

******

ಗೆಳೆಯರೇ ನಮ್ಮ ಶಾಲೆ ಆರಂಭವಾಗಿ ನೂರು ವರ್ಷಗಳು ತುಂಬಲಿವೆ.. ಆ ಅದ್ಭುತ ಕ್ಷಣಗಳನ್ನು ಸೆರೆಹಿಡಿಯಲು ಮತ್ತು ಇನ್ನೂ ಅನೇಕ ಸ್ನೇಹಿತರರನ್ನು ಭೇಟಿ ಮಾಡಲು ಎಲ್ಲರ ಮನಸ್ಸು ಹಾತೊರೆಯುತ್ತಿದೆ..

ಇದೆ ತಿಂಗಳು ೨೮ರಂದು ಶನಿವಾರ ಸಂಜೆ ೪. ೦೦ ಘಂಟೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಂಭ್ರಮದಿಂದ ನೆಡೆಸುವ ಸಂಗೀತ ಕಾರ್ಯಕ್ರಮ ಮತ್ತಷ್ಟು ಸ್ನೇಹಿತರವನ್ನು ಸೇರಿಸಬಹುದು ಅಥವಾ ಅವರ ಬಗ್ಗೆ ವಿವರಗಳು ಸಿಗಬಹುದು..
ಅಕ್ಟೋಬರ್ ೨೮ ರಂದು ಶನಿವಾರ ಸಂಗೀತ ಸಂಜೆ 


"ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ. " ... ಬರಲೇ  ಬೇಕು ಅಲ್ಲವೇ.. ಸ್ನೇಹದ ತಾಕತ್ತೇ ಅದು..

ಮುಂದಿನ ಕಾರ್ಯಕ್ರಮಕ್ಕೆ ಕಾಯುತ್ತಿರುವ  :-)

Sunday, June 4, 2017

ಗೀತೋಪಚಾರ... !


ರಥದಲ್ಲಿದ್ದ ಅರ್ಜುನ ಕಣ್ಣು ಒರೆಸಿಕೊಂಡ.. .. ಪಾರ್ಥಸಾರಥಿ ಶ್ರೀ ಕೃಷ್ಣ ಒಮ್ಮೆ ಮುಗುಳು ನಕ್ಕ


ಕುರುಕ್ಷೇತ್ರದ ಯುದ್ಧವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಸಂಜಯ.. ಈ ವಿಷಯವನ್ನ ಹೇಳಿದಾಗ ಧೃತರಾಷ್ಟ್ರ "ಸಂಜಯ.. ಶ್ರೀ ಕೃಷ್ಣನಿಗೆ ರಥವನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದಾನೆ.. ಆ ಧೂಳಿನ ಕಣಗಳು ಅರ್ಜುನನ ಕಣ್ಣಿಗೆ ಧೂಳು ತುಂಬಿಕೊಂಡು ಕಣ್ಣನ್ನು ಮಬ್ಬಾಗಿಸುತ್ತಿದೆ..  ಇದು ಗೊತ್ತಿದ್ದೂ ಶ್ರೀ ಕೃಷ್ಣ ನಿಧಾನವಾಗಿ ರಥ ಓಡಿಸಬಾರದೇ.... ಇಷ್ಟಕ್ಕೂ.. ಶ್ರೀ ಕೃಷ್ಣ ಮುಗುಳ್ ನಕ್ಕಿದ್ದು ಏತಕ್ಕಾಗಿ?"

ಟವರಿಂದ ಸಿಗ್ನಲ್ ಸರಿಯಾಗಿ ಬರುತ್ತಿರಲಿಲ್ಲ.. ಒಮ್ಮೆ ತನ್ನ ಮೋಡೆಮ್ ಅನ್ನು ಮತ್ತೊಮ್ಮೆ ಸರಿಯಾಗಿ ಅಡ್ಜಸ್ಟ್ ಮಾಡಿಕೊಂಡು ಸಂಜಯ ಮತ್ತೆ ಶುರುಮಾಡಿದ
ಸಿಗ್ನಲ್ ಸಿಕ್ಕಿದ ಟವರ್!!!
"ಮಹಾರಾಜ.. ಯುದ್ಧದ ಬಗ್ಗೆ ನಿಮಗೆ ಮೊದಲನೇ ದಿನದಿಂದ ಹೇಳುತ್ತಿದ್ದೇನೆ.. ನಿಮಗೆ ಬೇಸರವಾಗಿರಬಹುದು.. ಇಂದು ಸ್ವಲ್ಪ ಹೊತ್ತು ಬೇರೆ ಕಥೆ ಹೇಳುತ್ತೀನಿ.. ಇದು ಇನ್ನೊಂದು ಕಡೆ ಮುಂದೆ ಕಲಿಯುಗದಲ್ಲಿ ನೆಡೆಯುತ್ತಿರುವ ಘಟನೆ.. ಸ್ವಲ್ಪ ನಿಮಗೂ ಬೇಸರ ಕಳೆಯುತ್ತದೆ.. "

"ಆಗಲಿ ಸಂಜಯ.. ಕೌರವ ಪಡೆ ದಿನೇ ದಿನೇ ಕ್ಷೀಣಿಸುತ್ತಿದೆ.. ಮನಸ್ಸಿಗೆ ಕೊಂಚ ಮುದ ಕೊಡುವ  ಬೇರೆ ಏನಾದರೂ ಹೇಳು."

"ಆಗಲಿ ಮಹಾರಾಜ.. ಶುರು ಮಾಡುತ್ತೇನೆ"

Over to Sanjaya from Kurukshetra .. with Cameraman "TIME".. for Kaliyuga TV

******
ಬಿಂಬ ಹೇಳುತ್ತದೆ.. ನೀ ಸರಿ ಇದ್ದರೇ.. ನಾ ನಿನ್ನ ಸರಿಯಾಗಿ ತೋರುತ್ತೇನೆ..

ಹೀಗೆ ಆಯಿತು.. ಕಮಲಾ ನೆಹರು ಶಾಲೆಯ ಮಕ್ಕಳಿಗೆ ಒಂದು ಭದ್ರ ಅಡಿಪಾಯ ಹಾಕಿಕೊಟ್ಟದ್ದು.. ಆ ಶಾಲೆಯ ಶಿಕ್ಷಕ ಶಿಕ್ಷಕಿಯರು.. ಆ ಕಾಲದಲ್ಲಿ ಬಹಳ ಹೆಸರಾಗಿದ್ದ ಆ ಶಾಲೆಯಲ್ಲಿ ಉತ್ತಮ ಶಿಕ್ಷಣ ಮಕ್ಕಳಿಗೆ ಸಿಗುತ್ತಿತ್ತು .. ಪ್ರತಿಹಂತದಲ್ಲಿಯೂ ಶಿಕ್ಷಕ(ಕಿಯ)ರು ಶಿಕ್ಷೆ ಶಿಕ್ಷಣ ಎರಡನ್ನು ನಾಣ್ಯದ ಎರಡು ಮುಖವನ್ನಾಗಿ ಮಾಡಿಕೊಂಡು ಉತ್ತಮ ವಿಚಾರಗಳನ್ನು ಹೇಳಿಕೊಡುತ್ತಾ ವಿದ್ಯಾರ್ಥಿಗಳ ಮನದಲ್ಲಿ ಹಸಿಯಾದ ಸಿಮೆಂಟ್ ನೆಲದ ಮೇಲೆ ಮೂಡುವ ಹೆಜ್ಜೆ ಗುರುತಿನಂತೆ ಅಚ್ಚಳಿಯದ ಛಾಪನ್ನು ಹಾಕಿಬಿಟ್ಟಿದ್ದರು.. ಅವರಿಗೆ ಅರಿವಿರಲಿಲ್ಲ.. ಈ ಛಾಪು ಬರಿ ಶಾಲೆಯ ಮಕ್ಕಳ ಸ್ಲೇಟು ಅಥವಾ ಪುಸ್ತಕದ ಮೇಲೆ ಮಾತ್ರವೇ ಅಲ್ಲ.. ಇದು ವಿದ್ಯಾರ್ಥಿಗಳ ಮನದ ಮೇಲೆ ಕೈ ಮೇಲಿನ ಹಚ್ಚೆಯಂತೆ ಶಾಶ್ವತವಾಗಿ ಉಳಿದಿಬಿಟ್ಟಿತು.. ವರುಷಗಳು ಎಷ್ಟೇ ಉರುಳಿದ್ದರೂ  ನೆನಪುಗಳು ಮಾತ್ರ ಭದ್ರ ಕಪಾಟಿನಲ್ಲಿ ತನ್ನನ್ನು ತಾನು ಕಾಪಾಡಿಕೊಂಡಿತ್ತು.. !!!

ಹೇವಿಳಂಬಿ ನಾಮ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಮಕ್ಕಳೆಂದು ಹೇಳಿ.. ತಮ್ಮ ಮನೆಗೆ ಮಕ್ಕಳನ್ನು ಒಮ್ಮೆ ಕರೆತರಬೇಕು ಎಂದು ಹಂಬಲ ಹೊತ್ತಿದ್ದ ವಿದ್ಯಾರ್ಥಿಗಳ  ನೆಚ್ಚಿನ ಶಿಕ್ಷಕಿ ಶ್ರೀಮತಿ ಗೀತಾ ಮೇಡಂ.. ಆತಿಥ್ಯದ ಜವಾಬ್ಧಾರಿ ಹೊತ್ತು ಆ ದಿನವನ್ನು ಹೇವಿಳಂಬಿ ನಾಮ ಸಂವತ್ಸರದ ಶುಕ್ಲ ಪಕ್ಷದ ದಶಮಿಯಂದು ಅಂದರೆ ಜೂನ್ ೪ ೨೦೧೭ ರ ಭಾನುವಾರದಂದು ತಮ್ಮ ಮನೆಗೆ ಪ್ರೀತಿಯ ಆಹ್ವಾನವನ್ನು ಕೊಟ್ಟಿದ್ದರು.. ಅಂದು ಎಲ್ಲಾ ದಾರಿಯೂ ಹನುಮಗಿರಿಯ ಕಡೆಗೆ ತಿರುಗಿತ್ತು.. !!!

ಈ ದಿನದ ವಿಶೇಷಕ್ಕೆ ಶ್ರೀಮತಿ ಗೀತಾ ಮೇಡಂ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಅವರ ಪತಿ ದೇವರು, ಮತ್ತು ಬಂಧು ಮಿತ್ರರು ಜೊತೆಯಲ್ಲಿ ಅವರ ಮೆಚ್ಚಿನ ವಿದ್ಯಾರ್ಥಿನಿಯರು ಸುಧಾ ಮತ್ತು ನಂದಿನಿ.. ಮೆಚ್ಚಿನ ಶಿಕ್ಷಕರನ್ನು ಕರೆದುಕೊಂಡು ಬರುವ ಜವಾಬ್ಧಾರಿ ಹೊತ್ತವರು ಮೋಹನ ಮತ್ತು ವಿಜಯನಾರಸಿಂಹ...

ಸುಮಾರು ಹನ್ನೊಂದು ಘಂಟೆಗೆ.. ಶ್ರೀಮತಿ ಪುಷ್ಪ ಮೇಡಂ, ಶ್ರೀಮತಿ ಜಾನಕಮ್ಮ ಮೇಡಂ, ಶ್ರೀಮತಿ ಈಶ್ವರಿ ಮೇಡಂ ಅವರನ್ನು ಮೋಹನ ಕರೆ  ತಂದ... ಸ್ವಲ್ಪ ಸಮಯದಲ್ಲಿಯೇ ಶ್ರೀ ಮಹಾಲಿಂಗಯ್ಯ ಮಾಸ್ತರು ವಿಜಯನಾರಸಿಂಹ ಜೊತೆಯಲ್ಲಿ ಬಂದರು..

ಶ್ರೀ ಮಹಾಲಿಂಗಯ್ಯ ಮಾಸ್ತರು.. ಕಾರ್ಯಕ್ರಮದ ನಿರೂಪಣೆಯ ಭಾರವನ್ನು ಹೊತ್ತರು.. ಎಲ್ಲರನ್ನು ಮಾತಾಡಿಸುತ್ತಾ.. ಶಾಲೆಯ ಆ ದಿನಗಳ ಬಗ್ಗೆ ಕೆಲವು ವಿಷಯಗಳನ್ನ ಹೇಳುತ್ತಾ.. ವಿದ್ಯಾರ್ಥಿಗಳ ಆ ಕಾಲದ ಮನೋಭಾವವನ್ನು ಕೊಂಡಾಡುತ್ತಾ, ಆ ದಿನಗಳು ಮತ್ತು ಈಗಿನ ದಿನಗಳ ವ್ಯತ್ಯಾಸವನ್ನು ಹೇಳಿದರು.. ಮಧ್ಯೆ ಮಧ್ಯೆ ಚೆನ್ನವೀರಕಣವಿ, ಕುವೆಂಪು, ದಿನಕರ ದೇಸಾಯಿ, ವಚನಗಳ ರೂಪದಲ್ಲಿ ಶರಣರು ಮತ್ತು ಕೆಲವು ಸ್ವವಿರಚಿತ ಕವನಗಳನ್ನು ಹಾಡಿದರು..
ಅಧ್ಯಕ್ಷತೆವಹಿಸಿದ ಶ್ರೀ ಮಹಾಲಿಂಗಯ್ಯ ಮಾಸ್ತರು 
ಮಧ್ಯೆ ಮಧ್ಯೆ ಹುಡುಗರ ಜೊತೆಯಲ್ಲಿ ಅದೇ ಧಾಟಿಯಲ್ಲಿ ಇಷ್ಟವಾಗುವ ಹಾಗೆ ಮಾತಾಡುತ್ತಾ, ಮನೆ ಮಕ್ಕಳನ್ನು ಮಾತಾಡಿಸುವ ಹಾಗೆ ಮನೆಯ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದರು ಶ್ರೀಮತಿ ಗೀತಾ ಮೇಡಂ..

ಮಂತ್ರಮುಗ್ದರಾಗಿ ಕುಳಿತಿದ್ದ ವಿದ್ಯಾರ್ಥಿಗಳು 

ಪುಷ್ಕಳ ಭೋಜನ ಸಿದ್ಧವಾಗಿತ್ತು.. ಅಲ್ಲಿ ಏನಿರಲಿಲ್ಲ.. ಏನಿತ್ತು ಅನ್ನುವುದಕ್ಕಿಂತ. ಅಲ್ಲಿನ ಪ್ರತಿಯೊಂದು ಖಾದ್ಯ ಪದಾರ್ಥದಲ್ಲಿಯೂ ಮಸಾಲೆ ರೂಪದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಮಮತೆ ಎಲ್ಲವೂ ತುಂಬಿತ್ತು.. ಪ್ರತಿಯೊಂದು ತಿನಿಸುಗಳು ರುಚಿಕರವಾಗಿತ್ತು.. ನೋಡಪ್ಪ ನೀನು ಇದನ್ನು ತಿಂದಿಲ್ಲ.. ಇದನ್ನು ಹಾಕಿಸಿಕೊಂಡಿಲ್ಲ, ಇದನ್ನು ಹಾಕಿ.. ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಾ, ಬಂದಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಟ್ಟೆ ತುಂಬಾ ಊಟ ಮಾಡುವಂತೆ ನೋಡಿಕೊಂಡರು ಶ್ರೀಮತಿ ಗೀತಾ ಮೇಡಂ...
ಪುಷ್ಕಳ ಭೋಜನ 

ಸುಖಭೋಜನ ಉಂಡು ವಿಶ್ರಾಂತಿ ತೆಗೆದುಕೊಳ್ಳುವಾಗ.. ಮತ್ತೆ ಮಾತು, ಹಾಸ್ಯ, ನಗೆ ಬಗ್ಗೆ ಎಲ್ಲವೂ ಮೂಡಿ ಬಂತು.. ಜೊತೆಯಲ್ಲಿ

ಅರೆವಳಿಕೆ ತೆಗೆದುಕೊಂಡ ಹಾಗೆ ಎಲ್ಲರೂ ಗಪ್-ಚುಪ್.. ಸುಮ್ಮನೆ ವಶೀಕರಣಕ್ಕೆ ಒಳಗಾದಂತೆ ಮಂತ್ರ ಮುಗ್ಧರಾಗಿ ಆ ಅನುಭವದಲ್ಲಿ ಮುಳುಗೇಳುತ್ತಿದ್ದರು... ಪ್ರತಿಯೊಬ್ಬ ವಿದ್ಯಾರ್ಥಿಗಳ ಪರಿಚಯವಾಯಿತು.. ಅವರವರ ಕ್ಷೇತ್ರದಲ್ಲಿ ಅವರವರ ಪ್ರಗತಿ ಕಂಡು ಶಿಕ್ಷಕರು ಖುಷಿ ಪಟ್ಟರು.. ತಮಗೆ ಕೊಟ್ಟ ಶಿಕ್ಷಕರ ಪಟ್ಟ. ಜೊತೆಯಲ್ಲಿ ತಾವು ಹೇಳಿಕೊಟ್ಟ ಪಾಠವನ್ನು ಕಲಿತು.. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಪಡುತ್ತಾ.. ಮುಂದಿನ ಪೀಳಿಗೆಯೂ ಇದನ್ನು ಪಾಲಿಸಲಿ ಎನ್ನುವ ಆಶಯವನ್ನು ಹೊತ್ತು ಹರಸಿದರು.

ಇದಕ್ಕೆಲ್ಲ ಕಲಶವಿಟ್ಟಂತೆ..

  • ವಿದ್ಯಾರ್ಥಿ ನಾರಾಯಣ ಅವರ ಸುಪುತ್ರಿ ಮಹಾಲಕ್ಷ್ಮಿ ಅಲಿಯಾಸ್ ಮಾನಸಿ ತಾನೇ ಹಾಡಿಕೊಂಡು ಪುಟ್ಟ ನೃತ್ಯವನ್ನು ಮಾಡಿದರು..ಸೊಗಸಾಗಿತ್ತು .. ಈ  ಮಗು ನೃತ್ಯದಲ್ಲಿ ಚೆನ್ನಾಗಿ ಹೆಸರು ಮಾಡಲಿ,  ಹಾಗೆಯೇ ತಾನಂದು ಕೊಂಡ ಹಾದಿಯಲ್ಲಿ ಯಶಸ್ಸು ಕಾಣಲಿ ಎಂದು ಹರಸಿದರು. 
  • ವಿದ್ಯಾರ್ಥಿನಿ ಸುಧಾಳ ಮಗಳು ಸುರಭಿ ಹಾಗೂ ಸುಪ್ರಿಯಾ ಸುಂದರ ಗಾಯನ ಎಲ್ಲರ ಮನಸ್ಸನು ಉಲ್ಲಸಿತಗೊಳಿಸಿತು..
    ಕಲಾ ಕುಸುಮಗಳು!!!
ಸುಂದರ ಸಮಾರಂಭ ತಾಂಬೂಲವಿಲ್ಲದೆ ಎಂದೂ ಮುಗಿಯುವುದಿಲ್ಲ.. ಪ್ರತಿಯೊಬ್ಬರಿಗೂ ಫಲ ತಾಂಬೂಲ ಕೊಟ್ಟು ಹಾರೈಸಿದ ಹಾಗೂ ಹರಸಿದ ಆತಿಥ್ಯವಹಿಸಿದ ಶ್ರೀಮತಿ ಗೀತಾ ಮೇಡಂ ಮತ್ತು ಮನೆಯವರಿಗೆ ಅನಂತವಂದನೆಗಳು.. 
ಸಂಸ್ಕಾರ.. ಸಂಸ್ಕೃತಿ.. 

ಈ ಕಾರ್ಯಕ್ರಮದ ಕೆಲವು ಸುಂದರ ಚಿತ್ರಗಳನ್ನು ನಿಮ್ಮ ವಿವರಿಸುತ್ತೇನೆ.. ಎಂದು ಸಂಜಯ ಹೇಳಿದಾಗ.. ಧೃತರಾಷ್ಟ್ರ ಆನಂದ ಭಾಷ್ಪವನ್ನು ತಡೆದುಕೊಳ್ಳಲಾಗದೇ..  ಅತ್ತು ಬಿಟ್ಟರು.. 










"ಅದೆಲ್ಲಾ ಸರಿ ಸಂಜಯ.... ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.. ಅದನ್ನು ನೀನು ಇನ್ನೂ ಉತ್ತರಿಸಿಲ್ಲ.. "

ಸಂಜಯ ತಾನೂ  ಆನಂದ ಭಾಷ್ಪವನ್ನು ಒರೆಸಿಕೊಂಡು... "ಹೇಳಿ ಮಹಾರಾಜಾ" ಎಂದಾ 

"ಅರ್ಜುನ ಯಾಕೆ ಕಣ್ಣು ಒರೆಸಿಕೊಂಡ..  ರಣರಂಗದ ಧೂಳಿನಿಂದಲೇ.. ಅಥವಾ ಬೇರೆ ಏನಾದರೂ ಕಾರಣವಿದೆಯೇ..  ?"

"ಮಹಾರಾಜ.. ಈ ಕಾರ್ಯಕ್ರಮದ ಬಗ್ಗೆ ಶ್ರೀ ಮಹಾಲಿಂಗಯ್ಯನವರು ತಮಗೆ ಇಷ್ಟವಾದ ರೀತಿಯಲ್ಲಿ ವಂದನಾರ್ಪಣೆ ಮಾಡಿದರು, ಜೊತೆಯಲ್ಲಿ ತಮ್ಮ ದೊಡ್ಡಬಳ್ಳಾಪುರದ ಮನೆಗೆ ಎಲ್ಲರೂ ಬರಬೇಕೆಂಬ ಆಹ್ವಾನವಿತ್ತರು... ಎಲ್ಲರೂ ಒಂದು ದಿನ ನಿಗದಿ ಮಾಡಿಕೊಂಡು ಬರುವುದಾಗ ವಾಗ್ಧಾನ ಮಾಡಿದರು.. ನಂತರ ಮಾತಾಡಿದ ಶ್ರೀಮತಿ ಈಶ್ವರಿ ಮೇಡಂ  ಈ ಕಾರ್ಯಕ್ರಮ, ಗುರುವಂದನಾ ಕಾರ್ಯಕ್ರಮ ಮತ್ತು ತಮ್ಮ ವಿದ್ಯಾರ್ಥಿಗಳ ಖುಷಿ ಪಡುತ್ತಾ.. ನಿಮ್ಮಂತಹ ವಿದ್ಯಾರ್ಥಿಗಳು ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದಾಗ.. ವಿದ್ಯಾರ್ಥಿಗಳ ಕಣ್ಣಾಲಿಗಳು ಮಂಜಾದವು.. ತಕ್ಷಣ ಎಲ್ಲರೂ ಹೇಳಿದ್ದು.. ನಿಮ್ಮಂತಹ ಶಿಕ್ಷಕರು ನಮಗೆ ಸಿಕ್ಕಾಡಿದ್ದು ನಮ್ಮ ಪುಣ್ಯ ಎಂದರು.. "
ನಮ್ಮ ಜೀವನದ  ರೇಖೆಗಳನ್ನು ಸೇರಿಸಿ ರಂಗವಲ್ಲಿಯಾಗಿಸಿದ ಗುರುಗಳು!!
"ಹೌದು .. ಅಲ್ಲಿ ನೆಡೆದ ಪ್ರತಿಯೊಂದು ಘಟನೆಯೂ ಮನಸ್ಸಿಗೆ ಮುದನೀಡುವಂತದ್ದೇ.. ಸಂಜಯ ಅದೆಲ್ಲಾ ಸರಿ.. ಆದರೆ ಮತ್ತೆ ನನ್ನನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದೀಯ.. ಅರ್ಜುನ ಕಣ್ಣನ್ನು ಒರೆಸಿಕೊಂಡದ್ದು ಯಾಕೆ ಇದು ನನಗೆ ಅರ್ಥವಾಗ್ತಾ ಇಲ್ಲ"


"ಮಹಾರಾಜ.. ಅರ್ಜುನ ಯುದ್ಧ ಮಾಡುತ್ತಲೇ ಇದ್ದಾ... ಕೃಷ್ಣ ಒಮ್ಮೆ ಕುದುರೆಗಳಿಗೆ ಆಯಾಸವಾಗಿದೆ.. ಸ್ವಲ್ಪ ನೀರು ಕುಡಿಸಿ ಬೆನ್ನು ನೀವಿದರೆ ಕುದುರೆಗಳಿಗೆ  ಚೈತನ್ಯ ಬರುತ್ತದೆ ಎಂದಾಗ.. ಅರ್ಜುನ ಮರು ಮಾತಾಡದೆ ತನ್ನ ಗಾಂಡೀವಕ್ಕೆ ಅಂಬನ್ನು ಹೂಡಿ ಭುವಿಗೆ ಬಿಟ್ಟಾಗ.. ನೀರು ಜಿಲ್ ಎಂದು ಚಿಮ್ಮಿ ಬಂತು... ಕುದುರೆಗಳಿಗೆ ಯಥೇಚ್ಛವಾಗಿ ನೀರು ಕುಡಿಸಿ ಮೈದಡವಿದ ಶ್ರೀ ಕೃಷ್ಣ... ಅರ್ಜುನನಿಗೆ.. ಪಾರ್ಥ.. ನೀನು ಗಂಗಾ ಮಾತೆಗೆ ನಮಿಸಿ.. ಸ್ವಲ್ಪ ದಾಹ ಇಂಗಿಸಿಕೊ.. ಇದರ ಮದ್ಯೆ ನಾ ಒಂದು ಪುಟ್ಟ ಘಟನೆ ಹೇಳುತ್ತೇನೆ.. ಎಂದಾ"

"ಸರಿ ಮುಂದೆ ಹೇಳು ಸಂಜಯ"

"ಮಹಾರಾಜ.. ಶ್ರೀ ಕೃಷ್ಣ ಅರ್ಜುನನಿಗೆ.. ಕಿರೀಟಿ.. ನಾ ಉಪದೇಶಿಸಿದ ಗೀತೆ ಭಗವದ್ಗೀತೆ ಎಂದು ಹೆಸರಾಗಿದೆ.. ಅದೇ ಹೆಸರನ್ನು ಹೊತ್ತ ಶ್ರೀಮತಿ ಗೀತಾ ಮೇಡಂ ಅವರು ಹೇಳಿದ ಒಂದು ಮಾತು ನಿನಗೆ ಹೇಳುತ್ತೇನೆ.. ಗುರುಗಳು ಶಿಷ್ಯರನ್ನು ತಮ್ಮ ಮಕ್ಕಳ ಹಾಗೆ ನೋಡಿಕೊಂಡಾಗ .. ಶಿಷ್ಯರು ಗುರುಗಳನ್ನು ತಮ್ಮ ಹೃದಯದಲ್ಲಿ ಆರಾಧಿಸುತ್ತಾರೆ.. ಇದು ಕೊಡು ಕೊಳ್ಳು ಸಂಸ್ಕೃತಿ.. ಶ್ರೀಮತಿ ಗೀತಾ ಮೇಡಂ ಇಂದು ಆತಿಥ್ಯ ವಹಿಸಿದ್ದರೂ ಕೂಡ ಮುಖ್ಯ ವಾಹಿನಿಗೆ ಬರದೇ.. ಮೆಲ್ಲನೆ ಪರದೆಯ ಹಿಂದೆಯೇ ಸರಿದಿದ್ದರು.. ಊಟೋಪ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.. ಕಾರ್ಯಕ್ರಮದ ಅಂಚಿನಲ್ಲಿ ಅವರಾಡಿದ ಒಂದು ಮಾತು ಇಡೀ ಕಾರ್ಯಕ್ರಮದ ಸಾರ್ಥಕತೆಯನ್ನು ಸಾರುತ್ತಿತ್ತು.. ..ಅವರಾಡಿದ ಮಾತುಗಳನ್ನು ಹೇಳುತ್ತೇನೆ ಕೇಳು ಪಾರ್ಥ ಎಂದ ಪಾರ್ಥಸಾರಥಿ"
ಈ ಕಾರ್ಯಕ್ರಮಕ್ಕೆ ವರ್ಣ ತುಂಬಿದ
ಶ್ರೀಮತಿ ಗೀತಾ ಮೇಡಂ 
"ನನ್ನ ನೆಚ್ಚಿನ ಸಹೋದ್ಯೋಗಿಗಳೇ.. ನನ್ನ ವಿದ್ಯಾರ್ಥಿಗಳೇ.. ನನ್ನ ನೆಚ್ಚಿನ ವಿದ್ಯಾರ್ಥಿಗಳೇ.. ನನಗೆ ಒಬ್ಬನೇ ಮಗ ಎಂದುಕೊಂಡಿದ್ದೆ..  ನೀವೆಲ್ಲರೂ ನನ್ನ ಮಕ್ಕಳೇ.. ನೀವು ಬಂದದ್ದು ಖು... ಷಿ.. ಯಾ.. ಯಿ ... ತು... ಇಷ್ಟು ಹೇಳೋಕೆ ಅವರಿಗೆ ಆಗಲಿಲ್ಲ.. ಕಣ್ಣುಗಳು ತುಂಬಿಬಂದಿದ್ದವು.. ಕಣ್ಣೀರು ಒರೆಸಿಕೊಳ್ಳಲು ಪಕ್ಕಕ್ಕೆ ತಿರುಗಿದರು.. "


ಇದನ್ನು ಕೇಳಿದ ಪಾರ್ಥ.. ಹೌದು ಪರಮಾತ್ಮ.. ಗುರುಗಳನ್ನು ಗೌರವಿಸುವ ಶಿಷ್ಯರು.. ಶಿಷ್ಯರನ್ನು ಮಕ್ಕಳು ಎಂದು ಕೊಳ್ಳುವ ಗುರುಗಳು ಇರುವಾಗ.. ಗುರುಗಳಿಗೆ ಕೊಂಬು ಯಾವಾಗಲೂ ಇದ್ದೆ ಇರುತ್ತದೆ.. ಸಾರ್ಥಕ ಕ್ಷಣಗಳು ಇವು.. ಈ ಮಾತುಗಳನ್ನು ಕೇಳಿ ನನಗೂ ಆನಂದ ಭಾಷ್ಪ ಉಕ್ಕುತ್ತಿದೆ.. ಈಗ ಮೊರೆಯನ್ನು ತೊಳೆದುಕೊಂಡರೆ.. ಆ ಆನಂದ ಭಾಷ್ಪಗಳು ನೀರಲ್ಲಿ ಕರಗಿಹೋಗುತ್ತದೆ.. ಹಾಗೆ ಇರಲಿ.. ಸುಮ್ಮನೆ ಕೈಯಲ್ಲಿ ಒರೆಸಿಕೊಂಡು ನನ್ನ ವಸ್ತ್ರಕ್ಕೆ ಅಂಟಿಸಿಕೊಂಡು ಬಿಡುತ್ತೇನೆ.. ಇದು ನನಗೂ ಮಾದರಿಯಾಗಲಿ" ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡ..
ಸುಂದರ ಸಮಯಕ್ಕೆ ಕಾರಣಕರ್ತರು
"ಇದೆ ಕಾರಣ ಮಹಾರಾಜ ಅರ್ಜುನ ಕಣ್ಣು ಒರೆಸಿಕೊಂಡದ್ದು.. "

"ಸಂಜಯ.. ಅದು ಸರಿ.. ಈ ಕಾರ್ಯಕ್ರಮ ನೆಡೆದ ಮನೆಯ ಹೆಸರೇನು... ಹೇಳು.. "

ಈಗ ಕಣ್ಣನ್ನು ಒದ್ದೆ ಮಾಡಿಕೊಳ್ಳುವ ಸರದಿ ಸಂಜಯನದು.. "ಹೌದು ಮಹಾರಾಜಾ.. ಇದರ ಕಡೆಗೆ ಗಮನ ಹರಿದೇ ಇರಲಿಲ್ಲ.. ಸರಿಯಾಗಿದೆ.. ಆದರೆ ಒಂದು ಸಣ್ಣ ದೋಷವಿದೆ.. ಇದು ಆನಂದ ನಿಲಯ ಮಾತ್ರವಲ್ಲ.. "ಆನಂದ-ಭಾಷ್ಪ-ನಿಲಯ.. "
ಇದು ಆನಂದ ನಿಲಯ ಮಾತ್ರವಲ್ಲ.. ಆನಂದ ಭಾಷ್ಪ ನಿಲಯ

"ಸಂಜಯ.. ತುಂಬಾ ಖುಷಿಯಾಯಿತು.. ನಿನಗೆ ಕೋಟಿ ಕೋಟಿ ನಮಸ್ಕಾರ.. ಹಾಗೆಯೇ.. ಈ ಗುರು-ಶಿಷ್ಯ ಪರಂಪರೆ ಹೀಗೆಯೇ ಮುಂದುವರೆಯಲಿ.. ಸರಿ ನಾ ಸ್ವಲ್ಪ ಹೊತ್ತು ವಿಶ್ರಮಿಸುತ್ತೇನೆ.. ನಂತರ ಮತ್ತೆ ನೀ ಧರ್ಮಕ್ಷೇತ್ರ ಕುರುಕ್ಷೇತ್ರದ ಸಂಗತಿಗಳನ್ನು ಮುಂದುವರೆಸು"

"ಸರಿ ಮಹಾರಾಜಾ ಹಾಗೆಯೇ ಆಗಲಿ"

With Cameraman "TIME" .. narrated by Sanjaya from Kurukshetra for KALIYUGA TV"

*****

ನಿಜ ಗೆಳೆಯರೇ ಇಂದಿನ ಕಾರ್ಯಕ್ರಮ ಸುಂದರ ಸುಮಧುರ ಮಧುರ ಮಧುರ ಮಧುರ.. ಸದಾ  ನೆನಪಲ್ಲಿ ಉಳಿಯುವಂತೆ ಕಾರ್ಯಕ್ರಮ ಮೂಡಿಬಂದಿದ್ದು ಎಲ್ಲರಿಗೂ ಖುಷಿ ತಂದಿತು.. ಅದರ ಕೆಲವು ಮಧುರ ಕ್ಷಣಗಳು ಚಿತ್ರಗಳಾಗಿ ಮೂಡಿ ಬಂದಿವೆ..
ನೋಡಿ .. ಖುಷಿ ಪಡಿ.. ಆನಂದಿಸಿ.. ಮುಂದಿನ  ಪೀಳಿಗೆಗೆ ಕೊಂಡೊಯ್ಯಿರಿ..

ಶುಭವಾಗಲಿ.. ಮತ್ತೊಮ್ಮೆ ಸೇರುವ ತನಕ ತಾತ್ಕಾಲಿಕ ವಿರಾಮ ತೆಗೆದುಕೊಳ್ಳೋಣ.. ವಾಟ್ಸಾಪ್ ಗ್ರೂಪ್ ಇದ್ದೆ ಇದೆ.. ಮಾತಾಡಲಿಕ್ಕೆ ಹರಟೆ ಹೊಡೆಯಲಿಕ್ಕೆ ಮತ್ತು ಒಬ್ಬರ ಯಶಸ್ಸನ್ನು ಇನ್ನೊಬ್ಬರು ಗೌರವಿಸಿ ಸಂಭ್ರಮಿಸೋಕೆ.. !!!
ಒಂದು ಬ್ರೇಕ್ 

ಇಲ್ಲಿಗೆ ಶುಭವಾರ್ತ ಪ್ರಸಾರಕ್ಕೆ ಕಮರ್ಷಿಯಲ್ ಬ್ರೇಕ್.!!!!