Sunday, May 6, 2018

ಕಾಯಕವೇ ಕೈಲಾಸ .. DFR

ಗೆಳೆತನ ಮಾಡಿಕೊಂಡರೆ ಅದು ಉಸಿರಿರುವರೆಗೆ.. ಇಲ್ಲವೇ ಗೆಳೆತನದ ಉಸಿರು ತೆಗೆಯುವವರೆಗೆ ಎನ್ನುವ ಸಿದ್ಧಾಂತ ನನ್ನದು.. ಆದರೆ ಕೆಲವರು ಇರುತ್ತಾರೆ.. ಅವರ ಗೆಳೆತನದ ಹಸಿರಾದ ಗಿಡಕ್ಕೆ ಹೆಸರು, ಹಸಿರು, ಉಸಿರು ಯಾವುದು ಬೇಕಿಲ್ಲ.. ಇದೆ ಯೋಚನೆಯಲ್ಲಿ ರಾತ್ರಿ ಮಲಗಿದೆ.. ದ. ರಾ. .ಬೇಂದ್ರೆಯಜ್ಜನ ಕವನದಂತೆ ನಿದ್ದೆ ಮಾಡಿದರೆ ಮುಗೀತು.. ಮರುದಿನ ಬೆಳಿಗ್ಗೆಯೇ ಎಚ್ಚರ ನನಗೆ..

ಅಮೃತ ಘಳಿಗೆ .. ಸುವರ್ಣ ಸಮಯ.. ಚಿನ್ನದಂಥ ಕಾಲ ..ಹೀಗೆ ಅನೇಕ ರೀತಿಯಲ್ಲಿ ಹೇಳುವ ಬೆಳಗಿನ ಜಾವ ೩ ರಿಂದ ೫ರ ತನಕ ನನಗೆ ಬೀಳುವ ಕನಸುಗಳು. ... ಬರುವ ಯೋಚನೆಗಳು.. ಯೋಜನೆಗಳು ನೂರಕ್ಕೆ ೯೮ ಭಾಗ ನಿಜವಾಗುತ್ತದೆ.. ಉಳಿದ ಎರಡು ಭಾಗ.. ಬಿಡಿ ಅದರ ಬಗ್ಗೆ ಬೇಡ..

ಐರಾವತದ ಮೇಲೆ ಇಂದ್ರ ಬರುತ್ತಿದ್ದ.. ಪಕ್ಕದಲ್ಲಿ ಅಷ್ಟ ದಿಕ್ಪಾಲಕರು ತಮ್ಮ ತಮ್ಮ ವಾಹನಗಳಲ್ಲಿ ಬರುತ್ತಿದ್ದರು.. ಎಲ್ಲರ ಹಣೆಯ ಮೇಲೆ ಗೆರೆಗಳು.. ಹಾಗೂ ಎಲ್ಲರ  ಹಣೆಯ ಮೇಲೆ ಚಿಂತೆಯ ಮೋಡಗಳು.. ಇಂದ್ರನ ಐರಾವತ ತನ್ನ ಸೊಂಡಿಲನ್ನು ಅತ್ತಿತ್ತ ಬೀಸುತ್ತಾ.. ಕಾಮಧೇನುವಿಗೆ ಏನೋ ಸನ್ನೆ ಮಾಡುತ್ತಿತ್ತು.. ಕಾಮಧೇನು   ತಲೆಯಲ್ಲಾಡಿಸುತ್ತಿತ್ತು..

ಸಭೆಗೆ ಬಂದಾಗ.. ಸಪ್ತ ಋಷಿಗಳು ಎಲ್ಲರಿಗೂ ಆಶೀರ್ವಾದ ನೀಡಿದರು.. ಹಾಗೆ ನೋಡುತ್ತಾ.. ಎಲ್ಲರ ಹಣೆಯ ಮೇಲಿನ ಗೆರೆಗಳ ಮಧ್ಯೆ ಸಿಕ್ಕಿದ್ದ ಯೋಚನೆಗಳ ಸುಳಿವು ಸಿಕ್ಕಿತು.. ಇಂದ್ರನಿಗೆ ಕಣ್ಣಲ್ಲಿಯೇ ಸನ್ನೆ ಮಾಡಿ.. ತಮ್ಮ ತಮ್ಮ ಸ್ಥಾನದಲ್ಲಿ ಕೂರಲು ಹೇಳಿ ಎಂದರು..

ಇಂದ್ರ ಐರಾವತದಿಂದ ಇಳಿದು.. ಎಲ್ಲರೂ ತಮ್ಮ ತಮ್ಮ ಸ್ಥಾನದಲ್ಲಿ ವಿರಾಜಿಸಲು ಹೇಳಿದ..

ಎಲ್ಲರಿಗೂ ಮನದಲ್ಲಿಯೇ ತಳಮಳ. .ನಮ್ಮ ಸಮಸ್ಯೆಯನ್ನು ಕೇಳದೆ ಹೇಗೆ ಬಗೆ ಹರಿಸುತ್ತಾರೇ ಎಂದು..

ಹಿರಿಯರಾದ ದೇವರ್ಷಿ ವಸಿಷ್ಠರು "ನೋಡು ಇಂದ್ರ.. ನಿನ್ನ ಸಮಸ್ಯೆ ಅರ್ಥವಾಯಿತು.. ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳುತ್ತೇನೆ.. ಸದಾ ಚಟುವಟಿಕೆಯಲ್ಲಿ ನಿರತವಾಗಿರುತ್ತಾರೆ.. ಸಮಾಜಮುಖಿಯಾಗಿ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ.. ಅನೇಕ .. ಏ ಎಂಥ ಮಾತು.. ಅನೇಕ ಅಲ್ಲವೇ ಅಲ್ಲ ನೂರಾರು ಸ್ನೇಹಿತರಿಗೆ ಮಾದರಿಯಾಗಿ.. ಹತ್ತಾರು ತಂಗಿಯರಿಗೆ ಅಕ್ಕನಾಗಿ.. ಹತ್ತಾರು ತಮ್ಮಂದಿರಿಗೆ ಅಕ್ಕನಾಗಿ.. ಹಲವರಿಗೆ ದೇವರು ಕಳಿಸಿದ ಸ್ನೇಹಿತೆಯಾಗಿ ನಿಂತಿದ್ದರೂ.. ಅಹಂ ಅನ್ನುವ ಪದವೇ ಅವರ ವಿಳಾಸ ಸಿಗದೇ.. ಮೈಸೂರು ರಸ್ತೆಯಲ್ಲಿ ಎಲ್ಲೊ ಕಳೆದುಹೋಗಿದೆ.. ಅವರನ್ನು ಸುಮ್ಮನೆ ಹತ್ತು ನಿಮಿಷ ಏನೂ ಕೆಲಸ ಮಾಡದೆ ಕೂರಿಸಿಬಿಟ್ಟರೆ.. ಚತುರ್ಮುಖ ಬ್ರಹ್ಮ ಗಾಬರಿಯಾಗುತ್ತಾನೆ.. ತನ್ನ ಸೃಷ್ಟಿಯಲ್ಲಿ ಏನೋ ತೊಂದರೆಯಾಗಿದೆ ಅನಿಸುತ್ತದೆ..   ಕೈಲಾಸವಾಸಿ ಮಹಾದೇವ.. ಆ  ಮಂಜಿನ ಗಿರಿಯಲ್ಲಿದ್ದರೂ ಸಣ್ಣಗೆ ಬೆವರುತ್ತಾನೆ .. ಕ್ಷೀರಸಾಗರದಿ ಸದಾ ಶಾಂತವಾಗಿರುವ ಶ್ರೀಮನ್ ಮಹಾವಿಷ್ಣು.. ಕೊಂಚ ವಿಚಲಿತನಾಗುತ್ತಾನೆ.. ಅವರ  ಮಂತ್ರ ಒಂದೇ.. "ಜಗಕೆ ಮುಕ್ಕೋಟಿ ದೇವರಿದ್ದರೂ ನೀ ನನ್ನ ದೇವರು" ಎನ್ನುತ್ತಾ ತಾಯಿಯನ್ನೇ ದೇವರು ಎನ್ನುತ್ತಾ.. ತಾಯಿ ಸುಖದ ಮುಂದೆ ಮಿಕ್ಕಿದ್ದೆಲ್ಲ ತೃಣ ಸಮಾನ ಎನ್ನುವ ಇವರ ಗೆಳೆಯರ ಬಳಗ ನೋಡಿದರೆ.. ಕೇಳಿದರೆ.. ಅಬ್ಬಬ್ಬಾ ಎನ್ನಿಸುತ್ತದೆ.. "

ಸ್ವಲ್ಪ ಸುಧಾರಿಸಿಕೊಂಡು.. ಕಮಂಡಲದಲ್ಲಿದ ತೀರ್ಥವನ್ನು ಕೊಂಚ ಕುಡಿದು.. "ನೋಡಪ್ಪಾ ಇಂದ್ರ.. ಇವರಿಗೆ ಕಾಫೀ ಬಲು ಪ್ರಿಯ.. ಸೆಲ್ಫಿ ಚಿತ್ರಗಳು ಕಡಿಮೆ ಆದರೆ ಇವರ ಗೆಳೆಯರ ಬಳಗ ತೆಗೆಯುವ ಚಿತ್ರಗಳು ಒಂದು ವ್ಯಕ್ತಿತ್ವವನ್ನು ಹೊರಹೊಮ್ಮಿಸುತ್ತದೆ... ಇವರ ಚಿತ್ರಗಳಿಗೆ ನೂರಾರು ಪ್ರತಿಕ್ರಿಯೆ ಬರುತ್ತದೆ.. ಎಲ್ಲವನ್ನು ಸಮಾಧಾನ ಚಿತ್ತದಿ ಸ್ವೀಕರಿಸಿ ಉತ್ತರಿಸಿ.. ಮತ್ತೆ ಭೂರಮೆಯ ಹಸಿರಿನ ಐಸಿರಿಯನ್ನು ತಮ್ಮ ಖಾತೆಗೆ ಲಗತ್ತಿಸಿ.. ಭೂತಾಯಿಗೆ ನಮಿಸುತ್ತಾರೆ..
ಭಕ್ತರು ದೇವರನ್ನು ಕುರಿತು ತಪಸ್ಸು ಮಾಡಿ.. ದೇವರು ಪ್ರತ್ಯಕ್ಷವಾದಾಗ.. ದೇವರು ಹೇಳುತ್ತಾರೆ ..ಅಮೃತ ಘಳಿಗೆಯಲ್ಲಿಯೇ ಉತ್ತರಿಸಬೇಕು.. ಹಾಗಾಗಿ.. ಇವರ ಅನೇಕ ಸ್ನೇಹಿತರು.. ಕ್ಷಣಗಳ ಲೆಕ್ಕದಲ್ಲಿ ಮಾತಾಡುತ್ತಾರೆ.. ಮತ್ತೆ ಇವರ ಹೆಗಲ ಮೇಲೆ ಯಾವಾಗಲೂ ಒಂದು ಭಾರವಿದ್ದೇ ಇರುತ್ತದೆ.. "

ತಕ್ಷಣ ಎಲ್ಲರೂ ಒಮ್ಮೆಲೇ.. "ಮಹರ್ಷಿಗಳೇ.. ಹೆಗಲ ಮೇಲೆ ಭಾರವೇ.. ?"

"ಹೌದಪ್ಪ.. ಭಾರವೇ.. ಇವರು ಎಲ್ಲರ ಬಳಿ ಮಾತಾಡಬೇಕು ..ಎಲ್ಲರಿಗೂ ಸಮಯ ಕೊಡಬೇಕು.. ಎಲ್ಲಾ ಸಮಯದಲ್ಲಿಯೂ ಸಿಗಬೇಕು ಎನ್ನುವ  ಪ್ರೀತಿಯ ಒತ್ತಡ.. ಆದರೆ.. ಇವರು ಇದನ್ನು ಒತ್ತಡ ಅಂದುಕೊಳ್ಳದೆ.. ಅದನ್ನು ಒಂದು ಕಾರ್ಯ ಎನ್ನುತ್ತಾ.. ಎಲ್ಲರಿಗೂ ಇವರು ಸಮಯ ಕೊಡುವುದನ್ನು ಕಂಡು.. ಅಷ್ಟ ದಿಕ್ಪಾಲಕರೇ ಹಲವು ಬಾರಿ ಗಾಬರಿಗೊಂಡಿದ್ದಾರೆ.. .. ಆದರೆ ಆದರೆ..ಬ್ರಹ್ಮ ದೇವನು.. ಮಹಾದೇವನು.. ಮಹಾವಿಷ್ಣುವೂ ತನ್ನ ಭಕ್ತರನ್ನು ಪೊರೆವಂತೆ.. ಇವರು ತಮ್ಮ ಸ್ನೇಹವಲಯದಲ್ಲಿ ಎಲ್ಲರಿಗೂ ಇಷ್ಟವಾಗುವ ಹಾಗೆ ಇರುತ್ತಾರೆ.. "

ದೇವರ್ಷಿ ವಸಿಷ್ಠರು.. ಇಷ್ಟು ಹೇಳಿ ಇನ್ನೊಮ್ಮೆ ತೀರ್ಥ ಸೇವಿಸಿ.. ಆಸೀನರಾದರು..

ಎಲ್ಲರ ಹಣೆಯ ಮೇಲೆ ಇದ್ದ ಸುಕ್ಕುಗಳು ರವಿಯ ಕಿರಣಗಳಿಗೆ ಮಾಯವಾಗುವ ಮಂಜಿನ ಹನಿಯಂತೆ ಮಾಯವಾಯಿತು..

ಐರಾವತ ಮತ್ತು ಕಾಮಧೇನು ಸಭೆಯ ಮಧ್ಯಕ್ಕೆ ಬಂದು ನಿಂತವು..

ಇಂದ್ರನಿಗೆ ಅರ್ಥವಾಯಿತು... ದೇವರ್ಷಿ ವಸಿಷ್ಠರು ಕಣ್ಣಿನ ಸನ್ನೆಯಲ್ಲಿ ಹೇಳು ಎಂದು ಸೂಚನೆ ಕೊಟ್ಟರು..

ಐರಾವತ "ಇವರ ಹೆಸರು ಶ್ರೀ ಕರೆಯುವಂತೆ DFR .. ನನ್ನಷ್ಟೇ ನೆನಪಿನ ಶಕ್ತಿ ಹೆಚ್ಚು ಮತ್ತೆ ನನ್ನ ಹಾಗೆ ನೆಡೆದದ್ದೇ ಹಾದಿ.. ಎಲ್ಲರೂ ತುಳಿಯುವ ಹಾದಿಯನ್ನು ಇವರು ತುಳಿಯುವುದಿಲ್ಲ.. ಹಾಗಾಗಿ ನನಗೆ ಇವರೆಂದರೆ ಅತಿ ಗೌರವ"


ಬಿಳಿಮುಗಿಲಿನಂತೆ ಶ್ವೇತ ವರ್ಣಕ್ಕೆ ಇನ್ನೊಂದು ಹೆಸರಾಗಿದ್ದ ಕಾಮಧೇನು  "ನಾ ಕೇಳಿದ್ದನ್ನು ಕೊಡುವ ಕಾಮಧೇನು ಅನ್ನುತ್ತಾರೆ.. ಇವರೂ ಕೂಡ ಹಾಗೆ.. ಇವರ ಹತ್ತಿರ  ಇಲ್ಲ ಎನ್ನುವ ಮಾತೆ ಇರೋಲ್ಲಾ.. ಅದಕ್ಕೆ ಇವರನ್ನು ಕಂಡರೆ ನನ್ನನ್ನೇ ಕಂಡಂತೆ ಆಗುತ್ತದೆ.. "

ಇಂದ್ರ ಎದ್ದು ನಿಂತು.. "ಮಹಾಜನತೆಗಳೇ.. .. ನಮಗೆಲ್ಲಾ ತವಕ ಇದ್ದಿದ್ದು.. ಇಷ್ಟೆಲ್ಲಾ ಹೆಸರು ಗಳಿಸಿಯೂ ಕೂಡ ಅಹಂ ತಲೆಗೇರಿಲ್ಲ ಮತ್ತು ಎಲ್ಲರ ಮನಸ್ಸಿಗೂ ಹತ್ತಿರವಾಗಿರುವ ಇವರ ಬಗ್ಗೆ ಭುವಿಯಲ್ಲಿ ಹರಡಿರುವ ಖ್ಯಾತಿಯ ವಿಚಾರ ನಮಗೆ ತಿಳಿದುಬಂದಿದ್ದರಿಂದ ಇವರ ಬಗ್ಗೆ ತಿಳಿಯಬೇಕು ಎನ್ನುವ ನಮ್ಮ ಪ್ರಶ್ನೆಗಳಿಗೆ ಗುರುಗಳಾದ ದೇವರ್ಷಿ ವಸಿಷ್ಠರು ಪರಿಪೂರ್ಣ ಮಾಹಿತಿ ನೀಡಿದ್ದಾರೆ.. ಹಾಗಾಗಿ ಅವರಿಗೆ ವಂದನೆಗಳು.. ಜೊತೆಯಲ್ಲಿ ಇಂದು  DFR ಅವರ ಜನುಮದಿನ.. ಈ ಲೇಖನ ನೋಡಿದ ಮೇಲೆ ಅವರು ಈ ಕೆಳಗಿನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ

೧) ನನ್ನ ದಿನದಲ್ಲಿ ಅಳಿಸುವ ನಿಮಗೆ  ಏನು ಹೇಳಲಿ
೨) ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದಗಳು
೩) ನನ್ನ ಜನುಮ ಸಾರ್ಥಕ ಎನ್ನುವಂತಹ ಭಾವ ನನಗೆ
೪) ಎಲ್ಲರಿಗೂ ಧನ್ಯವಾದಗಳು

ಇಷ್ಟು ಹೇಳಿ ಸುಮ್ಮನಾಗುತ್ತಾರೆ.. ಮತ್ತೆ ಕಣ್ಣಂಚಿನಲ್ಲಿ ಧುಮುಕುವ ಜೋಗದ ಹಿನ್ನೀರಿಗೆ ಆಣೆಕಟ್ಟು ಕಟ್ಟಿ ಧನ್ಯತಾ ಭಾವದಿಂದ ಕೈಮುಗಿದು ಹೇಳುತ್ತಾರೆ

"ಎಂದರೋ ಮಹಾನುಭಾವುಲು ಅಂದರೇಕಿ ವಂದನಮು"