Wednesday, September 17, 2025

ಮಗು ಅತ್ತಾಗ ಅಮ್ಮಾ ನಗೋದು!!!! - ದಶಕದ ಸಂತಸದ ನಿರ್ಧಾರ

 Kantha-The Magnet of Friendship: ಮಗು ಅತ್ತಾಗ ಅಮ್ಮಾ ನಗೋದು!!!! ಮೊದಲ ಭಾಗ 


 ವೈಕುಂಠದಲ್ಲಿ ಜಯ-ವಿಜಯರು ವಿಷ್ಣುವಿನ ಮುಂದೆ ನಿಂತು.. "ಮಹಾ ಪ್ರಭು ಕೃಪೆ ಮಾಡು.. ಮಹಾತ್ಮರ ಆಗ್ರಹಕ್ಕೆ ಗುರಿಯಾಗಿದ್ದೇವೆ.. ರಕ್ಷಿಸು ರಕ್ಷಿಸು" ಎಂದಾಗ ಎಲ್ಲವನ್ನು ಅರಿತಿದ್ದ ನಾರಾಯಣ "ಭೂಲೋಕದಲ್ಲಿ ಶತ್ರುಗಳಾಗಿ ಮೂರು ಜನ್ಮಗಳನ್ನು ಎತ್ತಿ ನನ್ನ ಸನ್ನಿಧಿಗೆ ಬರುತ್ತೀರೋ.. ಮಿತ್ರರಾಗಿ ಏಳು ಜನ್ಮಗಳನ್ನು ಎತ್ತಿ ನನ್ನ ಬಳಿ ಬರುತ್ತೀರೋ" ಎಂದಾಗ ಶತ್ರುಗಳಾದರೂ ಚಿಂತೆಯಿಲ್ಲ .. ನಿನ್ನ ಹೆಚ್ಚು ಕಾಲ ಬಿಟ್ಟಿರಲಾರೆವು ಪ್ರಭು.. ಶತ್ರುಗಳಾದರೂ ಚಿಂತೆಯಿಲ್ಲ.. ಮೂರು ಜನ್ಮದ ಕಳೆದು ನಿನ್ನ ಬಳಿಗೆ ಬರುತ್ತೇವೆ"

ಇದೆ ದೃಶ್ಯವನ್ನು ಕೊಂಚ ಮಾರ್ಪಡಿಸಿ ನನ್ನ ನನ್ನ ಅದ್ಭುತ ಗೆಳೆಯ ಬ್ರಹ್ಮನ ಬದುಕಿಗೆ ಹೋಲಿಸಿ ಸಮುದ್ರ ಮಂಥನದಲ್ಲ್ಕಿ ಉದ್ಭವಿಸಿದ ವೈದ್ಯ ಧನ್ವಂತರಿ ದೇವರು ಕೇಳುತ್ತಾರೆ "ಪ್ರಿಯ ಬ್ರಹ್ಮಾನಂದ ನಿನ್ನ ತಾಯಿಗೆ ಡಯಾಲಿಸಿಸ್ ಮಾಡಿಸುತ್ತಾ ನಾಲ್ಕೈದು ವರ್ಷ ನೋವಿನಲ್ಲಿ ಕಳೆಯುವ ಹಾಗೆ ಮಾಡಬಹುದಾ.. ಅಥವ ನಿನ್ನದೇ ಉಪಯುಕ್ತ ಅಂಗವನ್ನು ನಿನ್ನ ತಾಯಿಗೆ ನೀಡಿ.. ತಾಯಿಗೆ ಮರು ಜನ್ಮ ನೀಡಿ ಬಹುಕಾಲ ಸುಖ ಸಂತೋಷದಿಂದ ಬಾಳುವಂತೆ ಮಾಡಬಹುದಾ"

ಬ್ರಹ್ಮನಿಗೆ ಇದೆ ಪ್ರಶ್ನೆಯನ್ನು  ಕೊಯಮತ್ತೂರಿನ ವೈದ್ಯ ಶ್ರೀ ವಿವೇಕ್ ಪಾಟಕ್ ಅವರು ಕೇಳಿದ್ದರು.. ಆ ಅದ್ಭುತ ಘಟನೆ ನೆಡೆದು.. ಹತ್ತು ವರ್ಷಗಳಾಯ್ತು.. ಜೀವ ನೀಡಿದ ತಾಯಿಗೆ ಜೀವ ನೀಡುವ ಅವಕಾಶ ಎಲ್ಲಾ ಮಕ್ಕಳಿಗೂ ಸಿಗೋಲ್ಲ.. ಆದರೆ ಈ ರೀತಿಯ ಯಾತನಾಮಯ ಕ್ಷಣಗಳು ಯಾವ ತಾಯಿಗೂ ಯಾರಿಗೂ ಬಾರದಿರಲಿ ಎಂದು ಆಶಿಸುತ್ತಾ.. ಈ ಘಟನೆಯನ್ನು ಹೆಮ್ಮೆಯಿಂದ, ಖುಷಿಯಿಂದ ಹೇಳುತ್ತೇನೆ. 

ಇಂದು ಆಫೀಸಿನಲ್ಲಿ ನನ್ನ ಆತ್ಮೀಯ ಸಹೋದ್ಯೋಗಿ, ಮಾರ್ಗದರ್ಶಕ ಶ್ರೀಧರ್ ಜೊತೆ ಮಾತಾಡುತ್ತಿದ್ದಾಗ "ಶ್ರೀ ನಾನು ಬದುಕಿನಲ್ಲಿ ಸವಾಲುಗಳನ್ನು ಸ್ವೀಕರಿಸಲು ಸದಾ ಸಿದ್ಧನಿರುತ್ತೇನೆ.. ಪರಿಹಾರ ಇಲ್ಲದ.. ಪರಿಹಾರ ಸಿಗದ.. ಅಥವ ಪರಿಹಾರ ಸಿಗಲು ಕಷ್ಟಸಾಧ್ಯವಾದ ಸವಾಲುಗಳನ್ನು ಎದುರಿಸಲು ಸದಾ ನನ್ನ ಸೇರಿಸಿಕೊಳ್ಳಿ ಅಂತ ಎಲ್ಲರನ್ನೂ ಕೇಳಿಕೊಳ್ಳುತ್ತಿರುತ್ತೇನೆ.. "

ಪರಿಣಾಮಕಾರಿ ಮಾತುಗಳು.. 

ಹೌದು.. ದಾರಿ ಆರಾಮಿದ್ದಾಗ ಪಯಣಿಸೋದು ಸುಲಭ.. ಘಟ್ಟದ ರಸ್ತೆಗಳು.. ಏರುಪೇರಿನ ಹಾದಿ.. ಬಳಸುವ ಹಾದಿ.. ಇಂತಹ ರಸ್ತೆ ನಮ್ಮನ್ನು ಉತ್ತಮ ಚಾಲಕರನ್ನಾಗಿ ಮಾಡುತ್ತದೆ.. 

ವರ್ತಮಾನವೇ ಭೂತಕಾಲ ಎನ್ನುವ ಮಾತನ್ನು ಹೇಳಿದರು.. ನಿಜ ಭೂತಕಾಲದ ವರ್ತಮಾನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ವರ್ತಮಾನವನ್ನು ಸುಂದರವನ್ನಾಗಿ ಮೂಡಿಸುತ್ತದೆ.. 

ಹತ್ತು ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರ ತನ್ನ ತಾಯಿದೇವರನ್ನು ಆರೋಗ್ಯವಂತರನ್ನಾಗಿ ಮಾಡಿಸಿದ್ದಷ್ಟೇ ಅಲ್ಲದೆ.. ನೋವು ಮುಕ್ತ ಬದುಕನ್ನು ಸಂಭ್ರಮಿಸುತ್ತ ಇರುವುದು ಅತ್ಯಂತ ಸಂತಸಕರ ವಿಷಯ ಅಲ್ಲವೇ.. 

ತಾಯಿಯನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತ ಅನುಕ್ಷಣವೂ ಅಮ್ಮನ ಬೇಕು ಬೇಡಗಳನ್ನು ಗಮನಿಸುತ್ತಾ.. ದೇವಾಲಯದಲ್ಲಿ ದೇವರ ಅರ್ಚನೆ ಮಾಡುವಂತೆ ತಾಯಿಯನ್ನು ಜಪಿಸುತ್ತಾ ತನ್ನ ಆರೋಗ್ಯವನ್ನು ಬದಿಗೆ ಇತ್ತು ತಾಯಿದೇವರನ್ನು ಅಂಗೈಯಲ್ಲಿ ಇಟ್ಟುಕೊಂಡು ಬದುಕು ಸಾಗಿಸುತ್ತಿರುವ ಬ್ರಹ್ಮನಿಗೆ ಒಂದು ಅಭಿನಂದನೆ ಹೇಳೋಣ ಅಲ್ಲವೇ.. 

ಹಾಗೆಯೇ ಇಂತಹ ಮಗುವನ್ನು ಹೆತ್ತು.. ತನ್ನ ಬದುಕಿಗೆ ಸಾರ್ಥಕತೆ ಕಂಡುಕೊಂಡು ಐವತ್ತೆರಡು ವರ್ಷಗಳ ಹಿಂದೆ ಸಂತಸ ಅನುಭವಿಸಿದ್ದು.. ಅದೇ ಮಗು ಬೆಳೆದು ತನ್ನ ಬದುಕಿಗೆ ಊರುಗೋಲಾಗಿ ನಿಂತು ತನ್ನ ಬದುಕಿಗೆ ಮತ್ತೆ ವಸಂತವನ್ನು ಮರಳಿ ಕೊಟ್ಟ ಮಗನನ್ನು ಕಂಡು ಮತ್ತೆ ತನ್ನ ಬದುಕಿಗೆ ಸಾರ್ಥಕತೆ ಅನುಭವಿಸುತ್ತಿರುವ ತಾಯಿ ದೇವರಿಗೆ ಆರೋಗ್ಯ ಪೂರ್ಣ ಬದುಕಿಗೆ ಶುಭಾಶಯಗಳನ್ನು ಹೇಳೋಣ ಹಾರೈಸೋಣ .. ಬರ್ತೀರಾ ಅಲ್ವೇ!



No comments:

Post a Comment