Sunday, August 4, 2013

ಗೆಳೆತನದ ಅಯಸ್ಕಾಂತ!

ಬೆಳಿಗ್ಗೆ ಎದ್ದೆ.. ದೂರದರ್ಶನ ನೋಡೋಕೆ ಬೇಸರವಾಯ್ತು.. ನನ್ನ ಮೆಚ್ಚಿನ ರೇಡಿಯೋ ಹಾಕಿದೆ 

ಟೈಗರ್ ಪ್ರಭಾಕರ್ ಪ್ರೀತಿ ವಾತ್ಸಲ್ಯ ಚಿತ್ರದಲ್ಲಿ  "ಸ್ನೇಹಿತರೆ ನಿಮಗೆ ಸ್ವಾಗತ.. ನನ್ನದೆಯ ಪ್ರೀತಿ ಸ್ವಾಗತ ಎಂದೆಂದೂ ನೆನಪಿರಲಿ ಈ ಸುದಿನ" ಹಾಡು ಬಿತ್ತರಗೊಳ್ಳುತ್ತಿತ್ತು. 

ಕಣ್ಣುಜ್ಜಿ "ಕರಾಗ್ರೆ..... "  ಹೇಳಿಕೊಂಡು ಎದ್ದೆ.. .. 

ಪಕ್ಕದಲ್ಲಿ ನನ್ನ ಸ್ನೇಹಿತೆ (ಮಗಳು) "ಅಪ್ಪ ಫ್ರೆಂಡ್ ಶಿಪ್ ಡೇ"  ಹೇಳಿದ್ಲು!

ರೇಡಿಯೋ ಹಾಡು ಬದಲಾಯಿತು " ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಕೆನ್ನೆಗೆ ಗಲ್ಲಕೆ ಮತ್ತೊಂದು ಕಂದ ಕೊಡುವೆಯ"

ಆಹಾ ಸ್ನೇಹಕ್ಕೆ ವಯಸ್ಸು ಇಲ್ಲ .. ಆದ್ರೆ ಆಯಸ್ಸು ಜಾಸ್ತಿ.. !

ಮುಖ ಪುಸ್ತಕಕ್ಕೆ ಭೇಟಿ ನೀಡೋಣ ಅಂತ ಕಂಪ್ಯೂಟರ್ ಹೊಕ್ಕೆ... ಆಗಲೇ ನೂರಾರು ಸಂದೇಶಗಳು ಕಿಟಕಿಯ ಆಚೆ ಧುಮುಕುತಿತ್ತು. ನನ್ನ  ಎರಡನೇ ಮಗಳಿಂದ ಮೊಬೈಲ್ ಗೆ ಸಂದೇಶ ಕೂಡ ಬಂದಿತ್ತು. 

ಸ್ನೇಹಕ್ಕೆ ಹಾತೊರೆಯುವ ನನ್ನ ಮನಸ್ಸು, ಒಂದು ಬ್ಲಾಗ್ ಲೋಕವನ್ನು ತೆರೆದಿಡಬೇಕು ಎನ್ನುವ ಆಸೆ ಬಂದದ್ದು ಸರಿ ಸುಮಾರು ಮೂರು ವರ್ಷಗಳ ಹಿಂದೆ. 

ಸ್ನೇಹದ ಅಮಲು ಶುರುವಾಗಿದ್ದು ಸುಮಾರು ನಾನು ಆರೇಳು ವರ್ಷದ ಹುಡುಗನಾಗಿದ್ದಾಗ.. ಶಿವಮೊಗ್ಗದಲ್ಲಿ ತುಮಕೂರು ಶ್ಯಾಮರಾವ್ ಬೀದಿಯಲ್ಲಿ ಇದ್ದ ನಮ್ಮ ಮನೆಯ ಪಕ್ಕದಲ್ಲಿ ರವೀಶ್ ಎಂಬ ಹುಡುಗನಿದ್ದ.. ಇಬ್ಬರು ಸ್ನೇಹಿತರಾಗಿದ್ದೆವು. ಬಾಲ ಮಂಗನ ಬುದ್ದಿ ಆಟದಲ್ಲಿ ಕಾರಣವಿಲ್ಲದೆ ಜಗಳವಾಡಿ ಮಾತು ಬಿಟ್ಟಿದ್ದೆವು. ಯಾಕೋ ಆ ಹುಡುಗ ತುಂಬಾ ಕಾಡುತಿದ್ದ. ಅಕ್ಕ ಪಕ್ಕದ ಮನೆಯಲ್ಲಿದ್ದರೂ ಕೆಲವು ವಾರಗಳು ಒಬ್ಬರ ಮುಖ ಇನ್ನೊಬ್ಬರು ನೋಡುತ್ತಿರಲಿಲ್ಲ. 

ಹೀಗೆ ಒಂದು ಭಾನುವಾರ.. ಅಂಗಳದಲ್ಲಿ ಆಟವಾಡುತ್ತಿದ್ದ.. ಸುಮ್ಮನೆ ನಾ ಅವನ ಮುಖ ನೋಡಿದೆ "ಹಾವಿನ ಹೆಡೆ ಚಿತ್ರಕ್ಕೆ ಹೋಗೋಣ ಕಣೋ" ಎಂದೇ.. ಅವನು ಆಕಾಶ  ಭೂಮಿ ನೋಡಿದ.. ಯಾರು ಮಾತಾಡಿದ್ದು ಅಂತ.. ನಾ ಮತ್ತೆ ಮಂಗನ ಹಾಗೆ ಹಲ್ಲು ಕಿರಿಯುತ್ತಾ "ಹೋಗೋಣ ಕಣೋ" ಅಂತ ಹೇಳಿದೆ 

ಅವನಿಗೂ ಏನು ಅನ್ನಿಸಿತೋ "ಸರಿ" ಅಂದ.. 

ಇಬ್ಬರೂ ಮನೆಯಿಂದ ಹಣ ಪಡೆದು "ಹಾವಿನ ಹೆಡೆ" ಸಿನೆಮಾಕೆ ಹೋದೆವು. (ಬಹುಶಃ ಅಣ್ಣಾವ್ರ ಚಿತ್ರಗಳ ಅಭಿಮಾನ ಶುರುವಾಗಿದ್ದು ಅಲ್ಲಿಂದಲೇ ಇರಬೇಕು). 

ನಂತರ ಶಿವಮೊಗ್ಗ ಬಿಟ್ಟು ಬೆಂಗಳೂರಿಗೆ  ಬರುವ ತನಕ ಸ್ನೇಹಿತರಾಗಿದ್ದೆವು.. ನಂತರ ಅವನೆಲ್ಲೋ ನಾನೆಲ್ಲೋ ಆದರೂ ಆ ಸ್ನೇಹದ ಸಂಕೋಲೆ ಇನ್ನೂ ನನ್ನ ಕಾಡುತ್ತದೆ... ಅದರ ನಂತರ ಅಸಂಖ್ಯಾತ ಗೆಳೆಯರು ಗೆಳತಿಯರು ಸಿಕ್ಕರೂ ಆ ಸ್ನೇಹದ ಸರಮಾಲೆಗೆ ಆ ರವೀಶನೇ ಮೊದಲ ಮಣಿ. ತುಂಬಾ ಒಳ್ಳೆಯ ಹಾಡುಗಾರನಾಗಿದ್ದ ಹಾಗೆಯೇ "ಶರಣೆಂಬೆನಾ ಶಶಿ ಶೇಖರ" ಹಾಡಿಗೆ ಉತ್ತಮ ನೃತ್ಯ ಕೂಡ ಮಾಡುತ್ತಿದ್ದ  

ಹೀಗೆ ಕಾಡುವ, ಪೀಡಿಸುವ ಸ್ನೇಹಲೋಕದ ಗಮ್ಮತ್ತು  ಎಪ್ಪತ್ತರ ದಶಕದ ಅಂತ್ಯದಲ್ಲಿ ಶುರುವಾಗಿದ್ದು ಬೆಳೆಯುತ್ತ ಹೋಯಿತು. 
ಎಂಭತ್ತರ ಆದಿಯಲ್ಲಿ ಪ್ರೌಡ ಶಾಲೆಯಲ್ಲಿ ಸಿಕ್ಕ ಗೆಳೆಯರು ಆಜೀವ ಗೆಳೆಯರಾಗಿಬಿಟ್ಟರು. "Great BOD's" ಅಂತಾನೆ ನಾಮಕರಣಗೊಂಡ ಆ ಗುಂಪಿನಲ್ಲಿ ನಾವು ಒಂದಾಗಿ ಬಾಳಲು ಶುರುಮಾಡಿದ್ದು ೨೯ ವರ್ಷಗಳಿಂದ. 

ಇದರ ಜೊತೆಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಿಕ್ಕ ಅನೇಕ ಉತ್ತಮ ಸ್ನೇಹಿತರು ಇನ್ನು ನನ್ನ ವರ್ತುಲದಲ್ಲಿಯೆ ಇದ್ದಾರೆ.. ಬರವಣಿಗೆ ಲೋಕಕ್ಕೆ ಇಳಿದಮೇಲೆ ಸಿಕ್ಕ ನಕ್ಷತ್ರಗಳು ಅಪಾರ. ಎಲ್ಲ ತಾರೆಗಳು ನಿಜಕ್ಕೂ ಮಿನುಗುವ ತಾರೆಗಳೇ ಅಂಥಹ ಪ್ರಚಂಡ ಪ್ರತಿಭಾ ನಕ್ಷತ್ರಗಳ ಮಧ್ಯೆ ನನ್ನ ಉಪಸ್ಥಿತಿಯು ಇರುವುದು ನನ್ನ ಭಾಗ್ಯ ಎನ್ನಬಹುದು. 

ಪ್ರವಾಸ, ಸಂಚಾರ ಕಾಡು ಮೇಡು ಅಲೆಯುವ ನನ್ನ ಹುಚ್ಚಾಟಕ್ಕೆ ಜೊತೆಯಾಗಿದ್ದು "ಅಲೆಮಾರಿಗಳು" ತಂಡದ ಸದಸ್ಯರು. 

ಜೊತೆಯಲ್ಲಿ ನನ್ನ ಬಾಳಿಗೆ ಬೆಳಕಾಗಿ ಬಂದ ಪ್ರಾಣ ಗೆಳತಿ, ನನ್ನ ಮಗಳು, ನನ್ನ ಬೈಕ್, ನನ್ನ ಕಾರು, ನನ್ನ ಕ್ಯಾಮೆರಾ ಎಲ್ಲವು ನನ್ನ ಸ್ನೇಹ ವರ್ತುಲದಲ್ಲಿ ಸುತ್ತುತ್ತಲೇ ಇವೆ. ಗೆಳೆಯರ ಹಾಗೆಯೇ ಮಾತುಡುವ ಅಪ್ಪ,ಅಮ್ಮ, ನನ್ನ ಅಣ್ಣ, ತಮ್ಮ, ಅತ್ತಿಗೆ ಎಲ್ಲರೂ ಸೇರಿ ಒಂದು ದೊಡ್ಡ ಸ್ನೇಹಲೋಕವೇ ಸೃಷ್ಟಿಯಾಗಿದೆ. 

ನನ್ನ ಎಲ್ಲಾ ಸ್ನೇಹಿತ(ತೆಯ)ರಿಗೂ ಸ್ನೇಹದ ಅಮೃತ ಸಿಂಚನ ಹಂಚುತ್ತಿರುವ ಜೀವ ಗೆಳೆಯರಿಗೆಲ್ಲಾ ಸ್ನೇಹದ ದಿನ ಶುಭಾಶಯಗಳು.. ಸ್ನೇಹದ ಗಿಡ ಬೆಳೆಯಲು ಕ್ಷಣ, ಘಂಟೆ, ದಿನಗಳು ಬೇಕಿಲ್ಲ.. ಆ ಸಸಿಗೆ ಬೇಕಿರುವುದು ಒಂದು ಹೂ ನಗೆ. ಆ ನಗೆ ನಮ್ಮೆಲ್ಲರ ಬಾಳಿನಲ್ಲೂ ಇರಲಿ...  ಅರಳಲಿ...  ಸುಗಂಧ ಬೀರಲಿ ಎಂದು ಆಶಿಸುವ 
ನಿಮ್ಮೆಲ್ಲರ ಕಾಂತ - ಗೆಳೆತನದ ಅಯಸ್ಕಾಂತ!!!