Monday, September 15, 2014

ಮಗು ಅತ್ತಾಗ ಅಮ್ಮಾ ನಗೋದು!!!!

ಎಲ್ಲೋ ಓದಿದ ನೆನಪು..

"ಮಗು ಅತ್ತಾಗ ಅಮ್ಮಾ ನಗೋದು ಒಂದೇ ಬಾರಿ.. ಅದು ಮಗು ಹುಟ್ಟಿದಾಗ ಮಾತ್ರ"

ಮಹಾಭಾರತದಲ್ಲಿ ಓದಿದ್ದೇವೆ ತನ್ನ ಅಂಗವನ್ನೇ ಧಾರೆ ಎರೆದು ಕೊಟ್ಟಾ ದಾನ ಶೂರ ಕರ್ಣನ ಬಗ್ಗೆ..

ಕರ್ಣ ಚಲನಚಿತ್ರದಲ್ಲಿ ವಿಷ್ಣು ತನ್ನ ತಂಗಿಯ ಮದುವೆಗಾಗಿ ತನ್ನ ದೇಹದ ಮುಖ್ಯ ಅಂಗವನ್ನೇ ದಾನ ಮಾಡುತ್ತಾರೆ

ಕನ್ನಡ ಚಿತ್ರರಂಗದ ಮರೆಯಲಾರದ ನಟ ಲೋಕೇಶ್ (ಪರಸಂಗದ ಗೆಂಡತಿಮ್ಮ) ತನ್ನ ದೇಹವನ್ನು ಸಂಶೋಧನಾ ಕಾರ್ಯಕ್ಕೆ ವೈದ್ಯಕೀಯ ವಿಭಾಗಕ್ಕೆ ದಾನ ಮಾಡಿದರು..

ಹೌದು ಈ ಸುದ್ಧಿಯನ್ನೆಲ್ಲ ಕೇಳಿದಾಗ ಓದಿದಾಗ ಆಶ್ಚರ್ಯವಾಗುತ್ತದೆ.. ಓದುತ್ತೇವೆ ಮರೆತು ಬಿಡುತ್ತೇವೆ.. ಮುಂದೆ ಯಾವಾಗಲೋ ಇದೆ ರೀತಿಯ ಘಟನೆಯ ಬಗ್ಗೆ ಕೇಳಿದಾಗ ಹೌದು ಹೌದು.. ಅದು ಇದು ಅಂಥಾ ಹೇಳಿ ನಮ್ಮ ಜೀವನದಲ್ಲಿ ಸುತ್ತಾ ಮುತ್ತಾ ಕಂಡ ಘಟನೆಯನ್ನು ಹೇಳಿ ಕೊಂಡು ಸಮಾಧಾನ ಪಟ್ಟು ಕೊಳ್ಳುತ್ತೇವೆ.. ಮತ್ತೆ ನಮ್ಮ ಜೀವನಕ್ಕೆ ಹೊರಳಿ ಕೊಳ್ಳುತ್ತೇವೆ..

ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಬೆಂಗಳೂರಿನ ಗಿರಿನಗರದ ಶ್ರೀ ವೆಂಕಟೇಶ್ವರ ಟೆಂಟ್ ನಲ್ಲಿ ಡಾನ್ಸ್ ರಾಜ ಡಾನ್ಸ್ ಚಿತ್ರ ನೋಡುತ್ತಿದ್ದೆ.. ಮಾಮೂಲಿ ಚಿತ್ರವಾಗಿತ್ತು ಅಂಥಹ ವಿಶೇಷ ಇರಲಿಲ್ಲ.. ಆದ್ರೆ ಕನ್ನಡ ನಾಡಿಗೆ ಬ್ರೇಕ್ ಡಾನ್ಸ್ ಬೆಳ್ಳಿ ಪರದೆಯ ಮೇಲೆ ಮೂಡಿ ಬಂದ ಚಿತ್ರ ಅದು.... ಚಿತ್ರದ ಅಂತಿಮ ದೃಶ್ಯದಲ್ಲಿ "ಅಮ್ಮ ಅಮ್ಮಾ ನಿನ್ನ ತ್ಯಾಗಕೆ ಸರಿ ಸಾಟಿ ಯಾರೂ ಇಲ್ಲ ನಿನಗಿಂತ ದೇವರಿಲ್ಲ" ಹಾಡು ಶುರುವಾಗುತ್ತದೆ..

"ನೀ ಕೊಟ್ಟ ಪ್ರಾಣವನ್ನು ನಿನಗಾಗಿ ನೀಡುವಾಗ ನಾ ಕಾಣದ ಆನಂದವೋ" ಸಾಲು ಬಹಳ ಗಮನ ಸೆಳೆದಿತ್ತು ಮತ್ತು ಕಾಡಿತ್ತು.. ಚಿ ಉದಯಶಂಕರ್ ಅಮ್ಮನ ಎಲ್ಲಾ ಪ್ರೀತಿಯನ್ನು ಸೇರಿಸಿ ಬರೆದ ಸಾಲಿದು..

ಇಂಥಹ ಒಂದು ಜೀವಂತ ಉದಾಹರಣೆ ಪತ್ರಿಕೆ ಮಾಧ್ಯಮ ಅಲ್ಲಿ ಇಲ್ಲಿ ಕೇಳಿದ್ದರೂ ನಮ್ಮ ಹತ್ತಿರದಲ್ಲೆ ನಡೆದಾಗ ಒಂದು ರೀತಿ ಮೈ ಜುಮ್ ಎನ್ನುತ್ತದೆ..

ಹೀಗೆ ಒಂದು ಫೇಸ್ಬುಕ್ ಕಾಮೆಂಟ್ ನೋಡಿ ನನ್ನ ಪ್ರೀತಿಯ ಗೆಳೆಯ ವೆಂಕಿ ಹೇಳಿದ.. ಲೋ ಶ್ರೀಕಿ ಬ್ರಹ್ಮ ಹೀಗೆ ಮಾಡೋಕೆ ಹೊರಟಿದ್ದಾನೆ.. ಬಾ ಹೋಗಿ ನೋಡಿ ಬರೋಣ..

ವೆಂಕಿ ಕೊಟ್ಟಾ ಲಿಂಕ್ ... ಓದಿಯೇ ಸುಸ್ತಾಗಿ ಹೋಗಿದ್ದೆ.. ಹಾಟ್ಸ್ ಆಫ್ ಬ್ರಹ್ಮ
          
ಸರಿ ನಮ್ಮ ಗೆಳೆಯರ ಬಳಗಕ್ಕೆ ಚಕ ಚಕ ಫೋನಾಯಿಸಿದೆ.. ನಾನು, ವೆಂಕಿ, ಎಸ್ ಏನ್, ಎಸ್ ಕೆ ಹೋದೆವು ಬ್ರಹ್ಮನ ಮನೆಗೆ..

ಅವನ ಹೆಸರು ಬ್ರಹ್ಮಾನಂದ.. ಎಂಟನೆ ತರಗತಿಯಿಂದ ಪರಿಚಯ.. ಅವನು ಜೀವನದಲ್ಲಿ ಕಂಡ ತಿರುವುಗಳು ನಮ್ಮ ಪಶ್ಚಿಮ ಘಟ್ಟವನ್ನು ನಾಚಿಸುತ್ತದೆ..

ಅವನು ಶುರುಮಾಡಿದ.. ನಾವುಗಳು ಪ್ರಶ್ನೆ ಕೇಳಿದ್ದು ಕಡಿಮೆ.. ಎಲ್ಲಾ ಪ್ರಶ್ನೆಗಳಿಗೂ ಅವನೇ ಉತ್ತರ ಕೊಟ್ಟು ಬಿಟ್ಟಿದ್ದ.. ಅವನ ಮಾತಿನ ಸಾರಾಂಶ ಇಷ್ಟು

ಅವನ ಅಮ್ಮ ಕಿಡ್ನಿ ತೊಂದರೆಯಿಂದಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.. ಡಯಾಲಿಸಿಸ್ ನೋವು.. ಅವರಿಗೆ ಗೊತ್ತು.. ಸುಮ್ಮನೆ ದೇಹ ಉಸಿರಾಡಿಕೊಂಡು ಇರುತ್ತೆ.. ಬಿಟ್ಟರೆ ಇನ್ಯಾವುದೇ ಫಲವಿಲ್ಲ ಎನ್ನುತ್ತದೆ ವೈದ್ಯಕೀಯ ಚಿಕಿತ್ಸೆ.. ಆದರೂ ಅಂತಿಮದಿನಗಳನ್ನು ಮುಂದು ಹಾಕುತ್ತಾ ಇರುತ್ತದೆ.. ಆದರೆ ಯಾತನಮಯ ಆ ಚಿಕಿತ್ಸೆ ಎನ್ನುವುದು ಎಲ್ಲರ  ಅಭಿಪ್ರಾಯ.. ನನ್ನ ಅಪ್ಪ ಕೂಡ ತಮ್ಮ ಅಂತಿಮ ದಿನಗಳಲ್ಲಿ ಈ ಯಾತನೆ ಅನುಭವಿಸಿದ್ದು ಕಣ್ಣಾರೆ ನೋಡಿದ್ದೇ..

ದೇವರಂತ ಅಮ್ಮ ಕರ್ಣನಂಥಹ ಮಗ 
         
ಅವನ ಸೋದರಮಾವ ಅಂದರೆ ತಾಯಿಯ ತಮ್ಮನ ಮಗನಿಗೆ ಇದೆ ತೊಂದರೆಯಾಗಿ ಯಾವ ಯಾವ ಡಾಕ್ಟರ ಮುಖಾಂತರ ಕೊಯಮತ್ತೂರಿನ ವಿವೇಕ್ ಪಾಟಕ್ ಎನ್ನುವ ಪ್ರಖ್ಯಾತ ವೈದ್ಯರ ಪರಿಚಯವಾಗಿ.. ಡಾಕ್ಟರ ಹೇಳಿದರಂತೆ ನಿಮ್ಮ ಅಮ್ಮನ ಆರೋಗ್ಯವನ್ನು ಮತ್ತು ಅವರ ಆಯಸ್ಸನ್ನು ಹತ್ತು ಹದಿನೈದು ವರ್ಷ ನೆಮ್ಮದಿಯಿಂದ ಕಳೆಯೋಕೆ ನೀ ಏಕೆ ನಿನ್ನ ಕಿಡ್ನಿ ದಾನಮಾಡಬಾರದು.. ನಿನಗೆ ಯಾವ ತೊಂದರೆ ಬರದ ಹಾಗೆ ನೋಡಿಕೊಳ್ಳೋದು ನನ್ನ ಜವಾಬ್ಧಾರಿ ಎನ್ನುವ ಭರವಸೆ ಕೊಟ್ಟರಂತೆ...
ಮನೋಜ್ಞ ಕಾಯಕಕ್ಕೆ ನೆರವಾದ ಅಂಗಳ 

ಡಯಾಲಿಸಿಸ್ ಮಾಡಿಸಿಕೊಂಡು ವರ್ಷಗಟ್ಟಲೆ ನೋವು ಅನುಭವಿಸುತ್ತ ಇರುವುದಕ್ಕಿಂತ ನೀನು ನಿನ್ನ ಅಮ್ಮನ ಮೊಗದಲ್ಲಿ ದೇಹದಲ್ಲಿ ನಲಿವು ತರಲು ಸಹಾಯ ಮಾಡಬಹುದು ಎಂದರಂತೆ... ಇವನ ಮೊದಲ ಉತ್ತರ ಕಣ್ಣು ಮಿಟುಕಿಸುವದಕ್ಕಿಂಥ ಮೊದಲೇ ಹೇಳಿದ್ದು ಓಕೆ ಡಾಕ್ಟರ್..

ಆಸ್ಪತ್ರೆ ಎನ್ನುವ ದೇವಾಲಯ
            
ನಂತರ ಜನವರಿ ೨೦೧೪ ರಿಂದ ಶುರುವಾದ ಪರೀಕ್ಷೆ, ಕುಟುಂಬದ ಜೊತೆ ಮಾತುಕತೆ, ಅದು ಇದು ಎನ್ನುತ್ತಾ ಸೆಪ್ಟೆಂಬರ್ ಎರಡನೆ ತಾರೀಕು ೨೦೧೪ ಇಸವಿ ನಿಗದಿಯಾಯಿತು.. ಮಕ್ಕಳ ಜೀವನದ ಒಂದು ಅತ್ಯುತ್ತಮ ಘಟ್ಟ.. ಜೀವ ಕೊಟ್ಟು ಜನ್ಮ ನೀಡುವ ತಾಯಿಗೆ ಒಂದು ರೀತಿಯಲ್ಲಿ ಮರುಜನ್ಮ ನೀಡುವ ಒಂದು ಅಳಿಲು  ಸೇವೆ..

ಅವನ ಮಾತಲ್ಲಿ ಈ ಘಟನೆಯನ್ನು ಕೇಳುತ್ತಾ ಹೋದ ಹಾಗೆ ಮೈಯೆಲ್ಲಾ ಒಂದು ಬಾರಿ ತಣ್ಣಗಾಯಿತು ನನಗೆ.. ಅರೆ ಕೇಳಿದ್ದೇವೆ ಓದಿದ್ದೇವೆ.. ಹೀಗೆ ಉಂಟಾ ಜಗತ್ತಿನಲ್ಲಿ.. ಕಾರಣ ಏನೇ ಇರಬಹುದು.. ನಮ್ಮ ಜೇಬಿಂದ ಒಂದು ಹತ್ತು ರೂಪಾಯಿ ಕೊಡುವಾಗ ಹತ್ತು ಬಾರಿ ಯೋಚಿಸುವ  ವ್ಯಾಪಾರಿ ಮನಸ್ಸು ನಮ್ಮದು.. (ಎಲ್ಲರದಲ್ಲ).. ಅಂಥಹುದರಲ್ಲಿ ದೇಹದ ಒಂದು ಮುಖ್ಯ ಅಂಗವನ್ನೇ ಕೊಡುವುದು.. ಇದರ ಬಗ್ಗೆ ಕೇಳಿದಾಗ ದಾನ ಶೂರ ಕರ್ಣ ಬಗ್ಗಿ ನೋಡಿ ಸಲಾಂ ಮಾಡಿದ ಅನ್ನಿಸಿತು..

ಹೌದು ಕೊಯಮತ್ತೂರಿನ ಕೊವೈ ಮೆಡಿಕಲ್ ಸೆಂಟರ್ ಹಾಸ್ಪಿಟಲ್ (KHMC) ಇದೆ ಸೆಪ್ಟೆಂಬರ್ ೨ರಂದು ತನ್ನ ತಾಯಿಗೆ ಮರು ಜನ್ಮ ನೀಡಿದ ನಮ್ಮ ಸ್ನೇಹಿತನನ್ನು ಭೇಟಿ ಮಾಡಿದಾಗ ಮನಸ್ಸು ದೇಹ ಎರಡು ಕಂಪಿಸುತ್ತಿತ್ತು..

ಕೊಡುಗೆ ಕೊಟ್ಟ ನಂತರದ ಚಿತ್ರ - ಬ್ರಹ್ಮಾನಂದ 
                 
ಅಮ್ಮ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ.. ವೈದ್ಯರ ಸಲಹೆ ಮೇರೆ ನನ್ನ ಸ್ನೇಹಿತ ಒಂದು ಹತ್ತು ದಿನ ಸಂಪೂರ್ಣ ವಿಶ್ರಾಂತಿ ಪಡೆದು ಬೆಂಗಳೂರಿಗೆ ಬರಲಿದ್ದಾನೆ.. ತಾಯಿ ಇನ್ನೊಂದು ಆರು ತಿಂಗಳು ಕೊಯಮತ್ತೂರಿನಲ್ಲಿಯೇ ಇದ್ದು ಬೇಕಾದ ಶುಶ್ರೂಷೆ ಪಡೆದು ಆರೋಗ್ಯಭಾಗ್ಯ ಪಡೆದು ಬೆಂಗಳೂರಿಗೆ ಬರಲಿದ್ದಾರೆ..

ಅದ್ಭುತ ಗೆಳೆಯನೊಡನೆ ಕಳೆದ ಆ ಸಮಯ.. ಮೈ ರೋಮಾಂಚನ!!!

ನಮ್ಮೆಲ್ಲರ ಪ್ರಾರ್ಥನೆ ಹಾರೈಕೆ ಈ ಕಣ್ಣಿಗೆ ಕಾಣುವ ದೇವರ ಹಾಗೂ ಆಕೆಯ ದೇವರಂತಹ ಪುತ್ರನ ಜೊತೆಯಲ್ಲಿ ಇದೆ ಮತ್ತು ಇರುತ್ತದೆ..

ಬ್ರಹ್ಮನ ನೀ ನಿಜವಾಗಿಯೂ ತಾಯಿಗೆ ಮರುಜನ್ಮ ನೀಡಿದ ಬ್ರಹ್ಮ..

ನಿನ್ನ ಮನೋತ್ಯಾಗಕ್ಕೆ ನಮ್ಮೆಲ್ಲರ ಕಡೆಯಿಂದ ನಮಸ್ಕಾರಗಳು!!!

Saturday, August 9, 2014

ಚಂದ್ರಲೋಕದಲ್ಲಿ ಕೋಲಾಹಲ.. ಸುವ್ವಿ ಸುವ್ವಾಲಿ.. !!!

ಚಂದ್ರಲೋಕದಲ್ಲಿ ಕೋಲಾಹಲ.. 

ಮನುಜ ಚಂದ್ರಲೋಕದಲ್ಲಿ ಕಾಲಿಟ್ಟ ಆ ಘಳಿಗೆ ಮನುಕುಲದಲ್ಲಿ ಇಟ್ಟ ದಿಟ್ಟ ಹೆಜ್ಜೆ ದೊಡ್ಡ ಹೆಜ್ಜೆ ನಿರಂತರ ಹೆಜ್ಜೆ.. ಹೀಗೆ ಅನೇಕ ಮಾತುಗಳು ಹೊಗಳಿಕೆಗಳು ಕೇಳಿಬರುತ್ತಿದ್ದವು.. 

ಚಂದ್ರಲೋಕದಲ್ಲಿ ಕಾಲಿಟ್ಟಾ ಆ ಮಹಾಪುರಷನ ಸಂದರ್ಶನ ಮಾಡಲು ಸುಮಾರು ವರ್ಷಗಳ ನಂತರ ಮಾಧ್ಯಮಗಳೆಲ್ಲ ನಾ ಮುಂದು ತಾ ಮುಂದು ಎಂದು ಬಡಿದಾಡುತ್ತಾ.. ಆ ಕಡೆಗೆ ಹೆಜ್ಜೆ ಹಾಕಿದರು.. 

ಸಂದರ್ಶನ ಶುರುವಾಯಿತು.. 

"ನಮಸ್ಕಾರ ನಿಮ್ಮ ಸಂದರ್ಶನ ಬೇಕಿತ್ತು..  !"

"ಅರೆ.. ಅದಕ್ಕೇನಂತೆ.. ಆದರೆ ಮೊದಲು ನಾವೆಲ್ಲಾ ಚಂದ್ರಲೋಕಕ್ಕೆ ಹೋಗೋಣ.. ಅಲ್ಲಿ ಏನೋ ಕೋಲಾಹಲ ನಡೆಯುತ್ತಿದೆಯಂತೆ.. ಮೊದಲು ಅದನ್ನು ಬಗೆ ಹರಿಸಿ ನಂತರ ವಿಷಯಕ್ಕೆ ಬರೋಣ.. ನಡೆಯಿರಿ ಗಾಡಿ ಸಿದ್ಧವಿದೆ"

... 

ಎಲ್ಲರೂ ಚಂದ್ರಲೋಕಕ್ಕೆ ಹೆಜ್ಜೆ ಇಟ್ಟರು.. 

ಸೂರ್ಯನ ಬೆಳಕು.. ಪ್ರತಿಫಲಿಸುವ ಆ ಸುಂದರ ಗೋಲ... ಭುವಿಗಿಂತ ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು... 

ಆ ಮಹಾಪುರುಷ.. ಚಂದ್ರನನ್ನೇ ಕೇಳಿದ.. 

"ಚಂದ್ರಪ್ಪ ಏನಪ್ಪಾ ನಿನ್ನ ಸಂಕಟ.. ಯಾಕೆ.. ಏನಾಯ್ತು.. "

ಚಂದ್ರ ನಿಧಾನಕ್ಕೆ ಬಾಯಿ ಬಿಟ್ಟಾ.... !

"ಅಲ್ಕನ್ರಪ್ಪ.. ನನ್ನ ಲೋಕದಲ್ಲಿ ಇರುವ ಗುಳಿಗಳು ಚೆನ್ನಾಗಿವೆ ಅಂಥಾ ಚಿತ್ರ ತೆಗೆದು ಭೂಲೋಕದಲ್ಲಿ ಹಂಚಿದ್ದೀರಿ... ಮಕ್ಕಳಿಗೆ ನನ್ನ ಲೋಕದಲ್ಲಿರುವ ಗುಳಿಗಳು ಮೊಲದಂತೆ ಇವೆ.. ಜಿಂಕೆಯಂತೆ ಇವೆ ಎಂದು ತೋರಿಸುತ್ತಾ ನೂರಾರು ಕಥೆ ಕಟ್ಟಿ ಮಕ್ಕಳಿಗೆ ಹೇಳಿದ್ದೀರಿ.. ಆದರೆ.. 

"ಏನಪ್ಪಾ ಚಂದ್ರಪ್ಪ ಏನು ಆದರೆ.. ಮುಂದುವರೆಸು"

ನೀನೆ ನೋಡು ಈ ಗುಳಿಗಳನ್ನು.. ಎಂದು ತನ್ನ ಲ್ಯಾಪ್ಟಾಪ್ ನಲ್ಲಿದ್ದಾ ಕೆಲವು ಗುಳಿಗಳ ಚಿತ್ರಗಳನ್ನು ತೋರಿಸಿದ ಚಂದ್ರಪ್ಪ... 
"ಹೌದು.. ಚಂದ್ರಲೋಕದಲ್ಲಿರುವ ಗುಳಿಗಳು ನಮ್ಮ ಭುವಿಯಲ್ಲಿ ತುಂಬಾ ಪ್ರಸಿದ್ಧ.. ಅದಕ್ಕೇನು ನಿನ್ನ ಸಂಕಟ "

"ಇರಪ್ಪ.. ನಾ ಹೇಳುವ ಮಾತು ಕೇಳು.. "

"ಸರಿ ಹೇಳು"

"ನನ್ನ ಲೋಕದಲ್ಲಿರುವ ಗುಳಿಗಳು ಪ್ರಸಿದ್ಧ ಸುಂದರ ಹೌದು.. ಆದರೆ ಈ ಕೆಳಗಿನ ಕೆಲವು ಚಿತ್ರಗಳನ್ನು ನೋಡಿ ಆ ಮೇಲೆ ಹೇಳು.. "

ಸ್ವಲ್ಪ ಹೊತ್ತು.. ಮೌನ ರಾಗ.. ಏನು ಹೇಳಲು ತೋಚುತ್ತಿಲ್ಲಾ ಆ ಮಹಾಪುರುಷನಿಗೆ... ಕನಸು ಕಂಗಳನ್ನು ದೊಡ್ಡದಾಗಿ ಬಿಡುತ್ತಾ ಅದರಲ್ಲಿನ ಭಾವಗಳನ್ನು ತುಂಬಿಕೊಂಡು.. "ಹೌದು ಚಂದ್ರಪ್ಪ ನೀ ಹೇಳೋದು ಸರಿ.. .. ಆ ಭಾವ.. ಆ ಮೌನ.. ಆ ಮೌನಕ್ಕೆ ಪದಗಳನ್ನು ಜೋಡಿಸುವ ಪರಿ ಆಹಾ.. ಎಂಥಹ ಗುಳಿಗಳನ್ನು ತುಂಬಿಬಿಡುತ್ತದೆ.. ಅದರ ಜೊತೆಯಲ್ಲಿ ಇನ್ನೊಂದು ವಿಷ್ಯ ಗೊತ್ತಾ ಚಂದ್ರಪ್ಪ.. "

"ಆ ಚಿತ್ರಗಳ ಬಗ್ಗೆ ತಾನೇ ನೀ ಹೇಳೋದು.. "

"ಹೌದು ಚಂದ್ರಪ್ಪ.. ಶ್ರೀಕಾಂತನ ಜೀವನದಲ್ಲಿ ಸಿಕ್ಕ ಅದ್ಭುತ ಸಹೋದರಿ.. ಈ ಸುಂದರ ಗುಳಿಯ ಪುಟ್ಟಿ.. ಅಣ್ಣಯ್ಯ ಎನ್ನುವಾಗ ಅವನ ಮೊಗದಲ್ಲಿ ಸಿಗುವ ಸಂತಸ.. ಹಾಗೆ ಅವನು ಪುಟ್ಟಿ ಸುಷ್ಮಾ ಎಂದಾಗ ಅವಳ ಕಣ್ಣಲ್ಲಿ ಸೂಸುವ ಭಾವ.... ಆ ಭಾವಕ್ಕೆ ಎಷ್ಟು ಪದಗಳನ್ನು ತುಂಬಿದರೂ ನನ್ನ ಗುಳಿ ತುಂಬಲಾರದು.. ಪದ ಸಂಪತ್ತು ಸಾಲುವುದಿಲ್ಲ.. "

"ಹೌದು ಮಹಾ ಪುರುಷ ಅದಕ್ಕೆ ನನಗೆ ಒಂದು ಸಣ್ಣ ಅನುಮಾನ ಬಂತು.. ನನ್ನಲ್ಲಿರುವ ಈ ಗುಳಿಗಳು ಸುಂದರವೋ ಅಥವಾ ಶ್ರೀಕಾಂತನ ಸಹೋದರಿಯ ಕೆನ್ನೆಯಲ್ಲಿ ಮೂಡುವ ಗುಳಿಗಳು ಸುಂದರವೋ.. ?" 

"ಚಂದ್ರಪ್ಪ.. ಶ್ರೀಕಾಂತನಿಗೆ ಜೋಡಿ ಧಮಾಕ.. ಯಾಕೆ ಗೊತ್ತಾ.. ಪುಟ್ಟಿ ಸುಷ್ಮಾಳ ಅತ್ತಿಗೆಯ ಕೆನ್ನೆಯಲ್ಲೂ ಗುಳಿ, ಪುಟ್ಟಿ ಸುಷ್ಮಾಳ ಸೊಸೆಯ ಕೆನ್ನೆಯಲ್ಲೂ ಗುಳಿ... 

ಇನ್ನೂ 

ಪುಟ್ಟಿ ಸುಷ್ಮಾಳ ಕೆನ್ನೆಯ ಗುಳಿ.. ಆಹಾ.. ನೀನೆ ನೋಡು ..." ಅದಕ್ಕೆ ಇಂಥಹ ಸುಂದರ ಪರಿವಾರವನ್ನು ಕಂಡಾಗ ನಾನು ಕೂಡ ಭುವಿಗೆ ಹೋಗಬೇಕು ಎಂದು ಹಠ ಮಾಡುತ್ತಿದ್ದೆ ಅದಕ್ಕೆ ಕೋಲಾಹಲವಾಗುತ್ತಿತ್ತು ಅಷ್ಟೇ.. ಸರಿ ನೀನು ಪುಟ್ಟಿ ಸುಷ್ಮಾಳಿಗೆ ಜನುಮದಿನದ ಶುಭಾಶಯವನ್ನು ಹೇಳಿ.. ನೀ ಸಂದರ್ಶನ ಮುಗಿಸಿ... ಇನ್ನೇನು ನಾಳೆ ಪೌರ್ಣಮಿ.. ಪುಟ್ಟಿ ಸುಷ್ಮಾಳ ಜನುಮದಿನಕ್ಕೆ ಶುಭಾಷಯ ಕೋರಿ ಅವಳ ಬಾಳಲ್ಲಿ ಸದಾ ಬೆಳಕು ಇರಲೆಂದು ನಾ ನನ್ನ ಬೆಳದಿಂಗಳನ್ನು ಅವಳ ಮೌನ ರಾಗದ ಮೂಲಕ ಕನಸು ಕಂಗಳ ತುಂಬಾ ತುಂಬಿ ತುಂಬಿ ಕೊಡುತ್ತಿರುತ್ತೇನೆ.. 

******************************

"ಪುಟ್ಟಿ ನೀ ನನಗೆ ಸಿಕ್ಕ ಅದ್ಭುತ ಸಹೋದರಿ.. ನಿನ್ನ ಮಾತುಗಳು ನೇರ ದಿಟ್ಟ.. ಆದರೆ ನಿನ್ನ ಮಿಡಿವ ಮನ ಸದಾ ನಿರಂತರವಾಗಿ ಪ್ರೀತಿ ಮಮತೆ ವಾತ್ಸ್ಯಲ್ಯದ ಮುಖವನ್ನು ಹೊತ್ತು ನೆಡೆದಾಡುತ್ತಿರುತ್ತದೆ..  

ಜನುಮ ದಿನದ ಶುಭಾಶಯಗಳು!!!

Friday, July 11, 2014

ಎಲ್ದೆ ಎಲ್ಡು ನಿಮ್ಷಾ..... !!!

ಅ ಆ  ಇ ಈ ಕನ್ನಡದ ಅಕ್ಷರಮಾಲೆ... ಅಮ್ಮ ಎಂಬುದೇ... 

ಮಾನ್ಯ ಶ್ರೋತ್ರುಗಳೇ ನೀವು ಕೇಳುತ್ತಿದ್ದ ಹಾಡು ಕರುಳಿನ  ಕರೆ ಚಿತ್ರದ ಹಾಡು.. ಈ ಹಾಡಿನ ಅವಧಿ ನಾಲ್ಕು ನಿಮಿಷ ಆಗಿತ್ತು.. ಆದರೆ ಇಂದು  ಎಳ್ದೆ ಎಲ್ಡು ನಿಮಿಷ ಮಾತ್ರ.. ಭಿತ್ತರ ಮಾಡುತ್ತೇವೆ.. 

ಬರಿ ಇದೊಂದೇ ಅಲ್ಲ.. ಇವತ್ತು ಇಡಿ ದಿನ ನಮ್ಮ ಕೇಂದ್ರದ ಎಲ್ಲಾ ಕಾರ್ಯಕ್ರಮಗಳು ಎಳ್ದೆ ಎಲ್ಡು ನಿಮ್ಷ ಪ್ರಸಾರ ಆಗೋದು.. 

ಶ್ರೋತ್ರುಗಳೆಲ್ಲ ತಲೆ ಕೆರೆದು ಕೊಂಡರು.. ಅಲ್ಲಿ ಇಲ್ಲಿ ಮಾತಾಡಿದರು ಊಹು.. ಊಹು ಯಾವುದೇ ಲಾಭವಿರಲಿಲ್ಲ.. ಯಾರಿಗೂ ಇದರ ಮರ್ಮ ಅರ್ಥವಾಗಲಿಲ್ಲ.. 

ತಲೆ ಕೆಟ್ಟು ಸೀದಾ ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗ ನೀವು ಕೇಳುತ್ತಿರುವುದು ವಿವಿಧ ಭಾರತಿ ಎಂದು ದಿನಕ್ಕೆ ನೂರಾರು ಬಾರಿ ಹೇಳುವ ಆಕಾಶವಾಣಿ ಕೇಂದ್ರಕ್ಕೆ.. 

ಅಭಿಮಾನಿ ದೇವರುಗಳು ಸೀದಾ ನಿರ್ದೇಶಕರ ಕಚೇರಿಗೆ ನುಗ್ಗಿದರು.. 

 ಗಾಬರಿಯಾದ ನಿರ್ದೇಶಕರು.. "ಏನಪ್ಪಾ ಏನಾಯ್ತು.. ನೀವೆಲ್ಲ ಯಾರು.. ಏನು ಬಂದಿದ್ದು" 

"ಸರ್.. ಬೆಳಿಗ್ಗೆಯಿಂದ  ನೋಡ್ತಾ ಇದ್ದೀವಿ.. ಎಲ್ಲಾ ಹಾಡುಗಳು.. ಎಲ್ಲಾ ಕಾರ್ಯಕ್ರಮಗಳು ಬರೀ ಎಳ್ದೆ ನಿಮ್ಸಾ ಬರ್ತಾ ಇದೆ.. ಕಾರಣ ಕೇಳಿದ್ರೆ.. ಹೇಳೋಲ್ಲ ಅಂತ ಇದ್ದಾರೆ.. "

"ಹೌದು.. ನಾನೇ ಆದೇಶ ಹೊರಡಿಸಿದ್ದು.. ಇವತ್ತು ಪೂರ್ತಿ ಎರಡೇ ಎರಡು ನಿಮಿಷಗಳ ಕಾರ್ಯಕ್ರಮ ಮಾತ್ರ ಬರಬೇಕು ಅಂತ.. "

"ಯಾಕೆ ಸಾ ಯಾಕೆ.. ಒಳ್ಳೆ ಒಳ್ಳೆ ಒಳ್ಳೆ ಹಾಡು ಬರ್ತಾ ಐತೆ.. ನೀವು ನೋಡಿದ್ರೆ ಎಳ್ದೆ ನಿಮ್ಸಾ ಹಾಕ್ತಾ ಇದ್ದೀರಾ.. " 

"ಅದಕ್ಕೆ ಉತ್ತರ ಬೇಕು ಎಂದರೆ.. ನೀವು ನೇರವಾಗಿ ದಿಟ್ಟವಾಗಿ ನಿರಂತರವಾಗಿ.. ವಾರದ ಏಳು ದಿನಗಳು ಇಪ್ಪತನಾಲ್ಕು ಘಂಟೆಗಳು ನಿಂತರೆ ಮಾತ್ರ ಹೇಳುತ್ತೇನೆ ಹೇಳುತ್ತೇನೆ... ಹೇಳುತ್ತೇನೆ.. ಹೇಳುತ್ತೇನೆ.. ಹೇಳುತ್ತೇನೆ.. "

"ಅಯ್ಯೋ ಸಾಮಿ ಯಾಕೆ ಈ ಸಿಕ್ಸೆ.. ಸರಿಯಾಗಿ ಹೇಳಬಾರದೆ.. "

"ನಿಮ್ಮ ಸಮಯ ಎರಡು ನಿಮಿಷಾ ಆಯಿತು.. ಮತ್ತೆ ಎರಡು ನಿಮಿಷ ಬಿಟ್ಟು ಬನ್ನಿ.. "

ಅಲ್ಲಿದ್ದಾ ಯಾರ್ದೋ  ಮೊಬೈಲ್ ನಲ್ಲಿ ಹಾಡು ಬರ್ತಾ ಇತ್ತು 

"ಎಡವಟ್ಟಾಯ್ತು ತಲೆ ಕೆಟ್ಟೋಯ್ತು.. ತಲೆ ಕೆಟ್ಟೋಯ್ತು.. ಎಡವಟ್ಟಾಯ್ತು" ಹೇ ಯಾರಲ ಅದು.. ಆಫ್ ಮಾಡ್ಲ.. ಮೊದಲೇ ಇವರು  ತಲೆಗೆ ಉಳಾ ಬಿಡ್ತಾವ್ರೆ.. ನೀನು ಬೇರೆ ನಿನ್ನ ಹಾಡು ಬೇರೆ.. ಮಡಗ್ಲಾ ಫೋನು.. "

ಫೋನ್ ಆಫ್ ಆಯಿತು .. ನಿಧಾನವಾಗಿ ಎದ್ದು ನಿಂತ ನಿರ್ದೇಶಕರು.. "ಬನ್ನಿ  ನನ್ನ ಜೊತೆ.. " ಎಂದರು 

ಕುರಿಗಳ ತರಹ ಅವರನ್ನೇ ಹಿಂಬಾಲಿಸಿದರು.. ಬಂದ್ದಿದ್ದ ಮಂದಿ.. 

ಮಲ್ಲಿಗೆ ಅಂತ ಮನಸುಳ್ಳ ಒಂದು ಸುಂದರ ವ್ಯಕ್ತಿಯನ್ನು ಪರಿಚಯಿಸುತ್ತಾ.. "ನೋಡ್ರಪ್ಪ ಇವರ ಮೇಲಿನ ಪ್ರೀತಿಗಾಗಿ ನಾವು ಇಂದು ಎಲ್ಲಾ ಕಾರ್ಯಕ್ರಮಗಳನ್ನು ಎರಡು ನಿಮಿಷಾ ಮಾತ್ರ ಭಿತ್ತರಿಸುತ್ತಿದ್ದೇವೆ.. "

"ಓಹ್ ಸಾಮಿ ಇವ್ರಾ.. ಇವರು ನಮಗೆ ಸಾನೆ ಗೊತ್ತು.. ಬೊ ಪಸಂದು ಇವರ ಮನಸ್ಸು.. ಏನ್ ಕವಿತೆ ಬರೀತಾರೆ ಅಂತೀನಿ.. ಅಕ್ಸರಗಳು ಇವ್ರು ಹೇಳ್ದಂಗೆ ಕುಣಿತಾವೆ.. ಪ್ಯಾಂಟು ಸಲ್ಟು ಹಾಕಿಕೊಂಡ ಹೈಕಳು ಸಾಲೆಗೆ ಹೋಗ್ತಾವಲ್ಲ ಅಂಗೆ... "

ಹೌದು ಇವರೇ ತಮ್ಮ ಪಾತ್ರವನ್ನು ಅನ್ವೇಷಣೆ ಮಾಡುತ್ತಾ ಮಾಡುತ್ತಾ ಸಾಲು ಮರಗಳನ್ನು ನಡೆಸಿದ ಅಶೋಕ್ ಚಕ್ರವರ್ತಿಯ ಹಾಗೆ ಸಾಲು ಸಾಲುಗಳನ್ನು ಬರೆಯುತ್ತಾ.. ತಮ್ಮ ಬಳಗದ ಎಲ್ಲರ ಲೇಖನಗಳನ್ನು ಓದುತ್ತಾ.. ಪ್ರೋತ್ಸಾಹಿಸುವ ಇವರ ಹಾಲಿನಂತ ಮನಸ್ಸು ಎಲ್ಲರಿಗೂ ಪ್ರಿಯಾ.. ಹೌದು ಇಂದು ಅವರ ಜನುಮ ದಿನ ಅದಕ್ಕಾಗಿಯೆ ಅವರ ಮೇಲಿನ ಪ್ರೀತಿಗಾಗಿ ಇವತ್ತಿನ.. ಕಾರ್ಯಕ್ರಮ ಎಲ್ಲವೂ.. 

ಅರೆ ಇಸ್ಕಿ.. ಈ ಇನ್ನೊಬ್ಬ ಅವ್ನೆ ಶ್ರೀಕಾಂತ್ ಮಂಜುನಾಥ ಅಂತ ಅವನು ಹಂಗೆ ಹೇಳಿದ್ದನ್ನೇ ಹೇಳ್ತಾ ಇರ್ತಾನೆ.. ಅವರ ಹುಟ್ಟು ಹಬ್ಬ ಸರಿ.. ಅವರ ಮೇಲಿನ ಪ್ರೀತಿ ಸರಿ.. ಎರಡು ನಿಮ್ಷಾ ಯಾಕೆ ಅದು ಹೇಳಿ ಮೊದ್ಲು.. "

"ಹ ಹ ಹ.. ಶ್ರೀಕಾಂತ್ ಇಲ್ಲೂ ಬಂದನೆ.. ಅವನ ಕೊರೆತ ನಿಮಗೆಲ್ಲಾ ಗೊತ್ತಾಯ್ತೆ.. ಇರಲಿ ಇರಲಿ.. "

"ಸಾಮಿ ಮೊದಲು ಹೇಳಿ ಆ ಕಾರಣವ.. "

"ನೋಡ್ರಪ್ಪ.. ಇವರು ಎಲ್ಲರನ್ನು ತುಂಬಾ ಇಷ್ಟಪಡುತ್ತಾರೆ .. ಇವರಿಗೆ ಬರುವ ಕರೆಗಳು ಅಸಂಖ್ಯಾತ.. ಹಾಗಾಗಿ ಇವರ ಫೋನ್ ಸದಾ ಬ್ಯುಸಿ ಇರುತೆ.. ಅದಕ್ಕೆ ಇವರು ತಮ್ಮ ಅಭಿಮಾನಿಗಳಿಗೆ ಸದಾ ಸಿಗುತ್ತಿರಬೇಕೆಂದು ಇವರ ಮೊಬೈಲ್ ನಲ್ಲಿ ಎಲ್ಲಾ ಕರೆಗಳು ಕೇವಲ ಎರಡು ನಿಮಿಷ ಮಾತ್ರ ಇರಬೇಕು ಎಂದು ಮಾಡಿಸಿಕೊಂಡಿದ್ದಾರೆ.. ಹಾಗಾಗಿ ೧೨೦ ನಿಮಿಷ ಆದ ಮೇಲೆ ಪ್ರಧಾನ ಮಂತ್ರಿಯೇ ಕರೆಯೆ ಆದರೂ ಕಟ್ ಕಟ್ ಕಟ್ .... !!!

ಓಹ್ ಒಹ್ ಹೀಗ ಸಮಸಾರ.. .. ಹಾಗಾದ್ರೆ ಸರಿ ನೀವು ಮಾಡಿದ್ದು.. ತಗಳಿ ನಮ್ಮದು ಒಂದು ಸುಭಾಸಯ.. 

ಇಂತಹ ಸುಂದರ ಜೀವಿಯ ಜೊತೆಯಲ್ಲಿ ನಾವಿರುವುದು ನಮಗೆ ಸಿಕ್ಕ ದೊಡ್ಡ ಗೌರವ ಎಂಬ ನಂಬಿಕೆ ವಿಶ್ವಾಸ ನನ್ನದು ಏನಂತೀರ.. 

ಹುಟ್ಟು ಹಬ್ಬದ ಶುಭಾಶಯಗಳು ಸರ್ಜಿ.. !!!!

( ಕ್ಷಮೆ ಇರಲಿ ನಿಮ್ಮ ಹೆಸರು ನಮ್ಮ ಹೃದಯದಲ್ಲಿ ಅಚ್ಚಾಗಿಕೂತಿದೆ .. ಹಾಗಾಗಿ ಇಡಿ ಲೇಖನದಲ್ಲಿ ನಿಮ್ಮ ಹೆಸರನ್ನು ಉಲ್ಲೇಖಿಸಲು ಬೆರಳುಗಳಿಗೆ ಆಗಲಿಲ್ಲ.. ಆದರೆ ನಿಮ್ಮ ಚಿತ್ರ ಹಾಕಬೇಕೆಂದು ಬೆರಳುಗಳು ಒತ್ತಾಯ ಮಾಡುತ್ತಿವೆ.. ಆದರೆ ಆಗುತ್ತಿಲ್ಲಾ.. ಹ ಹ ಹ )

Monday, June 23, 2014

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. !!!

ನನ್ನ ಬಳಿಯಿರುವ ಸುತ್ತ ಮುತ್ತಲು ಇರುವ ಎಲ್ಲವನ್ನೂ ನಾ ಮಾತಾಡಿಸುವುದು ನನ್ನ ಜಾಯಮಾನಕ್ಕೆ ಬಂದು ಬಿಟ್ಟಿದೆ.. ಅಂತರಗಳು ಜಾಸ್ತಿಯಾಯಿತು.. ಕಾರಣಗಳು ಅತಿಯಾಯಿತು.. ಕಡೆಗೆ ಕಾರಣಕ್ಕೆ ಅಂತರಗಳು ಹೆಚ್ಚಾಯಿತು.. ಕಾರಣಾಂತರ ಎನ್ನುವ ಪದ ಹುಟ್ಟಿಯೇ ಬಿಟ್ಟಿತು..

ಹಲವಾರು ವಾರಗಳಿಂದ.. ಅರಿಯದ ಒತ್ತಡಗಳಿಂದ.. ನಾ ಪ್ರೀತಿಸುವ ನನ್ನ ಬೈಕನ್ನು ಹೊರಗೆ ಓಡಾಡಿಸಿಯೇ ಇರಲಿಲ್ಲ.. ಇಂದು ಕಚೇರಿಯಿಂದ ಮನೆಗೆ ಬರುವಾಗಲೇ ಯಾಕೋ ಅನ್ನಿಸಿತು ಇವತ್ತು ಏನಾಗಲಿ ಮುಂದೆ ಸಾಗುನೀ ಎನ್ನುವಂತೆ ಬೈಕನ್ನು ಹೊರಗೆ ತೆಗೆಯಲೇ ಬೇಕು ಎಂದು ನಿರ್ಧರಿಸಿದ್ದೆ.. "ಮಗಳು" ಕೂಡ ಯಾಕೋ ಮಂಕಾಗಿದ್ದು ಕಾರಣವಾಗಿತ್ತು..

ಮನೆಗೆ ಬಂದೆ.. ನನ್ನ ಪ್ರೀತಿಯ ಬೈಕಿನ ಮೇಲೆ ಕೈಯಾಡಿಸಿದೆ.. ಕನ್ನಡಿಯಲ್ಲಿ ನನ್ನ ನೋಡಿ ಮುಗುಳುನಗೆ ಕೊಟ್ಟಿತು... ಹೊರಗೆ ಹೊರಟೆ ಬಿಟ್ಟೆ.. ನನ್ನ ಎಲ್ಲಾ ಸಾಹಸಕ್ಕೆ ಹೆಗಲು ಕೊಟ್ಟು ಸಹಕರಿಸಿದ ಮಿತ್ರನನ್ನು ಹೊರಗೆ ಗಾಳಿಯಲ್ಲಿ ಸುತ್ತಾಡಿಸಿ ಬಂದು ನಿಲ್ಲಿಸಿದೆ... ಹಾಟ್ಸ್ ಆಫ್ ಶ್ರೀ ಎಂದಿತು ಬೈಕ್..

ಹೌದು ಸ್ನೇಹದ ಸೆಳೆತವೆ ಹಾಗೆ.. ಎಲ್ಲೋ ಇದ್ದ ಹಲವಾರು ಹಾಲಿನ ಮನಸಿನ ಹೃದಯಗಳನ್ನು ಜೇನಿನ ಜೊತೆ ಬೆರೆಸಿ.. "ಜೇನಿನ ಹೊಳೆಯೋ ಹಾಲಿನ  ಮಳೆಯೋ ಸುಧೆಯೋ ಈ ಲೋಕ ಸ್ನೇಹ ಲೋಕವೋ.." ಅನ್ನುವಂತೆ ಹಾಡಿಸಿಬಿಡುತ್ತದೆ..

ನಾನು ನನ್ನದು ನನ್ನಿಂದಲೇ... ಎನ್ನುವ ಈ ಕಾಲದಲ್ಲಿ ನಾವು ನಮ್ಮದು ನಮ್ಮಿಂದಲೇ ಅಲ್ಲ ಬದಲಿಗೆ ನಿಮ್ಮಿಂದಲೇ ಎನ್ನುತ್ತಾ "ನಲಿಯುತಾ ಹೃದಯ ಹಾಡನು ಹಾಡುವ" ಸ್ನೇಹಲೋಕದ ಮೃದು ಮನಸ್ಸುಗಳು ಒಂದು ಗೂಡಿನಲ್ಲಿ  ಕೂಡಲು ಶುರುವಾಗಿ ಐದು ಕಾರ್ತಿಕಗಳು ಆಗಿದ್ದವು (ಕಾರ್ತಿಕ ಮಾಸದಲಿ ದೀಪದ ಸಾಲುಗಳು ಸುಂದರ.. ಈ ಲೋಕದಲ್ಲಿ ಸ್ನೇಹದ ದೀವಿಗೆ ನೀಡುವ ಬೆಳಕು ಸುಂದರ.. ಹಾಗಾಗಿ ವಸಂತಗಳು ಅನ್ನುವ ಬದಲು ಕಾರ್ತಿಕ ಮಾಸ ಎಂದದ್ದು)

ಆ ಲೋಕದಲ್ಲಿ ಕಾಲಿಟ್ಟೊಡನೆ ಅರೆ.. ಆ ಅಣ್ಣ.. ಅರೆ ಈ ಬ್ರದರ್.. ಅರೆ ಅಕ್ಕ.. ಅರೆ ಸಿಸ್ಟರ್.. ಅರೆ ಸರ್ಜಿ.. ಹೀಗೆ ಮಧುರ ಬಾಂಧ್ಯವ ಉಕ್ಕಿ ಹರಿಯುತ್ತಿತ್ತು.. ಯಾಕೋ ಕಣ್ಣೆತ್ತಿ ನೋಡಿದೆ.. ಅಲ್ಲಿ ಹಾಕಿದ್ದ ಫಲಕ ನೋಡಿದೆ.. ತಲೆ ಅಲ್ಲಾಡಿಸೋಣ ಅಂದರೆ.. ಆಗಲೇ ಹೃದಯ ತುಂಬಿ ನಲಿದಾಡುತ್ತಿತ್ತು..

ಸ್ನೇಹದ ಜ್ಯೋತಿಯಲ್ಲಿ ಬೆಳಗುತ್ತಿರುವ ದೇವಾಲಯ

ಸ್ನೇಹಲೋಕದ ಸುಂದರ ಪರಿವಾರ ಸ್ನೇಹ ಜ್ಯೋತಿ ಆಶ್ರಮದಲ್ಲಿ ಐದನೇ ವಾರ್ಷಿಕೋತ್ಸವ ನಡೆಸಲು ನಿರ್ಧರಿಸಿದ್ದರು.. ಅದಕ್ಕೆ ಬೇಕಿದ್ದ ಸಿದ್ಧತೆಗಳು ಸಾಗಿದ್ದವು.. ಮಕ್ಕಳು ಸಂತಸದಿಂದ ಕುಣಿಯುತ್ತಿದ್ದವು.. ಅಣ್ಣಾ ಹಾಡು ಬೇಕು ಎನ್ನುತ್ತಿತು ಒಂದು ಮುಗ್ಧ ಮಗು.. ಹಾಕಿದಾಗ ತನ್ನಷ್ಟಕ್ಕೆ ತಾನೇ ಕುಣಿಯುತ್ತಿದ್ದವು..

ದೇವರನ್ನು ಹುಡುಕುವುದೇ ಬೇಡ.. ಇಲ್ಲಿ ಅನೇಕ ದೇವರುಗಳು ಓಡಾಡುತ್ತಿದ್ದವು ಮಕ್ಕಳ ರೂಪದಲ್ಲಿ.. ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ಮಕ್ಕಳು ಬಣ್ಣ ಬಣ್ಣದ ಪೋಷಾಕುಗಳಲ್ಲಿ ಕುಣಿಯುತ್ತಿದ್ದವು. ಹಾಡು ಕುಣಿತ ಮಕ್ಕಳೊಡನೆ ಬೆರೆವ ಆ ಸುಂದರ ಸಮಯ ಹೋದದ್ದು ಅರಿವಾಗಿದ್ದು ತಿಳಿಯಲೇ ಇಲ್ಲ..

"ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು ಮುಂದಿನ ಬದುಕು ಬಂದುರವೆನಿಸೋ ಗುರಿಸಾಧಿಸೋ ಕಂದ" ಎಂದು ಅಣ್ಣಾವ್ರು ಹಾಡಿದ ಹಾಗೆ ಪ್ರತಿ ಕಂದನಲ್ಲೂ ಏನೋ ಒಂದು ಸೆಳೆವ ಶಕ್ತಿ ಕಾಣುತ್ತಿತ್ತು.. ಅಲ್ಲಿ ಬಂದ ಎಲ್ಲಾ ಸಹೃದಯರು ಮಕ್ಕಳ ಸ್ಥಾನಕ್ಕೆ ಇಳಿದು ಅವರೊಡನೆ ಬೆರೆತು ಮಾತಾಡಿದ್ದು ಕುಣಿದದ್ದು.. ಊಟ ಮಾಡಿದ್ದು ವಿಶೇಷ. ಆ ದೇವರ ಪ್ರತಿನಿಧಿಗಳಿಗೆ ಯಾವುದೇ ರೀತಿಯಲ್ಲೂ ಕೀಳರಿಮೆ ಮೂಡದಂತೆ ಅವುಗಳ ಬೆನ್ನು ತಟ್ಟಿ ಮಿಕ್ಕವರ  ಹೃದಯವನ್ನು ತಟ್ಟುವ ಕಾರ್ಯವನ್ನು ಎಲ್ಲರೂ ಮಾಡುತ್ತಿದ್ದರು.. ಆ ಮಕ್ಕಳಿಗೆ ಗುರು ತೋರಿಸುವ.. ಗುರಿ ಕಾಣಿಸುವ .. ಮನಸ್ಸಿಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದರು.. ಮಕ್ಕಳಿಗೆ ಬೇಕಿರುವುದು ಬೆಳೆಸುವ ಕನಸು.. ಆ ಕನಸಿನ ಸಸಿಗೆ ನೀರೆರೆಯುವ ಕಾಯಕ ಸ್ನೇಹಲೋಕದ್ದು ಆಗಿತ್ತು ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿತ್ತು ..

ಈ ಲೋಕದಲ್ಲಿ ನಾ ಕಾಣದ ಸುಂದರ ಚಹರೆಗಳು ಅಪಾರವಾಗಿದ್ದರೂ.. ಶ್ರೀಕಾಂತಣ್ಣ.. ಎನ್ನುತ್ತಾ ಆತ್ಮೀಯವಾಗಿ ಬರಮಾಡಿಕೊಂಡ ಸ್ನೇಹಲೋಕದ ಬಳಗಕ್ಕೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು..

ಲೋಕದ ಸ್ನೇಹದ ಮಂದೇ!!!!

ಕಾರ್ಯಕ್ರಮ ಶುರುವಾಗಿದ್ದು ಬೆಂಗಳೂರು ಮುಂಬಯಿಗೆ ಬಸ್ಸಿನಲ್ಲಿ ಓಡಾಡುವಂತೆ ಓಡಾಡುವ ಶ್ರೀ ಅಶೋಕ್ ಶೆಟ್ಟಿಯವರಿಂದ ಸ್ವಾಗತ ಭಾಷಣದಿಂದ .. ನಂತರ ದೂರದೂರಿಗ ಸತೀಶ್ ನಾಯಕ್ ಅವರಿಂದ ಅತಿಥಿಗಳ ಕಿರು ಪರಿಚಯ.. ನಂತರ ರಮೇಶ್ ಅವರಿಂದ ಕಾರ್ಯಕ್ರಮದ ಕಿರು ಪ್ರಸ್ತಾಪ. ನಂತರ ಸ್ನೇಹಲೋಕದ ಸುಂದರ ಪರ್ಪಂಚಕ್ಕೆ ಅಡಿಗಲ್ಲನಿಟ್ಟ ಮಂಜು ಮತ್ತು ಸುಮನ.. ಜೊತೆಯಲ್ಲಿ ಜೇನಿನ ಗೂಡಿನಲ್ಲಿ ದುಡಿವ ಜೇನು ಮರಿಗಳಂತೆ ಇರುವ ಅಶ್ವಥ್, ಮಲ್ಲೇಶ್, ಮಹೇಶ್, ಪ್ರಾಣಪಕ್ಷಿ, ಸತೀಶ್ ಕನ್ನಡಿಗ ಹೀಗೆ ಹೇಳುತ್ತಾ ಹೋದರೆ ಜೇನು ಗೂಡಿನ ಹನಿಗಳನ್ನು ಲೆಕ್ಕ ಹಾಕಿದ ಹಾಗೆ ಅಸಂಖ್ಯಾತ..

ಈ ಲೋಕ ಸ್ನೇಹ ಲೋಕ 
ಅತಿಥಿ ಸ್ಥಾನದಲ್ಲಿ ಆಸೀನರಾಗಿದ್ದ ಪ್ರಕಾಶಣ್ಣ, ಆಜಾದ್ ಸರ್,  ಬಾಲೂ ಸರ್, ಮಣಿಕಾಂತ್ ಸರ್.. ತಮ್ಮ ತಮ್ಮ ಅನುಭವ  ಪ್ರಪಂಚದಲ್ಲಿ ನಮ್ಮನ್ನು ನಡೆಸುತ್ತಾ ಬಂದರು.. "ಮಕ್ಕಳಿಗೆ ಗುರಿ ತೋರಿಸಿದರೆ ಸಾಕು... ಚಿಕ್ಕ ಚಿಕ್ಕ ಆಸರೆ ನೀಡಿದರೆ ಸಾಕು.. ಬಳ್ಳಿ ಮರಕ್ಕೆ ಹಬ್ಬಿ ಮರವನ್ನು ತಬ್ಬಿ ಮರಕ್ಕೂ ಆಸರೆಯಾಗಿ ಅದರ ಜೊತೆಯಲ್ಲಿ ಹೂವು ಹಣ್ಣಿಗೂ ಆಸರೆಯಾಗಿ ಮುಂದಿನ ಪೀಳಿಗೆಗೆ ಜೊತೆಯಾಗಿ ನಿಲ್ಲುವಂತೆ ಈ ಮಕ್ಕಳು ನಿಲ್ಲುತ್ತಾರೆ... ಅವರು ಸಾಧಕರಾಗಲಿ ಎನ್ನುವ ಆಶಯ ಎಲ್ಲರಲ್ಲೂ ಇದೆ ಎನ್ನುವ ಅವರ ಕಿವಿವಾಣಿ ಮಾರ್ಧನಿಸುವಂತೆ ಇತ್ತು..

ನಗೆ ಲೋಕದ ಸ್ನೇಹದ ಸರದಾರರು!!!

ಆ ಮಕ್ಕಳ ಆಗಮನದ ವಿಷಯವೇ ಬೇಡ.. ನಾವೆಲ್ಲರೂ ಈ ವಸುಂಧರೆಯಲ್ಲಿ ಕೆಲವು ಕಾರಣಗಳಿಗೋಸ್ಕರ ಬಂದಿದ್ದೇವೆ.. ಆ ಕಾರಣ ಒಳ್ಳೆಯದೋ ಕೆಟ್ಟದೋ ಅದು ಬೇಡವೇ ಬೇಡ.. ಭಗವಂತನ ದೃಷ್ಟಿಯಲ್ಲಿ ಎಲ್ಲವೂ ಒಂದೇ.. ಆ ಮಕ್ಕಳ ಏಳಿಗೆಯಲ್ಲಿ ಒಂದು ಚಿಕ್ಕ ಅಳಿಲು ಸೇವೆ ನಮ್ಮದು ಎನ್ನುವ ಉದಾರ ಮನೋಭಾವ ಈ ಸ್ನೇಹಲೋಕದ ಹೃದಯವಾಣಿಯಾಗಿತ್ತು.

ಸ್ನೇಹ ಒಂದು ನೂಲಿನ ಹಾಗೆ.. ಸುತ್ತಿದಷ್ಟು ಬಂಧ ಬಿಗಿಯಾಗುತ್ತದೆ ಮಿಕ್ಕವರನ್ನು ಸೆಳೆಯುತ್ತದೆ..

ಸ್ನೇಹದ ಬಂಧನ.. ಹೀಗೆ ಇರುತ್ತದೆ 

ಒಂದು ಬಾರಿ ಸ್ನೇಹ ಲೋಕದ ಸರಪಳಿಯಲ್ಲಿ ಸಿಕ್ಕವರು ಸ್ನೇಹಕ್ಕೆ ನಿಷ್ಟರಾಗಿರುತ್ತಾರೆ.. ಅದುವೇ ಸ್ನೇಹದ ತಾಕತ್..

ಸ್ನೇಹಕ್ಕೆ ನಿಷ್ಠೆ ಈ ಲೋಕದ ಶಕ್ತಿ 
ಸುಂದರ ಭೋಜನ, ಹೊಟ್ಟೆ ತುಂಬಾ ಮಾತು, ಕಣ್ಣಲ್ಲಿ ನೀರು ಬರಿಸುವಷ್ಟು ನಗು, ಕದಡಿದ ಮಾನಸ ಸರೋವರ ಮತ್ತೆ ತಿಳಿಯಾಗಲು ಈ ಸುಂದರ ಭಾನುವಾರ ಸಹಕಾರಿಯಾಗಿತ್ತು..

ಇದಕ್ಕೆ ಸಾಕ್ಷಿ ಬೇಕೇ.. ನೋಡಿ ಈ ಕೆಳಗಿನ ಚಿತ್ರಗಳನ್ನು... ಪದಗಳು ಕಟ್ಟಿ ಕೊಡಲಾರದ ಕತೆಗಳನ್ನು ಈ ಚಿತ್ರಗಳು ಪೋಣಿಸಿಕೊಡುತ್ತಿವೆ.
ಆಲಯ ದೇವಾಲಯ ದೇವರುಗಳು ಇರುವ ಆಲಯ 

ಮಕ್ಕಳ ಗುರಿಗೆ zoom ಹಾಕಲೇ ಬೇಕು!!!

ಸುಂದರ ದಿನಕ್ಕೆ ಸಿಹಿಯ ಮಿಶ್ರಣ

ಮಕ್ಕಳ ದೃಷ್ಟಿ ಗುರಿಯತ್ತ

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಸಾಧನೆಯ ಕಡೆ ದೃಷ್ಟಿ!!! 

ನನ್ನ ಬೈಕಿನ ಹಾಗೆ ಅಲ್ಲಿನ ಎಲ್ಲಾ ಮಕ್ಕಳು ಕೂಡ ನಸು ನಗುತ್ತಾ ನಲಿದದ್ದು ಎಲ್ಲರ ಹೃದಯಗಳಲ್ಲಿ..  ಗೆಜ್ಜೆ ಕಟ್ಟಿ ಕುಣಿದ ಯಕ್ಷಗಾನ ಪಾತ್ರಧಾರಿಯ ಹಾಗೆ.. ಮನ ತುಂಬಿ ಬಂದಿತ್ತು.. ಮಕ್ಕಳ ಪ್ರತಿಭೆ ಅನಾವರಣ ಮಾಡುವ ಸುಂದರ ಕಾರ್ಯಕ್ರಮ ನಡೆದಿತ್ತು.. ತುಂಟ ನೃತ್ಯ, ಗಮನ ಸೆಳೆಯುವ ಸಮೂಹ ನೃತ್ಯ, ಸಾಧಕರಿಗೆ ದೃಷ್ಟಿ ಮುಖ್ಯ ಅಲ್ಲಾ.. ಸಾಧನೆಯ ಕಡೆಯಿರುವ ದೃಷ್ಟಿ ಮುಖ್ಯ ಎಂದು ಬಿಂಬಿಸುವ ಯೋಗಾಸನ..ಎಲ್ಲವೂ ಒಬ್ಬಟ್ಟು ತಿಂದಷ್ಟೇ ಸಂತೋಷವಾಗುತ್ತಿತು.

ಸ್ನೇಹಕ್ಕೆ ಅಂತರ ಬೇಡ.. ಕಾರಣಗಳು ಬೇಡ.. ಆ ಲೋಕದಲ್ಲಿ ಬೇಕಿರುವುದು ಕಣ್ಣಲ್ಲಿ ಇಣುಕುವ ಮಿಂಚು.. ಮೊಗದಲ್ಲಿ ಕಾಣುವ ಹಲ್ಲಿನ ಕೋಲ್ಮಿಂಚಿನ ನಗೆ.. ಹೃದಯದಲ್ಲಿ ಬೆಚ್ಚನೆ ಗೂಡು ಕಟ್ಟಿಕೊಳ್ಳುವ ಬಾಂಧ್ಯವ.

ಇವೆಲ್ಲ ಇರುವ ತಾಣ ಸ್ನೇಹಲೋಕ ತಾಣ.. ಅದಕ್ಕೆ ಈ ಲೋಕ ಸದಾ ನಂಬರ್ ಒನ್ ಲೋಕ

ಸ್ನೇಹ ಲೋಕ ಯಾವಾಗಲೂ ಒಂದು... !

ಎಲ್ಲಾ ಸ್ನೇಹ ಲೋಕ ತಾಣದ ಸದಸ್ಯರಿಗೆ ಅವರ ಅಹರ್ನಿಶಿ ಸೇವಾ ಮನೋಭಾವಕ್ಕೆ ಶಿರಸಾ ನಮಿಸಿ ಶುಭ ಹಾರೈಸುವೆ..

ಇಂಥ ಒಂದು ಲೋಕ ಹೀಗೆ ಇರುವುದೇ ಎನ್ನುವ ಪುರಾವೆ ಬೇಕೇ... ನೋಡಿ ಇಲ್ಲಿದೆ

ಈ ಲೋಕಕ್ಕೆ ಚಿನ್ಹೆ ಬೇಕೇ.. ಹುಡುಕಲೇ ಬೇಡಿ ಇಲ್ಲೇ ಇದೆ ನೋಡಿ 

ಒಂದು ಸುಂದರ ರವಿವಾರವನ್ನು ಕೊಟ್ಟ ನಿಮಗೆ ನನ್ನ _____________/\___

Sunday, June 8, 2014

DFR - "ಅಮ್ಮನ ಕೃಪೆ"..

ಕೆಲವೊಮ್ಮೆ ಹೀಗೂಮ್ಮೆ ಹಾಗೊಮ್ಮೆ ಅನ್ನಿಸುತ್ತದೆ..

ಆಲದ ಮರ ತನ್ನ ಬಿಳಲುಗಳನ್ನ ಭೂಮಿಗೆ ತಾಕಿಸಿ ಮತ್ತೊಂದು ಸಸಿಗೆ ಉತ್ಸಾಹ ತುಂಬುತ್ತದೆ.. ಅದರ ಮೂಲ ಹುಡುಕುತ್ತಾ ಹೋದರೆ ಮೂಲೆ ಮೂಲೆಯಲ್ಲೂ ಕಾಣೋದು ಬರಿ ಆತ್ಮ ವಿಶ್ವಾಸ, ಅಕ್ಕರೆ, ಮಧುರ ಮಧುರ ಸಿಹಿ ನೆರಳುಗಳು..

ಆ ಆಲದ ಮರದ ಬೆಚ್ಚನೆಯ ರೆಂಬೆ ಕೊಂಬೆಗಳಲ್ಲಿ ಕೂತು ಗಾನ ಲಹರಿ ಪಸರಿಸುವ ಹಕ್ಕಿ ಪಿಕ್ಕಿಗಳು ಹೇಳುತ್ತವೆ

ಓ ಮೈನಾ ಓ ಮೈನಾ, ಏನಿದು ಮಾಯೆ

ಮೋಡಗಳೆಲ್ಲಾ ಒಗ್ಗಟ್ಟಾಗಿ ನಿಂತು ಈ ಆಲದ ಮರಕ್ಕೆ ನೀರೆಯಲು ಸಜ್ಜಾಗಿದ್ದಾಗ.. ಅಲ್ಲಿಯೇ ಸುಯ್ ಎಂದು ಬೀಸುವ ಗಾಳಿ ಉಲಿಯುತ್ತದೆ

ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ

ಆ ಮಳೆಹನಿಗೆ ಕಾತುರದಿಂದ ಕಾಯುತ್ತಿರುವ ಭೂರಮೆಯ ಸಸ್ಯ ಸಂಕುಲಗಳು ಅರೆ ಈ ಕಾಯುವಿಕೆಯನ್ನು ಹೀಗೆ ಹಾಡಬಹುದೇ ಅನ್ನುತ್ತ ತಮ್ಮಲ್ಲೇ ಗುನುಗುನಿಸುತ್ತಾ ಇರುತ್ತವೆ...

ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ

ಸಸ್ಯ ಸಂಕುಲಗಳು.. ಪ್ರತಿ ಮರಳಿನ ಕಣಗಳನ್ನು ಜಪಿಸುತ್ತಾ.. ಪ್ರಾರ್ಥನೆಯೊಂದಿಗೆ ಹೇಳುತ್ತವೆ..

ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಆ ಪ್ರಾರ್ಥನೆಯಿಂದ.. ದೇವರ ಕೃಪೆಯಿಂದ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ

ಮಳೆ ಬಂತು, ಮರಳೆಲ್ಲ ಹೊನ್ನಾಯ್ತು.. ಪ್ರಾಣಿ ಪಕ್ಷಿಗಳ ಸಸ್ಯ ಸಂಕುಲಗಳ ಸಂತಸಕ್ಕೆ ಹಿನ್ನೆಲೆ ಸಂಗೀತ ಇದ್ದಿದ್ದರೆ ಎಂದು ಕಾತುರತೆಯಿಂದ ಕಾಯುತ್ತಾ ಕೂತಿದ್ದಾಗ.. ಅಶರೀರವಾಣಿ ಮೊಳಗುತ್ತದೆ..

ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ

ಕೊಳಲಿನ ನಾದಕ್ಕೆ ಮನ ಸೋಲದ ತನುವಿಲ್ಲ ಎನ್ನುವ ಹಾಗೆ.. ಆಕಾಶದಲ್ಲಿ ಹಾರುತ್ತಿರುವ ಅನುಭವ.. ಮನಸ್ಸು ಹೇಳುತ್ತದೆ

ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ನಾದಕ್ಕೆ ಮಾಧುರ್ಯಕ್ಕೆ ಮೈ ಮರೆತ ಬಳಗ.. ಕಣ್ಣು ಬಿಟ್ಟು ನೋಡಿದರೆ ಅಲ್ಲಿ ಸರಸ್ವತಿ ಲೋಕದ ಸಭಿಕರೆಲ್ಲಾ ತುಂಬಿದ್ದಾರೆ.. ಅರೆ ಇದೇನು ಮಾಯೆ.. ಶಾರದ ಲೋಕಕ್ಕೆ ಹೋಗೋಣ ಅಂದ್ರೆ.. ಶಾರದೆಯ ಲೋಕವೇ ಬಂದು ಬಿಟ್ಟಿದೆ... ಇದೆಂಥ ಮಾಯೆ.. ಓಹ್ ಇದು ಕೂಡ ಹೀಗೆ ಇರಬೇಕು ಅನ್ನುತ್ತಾ ನಾಲಿಗೆಯಲ್ಲಿ ಪದಗಳು ಹರಿದು ಬರುತ್ತಿವೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ಹೀಗೆ.....  ಒಂದು ಆಲದ ಮರ ತಾನಷ್ಟೇ ಬೆಳಯದೆ ತನ್ನ ಸುತ್ತ ಮುತ್ತಲು ಸಿಕ್ಕದ್ದನ್ನೆಲ್ಲ ಸೇರಿಸಿಕೊಂಡು ಬೆಳೆಯುವ ಹಾಗೆ .... ಆಶ್ರಯ ನೀಡುವ ಹಾಗೆ.. ನಮ್ಮೆಲ್ಲರ ಮಧ್ಯೆ ಇರುವ ಒಂದು ಆಲದ ಮರ ನಮ್ಮ DFR.- Devine Friend Roopa.
ತಾನು ಬೆಳೆದು.. ಇತರರನ್ನು ಬೆಳೆಸಿ.. ಅವರ ಬೆಳವಣಿಗೆಯಲ್ಲಿ ಸಂತಸಕಾಣುವ ಮನಸ್ಸು ಇವರದ್ದು..

ಏನೇ ಬರಲಿ.. ಹೀಗೆ ಇರಲಿ ... ಹೇಗೆ ಇರಲಿ.. 
೩ಕ ನನ್ನ ಬೆನ್ನ ಹಿಂದೆ.. 
ನಗು ನನ್ನ ಮುಂದೆ 

ಕಾಳಿಕಾ ಮಾತೆಯ ಮುಂದೆ ನಿಂತ ಕಾಳಿದಾಸನ ಹಾಗೆ...
ಇವರನ್ನು ಹೇಗೆ ಕರೆಯಲಿ...  ಕೂಗಲಿ ಎಂಬ ಗೊಂದಲ ಇದ್ದಾಗ.. ತಾಯಿಯನ್ನು ಮಗು ಹೇಗೆ ಕರೆದರೂ ಮಾತೆಗೆ ಸಂತೋಷವೇ ಅಲ್ಲವೇ ಎಂಧು ಮನಸ್ಸನ್ನು ಸಮಾಧಾನ ಪಡಿಸಿಕೊಂಡಿತು..

ಅಮ್ಮ ಎನ್ನುವ ಒಂದು ಪದವೇ ಶಕ್ತಿ ಕೊಡುತ್ತದೆ..  "ಅಮ್ಮನ ಕೃಪೆ"ಯಿಂದ ಮಣಿಕಟ್ಟಿನ ಮೇಲೆ ಮೂಡಿರುವ ಆ ಹೆಸರು ಇನ್ನಷ್ಟು ಭಾವ ಉಕ್ಕಿಸಲು ಅನುವು ಮಾಡಿಕೊಡುತ್ತದೆ.. ಮುದ್ದು ಪುಟಾಣಿ ಅಕ್ಕರೆಯ ಮೋಡಗಳ ಮಾಲೆ "ಮೇಘನ" ಇವರನ್ನು ಒಳಗೊಂಡ ಹಸಿರು ಉಸಿರಿಗೆ ಅನ್ವರ್ಥವಾಗಿರುವ ಹೆಸರು "ರೂಪ ಸತೀಶ್"..

"ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ" ಎನ್ನುವ 
ಅಣ್ಣಾವ್ರ ಹಾಡಿನಂತೆ ಹೃದಯದಲ್ಲಿದ್ದ ಮಮತೆ ಕರದಲ್ಲಿ ಮೂಡಿಬಂದಿದೆ.. . 

ಅಕ್ಷರಗಳು, ಅಕ್ಷರಗಳ ವಯ್ಯಾರ ಅದರಲ್ಲಿ ಇಣುಕುವ ಮಮತೆ .... 
ಜೀವನದಲ್ಲಿ ಕಷ್ಟಕ್ಕೆ ಸುಖಕ್ಕೆ ತಲೆಬಾಗುವುದನ್ನು ಕಲಿಸಿದ 
ಅಮ್ಮನ ಹೆಸರು ಮಡಿಸುವ ಭಾಗದಲ್ಲಿದ್ದರೆ ... 

ಜೀವನದಲ್ಲಿ ಬರುವ ಎಲ್ಲ ಸಾಧನೆಗಳಿಗೂ, ಪರೀಕ್ಷೆಗಳಿಗೂ ನೆಟ್ಟಗೆ 
ನಿಲ್ಲಬೇಕೆಂದು
 ಕಲಿಸುವ ಪಾಠ ಬಾಗುವುದಕ್ಕಾಗದ ಭಾಗದಲ್ಲಿದೆ.. 

ಕಲಿಸಿದ ಪಾಠ.... ಕಲಿಸುವ ಪಾಠ ಇವರೆಡರ ಮಧ್ಯೆ ನಿಲ್ಲುವುದೇ 
ಮಮತೆ, ಪ್ರೀತಿ, ಮಮಕಾರ.. ಅದರ ಚಿನ್ಹೆ ಅದರ ಮಧ್ಯೆ!

ಇವರ ಸಾಧನೆಯ ಒಂದು ಮಜಲು "ಅಮ್ಮನ ಕೃಪೆ".. ಸಂತಸ ನೆಮ್ಮದಿ ಸುಖ ಶಾಂತಿ ಎಲ್ಲವಕ್ಕೂ  ಅಮ್ಮನ ಕೃಪೆ ತವರೂರಾಗಿರಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಕುಟುಂಬದಿಂದ ಗೃಹಪ್ರವೇಶದ ಈ ಸಮಾರಂಭಕ್ಕೆ ಅಭಿನಂದನೆಗಳು..
"ರತ್ನ"ದ "ರಾಜ"ಮನೆತನದ ಅಂತರಂಗದಿಂದ ಅರಳಿದ 
"ರೂಪ" ರಾಶಿಯನ್ನು ನೋಡಿದ "ಮೇಘ"ಮಾಲೆ ಸುರಿಸಿತು 
ಆನಂದ ಭಾಷ್ಪ...
ಅದನ್ನು ಕಂಡ ಪರಶಿವ ಹರಸಿ ಪರವಶನಾದ 
ಆ ಕ್ಷಣವೇ ಆಯಿತು ತ್ರಿ"ವೇಣಿ" ಸಂಗಮ 
ರತ್ನದ ರೂಪದಲ್ಲಿ ಮೇಘ...!!! 
ಮೂರು ತಲೆಮಾರಿನ ಸುಂದರ ಹೂವುಗಳು...
ಇದಲ್ಲವೇ ಧನ್ಯತೆ ಎಂದರೆ...!! !ಸುಂದರ ಚಿತ್ರ ರೂಪ!!!

DFR ನಿಮ್ಮಂತಹ ಸಹೃದಯ ಮಿತ್ರರ ಸಂಖ್ಯೆ ಅಗಣಿತವಾಗಿರಲಿ... ಅವಿರತವಾಗಿರಲಿ..

ಸುಂದರ ಸಮಾರಂಭಕ್ಕೆ ಅಭಿನಂದನೆಗಳು!!!

Sunday, February 16, 2014

ನೆರಳಿನ ಸಾರಥ್ಯದಲ್ಲಿ ಬೆಳಕು ಬೀರಿದ ಸಂಜೆ

ಸ್ಟ್ಯಾಂಡ್  ನಿಲ್ಲಿಸಿದ್ದ ಬೈಕನ್ನು ತೆಗೆದಾದ  ಕಾರು ಮುಸಿ ಮುಸಿ ನಗುತ್ತಿತ್ತು.. ಕಾರಣ ಕೇಳಿದೆ ಕಾರು ಗುಟ್ಟು ಬಿಟ್ಟುಕೊಡಲಿಲ್ಲ.. ನೀನು ಹೋಗಿ ಬಾ ಶ್ರೀ ಆಮೇಲೆ ಗೊತ್ತಾಗುತ್ತೆ ಅಂದಿತು.

********
ಸರಿ.. ಇನ್ನೇನು ಮಾಡೋದು.. ಶ್ರೀವಿತಲ್ ಹೊರಟೆವು ನನ್ನ ನೆಚ್ಚಿನ ವಿಕ್ಟರ್ ಜೊತೆಯಲ್ಲಿ.  ಆಗಲೇ ಸಂಗೀತ ರಸಿಕರೆಲ್ಲ ಜಮಾಯಿಸುತ್ತ ಇದ್ದರು.  ಕೆಲವು ಪರಿಚಯದ ಚಹರೆಗಳು ಇನ್ನು ಕೆಲವು  ಆಗಬಹುದಾದ ಚಹರೆಗಳು. ಆಗ ತಾನೇ  ಮನೆಗೆ ಬಂದ ಮದುವಣಗಿತ್ತಿಯ ಹಾಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಸಭಾಂಗಣದ ಹತ್ತಿರ ಬಂದೆವು.  

ಪರಿಚಯವಿದ್ದ ಮುಖ ಪುಟದ ಗೆಳೆಯ ಗೆಳತಿಯರ ಉ.ಕು. ಸಾಂ. ವಿಚಾರಿಸಿ ಅಲ್ಲಿ ಇದ್ದ ಬಿಸಿ ಬಿಸಿ ಚಹವನ್ನು ಸವಿದು ಕಾರ್ಯಕ್ರಮಕ್ಕೆ ಕ್ಷಣಗಣನೆ ಎಣಿಸುತ್ತಾ ಕೂತಿದ್ದೆವು.. 

ಶುಕ್ಲಾಂ ಭರದರಂ.. ಕೋಗಿಲೆ ಕಂಠದ  ಚಿರಪರಿಚಿತ ಧ್ವನಿ ಮೊದಲಾಯಿತು.  ಗಣಪ ಜೊತೆಯಲ್ಲಿದ್ದಾಗ ಎಲ್ಲಾವೂ ಸುಗಮವೇ..ಅಲ್ಲವೇ... ಅದರಲ್ಲೂ ಕಾರ್ಯಕ್ರಮದ ರೂವಾರಿ ಸುಂದರ ನಗೆಯ ಸರದಾರ  ಸುನಿಲ್ ರಾವ್ ನಗುತ್ತಾ ನಗುತ್ತಾ ಕಾರ್ಯಕ್ರಮವನ್ನು ಶುರು ಮಾಡಿದ್ದು ಮುಂದಿನ ಕೆಲ ಘಂಟೆಗಳಿಗೆ ರಂಗೆರಿಸಿದ್ದು ಸುಳ್ಳಲ್ಲ. 

ಎದೆ ಬಡಿತ ಹೆಚ್ಚುತ್ತಾ ಇತ್ತು.. "ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು" ಆಹಾ ಕಾರ್ಯಕ್ರಮಕ್ಕೆ ಬಂದ ಸಾರ್ಥಕತೆಗೆ ಆಗಲೇ ಐವತ್ತು ಪ್ರತಿಶತ ತುಂಬಿಯಾಯಿತು ಎನಿಸಿತು ಮನಸ್ಸಿಗೆ.  ಹಾಡಿನಲ್ಲಿ ಬೇಕಿದ್ದ ತೀವ್ರತೆಯ ಸರಕು ಸಂಗೀತದಲ್ಲಿ, ಸಾಹಿತ್ಯದಲ್ಲಿ ಇದ್ದರೇ..  ಅದಕ್ಕೆ ಬೇಕಿದ್ದ ಚೌಕಟ್ಟು ಒದಗಿಸಿತ್ತು ಗಾಯನದ ಮೂಲಕ. 

ಎದೆ ಬಡಿತಕ್ಕೆ ಸಾಥ್ ನೀಡಿದ್ದು ಮನಸ್ಸು.. ಮನಸ್ಸು ಹುಚ್ಚು ಕುದುರೆ ಎನ್ನುತ್ತಾರೆ. ಆದರೆ ಅದು ಕೋಡಿ ಬಿದ್ದ ಕೆರೆಗಿಂತಲೂ ಇನ್ನು ಬಿರುಸು ಎನ್ನುವುದು "ಹುಚ್ಚು ಕೋಡಿ ಮನಸ್ಸು" ಎಂದು ಶುರುವಾಯಿತು.. ಹಾಡಿನ ಪದಗಳ ಲಾಲಿತ್ಯ, ಗಾಯನ ಅಮೋಘ ಸಂಗೀತ ಸಂಯೋಜನೆ ಎಲ್ಲವೂ ಆ ಹುಚ್ಚು ಮನಸ್ಸಿನ ಕುದುರೆಗೆ ಕಡಿವಾಣ ಹಾಕಲಾರದೆ ಸಂಗೀತವೆ ದೇವರು ಸಾಹಿತ್ಯವೇ ಅದರ ಪೂಜಾರಿ ಎನ್ನುವ ಮಾತನ್ನು ಪ್ರತಿಪಾದಿಸಿತು. 

ಹುಚ್ಚು ಕುದುರೆಯಾದ ಮನಸ್ಸಿಗೆ ಪ್ರಿಯತಮ(ಮೆ) ಸಖ್ಯ ದೊರೆತರೆ ಆಹಾ ಇಡ್ಲಿಗೆ ಚಟ್ನಿ ಸಿಕ್ಕಂತೆ... ಅಲ್ಲವೇ.. ಪ್ರಿಯ ಮನಸ್ಸನ್ನು ಮಧುವನದಲ್ಲಿ ಓಡಾಡಿಸಲು  ಬಂದೇ ಬಿಟ್ಟಿತು "ಪ್ರಿಯ ಮಧುವನದಲಿ ಕೂಡಾಡುವ ಬಾ" ಈ ಆಹ್ವಾನವನ್ನು ಬಿಡಲಾಗುತ್ತದೆಯೇ.. ಕುಣಿಯಲು ಆರಂಭಿಸಿತು ಮನಸ್ಸು.. 

ಆ ಮನಸ್ಸು ಸಂಜೆ ಆಕಾಶ ನೋಡುತ್ತಾ ನೀಲಿ ವರ್ಣವನ್ನು ತುಂಬಿಕೊಳ್ಳುತ್ತಾ ಆ ಗುಂಗಿನಲ್ಲಿ "ನಿಲೆ ನಿಲೆ ಅಂಬರ್ ಪರ್  ಚಾಂದ್ ಜಬ್ ಆಯೆ".. ಎಂದು ಹಾಡಲು ಶುರು ಮಾಡಿತು. ಆಹಾ ಸ್ವರ್ಗಕ್ಕೆ ಮೋರೆ ಗೇಣು..

ಆ ಸ್ವರ್ಗಕ್ಕೆ  ದಾರಿಯನ್ನು ಅಳತೆ ಮಾಡುವ ತಯಾರಿಯಲ್ಲಿದ್ದಾಗ "ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ" ಎಂಬ ಭಾವ ಅಡರುತಿತ್ತು. ಇದಕ್ಕಿಂತ ಒಳ್ಳೆಯ ಸ್ಪೂರ್ತಿದಾಯಕ ಕ್ಷಣ ಬೇಕೇ.. 

ಸ್ವರ್ಗ  ಸಿಕ್ಕೆ ಬಿಡುತ್ತೆ .. ಬರಿ ಮೂರು ಗೇಣು ದೂರ.. ಆದರೆ ಬೇಗನೆ ಸಿಗಬೇಕು ಎನ್ನುವ ತವಕ...  ರೆಕ್ಕೆ ಇದ್ದರೇ ಎಷ್ಟು ಚೆನ್ನ.. ಮನಸ್ಸಿಗೆ ಯಾಕೋ ಈ ಲಹರಿ ಇಷ್ಟವಾಯಿತು "ಪಂಕ್ ಹೊತಿ ತೋ ಉಡು ಆತಿರೇ " ಈ ಕನಸ್ಸು ನನಸಾದರೆ ಆಹಾ!

ಆ ಕನಸ್ಸು ನನಸಾಗಲೇ  ಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು.. ವಸುಂದರೆ ಅದಕ್ಕೆ ಸಹಕಾರ ನೀಡಲೇ ಬೇಕು.. "ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ ಮಾನವ ಕುಲವ ಕಾಯುವ ತಾಯೆ" ಎನ್ನುತ್ತಾ ತಾಯಿ ಭೂರಮೆಯನ್ನು ಸ್ಮರಿಸುತ್ತಾ ಅವಳ ಮನೋಭಾರವನ್ನು  ನಮಗೆ ನೀಡು ಬಾ ಒಂದು ಕೋರಿ ಕೊಳ್ಳುವ ಹಾಗೆ ಆಯಿತು!

ಹೌದು.. ಭೂರಮೆ ಸಿಂಗರಿಸಿಕೊಳ್ಳಲು ಹಸಿರ ಸೀರೆಯೇ ಬೇಕು.. ಇದನ್ನು ಬಣ್ಣಿಸಲು ಕವಿಯೂ ಬೇಕು ಅದರ ಆಳ ಅರಿಯಲು ವೇದಾಂತಿಯೂ ಬೇಕು.. ಅಲ್ಲವೇ ಇರಲಿ ಇರಲಿ "ವೇದಾಂತಿ ಹೇಳಿದನು ಹೊನ್ನೆಲ್ಲಾ ಮಣ್ಣು ಮಣ್ಣು ಕವಿಯೊಬ್ಬ ಸಾರಿದನು ಮಣ್ಣೆಲ್ಲಾ ಹೊನ್ನು ಹೊನ್ನು" ನೋಡುವ ನೋಟ ಆಡುವ ಮಾತು ಸಮರಸದಲ್ಲಿದ್ದರೆ ಜೀವನ.. ಸೊಗಸೇ ಸೊಗಸು.. 

ಜೀವನ ಸೊಗಸಾಗಬೆಕಾದರೆ ಜೀವನದ ಜೊತೆಯಲ್ಲಿ ಸಂಗಾತಿ ಬೇಕೇ ಬೇಕು..  ಅಕ್ಕ ಪಕ್ಕದ ಊರುಗಳನ್ನೆಲ್ಲ ನೆನೆದು ಪ್ರತಿಯೊಂದು ಊರಿನಲ್ಲೂ ಸಂಭ್ರಮ ಪಡಬೇಕಾದರೆ.. "ಚಿಕ್ಕಮಿ ಕೇಳ್  ದೊಡ್ದಮಿ ಕೇಳ್ ಚಿಕ್ಕಮಿ ಮದುವೆ ಒಂದಾಗುತೈತೆ" ಅಂತ ಊರಿಗೆ ಊರನ್ನೇ ಕರೆಯಬೇಕು ಎಂದು ಹೊರಟಿತು.. 

ಊರಿಗೆ ಊರನ್ನೇ ಕರೆಯುವಾಗ ಊರನ್ನೇ ಕಾಪಾಡುವ ರಕ್ಷಕರನ್ನು ಕರೆಯಲೇ ಬೇಕು.. ಅದಕ್ಕೆ " ಓ ನನ್ನ ದೇಶ ಭಾಂದವರೇ" ಎನ್ನುತ್ತಾ ಅವರ ಗುಣಗಾನ ಮಾಡುತ್ತಾ ಅವರ ಸಾಧನೆಗಳನ್ನು ಮೆಲಕು ಹಾಕುತ್ತಾ ಹಾಕುತ್ತಾ "ಫೂಲೊಂಕೆ ರಂಗ್ ಸೆ ದಿಲ್ ಕಿ ಕಲಂ ಸೆ" ಎನ್ನುತ್ತಾ ಅವರನ್ನೆಲ್ಲ ನೆನೆಯಲೇ ಬೇಕು ಎಂದಿತು ಮನಸ್ಸು 

ಮನಸ್ಸು ನೆನೆದಾಗ ಸಮುದ್ರದ ಮೇಲೆ ಹರಿಹಾಯುತ್ತಾ ಸಾಗುವ ಟೈಟಾನಿಕ್ ನೌಕೆಯ ತುತ್ತ ತುದಿಯಲ್ಲಿ ನಿಂತು ಅದರ ಸಂಗೀತ ಸವಿಯುತ್ತಾ "everynight in the dream" ಎಂದು ಹಾಡುತ್ತಾ ಆ ತರಂಗಗಳ ಸ್ಪರ್ಶ ಸಿಕ್ಕಾಗ ಅದರ ಸೊಗಸೇ... ಆಹಾ ಅದನ್ನು ಹೇಳಬಾರದು.. ಅಲ್ಲವೇ 

ಮನಸ್ಸಿನ ಅಂಗಳಕ್ಕೆ  ರಂಗೋಲಿ ಇಡುವಾಗ ಹಸೆ ಪದಗಳನ್ನು ಹೇಳುತ್ತಾ ಸಾಗಿದರೆ ಅಂಗಳವೆಲ್ಲಾ ರಂಗವಲ್ಲಿಯೆ.. ಆ ರಂಗವಲ್ಲಿಯ ಹಾಗೆ ಬರೆವ ಜಪಾನಿ ಮಾತುಗಳು.. ಅವರ ಹಾಡಿನ ತುಣುಕುಗಳು...  ಬೇರೆಯದೇ ಆದ ಒಂದು ಮುಗ್ಧ ಮಗುವಿನ ಸಾಮ್ರಾಜ್ಯಕ್ಕೆ ಹೊಕ್ಕು "ಬಾಳ ಒಳ್ಳೆ ನಮ್ಮಿಸ್ಸು" .. ಎಂದು ಕುಣಿವ ಮಗುವಾಗಿಬಿಡುತ್ತೇವೆ.. 

ಮಗುವಿನ ಮನಸ್ಸು ನಮ್ಮದಾದರೆ.. ದೂರದಲ್ಲಿ ಕಾಣುವ ಅಥವಾ ಕಂಡೆ ಎಂಬ ಭ್ರಮೆ ಹುಟ್ಟಿಸುವ ಗುಡ್ಡದ ಭೂತ "ತಂದಾನ ತಂದಾನ" ಎನ್ನುತ್ತಾ ತಕ ತಕ ಕುಣಿಸುತ್ತದೆ ನಮ್ಮ ಮನಸ್ಸನ್ನು.. 

ಕುಣಿವ ಮನ ಹಳೆಯ ನೆನಪನ್ನು ಮೆಲುಕು ಹಾಕುತ್ತಾ "ಬಾರೆ ಬಾರೆ ಚಂದದ ಚೆಲುವಿನ ತಾರೆ" ಎಂದು ಹಾಡಲು ಬಯಸಿದರೆ.. ಎದುರಿಗೆ ಕಾಣುವ ನಿಜಾಂಶ "ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದ್ಯವ್ವ ನಿನ ಕಂಡು ನಾನ್ಯಾಕೆ" ಎಂದು ಮಮ್ಮಲ ಮರಗುತ್ತದೆ.. ಅಮಲಿನಲ್ಲಿ ಹೂತು ಹೋದ ಮನಕ್ಕೆ "ಆವೋ ಹುಜೂರು  ತುಮ್ಕೋ ಸಿತಾರೋ ಮೇ" ಎನ್ನುತ್ತಾ ಸಾಂತ್ವನ ನೀಡುತ್ತದೆ.. 

ಸಾಂತ್ವನ ನೀಡುವಾಗ ನಗು ಬೇಕೇ ಬೇಕು "ಕಿಸೀಕಿ ಮುಸ್ಕುರಾಹತೊಂಸೆ ಓಹ್ ನಿಸಾರ್" ಎನ್ನಲೇ ಬೇಕು ಅನ್ನಿಸುವಂತೆ ದೂರ ದೂರ ಸಾಗುತ್ತಿರುವ ಮನಕ್ಕೆ "ತೊರೆದು ಹೋಗದಿರು ಜೋಗಿ.. "ಎನ್ನುತ್ತಾ ಕೂಗಿ ಕೂಗಿ ಕರೆಯುತ್ತದೆ.. 

ದೂರ ಸಾಗುತ್ತಿದ್ದ ಮನಸ್ಸು ಕಳೆದ ಪ್ರತಿ ಕ್ಷಣವನ್ನು ನೆನೆಯುತ್ತಾ "ಪಲ್ ಪಲ್ ದಿಲ್ ಕೆ ಪಾಸ್ ತುಮ ರೆಹತಿಹೊ" ಎನ್ನುತ್ತದೆ.. ಆದರೆ ಕಳೆದು ಹೋಗಲು ಸಿದ್ದವಿರುವ ಮನಸ್ಸು ಆ ಕಾಲವನ್ನು ಬಯುತ್ತಾ "ವಕ್ತ್ ನೆ ಕಿಯ" ಎನ್ನುತ್ತಾ ತಾನು ಪ್ಯಾಸ ಪ್ಯಾಸ ಎಂದು ಚೀರುತ್ತದೆ.. 

ಇಷ್ಟಾಗುವ ಹೊತ್ತಿಗೆ ಮನಸ್ಸಿಗೆ ಅರಿವಾಗುತ್ತದೇ ತಾನು ಮಾಡಲು ಹೊರಟ ತಪ್ಪು ಏನೆಂದು ತನಗೆ ತಾನೇ ಎಚ್ಚರಿಕೆ ಕೊಡುತ್ತಾ "ಜೋಕೆ ನಾನು ಬಳ್ಳಿಯ ಮಿಂಚು.. ಹಲೋ ಹಲೋ ನಿಲ್ಲುವೆ ಎಲ್ಲೋ.. ದೂರದಿಂದ ಬಂದ ಸುಂದರಾಂಗ" ಎನ್ನುತ್ತಾ ಮತ್ತೆ ತನ್ನ ಗೂಡಿಗೆ  ಮರಳುತ್ತದೆ.. 

*******

ಅರೆ ಇದೇನು ಎಲ್ಲೋ ಹೊರಟ ಮನಸ್ಸು ಏನೋ ಮಾಡಲು ಹೊರಟ ಮನಸ್ಸು ಮತ್ತೆ  ಮರಳಿ ಗೂಡಿಗೆ ಬಂತೆ ಎನ್ನುವ ಕುತೂಹಲ ಸಹಜ.. ಇರಲಿ ಇರಲಿ ಮನಸ್ಸು ಒಂದು ಮರ್ಕಟ ಎಂದು ಹೇಳುತ್ತಾರೆ ಆದರೂ ಆ ಮರ್ಕಟಕ್ಕು ಮನಸ್ಸು ಇರುತ್ತದೆ ಹಾಗೆಯೇ ಬಾಲವೂ ಇರುತ್ತದೆ.. ಆ ಬಾಲ ಬೆಳೆಸಿಕೊಂಡು ಅದನ್ನೇ ಆಸನ ಮಾಡಿಕೊಂಡರೆ ಮನಸ್ಸು ನಮ್ಮ ಅಂಕೆಯಲ್ಲಿ.. 

                                               *******

ಏನಪ್ಪಾ ಕೊರೆತ ಅಂದುಕೊಂಡಿರಾ..  ಕೆಲಸದ ಒತ್ತಡದಿಂದ ದಣಿದ ಮನಸ್ಸಿನ ನೆರಿಗೆಗಳನ್ನು ನಿವಾರಿಸಿಕೊಳ್ಳಲು ಒಂದು ಸುಂದರ ಶನಿವಾರದ ಸಂಜೆಯನ್ನು  ಸುಮಧುರವಾಗಿ ಕಳೆಯಬೇಕು ಎನ್ನುವ ಆಸೆಗೆ ನೀರೆರೆದು ಪೋಷಿಸಿದ್ದು ಚಿರಂತನ್ ಕುಟುಂಬ ಹಾಗೂ ಉಷಾ ಉಮೇಶ ಮೇಡಂ. 

ಹೌದು ಕರುನಾಡಿನ ಹೆಮ್ಮೆಯ ಗಾಯಕಿ ಖ್ಯಾತ ಪ್ರತಿಭಾ ಶೋಧಕ ಅಮೋಘ ನಿರ್ದೇಶಕ ಪುಟ್ಟಣ್ಣ ಹಾಗು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಅವರ ಹೆಮ್ಮೆಯ ಕಾಣಿಕೆ ಶ್ರೀಮತಿ ಬಿ ಆರ್ ಛಾಯ ಅವರ ಛಾಯಗೀತ್ ಕಾರ್ಯಕ್ರಮ ಇದೆ ಶನಿವಾರ ೧೫ನೆ ಫೆಬ್ರುವರಿ ೨೦೧೪ ರಂದು ಹನುಮಂತನಗರದ ಕೆ ಎಚ್ ಸೌಧದಲ್ಲಿ ಆಯೋಜಿಸಲಾಗಿತ್ತು.   

ಚಿತ್ರ ಕೃಪೆ - ಶ್ರೀ  ಸುನಿಲ್ ರಾವ್ 

ಸುಂದರ ಸಂಗೀತ ಅಲೆಯಲ್ಲಿ ತೇಲಿಸಲು ಶ್ರೀಮತಿ ಬಿ ಆರ್ ಛಾಯ, ಶ್ರೀ ಪದ್ಮಪಾಣಿ, ಶ್ರೀ ರಘು, ಶ್ರೀ ಸಂದೀಪ್, ಶ್ರೀ ರವಿ ಜೊತೆಯಲ್ಲಿ ವಾದ್ಯ ವೃಂದ ಸಿದ್ಧರಿದ್ದರು. ಸರಿ ಇನ್ನೇನು ಬೇಕು.. ಸುಮಧುರ ಹಾಡುಗಳು ಅದರ ಮಧ್ಯದಲ್ಲಿ ಸುರಾ ಸುಂದರ ಶ್ರೀ ಸುನಿಲ್ ರಾವ್ ಅವರ ಪುಸ್ತಕ ಬಿಡುಗಡೆ.. ಹೃದಯಸ್ಪರ್ಶಿಸುವ ಮನಸ್ಸುಳ್ಳ ಹಿರಿಯರನ್ನು, ಸ್ನೇಹಿತರನ್ನು ಗೌರವಿಸಿದ್ದು ಒಂದು ಸುವರ್ಣ ಘಳಿಗೆಗಳಿಗೆ ಸಾಕ್ಷಿಯಾಗಿತ್ತು ಅಂದಿನ ಸಭಾಂಗಣ. 

*******
  
 ಸುಂದರ ಕಾರ್ಯಕ್ರಮ ಮುಗಿಸಿಕೊಂಡು ಹೊರಗೆ ಬಂದೆ.. ನನ್ನ ಪ್ರೀತಿಯ ವಿಕ್ಟರ್ ಮೇಲೆ ಕುಳಿತು.. ಸರಿ ಹೋಗೋಣ ಅಂದೇ.. ನನ್ನ ಮನದಲ್ಲಿ  ಹಾಡಿನ ಗುಂಗು ಇನ್ನು ಇತ್ತು ಆದರೆ ಮನೆಯನ್ನು ತಲುಪಬೇಕು ಎನ್ನುವ ತವಕವಿತ್ತು.. ಬೈಕನ್ನು ಒಮ್ಮೆ ತಡವರಿಸಿದೆ.. ಶ್ರೀ ತಲೆ ಇನ್ನು ಗುಯ್ ಅಂತಾ ತಿರುಗುತ್ತಲೇ ಇದೆ.. ಒಮ್ಮೆ ನನ್ನ ಬಿಡು ನೋಡೋಣ.. ಎಂದಿತು.. 

ಸರಿ ಬಿಟ್ಟೆ.. ಕಿರ್ ಕಿರ್ರ್ ಕಿರ್ರ್ರ್ ಶಭ್ಧ ಮಾಡುತ್ತಾ ಮೆಲ್ಲನೆ ಜಾರಿತು ರಸ್ತೆಯ ಮೇಲೆ.. ನಮ್ಮ ಮೂವರಿಗೆ ಏನು ಅಪಾಯ ಆಗಲಿಲ್ಲ.. ಆದರೆ ಕಾರು ಏಕೆ ಮುಸಿ ಮುಸಿ ನಕ್ಕಿತು ಎಂದು ಅರಿವಾಯಿತು.. ಬೈಕ್ಗೆ ಎರಡೇ ಕಾಲು.. ಸಂಗೀತ ಸಾಹಿತ್ಯದ ಅಮಲಿನಲ್ಲಿ ತಲೆ ಸುತ್ತಿತ್ತು ಅಂದರೆ ಬಿದ್ದು ಬಿಡುತ್ತದೆ.. ಅದನ್ನೇ ನೆನೆದು ಎಚ್ಚರಿಕೆ ಕೊಟ್ಟು ಕಾರು ಮುಸಿ ಮುಸಿ ನಕ್ಕಿದ್ದು!!!!!

*********  

ವಿಶೇಷ ಸೂಚನೆ "ದಪ್ಪವಾಗಿ ಬಣ್ಣ ತುಂಬಿದ ಸಾಲುಗಳೆಲ್ಲ ಶ್ರೀಮತಿ ಛಾಯಾ ತಂಡದವರು ಹಾಡಿದ ಮೊದಲ ಸಾಲುಗಳು. 

ಕಾರ್ಯಕ್ರಮದ ಕೆಲವು ತುಣುಕುಗಳು

೧. ಶ್ರೀ ಸುನಿಲ್ ರಾವ್ ಅವರ ಸುಲಲಿತ ನಗುಮೊಗದ ಮಾತುಗಳು ಮತ್ತು ತುಂತುರು ಮಳೆ ಹೊರಡಿಸುವ ನಾದದಂತೆ ಸುಮಧುರ ಅವರ ಧ್ವನಿ

೨. ಶ್ರೀ ಪದ್ಮಪಾಣಿ ಅವರ ನೇರ ಹಾಸ್ಯ ಮಾತುಗಾರಿಕೆ 

೩. ಉತ್ತಮ ರೀತಿಯಲ್ಲಿ ಆಯೋಜಿಸಿದ್ಧ ಕಾರ್ಯಕ್ರಮ ಮತ್ತು ಅದರ ರೂವಾರಿಗಳ ಪರಿಶ್ರಮ 

೪. ಇಂತಹ ಕಾರ್ಯಕ್ರಮಗಳನ್ನು ಅವಾಗವಾಗ ನೋಡಲೇ ಬೇಕು ಎನ್ನುವ ತವಕ ಹುಟ್ಟಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ 


Friday, January 17, 2014

ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ!!!

ಕಪಾಟಿನಲ್ಲಿದ್ದ ಪುಸ್ತಕಗಳು ಕಣ್ಣು ಮಿಟುಕಿಸುತ್ತಿದ್ದವು...

ದೇವರ ಕೋಣೆಯಲ್ಲಿ ಪಟಗಳಲ್ಲಿ, ಫ್ರೇಮ್ಗಳಲ್ಲಿ, ವಿಗ್ರಹ ರೂಪಗಳಲ್ಲಿ ಇದ್ದ ದೇವಾನುದೇವತೆಗಳು ತೋಳನ್ನು ಮೇಲೇರಿಸಿ ಕಾಯುತ್ತಿದ್ದವು..

ಅವರುಗಳೆಲ್ಲ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು..

"ಈ ಕಾಂತನಿಗೆ ಬೇರೆ ಏನು ಕೆಲಸ ಇಲ್ಲ ಅನ್ನಿಸುತ್ತೆ.. ಹಾಯಾಗಿ ಭಕ್ತರ ಉದ್ಧಾರ ಮಾಡುತ್ತಾ ಕುಳಿತವರನ್ನು ತನ್ನ ಡ@##@@@ ವಿಚಿತ್ರ ಲೇಖನಗಳಲ್ಲಿ ಎಳೆದುತಂದು ಯುಗಯುಗಳಲ್ಲೂ ಅಪರೂಪಕ್ಕೆ ಸೇರದ ನಮ್ಮನ್ನು ಎಳೆದಾಡಿ ಕೂರಿಸುತ್ತಾನೆ.."

ಅಲ್ಲೇ ಕಪಾಟಿನಲ್ಲಿದ್ದ ಪುಸ್ತಕ ಹಲ್ಲು ಬಿರಿಯುತ್ತಾ

 "ಹೌದು ದೇವ್ರೇ.. ನಮ್ಮೊಡಲಲ್ಲಿ ಅಡಗಿರುವ ಕಥೆಗಳನ್ನು ಯಾವ ಯಾವ ಪುಟಕ್ಕೋ ಸೇರಿಸಿ...  ಬೆಸುಗೆ ಹಾಕಿ ನಿಮ್ಮನ್ನು ಕರೆದುತಂದು ಸುಮ್ಮನೆ ತಲೆಗೆ ಹುಳ ಬಿಡ್ತಾನೆ.. ಅದಕ್ಕೆ ನೋಡು ಇವತ್ತು ಎಲ್ಲಾ ಕಥೆಗಳನ್ನು  ಗಟ್ಟಿಯಾಗಿ ಹಿಡಿದು ಕೊಂಡುಬಿಟ್ಟಿದೀನಿ... ಓಹ್ ನೀವುಗಳು ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಬಿಟ್ಟಿದ್ದೀರ.. ಒಳ್ಳೆಯದು ಇವತ್ತು ಅವನಿಗೆ ನಾವ್ಯಾರು ಜಗ್ಗೋಲ್ಲ ಅಂತ ತೋರಿಸಬೇಕು.. ಪಾಪ ಅವನ ಓದುಗರಿಗೆ ತಲೆ ಕೆಟ್ಟು ಹೋಗಿದೆ.. "

ಒಯೆ,,, ಆಗಲೇ ಹನ್ನೊಂದು ಘಂಟೆಯಾಯಿತು..ಇನ್ನು ಸ್ವಲ್ಪ ಹೊತ್ತು ತನ್ನ ಲ್ಯಾಪ್ಟಾಪ್ ತಗೆಯುತ್ತಾನೆ.. ಹುಷಾರು ಯಾರೂ ಸದ್ದು ಮಾಡಬೇಡಿ.. ನೋಡೋಣ ಅದೇನು ಕಿಸಿಯುತ್ತಾನೆ ಈ ಸಾರಿ...!

******** 
"ಅರೆ ಏನಿದು ಇಂದು..

ಯಾಕೆ...

ಛೆ

ಏನಾಗುತ್ತಿದೆ..

ಯಾಕೋ..

ತಲೆಗೆ ಹೊಳಿತಾನೆ ಇಲ್ಲಾ..

ಅದು ...

ಅಲ್ಲಾ..

ಪ್ಸೆ

"ದೇವಾ ಏನಿದು ನಿನ್ನ ಲೀಲೆ.. ಇಂದು ತನ್ನ ಬಳಗವನ್ನೇ ನಗೆಗಡಲಲ್ಲಿ ಮೀಯಿಸುವ ಪ್ರಕಾಶಣ್ಣನ ಹುಟ್ಟು ಹಬ್ಬ.. ಅವರ ಹುಟ್ಟು ಹಬ್ಬಕ್ಕೆ ಏನಾದರೂ ಬರೆಯೋಣ ಅಂದ್ರೆ ... ಪುಸ್ತಕಗಳ ಒಂದು ಹಾಳೆಯನ್ನು ತೆರೆಯಲಾಗುತ್ತಿಲ್ಲ.. ದೇವರುಗಳು ಪ್ರತ್ಯಕ್ಷವಾಗುತ್ತಿಲ್ಲ.. "ರಂಗನಾಥಸ್ವಾಮೀ ಆರು ತಿಂಗಳ ಹಿಂದೆ ಎದ್ದು ಕೂತಿದ್ದವರು ಮತ್ತೆ ಮಲಗಿಬಿಟ್ಟಿದ್ದಾರೆ.. ಏನು ಮಾಡಲಿ ನಾನು ಹೇಗೆ  (ಏನು) ಬರೆಯಲಿ... "

ಯೋಚಿಸುತ್ತಾ ಕುಳಿತಿದ್ದೆ.. ಹೊತ್ತು ಸಾಗುತ್ತಿಲ್ಲ..

ಆಗ ಎಲ್ಲಿಂದಲೋ ಒಂದು ಇಟ್ಟಿಗೆ ಹಾರಿ ಬಂತು..  ಆ "ಇಟ್ಟಿಗೆ"ಯನ್ನು ಸೂಕ್ಷವಾಗಿ ಗಮನಿಸಿದೆ... ಅದಕ್ಕೆ ಸಿಮೆಂಟಿಂ(ಟಿಂ)ದ ಸ್ನಾನವಾಗಿತ್ತು.. ಅದರ "ಛಾಯ ಚಿತ್ತಾರ"ವನ್ನು ನೋಡೋಣ ಎಂದು ದರ್ಪಣದ ಮುಂದೆ ನಿಂತೇ...

ನನ್ನ ಮುಖ ನೋಡುತ್ತಲೇ "ಆ ಅವರಾ .

"ಹೊತ್ತು ಹೋಗದ ಕಥೆ"ಗಳನ್ನು ಬರೆಯುವ .. ಅವರು ನನಗೆ "ಹೆಸರೇ ಬೇಡಾ" ಎನ್ನುತ್ತಾರೆ...


ತುಂಬಾ ಬಲವಂತ ಮಾಡಿದರೆ.. "ಹೋಗ್ರಿ ಹೋಗ್ರಿ "ಇದೆ ಅದರ ಹೆಸರು" ಅನ್ನುತ್ತಾರೆ..

ಸಿಹಿಯಾಗಿ ಗದರುತ್ತಾ ಏನ್ ಸಾರ್ ಜೋಕ್  ಮಾಡ್ತೀರಾ ಹೆಸರು ಹೇಳ್ತಿರೋ ಇಲ್ವೋ ಅಂದ್ರೆ

"ತಮ್ಮಯ್ಯ.. "ಇದರ ಹೆಸರು ಅದಲ್ಲಾ" ಎನ್ನುತ್ತಾರೆ....

ಚಕ್ರವ್ಯೂಹದಂತೆಯೇ ಸುತ್ತಿ ಸುತ್ತಿ ನಗಿಸುತ್ತಾ ಇರುತ್ತಾರೆ.. "

*****************
ಪುಸ್ತಕಗಳು.. ಕಪಾಟುಗಳು.. ಕೋಣೆಯಲ್ಲಿದ್ದ ದೇವರುಗಳು ಕುಣಿದಾಡತೊಡಗಿದವು.. ಹುರ್ರ.. ಕಾಂತನಿಗೆ ಹುಚ್ಚು ಹಿಡಿಸುತ್ತಿದ್ದೇವೆ.. ನೋಡಿ ಪುಸ್ತಕಗಳು ಇಲ್ಲಾ.. ದೇವರು ಇಲ್ಲ ಏನೇನೂ ಬರೆಯುತ್ತಾ ಇದ್ದಾನೆ... ಹ ಹ ಹ ಹ ಹ.... ಮನೆಯಲ್ಲಿ ನಗುವಿನ ಹೊಳೆ ಹರಿಯುತ್ತಿತ್ತು..

ಅಷ್ಟರಲ್ಲಿ..  ಟ್ರಿಂಗ್ ಟ್ರಿಂಗ್ ಟ್ರಿಂಗ್.. ಮನೆಯ ಕರೆಘಂಟೆ ಕೂಗುತ್ತಿತ್ತು..

"ಶ್ ಶ್.... ಸದ್ದು ಬೇಡಾ ಸದ್ದು ಬೇಡಾ.. ಯಾರೋ ಬರ್ತಾ ಇದಾರೆ... ಎಲ್ಲರೂ ನಿಮ್ಮ ನಿಮ್ಮ ಕಪಾಟು.. ಕೋಣೆ ಸೇರಿಕೊಳ್ಳಿ.. "

*********
 ಕಾಂತ ಬಾಗಿಲು ತೆಗೆದ...

ಕಣ್ಣಲ್ಲಿ ಆನಂದಭಾಷ್ಪ.. ಮನೆಯ ರೇಡಿಯೋದಲ್ಲಿ ...

"ನಿಮ್ಮ ಸ್ನೇಹಕೆ ನಾ ಸೋತು ಹೋದೆನು.. ಎಲ್ಲಾ ದೇವರಾ ನಾ ಬೇಡಿ ಕೊಂಡೆನು.. ದೇವರ ಒಲವೋ ಪುಣ್ಯದ ಫಲವೋ ಕಾಣೆನು.. ನಿಮ್ಮ ನಾ ಪಡೆದೆನು" ಹಾಡು ಬರುತ್ತಿತ್ತು

"ಪ್ರಕಾಶಣ್ಣ.. ನೀವು ನಮ್ಮ ಮನೆಗೆ.. ವಾಹ್ ನನಗೆ ನಂಬೋಕೆ  ಆಗ್ತಾ ಇಲ್ಲ.. ನೋಡಿ ಪುಸ್ತಕಗಳು.. ದೇವರುಗಳು ನಗುತ್ತಿವೆ... ಪ್ರತಿ ಸಾರಿ ನಾ ಕರೆದಾಗೆಲ್ಲ ಬಂದು ಬಂದು ನಿಂತು ಸುಸ್ತಾಗಿವೆ ಅಂತ ಹೇಳ್ತಾ ಇವೆ.. " ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು...

ರೇಡಿಯೋದ ಹಾಡು

"ಏನು ಮಾಡಲಿ ನಾನು ಹೇಗೆ ಹೇಳಲಿ.. " ಜೋರಾಗಿಯೇ ಕೇಳುತ್ತಿತ್ತು..

"ತಮ್ಮಯ್ಯ..ಅದಕ್ಕೆ ಯಾಕೆ ಯೋಚನೆ.. ಆ ಪುಸ್ತಕಗಳು.. ಕೋಣೆಯಲ್ಲಿರುವ ದೇವರುಗಳು ಬರದೆ ಇದ್ದರೆ ಏನಂತೆ ... ನೋಡಿಲ್ಲಿ ಪ್ರಪಂಚದ ಸಕಲ ಸಮಸ್ಯೆಗಳಿಗೂ ಪರಿಹಾರ ತುಂಬಿಕೊಂಡಿರುವ ಈ ಗ್ರಂಥ ನಿನಗಾಗಿ ತಂದಿರುವೆ.. ಓದು ನಲಿ ಇನ್ನಷ್ಟು ಬರಿ.. ನಿನಗೆ ಶ್ರೀಕೃಷ್ಣ ಸದಾ ಸ್ಪೂರ್ತಿ ಎನ್ನುವೆ.. ತಗೋ ಆ ಸ್ಫೂರ್ತಿಯ ಮಹಾಭಾರತ ನಿನಗಾಗಿ..ಈ ಗ್ರಂಥದಲ್ಲಿ ಇಲ್ಲದೆ ಇರುವುದು ಜಗತ್ತಲ್ಲಿ ಇಲ್ಲ.. ತಗೋ ತಮ್ಮಯ್ಯ.. ಇದು ಒಂದು ಪುಸ್ತಕ ಇದ್ದರೆ ನಿನ್ನ ಬಳಿ ಎಲ್ಲವೂ ನಿನ್ನ ಎದುರಲ್ಲೇ ನಿಲ್ಲುತ್ತದೆ.. "

ಕಣ್ಣು ಮಂಜಾಯಿತು.. ವರೆಸಿಕೊಂಡೆ.. ಸಮಯ ನೋಡಿದೆ ... ಅರೆ ಮಧ್ಯ ರಾತ್ರಿ ಹನ್ನೊಂದು ಘಂಟೆ ಐವತ್ತ ಒಂಬತ್ತು ನಿಮಿಷ.. ಅರೆ ಇನ್ನು ಒಂದೇ ನಿಮಿಷ ಬಾಕಿ..

ಪ್ರಕಾಶಣ್ಣ ನಿಮ್ಮ ಹುಟ್ಟು ಹಬ್ಬದ ದಿನ ನನಗಾಗಿ ನನ್ನ ಮನದೊಳಗೆ ಬಂದ ನೀವು... ನನ್ನ ಮೆಚ್ಚಿನ ಮಹಾಭಾರತ ತಂದಿದ್ದೀರಿ.. ಕೊಟ್ಟಿದ್ದೀರಿ.. ನಿಮಗೆ ಶುಭಾಷಯ ಕೋರೋಣ ಅಂದ್ರೆ.. ನೀವೇ ನನಗೆ ಶುಭ "ಪ್ರಕಾಶಾ"ಮಾನವಾಗಿ ಬಂದಿದ್ದೀರಾ.. ನಿಮಗಿದೋ ಧನ್ಯವಾದ..

ನೀವು ನಾ ಕಂಡ ಬಹುಮುಖ ಪ್ರತಿಭೆ.. ಸಾಹಿತ್ಯ.. ಛಾಯಾಗ್ರಹಣ.. ಸ್ನೇಹದ ಬೆಸುಗೆ... ಉತ್ತಮ ವಾಗ್ಮಿ.. ಇದೆಲ್ಲ ಮೇಲಾಗಿ ಅಪೂರ್ವ ಹೃದಯವಂತ.. ಅಣ್ಣ ಎಂದರೆ ನಮ್ಮಣ್ಣ ಎನಿಸುವಷ್ಟು ಹತ್ತಿರ ಸಿಗುವ ನಿಮ್ಮ ಸುಂದರ ವ್ಯಕ್ತಿತ್ವಕ್ಕೆ ನನ್ನ ನಮನಗಳು..
ಯಾರು ಹೇಳುತ್ತಾರೆ ಸುಂದರ ಸ್ನೇಹ ಜೀವ ಸಿಗಲು ಹತ್ತು ಜನ್ಮ ಬೇಕು ಅಂತ.. ಅದೆಲ್ಲಾ ಏನು ಬೇಡಾ.. ಕೇವಲ ಹತ್ತು ಸಂಖ್ಯೆಗಳನ್ನು ದಾಟಿದರೆ ನೀವು ನಮಗೆ ಸಿಗುತ್ತೀರಿ "ಹಲೋ ತಮ್ಮಯ್ಯ ಹೇಗಿದ್ದೀರಾ.. " ಇಷ್ಟು ಸಾಕು.. ನಾವು ಚೆನ್ನಾಗಿದ್ದೀವಿ ಅಂದ್ರೆ ಸಾಕು "ಮುಂದಿನ ಹಲವಾರು ನಿಮಿಷಗಳು(ಕೆಲವೊಮ್ಮೆ ಘಂಟೆಗಳು) ನಗೆ ಗಡಲಿನಲ್ಲಿ ತೇಲಿಸಿಬಿಡುತ್ತೀರಾ"

ತಮ್ಮಯ್ಯ.. ನೀನು ಏನಾದರೂ ಬರೆಯುವೆ ಅಂತ  ಗೊತ್ತಿತ್ತು.. ಬಾಗಿಲನ್ನು ಕೈಯಿಂದ ತಟ್ಟುತ್ತಾರೆ.. ತಮ್ಮಯ್ಯ ಮನದ ಬಾಗಿಲನ್ನು ಪದಗಳಿಂದ ಭಾವ ಪೂರಿತ ಮಾತುಗಳಿಂದ ತಟ್ಟಿ ಬಿಟ್ಟೆ.. ನಮ್ಮ ವೃತ್ತ ನಿಜವಾಗಿಯೂ ಸುಂದರವಾಗಿದೆ.. ಧನ್ಯೋಸ್ಮಿ ಶ್ರೀಕಾಂತೂ"

ಚಿತ್ರಕೃಪೆ -  ಪ್ರಕಾಶಣ್ಣ ಅವರ ಸ್ನೇಹ ಬಳಗದ ಹೂವು ಶ್ರೀನಿಧಿ ಕ್ಲಿಕ್ಸ್!!! 


ಧನ್ಯೋಸ್ಮಿ ಪ್ರಕಾಶಣ್ಣ.. ಹಾಗೆಯೇ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು!!!

******************
ಕಪಾಟೆಲ್ಲ ಒದ್ದೆಯಾಗಿತ್ತು.. ದೇವರ ಕೋಣೆಯಲ್ಲಿ ಪಟಗಳೆಲ್ಲ ನೀರಿನಲ್ಲಿ ತೇಲಾಡುತ್ತಿದ್ದವು.. ಆನಂದ ಭಾಷ್ಪ ಒರೆಸಿಕೊಂಡು... ನಾವೆಲ್ಲಾ ಶ್ರೀ ಜೊತೆಯಲ್ಲಿ ಇದ್ದಿದ್ದರೆ.. ಯಾವುದೋ ಯುಗದಲ್ಲಿ ನಡೆದಿದ್ದ ಕಥೆಯನ್ನು ಇಂದಿಗೆ ಕರೆತಂದು ಸೇರಿಸುತ್ತಿದ್ದ.. ಇರಲಿ ಇರಲಿ.. ಜನಗಳಿಗೆ ಸ್ವಲ್ಪ ಬದಲಾವಣೆ ಇರಲಿ.. ಮತ್ತೆ ನಮ್ಮನ್ನು ಕರೆಯುತ್ತಾನೆ.. ನಾವು ಬಂದೆ ಬರುತ್ತೇವೆ..

ಅಭಿಮಾನಿ ದೇವರುಗಳೇ.. ನಮ್ಮೆಲ್ಲರ ಪ್ರೀತಿಯ ಪ್ರಕಾಶಣ್ಣ ಅವರಿಗೆ.. ಈ ಲೇಖನದ ಅಂಗಳಕ್ಕೆ ಬರುವವರೆಲ್ಲ ಒಂದೊಂದು ಶುಭಾಷಯ ಪತ್ರಗಳನ್ನು.. ಮಾತುಗಳನ್ನು.. ಹಾರೈಕೆ ನುಡಿಗಳನ್ನು ತಲುಪಿಸಿ ಬಿಡಿ.. ಮಾಡ್ತೀರಲ್ಲ !!!!!

******************