Sunday, February 16, 2014

ನೆರಳಿನ ಸಾರಥ್ಯದಲ್ಲಿ ಬೆಳಕು ಬೀರಿದ ಸಂಜೆ

ಸ್ಟ್ಯಾಂಡ್  ನಿಲ್ಲಿಸಿದ್ದ ಬೈಕನ್ನು ತೆಗೆದಾದ  ಕಾರು ಮುಸಿ ಮುಸಿ ನಗುತ್ತಿತ್ತು.. ಕಾರಣ ಕೇಳಿದೆ ಕಾರು ಗುಟ್ಟು ಬಿಟ್ಟುಕೊಡಲಿಲ್ಲ.. ನೀನು ಹೋಗಿ ಬಾ ಶ್ರೀ ಆಮೇಲೆ ಗೊತ್ತಾಗುತ್ತೆ ಅಂದಿತು.

********
ಸರಿ.. ಇನ್ನೇನು ಮಾಡೋದು.. ಶ್ರೀವಿತಲ್ ಹೊರಟೆವು ನನ್ನ ನೆಚ್ಚಿನ ವಿಕ್ಟರ್ ಜೊತೆಯಲ್ಲಿ.  ಆಗಲೇ ಸಂಗೀತ ರಸಿಕರೆಲ್ಲ ಜಮಾಯಿಸುತ್ತ ಇದ್ದರು.  ಕೆಲವು ಪರಿಚಯದ ಚಹರೆಗಳು ಇನ್ನು ಕೆಲವು  ಆಗಬಹುದಾದ ಚಹರೆಗಳು. ಆಗ ತಾನೇ  ಮನೆಗೆ ಬಂದ ಮದುವಣಗಿತ್ತಿಯ ಹಾಗೆ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಸಭಾಂಗಣದ ಹತ್ತಿರ ಬಂದೆವು.  

ಪರಿಚಯವಿದ್ದ ಮುಖ ಪುಟದ ಗೆಳೆಯ ಗೆಳತಿಯರ ಉ.ಕು. ಸಾಂ. ವಿಚಾರಿಸಿ ಅಲ್ಲಿ ಇದ್ದ ಬಿಸಿ ಬಿಸಿ ಚಹವನ್ನು ಸವಿದು ಕಾರ್ಯಕ್ರಮಕ್ಕೆ ಕ್ಷಣಗಣನೆ ಎಣಿಸುತ್ತಾ ಕೂತಿದ್ದೆವು.. 

ಶುಕ್ಲಾಂ ಭರದರಂ.. ಕೋಗಿಲೆ ಕಂಠದ  ಚಿರಪರಿಚಿತ ಧ್ವನಿ ಮೊದಲಾಯಿತು.  ಗಣಪ ಜೊತೆಯಲ್ಲಿದ್ದಾಗ ಎಲ್ಲಾವೂ ಸುಗಮವೇ..ಅಲ್ಲವೇ... ಅದರಲ್ಲೂ ಕಾರ್ಯಕ್ರಮದ ರೂವಾರಿ ಸುಂದರ ನಗೆಯ ಸರದಾರ  ಸುನಿಲ್ ರಾವ್ ನಗುತ್ತಾ ನಗುತ್ತಾ ಕಾರ್ಯಕ್ರಮವನ್ನು ಶುರು ಮಾಡಿದ್ದು ಮುಂದಿನ ಕೆಲ ಘಂಟೆಗಳಿಗೆ ರಂಗೆರಿಸಿದ್ದು ಸುಳ್ಳಲ್ಲ. 

ಎದೆ ಬಡಿತ ಹೆಚ್ಚುತ್ತಾ ಇತ್ತು.. "ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು" ಆಹಾ ಕಾರ್ಯಕ್ರಮಕ್ಕೆ ಬಂದ ಸಾರ್ಥಕತೆಗೆ ಆಗಲೇ ಐವತ್ತು ಪ್ರತಿಶತ ತುಂಬಿಯಾಯಿತು ಎನಿಸಿತು ಮನಸ್ಸಿಗೆ.  ಹಾಡಿನಲ್ಲಿ ಬೇಕಿದ್ದ ತೀವ್ರತೆಯ ಸರಕು ಸಂಗೀತದಲ್ಲಿ, ಸಾಹಿತ್ಯದಲ್ಲಿ ಇದ್ದರೇ..  ಅದಕ್ಕೆ ಬೇಕಿದ್ದ ಚೌಕಟ್ಟು ಒದಗಿಸಿತ್ತು ಗಾಯನದ ಮೂಲಕ. 

ಎದೆ ಬಡಿತಕ್ಕೆ ಸಾಥ್ ನೀಡಿದ್ದು ಮನಸ್ಸು.. ಮನಸ್ಸು ಹುಚ್ಚು ಕುದುರೆ ಎನ್ನುತ್ತಾರೆ. ಆದರೆ ಅದು ಕೋಡಿ ಬಿದ್ದ ಕೆರೆಗಿಂತಲೂ ಇನ್ನು ಬಿರುಸು ಎನ್ನುವುದು "ಹುಚ್ಚು ಕೋಡಿ ಮನಸ್ಸು" ಎಂದು ಶುರುವಾಯಿತು.. ಹಾಡಿನ ಪದಗಳ ಲಾಲಿತ್ಯ, ಗಾಯನ ಅಮೋಘ ಸಂಗೀತ ಸಂಯೋಜನೆ ಎಲ್ಲವೂ ಆ ಹುಚ್ಚು ಮನಸ್ಸಿನ ಕುದುರೆಗೆ ಕಡಿವಾಣ ಹಾಕಲಾರದೆ ಸಂಗೀತವೆ ದೇವರು ಸಾಹಿತ್ಯವೇ ಅದರ ಪೂಜಾರಿ ಎನ್ನುವ ಮಾತನ್ನು ಪ್ರತಿಪಾದಿಸಿತು. 

ಹುಚ್ಚು ಕುದುರೆಯಾದ ಮನಸ್ಸಿಗೆ ಪ್ರಿಯತಮ(ಮೆ) ಸಖ್ಯ ದೊರೆತರೆ ಆಹಾ ಇಡ್ಲಿಗೆ ಚಟ್ನಿ ಸಿಕ್ಕಂತೆ... ಅಲ್ಲವೇ.. ಪ್ರಿಯ ಮನಸ್ಸನ್ನು ಮಧುವನದಲ್ಲಿ ಓಡಾಡಿಸಲು  ಬಂದೇ ಬಿಟ್ಟಿತು "ಪ್ರಿಯ ಮಧುವನದಲಿ ಕೂಡಾಡುವ ಬಾ" ಈ ಆಹ್ವಾನವನ್ನು ಬಿಡಲಾಗುತ್ತದೆಯೇ.. ಕುಣಿಯಲು ಆರಂಭಿಸಿತು ಮನಸ್ಸು.. 

ಆ ಮನಸ್ಸು ಸಂಜೆ ಆಕಾಶ ನೋಡುತ್ತಾ ನೀಲಿ ವರ್ಣವನ್ನು ತುಂಬಿಕೊಳ್ಳುತ್ತಾ ಆ ಗುಂಗಿನಲ್ಲಿ "ನಿಲೆ ನಿಲೆ ಅಂಬರ್ ಪರ್  ಚಾಂದ್ ಜಬ್ ಆಯೆ".. ಎಂದು ಹಾಡಲು ಶುರು ಮಾಡಿತು. ಆಹಾ ಸ್ವರ್ಗಕ್ಕೆ ಮೋರೆ ಗೇಣು..

ಆ ಸ್ವರ್ಗಕ್ಕೆ  ದಾರಿಯನ್ನು ಅಳತೆ ಮಾಡುವ ತಯಾರಿಯಲ್ಲಿದ್ದಾಗ "ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ" ಎಂಬ ಭಾವ ಅಡರುತಿತ್ತು. ಇದಕ್ಕಿಂತ ಒಳ್ಳೆಯ ಸ್ಪೂರ್ತಿದಾಯಕ ಕ್ಷಣ ಬೇಕೇ.. 

ಸ್ವರ್ಗ  ಸಿಕ್ಕೆ ಬಿಡುತ್ತೆ .. ಬರಿ ಮೂರು ಗೇಣು ದೂರ.. ಆದರೆ ಬೇಗನೆ ಸಿಗಬೇಕು ಎನ್ನುವ ತವಕ...  ರೆಕ್ಕೆ ಇದ್ದರೇ ಎಷ್ಟು ಚೆನ್ನ.. ಮನಸ್ಸಿಗೆ ಯಾಕೋ ಈ ಲಹರಿ ಇಷ್ಟವಾಯಿತು "ಪಂಕ್ ಹೊತಿ ತೋ ಉಡು ಆತಿರೇ " ಈ ಕನಸ್ಸು ನನಸಾದರೆ ಆಹಾ!

ಆ ಕನಸ್ಸು ನನಸಾಗಲೇ  ಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು.. ವಸುಂದರೆ ಅದಕ್ಕೆ ಸಹಕಾರ ನೀಡಲೇ ಬೇಕು.. "ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೆ ಮಾನವ ಕುಲವ ಕಾಯುವ ತಾಯೆ" ಎನ್ನುತ್ತಾ ತಾಯಿ ಭೂರಮೆಯನ್ನು ಸ್ಮರಿಸುತ್ತಾ ಅವಳ ಮನೋಭಾರವನ್ನು  ನಮಗೆ ನೀಡು ಬಾ ಒಂದು ಕೋರಿ ಕೊಳ್ಳುವ ಹಾಗೆ ಆಯಿತು!

ಹೌದು.. ಭೂರಮೆ ಸಿಂಗರಿಸಿಕೊಳ್ಳಲು ಹಸಿರ ಸೀರೆಯೇ ಬೇಕು.. ಇದನ್ನು ಬಣ್ಣಿಸಲು ಕವಿಯೂ ಬೇಕು ಅದರ ಆಳ ಅರಿಯಲು ವೇದಾಂತಿಯೂ ಬೇಕು.. ಅಲ್ಲವೇ ಇರಲಿ ಇರಲಿ "ವೇದಾಂತಿ ಹೇಳಿದನು ಹೊನ್ನೆಲ್ಲಾ ಮಣ್ಣು ಮಣ್ಣು ಕವಿಯೊಬ್ಬ ಸಾರಿದನು ಮಣ್ಣೆಲ್ಲಾ ಹೊನ್ನು ಹೊನ್ನು" ನೋಡುವ ನೋಟ ಆಡುವ ಮಾತು ಸಮರಸದಲ್ಲಿದ್ದರೆ ಜೀವನ.. ಸೊಗಸೇ ಸೊಗಸು.. 

ಜೀವನ ಸೊಗಸಾಗಬೆಕಾದರೆ ಜೀವನದ ಜೊತೆಯಲ್ಲಿ ಸಂಗಾತಿ ಬೇಕೇ ಬೇಕು..  ಅಕ್ಕ ಪಕ್ಕದ ಊರುಗಳನ್ನೆಲ್ಲ ನೆನೆದು ಪ್ರತಿಯೊಂದು ಊರಿನಲ್ಲೂ ಸಂಭ್ರಮ ಪಡಬೇಕಾದರೆ.. "ಚಿಕ್ಕಮಿ ಕೇಳ್  ದೊಡ್ದಮಿ ಕೇಳ್ ಚಿಕ್ಕಮಿ ಮದುವೆ ಒಂದಾಗುತೈತೆ" ಅಂತ ಊರಿಗೆ ಊರನ್ನೇ ಕರೆಯಬೇಕು ಎಂದು ಹೊರಟಿತು.. 

ಊರಿಗೆ ಊರನ್ನೇ ಕರೆಯುವಾಗ ಊರನ್ನೇ ಕಾಪಾಡುವ ರಕ್ಷಕರನ್ನು ಕರೆಯಲೇ ಬೇಕು.. ಅದಕ್ಕೆ " ಓ ನನ್ನ ದೇಶ ಭಾಂದವರೇ" ಎನ್ನುತ್ತಾ ಅವರ ಗುಣಗಾನ ಮಾಡುತ್ತಾ ಅವರ ಸಾಧನೆಗಳನ್ನು ಮೆಲಕು ಹಾಕುತ್ತಾ ಹಾಕುತ್ತಾ "ಫೂಲೊಂಕೆ ರಂಗ್ ಸೆ ದಿಲ್ ಕಿ ಕಲಂ ಸೆ" ಎನ್ನುತ್ತಾ ಅವರನ್ನೆಲ್ಲ ನೆನೆಯಲೇ ಬೇಕು ಎಂದಿತು ಮನಸ್ಸು 

ಮನಸ್ಸು ನೆನೆದಾಗ ಸಮುದ್ರದ ಮೇಲೆ ಹರಿಹಾಯುತ್ತಾ ಸಾಗುವ ಟೈಟಾನಿಕ್ ನೌಕೆಯ ತುತ್ತ ತುದಿಯಲ್ಲಿ ನಿಂತು ಅದರ ಸಂಗೀತ ಸವಿಯುತ್ತಾ "everynight in the dream" ಎಂದು ಹಾಡುತ್ತಾ ಆ ತರಂಗಗಳ ಸ್ಪರ್ಶ ಸಿಕ್ಕಾಗ ಅದರ ಸೊಗಸೇ... ಆಹಾ ಅದನ್ನು ಹೇಳಬಾರದು.. ಅಲ್ಲವೇ 

ಮನಸ್ಸಿನ ಅಂಗಳಕ್ಕೆ  ರಂಗೋಲಿ ಇಡುವಾಗ ಹಸೆ ಪದಗಳನ್ನು ಹೇಳುತ್ತಾ ಸಾಗಿದರೆ ಅಂಗಳವೆಲ್ಲಾ ರಂಗವಲ್ಲಿಯೆ.. ಆ ರಂಗವಲ್ಲಿಯ ಹಾಗೆ ಬರೆವ ಜಪಾನಿ ಮಾತುಗಳು.. ಅವರ ಹಾಡಿನ ತುಣುಕುಗಳು...  ಬೇರೆಯದೇ ಆದ ಒಂದು ಮುಗ್ಧ ಮಗುವಿನ ಸಾಮ್ರಾಜ್ಯಕ್ಕೆ ಹೊಕ್ಕು "ಬಾಳ ಒಳ್ಳೆ ನಮ್ಮಿಸ್ಸು" .. ಎಂದು ಕುಣಿವ ಮಗುವಾಗಿಬಿಡುತ್ತೇವೆ.. 

ಮಗುವಿನ ಮನಸ್ಸು ನಮ್ಮದಾದರೆ.. ದೂರದಲ್ಲಿ ಕಾಣುವ ಅಥವಾ ಕಂಡೆ ಎಂಬ ಭ್ರಮೆ ಹುಟ್ಟಿಸುವ ಗುಡ್ಡದ ಭೂತ "ತಂದಾನ ತಂದಾನ" ಎನ್ನುತ್ತಾ ತಕ ತಕ ಕುಣಿಸುತ್ತದೆ ನಮ್ಮ ಮನಸ್ಸನ್ನು.. 

ಕುಣಿವ ಮನ ಹಳೆಯ ನೆನಪನ್ನು ಮೆಲುಕು ಹಾಕುತ್ತಾ "ಬಾರೆ ಬಾರೆ ಚಂದದ ಚೆಲುವಿನ ತಾರೆ" ಎಂದು ಹಾಡಲು ಬಯಸಿದರೆ.. ಎದುರಿಗೆ ಕಾಣುವ ನಿಜಾಂಶ "ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದ್ಯವ್ವ ನಿನ ಕಂಡು ನಾನ್ಯಾಕೆ" ಎಂದು ಮಮ್ಮಲ ಮರಗುತ್ತದೆ.. ಅಮಲಿನಲ್ಲಿ ಹೂತು ಹೋದ ಮನಕ್ಕೆ "ಆವೋ ಹುಜೂರು  ತುಮ್ಕೋ ಸಿತಾರೋ ಮೇ" ಎನ್ನುತ್ತಾ ಸಾಂತ್ವನ ನೀಡುತ್ತದೆ.. 

ಸಾಂತ್ವನ ನೀಡುವಾಗ ನಗು ಬೇಕೇ ಬೇಕು "ಕಿಸೀಕಿ ಮುಸ್ಕುರಾಹತೊಂಸೆ ಓಹ್ ನಿಸಾರ್" ಎನ್ನಲೇ ಬೇಕು ಅನ್ನಿಸುವಂತೆ ದೂರ ದೂರ ಸಾಗುತ್ತಿರುವ ಮನಕ್ಕೆ "ತೊರೆದು ಹೋಗದಿರು ಜೋಗಿ.. "ಎನ್ನುತ್ತಾ ಕೂಗಿ ಕೂಗಿ ಕರೆಯುತ್ತದೆ.. 

ದೂರ ಸಾಗುತ್ತಿದ್ದ ಮನಸ್ಸು ಕಳೆದ ಪ್ರತಿ ಕ್ಷಣವನ್ನು ನೆನೆಯುತ್ತಾ "ಪಲ್ ಪಲ್ ದಿಲ್ ಕೆ ಪಾಸ್ ತುಮ ರೆಹತಿಹೊ" ಎನ್ನುತ್ತದೆ.. ಆದರೆ ಕಳೆದು ಹೋಗಲು ಸಿದ್ದವಿರುವ ಮನಸ್ಸು ಆ ಕಾಲವನ್ನು ಬಯುತ್ತಾ "ವಕ್ತ್ ನೆ ಕಿಯ" ಎನ್ನುತ್ತಾ ತಾನು ಪ್ಯಾಸ ಪ್ಯಾಸ ಎಂದು ಚೀರುತ್ತದೆ.. 

ಇಷ್ಟಾಗುವ ಹೊತ್ತಿಗೆ ಮನಸ್ಸಿಗೆ ಅರಿವಾಗುತ್ತದೇ ತಾನು ಮಾಡಲು ಹೊರಟ ತಪ್ಪು ಏನೆಂದು ತನಗೆ ತಾನೇ ಎಚ್ಚರಿಕೆ ಕೊಡುತ್ತಾ "ಜೋಕೆ ನಾನು ಬಳ್ಳಿಯ ಮಿಂಚು.. ಹಲೋ ಹಲೋ ನಿಲ್ಲುವೆ ಎಲ್ಲೋ.. ದೂರದಿಂದ ಬಂದ ಸುಂದರಾಂಗ" ಎನ್ನುತ್ತಾ ಮತ್ತೆ ತನ್ನ ಗೂಡಿಗೆ  ಮರಳುತ್ತದೆ.. 

*******

ಅರೆ ಇದೇನು ಎಲ್ಲೋ ಹೊರಟ ಮನಸ್ಸು ಏನೋ ಮಾಡಲು ಹೊರಟ ಮನಸ್ಸು ಮತ್ತೆ  ಮರಳಿ ಗೂಡಿಗೆ ಬಂತೆ ಎನ್ನುವ ಕುತೂಹಲ ಸಹಜ.. ಇರಲಿ ಇರಲಿ ಮನಸ್ಸು ಒಂದು ಮರ್ಕಟ ಎಂದು ಹೇಳುತ್ತಾರೆ ಆದರೂ ಆ ಮರ್ಕಟಕ್ಕು ಮನಸ್ಸು ಇರುತ್ತದೆ ಹಾಗೆಯೇ ಬಾಲವೂ ಇರುತ್ತದೆ.. ಆ ಬಾಲ ಬೆಳೆಸಿಕೊಂಡು ಅದನ್ನೇ ಆಸನ ಮಾಡಿಕೊಂಡರೆ ಮನಸ್ಸು ನಮ್ಮ ಅಂಕೆಯಲ್ಲಿ.. 

                                               *******

ಏನಪ್ಪಾ ಕೊರೆತ ಅಂದುಕೊಂಡಿರಾ..  ಕೆಲಸದ ಒತ್ತಡದಿಂದ ದಣಿದ ಮನಸ್ಸಿನ ನೆರಿಗೆಗಳನ್ನು ನಿವಾರಿಸಿಕೊಳ್ಳಲು ಒಂದು ಸುಂದರ ಶನಿವಾರದ ಸಂಜೆಯನ್ನು  ಸುಮಧುರವಾಗಿ ಕಳೆಯಬೇಕು ಎನ್ನುವ ಆಸೆಗೆ ನೀರೆರೆದು ಪೋಷಿಸಿದ್ದು ಚಿರಂತನ್ ಕುಟುಂಬ ಹಾಗೂ ಉಷಾ ಉಮೇಶ ಮೇಡಂ. 

ಹೌದು ಕರುನಾಡಿನ ಹೆಮ್ಮೆಯ ಗಾಯಕಿ ಖ್ಯಾತ ಪ್ರತಿಭಾ ಶೋಧಕ ಅಮೋಘ ನಿರ್ದೇಶಕ ಪುಟ್ಟಣ್ಣ ಹಾಗು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ ಅವರ ಹೆಮ್ಮೆಯ ಕಾಣಿಕೆ ಶ್ರೀಮತಿ ಬಿ ಆರ್ ಛಾಯ ಅವರ ಛಾಯಗೀತ್ ಕಾರ್ಯಕ್ರಮ ಇದೆ ಶನಿವಾರ ೧೫ನೆ ಫೆಬ್ರುವರಿ ೨೦೧೪ ರಂದು ಹನುಮಂತನಗರದ ಕೆ ಎಚ್ ಸೌಧದಲ್ಲಿ ಆಯೋಜಿಸಲಾಗಿತ್ತು.   

ಚಿತ್ರ ಕೃಪೆ - ಶ್ರೀ  ಸುನಿಲ್ ರಾವ್ 

ಸುಂದರ ಸಂಗೀತ ಅಲೆಯಲ್ಲಿ ತೇಲಿಸಲು ಶ್ರೀಮತಿ ಬಿ ಆರ್ ಛಾಯ, ಶ್ರೀ ಪದ್ಮಪಾಣಿ, ಶ್ರೀ ರಘು, ಶ್ರೀ ಸಂದೀಪ್, ಶ್ರೀ ರವಿ ಜೊತೆಯಲ್ಲಿ ವಾದ್ಯ ವೃಂದ ಸಿದ್ಧರಿದ್ದರು. ಸರಿ ಇನ್ನೇನು ಬೇಕು.. ಸುಮಧುರ ಹಾಡುಗಳು ಅದರ ಮಧ್ಯದಲ್ಲಿ ಸುರಾ ಸುಂದರ ಶ್ರೀ ಸುನಿಲ್ ರಾವ್ ಅವರ ಪುಸ್ತಕ ಬಿಡುಗಡೆ.. ಹೃದಯಸ್ಪರ್ಶಿಸುವ ಮನಸ್ಸುಳ್ಳ ಹಿರಿಯರನ್ನು, ಸ್ನೇಹಿತರನ್ನು ಗೌರವಿಸಿದ್ದು ಒಂದು ಸುವರ್ಣ ಘಳಿಗೆಗಳಿಗೆ ಸಾಕ್ಷಿಯಾಗಿತ್ತು ಅಂದಿನ ಸಭಾಂಗಣ. 

*******
  
 ಸುಂದರ ಕಾರ್ಯಕ್ರಮ ಮುಗಿಸಿಕೊಂಡು ಹೊರಗೆ ಬಂದೆ.. ನನ್ನ ಪ್ರೀತಿಯ ವಿಕ್ಟರ್ ಮೇಲೆ ಕುಳಿತು.. ಸರಿ ಹೋಗೋಣ ಅಂದೇ.. ನನ್ನ ಮನದಲ್ಲಿ  ಹಾಡಿನ ಗುಂಗು ಇನ್ನು ಇತ್ತು ಆದರೆ ಮನೆಯನ್ನು ತಲುಪಬೇಕು ಎನ್ನುವ ತವಕವಿತ್ತು.. ಬೈಕನ್ನು ಒಮ್ಮೆ ತಡವರಿಸಿದೆ.. ಶ್ರೀ ತಲೆ ಇನ್ನು ಗುಯ್ ಅಂತಾ ತಿರುಗುತ್ತಲೇ ಇದೆ.. ಒಮ್ಮೆ ನನ್ನ ಬಿಡು ನೋಡೋಣ.. ಎಂದಿತು.. 

ಸರಿ ಬಿಟ್ಟೆ.. ಕಿರ್ ಕಿರ್ರ್ ಕಿರ್ರ್ರ್ ಶಭ್ಧ ಮಾಡುತ್ತಾ ಮೆಲ್ಲನೆ ಜಾರಿತು ರಸ್ತೆಯ ಮೇಲೆ.. ನಮ್ಮ ಮೂವರಿಗೆ ಏನು ಅಪಾಯ ಆಗಲಿಲ್ಲ.. ಆದರೆ ಕಾರು ಏಕೆ ಮುಸಿ ಮುಸಿ ನಕ್ಕಿತು ಎಂದು ಅರಿವಾಯಿತು.. ಬೈಕ್ಗೆ ಎರಡೇ ಕಾಲು.. ಸಂಗೀತ ಸಾಹಿತ್ಯದ ಅಮಲಿನಲ್ಲಿ ತಲೆ ಸುತ್ತಿತ್ತು ಅಂದರೆ ಬಿದ್ದು ಬಿಡುತ್ತದೆ.. ಅದನ್ನೇ ನೆನೆದು ಎಚ್ಚರಿಕೆ ಕೊಟ್ಟು ಕಾರು ಮುಸಿ ಮುಸಿ ನಕ್ಕಿದ್ದು!!!!!

*********  

ವಿಶೇಷ ಸೂಚನೆ "ದಪ್ಪವಾಗಿ ಬಣ್ಣ ತುಂಬಿದ ಸಾಲುಗಳೆಲ್ಲ ಶ್ರೀಮತಿ ಛಾಯಾ ತಂಡದವರು ಹಾಡಿದ ಮೊದಲ ಸಾಲುಗಳು. 

ಕಾರ್ಯಕ್ರಮದ ಕೆಲವು ತುಣುಕುಗಳು

೧. ಶ್ರೀ ಸುನಿಲ್ ರಾವ್ ಅವರ ಸುಲಲಿತ ನಗುಮೊಗದ ಮಾತುಗಳು ಮತ್ತು ತುಂತುರು ಮಳೆ ಹೊರಡಿಸುವ ನಾದದಂತೆ ಸುಮಧುರ ಅವರ ಧ್ವನಿ

೨. ಶ್ರೀ ಪದ್ಮಪಾಣಿ ಅವರ ನೇರ ಹಾಸ್ಯ ಮಾತುಗಾರಿಕೆ 

೩. ಉತ್ತಮ ರೀತಿಯಲ್ಲಿ ಆಯೋಜಿಸಿದ್ಧ ಕಾರ್ಯಕ್ರಮ ಮತ್ತು ಅದರ ರೂವಾರಿಗಳ ಪರಿಶ್ರಮ 

೪. ಇಂತಹ ಕಾರ್ಯಕ್ರಮಗಳನ್ನು ಅವಾಗವಾಗ ನೋಡಲೇ ಬೇಕು ಎನ್ನುವ ತವಕ ಹುಟ್ಟಿಸಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ