Sunday, April 23, 2017

ಶಬರಿಯಂತೆ ಕಾದ ಸುವರ್ಣ ಘಳಿಗೆಗಳು - ಗುರುವಂದನಾ!!!

ಮರದ ಮೇಲೆ ನೇತಾಡುತ್ತಿದ್ದ ಬೇತಾಳ ಮತ್ತೆ ವಿಕ್ರಮನ ಹೆಗೆಲೇರಿತು.. ವಿಕ್ರಮ ಬೇತಾಳನನ್ನು ಹೊತ್ತೊಯ್ಯುತ್ತಿದ್ದರೂ ಮನಸ್ಸು ಗೊಂದಲದ ಗೂಡಾಗಿತ್ತು.. ರಾಜ್ಯಭಾರದಲ್ಲಿ ಏನೋ ಕೊಂಚ ಗೊಂದಲ.. ಸಭಿಕರ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಡಲಾಗಿರಲಿಲ್ಲ, ಜೇನುಗೂಡಿಗೆ ಕಲ್ಲೊಡೆದಂತೆ ಆಗಿತ್ತು ಅವನ ಮನಸ್ಥಿತಿ..

ಬೇತಾಳ ಮೆಲ್ಲಗೆ ವಿಕ್ರಮನ ತಲೆಗೆ ಮೊಟಕಿತು.. ಅರೆ ವಿಕ್ರಮ ರಾಜ.. ನಿನ್ನ ಬೆನ್ನ ಮೇಲೆ ಭೂತಾಕಾರವಾಗಿ ನಾ ಹತ್ತಿರುವೆ, ಭಾರವಾಗಿರುವೆ.. ನಿನ್ನ ತಲೆಯೊಳಗೆ ಅದಕ್ಕಿಂತ ಭಾರವಾಗಿ ಏನಿದೆ.. ಪೇಳುವೆಯಾ?

ವಿಕ್ರಮ ಒಂದು ಕ್ಷಣ ಯೋಚನಾ ಲಹರಿಯಿಂದ ಹೊರಬಂದು.. ಅಹ್ ಏನು.. ಏನಾಯ್ತು ಬೇತಾಳ.. ಇನ್ನೊಮ್ಮೆ ಹೇಳು?

ಬೇತಾಳ ರೀವೈನ್ಡ್ ಬಟನ್ ಒತ್ತಿತು. .. ಆಗ ವಿಕ್ರಮ ಬೇತಾಳ.. ಪ್ರತಿ ಬಾರಿಯೂ ನೀ ನನ್ನ ಬೆನ್ನ ಮೇಲೆ ಹತ್ತುವೆ.. ನೀ ನನಗೆ ಕಥೆ ಹೇಳುವೆ.. ಕಡೆಯಲ್ಲಿ ಪ್ರಶ್ನೆ ಕೇಳುವೆ.. ಅದರ ಬದಲಾಗಿ.. ನೀ ನನ್ನನ್ನು ಹೊತ್ತೊಕೋ.. ನಾ ನಿನಗೆ ಕಥೆ ಹೇಳುವೆ.. ನಾ ಕೇಳಿದ ಪ್ರಶ್ನೆಗೆ ನೀ ಉತ್ತರಿಸಿ.... !
ಗೊಂದಲಗೊಂಡಿದ್ದ  ರಾಜ ವಿಕ್ರಮನ ಬಗ್ಗೆ ಚೆನ್ನಾಗಿಯೇ ಅರಿತಿದ್ದ ಬೇತಾಳ.. ಜೀ ಬೂಮ್ ಬಾ ಅಂದಿತು.. ಈಗ ವಿಕ್ರಮ ಬೇತಾಳದ ಬೆನ್ನಿನ ಮೇಲೆ!

ಕಥೆ ಆರಂಭವಾಯಿತು!!!

ಬೇತಾಳ ಬೆಂಗಳೂರಿನ ತ್ಯಾಗರಾಜನಗರದ ಕಮಲಾ ನೆಹರು ಪಾಠ ಶಾಲೆಯಲ್ಲಿ  ಮೂರು ದಶಕಗಳ ಹಿಂದೆ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ಒಂದೆಡೆ ಕಲೆತು ಬೆರೆತು ನಲಿದ ಈ ಸಂದರ್ಭವನ್ನು ವಿವರಿಸಬೇಕು.. ಆದರೆ ನನಗೆ ಈ ಕಥೆ ಸುಮ್ಮನೆ ಹೇಳಲು ಬೇಜಾರು .. ಅದರ ಬದಲು ಶ್ರೀ ಕ್ಯಾಮೆರಾ ಕಥೆ ಹೇಳುತ್ತೆ.. ನಾವು ಅದನ್ನು ಕೇಳೋಣ.. ಆಮೇಲೆ ಪ್ರಶ್ನೋತ್ತರ.. !!!

ನಿಕೋನ್ ಕ್ಯಾಮೆರಾ.. ಮೊಗವನ್ನು ಸರಿಪಡಿಸಿಕೊಂಡು, ಗಂಟಲು ಸರಿಮಾಡಿಕೊಂಡು ಶುರುಮಾಡಿತು.. 
ಕ್ಯಾಮೆರಾ ಹೇಳಿದ ಕಥೆ!!!

ದಿನಕರ ಹುಟ್ಟಿದ ಕ್ಷಣದಿಂದ.. ಗೆಳೆಯರು ಶಾಮಿಯಾನ, ಕುರ್ಚಿಗಳು, ಮೇಜುಗಳು, ಕಾರ್ಯಕ್ರಮದ ರೂವಾರಿ ಗಣೇಶನ ವಿಗ್ರಹ ಎಲ್ಲವೂ ಬಂದಿತ್ತು.. ಹಸುರಿನ ಹಾಸು, ಸುತ್ತಲೂ ಬಣ್ಣ ಬಣ್ಣದ ಬಟ್ಟೆಯ ಸುತ್ತು ಗೋಡೆಗಳು, ಸೊಗಸಾದ ಮೆತ್ತನೆಯ ಸೋಫಾ ಎಲ್ಲವೂ ಒಂದು ಸುಂದರ ಕಾರ್ಯಕ್ರಮದ ಮುನ್ನೋಟವನ್ನು ಕೊಡುತ್ತಿತ್ತು. 

ಒಂಭತ್ತು ಘಂಟೆಯಾಯಿತು.. ಅಲ್ಲಿಯ ತನಕ ಸಿದ್ಧತೆಗಳನ್ನು ಮಾಡಲು ಉತ್ಸಾಹ ತುಂಬಿಕೊಂಡು ಶ್ರಮಿಸಿದ್ದ ತಂಡ,  ಮನೆಗೆ ಹೋಗಿ ಸಿದ್ಧವಾಗಿ ಬರಲು ಹೊರಟಿದ್ದರು.. ಆ ಕ್ಷಣದಲ್ಲಿ ಮಿಕ್ಕ ಗೆಳೆಯರು ಒಬ್ಬೊಬ್ಬರಾಗಿ ಬರುತ್ತಾ ಹೋದರು.. 

ಓಹ್ ಅವಳು.. ಓಹ್ ಇವಳು.. ಗುರುತಾಯಿತಾ..  ಪರಿಚಯ ಇದೆಯಾ.. .. ಒಹ್ ನೀನಾ..  ಅದೇ ಆ ಕಡೆ ತಿರುವಿನಲ್ಲಿ ಮಹಡಿ ಮನೆಯಮೇಲೆ.. .ಒಹ್ ಸರ್.. ಆ ಮನೆ ಬಿಟ್ಟು ಬಹಳ ವರ್ಷಾ.. ಓಹ್ ಸ್ವಂತ ಮನೆಗೆ ಹೋದೇ.. ಇಂತಹ ಕಾರ್ಯಕ್ರಮ ಮಿಸ್ ಮಾಡ್ಕೋತೀ... ಸೂಪರ್ ಕಣೋ.. ಸ್ವಲ್ಪವೂ ಸ್ವಲ್ಪವೂ ಬದಲಾಗಿಲ್ಲಾ.. ಹೌದಾ .. ನಾ ಆ ಮನೆಗೆ ಹೋಗಿ ಕೇಳಿದ್ದೆ.. ಛೆ ಮಿಸ್ಸಾಯಿತು.. ನಿನ್ನ ಜೊತೆ ಓದಿದ್ದವಳು ನಾನೇ.. ನನ್ನ  ಅಕ್ಕನ ನಂಬರ್ ಕೊಡ್ತೀನಿ.. ಸೂಪರ್ ಸೂಪರ್.. 

ಹೀಗೆ ಯಾವ ಸಂಭಾಷಣೆಯೂ ಪೂರ್ತಿಗೊಳ್ಳುತ್ತಿರಲಿಲ್ಲ.. ಬಹಳ ವರ್ಷಗಳಾದ ಮೇಲೆ ಸಿಕ್ಕ ಗೆಳೆಯ ಗೆಳತಿಯರನ್ನು ಮಾತಾಡಿಸಬೇಕು.. ಸಂಪರ್ಕದಲ್ಲಿ ಇಟ್ಟುಕೊಳ್ಳಬೇಕು.. ಮತ್ತೆ ಈ  ಅವಕಾಶವನ್ನು ಬಿಡಬಾರದು.. ಹೀಗೆ ಮನದಲ್ಲಿ ಓದುತ್ತಿದ್ದ ಉತ್ಸಾಹದ ಚಿಲುಮೆಯನ್ನು ತಡೆಯಲಾರದೆ ಎಲ್ಲರೂ ಎಲ್ಲರ ಹತ್ತಿರ ಮಾತಾಡುತ್ತಿದ್ದರು.. ಇದನ್ನ ನೋಡುವುದೇ ಒಂದು ಸಂತೋಷ.. 

ಶಿಕ್ಷಕ ಶಿಕ್ಷಕಿಯರು ಬಂದರು..  ನಮಗೆ  ಅವರೊಬ್ಬರೇ ಗುರುಗಳು .. ಆದರೆ ಗುರುಗಳಿಗೆ ಪ್ರತಿ ವರ್ಷವೂ ಹೊಸ ಹೊಸ ವಿದ್ಯಾರ್ಥಿಗಳ ಸಾಗರವೇ ಬರುತ್ತಿತ್ತು.. ಬದುಕಿನ ಭಾವ ಜೀವನದಲ್ಲಿ ನೋವು ನಲಿವು ಎಲ್ಲವನ್ನು ಕಂಡ ನಮ್ಮ ಗುರುಗಳು ನಮ್ಮನ್ನೆಲ್ಲ ನೆನಪಿಸಿಕೊಳ್ಳಲು ಪ್ರಯತ್ನ ಪಟ್ಟರು.. ಅದರಲ್ಲಿ ಭಾಗಶಃ ಯಶಸ್ವಿ ಕೂಡ ಆದರು. 

ಕಾರ್ಯಕ್ರಮ ಶುರುವಾಗಬೇಕು.. ಎಲ್ಲಾ ಸಿದ್ಧತೆಗಳು ಅಂತಿಮ ಹಂತ ತಲುಪಿತ್ತು.. 

ನೆರೆದಿದ್ದ ಗುರುಗಳನ್ನು ವೇದಿಕೆಗೆ ಆಹ್ವಾನಿಸಿ, ದೀಪ ಬೆಳಗುವಿಕೆಯಿಂದ ಕಾರ್ಯಕ್ರಮ ಶುರುವಾಯಿತು.. 


ಪ್ರಾರ್ಥನಾ ಗೀತೆ.. ಮುದ್ದು ಪುಟಾಣಿ ಸುಪ್ರಿಯಾ ಸೊಗಸಾಗಿ ಹೇಳಿದರು.. ನಂತರ ನಾಡಗೀತೆ..

ರಸಋಷಿ ಶ್ರೀ ಕುವೆಂಪು ಬರೆದು, ಗಾಯಕ ಮಾಂತ್ರಿಕ ಸಿ ಅಶ್ವತ್ ಮತ್ತು ಸಂಗಡಿಗರು ಹಾಡಿದ್ದ ನಾದ ಗೀತೆ ಜಯಭಾರತ ಜನನಿಯ  ತನುಜಾತೆ ಗೀತೆಯನ್ನು ಎಲ್ಲರೂ ಧ್ವನಿವರ್ಧಕದಲ್ಲಿ ಕೇಳಿ ಬರುತ್ತಿದ್ದ ಗೀತೆಗೆ ತಮ್ಮ ಧ್ವನಿಯನ್ನು ಸೇರಿಸಿದರು. 
ಕಾರ್ಯಕ್ರಮಕ್ಕೆ ಶಕ್ತಿ ಉತ್ಸಾಹ  ತುಂಬಲು ಇದಕ್ಕಿಂತ ಬೇರೆ ಬೇಕೇ.. 

ಒಂದು ಕಾರ್ಯಕ್ರಮ ನೆಡೆಯಲು ಬಹು ಮುಖ್ಯವಾದದ್ದು ಸ್ಥಳ.. ನಮ್ಮ ಶಾಲೆಯ ಹತ್ತಿರವೇ ಇರುವ ಕಾರ್ಪೋರೇಶನ್ ಆಫೀಸ್ ಮುಂಭಾಗದಲ್ಲಿ ಅವಶ್ಯಕವಾಗಿದ್ದ ಅನುಮತಿಯನ್ನು ನೀಡಿದ ಕತ್ರಿಗುಪ್ಪೆ ಕಾರ್ಪೊರೇಟರ್ ಆಗಿರುವ ಶ್ರೀ ವೆಂಕಟೇಶ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. 

ಅವರು ತಮ್ಮ ಬಿಡುವಿಲ್ಲದ ವೇಳೆಯಲ್ಲೂ, ಅನುಸಮಯ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೋರಡಲು ಸಿದ್ಧವಾಗಿದ್ದರು.. ನಮ್ಮೆಲ್ಲರ ಗೌರವವನ್ನು ನಮ್ಮ ಕಿರುಕಾಣಿಕೆಯ ಮೂಲಕ ಸಲ್ಲಿಸಿದೆವು. ಅವರು ನಾಲ್ಕೈದು  ಹಿತನುಡಿಗಳು ಹೇಳಿ ಗುರುಗಳ ಅನುಮತಿ ಪಡೆದು ಹೊರಟರು. ಜೇನುಗಳೆಲ್ಲ ಅಲೆಯುತ್ತಾ ಹಾದಿ ಕಾಡೆಲ್ಲಾ.. "
ಇದು ಒಂದು ಹಾಡಿನ ಸಾಲು.. 
ಕರುನಾಡ ಮೂಲೆ ಮೂಲೆಯಲ್ಲಿದ್ದ ನಾವೆಲ್ಲಾ ಒಂದು ದೊಡ್ಡ ವೃಕ್ಷದ ಅಡಿ ನಿಂತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮೆಲ್ಲರಲ್ಲಿರುವ ಗೆಳೆತನದ ಮಿಡಿತ.. 

ಎಂಭತ್ತರ ದಶಕ.. ಒಬ್ಬರನ್ನು ಒಬ್ಬರು ಸಂಪರ್ಕಿಸಲು ದೂರದರ್ಶನ, ದೂರವಾಣಿ, ಅಂಚೆ ಮತ್ತು ತಂತಿ ಸಂಪರ್ಕ ಬಿಟ್ಟರೆ ಬೇರೆ ಮಾಧ್ಯಮವೇ ಇರಲಿಲ್ಲ.. ಆಗ ಜಗತ್ತು ತಿಳಿಯಾಗಿತ್ತು.. ಸ್ನೇಹ ಒಂದೇ ಎಲ್ಲರ ಭಾಷೆಯಾಗಿತ್ತು.. 

"ಸಾಗಿ ಮಾಗಿ ಹಿರಿತನ ತಂದಿತಯ್ಯ ಸಿರಿತನ"  ಎನ್ನುವಂತೆ.. ಇಲ್ಲಿಂದ ಶುರುವಾಗಿದ್ದ ನಮ್ಮ ಜೀವನ ಅನೇಕ ನದಿ, ಝರಿಗಳನ್ನು, ಕಣಿವೆಗಳನ್ನು, ಬೆಟ್ಟ ಗುಡ್ಡಗಳನ್ನು ದಾಟಿ ಇಲ್ಲಿಗೆ ತಂದು ನಿಲ್ಲಿಸಿದೆ. ನಮ್ಮ ನಮ್ಮ ಜೀವನವನ್ನು ರೂಪಿಸಲು ಈ ವೇದಿಕೆಯಲ್ಲಿ ಕುಳಿತಿರುವ ದೇವತೆಗಳು ತಮ್ಮ ಅನುಭವವನ್ನು ಧಾರೆಯೆರೆದು ಸಹಕರಿಸಿದ್ದಾರೆ. ಅವರಿಗೆ ನಮ್ಮ ನಮನಗಳು. 

ಈ ದೇವಗಣದ ಜೊತೆಯಲ್ಲಿ ಒಂದಷ್ಟು ಸಾರ್ಥಕ ಕ್ಷಣಗಳನ್ನು ಕಳೆಯುವ ಹಂಬಲ ವ್ಯಕ್ತಪಡಿಸಿದಾಗ.. ನಮ್ಮೆಲ್ಲರ  ಮೆಚ್ಚಿನ ಗುರುಗಳು.. ನಮಗಿಂತ ಹೆಚ್ಚಾಗಿ ಖುಷಿಪಟ್ಟರು.. ಜೊತೆಯಲ್ಲಿ ನಮ್ಮ ಸಹಾಯ, ಸಹಕಾರ ನಿಮಗಿದೆ ಎಂದಾಗ.. ನಮಗೆ ಅರಿವಾಗಿದ್ದು.. ಸ್ವರ್ಗ ಎಲ್ಲೋ ಇಲ್ಲ.. ಇಲ್ಲೇ ನಮಗೆ ಕೈಗೆ ಎಟುಕುವ ಅಂತರದಲ್ಲಿದೆ ಎಂದು.. 

ಹೌದು ಗೆಳೆಯರೇ.. ಈ ಸುದಿನ ಬಂದೆ ಬಿಟ್ಟಿದೆ..ಇದು ನಮ್ಮೆಲ್ಲರ ಮನೆ ಮನೆಯ ಕಾರ್ಯಕ್ರಮ.. ಬನ್ನಿ ಸಂಭ್ರಮಿಸೋಣ.. ಖುಷಿ ಪಡೋಣ.. ಈ ಸುವರ್ಣ ಘಳಿಗೆಯ ಕ್ಷಣಗಳಲ್ಲಿ ಮಿಂದು ಬರೋಣ.. ಶಬರಿ ಕಾಯುತ್ತಾ ಕುಳಿತ ಹಾಗೆ ಮೂವತ್ತೈದು ವರ್ಷಗಳ ನಂತರ ನಾವೆಲ್ಲರೂ ಒಂದೇ ಛಾವಣಿಯಲ್ಲಿ ಸೇರಿದ್ದೇವೆ ಅಂದರೆ ಅದಕ್ಕೆ ನಮ್ಮ ಗೆಳೆಯರೇ ಕಾರಣ!!!

ಮನೆಗೆ ಹೋಗಿ, ದೂರವಾಣಿ ನಂಬರ್ ಪಡೆದು, ಅವರ ಹತ್ತಿರ ಮಾತಾಡಿ, ಕೆ ಏನ್ ಪಿ ಎಸ್ ವಾಟ್ಸಾಪ್ ಗುಂಪಿನಬಗ್ಗೆ ಹೇಳಿ, ಅವರ ಒಪ್ಪಿಗೆ ಪಡೆದು.. ಸುಮಾರು ಮೂವತ್ತು ಜನರನ್ನು ಒಟ್ಟುಗೂಡಿಸಿ, ಕಾರ್ಯಕ್ರಮದ ಹೊತ್ತಿಗೆ ನಲವತ್ತು ಮಂದಿಗೂ ಹೆಚ್ಚು ಗೆಳೆಯರ ಸಂಪರ್ಕ ಸಾಧಿಸಿದ ನಮ್ಮೆಲ್ಲ ಗೆಳೆಯರಿಗೆ ಅನಂತ ಧನ್ಯವಾದಗಳು. 

ಹೀಗೆ ಮಾತಾಡುತ್ತಾ.. ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾಲ್ಕು ನುಡಿಮುತ್ತುಗಳನ್ನು ಹೇಳಬೇಕು ಎಂದು ಕೇಳಿಕೊಂಡಾಗ, ಗುರುಗಳು ಹೇಳಿದ್ದು ಒಂದು ಮಾತು.. ಮೊದಲು ನಿಮ್ಮೆಲ್ಲರ ಪರಿಚಯ ಮಾಡಿಕೊಡಿ.. ನಿಮ್ಮ ಹೆಸರು, ನಿಮ್ಮ ವಿದ್ಯಾಭ್ಯಾಸ, ನಿಮ್ಮ ಉದ್ಯೋಗ.. ಮುಂದಿನ ಮೂವತ್ತು ನಿಮಿಷ ನಮಗೆ ಅರಿವಿಲ್ಲದೆ ಹೋಗಿದ್ದ ಎಷ್ಟೂ ವಿಷಯಗಳು ಬೆಳಕಿಗೆ ಬಂದವು. 
ಸರ್ಕಾರಿ ಕೆಲಸದಲ್ಲಿ ಇರುವವರು, ಗುತ್ತಿಗೆದಾರರು, ಗಡಿ ಕಾಯುವ ಸೈನಿಕರ ಕಚೇರಿ, ಆರಕ್ಷಕರ ಕಚೇರಿ, ಅಬಕಾರಿ ಕಚೇರಿ, ಮಾಹಿತಿ ತಂತ್ರಜ್ಞಾನ, ಮನೆಯನ್ನು ಒಪ್ಪವಾಗಿ ನೋಡಿಕೊಳ್ಳುವುದು, ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ, ತಾವೇ ಉದ್ಯೋಗದಾತರಾಗಿ ಉದ್ಯೋಗ ಸೃಷ್ಟಿಸುತ್ತಿರುವವರು ಹೀಗೆ ವಿವಿಧ ವ್ಯಕ್ತಿತ್ವಗಳ ಪರಿಚಯ ಎಲ್ಲರಿಗೂ ಸಿಕ್ಕಿತು. 

ನಂತರ ಮಾತಾಡಿದ ಗುರುಗಳು.. ಹಿಂದಿನ ಹಾಗೂ ಇಂದಿನ ಶಿಕ್ಷಣದ ಬಗ್ಗೆ ಮಾತಾಡುತ್ತಾ, ಎಲ್ಲಿ ತಪ್ಪುತ್ತಿದ್ದೇವೆ, ಎಲ್ಲಿ ಸರಿಯಾಗಬೇಕಿತ್ತು.. ಇದನ್ನು ತುಲನೆ ಮಾಡಿ ಮಾತಾಡಿದರು. ಎಲ್ಲರ ಒಮ್ಮತದ ಅಭಿಪ್ರಾಯ ಒಂದೇ.. ಈ ಕಾಲದಲ್ಲಿ ಗುರುಹಿರಿಯರನ್ನು ಗುರುತಿಸುವ, ಮಾತಾಡಿಸುವ, ಗೌರವ ಕೊಡುವ ಗುಣವನ್ನು ಕೊಂಡಾಡಿದರು. ಪ್ರತಿಯೊಬ್ಬರೂ ಕೊಟ್ಟ ಹಿತವಚನಗಳು ಮನಮುಟ್ಟುತ್ತಿದ್ದವು.. 
ವಿದ್ಯಾರ್ಥಿಗಳೆಲ್ಲ ಇಟ್ಟಿಗೆಗಳಿದ್ದ ಹಾಗೆ.. ಅದನ್ನು ಒಂದರ ಮೇಲೆ ಒಂದು ಕೂರಿಸಬಹುದು, ಒಂದರ ಪಕ್ಕ ಒಂದು ಕೂರಿಸಬಹುದು, ಆದರೆ ಅದನ್ನು ಗಟ್ಟಿಯಾಗಿ ಹಿಡಿದಿಡುವ ಸಿಮೆಂಟ್, ಮರಳು, ನೀರು ನಮ್ಮ ಗುರುಗಳಾಗಿದ್ದರು. ಅವರ ಗಟ್ಟಿತನ ನಮ್ಮನ್ನು ಬಂದಿಸಿತ್ತು.. ಹಾಗಾಗಿ ಈ ಕಾರ್ಯಕ್ರಮ ಯಶಸ್ವೀ ಅಂತ ಅನಿಸಿದರೆ ಅದಕ್ಕೆ ಕಾರಣ ಕರ್ತರು ಈ ಗುರುಗಳು. 

ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ.. ಶಿಕ್ಷಣವಿಲ್ಲದೆ ರಕ್ಷಣೆಯಿಲ್ಲ.. ಹಾಗಾಗಿ ಈ ಶಿಲೆಯಲ್ಲಿ ಶಿಲ್ಪವನ್ನು ಕಂಡು ಅದನ್ನು ಸುಂದರ ಮೂರ್ತಿಯನ್ನಾಗಿ ಮಾಡಲು ಶ್ರಮಿಸಿದ ಈ ಶಿಲ್ಪಿಗಳಿಗೆ ನಮ್ಮ ಭಾವ ಪೂರ್ಣ ಗೌರವಾದರಗಳನ್ನು ಅರ್ಪಿಸಿದೆವು.. ಅದು ಈ ಕೆಳಗಿನ ಚಿತ್ರಗಳಲ್ಲಿ ಮೂಡಿ ಬಂದಿವೆ.. 

ನನ್ನ ಆಸ್ತಿ ನೀವೇ 
ನನಗೆ ನೀವೆಲ್ಲ ಮಕ್ಕಳೇ 
ನೀವೇ ಗ್ರೇಟ್
ನಿಮ್ಮ ಜೊತೆ ಇಂದು ನಾವು ಮಕ್ಕಳಾದೆವು 
ಏನೂ ಸಾಧಿಸಿದೆವೋ ಬಿಟ್ಟೆವೋ ಗೊತ್ತಿಲ್ಲ.. ಇಂದು ಈ ಭಾಗ್ಯ ನೋಡುವ ಸುದಿನ ಬಂದಿತು.. ಇಂದು ನಮ್ಮ ಭಾಗ್ಯ ಒಂದು ಪೂರ್ತಿ ಸುತ್ತು ಬಂದಿದೆ.. ಮತ್ತು ತುಂಬಿಕೊಂಡು ಬಂದಿದೆ ಎಂದಾಗ ನಮಗೆ ಬಹು ಸಂತೋಷವಾಯಿತು.. 

ಎಲ್ಲ ಗುರುಗಳ ಜೊತೆಯಲ್ಲಿ ಎಲ್ಲರೂ ಸೇರಿ ನಿಂತಾಗ.. ಕ್ಯಾಮೆರಾ ಕೆಲಸ ಚಕ ಚಕ.. ಬಿಸಿಲಿನ ಝಳ ಇದ್ದರೂ ಕೂಡ, ಅದನ್ನು ಲೆಕ್ಕಿಸದೆ ಎಲ್ಲರೂ ಒಟ್ಟಿಗೆ ನಿಂತದ್ದು, ಖುಷಿ ಪಟ್ಟದ್ದು ಬೆಳ್ಳಿ ವಸಂತಗಳನ್ನು ದಾಟಿದ್ದ ನಾವು, ಸುವರ್ಣ ಸಂಭ್ರಮ ಅನುಭವಿಸುವ ಮುನ್ನವೇ ನಮಗೆ ಈ ರೀತಿಯ ಸುವರ್ಣ ಘಳಿಗೆ ಹೊತ್ತು ಬಂದದ್ದು ನಮ್ಮ ಭಾಗ್ಯವೇ ಸರಿ.. 

ಪುಷ್ಪ ಮೇಡಂ, ಜಾನಕಮ್ಮ ಮೇಡಂ, ಮಹಾಲಕ್ಷ್ಮಿ ಮೇಡಂ, ಈಶ್ವರಿ ಮೇಡಂ, ಗೀತಾ ಮೇಡಂ,
ಬಸವರಾಜ್ ಸರ್, ರಂಗಸ್ವಾಮಿ ಸರ್ 

ಕಾರ್ಯಕ್ರಮ ಏನೇ ಆದರೂ.. ಅದು ಮುಕ್ತಾಯ ಆಗೋದು ರುಚಿಕರ ಊಟದಲ್ಲಿ.. ಬಿಸಿಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ, ಚಿಪ್ಸ್, ಸಿಹಿ ತಿಂಡಿಗಳು. ಯಥೇಚ್ಛವಾಗಿದ್ದವು..ಗುರುಗಳು ಸಂತಸದಿಂದ ತಮಗೆ ಬೇಕಿದ್ದ ತಿಂಡಿ ತಿನಿಸುಗಳನ್ನು ಹಾಕಿಸಿಕೊಂಡು ತೃಪ್ತಿ ಹೊಂದಿದರು. 

ಎಲ್ಲಾ ಗೆಳೆಯರು ಸಂತೃಪ್ತಿಯಿಂದ ಊಟ ಮಾಡಿದ ಮೇಲೆ.. ಗುರುಗಳನ್ನು ಕರೆತಂದಿದ್ದವರು ಅವರ ಮನೆಗೆ ಬಿಟ್ಟು ಬಂದರು. ನಂತರ ಲೋಕಾಭಿರಾಮವಾಗಿ ಮಾತಾಡುತ್ತಾ, ಖರ್ಚು ವೆಚ್ಚಗಳ ಪಟ್ಟಿಯನ್ನು ಸಿದ್ಧಮಾಡಿ, ತಲೆದೋರಿದ್ದ ಕೆಲವು ಅನುಮಾನಗಳನ್ನು ದೂರಮಾಡಿ, ಮತ್ತೆ ಒಂದು ದಿನದ ಪ್ರವಾಸ ಅಥವಾ ಒಟ್ಟಿಗೆ ಒಂದು ಸ್ಥಳದಲ್ಲಿ ಕಳೆಯುವ ದಿನವನ್ನು ನಿರ್ಧಾರ ಮಾಡಿಕೊಂಡು ಹೊರ ಬಿದ್ದೆವು.. 

ಕಾರು ಸ್ಟಾರ್ಟ್ ಮಾಡಿದಾಗ "ಮನದಲ್ಲಿ ಆಸೆಯೇ ಬೇರೆ.. ಬದುಕಲ್ಲಿ ನೆಡೆವುದೇ ಬೇರೆ.. ವಿಧಿ ಬರೆದ ಹಾದಿಯೇ ಬೇರೆ" ಹಾಡು ಬಿತ್ತರಗೊಳ್ಳುತ್ತಿತ್ತು.. 

ಸಂತೃಪ್ತಿಯಿಂದ ಕ್ಯಾಮೆರಾ.. ತಾನೇ ಒಂದು ಪಾತ್ರವಾಗಿ ಆ ಗೆಳೆಯ ಗೆಳತಿಯಾರೊಡನೆ ಕೂಡಿಕೊಂಡು, ತಾನು ಒಂದು ಭಾಗವಾಗಿ ವೀಕ್ಷಕ ವಿವರಣೆ ಕೊಟ್ಟಿದ್ದ ಕ್ಯಾಮೆರಾ ತನ್ನ ಫ್ಲಾಶ್ ಆಫ್ ಮಾಡಿಕೊಳ್ಳುತ್ತಾ.. ಗೆಳೆಯರೇ ಮತ್ತೊಮ್ಮೆ ಸಿಗೋಣವೇ ಎಂದು ತಟಸ್ಥವಾಯಿತು.. 

ಅದರ ಹೊಟ್ಟೆಯೊಳಗೆ ಸಂತಸದಿಂದ ಉಕ್ಕಿ ಹರಿದಾಡಿದ ಚಿತ್ರಗಳನ್ನು ಮೆಲ್ಲನೆ ಹರಿಯಬಿಡತೊಡಗಿತು.. 

ನೋಡಿರಿ ಗೆಳೆಯರೇ ನನ್ನೊಡಲಲ್ಲಿದ್ದ  ಅಡಗಿಸಿಕೊಂಡಿದ್ದ ನವಿರಾದ ಆ ಸಂಭ್ರಮದ ಕ್ಷಣಗಳನ್ನು ಲಗತ್ತಿಸಿದ್ದೇನೆ ಆಸ್ವಾಧಿಸಿ.. !!!

******
ಯಪ್ಪಾ ... ರಾಜ.. ಇದೇನಿದು ಇಷ್ಟು ಭಾರವಾಗಿಟ್ಟಿದ್ದೀಯ.. ನನಗೆ ಆಗೋಲ್ಲ.. ಇಳಿ ಮೊದಲು.. ಅಲ್ಲಿಯ ತನಕ ಹುಬ್ಬು ಮೇಲೆ ಸಿಕ್ಕಿಸಿಕೊಂಡಿದ್ದ ರಾಜ ವಿಕ್ರಮ.. ಮೆಲ್ಲನೆ ತಿಳಿಯಾಗಿ ನಕ್ಕ.. ಬೇತಾಳ.. ಈಗ ನೋಡು.. ಈಗಲೂ ಭಾರವೇ.. 

ಅರೆ ಅರೆ.. ಇದೇನಿದು ವಿಕ್ರಮ ಚಕ್ರದಲ್ಲಿ ಗಾಳಿ ತೆಗೆದಂತೆ ನೀ ಇಷ್ಟು ಹಗುರಾಗಿ ಬಿಟ್ಟೆ.. ಏನಿದು ಆಶ್ಚರ್ಯ.. ?

ಬೇತಾಳವೇ.. ಪ್ರಶ್ನೆ ಕೇಳುವ ಸರದಿ ನನ್ನದು.. ನೀ ಅದಕ್ಕೆ ಉತ್ತರ ಕೊಡಬೇಕು.. ಆಯ್ತೆ.. ಈಗ ನಿನ್ನ ಮೆದುಳಿಗೆ ಕೆಲಸ ಕೊಡು.. ಮತ್ತೆ ಉತ್ತರ ಕೊಡು.. 

೧) ಹಸಿರು ಹಾಸು ಯಾಕೆ ಹಾಕಿದ್ದರು?
೨) ಗೆಳೆಯರಲ್ಲಿ ಯಾಕಷ್ಟು ತವಕ, ಕುತುಹೂಲ?
೩) ನಿರೂಪಣೆ ಮಾಡುವಾಗ.. ಯಾಕೆ ಕ್ಯಾಮೆರಾ ಎಡುವುತಿತ್ತು.. ?
೪) ನಾ ಕಥೆ ಹೇಳುವ ಬದಲು ಕ್ಯಾಮೆರಾ ಯಾಕೆ ಕಥೆ ಹೇಳುವಂತೆ ಮಾಡಿದೆ?
೫) ನನ್ನ ಹುಬ್ಬು ಯಾಕೆ ಮೇಲೇರಿತ್ತು
೬) ನಾ ಒಮ್ಮೆ ನಕ್ಕ ಕೂಡಲೇ ಯಾಕೆ ನನ್ನ ದೇಹದ ಭಾರ ಕಡಿಮೆ ಆಗಿ.. ಹೂವಿನಂತೆ ಹಗುರವಾದೆ?

ಬೇತಾಳ ತನ್ನ ಬೆಳ್ಳನೆಯ ತಲೆಗೂದಲನ್ನು ಒಮ್ಮೆ ಸರಕ್ ಸರಕ್ ಅಂತ ಹಿಂದೆ ಮುಂದೆ ಮಾಡಿಕೊಂಡು ವಿಕ್ರಮ ತಗೋ ನಿನ್ನ ಪ್ರಶ್ನೆಗೆ ನನ್ನ ಆನ್ಸರ್!!!

೧) ಹಸಿರು ಹಾಸು ಯಾಕೆ ಹಾಕಿದ್ದರು?
ಹಸಿರು ಕಣ್ಣಿಗೆ ತಂಪು.. ಹಸಿರಿಂದಲೇ ಉಸಿರು.. ಉಸಿರಿದ್ದರೆ ಹಸಿರು.. ಗೆಳೆತನದ ಈ ಉಸಿರು ಸದಾ ಹಸಿರಾಗಿರಲಿ.. ಅನೇಕ ವರ್ಷಗಳ ಕಾಲ ಶಬರಿಯಂತೆ ಕಾದಿದ್ದ ಎಲ್ಲರಿಗೂ ಈ ಕ್ಷಣ ಸದಾ ಹಸಿರಾಗಿರಲಿ ಎಂದು ಈ ಹಸಿರು ಹಾಸು ಹಾಕಿದ್ದರು. 

೨) ಗೆಳೆಯರಲ್ಲಿ ಯಾಕಷ್ಟು ತವಕ, ಕುತುಹೂಲ?
ನಲವತ್ತು ವರ್ಷಗಳು ದಾಟುವ ತನಕ.. ಬರಿ ನನ್ನದು, ನಾನು, ನನ್ನ ಬದುಕು, ಗುರಿ, ಸಂಪತ್ತು, ಆಸ್ತಿ ಅದು ಇದು ಅಂತ ಓಡಾಡ್ತಾ ಇರ್ತಾರೆ.. ನಂತರ.. ಜೀವನವನ್ನು ಒಮ್ಮೆ ತಿರುಗಿ ನೋಡಿದಾಗ, ತಮ್ಮ ಮಕ್ಕಳು ತಮ್ಮ ಸ್ನೇಹಿತರೊಡನೆ ಹಗಲು ರಾತ್ರಿ ಓಡಾಡುವಾಗ.. ಅರಿವಾಗುತ್ತೆ. .. ನನಗೂ ಗೆಳೆಯರಿದ್ದಾರೆ.. ಎಷ್ಟೋ ವರ್ಷಗಳಾಗಿವೆ ಮಾತಾಡಿ, ಸಂಪರ್ಕವಿಲ್ಲ.. ಇದೊಂದು ಅವಕಾಶ.. ಅದನ್ನು ಕಳೆದುಕೊಳ್ಳಲು ಯಾರೂ ಸಿದ್ಧರಿರಲಿಲ್ಲ.. ಕೆಲವೇ ನಿಮಿಷಗಳಿಗಾದರೂ ಸರಿ ಈ ಅಮೃತ ಘಳಿಗೆಯಲ್ಲಿ ಮೀಯಲು ಬೇಕು ಎಂದು ಶಪಥ ತೊಟ್ಟು ಬಂದಿದ್ದರು .. ಹಾಗಾಗಿ ಆ ತವಕ ಕುತೂಹಲ.. !

೩) ನಿರೂಪಣೆ ಮಾಡುವಾಗ.. ಯಾಕೆ ಕ್ಯಾಮೆರಾ ಎಡುವುತಿತ್ತು.. ?
ಅನೇಕ ಕಾರ್ಯಕ್ರಮಗಳನ್ನು ಕಂಡಿತ್ತು ಕ್ಯಾಮೆರಾ.. ಒಂದು ಕಾರ್ಯಕ್ರಮ ಅಂದರೆ ಹೀಗೆ ಎಂದು ಅದಕ್ಕೆ ಅರಿವಾಗಿತ್ತು.. ಹಿಂದಿನ ನೆನಪು, ಮುಂದಿನ ಕನಸು ಈ ಎರಡರ ಮಧ್ಯೆ ಅರಿವಾಗದ ಒಂದು ತಳಮಳವನ್ನು ತನ್ನ ಹೊಟ್ಟೆಯೊಳಗೆ ಇಟ್ಟುಕೊಂಡು ಒಂದು ರೀತಿಯಲ್ಲಿ ಅದನ್ನು ಹೊರಗೆ ಬಿಡದೆ, ಒಳಗೆ ಇಟ್ಟುಕೊಳ್ಳಲಾರದೆ ತಳಮಳಿಸುತ್ತಿತ್ತು, ಹಾಗಾಗಿ, ಕ್ಯಾಮೆರಾದ ದೇಹ ಅಲ್ಲಿದ್ದರೂ ಮನಸ್ಸು ಒಮ್ಮೊಮ್ಮೆ ಹುಲ್ಲುಗಾವಲಲ್ಲಿ ತೇಲುತ್ತಾ ತನ್ನ ಸಮಸ್ಯೆಯೊಡನೆ ಹೋರಾಡುತ್ತಿತ್ತು, ಹಾಗಾಗಿ ನಿರೂಪಣೆಯ ಬೆಳಕು ಕೊಂಚ ಕಡಿಮೆ ಪ್ರಕಾಶಮಾನವಾಗಿತ್ತು!!! 

೪) ನಾ ಕಥೆ ಹೇಳುವ ಬದಲು ಕ್ಯಾಮೆರಾ ಯಾಕೆ ಕಥೆ ಹೇಳುವಂತೆ ಮಾಡಿದೆ?
ವಿಕ್ರಮ.. ನಿನ್ನಲ್ಲಿ ಆಗಲೇ ಅನೇಕ ಹೋರಾಟ ನೆಡೆಯುತ್ತಿತ್ತು.. ನಿನ್ನ ದೇಹವೂ ಅದಕ್ಕೆ ಭಾರವಾಗಿತ್ತು.. ನೀ ಕಥೆ ಹೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.. ಅದಕ್ಕೆ ಬುದ್ದಿವಂತನಾಗಿ ಕ್ಯಾಮೆರಾ ಕೈಗೆ ಈ ಅವಕಾಶ ಕೊಟ್ಟೆ. ಕ್ಯಾಮೆರಾ ಯೋಚಿಸುವುದಿಲ್ಲ ತನ್ನ ಎದುರಿಗೆ ಏನೂ ಕಾಣುತ್ತದೆಯೋ ಅದನ್ನೇ ವಿವರಿಸುತ್ತೆ.. ಅದಕ್ಕೆ ನೀ ಹೀಗೆ ಮಾಡಿದೆ.. 
(ವಿಕ್ರಮ ಬೇತಾಳದ ಬೆನ್ನಿಗೆ ಶಭಾಷ್ ಕೊಟ್ಟು.. ಜೋರಾಗಿ ನಕ್ಕ)

೫) ನನ್ನ ಹುಬ್ಬು ಯಾಕೆ ಮೇಲೇರಿತ್ತು?
ಮೇಲೆ ಹೇಳಿದಂತೆ.. ನಿನ್ನಲ್ಲಿ ತಳಮಳಗಳು ಹೆಚ್ಚಾಗಿದ್ದವು.. ಮಾನಸ ಸರೋವರ ಕೊಂಚ ಕದಡಿತ್ತು.. ಆದರೂ ಅದು ಅಲ್ಲೊಲ್ಲ ಕಲ್ಲೋಲವಾಗಿರಲಿಲ್ಲ.. ಸರೋವರದಲ್ಲಿ ತರಂಗಗಳು ಏಳುತ್ತಿದ್ದಾಗ.. ನಿನ್ನ ಹುಬ್ಬು ಮೇಲೇರುತ್ತಿತ್ತು.. ನಂತರ ಶಾಂತವಾಗುತ್ತಿತ್ತು.. ಆದರೆ ಕೆಲವೊಮ್ಮೆ ಸಿಕ್ಕಿಸಿದ್ದ ಬಟ್ಟೆ ಅಲ್ಲೇ ನೇತಾಡುವಂತೆ ನಿನ್ನ ಹುಬ್ಬು ಅಲ್ಲೇ ಇರುತ್ತಿತ್ತು!!!

೬) ನಾ ಒಮ್ಮೆ ನಕ್ಕ ಕೂಡಲೇ ಯಾಕೆ ನನ್ನ ದೇಹದ ಭಾರ ಕಡಿಮೆ ಆಗಿ.. ಹೂವಿನಂತೆ ಹಗುರವಾದೆ?
ಮಾನಸ ಸರೋವರಕ್ಕೆ ಒಮ್ಮೆ ಕಲ್ಲು ಬೀರಿದಾಗ.. ಕಲ್ಲು ಬಿದ್ದ ಜಾಗದಲ್ಲಿ ವೃತ್ತಗಳು ಆರಂಭವಾಗುತ್ತವೆ.. ಆದರೆ ಆ ವೃತ್ತಗಳು ಬೆಳೆಯುತ್ತಾ ಹೋಗುತ್ತವೆ.. ದೊಡ್ಡದಾಗುತ್ತವೆ.. ಆದರೆ ಅದು ಅತಿ ದೊಡ್ಡದಾದ ಮೇಲೆ ತನ್ನ ಮೇಲೆ ಬೀಸುತ್ತಿರುವ ತಂಗಾಳಿಯ ಸ್ನೇಹದ ಬಂಧನದಲ್ಲಿ ಅವು ಮತ್ತೆ ಸಹಜ ಸ್ಥಿತಿಗೆ ಬರುತ್ತವೆ.. ನಿನ್ನ ಹುಬ್ಬು ಮೇಲೇರಿತ್ತು.. ಆದರೆ ಒಮ್ಮೆ ನೀ ಮಂದಹಾಸ ಬೀರಿದೆ.. ಆ ಮಂದಹಾಸದ ಮಾರುತದಲ್ಲಿ ನಿನ್ನ ಮನದಲ್ಲಿ ಏಳುತ್ತಿದ್ದ ತರಂಗಗಳು ಹಾಗೆ ಮಾಯವಾಗ ತೊಡಗಿತು.. ಹಾಗಾಗಿ ನಿನ್ನ ದೇಹ ಹಗುರವಾಗ ತೊಡಗಿತು.. 

ವಿಕ್ರಮ ಗಹ ಗಹಿಸಿ ನಗಲು ಶುರುಮಾಡಿದ.. ಬೇತಾಳವೂ ಜೋರಾಗಿ ನಗಲು ಶುರು ಮಾಡಿತು.. 

ಕ್ಯಾಮೆರಾ ಕ್ಲಿಕ್ ಕ್ಲಿಕ್ ಎಂದು ಒಂದೆರಡು ಚಿತ್ರಗಳನ್ನು ತೆಗೆಯಿತು.. 

ಕ್ಯಾಮೆರಾ ಮತ್ತೆ ಗಂಟಲು ಸರಿ ಪಡಿಸಿಕೊಂಡು "ಕಮಲಾ ನೆಹರು ಪಾಠ ಶಾಲೆಯ ಸಹಪಾಠಿಗಳೇ ಇಂದು ನೀವು ಹಮ್ಮಿಕೊಂಡ ಈ ಗುರುವಂದನಾ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಹರಿಯುವುದು ನದಿಯ ಸ್ವಭಾವವಾದರೂ, ಕಡೆಗೆ ಅದು ಸೇರುವುದು ಕಡಲನ್ನೇ.. ನೀವೆಲ್ಲರೂ ಜೀವನದ ಈ ರಂಗರಂಗದಲ್ಲಿ ಅನೇಕ ಸಾಹಸಗಳನ್ನು, ಕಷ್ಟಕರವಾದ ಸನ್ನಿವೇಶಗಳನ್ನು ಎದುರಿಸಿ ಜಯಶಾಲಿಗಳಾಗಿದ್ದೀರಾ.. ಈ ಯಶಸ್ಸು ಮತ್ತು ಇಂದು ನಿಮಗೆಲ್ಲ ಸಿಕ್ಕಾ ಗುರುಗಳ ಸಂತೃಪ್ತಿಯಿಂದ ಮಾಡಿದ ಆಶೀರ್ವಾದ ಖಂಡಿತ ನಿಮ್ಮನ್ನು ಇನ್ನಷ್ಟು ಎತ್ತರದ ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ.. ಈ ಸುವರ್ಣ ಸಂಭ್ರಮದ ಘಳಿಗೆಗಳನ್ನು ನನ್ನ ಮೂಲಕ ನಿಮಗೆಲ್ಲ ಮತ್ತು ಲೋಕಕ್ಕೆಲ್ಲಾ ಹಂಚಿಕೊಳ್ಳಲುಅವಕಾಶ ಮಾಡಿಕೊಟ್ಟ ವಿಕ್ರಮನಿಗೆ ನಮಸ್ಕರಿಸಿ.. ನಿಮಗೆಲ್ಲಾ ಶುಭಕೋರುತ್ತಿದ್ದೇನೆ. ಗುರುಭ್ಯೋ ನಮಃ!!!

ವಿಕ್ರಮ ಮತ್ತು ಬೇತಾಳ ಸಂತೃಪ್ತಿಯಿಂದ.. ನಕ್ಕು.. ಬೇತಾಳವೇ.. ನೀ ನನ್ನ ಸ್ನೇಹಿತ. ನೀ ಬಿಟ್ಟರೂ ನಾ ನಿನ್ನ ಬಿಡಲಾರೆ... ಹಾಗೆಯೇ ನಾ ಬಿಟ್ಟರೂ ನೀ ನನ್ನ ಬಿಡಲಾರೆ.. ನನಗೆ ನೀನು.. ನಿನಗೆ ನಾನು.. ನಮಗೆ ಈ ಲೋಕದ ಎಲ್ಲಾ ಸ್ನೇಹಿತರು.. 

ಬೇತಾಳ ಒಮ್ಮೆ ಜೋರಾಗಿ ಗಹಗಹಿಸಿ ನಕ್ಕು.. ವಿಕ್ರಮನಿಗೆ ಒಂದು ಆಲಿಂಗನ ಕೊಟ್ಟು.. ಮತ್ತೆ ಸೇರೋಣ.. ಈ ತುಂಟ ಗೆಳೆಯ ಗೆಳತಿಯರ ಇನ್ನೊಂದು ಸುವರ್ಣ ಘಳಿಗೆಯಲ್ಲಿ.. ಎಂದು ಹೇಳುತ್ತಾ ಸುಯ್ ಎಂದು ಹಾರಿ ಹೋಯಿತು.. !!!!

ವಿಕ್ರಮ ಸಂತೃಪ್ತಿಯಿಂದ.. ಮತ್ತೊಮ್ಮೆ ಕ್ಯಾಮೆರಾ ಹೇಳಿದ ಕಥೆಯನ್ನು ಮೆಲುಕು ಹಾಕುತ್ತಾ... ಮಂದ ಹಾಸ ಬೀರಿದ.. ಅವನ ದೇಹ ಇನ್ನಷ್ಟು ಹಗುರವಾಯಿತು.. !!!

Sunday, March 19, 2017

ಗೆಳೆತನದ ಕಡಲು - ಕಮಲಾ ನೆಹರು ಪಾಠ ಶಾಲಾ

ಬಾಸ್ ಪ್ಲಾನ್ ಯಾವಾಗಲೂ ವಿಶೇಷ ಮತ್ತು ವಿಶಿಷ್ಠ!!!
ಪ್ಲಾನಿಂಗ್ ಬಾಸ್ 

ಬೆಂಗಳೂರಿನಲ್ಲಿ ಮಾರ್ಚ್ ತಿಂಗಳು ಆ ಮಟ್ಟಿಗೆ ಚಳಿ ಇರೋದಿಲ್ಲ.. ಅದು ಎಲ್ಲರಿಗೂ ಗೊತ್ತು..

ಛಳ್.. ಛಳ್ ಒಂದಷ್ಟು ಹಸಿ ಬಿಸಿ ನೀರು ಮೈ ಮೇಲೆ ಬಿತ್ತು .. ನಿದ್ದೆಯ ಮಂಪರಿನಿಂದ ಎದ್ದ ವಿಕ್ಟರ್.. ಕಣ್ಣನ್ನು ಮತ್ತೆ ಉಜ್ಜಿಕೊಂಡಿತು..ಮತ್ತೆ ಒಂದು ಒಣಗಿದ ಬಟ್ಟೆಯಿಂದ ಮೈಯನ್ನು ತನ್ನ ಯಜಮಾನ ಒರೆಸುತ್ತಿದ್ದದ್ದು ಕಂಡು ಬಂತು.. ಮನಸ್ಸಿಗೆ ಸಂತಸ ತಂದಿತು.. ಯಜಮಾನ ಒಮ್ಮೆ ವಿಕ್ಟರ್ ನ ಮೈಯನ್ನು ತಡವಿದ.. ಇವತ್ತು ನೀನು ಕಣೋ.. "ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತಿದ್ದೀಯ..  " ವಿಕ್ಟರ್ ನಿಂತಲ್ಲೇ ಮೆಲ್ಲಗೆ ಮೈಯನ್ನು ಅಲುಗಿಸಿ ತನ್ನ ಸಮ್ಮತಿ ಕೊಟ್ಟಿತು.. ಹೊರಗೆ ನಿಂತಿದ್ದ ರಿಟ್ಜ್ ಗೆ ಸಂತಸವೋ ಸಂತಸ.. ತನ್ನ ಅಣ್ಣ ತನ್ನ ಯಜಮಾನನ ಮಿತ್ರರನ್ನ ಭೇಟಿಯಾಗುತ್ತಿದ್ದನಲ್ಲ ಎಂದು!!!

ವಿಕ್ಟರ್ ರಿಟ್ಜ್ ಗೆ ಹೇಳಿತು.. "ಸಾರಿ ಕಣೋ.. ಇವತ್ತು ನಿನ್ನ ಬದಲಿಗೆ ನಾ ಹೋಗುತ್ತಿದ್ದೇನೆ.. "
ನೋಡು ವಿಕ್ಟರ್ ನನ್ನ ಯಜಮಾನನ ಜೊತೆಯಲ್ಲಿ ಎಷ್ಟೋ ಮುಖ್ಯ ಘಟನೆಗಳಿಗೆ ನಾ ಸಾಕ್ಷಿಯಾಗಿದ್ದೇನೆ.. ನಾ ಬರುವ ತನಕ ನೀ ತಾನೇ ನಮ್ಮ ಯಜಮಾನನನ್ನು ಹೊತ್ತು ತಿರುಗಿಸುತಿದ್ದದು.. ಈಗಲೂ ನಮ್ಮಿಬ್ಬರನ್ನು ತನ್ನ ಹೃದಯ ಕಮಲದಲ್ಲಿ ಇಟ್ಟುಕೊಂಡಿದ್ದಾನೆ.. ಹಾಗಾಗಿ. ನಾ ಹೋದರೇನು ನೀ ಹೋದರೇನು.. ನಮ್ಮ ಯಜಮಾನನ ಸಂತಸ ಮುಖ್ಯ :-).. ನೀನು ಇವತ್ತಿನ ಕಾರ್ಯಕ್ರಮವನ್ನು ನಿನ್ನದೇ ಶೈಲಿಯಲ್ಲಿ ನೀ ಬಂದ ಮೇಲೆ ಹೇಳಬೇಕು ಆಯ್ತಾ.. ಹೋಗಿ ಬಾ ಆಲ್ ದಿ ಬೆಸ್ಟ್ ವಿಕ್ಟರ್..

ಮುಂದೆ... ವಿಕ್ಟರ್ ಉವಾಚ.. !!!

ಲಾಲ್ ಬಾಗ್ ಒಂದು ಐತಿಹಾಸಿಕ ಕ್ಷಣಕ್ಕೆ ಕಾಯುತ್ತಿತ್ತು.. ಸಾಮಾನ್ಯವಾಗಿ ಸಾಮಾಜಿಕ ತಾಣಗಳು ಮನುಜನನ್ನು ಗುಬ್ಬಿಯನ್ನಾಗಿಸಿದೆ.. ಕೈ ಚಾಚಿದರೆ ಸಿಗುವ ಗೆಳೆಯರು.. ಒಂದೆರಡು ಟಚ್ ನಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲಿದ್ದರೂ ಗೆಳೆಯ ಗೆಳತಿಯರ ಬಗ್ಗೆ ಮಾಹಿತಿಗಳು.. ಇವೆಲ್ಲವೂ ಅರೆ ನಾವೇನೂ ಚಂದ್ರಲೋಕದಲ್ಲಿದ್ದೇವೋ ಅಥವಾ.. ನ್ಯೂಟನ್ ನಿಯಮಗಳಿಗಿಂತ ಮುಂದಿದ್ದೇವೋ .. ಹೀಗೆ ಪ್ರಶ್ನೆಗಳು ಎದ್ದು ನಿಲ್ಲುವ ಹೊತ್ತದು..
ತಂತ್ರಜ್ಞಾನ ಕೈಗೆಟುಕುವ ಹಾದಿ - ಚೂರು ಪಾರು ಜಾರು 

ಆದರೆ ನಾವು ನೆಡೆಯುವ ಹಾದಿಗಳು ಕಣ್ಣಿಗೆ ಕಾಣುತ್ತಿರುತ್ತವೆ.. ಆದರೆ ಆ ಹಾದಿಯಲ್ಲಿ ಅಪರಿಚಿತ ಮುಖಗಳು ಹೆಚ್ಚು ಇರುತ್ತವೆ.. ಕಾಣುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಾಗ ನಮ್ಮ ಜೀವನದ ಹಾದಿಯಲ್ಲಿ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿಗಳು, ಗೆಳೆಯರು,ಗೆಳತಿಯರು, ಗುರುಗಳು, ಸಾಧಕರು ಇವರೆಲ್ಲರ ನುಡಿಮುತ್ತುಗಳು ಮಾಣಿಕ್ಯವಾಗಿ ನಮ್ಮ ಜೀವನದ ಕೊರಳಿನ ಸರಕ್ಕೆ ಮಣಿಗಳಾಗುತ್ತವೆ..
ಹೆಜ್ಜೆ ಗುರುತು ಮೂಡಿಸಿದ ಹಾದಿ ಎಂದಿಗೂ ಸುಂದರ 

ಒಂದು ಸಣ್ಣ ತಂತು ದೊಡ್ಡ ಬೆಸುಗೆಗೆ ನಾಂದಿಯಾಗುತ್ತದೆ ಎಂದು ಓದಿದ್ದ ನೆನಪು.. ಮತ್ತು ಅದು ನಿಜವಾಗುವ ಹೊತ್ತು ಕೂಡ ಕಾಲಗರ್ಭದಲ್ಲಿ ಹೂತು ಹೋಗಿದ್ದ ಆ ಕ್ಷಣ ಬಂದೆ ಬಿಟ್ಟಿತ್ತು..

ಒಂದೊಂದೇ ಜೋಡಿ ಹೆಜ್ಜೆಗಳು ಸ್ನೇಹದ ಕಡಲಿನ ತರಂಗಗಳ ಸ್ಪರ್ಶಕ್ಕೆ ಹಾತೊರೆದು ಬರುತ್ತಿದ್ದವು.. ಪ್ರತಿ ಹೆಜ್ಜೆಗಳು, ಪ್ರತಿ ತರಂಗಗಳು ತರುತ್ತಿದ್ದ ನೆನಪುಗಳು, ಮಾಹಿತಿಗಳು, ಕೀಟಲೆಗಳು, ತಮಾಷೆಯ ಕಾಲೆಳೆತಗಳು, ಮೂವತ್ತು ವರ್ಷಕ್ಕೂ ಹಿಂದಕ್ಕೆ ಅನಾಯಾಸವಾಗಿ ನಮ್ಮ ಕ್ಷಣಗಳು ಓಡಾಡುತ್ತಿದ್ದದು ನೋಡಿದರೆ ಆ ಬ್ರಹ್ಮನೂ ಒಮ್ಮೆ ಬೆರಗಾಗುತ್ತಿದ್ದ ಅನ್ನಿಸುತ್ತದೆ. ಆ ರೀತಿಯಲ್ಲಿ ಇತ್ತು ಇಂದಿನ ಹಬ್ಬದ ವಾತಾವರಣ..

ಒಂದೊಂದು ಸ್ನೇಹದ ಮನಸ್ಸು ಸ್ನೇಹದ ತರಂಗಗಳ ಮೇಲೆ ತೇಲಿ ಬಂದಾಗ ಒಂದೊಂದು ರೀತಿಯ ಅನುಭವ.. ತಂಗಾಳಿಯ ತರಹ ಕೆಲವರು ಬಂದರೆ, ಸುಗಂಧದ ಗಂಧ ಹೊತ್ತು ಬಂದವರು ಇನ್ನೊಬ್ಬರು, ನಗೆಗಡಲಿನ ಹಾಯಿ ದೋಣಿಯಲ್ಲಿ ಬಂದವರು ಒಬ್ಬರಾದರೆ, ಸುವಾಸಿತ ನಗುವಲ್ಲಿ ಮಿಂದು ಬಂದವರು ಇನ್ನೊಬ್ಬರು, ತಾಳ್ಮೆಯ ಹೆಜ್ಜೆ ಹಾಕುತ್ತ ಬಂದು ಎಲ್ಲರ ಹೃದಯಕ್ಕೂ ತಾಕುವ ಮನಸ್ಸಿನವರು ಒಬ್ಬರಾದರೆ, ಬಂದ ತಕ್ಷಣವೇ ಪ್ರಕೃತಿಯೇ ಒಮ್ಮೆ ಬೆಚ್ಚಿ ನಡುಗಿ ತನ್ನ ರೆಂಬೆ ಕೊಂಬೆಗಳನ್ನು ಧರೆಗೆ ಸೇರುವಂತೆ ಮಾಡಿಸುವವರು ಒಬ್ಬರು.. ಹೀಗೆ ಅಲ್ಲಿ ನವರಸ ಭಾವವೂ ಮಿಳಿತವಾಗಿತ್ತು..

ಮೂವತ್ತು ವರ್ಷಗಳು ಅಂದರೆ ಒಬ್ಬರು.. ಇನ್ನೊಬ್ಬರು  ಅಲ್ಲಾ ಅಲ್ಲ ಮೂವತ್ತ ಮೂರು, ಮೂವತ್ತಾ ನಾಲ್ಕು ಹೀಗೆ ಲೆಕ್ಕಗಳು ಹಾಗೆ ಹೀಗೆ ಆಗುತ್ತಿದ್ದವು ಆದರೆ ಆ ನಿರ್ಮಲ ಮನಸ್ಸಿನ, ಯಾವುದೇ ಜಂಜಾಟವಿಲ್ಲದ, ಕಪಟತನವಿಲ್ಲದ ಗೆಳೆತನದ ಮನಸ್ಸು ಎಲ್ಲರನ್ನು ಬಂಧಿಸಿತ್ತು.

ಪ್ರಾಥಮಿಕ ಶಾಲಾದಿನಗಳು ನಮ್ಮನ್ನು ಪ್ರಮುಖ ಹಾದಿಯಲ್ಲಿ ನೆಡೆಸಲು ಸಜ್ಜು ಗೊಳಿಸುವ ಹಂತ.. ಆ ಹಂತದಲ್ಲಿ ಈಜಿಕೊಂಡು, ಓಡಿಕೊಂಡು, ನೆಡೆದುಕೊಂಡು, ತೆವಳಿಕೊಂಡು ಬಂದಿದ್ದ ಗೆಳೆಯ ಗೆಳತಿಯರ ಸಮಾಗಮ ಒಂದು ಶತಮಾನದ ಅದ್ಭುತ ಎಂದು ಹೇಳಬಹುದು.. ಮೂರು ದಶಕಗಳು ನಮ್ಮ ಬಾಳಿನ ರಥವನ್ನು ಎಲ್ಲಾ ಕಡೆಯೂ ಹರಿಸಿತ್ತು.

ಸ್ನೇಹಕ್ಕೆ ಒಂದೇ ಮಾತು !!!
ಅವರವರು ಆಯ್ದು ಕೊಂಡ ವೃತ್ತಿ ಕ್ಷೇತ್ರದಲ್ಲಿ ಮೇರು ಮಟ್ಟವನ್ನು ತಲುಪಿದವರೇ ಇದ್ದವರು ಅಲ್ಲಿ.. ಅವರವರ ಸಾಧನೆಗೆ ಅವರ ಏಳಿಗೆಗೆ ಕಾರಣೀಕರ್ತರು ಹಲವಾರು ಆದರೆ ಎಲ್ಲರನ್ನು ಎಲ್ಲವನ್ನು ನೆನೆಪಿಸಿಕೊಳ್ಳುವ ಒಂದು ಭಾವುಕ ಕ್ಷಣವೂ ಅದಾಗಿತ್ತು.

ಸತೀಶ, ಮೋಹನ, ನವನೀತ, ಸುಧಾ, ನಂದಿನಿ, ಸುರೇಶ ಇವರುಗಳು ಪ್ರಮುಖರು.. ನಮಗೆ ಅವರ ಪರಿಚಯವಿದೆ.. ಅವನು ನನಗೆ ಗೊತ್ತು, ಇವಳು ನನಗೆ ಗೊತ್ತು.. ಮಾತಾಡಿಸಿ ಅವರ ಮೊಬೈಲ್ ಸಂಖ್ಯೆ ಕೊಡುತ್ತೇನೆ ಎಂದು ಒಂದು ರೀತಿಯಲ್ಲಿ ತಪಸ್ಸು ಮಾಡಿದಂತೆ ವಿವರಗಳನ್ನು ಕೊಟ್ಟು.. ಕೇವಲ ಅರವತ್ತು ದಿನದೊಳಗೆ ಸುಮಾರು ಹತ್ತಿರ ಹತ್ತಿರ ೩೦ ಸಹಪಾಠಿಗಳ ವಿವರಗಳನ್ನು ನನಗೆ ಕೊಟ್ಟರು.. ಇದೊಂದು ದಾಖಲೆಯೇ ಹೌದು.. ನಮ್ಮ ದಿನಗಳಲ್ಲಿ ಟೆಲಿಫೋನ್ ಒಂದೇ ಮಾಹಿತಿ ಕೇಂದ್ರವಾಗಿತ್ತು.. ಅನಂತರ ಜೀವನದ ಏಳು ಬೀಳುಗಳು ನಮ್ಮನ್ನೆಲ್ಲ ಈ ಮಾಯಾನಗರಿಯ, ಮಹಾನಗರಿಯ ಮೂಲೆ ಮೂಲೆಗೆ ಕಳುಹಿಸಿತ್ತು.. ಆದರೆ ಈ ಮೇಲೇ ಹೆಸರಿಸಿದ ಹಾಗೂ ಅವರ ಜೊತೆಯಲ್ಲಿ ಕೈಗೂಡಿಸಿದ ಪ್ರಕಾಶ ಎಂ ಎಸ್ ಇತರರ ಸಹಾಯದಿಂದ.. ಈ ಹನಿಯಾಗಿದ್ದ ಗುಂಪು ಒಂದು ನದಿಯಾಗಿ ಹರಿಯತೊಡಗಿದೆ.

ಪ್ರತಿಯೊಬ್ಬರಲ್ಲಿಯೂ ಈ ಭೇಟಿ ಒಂದೇ ಭೇಟಿಗೆ ನಿಲ್ಲಬಾರದು.. ಅವಿರತವಾಗಿ ಸಾಗಬೇಕು.. ಎಲ್ಲರ ಪರಿಚಯ ಎಲ್ಲರಿಗೂ ಆಗಬೇಕೆ ಎನ್ನುವ ಕಾಳಜಿ ಎಲ್ಲರಲ್ಲೂ ಇದ್ದದ್ದು ವಿಶೇಷ. ಇಂದು ಸೇರಿದ ಸುಮಾರು ಇಪ್ಪತ್ತೈದು ಮಂದಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಜೊತೆಯಾಗಿದ್ದವರಲ್ಲ.. ಮಧ್ಯದಲ್ಲಿ ಬಂದು ಸೇರಿದ, ಮಧ್ಯದಲ್ಲಿ ಬಿಟ್ಟು ಹೋದ, ಆರಂಭದಿಂದ ಕೊನೆಯವರೆಗೂ ಇದ್ದ.. ಮಧ್ಯದಲ್ಲಿ ಬಂದು ಮಧ್ಯದಲ್ಲಿಯೇ ಬಿಟ್ಟು ಹೋದ ಹೀಗೆ ನಾನಾ ಪ್ರಕಾರವಾದ ಕೊಂಡಿಗಳು, ಬಿರುಕುಗಳು ಇದ್ದರೂ ನಮ್ಮನ್ನೆಲ್ಲ ಬಂಧಿಸಿದ್ದು ಒಂದೇ .. ಅದೇ "ಗೆಳೆತನಕ್ಕೆ ಮಿಡಿಯುತ್ತಿದ್ದ ಮನಸ್ಸು"


ಜೊತೆಯಾಗಿ ಹಿತವಾಗಿ ಸೇರಿ ನಲಿವ ಸೇರಿ ನುಡಿವ 
ಎಲ್ಲರಿಗೂ ಸಂತಸ ತಂದ ದಿನವಿದು.. ಮತ್ತೊಮ್ಮೆ ಎಲ್ಲರೂ ಸೇರುವ ವಿಶ್ವಾಸ ಮೂಡಿಸಿದ್ದು ಈ ಭೇಟಿಯ ವಿಶೇಷವಾಗಿತ್ತು. ಆರಂಭಿಕ ವಿದ್ಯಾಭ್ಯಾಸದ ದಿನಗಳ ಗುರುಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಾರೆ ಎಂದು ಮೇಲೆ ಉಲ್ಲೇಖ ಮಾಡಿದ್ದಂತೆಯೇ.. ಆ ಗುರುಗಳನ್ನು ನಮ್ಮ ಶಕ್ತಿಗೆ ಅನುಸಾರವಾಗಿ, ನಮ್ಮ ಶ್ರದ್ಧೆ ಭಕ್ತಿಗೆ ಅನುಸಾರವಾಗಿ ನಮ್ಮ ಗೌರವ ತೋರಿಸಬೇಕು ಎನ್ನುವ ಎಲ್ಲರ ಒಕ್ಕೊರಲಿನ ಮನವಿಯ ಕರೆಗೆ ಒಗೂಡುತ್ತಾ ಬರುವ ಏಪ್ರಿಲ್ ಮಾಸದ ಒಂದು ಶುಭ ಭಾನುವಾರ.. ಮತ್ತೆ ಎಲ್ಲರೂ ಸೇರುವ ಜೊತೆಯಲ್ಲಿ ಶಿಕ್ಷಕರ ಜೊತೆಯಲ್ಲಿ ಒಂದಷ್ಟು ಸಂಭ್ರಮದ ಘಳಿಗೆಯನ್ನು ಕಳೆಯುವ ನಿರ್ಧಾರದೊಂದಿಗೆ ಇಂದಿನ ಭಾವುಕ ಭೇಟಿ ಸುಸಂಪನ್ನವಾಗಿತ್ತು.

ಎಲ್ಲರಿಗೂ ಈ ಭೇಟಿಯ ಕ್ಷಣಗಳನ್ನು ಬಂಧಿಸಿಟ್ಟುಕೊಳ್ಳಬೇಕು ಎನ್ನುವ ಕಾತುರ ಎಷ್ಟು ಇತ್ತು ಎನ್ನುವುದಕ್ಕೆ ಸಾಕ್ಷಿ ಈ ಗೆಳಗಿನ ಚಿತ್ರ..
ಕ್ಷಣಗಳನ್ನು ಕ್ಷಣ ಕ್ಷಣಕ್ಕೆ ಹಿಡಿಯುವ ಜಾದೂಗಾರರು !!!
ಈ ಸುಂದರ ದಿನ. ಸುಮಧುರ ಮಿಲನದ ದಿನ ಎಂದು ಕರೆದವರು ಒಬ್ಬರು, ಮನಸ್ಸಿಗೆ ಮುದ ನೀಡಿದ ರೋಮಾಂಚನಗೊಳಿಸಿದ ದಿನ, ಮಧುರ ಮಿಲನದ ದಿನ.. ಸೂಪರ್ ಸಂಡೇ ಎಂದವರು ಒಬ್ಬರು.. ಗೆಳೆಯರ ಮಿಲನದ ದಿನ ಎಂದವರು ಒಬ್ಬರು, ಇಂದಿನ ದಿನ ಸುದಿನ ಎಂದವರು ಇನ್ನೊಬ್ಬರು.. ತಮ್ಮ ಅನುಭವದ ಬುತ್ತಿಯನ್ನು ಗೆಳೆಯ ಗೆಳತಿಯರ ಜೊತೆಯಲ್ಲಿ ಹಂಚಿಕೊಂಡ ಕ್ಷಣ ಮಧುರ..

ಚಿಟ್ಟಿಬಾಬು ಮತ್ತು ಭಾಗ್ಯಲಕ್ಷ್ಮಿ ಸಿಹಿಯನ್ನು ತಂದು ಎಲ್ಲರಿಗೂ ಹಂಚಿದ್ದು ಈ ಗೆಳೆತನದ ಸ್ವರ್ಗಕ್ಕೆ ಮೂರು ಗೇಣು ಎನ್ನುವುದು ಸಾಬೀತಾಗಿತ್ತು..
ಚಿಟ್ಟಿಯ ಸಿಹಿ ಖಾದ್ಯ.. ಸ್ನೇಹದ ಕಡಲಿಗೆ ತಂದ ಬುತ್ತಿ 

ಸಿಹಿ ಭಾಗ್ಯ ಸಿಕ್ಕಿದ ಘಳಿಗೆ - ಭಾಗ್ಯಲಕ್ಷ್ಮಿ ಹೊತ್ತು ತಂದ ಮಧುರ ಘಳಿಗೆ
ಈ ಮಧುರ ನೆನಪುಗಳ ಭಾವವನ್ನು ಕೇಳಿದ ರಿಟ್ಜ್ ಒಂದು ಕ್ಷಣ ಆನಂದಭಾಷ್ಪ ಸುರಿಸಿತು.. ವಿಕ್ಟರ್ ನೀನೇ ಧನ್ಯ.. ಈ ಅಮೋಘ ಕ್ಷಣದ ಹಂತಹಂತವನ್ನು ಚಿತ್ರಗಳಲ್ಲಿ ತೆರೆದಿಟ್ಟ ನಿನಗೆ ನಾ ಧನ್ಯವಾದಗಳನ್ನು ಅರ್ಪಿಸುತ್ತೇನೆ.. ಅದು ಹೇಗೆ ಎಂದು ಹೊಳೆಯುತ್ತಿಲ್ಲ ಎಂದಾಗ.. ವಿಕ್ಟರ್ ಹೇಳಿತು.. ರಿಟ್ಜ್ ನಾ ಹೇಳಿದ ವಿವರಗಳಿಗೆ ಕೆಲವು ಚಿತ್ರಗಳಿವೆ ಅದಕ್ಕೆ ನೀ ಅಡಿ ಟಿಪ್ಪಣಿ ಕೊಟ್ಟು ಬಿಡು.. ಅಷ್ಟು ಸಾಕು ಎಂದಿತು...

ಗೆಳೆಯರೇ ನನ್ನ ಪ್ರೀತಿಯ ಮಕ್ಕಳಾದ ವಿಕ್ಟರ್ ಬೈಕ್ ಮತ್ತು ನನ್ನ ರಿಟ್ಜ್ ನಡುವೆ ನೆಡೆದ ಸಂಭಾಷಣೆಗಳಿಗೆ ಪೂರಕವಾಗಿ ಚಿತ್ರಗಳು ನಿಮಗಾಗಿ..
ಜಗದೇಕವೀರ ಜಗ್ಗ 

ಫಳ್ ಎಂದು ನಗುವ ನಗುಮೊಗದ ಚೆಲುವ ನಾರಾಯಣ 

ಹಹಹಹ .. ತರಲೆ ಸುಬ್ಬಾ - ವೆಂಕಟಸ್ವಾಮಿ 

ಮಾಹಿತಿ ಕಣಜ - ನಗುಮೊಗದ ನವನೀತ 

ಒಮ್ಮೆ ಕ್ಲಿಕ್ಕಿಸಿ ಎನ್ನುವ - ಚಿತ್ರಗಾರ - ನಾಗರಾಜ 

ಎಲ್ಲಾ ಕಡೆ ನಂದೇ ಹವಾ ಎನ್ನುವ ವಿಜಯ ನಾರಸಿಂಹ 

ಸಮಾಧಾನದ ಚಿತ್ತ ಪುರುಷ - ಸತೀಶ್ ರಾವ್ 

ಗೆಳೆತನದ ಶಕ್ತಿ - ಸತೀಶ 

ಸದಾ ಹಸನ್ಮುಖಿ - ಯೋಗ ನರಸಿಂಹ 

ಗುಳಿಗೆನ್ನೆಯ ಸರದಾರ - ಪ್ರಕಾಶ 

ದೇಶ ಮತ್ತು ಗೆಳೆತನ ಕಾಯುವ - ಚಿಟ್ಟಿಬಾಬು 

ಸುಂದರ ನಗುವಿನ ಸುಧಾ ಪುಟ್ಟಾ 

ಮಹಿಳಾ ಮಣಿರತ್ನ - ನಂದಿನಿ 

ಗೆಳೆತನದ ಸುಂದರ ಅಕ್ಷರ - ಯಮುನಾ 

ನಿಮ್ಮ ಜೊತೆಯಾಗುವೆ - ರಾಮು 

ನಾ ನಿಮ್ಮ ಜೊತೆ - ಮುರುಳಿ 

ನಾ ಇದ್ದೀನಿ ಕಣೋ ಎನ್ನುವ - ಚಲಪತಿ 

ಚೆಲುವಾಂತ ಚೆನ್ನಿಗ - ಜಗದೀಶ  

ತಲೈವಿ ರೇವತಿ 

ಗುಂಪಿಗೆ ಶಕ್ತಿ  ಮತ್ತು ರಕ್ಷಣೆ ಕೊಡುವ ಪ್ರಕಾಶ 

ಸದಾ ನಗುವ ನಗಿಸುವ ಶೋಭನ್ ಬಾಬು 

ತಾಳ್ಮೆಮತ್ತು ಮಿತ ಮೃದು ಭಾಷಿ ಸುರೇಶ 

ಸಿಹಿ ಭಾಗ್ಯಮ್ಮ -  ಭಾಗ್ಯಲಕ್ಷ್ಮಿ  


ಈ ಇಡೀ ಲೇಖನವನ್ನು ಬರೆದ ಕಥೆಗಳ ಮಾಲೀಕ 
ಕಥೆಗಳ ಬಾಸೂ!!!!
ಈ ಸುಂದರ ದಿನವನ್ನು ಇನ್ನಷ್ಟು ಸುಂದರವನ್ನಾಗಿಸಿದ ನಿಮಗೆಲ್ಲ ಒಂದೇ ಮಾತಿನಲ್ಲಿ ಹೇಳುವೆ "

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು ...!!!