Thursday, May 7, 2020

DFR.. The inspiring personality!

ಗಾಬರಿಯಿಂದ ಬಡ ಬಡ ಅಂತ ಬಾಗಿಲು ಬಡಿಯುತ್ತಿದ್ದಳು.. ಸೆಕ್ಯೂರಿಟಿ ಕಣ್ಣುಜ್ಜಿಕೊಂಡು.. 

:ಯಾರಮ್ಮ, ಏನಮ್ಮ.. ಯಾಕಮ್ಮ "

ವಿಚಿತ್ರವಾದರೂ ಕೇಳಿದ ಪ್ರಶ್ನೆಗಳೆಲ್ಲಾ ಆ ಹೊತ್ತಿಗೆ  ಸರಿ ಇತ್ತು.. 

"@#@#@#@#@# ನಂಬರ್ ಗೆ ಫೋನ್ ಮಾಡಿ.. ಅವರನ್ನ ಅರ್ಜೆಂಟಾಗಿ ನೋಡಬೇಕಿತ್ತು.." 

"ಮೋ.. ಈಗ ಘಂಟೆ ನೋಡಿದ್ದೀರಾ.. ಆಗಲೇ ಮಧ್ಯ ರಾತ್ರಿ ಎರಡು ಘಂಟೆ.. ಇಷ್ಟು ಹೊತ್ತಿನಲ್ಲಿ ಯಾರಮ್ಮ.. ಏನಮ್ಮ.. ಯಾಕಮ್ಮ"

"ಸರ್ ... ನನ್ನ  ಕತೆ ಈಗ ನಿಮಗೆ ಹೇಳೋಕೆ ಆಗಲ್ಲ..  ಅವರನ್ನು ಕರೆಯಿರಿ.. ನನ್ನನ್ನ ಒಳಗೇನು ಬಿಡಬೇಡಿ.. ನನ್ನ ಮೊಬೈಲ್ ಕರೆನ್ಸಿ ಖಾಲಿಯಾಗಿದೆ"

ಗೊಣಗಿಕೊಂಡೆ.. ಹಚ್ಚಿದ್ದ ಬೀಡಿಯನ್ನು ಬಿಸಾಕಿ.. ಇಂಟೆರ್ ಕಾಮ್ ಫೋನ್ ತೆಗೆದುಕೊಂಡು ಮೂರು ನಂಬರ್ ಒತ್ತಿದ.. ಒಂದಷ್ಟು ಹೇಳಿದ.. ಹೆಸರನ್ನು ಹೇಳಿದ.. 

"ಸರಿ ಕಣಮ್ಮ .. ಹತ್ತು ನಿಮಿಷ ಬರ್ತಾರಂತೆ.. ಇಲ್ಲಿಯೇ ಕೂತುಕೊಳ್ಳಿ.. ಹೊರಗೆ ವಿಪರೀತ ಚಳಿ ಇದೆ"... ಮೇ ತಿಂಗಳಾಗಿದ್ದರೂ ಕಳೆದ ಕೆಲವು ದಿನಗಳ ಮಳೆ ವಾಣಿಜ್ಯ ನಗರಿಯನ್ನು ಚಳಿಯ  ಕಡಲಿಗೆ ದೂಡಿತ್ತು.. 

"ಯಸ್.. ಹಾಯ್.. ಏನು ಮೇಡಂ ನೀವು ಈ ಹೊತ್ತಿನಲ್ಲಿ.. ಏನಾಯ್ತು"

ಬಂದಾಕೆ ಹಾಗೆ ಅಳುತ್ತಾ.. ಇವರನ್ನು ಹಗ್ ಮಾಡಿ.. "ಬನ್ನಿ ನನ್ನ ಜೊತೆ ಹೇಳುತ್ತೇನೆ.. "

"ಓಹ್.. ಸರಿ.. ಒಂದು ಹತ್ತು ನಿಮಿಷ... ಮನೇಲಿ ಹೇಳಿ... ಕಾರು ತೆಗೆದು ಬರುತ್ತೀನಿ.. "

"ಮೇಡಂ.. ಕಾರು ನನ್ನದೇ ಇದೆ.. ಇಲ್ಲಿಂದಲೇ ಕರೆ ಮಾಡಿ..  " ಎನ್ನುತ್ತಾ ಸೆಕ್ಯುರಿಟಿಯ ಫೋನ್ ಕಿತ್ತುಕೊಂಡು.. "ರೀ.. ಮನೇಲಿ ಇಷ್ಟು ಹೊತ್ತಿಗೆ ಮಲಗಿರ್ತಾರೆ.. ಇಂಟೆರ್ ಕಾಂ ಕರೆ ಸರಿ ಹೋಗಲ್ಲ." ಎಂದು ಹೇಳಿ.. ಫೋನಿನಲ್ಲಿ ವಿಷಯ ಹೇಳೋಕೆ ಸಿದ್ಧ ಮಾಡಿ.. ಅವರನ್ನು ಅಕ್ಷರಶಃ ತೋಳು ಹಿಡಿದುಕೊಂಡೆ ತಮ್ಮ ಕಾರಿನತ್ತ ಕರೆದೊಯ್ದರು.. 

ಮುಂದಿನ ಹತ್ತು ನಿಮಿಷ.. ಇಬ್ಬರೂ ಕಾರಲ್ಲಿ ಹೊರಟರು.. 

ಕಣ್ಣು ಒರೆಸಿಕೊಳ್ಳುತ್ತಲೇ ಆಕೆ ಡ್ರೈವ್ ಮಾಡುತ್ತಿದ್ದಳು.. ವಿಷಯ ಬರಲಿ ಅಂತ ಈಕೆಯೂ ಆ ಕತ್ತಲಿನ ರಸ್ತೆಯನ್ನು ನೋಡುತ್ತಾ ಕುಳಿತಿದ್ದರು.. 

ಸುಮಾರು ಒಂದು ಘಂಟೆ ಡ್ರೈವ್ ಆದ ಮೇಲೆ.. ಊರಿನ ಆಚೆ ಇದ್ದ ದೊಡ್ಡ ಬಂಗಲೆಯ ಒಳಗೆ ನುಗ್ಗಿತು.. 

"ಬನ್ನಿ ಮೇಡಂ.. ಸಾರಿ ಏನು ಮಾತಾಡಲಿಲ್ಲ.. ಬೇಸರ ಬೇಡ.. ಬನ್ನಿ ಒಳಗೆ.. "

ಸದಾ ಶಾಂತ ಮೂರ್ತಿಯಾಗಿದ್ದ ಇವರಿಗೆ ಕೋಪ ಬಂದರೂ ಒಳಗೆ ನುಂಗಿಕೊಂಡು .. ಏನೋ ವಿಷಯ ಇದೆ.. ಇಲ್ಲದೆ ಇದ್ದರೇ ಈ ರೀತಿ ಇಷ್ಟು ಹೊತ್ತಿಗೆ ಕರೆಯುತ್ತಿರಲಿಲ್ಲ ಎಂದು  ಆಕೆಯ ಬಗ್ಗೆ ಗೊತ್ತಿದ್ದರಿಂದ ಸುಮ್ಮನೆ ಒಳನೆಡೆದರು. 

ಒಳಗೆ ಹೋದರೆ.. ಇವರಿಗಿಷ್ಟವಾದ ಬಿಸಿ ಬಿಸಿ ಸ್ಟ್ರಾಂಗ್  ಕಾಫೀ ಕೊಟ್ಟರು... 

ಸರಿ ಬಂದದ್ದು ಆಗಿದೆ.. ಆಗಿದ್ದು ಆಗಲಿ ಅಂತ ಬಿಸಿ ಬಿಸಿ ಕಾಫೀ ಕುಡಿದಾಗ.ಆ ತಣ್ಣನೆಯ ವಾತಾವರಣಕ್ಕೆ ಕಾಫೀ ಅಮೃತವಾಗಿತ್ತು.. !

"ಮೇಡಂ.... ಇವಳು ನನ್ನ ತಂಗಿ ಮೀನಾ.. ಇವಳು ಆಫೀಸ್ ಇಂದ ಮನೆಗೆ ಬರುವಾಗ .. ಯಾರೋ ಇವಳ ಹತ್ತಿರ ಬಂದು ಪರ್ಸ್ ಕಿತ್ತುಕೊಂಡು ಹೋಗಿದ್ದರು.. ಇವಳು ಪೊಲೀಸ್ ಸ್ಟೇಶನ್ನಿಗೆ ಹೋದರೆ ಸುಮ್ಮನೆ ಗೋಳಾಡಿಸುತ್ತಾರೆ ಅಂತ ಹೋಗಿಲ್ಲ.. ಈಗ ಸಂಜೆ.. ಪೊಲೀಸ್ ಸ್ಟೇಷನಿಂದ ಕರೆ ಬಂದಿತ್ತು.. ನಿಮ್ಮ ವಸ್ತುಗಳು ಒಂದು   ಮರದ ಹತ್ತಿರ ಬಿದ್ದಿತ್ತು.. ಅದರ ಪಕ್ಕ ಮಳೆಯಲ್ಲಿ ನೆಂದು ತೊಪ್ಪೆಯಾಗಿದ್ದ ವ್ಯಕ್ತಿಯೂ ಬಿದ್ದಿದ್ದನು .. ನೀವು ಕೂಡಲೇ ನಿಮ್ಮ ಮನೆ ಹತ್ತಿರ ಇರುವ ಸ್ಟೇಷನಿಗೆ ಬನ್ನಿ.. ಅಂತ ಹೇಳಿದರು. ನಮಗೆ ಏನೂ ತೋಚದೆ.. ನಿಮ್ಮ ನೆನಪು ಬಂತು.. ಅದಕ್ಕೆ ಕಷ್ಟವಾದರೂ ಸರಿ.. ದೂರವಾದರೂ ಸರಿ ಎಂದು ಈ ಅವೇಳೆಯಲ್ಲಿ ಬಂದೆ.. ಸಾರಿ ಮೇಡಂ.. ನಮಗೆ ನೀವೇ ದಾರಿ ತೋರಿಸಬೇಕು.. ನಮಗೆ ಪೊಲೀಸ್ ಸ್ಟೇಷನ್, ಪೊಲೀಸು ಅಂದ್ರೆ ಭಯ.. ಅದಕ್ಕೆ  ನನ್ನ ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಪ್ಪ, ಅಜ್ಜ ಅಜ್ಜಿ  ಚಿಂತೆಯಿಂದ ನಿದ್ದೆ ಮಾಡಿಯೇ ಇಲ್ಲ.. ನೋಡಿ ನೋಡಿ ಎಲ್ಲರೂ ನಿಮ್ಮನ್ನೇ ಕಾಯುತ್ತಿದ್ದಾರೆ.." ಅಂದದ್ದೇ ತಡ.. ರೂಮಿನಲ್ಲಿದ್ದ ಒಂದು ಕುಟುಂಬವೇ ಹಾಲಿಗೆ ಬಂದು ಕೈ ಮುಗಿದವು ಇವರಿಗೆ..

ಕಾಫೀ ಮುಗಿದಿತ್ತು .. ಕಾಫೀ ಪ್ರಿಯೆ ಆಗಿದ್ದ ಇವರಿಗೆ ತನಗೆ ಪರಿಚಯವಿದ್ದ ಸಂಜನಾ ಹೇಳಿದ್ದು ಕೇಳುತ್ತ ಇದ್ದದ್ದರಿಂದ ಕಾಫೀ ರುಚಿ ಹತ್ತಿರಲಿಲ್ಲ.. "ಸಂಜನಾ.. ಇನ್ನೊಂದು ಕಪ್ ಕಾಫೀ ಹೇಳಿ.. ಸ್ವಲ್ಪ ಯೋಚಿಸೋಕೆ ಸಮಯಕೊಡಿ" ಎನ್ನುತ್ತಾ  ಹೊರಗೆ ಬಂದರು.. ತಂಪಾದ ಗಾಳಿ ಚಳಿಯನ್ನು ಹೊತ್ತು ತರುತ್ತಿದ್ದರೂ .. ಈ ಅವೇಳೆಯಲ್ಲಿ ಈ ರೀತಿಯ ವಿಚಿತ್ರ ಪ್ರಸಂಗ.. ಚಳಿಯನ್ನು ಹೊರದೂಡಿತ್ತು.. ಜೊತೆಗೆ ತನಗಿಷ್ಟವಾದ ಜಾಕೆಟ್, ಗ್ಲೌಸ್, ಟೋಪಿ ಚಳಿಯನ್ನು ತಡೆಯಲು ಸಹಾಯ ಮಾಡಿತ್ತು.. 

ಕಾಫಿ ಬಂತು.. ಕುಡಿದ ಮೇಲೆ ಹೊಸ ಚೈತನ್ಯ ಬಂತು.. "ಮೀನಾ ಗಾಬರಿ ಬೇಡ.. ಬನ್ನಿ.. ಸಂಜನಾ ನಿಮ್ಮ ಕಾರನ್ನು ನಾನೇ ಡ್ರೈವ್ ಮಾಡುತ್ತೇನೆ. ನಡೀರಿ ಹೋಗೋಣ .. ಎನ್ನುತ್ತಾ ಮನೆಯವರಿಗೆ ಧೈರ್ಯ ಹೇಳಿ.  ಬೇಗ ಬರುತ್ತೇವೆ.. ಯೋಚಿಸಬೇಡಿ ಎಂದು ಹೇಳಿ  ಹೆಬ್ಬೆರಳನ್ನು ತೋರಿಸುತ್ತಾ ಹೊರಗೆ ಬಂದರು.. 

"ಅಮ್ಮ ಮೇಡಂ ಇದ್ದಾರೆ.. ಎಲ್ಲವನ್ನು ನೋಡಿಕೊಳ್ತಾರೆ.. ಯೋಚಿಸಬೇಡಿ. .. ನನಗೂ ಅವರದ್ದೇ ಧೈರ್ಯ .. ಅದಕ್ಕೆ ಕರೆದುಕೊಂಡು ಬಂದಿದ್ದು". ಎನ್ನುತ್ತಾ ಬಾಗಿಲನ್ನು ಎಳೆದುಕೊಂಡು ಲಾಕ್ ಮಾಡಿಕೊಂಡು ಹೊರಟಳು ..  ಸಂಜನಾ.. 

ಮೀನಾ ಸಂಜನಾ ಕಾರಿನಲ್ಲಿ ಕೂತರು.. ಇವರು ಡ್ರೈವ್ ಮಾಡುತ್ತಾ ಹತ್ತಿರದಲ್ಲಿಯೇ ಇದ್ದ ಪೊಲೀಸ್ ಸ್ಟೇಷನಿಗೆ ಬಂದರು.. 

"ನಮಸ್ಕಾರ ಮೇಡಂ.. ಇದೇನಿದು ಇಷ್ಟು ಹೊತ್ತಲ್ಲಿ.. " ಅಚ್ಚರಿಯ ದನಿಯಲ್ಲಿ ಕಾನ್ಸ್ಟೇಬಲ್ ಶರಣಪ್ಪ ಕೇಳಿದರು.. 

"ನಮಸ್ಕಾರ ಶರಣಪ್ಪ ಸಾಹೇಬ್ರು ಇದ್ದಾರಾ?"

"ಇದ್ದಾರೆ ಮೇಡಂ.. ಒಳಗೆ ಹೋಗಿ.. ಯಾವುದೋ ಕೇಸು ಸ್ವಲ್ಪ ತಲೆ ಬಿಸಿ ಮಾಡ್ಕೊಂಡಿದ್ದಾರೆ"

ಒಳಗೆ ಬಂದು.."ನಮಸ್ಕಾರ ಸರ್" 

ಸಿಗರೇಟು ಸೇದುತ್ತಾ ಯಾವುದೊ ಫೈಲ್ ನಲ್ಲಿ ಮುಳುಗಿದ್ದ ಇನ್ಸ್ಪೆಕ್ಟರ್ ದನಿ ಬಂದತ್ತ ತಿರುಗಿ "ಓಹ್ ಓಹೋ ನಮಸ್ಕಾರ ಮೇಡಂ.. ಏನಿದು ಆಶ್ಚರ್ಯ ಇಷ್ಟು ಹೊತ್ತಿನಲ್ಲಿ.. ಬನ್ನಿ ಬನ್ನಿ ಕುಳಿತುಕೊಳ್ಳಿ" ಎಂದು ಕುರ್ಚಿತೋರಿಸಿ "ಸಾರಿ ಮೇಡಂ.. ರಾತ್ರಿ ಹೊತ್ತು ಈ ಚಳಿ.. ಜೊತೆಗೆ ಈ ಹಾಳಾದ ಕೇಸುಗಳು ತಲೆ ಕೆಡಿಸುತ್ತವೆ.. ಇದಿಲ್ಲ ಅಂದರೆ ತಲೆ ಓಡೋಲ್ಲ " ಎನ್ನುತ್ತಾ ಸಿಗರೇಟ್ ಆಶ್ ಟ್ರೆಗೆ ಹಾಕಿ "ಹೇಳಿ ಮೇಡಂ ಬಂದ ವಿಚಾರ"

"ನಮಸ್ಕಾರ ಸರ್.. ಇವರು ನನ್ನ ಆತ್ಮೀಯ ಗೆಳತೀ.. ನಿಮ್ಮ ಸ್ಟೇಷನಿಂದ ಕರೆ ಮಾಡಿದ್ದರಂತೆ.. ಇವರಿಗೆ ಪೊಲೀಸ್ ಅಂದರೆ ಹೆದರಿಕೆ.. ಅದಕ್ಕೆ ಸಹಾಯ ಮಾಡೋಣ ಅಂತ ಬಂದೆ.. "

"ಏನ್ ಮೇಡಂ ನಾವೇನೂ ರಾಕ್ಷಸರ.. ಇವರನ್ನು ತಿಂದು ಬಿಡ್ತೀವಾ..  ನಮಗೂ ಅಕ್ಕ ತಂಗಿಯರು ಇದ್ದಾರೆ ಮೇಡಂ" ಜೋರಾಗಿ ನಗುತ್ತ.. "ಮೀನಾ ಮೇಡಂ ಅಂದರೆ ಯಾರು? .. ಈ ಕಡೆ ಬನ್ನಿ ನಿಮ್ಮ ಪರ್ಸ್ ನೋಡಿ.. ನಿಮ್ಮದೇನಾ ಹೇಳಿ"

ಮೀನಾ ಹೆದರುತ್ತಲೇ.. ಬಂದು.. ಪುರ್ಸ್ ಮುಟ್ಟದೆ.. ಅದನ್ನು ನೋಡಿ.. ಸರ್.. ಇದು ನನ್ನದಲ್ಲ.. "

ಅಚ್ಚರಿಗೊಂಡ ಇನ್ಸ್ಪೆಕ್ಟರ್.. "ನಿಮ್ಮ ಹೆಸರಿದೆ ಮೇಡಂ ನೋಡಿ".. 

ಆಗ ಇವರು ಎದ್ದು.. " ಏನ್ ಸರ್. ನಾ ನೋಡಬಹುದೇ.. ಅವರಿಗೆ ಇನ್ನೂ ಹೆದರಿಕೆ ಹೋಗಿಲ್ಲ" 

"ಬನ್ನಿ ಮೇಡಂ.. ನೋಡಿ ಪರವಾಗಿಲ್ಲ.. ಫಿಂಗರ್ ಪ್ರಿಂಟ್ಸ್  ತರಲೆ ಏನೂ ಇಲ್ಲ.. ನೋಡಿ ಪರವಾಗಿಲ್ಲ.. .. ರೀ ಶರಣಪ್ಪ. ಒಂದು ಆರು ಸ್ಟ್ರಾಂಗ್ ಕಾಫೀ ತರಿಸ್ರಿ.. ಈ ಮೇಡಂಗೆ ಸ್ಟ್ರಾಂಗ್ ಕಾಫೀ ಅಂದ್ರೆ ತುಂಬಾ ಇಷ್ಟ" 
ಮೇಡಂ ಕಡೆ ನೋಡಿ ನಕ್ಕರು.. 

"ಸರ್ ನೀವು ಸರಿ ಇದ್ದೀರಾ " ಎನ್ನುತ್ತಾ.. ಬ್ಯಾಗ್ ತೆಗೆದುಕೊಂಡು "ಮೀನಾ ನೋಡಿ.. ನಿಮ್ಮದೇನಾ ಅಂತ"

ಬ್ಯಾಗಿನಲ್ಲಿದ್ದ ಒಂದೊಂದೇ ವಸ್ತುವನ್ನು ತೆಗೆದು ನೋಡಿದರು.. ಕ್ರೆಡಿಟ್ ಕಾರ್ಡ್, ಮೊಬೈಲ್, ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲಿಪ್ಸ್ಟಿಕ್, ಬಾಚಣಿಗೆ, ಐ ಲೈನರ್, ಹೇರ್ ಬ್ಯಾಂಡ್, ಎಲ್ಲವನ್ನೂ ನೋಡಿದ ಮೀನಾ. ಮೇಡಂ ಇದ್ಯಾವುದು ನನ್ನದಲ್ಲ.. ಆದರೆ  ಬ್ಯಾಗ್ ಮಾತ್ರ ನನದು.. ನೋಡಿ ಕಾರ್ಡುಗಳ ಮೇಲೆ ಇರೋ ಹೆಸರು ನೋಡಿ., ಅದು  ನನ್ನದಲ್ಲ.. " ಸ್ವಲ್ಪ ಧೈರ್ಯದಿಂದ ಮೀನಾ ಉತ್ತರಿಸಿದಳು.. 

"ಮೀನಾ ಸರಿ ನೀವು ಅಲ್ಲಿ ಕುಳಿತುಕೊಳ್ಳಿ.. ನಾ ಮಾತಾಡುತ್ತೇನೆ.. " 

ಮೀನಾ ಹೋಗಿ ಕೂತರು.. ಸಂಜನಾ.. ಮೀರಾಳ ಕೈಯನ್ನು ಅದುಮಿ.. ಮೇಡಂ ಇದ್ದಾರೆ ಏನೂ ತೊಂದರೆ ಇಲ್ಲ ಅನ್ನುವ ಲುಕ್ ಕೊಟ್ಟರು.. 

ಮೇಡಂ..  ಅಲ್ಲಿದ್ದ ಕಾನ್ಸ್ಟೇಬಲ್ ಅವರನ್ನು ಕೇಳಿದರು.. ನಿಮ್ಮ ಸಾಹೇಬ್ರು ಎಲ್ಲಿ? ಶರಣಪ್ಪ ಅವರು ಇಲ್ಲ.. " 

ಅವ ಸಾಹೇಬ್ರು ಸಿಗರೇಟು ಸೇದೋಕೆ ಹೊರಗೆ ಹೋಗಿದ್ದಾರೆ.. ಶರಣಪ್ಪ ಕಾಫೀ ತರೋಕೆ ಹೋಗಿದ್ದಾರೆ.. ಅಂದರು.. 

ಸ್ವಲ್ಪ ಹೊತ್ತಿಗೆ ಇನ್ಸ್ಪೆಕ್ಟರ್ ಬಂದ್ರು.. "ಏನು ಮೇಡಂ ಏನಾದರೂ ಗೊತ್ತಾಯ್ತಾ?"

"ಸರ್.. . ನೋಡಿ ಸರ್.. ಕಾರ್ಡ್, ಮೊಬೈಲ್ ಯಾವುದು ಇವರದ್ದಲ್ಲ.. ಬರಿ ಬ್ಯಾಗ್ ಮಾತ್ರ ಇವರದ್ದು ಅಂತ ಗುರುತಿಸಿದ್ದಾರೆ.. ನೋಡಿ ಸರ್ ಬೇರೆ ಏನೋ ತರಲೆ ಇರುತ್ತೆ.. ಇವರು ಈಗ ಹೋಗಬಹುದಲ್ವಾ.. ಪಾಪ ಸರ್.. ತುಂಬಾ ಒಳ್ಳೆಯ ಕುಟುಂಬ ಇವರದ್ದು.. "

ಅಷ್ಟರಲ್ಲಿ ಕಾಫೀ ಬಂತು.. 

ಆ ಚಳಿಗೆ ಸ್ಟ್ರಾಂಗ್ ಕಾಫೀ ಹೊಸ ಉತ್ಸಾಹ ಕೊಟ್ಟಿತು ... ಜೊತೆಗೆ ಇನ್ಸ್ಪೆಕ್ಟರ್ ಸಹಜವಾಗಿಯೇ ಕೂಲಾಗಿ ಮಾತಾಡಿದ್ದರಿಂದ ಸಂಜನಾ ಮತ್ತು ಮೀನಾಗೆ ತುಸು ಸಮಾಧಾನವಾಯಿತು.. ಅದಕ್ಕೆ ಮೇಲಾಗಿ ಬ್ಯಾಗ್ ಮಾತ್ರ ತನ್ನದು ಎನ್ನುವ ಅಂಶ ಇಬ್ಬರಿಗೂ ತುಸು ಧೈರ್ಯ ಕೊಟ್ಟಿತ್ತು.. 

"ಸರಿ ಮೇಡಂ. ನೀವು ಹೇಳೋದು ಸರಿ. ಈ ಬ್ಯಾಗ್  ಇಲ್ಲೇ ಇರಲಿ.. ನಾವು ವಿಚಾರಣೆ ಮಾಡಿ... ಮುಂದಿನ ಕ್ರಮದ ಬಗ್ಗೆ ಹೇಳ್ತೀವಿ.. ಮೇಡಂ ಅವರೇ ನಾವು ಹೇಳಿದಾಗ ನೀವು ಬರಬೇಕು.. ಮತ್ತೆ ನಮಗೆ ಹೇಳದೆ ಈ ಊರು ಬಿಟ್ಟು ಹೋಗಬಾರದು.. ಈ ಮೇಡಂ ನಿಮ್ಮ ಜೊತೆ ಬರೋದು ಬೇಡ.. ನೀವೇ  ಬಂದರೆ ಸಾಕು.. ಏನೂ ಹೆದರಿಕೆ ಬೇಡ.. " ಮೆಲ್ಲಗೆ ನಕ್ಕರು.. 

ತುಸು ನಿಟ್ಟುಸಿರು ಬಿಟ್ಟ ಸಂಜನಾ ಮತ್ತು ಮೀನಾ ಒಟ್ಟಿಗೆ "ಸರಿ ಸರ್.. ಹಾಗೆ ಆಗಲಿ"  ಎಂದರು.. 

ಈ ಮೇಡಂ "ಸರಿ ಸರ್ ನಾವು ಹೊರಡಬಹುದಾ .. "

"ಮೇಡಂ ಅದೆಂಗೆ ಹೊರಡ್ತೀರಾ.. ಇರೀ ಸ್ವಲ್ಪ ಹೊತ್ತು.. " 

"ಸರ್ ಆಗಲೇ ಬೆಳಗಿನ ಜಾವ  ನಾಲ್ಕು ಘಂಟೆ ದಾಟಿದೆ  . ಇನ್ನೂ ಇರಬೇಕಾ.. "

"ಇರಿ ಮೇಡಂ.. ನೀವು ಬಂದು ಒಂದು ಘಂಟೆ ಮೇಲಾಯಿತು.. ಸುಮ್ಮನೆ ಹಾಗೆ ಕಳಿಸುತ್ತೇವಾ .. ಇರಿ ಒಂದು ನಿಮಿಷ.. .. \ ಶರಣಪ್ಪ ಅವರಿಗೆ ಕಣ್ಣು ಹೊಡೆದರು.. ಶರಣಪ್ಪ ಸಿದ್ಧ ಎನ್ನುವ ಹಾಗೆ ಸನ್ನೆ ಮಾಡಿದರು. 

"ಮೇಡಂ.. ನಿಮ್ಮ ವಿವರ ನಮ್ಮ ಹತ್ತಿರ ಇದೆ.. ಅದರ ಪ್ರಕಾರ ಇವತ್ತು ನಿಮ್ಮ ಜನುಮದಿನ.. ನೀವು ಸ್ನೇಹಕ್ಕೆ ಎಷ್ಟು ಬೆಲೆ ಕೊಡ್ತೀರಾ ಅಂತ ಗೊತ್ತು.. ನಿಮ್ಮ ಸಮಾಜಮುಖಿ  ಕಾರ್ಯಗಳ ಬಗ್ಗೆ ನಮಗೆ ಮತ್ತು ನಮ್ಮ ಡಿಪಾರ್ಟ್ಮೆಂಟಿಗೆ ಗೊತ್ತಿದೆ.. ಅದಕ್ಕೆ ನಮ್ಮ ಡಿಪಾರ್ಟ್ಮೆಂಟ್ ಕಡೆಯಿಂದ ನಿಮಗೆ ಒಂದು ಪುಟ್ಟ ಸನ್ಮಾನ ಜೊತೆಗೆ ಜನುಮದಿನಕ್ಕೆ ಒಂದು ಕೇಕು .. Actually ನಾಳೆ ನಿಮಗೆ ಕರೆ ಮಾಡಿ ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡು ಈ ಪುಟ್ಟ ಸನ್ಮಾನ ಮಾಡಬೇಕೆಂದುಕೊಂಡಿದ್ದೆವು... ಆದರೆ ಅಚ್ಚರಿ  ಎಂದರೆ ನೀವೇ ಇಲ್ಲಿಗೆ ಬಂದ್ರಿ.. 

"ಜನುಮದಿನದ ಶುಭಾಶಯಗಳು ಮೇಡಂ.. ನಿಮ್ಮ ಈ ಸಮಾಜಮುಖಿ ಕೆಲಸ ಸದಾ ಯಶಸ್ಸನ್ನು ತರುತ್ತಿರಲಿ.. ಶುಭವಾಗಲಿ" 



ಕಣ್ಣಲ್ಲಿ ನೀರು ತುಂಬಿಕೊಂಡು.. "ಶ್ರೀ ಪ್ರತಿ ಜನುಮದಿನದಲ್ಲೂ ಅಳಿಸೋದೇ ಕೆಲಸ ನಿಮ್ಮದು.. ಆದರೆ ಈ ಬಾರಿ ನನ್ನ ಇಷ್ಟವಾದ ಕಾಫೀ ಕೊಟ್ಟು.. ಒಂದು ರೀತಿಯಲ್ಲಿ ಕುತೂಹಲದ ತಿರುವಿನಲ್ಲಿ  ನಮ್ಮನ್ನು ನಿಲ್ಲಿಸಿ ಗೋಳು ಹುಯ್ಕೋತಾ ಇದ್ದೀರಾ.. ಧನ್ಯವಾದಗಳು ಶ್ರೀ.. ನಿಮ್ಮ ಈ ಶುಭಾಶಯಗಳಿಗೆ ಧನ್ಯವಾದಗಳು.. ಹಾಗೆ ಈ ಕೇಸಿನ ವಿಚಾರಣೆ ಮತ್ತು ಇದರ ಮುಂದಿನ ತಿರುವಿನ ಬಗ್ಗೆ ನನಗೆ ಖಂಡಿತ ಹೇಳಬೇಕು .."

ಶರಣಪ್ಪ, ಮೀನಾ, ಸಂಜನಾ ಜೊತೆಯಲ್ಲಿ ಸ್ಟೇಷನಿನಲ್ಲಿ ಇದ್ದ ಎಲ್ಲರೂ ಶುಭ ಹಾರೈಸಿದರು.. 

 ಮೆಲ್ಲನೆ ಸೂರ್ಯ ಬಾನಿನಲ್ಲಿ ರಂಗನ್ನು  ತುಂಬುತಿದ್ದ.. ಮತ್ತೊಂದು ಸ್ಟ್ರಾಂಗ್ ಕಾಫೀ ಕುಡಿದು.. ನವೋಲ್ಲಾಸದಿಂದ ಮೀನಾ ಮತ್ತು ಸಂಜನರನ್ನು ಕರೆದುಕೊಂಡು ಮನೆ ಕಡೆಗೆ ಹೊರಟರು.. 

ಮುಂದೆ.. !!!