Sunday, August 2, 2015

ನೆನಪಿನ ಬುತ್ತಿಯನ್ನು ಹೊತ್ತು ಸಾಗಿದ್ದು ಮುತ್ತತ್ತಿಗೆ!!!!

ಸ್ನೇಹಿತರ ದಿನಕ್ಕೆ ಒಂದು ಲೇಖನ ಬೇಕು ಎಂದು ರಶ್ಮಿ ಪುಟ್ಟಿ ಕೇಳಿದಾಗ ಇಲ್ಲವೆನ್ನಲಾಗಲಿಲ್ಲ .. ಸ್ನೇಹ ಸ್ನೇಹಿತರ ಬಗ್ಗೆ ಬರೆಯಲು ಕಡಲಷ್ಟು ವಿಷಯಗಳು ಇರುವಾಗ ಹೇಗೆ ಇಲ್ಲ ಎನ್ನಲಿ.. ಅಲ್ಲವೇ

ಕನ್ನಡಪ್ರಭ ಅಂತರ್ಜಾಲ ಪತ್ರಿಕೆಗಾಗಿ ಬರೆದ ಲೇಖನ ಸ್ನೇಹಿತರ ದಿನಕ್ಕೆ ಮತ್ತು ನನ್ನೆಲ್ಲ ಸ್ನೇಹಿತರಿಗೆ ಅರ್ಪಿತ.. ಹಾಗೆಯೇ ರಶ್ಮಿ ಪುಟ್ಟಿ ಮತ್ತು ಕನ್ನಡ ಪ್ರಭ ಪತ್ರಿಕಾ ಬಳಗಗಕ್ಕೆ ಧನ್ಯವಾದಗಳನ್ನು ಹೇಳುತ್ತಾ ನನ್ನ ಪುರಾಣ ಶುರುಮಾಡುವೆ!

ಕನ್ನಡ ಪ್ರಭ ಅಂತರ್ಜಾಲ ಪತ್ರಿಕೆಯ ಕೊಂಡಿ

**************

ಅಂದಿಗೂ ಇಂದಿಗೂ ನ್ಯಾಷನಲ್ ಎಜುಕೇಶನ್ ಸೊಸೈಟಿ ತನ್ನದೇ ಆದ ಘನತೆ ಗಾಂಭೀರ್ಯ ಹೊತ್ತು ನಿಂತಿದೆ.. ನ್ಯಾಷನಲ್ ಪ್ರೌಢಶಾಲೆ ಬಸವನಗುಡಿ ಶಾಖೆಯಲ್ಲಿ ಕಳೆದ ಮೂರು ವರ್ಷ ನಮ್ಮ ಜೀವನಕ್ಕೆ ಒಂದು ಅತ್ಯುತ್ತಮ ಹಾದಿ ತೋರಿಸಿಕೊಟ್ಟಿತು.

ಅತ್ಯುತ್ತಮ ಶಿಕ್ಷಕ ವರ್ಗ, ಮುಂದಾಳತ್ವ, ಸದಾ ಹುಮ್ಮಸ್ಸಿನಿಂದ ಕೂಡಿದ್ದ ಶ್ರೀ ಹೆಚ್ ನರಸಿಂಹಯ್ಯ ಈ ಗೋಪುರದ ಕಳಶವನ್ನು ಸದಾ ಲಕ ಲಕ ಎನ್ನುವಂತೆ ಬೆಳಗಲು ಶ್ರಮವಹಿಸಿದ್ದರು.

ಸರಿ ಈಗ ವಿಷಯಕ್ಕೆ ಬರುತ್ತೇನೆ.. ೧೯೮೫ ರಿಂದ ೧೯೮೮ ರವರೆಗೆ  ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿಮೂರು ವರ್ಷ ಜೊತೆಯಲ್ಲಿ ಓದಿದ ಸಹಪಾಟಿಗಳನ್ನು ತಂತ್ರಜ್ಞಾನ ಎಲ್ಲೆಲ್ಲೂ ಹಬ್ಬಿರುವ ಈ ಕಾಲದಲ್ಲಿ ಹುಡುಕುವುದು ಕತ್ತಲೆಯಲ್ಲಿ ಕರಿಬೆಕ್ಕು ಹುಡುಕಿದಂತೆ. ಹೇಗೋ ಸಾಹಸದಿಂದ ಸುಮಾರು ಸಹಪಾಟಿಗಳನ್ನು ಹುಡುಕಿ ತಡಕಿ ಒಂದು ಅಡ್ಡದಲ್ಲಿ ಕೂಡಿ ಹಾಕಿ, ಪ್ರತಿ ವರ್ಷವೂ ಸೇರುವ ಕಾರ್ಯಕ್ರಮ ಆಯೋಜಿಸಿದ್ದು ಆಯ್ತು, ಇದು ನಾಲ್ಕು ವರ್ಷಗಳಿಂದ ನೆಡೆದು ಬರುತ್ತಿದೆ.

ಕಳೆದ ಭಾನುವಾರ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಮೆಲ್ಲುತ್ತಾ, ಹೊಟ್ಟೆಯೊಳಗೆ ಬಂದ ಒಂದು ಯೋಚನೆಯನ್ನು ಕಾರ್ಯಗತ ಮಾಡಲು ಹೊರಟಿದ್ದು ಕನಕಪುರದ ಮುತ್ತತ್ತಿ ಎಂಬ ಕಾವೇರಿ ಮಡಿಲಿನ ಕಾಡಿಗೆ.

ಆರು ಮಂದಿ, ಒಂದು ಕಾರು, ಕಾರಿನ ಡಿಕ್ಕಿಯಲ್ಲಿ ಒಂದು ದಿನದ ಅಡಿಗೆ ಮಾಡಿ ತಿನ್ನಲು ಬೇಕಾದ ಎಲ್ಲಾ ಸಲಕರಣೆಗಳು ತುಂಬಿ ಚಿಟಿಕೆ ಹೊಡೆದವು. ಇವತ್ತು ನಮಗೆ ಹಬ್ಬ ಕಣ್ರೋ ಎಂದು.

ಬ್ರಹ್ಮಾನಂದ ಕಾರಿನ ಚುಕ್ಕಾಣಿ ಹಿಡಿದ, ಬೆಳಿಗ್ಗೆ ಸುಮಾರು ಏಳು ಘಂಟೆಗೆ ಕಾರು ನಾಗಾಲೋಟದಿಂದ ಹೊರಟಿತು ಮುತ್ತತ್ತಿಯ ಕಡೆಗೆ. ಕಾರಿನಲ್ಲಿ ಹಾಡು ಬೇಕಿರಲಿಲ್ಲ, ಕಾರಣ ನಮ್ಮ ಮಾತುಗಳು ೩೦ ವರ್ಷಗಳಿಂದ ಶುರುವಾಗಿತ್ತು. ಹಲವಾರು ವಿಷಯಗಳು ಸುಮಾರು ನಾಲ್ಕು ವರ್ಷಗಳಿಂದ ಸೈಕಲ್ ಹೊಡೆದಿದ್ದರೂ ಯಾರಿಗೂ ಬೋರ್ ಅಥವಾ ಬೇಸರ ಎಂಬುದೇ ಇರಲಿಲ್ಲ.

ವಾಸುದೇವ್ ಅಡಿಗ ಹೋಟೆಲ್ನಲ್ಲಿ ಹೊಟ್ಟೆಗೆ ಅಷ್ಟು ಆಧಾರ ಮಾಡಿಕೊಂಡು, ಮುತ್ತತ್ತಿಗೆ ಬಂದು ಇಳಿದಾಗ ಸುಮಾರು ಹತ್ತು ಮೂವತ್ತು.

ಮುತ್ತತ್ತಿ ಹನುಮನ ಆಶೀರ್ವಾದ ಪಡೆದು ಸರ ಸರ ಗುಡಾರವನ್ನು ಸಿದ್ಧಪಡಿಸಿ, ತಂದಿದ್ದ ತರಕಾರಿ ಮುಂತಾದ ಪದಾರ್ಥಗಳನ್ನು ಸಿದ್ಧಪಡಿಸಿ ನಳಪಾಕಕ್ಕೆ ಕೈ ಹಾಕಿಯೇ ಬಿಟ್ಟೆವು. ಬಾಣಸಿಗನಾಗಿ ವೆಂಕಿ ಸೌಟನ್ನು ಕೈಯಲ್ಲಿ ಹಿಡಿದರೆ, ಅಗ್ನಿ ದೇವನನ್ನು ಕರೆತರುವ ಕಾರ್ಯ ನನಗೆ ಬಿಟ್ಟು, ಜುಗಳ ಬಂದಿ ಹಾಡಲು ಶಶಿ ವೆಂಕಿಗೆ ಜೊತೆಯಾದನು. ಬ್ರಹ್ಮ ಮತ್ತು ಶ್ರೀಧರ ತರಕಾರಿಯ ಪೋಸ್ಟ್ ಮಾರ್ಟಂ ಶುರು ಮಾಡಿದರು. ಪ್ರಸಾದ್ ತನ್ನ ಅಡುಗೆ ಸಾಹಸವನ್ನು ಹೇಳಿದ್ದರಿಂದ ಅವನಿಗೆ ಪೋಷಕ ಪಾತ್ರವನ್ನು ಕೊಟ್ಟು, ಆಹಾರ ಸಿದ್ಧವಾದ ಮೇಲೆ ಅದರ ಬಣ್ಣ ನೋಡಿ ಸರಿ ಇದೆಯಾ ಅಥವ ಇಲ್ಲ ಎಂದು ನಿರ್ಧರಿಸುವ ಗುಣಮಟ್ಟ ನಿರ್ದೇಶಕನನ್ನಾಗಿ ಮಾಡಿದೆವು.

ಸಾಮಾನ್ಯ ಅಳುವ ಮತ್ತು ಅಳಿಸುವ ಈರುಳ್ಳಿ ನಮ್ಮ ಸ್ನೇಹಲೋಕವನ್ನು ಕಂಡು, ನಮ್ಮ ಆತ್ಮೀಯತೆಯನ್ನು ಕಂಡು ಹೇಳಿದ ಮಾತು ಸೂಪರ್ ಇತ್ತು "ಗೆಳೆಯರೇ ಇಂದು ನಿಮ್ಮ ಕಣ್ಣಲ್ಲಿ ನೀರು ಬಂದರೆ ಅದಕ್ಕೆ ನಾ ಖಂಡಿತ ಕಾರಣ ಅಲ್ಲ, ಬದಲಿಗೆ ಆನಂದ ಭಾಷ್ಪ ಬರುವುದು ನಿಮ್ಮೆಲ್ಲರ ಹಾಸ್ಯಭರಿತ ಮಾತುಗಳು, ನಿಮ್ಮ ಶಾಲಾ ದಿನಗಳ ಅಪೂರ್ವ ಘಟನೆಗಳ ಬುತ್ತಿಯನ್ನು ನೀವು ಬಿಚ್ಚಿ ನಲಿಯುವ ಸಂಭ್ರಮದಿಂದ ಮಾತ್ರ".

ವೆಂಕಿ ಅಡಿಗೆ ಶುರುಮಾಡಿದ ರೀತಿ, ನಮ್ಮ ಹೊಟ್ಟೆಯೊಳಗೆ ಇದ್ದ ಹಸಿವಿನ ಹುಳುಗಳು, ನಾವು ಏನೂ ಮಾತಾಡೋಲ್ಲ ಎಂದು ನಮಗೆಲ್ಲಾ ಹೇಳಿ ಸುಮ್ಮನೆ ಬಚ್ಚಿತ್ತುಕೊಂಡವು. ಸುತ್ತಾ ಮುತ್ತಾ ಯಾವುದೇ ಪ್ರಾಣಿಯೂ ಕೂಡ ಹತ್ತಿರ ಬರಲಿಲ್ಲ. ಮಧ್ಯೆ ಮಧ್ಯೆ ನಮ್ಮ ತರಲೆ ಮಾತುಗಳು, ತುಂಟತನಗಳು, ಕಚೇರಿಯ ಒತ್ತಡದ ಕೆಲಸದ ಮಧ್ಯೆ ಮೊಗದಲ್ಲೂ ನಗೆ ಕಡಲು ಉಕ್ಕಬಹುದು ಎನ್ನುವುದನ್ನೇ ಮರೆತಿದ್ದ ನಮಗೆ ಮತ್ತೆ ನಗೆಗಡಲಿಗೆ ನಮ್ಮನ್ನು ಕರೆದೊಯ್ದು ಮುಳುಗಿಸಿಬಿಟ್ಟಿತು.

ಅನ್ನ, ಹುಳಿ (ಬೆಂಗಳೂರು ಭಾಷೆಯ ಸಾಂಬಾರ್), ಬೋಂಡ, ಬಜ್ಜಿ, ಜೊತೆಯಲ್ಲಿ ನೆಂಚಿಕೊಳ್ಳಲು ಉಪ್ಪಿನಕಾಯಿ, ಆಲೂ ಚಿಪ್ಸ್, ಕಡಲೇಕಾಯಿ ಬೀಜ (ಕಾಂಗ್ರೆಸ್), ಮೊಸರು ಎಲ್ಲವೂ ನಮ್ಮ ಹೊಟ್ಟೆಯೊಳಗೆ ಪ್ರವೇಶ ಮಾಡಲು ತವಕಿಸುತ್ತಿದ್ದವು, ಆದರೆ ಅವೆಲ್ಲ ಹೇಳಿದ್ದು ಒಂದೇ ಮಾತು.. ಲೋ ನಮಗೆಲ್ಲ ಎಲ್ರೋ ಜಾಗ ಕೊಟ್ಟಿದ್ದೀರಾ.. ನಕ್ಕು ನಕ್ಕು ನಗಿಸಿ ನಗಿಸಿ ಹೊಟ್ಟೆಯೊಳಗೆ ನೋಡು ಜಾಗವೇ ಇಲ್ಲ, ಎಲ್ಲಿ ನೋಡಿದರೂ ನಗೆ ಬಲೂನುಗಳು ದಾರ ಹಿಡಿದು ಓಡಾಡುತ್ತಿವೆ. ಅವುಗಳ ಮಧ್ಯೆ ಬೆಂಗಳೂರಿನ ವಾಹನ ದಟ್ಟಣೆಯ ಮಧ್ಯೆ ಆಟೋ ರಿಕ್ಷಾಗಳು, ಮೋಟಾರ್ ಬೈಕ್ ಗಳು ಜಾಗ ಮಾಡಿ ನುಗ್ಗುವ ಹಾಗೆ ನುಗ್ಗಬೇಕು ಅಷ್ಟೇ ಎಂದು ಹೇಳುತ್ತಾ ನಮ್ಮ ಅನುಮತಿ ಕಾಯದೆ ನುಗ್ಗಿಯೇ ಬಿಟ್ಟವು.

ಅಮೋಘ ದಿನವಾಗಿತ್ತು ಆ ಭಾನುವಾರ ೨೬ನೆ ಜುಲೈ ೨೦೧೫. ನಕ್ಕು ನಕ್ಕು ನನಗೆ ತಲೆ ನೋಯಲು ಶುರುವಾಗಿತ್ತು. ಒಬ್ಬರಾದ ಮೇಲೆ ಒಬ್ಬರು ನಗೆ ಬಾಂಬುಗಳನ್ನು ಸಿಡಿಸುತ್ತಲೇ ಇದ್ದರು.

ವೆಂಕಿ ಸಾಂಬಾರು ಮಾಡಿದ ರೀತಿ, ಅದನ್ನು ನೋಡಿ ಮನದೊಳಗೆ ಬಯ್ದುಕೊಂಡು ಅದನ್ನು ವಿಧಿಯಿಲ್ಲದೇ ತಿಂದದ್ದು, ಬ್ರಹ್ಮ ಹೇಳಿದ ತಿಳುವಳಿಕೆ ಮಾತುಗಳು, ಶಶಿಯ ಹಾಸ್ಯ ಭರಿತ ನಾಡಬಾಂಬುಗಳು. ಶ್ರೀಧರ ಏನೂ ತೋಚದೆ ಏನಾದರೂ ಮಾಡಿಕೊಳ್ಳಿ ಎಂದು ಹೇಳುತ್ತಲೇ ನಮ್ಮ ಜೊತೆಯಲ್ಲಿ ವೆಂಕಿಗೆ ಸಹಸ್ರಾರ್ಚನೆ ಮಾಡಿದ್ದು, ಪ್ರಸಾದ್ ತನ್ನ ಅಡುಗೆ ಪರಾಕ್ರಮ ಹೇಳಿದ್ದು, ಇದನ್ನೆಲ್ಲಾ ಸಂತಸದಿಂದ ಅನುಭವಿಸಿ ಒಂದು ಲೇಖನ ಮಾಡಲೇಬೇಕು ಎಂದು ಹೊರಟಾಗ ಅದಕ್ಕೆ ಸಹಾಯ ಮಾಡಿದ ಛಾಯಾಚಿತ್ರಗಳು ಸದಾ ನೆನಪಲ್ಲಿ ಉಳಿಯುತ್ತವೆ.

ಶ್ರೀಧರ್,  ಪ್ರಸಾದ್, ಶಶಿ, ವೆಂಕಿ, ಬ್ರಹ್ಮ & ಶ್ರೀ 

ಒಂದು ಸುಂದರ ಭಾನುವಾರವನ್ನು ಅಷ್ಟೇ ಸಮಯೋಚಿತವಾಗಿ ಮತ್ತು ಸುಂದರವಾಗಿ ಕಳೆದ ಬಗೆ ನಮಗೆ ಹೆಮ್ಮೆ ಇತ್ತು. ಮತ್ತು ಸ್ನೇಹ ಅಂದ್ರೆ ಹೀಗೆ ಇರಬೇಕು ಎನ್ನಿಸುವಷ್ಟು ಆಪ್ತವಾಗಿತ್ತು ಆ ದಿನ.

ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ... ಅದೇ ಅಲ್ಲವೇ ಸ್ನೇಹದ ಸಂಕೋಲೆಯ ಮಜಾ.. !!!

ಸ್ನೇಹಿತರ ದಿನಕ್ಕೆ ಎಲ್ಲರಿಗೂ ಶುಭಾಶಯಗಳು.