Saturday, January 24, 2015

ಹೃದಯವಂತ ಹೃದಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.. !!!

ಸುನಾಮಿ ಅಲೆಗಳು ಕಡಲ ತಡಿಗೆ ಬಡಿದು ಬಡಿದು ಸುಸ್ತಾಗುತ್ತಿದ್ದವು.. ಕಡಲ ದಂಡೆಯಲ್ಲಿದ್ದ ಎಲ್ಲವನ್ನು ಸ್ವಾಹ ಮಾಡುತ್ತಿತ್ತು.. ಗಹಗಹಿಸಿ ನಗುತ್ತಿದ್ದವು ಅಲೆಗಳು. ಎಲ್ಲವನ್ನು ನುಂಗಿ ಬಿಡುತ್ತಿದ್ದೇವೆ ಎಂದು.

ಯಾಕೋ ಕಡಲ ತಡಿಯ ಮರಳಿನ ಹಾಸಿನ ಮೇಲೆ ಕಣ್ಣುಗಳು ಹೋದವು.. ಅಲೆಗಳಿಗೆ ಭಯಂಕರ ಸಿಟ್ಟು ಬಂದಿತು..

ಎಲಾ.. ಇರುವ ಬರುವ ಎಲ್ಲವನ್ನು ಆಪೋಶನ ಮಾಡುತ್ತಿದ್ದೇವೆ.. ಇದು ಯಾವುದು ನ(ನ)ಮಗೆ ಹೆದರದೆ ಕದಲದೆ ನಿಂತಿವೆ..

"ಏಯ್ ಯಾರು ನೀವೆಲ್ಲ ಯಾಕೆ ಹೀಗೆ ನಿಂತಿದ್ದೀರಿ.. ದೋಣಿಗಳು, ಮನೆಗಳು, ತೆಂಗಿನ ಮರ ಎಲ್ಲವು ನನ್ನ ಒಡಲಿಗೆ ಬಂದಾಯ್ತು.. ಬರುತ್ತಲಿವೆ.. ಬರಲೇಬೇಕು.. ನೀವು ಯಾಕೆ ಬರುತ್ತಿಲ್ಲ.. ನಿಮ್ಮನ್ನು ಅದು ಯಾವ ಶಕ್ತಿ ತಡೆದು ನಿಲ್ಲಿಸಿದೆ ಅಥವಾ ನಿಮಗೆ ಅದಾವ ಶಕ್ತಿ ಎದ್ದು ನಿಲ್ಲಲು ಚೈತನ್ಯ ತುಂಬುತ್ತಿದೆ.. ಹೇಳಿ ಹೇಳಿ ಹೇಳಿ"

ಎಲ್ಲವೂ ಒಂದೇ ಕಂಠದಲ್ಲಿ ಜೈ ಹೊ ಜೈ ಹೊ ಎಂದವೂ.,..

ಸುನಾಮಿ ಅಲೆಗಳು ಕಣ್ಣುಜ್ಜಿಕೊಂಡು ನೋಡಿದವು.. "ಅರೆ ಇದೇನು ಇದೇನಿದು... ವರ್ಣ ಮಾಲೆಯ ಸರವೇ ನಿಂತಿದೆ.. ಯಾರಪ್ಪ ನೀವೆಲ್ಲಾ ಯಾಕೆ ಹೀಗೆ ನಿಂತಿದ್ದೀರಿ.. ... ?"

ಗಹಗಹಿಸಿ ನಕ್ಕವು ವರ್ಣಮಾಲೆಗಳು.. "ಎಲೈ ಸುನಾಮಿಯೇ ನೀ ಹೊತ್ತು ತಂದ ಅಲೆಗಳು ಸ್ನೇಹದ ಅಲೆಗಳು.. ನೀ ಆಪೋಶನ ಮಾಡಿದ್ದು ಸ್ನೇಹದ ಹೃದಯಗಳನ್ನು.. ಎಲ್ಲವೂ ನಿನ್ನ ಒಡಲಿನ ಕಡಲಲ್ಲಿ ಈಜುತ್ತಿವೆ.. ಆದರೆ ನಾವು ಕಾದಿರುವುದು ಮತ್ತು ನಮಗೆ ಎದ್ದು ನಿಲ್ಲಲು.. ನಿನ್ನ ಸೆಳೆಯುವ ಶಕ್ತಿಯನ್ನು ದಿಟ್ಟತನದಿಂದ ಎದುರಿಸಿ ನಿಲ್ಲಲ್ಲು ಶಕ್ತಿ ನೀಡುತ್ತಿರುವುದು ಸ್ನೇಹದ ಕಡಲಿನ ತರಂಗದ ಶಕ್ತಿ.. ಅದೋ ಅಲ್ಲಿ ನೋಡಿ ಅವರಿಗಾಗಿ ನಾವೆಲ್ಲಾ ಕಾಯುತ್ತಿದ್ದೇವೆ.. "

ಕಣ್ಣರಳಿಸಿ ಅಲ್ಲಿ ನೋಡಿದರೆ.. ಗಾಬರಿ ಆಯಿತು ಅಜಾನುಭಾಹು.. ನೋಡಿದರೆ ತಟ್ಟನೆ ಈತ ಆರಕ್ಷಕನೆ ಇರಬೇಕು ಎನ್ನಿಸುವ ಮೈಕಟ್ಟು, ಬಿಟ್ಟರೆ ಗಿರಿಜಾ ಮೀಸೆ ಮೂಡುವಂತಹ ಅದ್ಭುತ ಮೊಗ ಚರ್ಯೆ.. ಹೊಳಪು ಕಣ್ಣುಗಳು.. ತುಟಿಯಲ್ಲಿ ಸದಾ ಮಂದಹಾಸ.. ಇವರ ಸುತ್ತಾ ಮುತ್ತಾ ನಗೆ ಬಾಂಬುಗಳು ಸಿಡಿಯುತ್ತಾ ಹೂ ಬಾಣಗಳನ್ನೇ ಬೀರುತ್ತಿದ್ದವು..

ಇವರ ಹೆಸರು.. ಛೆ ಬಿಡಿ ಇವರ ಹೆಸರ ಹೇಳಿದರೆ ವಿಷ್ಣು ದಶಾವತಾರ ನೋಡಿದಂತೆ ಆಗುತ್ತದೆ..

ಹೌದು ಹೌದು ಹೌದು ಇವರೇ ಪ್ರಕಾಶಣ್ಣ, ಪ್ರಕಾಶ ಮಾವ, ಪಕ್ಕು ಮಾವ, ಪ್ರಕಾಶ ಹೆಗ್ಗಡೆ, ಪ್ರಕಾಶ, ಡುಮ್ಮಣ್ಣ, ಪ್ರಕಾಶ್ ಸರ್, ಹೆಗ್ಡೆ ಸರ್,  ಬ್ಲಾಗ್ ಲೋಕದ ಅಧ್ಯಕ್ಷರು, ಛಾಯಾ ಪ್ರವೀಣ ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮನ ಬಾಲಕ್ಕಿಂಥ ಬೆಳೆಯುತ್ತದೆ..

ಸುಮಾರು ಒಂದು ವಾರದ ನಂತರ ಇವರಿಗೆ ಶುಭಾಷಯ ಪತ್ರ ಬರೆಯುತ್ತಿದ್ದೇನೆ.. ಅದಕ್ಕೆ ಕಾರಣವು ಇದೆ .. ಅಂತರ್ಜಾಲ ತೊಂದರೆ ಇತ್ತು ಮನೆಯಲ್ಲಿ.. ಜೊತೆಯಲ್ಲಿಯೇ ಕಳೆದ ಭಾನುವಾರ ಮೈ ಕಂಪನ ಆಗುವಂತಹ ಅಭೂತಪೂರ್ವ ಅನುಭವಕ್ಕೆ ಇವರೇ ನೆರವಾಗಿದ್ದರು.. ಅದರ ಬಗ್ಗೆ ಕೊಂಚ ಹೇಳಿ ಶುಭಾಷಯ ಪತ್ರ ಮುಗಿಸುತ್ತೇನೆ..

ಗಂಡು ಕಲೆ ಎಂದೇ ಹೆಸರಾದ ಯಕ್ಷಗಾನವನ್ನು ಪ್ರಕಾಶಣ್ಣನ ಜೊತೆಯಲ್ಲಿ ನೋಡಬೇಕೆಂಬ ಬಯಕೆ ಬಸುರಿ ಬಯಕೆ ಆಗಿತ್ತು ನನಗೆ.. ಅವರಿಗೂ ಅಷ್ಟೇ ನನಗೆ ಯಕ್ಷಗಾನ ಪ್ರಸಂಗವನ್ನು ತೋರಿಸಬೇಕೆಂಬ ಆಕಾಂಕ್ಷೆ.. ಕಾಲ ಕೂಡಿಬಂದಿರಲಿಲ್ಲ.. ಆದರೆ ಕಾಲ ಹೆಜ್ಜೆ ಹಾಕುತ್ತಾ ಹಾಕುತ್ತಾ ೧೮ನೆ ಜನವರಿ ೨೦೧೫ ಭಾನುವಾರದಂದು ಬಂದೆ ಬಿಟ್ಟಿತು.

ಅರೆ ಅಂತು ಬಂದೆಯಲ್ಲ.. ಬಾಳ ಕುಶಿ ಆಯಿತು ಎಂದರು ಎ ಏನ್ ಹೆಗಡೆಯವರು ಉದಯಭಾನು ಕಲಾ ಸಂಘದಲ್ಲಿ..
ಕಣ್ಣು ಪ್ರಕಾಶಣ್ಣನನ್ನು ಹುದುಕಿತು.. ಕಾಣಲಿಲ್ಲ.. ಹಿಂದಿನ ದಿನವಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡು ಜ್ವರ ಬರಿಸಿಕೊಂಡಿದ್ದರು..
ಸರಿ ಇನ್ನೇನು ಮಾಡುವುದು.. ಸುಮ್ಮನೆ ಕೂತೆ..

ಸಂದೇಶ ಬಂತು.. ತಮ್ಮಯ್ಯ.. ಪ್ರಸಾಧನ ಕೋಣೆಗೆ ಹೋಗು.. ಅಜ್ಜ ಇದ್ದಾರೆ.. ಫೋಟೋ ತೆಗೆಯಬಹುದು ಎಂದು..
ನಾ ಸಂಕೋಚದ ಮುದ್ದೆ.. ಹೋಗಲಿಲ್ಲ.. ಅಷ್ಟರಲ್ಲಿಯೇ ಮೊಬೈಲ್ ಕರೆ.. "ಶ್ರೀಕಾಂತ್ ಸರ್ ಹೊರಗೆ ಬನ್ನಿ... "
ಪರಿಚಯವಿಲ್ಲದ ಗೆಳೆಯ "ನಿರಂಜನ್"  ಕೆಲವೇ ನಿಮಿಷಗಳಲ್ಲಿ ಪರಿಚಯದವರಾಗಿಬಿಟ್ಟರು.. ಇವರೇ ಅಜ್ಜ..
ಮೈಯೆಲ್ಲಾ ಹಾಗೆ ಒಂದು ಕ್ಷಣ ಕಂಪಿಸಿತು.. ಯಕ್ಷಗಾನದ ದಂತಕತೆಯ ಮುಂದೆ ನಾ ನಿಂತಿದ್ದೇನೆ ಎನ್ನುವ ಒಂದು ಅನುಭವ ಜುಮ್ ಎಂದಿತು..

ನಿರಂಜನ್ ಯಕ್ಷಗಾನದ ಅಂದಿನ ಪ್ರಸಂಗದ ಬಗ್ಗೆ ಚಿಕ್ಕದಾಗಿ ಹೇಳಿದರು.. ನಂತರ ನನ್ನ ಆಸೆಯನ್ನು ಹೇಳಿದೆ.. ಅಜ್ಜ ಪೂರ ಸಿದ್ಧವಾದ ಮೇಲೆ ಫೋಟೋ ತೆಗಿರಿ ಅಂದರು..

ಪೂರ ಸಿದ್ಧವಾದರು ಅಜ್ಜ.. "ಅಜ್ಜ" ಎಂದೇ.. ಮುಂದೆ ನೋಡಿ ಸುಮಾರು ಇಪ್ಪತ್ತು ಸೆಕೆಂಡ್ ಗಳಲ್ಲಿ ಸುಮಾರು ಏಳೆಂಟು ಬಗೆಯ ಮುಖ ಭಾವ ತೋರಿಸಿದರು.. ಕಣ್ಣುಗಳು ಚಿತ್ರಗಳನ್ನು ತೆಗೆಯುತಿದ್ದವು.. ಮೈ ನಡುಗುತ್ತಿತ್ತು.. ಹೃದಯ ಶ್ರೀ ನೀನೆ ಧನ್ಯ ಎನುತ್ತಿತ್ತು.. ಅಜ್ಜನ ಚರಣಕಮಲಗಳನ್ನು ಮುಟ್ಟಿ ನಮಸ್ಕರಿಸಿ ಅಜ್ಜನ ಪದತಲದಲ್ಲಿಯೇ ಕೂತು ಒಂದು ಚಿತ್ರ ತೆಗೆಸಿಕೊಂಡೆ. ಅದ್ಭುತ ಅನುಭವ.
ಇಷ್ಟವಾದ ಚಿತ್ರ 

ಅದ್ಭುತ ಅನುಭವ 

ಶ್ರೀ ಎ ಎನ್ ಹೆಗಡೆ 
ಅವರನ್ನು ಸನ್ಮಾನಿಸುತ್ತಿರುವ 
ಶ್ರೀ ಚಿಟ್ಟಾಣಿ ಅಜ್ಜ 


ಮುಂದಿನ ಪ್ರಸಂಗದಲ್ಲಿ.. ಅಜ್ಜನ ಯಕ್ಷಗಾನ ಪ್ರತಿಭೆಯನ್ನು ನೋಡಿ ಮನಸ್ಸು ಹೇಳತೀರದಷ್ಟು ಸಂತಸಗೊಂಡಿತ್ತು. ಅಬ್ಬಾ ಯಕ್ಷಗಾನ ಪ್ರಪಂಚದ ಅನಭಿಷಿಕ್ತ ಚಕ್ರವರ್ತಿಯ ಜೊತೆಯಲ್ಲಿ ನಿಂತದ್ದು, ಅವರ ಜೊತೆಯಲ್ಲಿ ಚಿತ್ರ ತೆಗೆಸಿಕೊಂಡದ್ದು ನನ್ನ  ಪೂರ್ವಜನ್ಮದ ಪುಣ್ಯ ಎನ್ನಿಸಿತು.

ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಕಲಾ ಸಮುದ್ರದ ಅಲೆಯಲ್ಲಿ ತೇಲುವ ನಮ್ಮನ್ನು ತೇಲಿಸುವ ಅದ್ಭುತ ತರಂಗ.. ಅಂಥಹ ತರಂಗವನ್ನು ನನಗೆ ಒಂದು ದೂರವಾಣಿಯ ಕರೆಯ ಮೂಲಕ ನನ್ನನ್ನು ಅವರ ಸಂಪರ್ಕಕ್ಕೆ ತಂದು ಕೂರಿಸಿದ ಪ್ರಕಾಶಣ್ಣ ಅವರಿಗೆ ಕೋಟಿ ಕೋಟಿ ನಮನಗಳು..

ಅಂದಿನ ಯಕ್ಷಗಾನದ ಕೆಲ ತುಣುಕುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.. ಜೊತೆಯಲ್ಲಿ ಅಜ್ಜನ ಜೊತೆಯಲ್ಲಿ ನಿಲ್ಲಲ್ಲು ಶಕ್ತಿ ಸ್ಫೂರ್ತಿ ಕೊಟ್ಟ ಪ್ರಕಾಶಣ್ಣ ಅವರಿಗೆ ಧನ್ಯವವಾದಗಳನ್ನು ಅರ್ಪಿಸುತ್ತಾ ಜೊತೆಯಲ್ಲಿ ಗೆಳೆಯ ನಿರಂಜನ್ ಅವರಿಗೆ ನಾ ಚಿರ ಋಣಿ ಯಾಗಿದ್ದೇನೆ.
ಇಂಥಹ ಒಂದು ಸುಂದರ ಸಂಭ್ರಮವನ್ನು ಕೊಟ್ಟ ಶ್ರೀ ಎ ಎನ್ ಹೆಗಡೆ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು.

ಪ್ರಕಾಶಣ್ಣ ಒಂದು ಸುಂದರ ಅನುಭವ ಕೊಟ್ಟ ನಿಮ್ಮ ಹೃದಯವಂತ ಹೃದಯಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.. !!!

ಚಿತ್ರ ಕೃಪೆ ರಾಘವ ಶರ್ಮ
 (ಏನ್ ತಮ್ಮಯ್ಯ ಹೀಗೆಲ್ಲ ಬರೆದುಬಿಟ್ಟೆ)