Sunday, May 24, 2015

ಪ್ರಕಾಶಿಶ್ ಕುಟುಂಬಕ್ಕೆ ವಿವಾಹ ಮಹೋತ್ಸವದ ಶುಭಾಶಯಗಳು!!!


ಇವತ್ತೇ ನಾಂದಿ...ಬೆಳಿಗ್ಗೆ ಹತ್ತುಗಂಟೆಗೆ ಕಾರ್ಯಕ್ರಮಗಳು ಶುರುವಾಗುತ್ತದೆ....

ಬೇಗನೇ ನಾಷ್ಟಾ ಮಾಡಿ ಅಣ್ಣನ ಮುಂದೆ ನಿಂತೆ.. "ಅಣ್ಣಯ್ಯಾ..ಸಿರ್ಸಿ ಹೋಗಿ ಬರ್ತಿನಿ.. ಏನಾದರೂ ತರುವದು 
ಇದೆಯಾ ? "..

ಅಣ್ಣನಿಗೆ ಸಣ್ಣಕೆ ಕೋಪ ಬಂತು.. "ಮದುವೆ ಹುಡುಗ ನೀನು..ನೀನು ಯಾಕೆ ಹೋಗಬೇಕು... ? ಏನು ಅಂಥಹ ತುರ್ತು ಕೆಲಸ ?..."

ಅಣ್ಣನಿಗೆ ಹೇಗೆ ಹೇಳುವದು ? ಜಿಂಕೆಮರಿ ಸಂಗಡ ಮಾತನಾಡಬೇಕಿತ್ತು....ಬಹಳ ಕಷ್ಟಪಟ್ಟು ಅವಳ ಫೋನ್ ನಂಬರ್ ಸಂಪಾದಿಸಿದ್ದೆ...

ಹೇಗೋ ಹೇಗೋ ಒಪ್ಪಿಸಿ ಸಿರ್ಸಿಗೆ ಬಂದೆ

ಮನದೊಳಗೆ ಹಾಡು ಕಿರುಚುತಿತ್ತು " ಒಲಿದ ಜೀವ ಜೊತೆಯಲಿರಲು ಬಾಳು ಸುಂದರ" ಮುಂದಕ್ಕೆ ಹಾಡು ಹೊಳೆಯುತ್ತಲೇ ಇಲ್ಲ 

ಗೋಕರ್ಣಕ್ಕೆ ಫೋನ್ ಮಾಡಬೇಕಿತ್ತು...ಅವರ ತವರು ಮನೆಯವರು ಬಹಳ ಸಂಪ್ರದಾಯಸ್ಥರು....
ಇದು ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ನಡೆದದ್ದು..ಇದೇ ದಿನ...!

ಮದುವೆಗೆ ಮುಂಚೆ ಹುಡುಗ.. ಹುಡುಗಿ ನೋಡಬಾರದು..ಮಾತನಾಡಬಾರದು...ಶಾಸ್ತ್ರ...
ಸಂಪ್ರದಾಯ.. ಆಚರಣೆಗಳಲ್ಲಿ ಅವರು ಬಹಳ ಕಟ್ಟುನಿಟ್ಟು... 

"ಹಲ್ಲೊ...ನಾನು ಪ್ರಕಾಶ...ಕಾನಸೂರು..ದೇವಿಸರದಿಂದ..."...........

ಫೋನ್ ಎತ್ತಿದವರು ಬಹುಷಃ ಯಾರೋ ಹೊಸಬರು..."ಯಾರು ಬೇಕಿತ್ತು ?""ಮದು ಮಗಳು ಆಶಾ...."

"ಮದುಮಗಳು ಆಶಾ ??.. !..ಇಲ್ಲಿ ಆ ಹೆಸರಿನವರಾರು ಇಲ್ಲವಲ್ಲ..."....

ನನ್ನ ತಲೆಗೆ ನಾನು ಚಚ್ಚಿಕೊಂಡೆ.. ಆಶಾ ನಾನು ಇಟ್ಟ ಹೆಸರು..ಜಿಂಕೆಮರಿ ಮೂಲ ಹೆಸರು " ಲೀಲಾ "...

"ಕ್ಷಮಿಸಿ...ಲೀಲಾ ಹತ್ತಿರ ಮಾತನಾಡಬೇಕಿತ್ತು..."...ಅಷ್ಟರಲ್ಲಿ ಮಾತನಾಡುತ್ತಿದ್ದವರು ಬದಲಾದರು...

"ನಾನು ದೊಡ್ಡಪ್ಪ...ಹೇಳಿ..ನೀವ್ಯಾರು ?.."....ಗಡಸು ಧ್ವನಿ... ಕಿವಿಗೆ ಅಪ್ಪಳಿಸಿತು...

ನನ್ನ ಧ್ವನಿ ಸಣ್ಣಗೆ ಕಂಪಿಸಿದ್ದು ನನಗೂ ಗೊತ್ತಾಗಹತ್ತಿತು..

"ನಾನು...ನಾನು ನಿಮ್ಮನೆ ಅಳಿಯ ಆಗ್ತಾ ಇದ್ದೀನಿ...ನಾಡಿದ್ದು..ಮೇ ಇಪ್ಪತ್ತನಾಲ್ಕರಂದು...ಪ್ರಕಾಶ...
ದೇವಿಸರದ ಪ್ರಕಾಶ...."....ಈಗ ಬಹುಷಃ ಅವರಿಗೆ ಖುಷಿಯಾಯಿತು ಅಂತ ಅನ್ನಿಸಿತು..

"ಓಹೋ..ಹೋ.... ಅಳಿಯಂದಿರು...!!!! ಏನು ವಿಶೇಷ ..? ಕಾಶಿ ಗಂಟು ಕಸಿಯಲು ಹುಡುಗರು ಹೊರಟಿದ್ದಾರೆ....
ನೀವು ಚಿಂತಿಸಬೇಡಿ ಅಳಿಯಿಂದಿರೆ....ನಿಮ್ಮನ್ನು ಕಾಶಿಗೆ ಕಳಿಸುವದಿಲ್ಲ...ನಮ್ ಹುಡುಗಿ ಜೊತೆ ಮದುವೆ ಮಾಡಿಸಿಯೇ ಕಳಿಸುತ್ತೇವೆ...."...

ಈ ಹಿರಿಯರಿಗೆಲ್ಲ ಹೇಗೆ ಹೇಳುವದು ..? ಮನದೊಳಗಿನ ಹಾಡು ಮತ್ತು ಜೋರಾಯಿತು" ಒಲಿದ ಜೀವ ಜೊತೆಯಲಿರಲು ಬಾಳು ಸುಂದರ"

"ಅಲ್ಲ..ಅದಲ್ಲ ವಿಷಯ...ಅದು...ಅದೂ....ಲೀಲೂ ಹತ್ತಿರ ಸ್ವಲ್ಪ ಮಾತನಾಡಬೇಕಿತ್ತು...."...

"ಲೀಲು ಒಳಗಡೆ ಇದ್ದಾಳೆ... ನಾಡಿದ್ದೇ ಮದುವೆ ಅಲ್ವಾ... ? ಬ್ಯೂಸಿ ಇದ್ದಾಳೆ... ಏನು ವಿಷಯ ನನ್ನ ಹತ್ತಿರ ಹೇಳಿ. ಅವಳಿಗೆ ಹೇಳ್ತೀನಿ..."............

ನನ್ನ ದೊಡ್ಡ ಮಾವನ ಬಳಿ ಏನು ಹೇಳುವದು.... ? ಅವರು.....ಅವರ ವರ್ಚಸ್ಸು...ಗಾಂಭೀರ್ಯ.. ನೋಡಿಯೇ ಹೆದರಿಕೆ ಆಗುತ್ತಿತ್ತು...ಅಷ್ಟರಲ್ಲಿ ಮತ್ತೆ ಧ್ವನಿ ಬದಲಾಯಿತು...

ಈಗ ಬಂದವರು ನನ್ನ ಮಾವ... ! ಆಶಾ ಅಪ್ಪ..."ಪ್ರಕಾಶಾ...ಏನು.. ವಿಷಯ...?.."...

ನನ್ನ ಮಾವ ಏರ್ ಫೋರ್ಸ್ ಆಫೀಸರ್...ಬಹಳ ಶಿಸ್ತು... ದರ್ಪು....."ಪ್ಲೀಸ್..ಪ್ಲೀಸ್ ಲೀಲು ಹತ್ತಿರ ಮಾತನಾಡಬೇಕಿತ್ತು..."

"ಪ್ರಕಾಶೂ...ಇನ್ನು ಎರಡೇ ದಿನ...ಜೀವನ ಪೂರ್ತಿ ಅವಳು ನಿನ್ನ ಜೊತೆಯೇ ಇರ್ತಾಳೆ...ಏನು ಬೇಕಾದ್ರೂ ಮಾತನಾಡು...
ಎಷ್ಟು ಬೇಕಾದ್ರೂ ಮಾತನಾಡು..."...

ಥಥ್....! ನನ್ನ ಅದೃಷ್ಟವೇ ಸರಿ ಇಲ್ಲ..." ಅದಲ್ಲ ಮಾವಾ...ನನ್ನ ಬದುಕಿನಲ್ಲಿ ಮತ್ತೆ ...ಈ ದಿನ..ಈ ಸಂದರ್ಭ ...
ಈ ಕ್ಷಣ ಮತ್ತೆ ಬರೋದಿಲ್ಲ... ಪ್ಲೀಸ್.. ಪ್ಲೀಸ್..."....

ನನ್ನ ಮಾವನ ಹೃದಯ ಕರಗಿತು ಅಂತ ಅನ್ನಿಸಿತು..

"ಲೀಲೂ....ಲೀಲೂ... ಬಾ ಮಗಳೆ..."...ನನ್ನ ಜಿಂಕೆಮರಿ ಅಲ್ಲೇ ಇದ್ದಳು ಅಂತ ಅನ್ನಿಸುತ್ತದೆ..

ಛಕ್ಕನೆ ಧ್ವನಿ ಬದಲಾಯಿತು..."ಹಲೋ...." ಎನ್ನುವ ಬದಲು ಆ ಕಡೆಯಿಂದ "ವಿಶ್ವವೆಲ್ಲ ಭವ್ಯವಾದ ಪ್ರೇಮ ಮಂದಿರ" 
ವಾವ್ ! ಹೃದಯದ ಪದಕ್ಕೆ ಸುಂದರ ಮುಂದುವರಿಕೆ... 

ವಾವ್... .........!...

ಎಷ್ಟು ಸಿಹಿಯಾಗಿತ್ತು ..ಆ ಮಾತು... ಆ ಧ್ವನಿ .. ಆ ಕ್ಷಣ....!!....
"ಹಲ್ಲೋ....ನಾನು ಮಾತನಾಡ್ತಾ ಇರೋದು..." 

ನಾಚಿದಳು ಅನ್ನಿಸುತ್ತದೆ...ಸಣ್ಣಕೆ ಪಿಸುಗುಟ್ಟಿದಳು...."ಬೇಗ ಹೇಳೀ...ಇಲ್ಲಿ ಎಲ್ಲರೂ ಇದ್ದಾರೆ..."...

"ಹೇಳೋಕೆ ಆಗೋಲ್ಲ ಹಾಡ್ತೀನಿ ... "

ಶುರುವಾಯಿತು ಯುಗಳ ಗೀತೆ 

"ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ"

ಈ ಕಡೆ ಫೋನಿನಲ್ಲಿ ಮಾತನಾಡುವಾಗ ಜಗುಲಿ ತುಂಬಾ ಜನ ಇದ್ದರು....ಎಲ್ಲರೂ ಕಿವಿ...
ಬಾಯಿ ತೆರೆದು ಕೇಳುತ್ತಿದ್ದರು...​ಅವರ ಕಣ್ಣಲ್ಲಿ "ಮದುವೆ ಹುಡುಗ ಏನು ಮಾತನಾಡಿದ ? " ಅನ್ನುವ ಪ್ರಶ್ನೆ ಎದ್ದು ಕಾಣುತ್ತಿತ್ತು 
​ಏನು ಅಂತ ಹೇಳಲಿ ಅವರಿಗೆಲ್ಲ...?.. ಏನೂ ಮಾತಾಡಲಿಲ್ಲ ಬದಲಿಗೆ ಈ ಹಾಡು ಹಾಡಿದ ನೀವೇ ಕೇಳಿ ಎಂದು ಅಲ್ಲೇ ಇದ್ದ ಟೇಪ್ ರೆಕಾರ್ಡರ್ ಆನ್ ಮಾಡಿದರು

ಬೆಂಕಿಯ ಬಲೆ ಚಿತ್ರದ ಅದ್ಭುತ ಯುಗಳ ಗೀತೆ "ಒಲಿದ ಜೀವ ಜೊತೆಯಲಿರಲು ಬಾಳು ಸುಂದರ" ಹಾಡು ಜೋರಾಗಿ ಬರುತ್ತಿತ್ತು.. 

ಇತ್ತ ದೂರವಾಣಿ ಸಂಭಾಷಣೆ ಮುಂದುವರೆಯಿತು

ಸಿರ್ಸಿ ಕಡೆಯಿಂದ "ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ
ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ"

ಇತ್ತ ಗೋಕರ್ಣದ ಕಡೆಯಿಂದ "ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ"

ಆಶಾ ಇನ್ನು ಸ್ವಲ್ಪ ದಿನ .. ಆಮೇಲೆ ನಾವು ಹೀಗೆ ಹಾಡಬಹುದು "ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ
ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ"

ಆ ಕಡೆಯಿಂದಲೂ ಸವಾಲಿಗೆ ಸವಾಲು ಎನ್ನುವಂತೆ "ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ"

ದೂರವಾಣಿಯಲ್ಲಿ ಎರಡು ಧ್ವನಿಗಳು ಒಟ್ಟಿಗೆ ಮೊಳಗುತ್ತವೆ "ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ"

ರೀ ಹೊತ್ತಾಯಿತು.. ಬಹಳ ಸೆಕೆ ಆಗುತ್ತಿದೆ.. ಇನ್ನು ಬೇಕಾದಷ್ಟು ಕೆಲಸಗಳು ಇವೆ.. ಫೋನ್ ಇಡ್ತೀನಿ ಅಂದಾಗ.. 

"ಸ್ವಲ್ಪ ಹೊತ್ತು ಸ್ವಲ್ಪ ಹೊತ್ತು.. ಅಣ್ಣಾವ್ರು ಶಂಕರ್ ಗುರು ಚಿತ್ರದಲ್ಲಿ ಹೀಗೆ ಆಲ್ವಾ ಹಾಡೋದು... "

ಜಿಂಕೆಯ ಕಣ್ಣು ಚೆನ್ನ,ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ,ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ"

"ಅಬ್ಬಾ ಎಂಥಾ ಮಾತು.. ಸುಂದರ ಅತಿ ಸುಂದರ.. ಆ ಕ್ಷಣಕ್ಕೆ ಕಾಯುತ್ತಿದ್ದೇನೆ.. ಗೋಕರ್ಣದ ಸೆಕೆ.. ಸಿರ್ಸಿಯ ಸೆಕೆ ಸೇರಿಸಿ ಸ್ವಲ್ಪ ಹಾಡಿ.. ಇಲ್ಲಿ ಎಲ್ಲಾ ಇನ್ನೂ ಆ ಹಾಡನ್ನೇ ಟೇಪ್ ರೆಕಾರ್ಡರ್ ನಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದಾರೆ.. ಸ್ವಲ್ಪ ಹೆಚ್ಚು ಸಮಯಸಿಗುತ್ತಿದೆ .. "

ದೂರವಾಣಿಯಿಂದ ಮತ್ತೆ ಗಾನ ಗಂಗೆ ಹರಿಯಿತು

"ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ
ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮೆತ್ತೆಯಂತೆ"

ವಾಹ್ ವಾಹ್ .. ಗೋಕರ್ಣದ ಫೋನ್ ನಿಧಾನವಾಗಿ ಕಂಪಿಸುತ್ತಿತ್ತು.. ಅರೆ ಒಂದು ಪ್ರೇಮ ನಿವೇದನೆ ಹೇಗೋ ಮಾಡಬಹುದೇ.. ಈ ಸವಾಲಿಗೆ ಇನ್ನೊಂದು ಪ್ರತಿ ಸವಾಲು ಹಾಕಬೇಕು ಎಂದು ಕೊಂಚ ಯೋಚಿಸಿ

"ಮೊಗದಿ ಹರಿವ ಬೆವರ ಹನಿಯು ಒಂದೊಂದು ಮುತ್ತಿನಂತೆ
ಮೊಗದಿ ಹರಿವ ಬೆವರ ಹನಿಯು ಒಂದೊಂದು ಮುತ್ತಿನಂತೆ
ಏನೋ ಉಲ್ಲಾಸ ಏನೋ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ ದಿನವೊಂದು ಕ್ಷಣವಂತೆ"

ಆ ಕಡೆಯಿಂದ ಸೂಪರ್ ಸೂಪರ್ ... ಬಹಳ ಇಷ್ಟವಾಯಿತು.. ಸರಿ ಸರಿ.. ಟೆಲಿಫೋನ್ ಬೂತ್ ಹೊರಗೆ ಗಲಾಟೆ ಮಾಡುತ್ತಿದ್ದಾರೆ.. ಮತ್ತೊಮ್ಮೆ ಈ ಹಾಡನ್ನು ಒಟ್ಟಿಗೆ ಹೇಳಿಬಿಡೋಣ 
"ಒಲಿದ ಜೀವ ಜೊತೆಯಲಿರಲು ಬಾಳು ಸುಂದರ.. 
ವಿಶ್ವವೆಲ್ಲಾ ಭವ್ಯವಾದ ಪ್ರೇಮ ಮಂದಿರ... ಒಲಿದ ಜೀವ ಜೊತೆಯಲಿರಲು ಬಾಳು ಸುಂದರ"

ಹೌದು ರೀ ಇಲ್ಲೂ ಕೂಡ ಟೇಪ್ ರೆಕಾರ್ಡ್ ನಲ್ಲಿ ಆ ಹಾಡು ಕೇಳಿ ಕೇಳಿ.. ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ.. ಸರಿ ಸಿಗೋಣ ಮದುವೆ ಮನೆಯಲ್ಲಿ :-)

ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆಯವರ ಅದ್ಭುತ ಪ್ರೀತಿ ಪ್ರೇಮ ಸಂಸ್ಕಾರ ಸಂಸಾರ.. ಇಪ್ಪತ್ತು ವರ್ಷಗಳ ಮೈಲಿಗಲ್ಲು ತುಳಿದು ಶತಕದ ಮೈಲಿಗಲ್ಲು ಕಡೆಗೆ ನಡೆಯುತ್ತಿರುವ ಅದ್ಭುತ ಜೋಡಿಗೆ ಈ ರೀತಿಯಲ್ಲಿ ಶುಭಾಷಯ ಕೋರಬೇಕು ಎನ್ನುವುದು ದೈವ ಪ್ರೇರಣೆ.. 

ಎಲ್ಲಾರೂ ಕೈಗೂಡಿಸಿ ಹಾರೈಸಿ.. 

ಪ್ರಕಾಶಿಶ್ ಕುಟುಂಬಕ್ಕೆ ವಿವಾಹ ಮಹೋತ್ಸವದ ಶುಭಾಶಯಗಳು!!! 

(ಪ್ರಕಾಶಣ್ಣ ಬರೆದ ಫೇಸ್ಬುಕ್ ಲೇಖನದಿಂದ ಸ್ಪೂರ್ತಿಗೊಂಡು.. ಅದರ ಕೆಲವು ಸಾಲುಗಳನ್ನು ಕದ್ದು.. ಕೆಲವು ಸಾಲುಗಳನ್ನು ಮಿದ್ದು .. ನನ್ನ ಕಲ್ಪನೆ ಸೇರಿಸಿ ಹುಯ್ದು ಸಿದ್ಧ ಪಡಿಸಿದ ಪಾಕ ಇದು.. ಇಷ್ಟವಾದರೆ ಇಷ್ಟವಾಯಿತು.. ಇಲ್ಲ ಅಂದರೆ ಇಲ್ಲ.. ಅಲ್ಲವೇ  ಅಕ್ಷತೆ ಬಣ್ಣದಲ್ಲಿ ಇರುವ ಪ್ರೀತಿ ಪ್ರೇಮ ತುಂಬಿದ ಅಕ್ಷರಗಳು ಭಾವಗಳು ಪ್ರಕಾಶಣ್ಣ ಅವರದು.. ಮಿಕ್ಕವು ಹಹಹ ಈ ಕೀಲಿ ಮನೆಯಿಂದ ಹರಿದದ್ದು )