ಒಂದಾನೊಂದು ಕಾಲ.. ಒಂದು ರೀತಿಯ ವಿಚಿತ್ರ ಮನಸ್ಥಿತಿಯಲ್ಲಿದ್ದ ಪರ್ವ..
ಕೀಳರಿಮೆ, ಕಾಡುವ ಸಂಕಟಗಳು ಇದರಿಂದ ನೊಂದು ಬಳಲಿ ಬೆಂಡಾಗಿದ್ದ (ಈಗಲೂ ಹಾಗೆ ಅದು ಬೇರೆ ವಿಷಯ) ಒಂದು ಮಹಾನ್ ಪರ್ವ ಅದು.
ಹಂಚಿಕೊಳ್ಳುವ ಸುಖವಿರಲಿಲ್ಲ, ಕಷ್ಟಗಳನ್ನು ಹೇಳಿಕೊಳ್ಳಲು ಅಭಿಮಾನ ಅಡ್ಡ ಬರುತ್ತಿತ್ತು. ಆದರೂ ನನಗೆ ಆ ಭಾವ ಬರದಂತೆ, ಬಂದರೂ ಅದನ್ನು ನನ್ನ ಕಾಡದಂತೆ ಮಾಡಲು ಶ್ರಮಿಸಿದವರು ನನ್ನ ಮನೆಯವರು.. ಹಾಗೂ ನನ್ನ ಜೀವದ ಗೆಳೆಯರಾದ ಪಂಚ ಪಾಂಡವರ ಪಡೆ.
ಶಶಿ, ವೆಂಕಿ, ಜೆಎಂ, ಲೋಕಿ ಮತ್ತು ನಾನು ಸೇರಿ ಪಂಚ ಪ್ರಾಣಗಳೇ ಆಗಿದ್ದೆವು. ಪ್ರತಿಭಾ ಎಂಬ ಅಪ್ಪಟ ಹೃದಯವಂತೆ ನಮ್ಮ ಗೆಳೆಯ ಶಶಿಯನ್ನು ವರಿಸಿದಾಗ, ನಮಗೆ ಕಾದಿದ್ದು ಶಶಿ ನಮ್ಮ ಗುಂಪಿನಿಂದ ಕಾಣೆಯಾದ ಹಾಗೆ ಎಂದು.
ಏಕೆಂದರೆ, ಅನೇಕ ಗೆಳೆಯರ ಗುಂಪುಗಳನ್ನು ನೋಡಿದ್ದೇನೆ, ಮದುವೆಯ ತನಕ ಚೆನ್ನಾಗಿದ್ದವರು ಆಮೇಲೆ ಹಠಾತ್ ಮಾಯಾ ಆಗಿಬಿಡುತ್ತಾರೆ. ಎಲ್ಲೋ ಒಂದು ವರ್ಷಕ್ಕೂ ಎರಡು ವರ್ಷಕ್ಕೊ ಹಾಯ್ ಬಾಯ್ ಅಂತ ಹೇಳಿಕೊಂಡು ತಿರುಗುವ ಅನೇಕ ಗುಂಪುಗಳ ಮಧ್ಯೆ ನಮ್ಮ ಗುಂಪಿನಲ್ಲಿ ಪ್ರತಿಭಾ ಬಂದ ಮೇಲೆ ಏನೂ ಎಂದರೆ ಏನೂ ಬದಲಾಗಲಿಲ್ಲ.
ಕಾರಣ, ಅವರು ನಮ್ಮೊಳಗೇ ಒಬ್ಬರಾಗಿ ಬಿಟ್ಟರು, ಅಣ್ಣ, ವೆಂಕಯ್ಯ, ಲೋಕಿ, ಜೆಎಂಗಾರು ಅಂತ ನಮ್ಮನ್ನು ಕರೆಯುತ್ತಾ ನಮ್ಮ ಗುಂಪಿನಲ್ಲಿ ಪುಟ್ಟ ತಂಗಿಯಾಗುವ ಬದಲು ನಮಗೆಲ್ಲಾ ಪ್ರೀತಿಯ ಅಕ್ಕಯ್ಯ ಆಗಿ ಬಿಟ್ಟರು. ನಮ್ಮನ್ನೆಲ್ಲ ಎಷ್ಟು ಹಚ್ಚಿ ಕೊಂಡಿದ್ದಾರೆ ಅಂದರೆ, ತಮ್ಮ ಇನಿಯ ಶಶಿಯ ಹತ್ತಿರ ನಮ್ಮ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಲೇ ಇರುತ್ತಾರೆ. ಹಾಗಾಗಿ ನಾವು ಅವರಿಗೆ ಹೊಸದಾಗಿ ಹೇಳುವ ಅವಶ್ಯಕತೆ ಏನೂ ಇರುವುದಿಲ್ಲ. ಆದರೆ ಅವರ ಹೃದಯಾ ಸಿರಿವಂತಿಕೆ ಎಂದರೆ, ನಮ್ಮ ಜೀವನದಲ್ಲಿ ಆಗುವ ಏನೇ ಘಟನೆ ಆದರೂ ನಾವು ಅವರಿಗೆ ಹೇಳಿದರೆನೆ ಏನೋ ಒಂದು ತರಹ ಖುಷಿ.
ಏನೇ ವಿಷಯ ಇದ್ದರೂ ಅಕ್ಕಯ್ಯನ ಬಳಿ ಹೇಳಿಕೊಂಡರೆ ಸಮಾಧಾನ... ಅಂಥಹ ಅಕ್ಕಯ್ಯ ನಮ್ಮ ಮುದ್ದು ಗೆಳೆಯ ಶಶಿಯ ಜೀವನಕ್ಕೆ ಬಂದು ಕಳೆದ ವಸಂತಗಳು ಹದಿನೇಳು. ನಿನ್ನೆ ಮೊನ್ನೆ ಮದುವೆ ಆಗಿದ್ದರೇನೋ ಅನ್ನುವಂಥಹ ಅನ್ಯೋನ್ಯತೆ, ನಗು, ಪ್ರೀತಿ ವಿಶ್ವಾಸ ಬೆಳೆಯುತ್ತಲೇ ಇದೆ. ನಮಗೆಲ್ಲ ಒಂದು ಮಾದರಿ ಜೋಡಿ ಅವರಿಬ್ಬರದು.
ಇವನು ಶಾಂತ ಸ್ವಭಾವದ ಹುಡುಗ, ಅಕ್ಕಯ್ಯ ಅಷ್ಟೇ ಮಂದಸ್ಮಿತೆ, ಇವನಿಗೆ ಗೆಳೆಯರು ಅಂದರೆ ಪಂಚಪ್ರಾಣ, ಅಕ್ಕಯ್ಯನಿಗೆ ಯಜಮಾನನ ಗೆಳೆಯರು ಅಂದ್ರೆ ಅಷ್ಟೇ ಪ್ರಾಣ.
ಅಕ್ಕಯ್ಯ ಮಾಡುವ ಅಡಿಗೆ ನೆನೆಸಿಕೊಂಡರೆ ಸದಾ ಹೊಟ್ಟೆ ಹಸಿಯುತ್ತದೆ. ಇವರಿಬ್ಬರ ಉಪಚಾರ ಒಂದು ರೀತಿಯಲ್ಲಿ ನಮಗೆ ದೇವರು ಕೊಟ್ಟ ವರ.
ಇಂಥಹ ಅದ್ಭುತ ಜೋಡಿಗೆ ಇಂದು ವಿವಾಹ ದಿನದ ಶುಭ ಸಂಭ್ರಮದಲ್ಲಿದ್ದಾರೆ. ನಾವೆಲ್ಲಾ ಮಾಡಬೇಕಾದ್ದು ಹಾಗೆ ಸುಮ್ಮನೆ ಹಾಯ್ ಅಕ್ಕಯ್ಯ ವಿವಾಹ ದಿನದ ಶುಭಾಶಯಗಳು ಅಂದರೆ ಸಾಕು.. ಹಾಯ್ ಶಶಿ ವಿವಾಹ ದಿನದ ಶುಭಾಶಯಗಳು ಅಂದರೆ ಸಾಕು.
ಇಷ್ಟೊತ್ತಿಗೆ ಅಕ್ಕಯ್ಯ ಶ್ರೀಕಾಂತ್ ಅಣ್ಣ ಏನೂ ಬರೆದಿಲ್ಲ.. ಅವರನ್ನು ಮಾತಾಡಿಸೋಲ್ಲ ಅಂತ ವೀರ ಪ್ರತಿಜ್ಞೆ ಮಾಡಿರುತ್ತಾರೆ, ಆ ಪ್ರತಿಭಾ ದೇವಿಗೆ ಶಾಂತ ಮಾದಪ್ಪ ಎಂದು ಆ ದುರ್ಗಾ ದೇವಿಯನ್ನು ಜಪಿಸುತ್ತಾ, ನಡುಗುವ ಸ್ವರದಲ್ಲಿ ಅಕ್ಕಯ್ಯ ತಡವಾಗಿದೆ ಆದರೆ ಕಚೇರಿಯ ಕೆಲಸದ ಒತ್ತಡ ಇದ್ದದರಿಂದ ತಡವಾಗಿ ಆದ್ರೆ ಮೂವತ್ತನೇ ನವೆಂಬರ್ ೨೦೧೫ ರಂದೇ ಶುಭ ಕೋರುತ್ತಿದ್ದೇನೆ ಒಪ್ಪಿಸಿಕೊಳ್ಳಿ ಈ ಭಕ್ತನ ಶುಭಾಶಯಗಳನ್ನು ಎಂದು ಕೋರುತ್ತೇನೆ.
ಅಕ್ಕಯ್ಯ ಅಂಡ್ ಶಶಿ ಜನುಮದ ಜೋಡಿ ನೀವು ಶುಭವಾಗಲಿ, ಪ್ರತಿಭೆಯ ಶೋಭೆ ಉದಯವಾಗುತ್ತಲೇ ಇರಲಿ