ಟರ್ ಟರ್ ಎಂದು ಕೀಲಿ ಕೊಟ್ಟು ನೆಡೆಸಬೇಕಾಗಿದ್ದ ಗೋಡೆ ಗಡಿಯಾರ ಇಂದು ಡಿಜಿಟಲ್ ಆಗಿದೆ, ವಿದ್ಯುತ್ ಇಲ್ಲವೇ ಚಿಕ್ಕ ಚಿಕ್ಕ ಬ್ಯಾಟೆರಿ, ಇಲ್ಲವೇ ಸೂರ್ಯ ರಶ್ಮಿ ಚಾಲಿತವಾಗಿದೆ.
ಕೈಗೆ ಕಟ್ಟುವ ಗಡಿಯಾರಕ್ಕೆ ದಿನವೂ ಕೀಲಿ ಕೊಡಬೇಕಿತ್ತು, ಇಲ್ಲವೇ ಅದು ನಿಂತು ಹೋಗಿ ಮತ್ತೆ ಬೇರೆ ಒಬ್ಬರ ಹತ್ತಿರ ಸಮಯ ಕೇಳಿ ಮತ್ತೆ ಕೈಗಡಿಯಾರದ ಸಮಯವನ್ನು ಸರಿ ಮಾಡಬೇಕಿತ್ತು.. ಆದ್ರೆ ಇಂದು ಅದೆಲ್ಲಾ ಇಲ್ಲವೇ ಇಲ್ಲ.. ದೇಹದ ಉಷ್ಣತೆ ಇಂದ ಚಲಿಸುವ ಕೈ ಗಡಿಯಾರ, ಬ್ಯಾಟೆರಿ, ದಿನಕರನ ಕರುಣೆಯಿಂದ ನಡೆಯುವ ಹಂತಕ್ಕೆ ಬಂದಿದೆ..
ಆದರೆ ಒಂದು ಕ್ಷಣ ಹಿಂದಕ್ಕೆ ಹೋದಾಗ ಆಗಿನ ಕಾಲ ಎಷ್ಟು ಚೆನ್ನ ಅನ್ನಿಸುವುದು ಸುಳ್ಳಲ್ಲ.. ಇರಲಿ ಕಾಲ ಬದಲಾಗುತ್ತದೆ, ಬದಲಾಗಲೇ ಬೇಕು.
ಈ ದೇಗುಲದ ಹೆಸರು!!! |
ನಾವು ಎಂಟನೆ ತರಗತಿಯಲ್ಲಿ ಓದುತ್ತಿದ್ದಾಗ ಭೂಗೋಳ ಶಾಸ್ತ್ರ ಹೇಳಿಕೊಡುತ್ತಿದ್ದ ಶ್ರೀ HVR ಹೇಳುತ್ತಿದ್ದರು, ಬೆಂಗಳೂರನ್ನು ನೋಡಲು ಬರುವ ಪ್ರವಾಸಿಗರನ್ನು ಹೊತ್ತು ತರುತ್ತಿದ್ದ ಬಸ್ಸು, ಎಲ್ಲಾ ಸ್ಥಳಗಳನ್ನು ಸುತ್ತುವ ಮೊದಲು ಅಥವಾ ನಂತರ, ನಮ್ಮ ಶಾಲೆ ನ್ಯಾಷನಲ್ ಹೈ ಸ್ಕೂಲ್ ಮುಂದೆ ಬಂದು, ಪ್ರವಾಸಿಗರಿಗೆ ಹೇಳುತ್ತಿದ್ದರಂತೆ.. ಇದು ಈ ಸ್ಕೂಲ್, ಇದು ಪ್ರಸಿದ್ಧಿಯಾದದ್ದು, ಬೆಂಗಳೂರಿನ ಅನೇಕ ಅತ್ಯುತ್ತಮ ಶಾಲೆಗಳಲ್ಲಿ ಇದು ಕೂಡ ಒಂದು.. ಹೀಗೆ ನಮ್ಮ ಶಾಲೆಯ ಮಹಿಮೆಯನ್ನು ಬಣ್ಣಿಸುತ್ತಿದ್ದರಂತೆ.. ನಮಗೆ ಆಗ ಈ ವಿಷಯ ಹಾಸ್ಯಕರ ಅನ್ನಿಸಿದ್ದರೂ ಆಶ್ಚರ್ಯವಿಲ್ಲ.. ಯಾಕೆ ಅಂದರೆ ದೀಪದ ಕೆಳಗೆ ಕತ್ತಲೆ ಅಲ್ಲವೇ.. ನಮಗೆ ಅರಿವಿರಲಿಲ್ಲ ನಾವು ಒಂದು ಅದ್ಭುತ ಶಾಲೆಯ ಭಾಗವಾಗಿ ಹೋಗಿದ್ದೇವೆ ಎಂದು.
ಕಾಲ ಘಟ್ಟದಲ್ಲಿ ಓದು ಮುಗಿದು, ಜೀವನೋಪಾಯಕ್ಕೆ ಕೆಲಸ, ಸಂಸಾರ, ಮನೆ ಮಕ್ಕಳು ಎಂಬ ಜಂಜಾಟದಲ್ಲಿ ಎಲ್ಲವನ್ನು ಮರೆತು ಪ್ರಾಪಂಚಿಕ ಕುದುರೆ ಓಟದಲ್ಲಿ ಗಳಿಸಿದ್ದು ಕಳೆದದ್ದು ತುಲನೆ ಮಾಡುತ್ತಾ ಕೂತಾಗ, ಗಡಿಯಾರಕ್ಕೆ ಕೀಲಿ ಕೊಟ್ಟ ಹಾಗೆ ಮತ್ತೆ ನಮ್ಮ ಜೀವನ ಇಂದಿನಿಂದ ಮೂರು ದಶಕಗಳ ಹಿಂದಕ್ಕೆ ಓಡಿತು,
೧೯೮೫ - ೧೯೮೮ ರಲ್ಲಿ ಪ್ರೌಢಶಾಲೆ ಓದಿದ ಶಾಲೆ ನ್ಯಾಷನಲ್ ಹೈ ಸ್ಕೂಲ್ ಗೆ ನಾವು ಹನ್ನೆರಡು ಮಂದಿ ಶಾಲೆಗೆ ಹೋದೆವು. ಹನ್ನೆರಡು ಮಂದಿಯಲ್ಲಿ ಕೆಲವರು ಮೊತ್ತ ಮೊದಲ ಬಾರಿಗೆ ನಮ್ಮ ಭೇಟಿಗೆ ಬಂದಿದ್ದರು. (ಕಳೆದ ಐದು ವರ್ಷಗಳಿಂದ ಹೀಗೆ ಕನಿಷ್ಠ ಪಕ್ಷ ವರ್ಷಕ್ಕೆ ಒಮ್ಮೆಯಾದರು ಭೇಟಿಯಾಗುತ್ತಿದ್ದೇವೆ).
ಒಬ್ಬರೊಬ್ಬರ ಪರಿಚಯವಾದ ಮೇಲೆ, ನಮ್ಮ ದೈಹಿಕ ಶಿಕ್ಷಣ ತಜ್ಞ ಶ್ರೀ KC ಕಂಡರು. ನಾವೆಲ್ಲಾ ನಮಸ್ಕರಿಸಿದೆವು. ಅವರಿಗೆ ನಮ್ಮೆಲ್ಲರ ಪರಿಚಯ ಹತ್ತಲಿಲ್ಲ.. ನಾವು ನಮ್ಮ ಕಾಲದ ಕೆಲವು ಪ್ರಸಿದ್ಧ ಗೆಳೆಯರ ಹೆಸರು ಹೇಳಿದ ತಕ್ಷಣ ಓಹೊ ಸರಿ ಸರಿ ಈಗ ಗೊತ್ತಾಯಿತು.. ಎಂದು ಹೇಳಿ ಒಬ್ಬೊಬ್ಬರ ಪರಿಚಯ ಮಾಡಿಕೊಂಡರು. ನಮಗೂ ಖುಷಿ ಇಷ್ಟು ವರ್ಷಗಳಾದ ಮೇಲೆ ನಮ್ಮ ಗುರುಗಳಲ್ಲಿ ಒಬ್ಬರನ್ನು ನೋಡುತ್ತಿದ್ದೇವೆ, ಮಾತಾಡಿಸುತ್ತಿದ್ದೇವೆ ಎಂದು.
ಶ್ರೀ KC ಅವರೊಂದಿಗೆ ನಾವೆಲ್ಲರು... |
ಒಳಗೆ ಹೋಗ್ರಪ್ಪ, ನೀವು ಓದಿದ ಶಾಲೆಯನ್ನು ನೋಡಿ, ನೀವು ಓದಿದ್ದ ಕೊಠಡಿಗೆ ಹೋಗಿ ಓಡಾಡಿಬನ್ನಿ ಎಂದರು. ಸರಿ ಅದಕ್ಕೆ ಕಾಯುತ್ತಿದ್ದ ನಾವೆಲ್ಲರೂ ದೊಡ್ಡಿಯಿಂದ ಬಿಟ್ಟ ಹಸು ಕರುಗಳ ತರಹ ನುಗ್ಗಿದೆವು. ಅಲ್ಲಿದ್ದ ಒಬ್ಬ ಹಿರಿಯರು, ಒಳಗೆ ಹೋಗುವ ಮುನ್ನ ಮುಖ್ಯ ಅಧ್ಯಾಪಕರು ಇದ್ದಾರೆ ಒಮ್ಮೆ ಅವರ ಅನುಮತಿ ಕೇಳಿಬಿಡಿ ಎಂದರು.
ಸರಿ ಹಿರಿಯರ ಮಾತು ನಿಜ, ನಾವು ಹಿಂದೊಮ್ಮೆ ಓಡಾಡಿದ ಶಾಲೆಯಾದರೂ, ಈಗ ನಾವುಗಳು ಗೂಳಿಗಳ ತರಹ ನುಗ್ಗಬಾರದು ಎಂದು ನಾ ಮುಖ್ಯ ಅಧ್ಯಾಪಕರ ಕೋಣೆಗೆ ಹೋದೆ, ನನ್ನ ಕೈಲಿದ್ದ ಕ್ಯಾಮೆರ, ನನ್ನ ವೇಷ ಭೂಷಣ ನೋಡಿ, ಈತ ಯಾರೋ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದವರು ಇರಬೇಕು ಎಂದು, ಬನ್ನಿ ಬನ್ನಿ ಒಳಗೆ ಕೂತುಕೊಳ್ಳಿ ಏನು ಸಮಾಚಾರ ಎಂದರು.
ಗುರುಗಳೇ ನಾನು ಈ ಶಾಲೆಯ ವಿದ್ಯಾರ್ಥಿ, ನಾವುಗಳು ೮೮ರಲ್ಲಿ ಈ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ಹೋಗಿದ್ದೆವು, ಶಾಲೆಯನ್ನು ನೋಡುವ ಮನಸ್ಸಾಯಿತು, ಪ್ರತಿ ವರ್ಷವೂ ಇಲ್ಲಿಯೇ ಭೇಟಿ ಆಗುತ್ತಿದ್ದೆವು, ಆದರೆ ಭಾನುವಾರ ಬರುತ್ತಿದ್ದರಿಂದ, ಶಾಲೆಯೊಳಗೆ ಬರಲು ಅವಕಾಶವಿರಲಿಲ್ಲ, ಇಂದು ಶನಿವಾರ ನಿಮ್ಮನ್ನು ಭೇಟಿಯಾಗಲು ಬಂದೆವು ಎಂದೆ.
ಓಹೊ ಹೌದಾ.. ಒಳ್ಳೆಯಾದಾಯಿತು ಬನ್ರಪ್ಪಾ.. ಎಂದು ಎಲ್ಲರನ್ನು ಒಳಗೆ ಕರೆದು ಕೂರಲು ಹೇಳಿದರು. ಒಂದು ಕಾಲದಲ್ಲಿ ಈ ಕೋಣೆಗೆ ಹೋಗುತ್ತಿದ್ದೇವೆ ಎಂದರೆ ಅದ್ಭುತ ಅಪರಾಧ ಮಾಡಿದ್ದೇವೆ ಎನ್ನುವ ಅಳುಕು ಮನದಲ್ಲಿ ಇರುತ್ತಿತ್ತು, ಹಾಕಿದ ಅಂಗಿ ಒದ್ದೆಯಾಗಿರುತ್ತಿತ್ತು, ಆದರೆ ಇಂದು ಒಂದು ರೀತಿಯಲ್ಲಿ ರಾಜ ಮರ್ಯಾದೆ :-). ಗುರು ಶಿಷ್ಯರ ಅದ್ಭುತ ಸಾಮರಸ್ಯಕ್ಕೆ ಒಂದು ಉತ್ತಮ ಉದಾಹರಣೆ. ಅವರು ನಮಗೆ ಮರ್ಯಾದೇ ಕೊಡುತ್ತಿದ್ದ ರೀತಿ, ನಾವುಗಳು ನಮ್ಮ ಶಿಕ್ಷಕರನ್ನು ನೆನೆಯುತ್ತಿದ್ದ ರೀತಿ ಎಲ್ಲವೂ ನಮಗೆ ಉತ್ತಮ ಅನುಭವ ಕೊಡುತ್ತಿತ್ತು.
ನಗು ಮೊಗದ ಶ್ರೀ DVN |
ಸುಮಾರು ಒಂದು ಘಂಟೆ ನಮ್ಮ ಪರಿಚಯ, ಶಾಲೆಯ ಈಗಿನ ಸ್ಥಿತಿ ಗತಿ ಎಲ್ಲವೂ ವಿನಿಮಯವಾಯಿತು. ರಾಸಾಯನಿಕ ವಿಜ್ಞಾನವನ್ನು ಹೇಳಿಕೊಡುತ್ತಿದ್ದ ನಮ್ಮ ನೆಚ್ಚಿನ ಶ್ರೀ DVN ಅವರ ಮಾತುಗಳು, ಮತ್ತು ಗುರು ಶಿಕ್ಷಕರ ಬಾಂಧವ್ಯದಲ್ಲಿ ಒಳ್ಳೆಯ ಕೆಮಿಸ್ಟ್ರಿ ಇದ್ದದ್ದು ಇಬ್ಬರಿಗೂ ಹೇಳಿಕೊಳ್ಳಲಾರದ ಸಂತಸ ನೀಡುತ್ತಿತ್ತು.
ಹೋಗಲಿಕ್ಕೂ ಹೆದರುತ್ತಿದ್ದ ಕೋಣೆಯಲ್ಲಿ ಕೂತದ್ದು |
ಮೂರು ವರ್ಷ ಹಿಂದಿ ಭಾಷೆಯನ್ನ ಕಲಿಸಿ ಕೊಟ್ಟ ಶ್ರೀ SH (ಶ್ರೀಧರ್ ಹೆಗ್ಡೆ) ನಮ್ಮೆನ್ನೆಲ್ಲ ನೋಡಿ ಖುಷಿ ಪಟ್ಟದ್ದು, ಆಗಿನ ವಿದ್ಯಾರ್ಥಿಗಳೇ ವಿದ್ಯಾರ್ಥಿಗಳು ಎನ್ನುವ ಬೆನ್ನು ತಟ್ಟುವಂತಹ ನುಡಿಗಳು ನಮಗೆ ಹುಮ್ಮಸ್ಸು ತುಂಬಿತು.
ಶ್ರೀ SH |
೨೦೧೭ಇಸವಿಯಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಶುರುವಾಗಿ ನೂರು ವರ್ಷದ ಸಂಭ್ರಮದಲ್ಲಿ ತೇಲಲಿದೆ, ಅದರ ಸಮಾರಂಭಕ್ಕೆ ನಮಗೆ ಆಹ್ವಾನ ಬರುತ್ತದೆ ಎನ್ನುವಾಗ ನಮಗೆ ಮತ್ತೆ ನಮ್ಮ ಶಾಲೆಯನ್ನು, ಮತ್ತು ನಮ್ಮ ಶಿಕ್ಷಕರನ್ನು ನೋಡಬಹುದು ಎನ್ನುವ ಸಂತಸ. ಆ ಘಳಿಗೆಗಳಿಗೆ ಮನಸ್ಸು ಕಾಯುತ್ತಿದೆ.
ಈ ದೇಗುಲದ ಇತಿಹಾಸ |
ಕಾಲನ ಹೊಡೆತದಲ್ಲಿ ಎಷ್ಟೂ ಬದಲಾಗುತ್ತೆ, ದೇವರ ಆಲಯ ಕೆಲವೊಮ್ಮೆ ಕಾಲನ ದಾಳಿಯಲ್ಲಿ ನಲುಗುವುದು ಸಹಜ, ಆದರೆ ದೇಗುಲ ದೇಗುಲವೇ ಸರಿ. ಅದಕ್ಕೆ ಯಾವುದೇ ಭಿನ್ನವೂ ಆಗಿರೋಲ್ಲ, ಅಂಥಹ ಮನಸ್ಸು ನಮ್ಮದು.
ದೇಗುಲಕ್ಕೆ ಒಂದು ಘಂಟೆ ಬೇಕಲ್ಲವೇ!!! |
ನಾವು ಎಂಟನೆ ತರಗತಿ ಓದಿದ ಮೆಟ್ಟಿಲು ಮೆಟ್ಟಿಲು ಇದ್ದ ಕೊಠಡಿ.. ಅಂದು ದೊಡ್ಡದಾಗಿ ಕಾಣುತ್ತಿದ್ದ ಕೊಠಡಿ ಎಂದು ಮೆಟ್ಟಿಲುಗಳೆಲ್ಲ ಹೋಗಿ ಪ್ರಯೋಗಾಲಯವಾಗಿದೆ.. ಆದರೂ ಅಲ್ಲಿ ಕೆಲ ಕ್ಷಣಗಳು ನಿಂತು ನಾವುಗಳು ಅನುಭವಿಸಿದ ಆ ಸುಂದರ ಕ್ಷಣಗಳು ಪದಗಳಿಗೆ ನಿಲುಕುವುದಿಲ್ಲ.
ಎಂಟನೆ ತರಗತಿ ಕಳೆದದ್ದು ಈ ಕೊಠಡಿಯಲ್ಲಿ |
ನಾವು ಒಂಭತ್ತು ಮತ್ತು ಹತ್ತನೇ ತರಗತಿ ಓದಿದ ಕೋಣೆಗೆ ಹೋಗಬೇಕೆಂಬ ಆಸೆಯಿತ್ತು, ಆದರೆ ಶನಿವಾರ ಶಾಲೆ ಸಮಯ ಮುಗಿದ್ದಿದ್ದರಿಂದ ಅವಕಾಶವಿರಲಿಲ್ಲ, ಆದರೆ ಮನಸ್ಸು ಒಮ್ಮೆ ಬಾಸ್ ನ ಕೇಳಿಯೇ ಬಿಡೋಣ ಅನ್ನಿಸಿ, ಮತ್ತೆ ಮುಖ್ಯ ಅಧ್ಯಾಪಕರ ಕೊಠಡಿಗೆ ಓದಿದೆ, ಅವರು ನಸು ನಗುತ್ತಾ "ಬೇಗ ಹೋಗಿ ಬಂದು ಬಿಡಿ ಶಾಲಾ ಸಮಯ ಮುಗಿದಿದೆ, ಎಲ್ಲರೂ ಮ್ಯಾನೇಜ್ ಹೋಗಬೇಕು.. " ಎಂದರು. ನಮ್ಮ ಹುಮ್ಮಸ್ಸನ್ನು, ಉತ್ಸಾಹವನ್ನು ಹಾಗೆ ಇರಲು ಬಿಟ್ಟು ಶಾಲೆಯೊಳಗೆ ಓಡಾಡಲು ಅವಕಾಶ ನೀಡಿದ ಮುಖ್ಯ ಅಧ್ಯಾಪಕರಿಗೆ ಮತ್ತು ಸಿಬ್ಬಂಧಿ ವರ್ಗಕ್ಕೆ ಒಂದು ಸಲಾಂ.
ಮೊದಲನೇ ಮಹಡಿಯ ಈ ಓಣಿಯಲ್ಲಿ ಓಡಾಡಿದ ಸವಿ ನೆನಪು |
ಸುಂದರ ಭವಿಷ್ಯ ರೂಪಿಸಿದ ಅಂಗಣ |
ಯಂ ಬ್ರಹ್ಮ ವರುಣೇಂದ್ರ ರುದ್ರಮರುತಃ. |
ಜ್ಞಾನ ಪ್ರಕಾಶ ಬೀರುವ ಪಾವಟಿಗೆಗಳು |
ಮಾತೆ ಸರಸ್ವತಿ |
ಪ್ರತಿಭಾವಂತರು ಬೆಳಗಿದ ಸಭಾಂಗಣ |
ಒಂದಷ್ಟು ಹೊತ್ತು ಅಲ್ಲಿಯೇ ನಿಂತು, ನಂತರ ಹೊರಗೆ ಬಂದೆವು.. ನಮಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಶಾಲೆಯಲ್ಲಿ ಚಿತ್ರಕಲೆಯನ್ನು ಸೊಗಸಾಗಿ ಹೇಳಿಕೊಟ್ಟ ನಮ್ಮ ಗುರುಗಳು ಶ್ರೀ CSP ಸಿಕ್ಕರು. ರೂಪಶ್ರೀ ಮತ್ತು ಲೀಲಾ ತಾವು ಶಾಲೆಯ ೭೫ನೆ ವರ್ಷದ ಸಂಭ್ರಮದಲ್ಲಿ ತಾವು ಏರ್ಪಾಡು ಮಾಡಿದ್ದ ಅಲಂಕಾರ ವಸ್ತುಗಳ ಬಗ್ಗೆ ಹೇಳಿದರು, ಅದನ್ನು ನೆನಪಿಗೆ ತಂದ ಕೂಡಲೇ ಅದನ್ನು ಗುರುಗಳು ಸಂಭ್ರಮಿಸಿದ ರೀತಿ ಸೂಪರ್ ಇತ್ತು. ಗುರುಗಳು ಎಂಟನೆ ತರಗತಿಯಲ್ಲಿ ತಾವೇ ಬಿಡಿಸಿದ ಒಂದು ಚಿತ್ರ "ಉದ್ದನೆ ಮೊಳಕೈ.. ಅದರ ಕೆಳಗೆ ಒಂದಷ್ಟು ನಾಯಿ ನರಿ ತೋಳಗಳು ಕೈಯನ್ನು ತಿನ್ನುತ್ತಿರುವ ಚಿತ್ರ.. ಇವುಗಳನ್ನು ನೆನಪಿಗೆ ತಂದು ಕೊಟ್ಟ ನನ್ನ ಮಿತ್ರರಿಗೆ ಒಂದು ಜೈ. ಒಂದು ಅದ್ಭುತ ಭೇಟಿ ಅದಾಗಿತ್ತು.
ಶ್ರೀ CSP |
ಚಿತ್ರಕಲಾಕರರ ಜೊತೆಯಲ್ಲಿ ನಾವು |
ಐದು ವರ್ಷಗಳಿಂದ ನಾವೆಲ್ಲರೂ ಭೇಟಿ ಆಗುತ್ತಿದ್ದರೂ, ಏಳು, ಎಂಟು ಗೆಳೆಯರಷ್ಟೇ ಸಿಗುತ್ತಿದ್ದದ್ದು. ಆದರೆ ಈ ಬಾರಿ ಬಂಪರ್.. ಹನ್ನೆರಡು ಮಂದಿ ಬಂದದ್ದು , ಇನ್ನು ಆರು ಗೆಳೆಯರು ಕಾರಣಾಂತರಗಳಿಂದ ಬರಲು ಆಗದಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿದ್ದು ನೋಡಿದರೆ ಈ ಗುಂಪು ಬಾಳಿ ಬದುಕುತ್ತದೆ ಎಂದು ಅನ್ನಿಸಿತು.
ಕೃಷ್ನೋಜಿ ರಾವ್, ಶ್ಯಾಮ್, ಅನುಪ್, ಶ್ರೀಕಾಂತ್, ಸತೀಶ್ ಜೆ ಎಂ, ರೂಪಶ್ರೀ, ಲೀಲಾ, ಬಾಲಾಜಿ, ವೆಂಕಟಾಚಲ, ಯೋಗೇಶ್ , ವಾಣೇಶ್, ಪ್ರಸಾದ್..
ಬರಬೇಕಿದ್ದವರು.. ಶಶಿಧರ್, ಬ್ರಹ್ಮಾನಂದ, ಕಿರಣ್, ಸತೀಶ್ ಬಿ ಎಂ, ಸತೀಶ್ ಟಿ ಏನ್, ಚಂದ್ರಪ್ರಭ, ವಿನೋದ್, ಪದ್ಮನಾಭ. ಇವರು ಬಂದಿದ್ದಾರೆ ಹಾಜರಿ ಇಪ್ಪತ್ತು ಆಗುತ್ತಿತು.. ಇರಲಿ ಇರಲಿ ಮತ್ತೊಮ್ಮೆ ಸಿಕ್ಕೆ ಸಿಗುತ್ತೇವೆ.. ಮೊದಲಬಾರಿಗೆ ಎರಡಂಕೆ ತಲುಪಿದ ನಮ್ಮ ಹಾಜರಿ ಖಂಡಿತ ಇನ್ನಷ್ಟು ಹೆಚ್ಚಾಗುತ್ತದೆ.
ಸುಮಾರು ನಾಲ್ಕು ಘಂಟೆಗಳು ಹೇಗೆ ಕಳೆದೆವು ಅರಿಯದಾಯಿತು .. ಮಾತು ಮಾತು ಮಾತು ಮಾತು ಮತ್ತು ಮಾತು. ಯೋಗೇಶನ ನಿಲ್ಲದ ಮಾತುಗಳು, ವೆಂಕಿ ಅದಕ್ಕೆ ಸಾತ್ ಕೊಟ್ಟದ್ದು, ಶ್ಯಾಮ್ ಹೊಟ್ಟೆ ಹಸಿವು ಕಣ್ರೋ ಅಂದ್ರೂ ಕೇಳದೆ ಮಾತಿನ ಲೋಕದೊಳಗೆ ಕಳೆದು ಹೋಗಿದ್ದ ಇತರರು ಸೂಪರ್ ಸೂಪರ್..
ಗುರುಗಳ ಜೊತೆಯಲ್ಲಿ ಶಿಷ್ಯರು |
ಮತ್ತೊಮ್ಮೆ ಕರೆಗೆ ಓಗೊಟ್ಟು ಬಂದ ಎಲ್ಲರಿಗೂ ಒಂದು ಸಲಾಂ!!!