Friday, May 26, 2017

ಅಕ್ಕ ಪ್ರತಿಭಾಕ್ಕ.. ನಮೋ ನಮಃ

ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ 

"ಏಮ್ ಫ್ರೆಂಡ್ಸೋ  ಏಮೋ ಒಂದು ವಿಶ್ ಇಲ್ಲಾ ಏಮಿ ಲೇದು"

ಮೊಬೈಲ್ ಟಂಗ್ ಅಂತ ಸದ್ದು ಮಾಡುತ್ತೆ 
"ವಿಶ್ ಬಂತೇನೂ.. ನೋಡೋಣ " ಅಂತ ಮೊಬೈಲ್ ಆನ್ ಮಾಡ್ತಾರೆ.. 

"ನಿಮಗೆ ಅನ್ಲಿಮಿಟೆಡ್ ಡೇಟಾ ಬೇಕೇ.. ಕಾಂಟಾಕ್ಟ್ .... $$%%$%%^$^$%"

"ಥೂ.. ಇದೊಂದು.. "

ಮತ್ತೆ ಮಾತಾಡಲು ಶುರು "ಸುಮ್ನೆ ಅಕ್ಕ ಅಕ್ಕ ಅನ್ನೋದು .. ಮರ್ತೆ ಬಿಡ್ತಾರೆ.. "

ಮತ್ತೆ ಮೊಬೈಲ್ ಟಂ ಅಂತ ಸದ್ದು 

"ನೀವು ತೆಳ್ಳಗಾಗಬೇಕೇ.. ಪ್ಲೀಸ್ ಕಾಂಟಾಕ್ಟ್ ... #$%$%$%$%"

"ಸಣ್ಣ ಆಗೋಕೆ.. ಇವರನ್ಯಾಕೆ ಕಾಂಟಾಕ್ಟ್ ಮಾಡ್ಬೇಕು.. ವಿಜಯನಗರದಲ್ಲಿರುವ ಸಣಕಲ ಸುಂದರಿ ಸವಿತರನ್ನು ಕೇಳಿದರೆ ಸಾಕು.. ಇದೊಂದು ಮೆಸೇಜ್.. "

ಕೋಪ ನೆತ್ತಿಗೆ ಹತ್ತಿ ಬರುತ್ತಿರುತ್ತೆ.. ಆಗಲೇ ರಾತ್ರಿ ಒಂಭತ್ತು ಘಂಟೆ.. ಯಾರೂ ತನ್ನ ಬರ್ತ್ಡೇ ಗೆ ವಿಶ್ ಮಾಡಿರೊಲ್ಲ ಅನ್ನುವ ಕೋಪ ಅಕ್ಕಯ್ಯನಿಗೆ.. 

ಮತ್ತೆ ಕನ್ನಡಿ ಮುಂದೆ "ಸಿಗಲಿ.. ಅವರಿಗೆಲ್ಲಾ ಅಮಾವಾಸ್ಯೆ ತೋರಿಸುತ್ತೇನೆ.. ಅವರ ಬದುಕು ಅವರಿಗೆ.. ನಮ್ಮನ್ನು ಕೇಳೋರೇ ಇಲ್ಲ.. ಆ ವೆಂಕಯ್ಯ, ಲೋಕೇಶಾ.. ಜೆಎಂ ಗಾರು, ಈ ಡಬ್ಬ ಶ್ರೀಕಾಂತಾ.. ಎಲ್ಲಾ ವೇಸ್ಟ್.. ಅರೆ ಅರೆ ಸಾರಿ.. ವೆಂಕಯ್ಯ ವಿಶ್ ಮಾಡಿದ್ದಾನೆ, ಲೋಕೇಶ ಫ್ರೀ ಇದ್ದ ಜಿಯೋ ಮೊಬೈಲ್ ಇಂದ ಕಾಲ್ ಮಾಡಿದ್ದಾ.. ಜೆ ಎಂ ಯಾವತ್ತೂ ಮಿಸ್ ಮಾಡೋಲ್ಲ... ಅವನ ಕಾಲ್ ಬಂತು.. ಓಕೆ ಓಕೆ.. ಶ್ರೀಕಾಂತನ ಬಗ್ಗೆ ಮಾತಾಡೋದು ವೇಸ್ಟ್.. ನಾ ಅವನ ಬರ್ತ್ಡೇ ಗೆ ವಿಶ್ ಮಾಡಿಲ್ಲ ಅಂತ ನನ್ನ ಬರ್ತ್ಡೇ ಗೂ ವಿಶ್ ಮಾಡೋಲ್ಲ ಅನ್ಸುತ್ತೆ.. "

ಮನದಲ್ಲಿ ಮೆಲ್ಲಗೆ ಹೇಳಿಕೊಳ್ಳುತ್ತಾ "ಇಲ್ಲಾ ಶ್ರೀಕಾಂತ ಹಾಗೆ ಮಾಡೋಲ್ಲ.. ಸೇಡು ಎಲ್ಲಾ ಇಲ್ಲ.. ಅವನಿಗೆ ಮೂಡ್ ಆಫ್ ಆಗಿರಬೇಕು.. ಇಲ್ಲ ಅಂದ್ರೆ ಆಫೀಸ್ ಕೆಲಸ ಇರಬೇಕು.. ಇಲ್ಲಾ ಅಂದ್ರೆ.. "

"ಏನೂ ಇಲ್ಲಾ ಅಂದ್ರೆ.. " (ಉರಿಯುವ ಬೆಂಕಿಗೆ ಶಶಿ ತುಪ್ಪಾ ಸುರಿದೆ ಬಿಟ್ಟಾ... ) ಫೇಸ್ಬುಕ್ ನಲ್ಲಿ ದಿನಕ್ಕೊಬ್ಬರಿಗೆ ವಿಶ್ ಮಾಡ್ತಾನೆ.. ಅದು ಇದು ಬರೀತಾ ಇರ್ತಾನೆ.. ನೀ ಅವನ ಬರ್ತ್ಡೇ, ಮದುವೆ ಆನಿವೆರ್ಸರಿ.. ಇದಕ್ಕೆಲ್ಲಾ ವಿಶ್ ಮಾಡಿಲ್ಲ.. ಅದಕ್ಕೆ ... "

ಮೆಲ್ಲಗೆ ಶಶಿ ತಲೆಯ ಮೇಲೆ ಟಪಾಕ್ ಅಂತ ಏಟು ಬಿತ್ತು... "ಇಲ್ಲ ಇಲ್ಲ ... ಕಾಂತಯ್ಯ ಹಾಗೆ ಮಾಡೋಲ್ಲ.. ಇರಲಿ ಒಂಭತ್ತು ಮೂವತ್ತು ತನಕ ನೋಡ್ತೀನಿ.. ಮೆಸೇಜ್ ಬರಲಿಲ್ಲ ಅಂದ್ರೆ.. .. ಸಿದ್ದರಾಮಯ್ಯ ಮತ್ತೆ ಮುಖ್ಯ ಮಂತ್ರಿ ಆಗೋ ತನಕ ಮಾತಾಡೋಲ್ಲ ಅವನ ಹತ್ತಿರ.. "

ಮೆಸೇಜ್ ಬಂತು ಅಂತ ಫೋನ್ ಸದ್ದು ಮಾಡಿತು .. 

ಫೋನ್ ಕಡೆ ತಿರುಗಿ ನೋಡದೆ.. ಇನ್ನೇನೂ,, ಮತ್ತೆ ಜಿಯೋ  ಸಿಮ್ ಬೇಕಾ, ಡೇಟಾ ಪ್ಯಾಕ್ ಬೇಕಾ, ಅದು ಬೇಕಾ ಇದು ಬೇಕಾ ಅಂತ  ಇರುತ್ತೆ.. 

ಒಲ್ಲದ ಮನಸ್ಸಿಂದ.. ಮೆಲ್ಲಗೆ ಮೊಬೈಲ್ ಮುಟ್ಟಿ ನೋಡುತ್ತಾರೆ ಅಕ್ಕಯ್ಯ.. ಬೆಂಗಳೂರಿನಲ್ಲಿ ಬಾರಿ ಮಳೆಯಿಂದ .. ಕರೆಂಟ್ ಹೋಗಿರುತ್ತೆ.. ಅಪಾರ್ಟ್ಮೆಂಟಿನ ಯುಪಿಎಸ್ / ಡಿಜಿ ಸೆಟ್ ರಿಪೇರಿ ಆಗಿರುತ್ತೆ.. ಹಾಗಾಗಿ ಕ್ಯಾಂಡಲ್ ಹಚ್ಚಿಕೊಂಡು ಕನ್ನಡಿ ಮುಂದೆ ಮಾತಾಡ್ತಾ ಇರ್ತಾರೆ ಅಕ್ಕಯ್ಯ.. ಮೊಬೈಲ್ ನೋಡಿದೊಡನೆ.. ದಿಗ್ ಅಂಥಾ ಮನೆಯೆಲ್ಲ ಬೆಳಕು.. ಕರೆಂಟ್ ಬಂದಿರುತ್ತೆ.. ಮೊಬೈಲ್ ನಲ್ಲಿ ಮೆಸೇಜ್ ಬಂದಿರುತ್ತೆ ಏನಂಥಾ.. 

"ನಮ್ಮೆಲ್ಲರ ಮೆಚ್ಚಿನ ಅಕ್ಕಯ್ಯ.. ನಿಮ್ಮ ಜನುಮದಿನಕ್ಕೆ ನಮ್ಮೆಲ್ಲರ ಕಡೆಯಿಂದ ಶುಭಾಶಯಗಳು .. ಹೌದು ತುಂಬಾ ದಿನವಾಗಿದೆ.. (ತಿಂಗಳು, ವರ್ಷಗಳೇ ಆಗಿದೆ) ನಾವೆಲ್ಲಾ ಭೇಟಿ ಮಾಡಿ.. ಸದ್ಯದಲ್ಲಿಯೇ ಸಿಗೋಣ.. ಮಾತಾಡೋಣ.. ನಿಮ್ಮ ಮನೆಯ ಅನ್ನ ಸಾರು (ಟೊಮೇಟೊ ಇಲ್ಲದೆ ಅದೇಗೆ ಸಾರು ಮಾಡ್ತಾರೋ, ಅದೇಗೆ ತಿಂತೀರೋ) . ನೀವೊಬ್ಬರು ದಪ್ಪ ಆಗಲ್ಲ ಅನ್ಕೊಂಡಿದ್ದೆ.. ಅಂತ ಹೇಳ್ತಾ ಇರೋ ಪ್ರತಿಭಾ ಅಕ್ಕಯ್ಯ ನಿಮಗೆ ಜನುಮ ದಿನದ ಶುಭಾಶಯಗಳು.. "

"ನೇನು ಚಪ್ಪಿಂದಿ ವಿಶ್ ವಚ್ಹಿಂದಿ"  ಅಕ್ಕಯ್ಯ ಫುಲ್ ಕುಶ್.. 

ಈಗ ಶಶಿ ಕನ್ನಡಿಯ ಮುಂದೆ ನಿಂತು.. 
ಸಧ್ಯ ಶ್ರೀಕಿ ವಿಶ್ ಕಳಿಸಿ ನನ್ನ ಕಾಪಾಡಿದ (ಥಾಂಕ್ಯೂ ಶ್ರೀಕಿ).. ಇಲ್ಲ ಅಂದರೆ ನನ್ನ ಪಾಡು.. ಆ ದೇವರಿಗೆ ಪ್ರೀತಿ.. ಥಾಂಕ್ ಯು ಶ್ರೀಕಿ.. !!!

ನನ್ನ ಮಾತು --- ಅಕ್ಕಯ್ಯ ಅಲಿಯಾಸ್ ಪ್ರತಿಭಾ ಅಕ್ಕಯ್ಯ.. ನಮ್ಮ ಸ್ನೇಹಿತರ ಗುಂಪಿನ ದೇವತೆ .. ಎಲ್ಲರನ್ನೂ ಅಭಿಮಾನವಾಗಿ ಮಾತಾಡಿಸುವ ಇವರು.. ನಮ್ಮ ಜೊತೆ ಹುಟ್ಟಿಲ್ಲ ಅನ್ನೊದು ಬಿಟ್ಟರೆ .. ನಮ್ಮ ಪ್ರೀತಿಯ ಪ್ರತಿಭಾ ಅಕ್ಕ.. ಜಾಣತನ, ಬುದ್ದಿಮತ್ತೆ,ಸಂಸ್ಕಾರ, ಅಭಿಮಾನ, ನನ್ನ ತಮ್ಮಂದಿರು ಎನ್ನುವ ಹೆಮ್ಮೆ ಎಲ್ಲವೂ ಸೇರಿಕೊಂಡಿರುವ ಇವರು ನಮ್ಮ ಪ್ರಾಣ ಸ್ನೇಹಿತನ ಮನದನ್ನೆ.. ನಾವು ಐದು ಮಂದಿ ೨೭ ವರ್ಷಗಳಿಂದ ಜೊತೆಯಲ್ಲಿದ್ದೇವೆ, ಅದರಲ್ಲೂ ನಾವು ನಾಲ್ಕು ಮಂದಿ.. ಶಶಿ,ವೆಂಕಿ, ಜೆ ಎಂ, ಮತ್ತೆ ಏನೂ ಉಪಯೋಗವಿಲ್ಲದ ನಾನು.. ೩೪ ವರ್ಷಗಳಿಂದ ಜೊತೆಯಲ್ಲಿದ್ದೇವೆ.. ಸಂತೋಷ, ಸಂಭ್ರಮ, ನೋವು, ನಲಿವನ್ನು ಹಂಚಿಕೊಂಡು ಜೊತೆಯಲ್ಲಿದ್ದೇವೆ.. ಶಶಿ ಪ್ರಾಣ ವಲ್ಲಭೆ ನಮ್ಮ ನಾಲ್ಕು ಜನರನ್ನು ಅಕ್ಕ ಎನ್ನುವ ಬಂಧನದಲ್ಲಿ ಬಂಧಿಸಿ ಒಂದು ಬೆಲೆಬಾಳುವ ಆಭರಣ ಜೋಪಾನ ಮಾಡುವ ಹಾಗೆ ನಮ್ಮನ್ನು ನೋಡಿಕೊಂಡಿದ್ದಾರೆ.. ಈ ಅಕ್ಕನಿಗೆ ಶುಭಾಷಗಳನ್ನು ತಿಳಿಸೋದು ನನಗೆ ಸಂಭ್ರಮದ ವಿಷಯ.. ಅದಕ್ಕಾಗಿ ಈ ಲೇಖನ.. 

ಅಕ್ಕಯ್ಯ ಜನುಮದಿನದ ಶುಭಾಶಯಗಳು... !!! 

Sunday, May 7, 2017

ವಾಚನ ಗಾರುಡಿಗರು .. ಶ್ರೀ ಮಹಾಲಿಂಗಯ್ಯ ಮಾಸ್ತರು

ಕಿಟಕಿ
ಚಮಚ
ಜಲಜ
ವಿಕಟಕವಿ..

ನೋಡಿ ಮಕ್ಕಳ.. ಈ ಪದಗಳನ್ನು ನೀವು ಹಿಂದಿನಿಂದ ಮುಂದಕ್ಕೆ. ಮುಂದಿನಿಂದ ಹಿಂದಕ್ಕೆ ಹೇಗೆ ಹೇಳಿದರೂ ಅದೇ ಪದ ಬರುತ್ತದೆ.. ಆಶ್ಚರ್ಯ  ಚಕಿತರಾದರು ಮಕ್ಕಳು... ಮಣ್ಣಿನ ಮೇಲೆ ಬರೆದರು, ಕರಿ ಹಲಗೆಯ ಮೇಲೆ ಬರೆದರು.. ಅನೇಕ ಬಾರಿ ಹೇಳಿದರು.. ಹೌದು ಅದೇ ಪದವೇ..

ಮಕ್ಕಳಾ.. ಈಗ ಹೇಳಿ

ಸವಿರಾಗಿಣಿ
ವಿರಾಗಿಣಿ
ರಾಗಿಣಿ
ಗಿಣಿ
ಣಿ..

ಆಗಸವೇ ಕಿತ್ತೋಗುವಂತೆ ಮಕ್ಕಳು ಕೂಗಿದರು...

M A L L E S H W A R A M
B A S A V A N A G U D I
H A N U M A N T H A N A G A R A
J A Y A N A G A R A

ಕಬ್ಬಿಣದ ಕಡಲೆಯಾಗಿದ್ದ ಆಂಗ್ಲ ಭಾಷೆಯ ಪರಿಚಯ ನನಗಾಗಿದ್ದು ಹೀಗೆ..
****** 

ಆಟದ ಮೈದಾನದಲ್ಲಿ ಹುಲುಸಾಗಿ ಪಾರ್ಥೇನಿಯಂ ಗಿಡಗಳು ಬೆಳೆದಿದ್ದವು.. ನಮ್ಮ ತಲೆಯಲ್ಲಿಯೂ ಹಾಗೆ.. ಹೂವುಗಳು ಅರಳಿದ್ದವು ಹಾಗೆ ಹುಲುಸಾಗಿ ಪಾರ್ಥೇನಿಯಂ ಕೂಡ ಬೆಳೆದಿತ್ತು.. ಒಂದು ಕಂಚಿನ ಕಂಠ ಮೊಳಗಿತು.

ಮಕ್ಕಳ.. ಈ ಶನಿವಾರ " ನಾವೆಲ್ಲರೂ" ಈ ಆಟದ ಮೈದಾನವನ್ನು ಸ್ವಚ್ಛಮಾಡೋಣ.. ಆಗಲೇ ಸ್ವಚ್ಛ ಭಾರತ್ ಘೋಷವಾಕ್ಯಕ್ಕೆ ಚಾಲನೆಯಾಗಿತ್ತು..

ಆಟದ ಮೈದಾನ ಸ್ವಚ್ಚವಾಯಿತು.. ದೈಹಿಕ ಶಿಕ್ಷಣ ಮಾಸ್ಟರ್... ಅವರ ಮುಖ್ಯ ವಿಷಯ ಕನ್ನಡ ಆಗಿದ್ದರೂ.. ಅವರ ಚಟುವಟಿಕೆ, ಕ್ರೀಯಾಶೀಲತೆಗೆ ಎಣೆಯಿರಲಿಲ್ಲ.. ಹಿಮಾಲಯದ ತಪ್ಪಲಿನಲ್ಲಿ ಹುಟ್ಟುವ ದೇವಲೋಕದ ಗಂಗೆ.. ಎಲ್ಲರನ್ನು, ಎಲ್ಲವನ್ನು ತನ್ನ ಜೊತೆಯಲ್ಲಿ ಕರೆದೊಯ್ಯುವಂತೆ, ಈ ಮಾಸ್ಟರ್ ಎಲ್ಲಾ ಚಟುವಟಿಕೆಯಲ್ಲಿಯೂ ಮುಂದು..
******

ದಿಟ್ಟಿಸಿ ನೋಡಿದೆ.. ಏನೂ ಇದೆ.. ಅನ್ನಿಸಿತು.. ಕೈಯಲ್ಲಿ ತೆಗೆದುಕೊಂಡು ನೋಡಿದೆ.. ಈ ಬೀಗ ಮತ್ತು ಬೀಗದ ಕೈಯಲ್ಲಿ ಏನೋ ಇದೆ.. ಇದು ಮಾಮೂಲಿ ಬೀಗ ಮತ್ತು ಬೀಗದ ಕೈಯಲ್ಲ...


ಎಂಟು ಲೀವರ್ ಬೀಗ.. ಇದು ನಮ್ಮ ಬದುಕಿನ ಹರಿವು ಅಷ್ಟ ದಿಕ್ಕುಗಳಿಗೂ ಹಬ್ಬ ಬೇಕು ಎನ್ನುವ ತತ್ವವನ್ನು ತೋರಿಸಿತು..

ಬದುಕಿಗೆ ಗುರಿ ಒಂದೇ
ಗುರಿಗೆ ದಾರಿಯೂ ಒಂದೇ
ಗುರಿ ಮುಂದೆ
ಗುರು ಹಿಂದೆ
ಹರ ಮುನಿದರೂ ಗುರು ಕಾಯುವ
ಮಹಾಲಿಂಗನಾಥ..

ಅಷ್ಟ ದಿಕ್ಕುಗಳಿಗೂ ಹಬ್ಬುವ ನಮ್ಮ ಬದುಕಿನ ಹರಿವಿಗೆ ಅರಿವಾಗಿ ಬರುವುದು ಬೀಗದ ಕೈ.. ಬೀಗ ಜೀವನವಾದರೆ, ಬೀಗದ ಕೈ ಅದಕ್ಕೆ ದಾರಿ ತೋರುವ ಗುರು..

ಸೂಕ್ಷ್ಮವಾಗಿ ಗಮನಿಸಿದಾಗ ಕಂಡದ್ದು ಅದರ ಹೆಸರು "ACTIVE"

ಬದುಕಿನ ಪಥದಲ್ಲಿ ACTIVE ಆಗಿರೋ
ACTIVE ಅಂದರೆ ಏನೂ ಗೊತ್ತೇನ್ರೋ
"ACT" ಅಂದರೆ ಕಾರ್ಯ
IVE ಅಂದರೆ "I" LI"VE"
ನಮ್ಮನ್ನು ಮಹಾದೇವ ಸೃಷಿಸಿರುವುದು
ಒಂದು ಕಾರ್ಯಕ್ಕಾಗಿ ಜೀವಿಸಲು
ಮಹಾಲಿಂಗನಾಥ...

*****

ನಂದಿನಿ ಸುಧಾ ತಲೆಕೆರೆದು ಕೊಳ್ಳಲು ಶುರುಮಾಡಿದರು.. "ಏನೋ ಶ್ರೀ ಇದು ಅದೇನು ಬರೆದಿದ್ದೀಯೋ"
ಗಾಳಿ ತುಂಬಿದ ಬಲೂನಿನಿಂದ ವಾಯು ಹೊರ ಹೊರಟ ಅನುಭವ ನನ್ನದಾಗಿತ್ತು..

ಒಂದು ನಿಮಿಷ.. ಕಣೋ ಆಮೇಲೆ ನೋಡಿ.. !!!

ಅರವತ್ತು
ಐವತ್ತೊಂಭತ್ತು
ಐವತ್ತೆಂಟು
...
...
...
ಮೂರು
ಎರಡು
ಒಂದು

****

ಮನೆಯ ತಲೆಬಾಗಿಲು ನಮ್ಮನ್ನು ಕೈಬೀಸಿ ಕರೆಯಿತು...



ಶರಣು ಬನ್ನಿ
ಶರಣರು ಬರುವೆದೆಮಗೆ ಪ್ರಾಣ ಜೀವಾಳವಯ್ಯ
ಈ ಮನೆ ಒಡೆಯ ಶ್ರೀ ಮಹಾಲಿಂಗಯ್ಯ
ಇವರ ಮಾತೆ ವಚನ
ಕೊಡುವ ಮಾತೆ "ವಚನ"
ಅಂಕಿತನಾಮವಾಗಿ ಜಂಗಮ
KML JANGAMA
ಮೊಬೈಲಿನಲ್ಲಿ ನುಸುಳಿತು
ಮಹಾಲಿಂಗನಾಥ...

*****

ಮಹಡಿಯ ಮೇಲೆ ಹತ್ತಿದೆವು.. ಅಲ್ಲಿ ನನಗೆ ಕಂಡ ವಿಸ್ಮಯ.. ಒಂದು ಚಿಕ್ಕ ಬೋನು.. ಅದರಲ್ಲಿ ಕೆಲವು ಒಂದು ಕಡೆ ಕಂಬಿಗಳು ಇದ್ದವು.. ಇನ್ನೊಂದು ಬದಿಯಲ್ಲಿ ಕಂಬಿಗಳು ಮಾಯವಾಗಿದ್ದವು...

ಶ್ರೀಕಾಂತೂ
ಅಶರೀರವಾಣಿ ಮೊಳಗಿತು
ತಾವರೆ ಎಲೆಯಮೇಲಿನ ನೀರಿನ ಹನಿಯಂತೆ
ಇರಬೇಕು ಅಂಟಿಕೊಳ್ಳಬಾರದು
ಸಂಕಷ್ಟಗಳು ಸೂರ್ಯನ ಎದುರು ನಿಲ್ಲುವ ಮಂಜಿನ ಹನಿಯಂತೆ
ಇರುತ್ತದೆ.. ಕರಗುತ್ತದೆ
ದಿನಕರ ಕರಗಿದಾಗ ಮತ್ತೆ ಮೂಡುತ್ತದೆ
ಮಹಾಲಿಂಗನಾಥ..

ಹೌದು ಆ ಬೋನಿನಲ್ಲಿ ಬಂಧನದ ಸಂಕೇತವೂ ಇತ್ತು.. ಸ್ವಾತಂತ್ರ್ಯದ ಸೂಚನೆಯೂ ಇತ್ತು.. ಬಂಧನದಲ್ಲಿರುವಾಗಲೇ ಸ್ವತಂತ್ರವಾಗಿ ಯೋಚಿಸುತ್ತಾ ಹೋಗು ಎನ್ನುವ ತಾರ್ಕಿಕ ಯೋಚನೆಗೆ ನನ್ನ ದೂಡಿತು..

********

ಶ್ರೀ.. ಈಗ ನಾವು ಹೇಳುತ್ತೇವೆ.. ನೀ ಬರಿ  ಎಂದರು.. ಸುಧಾ ಮತ್ತು ನಂದಿನಿ..

ಅಲ್ಲಿಂದ ಶುರುವಾಯಿತು

"ಶ್ರೀ ಇದೇನು ಕನಸೋ ನನಸೋ ಅರ್ಥವಾಗುತ್ತಿಲ್ಲ .. ಇಂದಿನ ದಿನವನ್ನು ನಾವು ಮರೆಯುವುದೇ ಇಲ್ಲ.. ದೂರದಿಂದ ಬಂದ ನಮಗೆ ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ್ದೆ ಅಲ್ಲಾ.. ತಲೆಗೆ ಮತ್ತು ಹೃದಯಕ್ಕೆ ಚೆನ್ನಾಗಿ ಆರೈಕೆ ಮಾಡಿದರು..
ಅರ್ಜುನ ಶಬ್ಧವೇದಿ ವಿದ್ಯೆಯಲ್ಲಿ ಪರಿಣಿತ.. ನಮ್ಮ ಮೆಚ್ಚಿನ ಶ್ರೀ ಮಹಾಲಿಂಗಯ್ಯ ಮಾಸ್ತರು ತಮ್ಮ ಬತ್ತಳಿಕೆಯಲ್ಲಿದ್ದ ವಚನಗಳನ್ನು ಒಂದೊಂದಾಗಿ ತಮ್ಮ ಅನುಭವದ ಬಿಲ್ಲಿಗೆ ಹೂಡಿ ನಮ್ಮ ಕಡೆ ಬಿಡುತ್ತಾ ಬಂದರು.. ನಾವು  ಆ ಹೂವಿನ ಬಾಣಗಳನ್ನು ಸ್ವೀಕರಿಸುತ್ತಾ.. ಹೃದಯ ತುಂಬಿ ನಲಿದಾಡುತ್ತಿತ್ತು.. ಹೊಟ್ಟೆ ಪುಷ್ಕಳ ಭೋಜನದಿಂದ ಸಂತಸಗೊಂಡಿತ್ತು..
ಮನೆಯಿಂದ ಕರೆ ಬರುತ್ತಿತ್ತು.. ಆದರೆ ಮನದ ಕರೆ ಅದನ್ನು ತಡೆಯುತ್ತಿತ್ತು.. ಹೀಗೆ ಇದ್ದು ಬಿಡೋಣ.. ಮಾಸ್ತರ ಸಾಹಿತ್ಯ ಸಿರಿಯನ್ನು ಕೇಳೋಣ.. ಲಾವಣಿ ಶೈಲಿಯ ಅವರ ಹಾಡುಗಾರಿಕೆಗೆ ತಲೆದೂಗುತ್ತಲೇ ಎಲ್ಲವನ್ನು ಮೊಬೈಲ್ ಬುಟ್ಟಿಗೆ ಹಾಕಿಕೊಳ್ಳುವ ಧಾವಂತ ನಮ್ಮದಾಗಿತ್ತು. ..


  • ಲಾವಣಿಯ ಶೈಲಿಯಲ್ಲಿ ಕಂಚಿನ ಕಂಠದಲ್ಲಿ ಅವರೇ ರಚಿಸಿದ ಕವಿತೆಗಳನ್ನು ಹಾಡಿದರು 
  • ಪ್ರತಿ ಕವಿತೆಯೂ ಅವರ ಧ್ವನಿಯಲ್ಲಿ ಮರು ಜೀವ ಪಡೆಯುತ್ತಿತ್ತು
  • ಅವರ ಕೈಯಲ್ಲಿ ಪುಸ್ತಕ ಹಿಡಿದ ತಕ್ಷಣ ಅದರೊಳಗೆ ಕುಳಿತಿದ್ದ ಕವಿತೆಗಳು ಜಗಳವಾಡತೊಡಗುತ್ತಿದ್ದವು.. ನನ್ನನ್ನು ವಾಚಿಸಬೇಕು ಮೇಷ್ಟ್ರೇ... ನೋಡಿ ನಾ ಆಗಲೇ ಮೇಕಪ್ ಮಾಡಿಕೊಂಡು ಸಿದ್ಧನಾಗಿದ್ದೇನೆ ಎಂದು ಒಂದು ಕವಿತೆ ಹೇಳಿದರೆ, ನಾ ಆಗಲೇ ಅವರ ನಾಲಿಗೆಯಲ್ಲಿ ಕುಳಿತಿದ್ದೇನೆ ಎಂದಿತು ಇನ್ನೊಂದು, ಹೋಗ್ರೋ ಹೋಗ್ರೋ ನಾ ಆಗಲೇ ಅವರ ಕಂಠದಲ್ಲಿ ಕುಳಿತಿರುವೆ ಎಂದು ಇನ್ನೊಂದು.. ಆಗ ನಮ್ಮ ಮೊಬೈಲ್ ಇಂದ ಒಂದು ಕವಿತೆ ಕೂಗಿತ್ತು.. ಹುರ್ರಾಯ್ ಆಗಲೇ ನಾ ಅವರ ಹೃದಯದಿಂದ, ನಾಲಿಗೆಯಿಂದ, ಕಂಠದಿಂದ ಮೊಬೈಲ್ ಹೃದಯಕ್ಕೆ ಇಳಿದಿದ್ದೇನೆ
  • ನಂದಿನಿಯಮ್ಮ, ಸುಧಾಮ್ಮ, ಶ್ರೀಕಾಂತೂ ಈ ಪ್ರೀತಿ ತುಂಬಿದ ಮಾತುಗಳನ್ನು ಕೇಳಲು ನಮ್ಮ ಕಿವಿಗಳು ಪುಣ್ಯ ಮಾಡಿದ್ದವು
  • ಶಿಕ್ಷಕರ ಆಸ್ತಿ ವಿದ್ಯಾರ್ಥಿಗಳು .. ಈ ಮಾತು ಅಕ್ಷರಶಃ ನಿಜ ಎಂದು ರುಜುವಾತು ಮಾಡಿದರು
ಈ ಸಂಭ್ರಮದ ಒಂದಷ್ಟು ಕ್ಷಣಗಳು ಚಿತ್ರಗಳ ರೂಪದಲ್ಲಿ 















******

ಬಿಡಿಬಿಡಿಯಾದ ಮೇಲಿನ ದೃಶ್ಯಗಳನ್ನ ಒಂದು ಸರಕ್ಕೆ ಮಣಿಯಾಗಿ ಪೋಣಿಸುವ ಕಾರ್ಯ  ಶುರುವಾಯಿತು..
ಆ ಕಡೆ ಈ ಕಡೆ ನೋಡಿದೆ..

ಅಚಾನಕ್ ಶ್ರೀ ಮಹಾಲಿಂಗಯ್ಯ ಮೇಷ್ಟ್ರು ನಮಗೆ ಇಂದು ಅಂದರೆ ಶನಿವಾರ ಮೇ ೬ ೨೦೧೭ ಸಿಗುವ ಭರವಸೆ ನೀಡಿದರು.. ಹಿಂದೂ ಮುಂದು ನೋಡದೆ ನುಗ್ಗಿದ್ದೆವು.. ಮಹಾಭಾರತದಲ್ಲಿ ಪಾರ್ಥನಿಗೆ ಸಾರಥಿಯಾಗಿದ್ದವರು ಶ್ರೀ ಕೃಷ್ಣ.. ಇಂದಿನ "ವಾಚನ"ಭಾರತಕ್ಕೆ ಸಾರಥಿಯಾದರು ಶ್ರೀ ಬಸವರಾಜು ಸರ್..

ದಾರಿಯುದ್ದಕ್ಕೂ ಅವರ ಮಾತುಗಳು ನಮಗೆ ಮುದನೀಡಿದವು.. ಮನೆಯ ಹತ್ತಿರ ಬಂದಾಗ ಆತ್ಮೀಯತೆಯಿಂದ ಬರಮಾಡಿಕೊಂಡರು ಶ್ರೀ ಮಹಾಲಿಂಗಯ್ಯ ಮಾಸ್ತರು.. ಅಲ್ಲಿಂದ ಜೋಗದ ಜಲಪಾತದ ವೇಗ ಪಡೆಯಿತು ನಮ್ಮ ಕೈಗಡಿಯಾರ.. ಸಮಯ ಹೋಗಿದ್ದೆ ತಿಳಿಯಲಿಲ್ಲ.. ಕೇವಲ ಒಂದು ಘಂಟೆ ಇರಬೇಕೆಂದು ಬಂದಿದ್ದ ನಾವು ಕಳೆದದ್ದು ಬರೋಬ್ಬರಿ ೫ ಘಂಟೆಗಳು.. ಯಾರಿಗೂ ತಿರುಗಿ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ ಆದರೆ, ಕರ್ತವ್ಯದ ಕರೆ, ಮನೆಯ ಜವಾಬ್ಧಾರಿ, ಮೊದಲೇ ಒಪ್ಪಿಕೊಂಡ ಕೆಲವು ಕೆಲಸಗಳು, ನಮ್ಮನ್ನು ಹೋಗಲಿಷ್ಟವಿಲ್ಲದ ಪುಟಾಣಿಗಳನ್ನು ಬಲವಂತವಾಗಿ ಶಾಲೆಗೇ ಕಳಿಸುವಂತೆ, ನಾವು ಬೇಸರದಿಂದಲೇ ಮಾಸ್ತರ ಮನೆಯಿಂದ ಹೊರಟೆವು..


ಈ ಐದು ಘಂಟೆಗಳು.. ನಮ್ಮ ಜೀವನದಲ್ಲಿ ಸುವರ್ಣ ಸಮಯವಾಗಿ ನಿಂತವು..

ನಂದಿನಿ ಹಾಗೂ ಸುಧಾ ಇವರಿಬ್ಬರಿಗೆ, ಮಾಸ್ತರ ಕವನ ವಾಚನ, ಅವರ ಆತ್ಮೀಯ ಮಾತುಗಳು ಶಾಲಾದಿನಗಳಿಗೆ ಕೊಂಡೊಯ್ದವು.. ರೇಡಿಯೋ ಕಾರ್ಯಕ್ರಮ, ನಾ ತರಕಾರಿ ಮಾರುತ್ತಿದ್ದೆ ಆ ಪಾತ್ರ ಮಾಡಿದ್ದೆ ಎಂದು ಹೇಳುತ್ತಿದ್ದ ನಂದಿನಿ, ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಹೊಂದಿಸುತ್ತಿದ್ದ ಸುಧಾ, ಸರ್ ಆ ಬ್ಯಾಚ್ ಫೋಟೋ ಇದೆ ಎಂದ ಮೇಲೆ, ನಮ್ಮ ಬ್ಯಾಚ್ ಫೋಟೋ ಕೂಡ ಇರಬೇಕು.. ಸರಿ ಬಿಡಿ ಸರ್.. ನಾ ಶಾಲೆಯಲ್ಲಿ ಹುಡುಕುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಸುಧಾ..
ಇದರ ಮಧ್ಯೆ ಶ್ರೀ ಕ್ಯಾಮೆರಾ ತನ್ನ ಪಾಡಿಗೆ ಕೆಲಸವನ್ನು ಮಾಡಿಕೊಳ್ಳುತ್ತಿತ್ತು..


  • ಶಿಕ್ಷಣವನ್ನು ಶಿಕ್ಷೇ ಮಾತ್ರ ಅಲ್ಲ.. ಅದು ಒಂದು ಸರಳ ಕಲಿಕೆಯ ವಿಧಾನ ಎಂದು ಮೊದಲ ದೃಶ್ಯದಲ್ಲಿ ಹೇಳಿದ ಅಕ್ಷರಗಳ ಯಕ್ಷಿಣಿ ಪ್ರಯೋಗ ಎಂದು ತೋರಿಸಿದರು.. 
  • ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ.. ಆದರೆ ಶ್ರಮವಿಲ್ಲದೆ ಈ ರೀತಿ ಮಾಡಬಹುದು ಎಂದು ಇತ್ತ ಕಡೆ ದೈಹಿಕ ಶಿಕ್ಷಣವೂ ಆಯಿತು.. ಅತ್ತ ಕಡೆ ಮಕ್ಕಳಿಗೆ ಆಟವಾಡಲು ಮೈದಾನವೂ ಆಯಿತು ಎಂದು ಪ್ರಯೋಗ ಶೀಲರಾದರು  
  • ಸದಾ ಒಂದಲ್ಲ ಒಂದು ಕಾರ್ಯ ಮಾಡುತ್ತಲೇ, ಸಮಾಜಮುಖಿಯಾಗಿ, ಸಮಾಜದಲ್ಲಿನ ಒಪ್ಪುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ, ತಪ್ಪುಗಳನ್ನು ತಮ್ಮದೇ ಧಾಟಿಯಲ್ಲಿ ಅದನ್ನು ಸರಿ ಪಡಿಸುತ್ತಲೇ ಇಂದು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ನಿಂತಿರುವ ನಾವು ಕಂಡ ದೇವರುಗಳಲ್ಲಿ ಒಬ್ಬರು.. ಇದನ್ನು ಹೇಳಿದ್ದು ಅವರ ಮಹಡಿ ಮನೆಯ ಬೀಗ ಮತ್ತು ಬೀಗದ ಕೈ 
  • ಬಿಂದುಗಳಾಗಿದ್ದ ನಮ್ಮನ್ನು, ತಿದ್ದಿ ತೀಡಿ, ಅದಕ್ಕೆ ಒಂದು ಸುಂದರ ರೂಪ ಕೊಟ್ಟ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ  ಇವರು ಒಬ್ಬರು.. 
  • ಕ್ಷಣ ಕ್ಷಣಕ್ಕೆ ವಚನಗಳು, ನುಡಿಮುತ್ತುಗಳು, ಮಾತುಗಳು, ಹಿತ ನುಡಿಗಳು ಬರುತ್ತಿದ್ದದ್ದು ನೋಡಿ, ನನಗೆ ಕುರುಕ್ಷೇತ್ರ ಯುದ್ಧ ನೆನಪಿಗೆ ಬಂದಿತು.. ಅಲ್ಲಿ ಭಗವಾನ್ ಶ್ರೀ ಕೃಷ್ಣ ನಗುತ್ತಲೇ ಎಲ್ಲರನ್ನು ತನ್ನ ಮಂದಹಾಸದ ಬಾಣಗಳಿಂದ ದಾರಿ ತರುತ್ತಿದ್ದ, ಅದೇ ರೀತಿಯಲ್ಲಿಯೇ, ನಾವು ಕೇಳಿದ ಯಾವುದೇ ಸಮಸ್ಯೆ ಅಥವಾ ಪ್ರಶ್ನೆಗಳಿಗೆ ಟಪ್ ಟಪಾ ಟಪ್ ಅಂತ ಅನುಭವ ಮೂಸೆಯ ಬಿಲ್ಲಿನಿಂದ ಶರವೇಗದಲ್ಲಿ ಹಿತ ನುಡಿಗಳನ್ನು ನುಡಿಯುತ್ತಿದ್ದರು.    

  • ಪುಷ್ಕಳ ಭೋಜನ ಮಾತ್ರವಲ್ಲದೆ ನಗುಮೊಗದಿಂದ ಸತ್ಕರಿಸಿ, ತಾಯಿ ಮಮತೆಯನ್ನು ನಮಗೆ ನೀಡಿದ ಶ್ರೀಮತಿ ಮಹಾಲಿಂಗಯ್ಯ ನಾಗರತ್ನ ಮೇಡಂ ಅವರಿಗೆ ನಮ್ಮ ಧನ್ಯವಾದಗಳು.    
                                                              ******                                                                                                                          
ಒಂದು ಸುಂದರ ಅನುಭವವನ್ನು ಸೊಗಸಾಗಿ ಒಂದು ಪ್ಯಾಕೇಜ್ ರೂಪದಲ್ಲಿ ತಂದು ಕೊಟ್ಟವರು ನಮ್ಮ ಗುರುಗಳು ಶ್ರೀ ಬಸವರಾಜ್ ಸರ್.. ಅಚಾನಕ್ ನಿಗದಿಯಾಗಿದ್ದ ಈ ಭೇಟಿಗೋಸ್ಕರ, ತಮ್ಮ ಕೆಲಸಗಳನ್ನು ಬದಿಗೊತ್ತಿ ನಮ್ಮ ಜೊತೆಯಲ್ಲಿ ದಾರಿ ದೀಪವಾದ ಶ್ರೀ ಬಸವರಾಜ್ ಸರ್ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು.. 

ಸರಳ ವಿರಳ ಮತ್ತು ಸುಂದರ ವ್ಯಕ್ತಿತ್ವದ ಶ್ರೀ ಮಹಾಲಿಂಗಯ್ಯ ಮಾಸ್ತರನ್ನು ಕಂಡು ಸಂಭ್ರಮಿಸಿದ ಮನಸ್ಸಿಗೆ, ಇಂದು ಕೊಂಚ ವಿಭಿನ್ನವಾಗಿ, ಹಾಸ್ಯ,ತರಲೆ.. ಹಾಗೂ ನನ್ನ ಶೈಲಿಯಿಂದ ಒಂದು ಕ್ಷಣ ಹೊರನಿಂತು ಬರೆಯೋಣ ಅನ್ನಿಸಿದಾಗ ಮೂಡಿಬಂದ ಲೇಖನ ಇದು.. 

ಇದರಲ್ಲಿ ತಪ್ಪೇನೆ ಇದ್ದರೂ ಅದು ಈ ಪಾಮರನದು .. ಸ್ವಿಚ್ ಸರಿಯಾಗಿರುತ್ತದೆ, ಪ್ಲಗ್ ಸರಿಯಾಗಿರುತ್ತದೆ.., ಆದರೆ ಸರಿಯಾದ ವಿದ್ಯುತ್ ಪ್ರವಹಿಸಿರುವುದಿಲ್ಲ.. ಅಲ್ಲವೇ!!!!