Sunday, March 25, 2018

ಕಮಲದಲ್ಲಿ ಅರಳಿದ ಮೊದಲ ದಳ

ಮೊದಲ ಭೇಟಿ !!!

"ಕಣಿ  ಹೇಳ್ತೀವಮ್ಮ ಕಣೀ.. "

ಗೇಟಿನ ಹತ್ತಿರ ಬಂದ ಕೊರವಂಜಿಯನ್ನು ಕಂಡು .. "ಏನಮ್ಮ ಅದು ಕಣೀ"

"ಅಯ್ನೊರೆ.. ಇವತ್ತಿನ ವಿಸೇಸ ಹೇಳ್ತಿವ್ನಿ.. ಕಣೀ ಹೇಳ್ತೀನಿ ಬುದ್ದಿ.. "

"ಸರಿ ಕಣಮ್ಮ ಅದೇನು ಹೇಳ್ತೀರೋ ಹೇಳಿ"

"ಗೇಳ್ತಾನ ಅಂದ್ರೆ ಸಕ್ತಿ ಅನ್ನೋದು ಗೊತ್ತು.. ಅದ್ನ ಇಂಗೆ ಮುಂದುವರ್ಸು.. ಒಸಿ ರೊಕ್ಕ ಕೊಡ್ಪ.. ದೇವಿ ಒಳ್ಳೆದಾ ಮಾಡ್ತಾಳೆ.. "

ಜೇಬಿನಲ್ಲಿದ್ದ ಒಂದತ್ತು ರೂಪಾಯಿ ಕೊಟ್ಟೆ..

ಕಣಿ ಹೇಳ್ತೀವಮ್ಮ ಕಣೀ ಅನ್ನುತ್ತಾ ಮುಂದಿನ ಮನೆಗೆ ಹೋದಳು..

ಜಗದಿ ದುಡ್ಡು ಕಾಸು ಏನೂ ಇಲ್ಲದೆ ಸಿಗುವ ವಸ್ತು ಒಂದೇ .. ಅದು ಶುದ್ಧವಾದ ಗೆಳೆತನ....ಗೆಳೆತನ ನಿಲ್ಲೋದು ಮುಗ್ಧತೆಯಿಂದ.. ಪ್ರಾಥಮಿಕ.. ಮಾಧ್ಯಮಿಕ ಶಾಲಾ ದಿನಗಳಲ್ಲಿ ಹೋಮ್ ವರ್ಕ್ ಅನ್ನೋ ಭೂತ ನಮ್ಮ ಶಾಲಾದಿನಗಳಲ್ಲಿ ಇರಲಿಲ್ಲ.. ಆಟ.. ಆಗಾಗ ಪಾಠ.. ಮನೆಗೆ ಬಂದರೆ ಪುಸ್ತಕ ಒಂದು ಕಡೆ.. ನಾವೊಂದು ಕಡೆ..

ಶನಿವಾರ ಬೆಳಗಿನ ತರಗತಿ ಮುಗಿಸಿಬಂದರೆ.. ರಾತ್ರಿ ಊಟದ ತನಕ ಮನೆಗೆ ಬರದೇ...  ಭಾನುವಾರ ಹೊಟ್ಟೆ ಬಟ್ಟೆ ಬಗ್ಗೆ ಯೋಚಿಸದೆ.. ಆಟ, ಗೆಳೆಯರು.. ಅಷ್ಟೇ ತಲೆಯೊಳಗೆ ಇರುತ್ತಿದ್ದದ್ದು..

ಕಮಲಾ ನೆಹರು ಪಾಠ ಶಾಲಾ.. ಈ ಶಾಲೆಯಲ್ಲಿ ಏನೂ ಕಲಿತೆವು.. ಏನೂ ಗಳಿಸಿದೆವು ಅನ್ನೋದಕ್ಕಿಂತ.. ನಮ್ಮ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ್ದು ಇಲ್ಲಿ..

ನಾ ಓದಿದ್ದು ಬರಿ ಮೂರು ವರ್ಷ ಈ ಶಾಲೆಯಲ್ಲಿ ನಾಲ್ಕರಿಂದ ಆರನೇ ತರಗತಿಯ ತನಕ ಮಾತ್ರ ಓದಿದ್ದು.. ಆದರೆ ಒಂದು ಮೂವರು ನಾಲ್ಕು ಮಂದಿ ಬಿಟ್ಟರೆ ಏನೂ ನೆನಪಿಲ್ಲದ ನನಗೆ.. ಈ ಒಂದು ವರ್ಷದಲ್ಲಿ.. ಲೇ ಶ್ರೀಕಾಂತ.. ನೀ ನನ್ನ ಜೊತೆ ಕಣೋ ಓದಿದ್ದು.. ಅನ್ನುವ ಗೆಳೆಯರನ್ನು ಕಂಡಾಗ ಎದೆ ತುಂಬಿಬರುತ್ತೆ ..ನನ್ನ ಮೆದುಳನ್ನು ಪರ ಪರ ಕೆರೆದುಕೊಂಡರೂ ನೆನಪಿಗೆ ಬರೋಲ್ಲ.. ಸತೀಶ.. ಸುರೇಶ..ನವನೀತ .. ರೇವತಿ.. ಚಲಪತಿ.. ಹೀಗೆ ಬೆರಳಲ್ಲಿ ಎನಿಸಬಹುದಾದಷ್ಟು  ಗೆಳೆಯರು ಮಾತ್ರ.. ಆದರೆ ಇಂದು ಸುಮಾರು ಮೂವತ್ತೈದಕ್ಕೂ ಹೆಚ್ಚು ಗೆಳೆಯರು ಶ್ರೀ.. ಶ್ರೀಕಾಂತಾ.. ಎನ್ನುತ್ತಾ ನನ್ನ ಅವರ ಸ್ನೇಹದ ವಲಯದೊಳಗೆ ಸ್ಥಾನ ಕೊಟ್ಟಿರುವುದು ನೋಡಿದರೆ.. ದೇವರು ಇಂತಹ ಗೆಳೆಯರ ಮಧ್ಯವೇ ಇರುತ್ತಾನೆ ಎನ್ನಿಸುತ್ತದೆ..

ಇಂದು ನಮ್ಮ ಭೇಟಿಯ ಮೊದಲ ವರ್ಷದ ಸಂಭ್ರಮ.. ನಾ ಹೋಗುವ ಸಾಧ್ಯತೆ ಎಳ್ಳಷ್ಟೂ ಇರಲಿಲ್ಲ.. ಗೆಳೆಯರ ಕರೆಗಳು ಬರುತ್ತಲೇ ಇದ್ದವು.... ಏನೂ ಹೇಳೋದು.. ಎನ್ನುವ ಗೊಂದಲ.. ಆದರೆ ಹೋಗದೆ ಇರೋಕೆ ಮನಸ್ಸು ಒಪ್ಪುತ್ತಿಲ್ಲ.. ಮನಸ್ಸನ್ನು ಸ್ವಲ ಸಮಾಧಾನ ಮಾಡಿಕೊಂಡು.. ಪರಿಸ್ಥಿತಿಯನ್ನು ಸ್ವಲ್ಪ ನಿಭಾಯಿಸಿ.. ಅದಕ್ಕೆ ತಕ್ಕ ಅಡ್ಜಸ್ಟ್ಮೆಂಟ್ ಮಾಡಿ.. ಹೊಂದಿಸಿ ಹೊರಟೆ..

"ಲೋ ಯಾಕೋ ಫೋನ್ ತಗೋಳಲಿಲ್ಲ.."
"ಶ್ರೀ ಯಾಕೋ ಲೇಟ್"
"ಬೇಗನೆ ಬರೋದಲ್ವಾ ತಮ್ಮ"
"ರಾಜಕುಮಾರ ಎಲ್ಲೋ ಬಂದೆ"

ಹೀಗೆ ಒಂದಕ್ಕಿಂತ ಒಂದು ವಿಶೇಷಣ ಹೊತ್ತು ಬಂದ ಸ್ವಾಗತ ಮನಸ್ಸನ್ನು ಗಾಳಿಪಟದಂತೆ ಮಾಡಿತು..

ಆಫೀಸ್ ಮೀಟಿಂಗ್ ತರಹ ಗೆಳೆಯರು ಗೆಳತಿಯರು ಕೂತಿದ್ದರು.. ನಗು.. ಜಾಲಿ.. ಒಬ್ಬರ ಕಾಲು ಇನ್ನೊಬ್ಬರು ಎಳೆಯುವುದು ನಡೆದಿತ್ತು.. ಕೆಲವು ಕಾರಣಗಳಿಂದ ಬರಲಾಗದ ಗೆಳೆಯರಿಗೆ ಮತ್ತೆ ಕರೆ ಮಾಡಿ ಕೇಳಿದ್ದು.. ಅವರು ಬರಬೇಕಿತ್ತು.. ಇವರು ಬರಬೇಕಿತ್ತು ಎಂದು ಬರದಿದ್ದವರ ಹೆಸರು ಹೇಳಿ.. ಮತ್ತೆ ಇನ್ನೂ ಹಲವಾರು ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ ಸಾಗಿತ್ತು ಸ್ನೇಹ ಕೂಟ..

ಶಾಲೆಯ ಮುಂದೆ ಬೆಳೆದಿದ್ದ ಪಾರ್ಥೇನಿಯಂ ಗಿಡಗಳನ್ನ ಕಿತ್ತು ಮೈದಾನ ಸಿದ್ಧ ಮಾಡಿದ್ದು.. ಶಾಲೆಯ ಮುಂದೆ ಹರಿಯುತ್ತಿದ್ದ ಮೋರಿಯ ಹರಿವು.. ಶಾಲೆಯ ಅಂದ ಚಂದ.. ಮಾಸ್ತರುಗಳು.. ಅವರ ಪಾಠಗಳು ಎಲ್ಲವೂ ಆ ಕೋಣೆಯಲ್ಲಿ ಹರಿದಾಡುತ್ತಿತ್ತು..

ಪೆನ್ಸಿಲ್ ಇಟ್ಟು ಪಂದ್ಯಗಳನ್ನು ಆಡುತ್ತಿದ್ದದು.. ಸೋತಿದ್ದು, ಗೆದ್ದಿದ್ದು.. ಎಲ್ಲವೂ ಮನದ ಪಟಲದಲ್ಲಿ ಹಾರಾಡುತ್ತಿದ್ದವು..

ಇದರ ಮಧ್ಯೆ ತಿನಿಸುಗಳು.. ಗರಂ.. ಮಸಾಲೆಯುಕ್ತ ತಿನಿಸುಗಳು.. ಸಿಹಿ ಪಾನೀಯ.. ಬರುತ್ತಲೇ ಇದ್ದವು.. ಊಟದ ಜೊತೆಯಲ್ಲಿ ಇವೆಲ್ಲ ಬರಲಿ ಕಣೋ.. ಆಮೇಲೆ ಊಟ ಮಾಡೋಕೆ ಆಗೋಲ್ಲ ಅನ್ನುವ ಮಾತುಗಳು ಬಂದರೂ ಕೈ ಬಾಯಿಯ ಜಗಳ ಸಾಗುತ್ತಲೇ ಇದ್ದವು..

ಅನುರಾಧ ಅವರ ಮಗಳ ಸುಮಧುರ ಗಾಯನ.. ಮತ್ತೆ ನಾರಾಯಣ ಅವರ ಮಗಳ ನೃತ್ಯ ಈ ಭೇಟಿಯನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಿದ್ದು ವಿಶೇಷ ಜೊತೆಯಲ್ಲಿ ಶೋಭನ್ ಬಾಬು ಇಂಗ್ಲೆಂಡಿನಿಂದ ಸಿಕ್ಕಿದ್ದು ಖುಷಿಯನ್ನು ಹೆಚ್ಚಿಸಿತು..

ನಮ್ಮ ಗೆಳೆತನವನ್ನು ಬರಿ ಅಲ್ಲಿ ಇಲ್ಲಿ ಮಾತಾಡಿ ಕಳೆಯದೆ ಸಮಾಜಕ್ಕೆ ಒಂದು ಸಣ್ಣಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗುವ ಮಾತು ಬಂತು.. ಅದಕ್ಕೆ ಒಂದು ರೂಪರೇಷೆ ಕೊಡುವ ಮತ್ತು ಅದನ್ನು ಒಂದು ಹಾದಿಯಲ್ಲಿ ನೆಡೆಸುವ ಬಗ್ಗೆ ಆದಷ್ಟು ಬೇಗ ಕಾರ್ಯ ನಿರತವಾಗುವ ಬಗ್ಗೆ ಮಾತಾಡಿ ನಮ್ಮ ಭೇಟಿಗೆ ಮಾತಿನ ಸಂಕೋಲೆಯನ್ನು ಕಳಚಿ ಹೊಟ್ಟೆಯ ಬಗ್ಗೆ ಯೋಚಿಸುವ ಸಾಹಸಕ್ಕೆ ಕೈ ಹಾಕಿದೆವು..

ಪುಷ್ಕಳವಾದ ಭೋಜನ.. ರೋಟಿ, ಅದಕ್ಕೆ ತಕ್ಕ ಜೋಡಿ. ಬಿರಿಯಾನಿ (ಅಥವಾ ಅದಕ್ಕೆ ಹತ್ತಿರವಾದ ತಿನಿಸು) ಅನ್ನ, ಸಾರು.. ಉಪ್ಪಿನಕಾಯಿ.. ಬೆಳೆಯ ತೊವ್ವೆ ಹೋಲುವ ಖಾದ್ಯ.. ಮೊಸರನ್ನ.. ಐಸ್ಕ್ರೀಮ್. ಜಾಮೂನು.. ಎಲ್ಲವೂ ಸೊಗಸಾಗಿತ್ತು..

ಊಟ ಮಾಡಿದ ಮೇಲೆ ಎಲ್ಲರ  ತುಟಿಯ ಮೇಲೆ ಇದ್ದ ಮಾತು ಒಂದೇ "ಅನ್ನ ಧಾತೋ ಸುಖೀಭವ"

ಈ ಸುಂದರ ಭೇಟಿಯ ಒಂದಷ್ಟು ಕಣ್ಣಿಗೆ ಇಂಪು ಕೊಡುವ ಚಿತ್ರಗಳು ನಿಮಗಾಗಿ..


























ಮತ್ತಷ್ಟು ಭೇಟಿ
ಮತ್ತಷ್ಟು ಮಾತುಗಳು
ಮತ್ತಷ್ಟು ಚಿತ್ರಗಳು
ಮತ್ತಷ್ಟು ಗೆಳೆತನ
ಬರುತ್ತಲೇ ಇರುತ್ತವೆ

ಗೆಳೆತನಕ್ಕೆ ಜಿಂದಾಬಾದ್.. .!