Thursday, November 29, 2012

""ಏನ್ ಫ್ರೆಂಡ್ಸಪ್ಪ ನೀವು....?!"

ಸುಮಾರು ೨೭ ವರ್ಷಗಳ ಗೆಳೆತನ ನಮ್ಮದು...ಸದಾ ಒಬ್ಬರಿಗೊಬ್ಬರು ಕಾಲು ಎಳೆಯುತ್ತ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದ ನಮಗೆ.....ನಮ್ಮೊಳಗೊಬ್ಬ ಮದುವೆ ವಯಸ್ಸಿಗೆ ಬಂದಿದ್ದಾನೆ ಎನ್ನುವ ಅರಿವೇ ಇರಲಿಲ್ಲ..ನಾವು ಐದು ಮಂದಿ ಎಲ್ಲಿ ಹೋದರು ಜೊತೆಯಲ್ಲಿ...ಹೀಗೆ ಅನೇಕ ಕಪಿ ಚೇಷ್ಟೆಗಳನ್ನ ಮಾಡಿ ನಕ್ಕು ನಲಿಯುತ್ತ ಸಾಗಿತ್ತು ಕಾಲನ ಚಕ್ರ..
ವೆಂಕಿ, ಜೆ.ಎಂ, ಶಶಿ, ಶ್ರೀಕಿ, ಲೋಕಿ....ಹಮ್ ಪಾಂಚ್....
ನಾವೆಲ್ಲಾ ಹೆದರಿದ್ದು... ನಮಗೆಲ್ಲ ಮದುವೆ ಆದ ಮೇಲೆ ನಮ್ಮ ಸ್ನೇಹ ಸಂಬಂಧ ಹೀಗೆ ಇರುತ್ತಾ ಎನ್ನುವ ಪ್ರಶ್ನೆಗೆ.. ...!

ಶಶಿ ಆಗಿನ ಬಾಂಬೆಯಿಂದ ಬರೆದ ಪತ್ರ ಇನ್ನು ನನ್ನ ಮನಸಲ್ಲಿ ಹಾಗೆ ಇದೆ...ಅದರಲ್ಲಿ ಹೇಳಿದ್ದ.."ಲೋ ನನಗೆ ಹೆಣ್ಣು ನೋಡಿದ್ದಾರೆ.ನನಗೂ ಇಷ್ಟವಾಗಿದೆ.ನಮ್ಮ ಹತ್ತಿರದ ಸಂಬಂಧಿಕರ ಮಗಳು...ಫೋಟೋ ನೋಡಿ...ಏನಾದರು ಕಾಮೆಂಟ್ ಮಾಡಿದ್ರಿ ಅಂದ್ರೆ ಜೋಕೆ..ಬಂದು ವಿಚಾರಿಸಿಕೊಳ್ತಿನಿ..!"

ನಮಗೆ ನಮ್ಮ ಹಣೆ ಬರಹವನ್ನೇ ಓದಲು ಬರುತ್ತಿರಲಿಲ್ಲ....ಇನ್ನೂ  ಆ ಶ್ರೀಮಂತ ಮನೆತನದ ಹುಡುಗ ನಮ್ಮ ಸ್ನೇಹಿತ..ಅವನಿಗೆ ಒಲಿದು ಬಂದಿದ್ದ ಹುಡುಗಿಯೂ ಕೂಡ ಶ್ರೀಮಂತ ಮನೆತನದವರೇ ಆಗಿದ್ದು...ನಮಗೆ ಈ ಹುಡುಗಿ ಏನೋ ಹೆಂಗೋ..ನಮ್ಮ ಸ್ನೇಹ ಹೀಗೆ ಮುಂದುವರೆಯುತ್ತಾ ಇಲ್ಲವ..ಹೀಗೆ ಏನೇನೂ ಯೋಚನೆಗಳು ಕಾಡ್ತಾ ಇದ್ದವು..

ನಿಶ್ಚಿತಾರ್ಥ ಹುಡುಗಿಯ ತವರೂರು ಮಾಲೂರಿನಲ್ಲಿ ನಡೆಯಿತು.....

ಮದುವೆ ನವೆಂಬರ್ ೩೦ ೧೯೯೮ ರಲ್ಲಿ ಕೋರಮಂಗಲ ಬಡಾವಣೆಯ ಬಿ.ಟಿ.ಎಸ್  ಸಮೂದಾಯ ಭವನದಲ್ಲಿ ನಡೆಯುವುದು ಎಂಬ ನಿರ್ಧಾರವಾಯಿತು.

ಆಗ ಜೆ.ಎಂ. ಆಫೀಸಿಂದ ಮೊತ್ತ ಮೊದಲನೇ ಬಾರಿಗೆ ಇಂಗ್ಲೆಂಡ್ ಗೆ ಹೋಗಿದ್ದ...ಹಾಗಾಗಿ ಮದುವೆ ಮನೆಯಲ್ಲಿ ವೆಂಕಿ, ಲೋಕಿ ಜೊತೆಯಲ್ಲಿ ನಾನು...ಸಂಭ್ರಮದಿಂದ ಓಡಾಡುತ್ತಿದ್ದೆವು..

ಧಾರೆಯ ಹಿಂದಿನ ರಾತ್ರಿ..ಶಶಿ ಅವರ ಅಪ್ಪ...ನಮ್ಮ ಹತ್ತಿರ ಬಂದು..."ನೋಡ್ರಪ್ಪ ಅವನು ಒಂದು ವಾರದಿಂದ ಸರಿಯಾಗಿ ನಿದ್ದೆ ಮಾಡಿಲ್ಲ...ಅವನನ್ನು ಮಲಗಲು ಬಿಡಿ...ಬೆಳಿಗ್ಗೆ ಬೇರೆ ಬೇಗ ಏಳಬೇಕು..ತುಂಬಾ ಶಾಸ್ತ್ರ ಇದೆ"..

ನಾವು ಧೈರ್ಯವಾಗಿ..."ನೀವೇನು ಯೋಚನೆ ಮಾಡಬೇಡಿ ಸರ್...ಅವನನ್ನು ಹೂವಿನ ಹಾಗೆ ನೋಡಿಕೊಳ್ತೇವೆ....!" ಎಂದು..ಕೆಟ್ಟದಾಗಿ ಹಲ್ಲು ಬಿಟ್ಟಿದ್ದೆವು..

ಸರಿ ಊಟ ಆಯಿತು, ಮಲಗುವ ಕೋಣೆಗೆ  ನಾವು ನಾಲ್ಕು ಜನ ಬಂದೆವು...

ಶಶಿ ಹೇಳಿದ..." ನೋಡ್ರೋ..ತುಂಬಾ ಸುಸ್ತಾಗಿದೆ ನಾನು ಮಲಗುತ್ತೇನೆ" ಅಂದ..

ನಾವು "ಓಕೆ ಶಶಿ ಗುಡ್ ನೈಟ್" ಅಂದೆವು...

ನಂತರ ಶುರುವಾಯಿತು...ವೆಂಕಿ,  ಲೋಕಿ ಮತ್ತು ನಾನು ಅದು ಇದು ಅಂತ ತಮಾಷೆ ಮಾಡುತ್ತಾ..ಶಾಲಾ ಕಾಲೇಜು ದಿನಗಳ ಮಾತುಗಳೆಲ್ಲ ಆಡುತ್ತ...ತಮಾಷೆ ಮಾಡುತ್ತಾ ಕೂತಿದ್ದೆವು...ಶಶಿಗೂ ನಿದ್ದೆ ಮಾಡಲಾಗಲಿಲ್ಲ..ಅವನು ನಮ್ಮ ಜೊತೆ ಸೇರಿದ..
ಮಾತು, ಹಾಸ್ಯ ಚಟಾಕಿಗಳು ಮುಂದುವರೆದಿತ್ತು ಸಮಯ ಸುಮಾರು ೧೨ ಘಂಟೆ ಇರಬಹುದು...

ವೆಂಕಿ, ಮತ್ತು ಲೋಕಿ ಇಬ್ಬರು ಹೊದಿಕೆಗಾಗಿ ಕಿತ್ತಾಡಲು ಶುರು ಮಾಡಿದರು...ಪಾಪ ಮಧ್ಯದಲ್ಲಿ ಶಶಿ..ಆಕಡೆ ಈ ಕಡೆ ಈ ಇಬ್ಬರೂ ಹೊದಿಕೆ ಎಳೆಯುತ್ತ ನಗುತಿದ್ದರು....ಹೀಗೆ ಸುಮಾರು ಘಂಟೆ ಕಳೆಯಿತು....

ಶಶಿಯಿಂದ ನಿದ್ರಾದೇವಿ ತಪ್ಪಿಸಿಕೊಂಡು ಓಡಿ ಹೋಗಲು ಶುರು ಮಾಡಿದಳು...

ಹೀಗೆ ಕಳೆಯಿತು..ಮತ್ತೆ ನಮ್ಮ ನಗೆ, ಹಾಸ್ಯ, ಲಾಸ್ಯ...ಸಾಗಿತ್ತು...ಕಡೆಗೆ...ಪಾಪ ಶಶಿ ಬೆಳಿಗ್ಗೆ ಬೇಗ ಏಳಬೇಕು ಅಂತ ಮತ್ತೆ ನೆನಪಾಗಿ..ಎಲ್ಲರು ಮಲಗಿದೆವು...ಸಮಯ ಸುಮಾರು ಮಧ್ಯರಾತ್ರಿ ಒಂದೂವರೆ ಎರಡು ಇರಬಹುದು...

ಮದುವೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು...ಆ ಕಾರ್ಯಕ್ರಮವನ್ನು ಭವನದ ಎಲ್ಲ ಮೂಲೆಯಲ್ಲೂ ಕಾಣುವ ಹಾಗೆ ಟಿ.ವಿ.ಅಳವಡಿಸಿದ್ದರು...ಅವರಿಬ್ಬರೂ ಜೊತೆಯಲ್ಲಿ ನಿಂತ ದೃಶ್ಯವನ್ನು ನೋಡಿ ವೆಂಕಿ ಹೇಳಿದ್ದು " ಶ್ರೀಕಿ...ಏನ್ ಪರ್ಫೆಕ್ಟ್ ಜೋಡಿ ಅಲ್ವೇನು...ಸೂಪರ್" ....

ಆರತಕ್ಷತೆ ಎಲ್ಲವು ಮುಗಿಯಿತು...ನಾವೆಲ್ಲಾ ನಮ್ಮ ಮನೆಗಳನ್ನ ಸೇರಿದೆವು...

ಅವನು ಬಾಂಬೆಗೆ ಪತ್ನಿಯ ಸಮೇತ ಹೊರಡಲು ತಯಾರಾಗಿದ್ದ..ನಾವೆಲ್ಲರೂ ಅವನನ್ನು ಬೀಳ್ಕೊಡಲು ಹೋದೆವು...

ಮನೆಯ ಬಾಗಿಲಲ್ಲೇ..."ಏನ್ ಫ್ರೆಂಡ್ಸಪ್ಪ ನೀವು....?!" ಅಂದ್ರು ಶಶಿಯ ಅಪ್ಪ...

ನಮಗೆ ಗಾಬರಿ .."ಏನಾಯ್ತು ಸರ್" ಎಂದೆವು...

"ಅಲ್ರಪ್ಪ...ಅವತ್ತು ಅಷ್ಟು ಹೇಳಿದ್ದೆ.ಅವನಿಗೆ ನಿದ್ದೆ ಮಾಡಲು ಬಿಡಿ..ಅಂತ ..ನಿಮಗೆ ಗೊತ್ತ ಮದುವೆಯ ದಿನ ಅವನು ವಾಂತಿ ಮಾಡಿಕೊಂಡ..ಪಾಪ" ಅಂದ್ರು...

ನಾವು ಸುಮ್ಮನೆ...ನವ ವಧುವಂತೆ..ನೆಲ ಕೆರೆಯುತ್ತ..ಸುಮ್ಮನೆ ದಂತಗಳನ್ನೂ ಪ್ರದರ್ಶಿಸಿದೆವು...

ಯಾರೂ ಇಲ್ಲದಾಗ ಶಶಿಗೆ "ಮಗನೆ..ಹುಡುಗಿಯ ನೆನಪಲ್ಲಿ ನೆಟ್ಟಗೆ ಊಟ ಮಾಡದೆ..ನಿದ್ದೆ ಮಾಡದೆ...ಇದ್ದವನು ನೀನು...ವಾಂತಿ ಮಾಡಿದ್ದು ನೀನು..ಬಯ್ಗುಳ ನಮಗೆ..." ಅಂತ ಸರಿಯಾಗಿ ಗಾಳಿ ಬಿಡಿಸಿದೆವು...

ಶಶಿ..."ಹಹಹ..".ಅಂತ ನಕ್ಕು..."ಇಲ್ಲಪ್ಪಾ...ಒಂದು ವಾರದಿಂದ ತುಂಬಾ ಪ್ರಯಾಣ ಮಾಡಿದ್ದೆ, ಓಡಾಟ ಜಾಸ್ತಿಯಾಗಿತ್ತು...ಊಟ ತಿಂಡಿ ಸರಿಯಾಗಿ ಆಗಿರಲಿಲ್ಲ..ಹಾಗಾಗಿ.......:-)"!

"ಗುರು ಈ ಕಥೆಯೆಲ್ಲಾ ನಮಗೆ ಹೇಳಬೇಡ..ನಮಗೇನು ಗೊತ್ತಿಲ್ವ...ಹಂಗಿದ್ದರೆ ಹಂಗೆ ಹೇಳಬೇಕಿತ್ತು..ನಿಮ್ಮಪ್ಪನಿಗೆ..ನೋಡು ನಮಗೆ ಹೆಂಗೆ ಬಯ್ದರು....ಹಹಹ...."!

"ಹೋಗ್ಲಿ ಬಿಡ್ರೋ...ನಿಮ್ಮ ಬುದ್ಧಿ ನನಗೆ ಗೊತ್ತಿಲ್ವ.."ಅಂದ

ಇಂತಹ ಒಂದು ಸುಮಧುರ ಘಳಿಗೆ ನಮ್ಮ ಜೀವನದಲ್ಲಿ ಮತ್ತೆ ಬರುತ್ತಾ ಅನ್ನುವ ಹಾಗೆ ನೆನಪಲ್ಲಿ ಅಚ್ಚಳಿಯದೆ ನಿಂತಿದೆ ಶಶಿ ಮದುವೆ!!!!

ಅಂದ ಹಾಗೆ ಶಶಿಯ ಬಾಳಲ್ಲಿ ಪ್ರತಿ ಹೆಜ್ಜೆಯಿಟ್ಟ  ಸುಂದರ ಹುಡುಗಿ ನಮಗೆಲ್ಲ ಹಿರಿಯಕ್ಕನ ಸ್ಥಾನದಲ್ಲಿ ನಿಂತು...ನಮ್ಮನ್ನು ಒಡಹುಟ್ಟಿದ ತಮ್ಮಂದಿರಿಗಿಂತ ಹೆಚ್ಚು... ಎಂದು ಪ್ರೀತಿ ತೋರುತ್ತ..ನಮ್ಮ ಅನೇಕ ಪ್ರಶ್ನೆಗಳಿಗೆ "ಪ್ರತಿ" ಉತ್ತರಕೊಟ್ಟ ನಮ್ಮ ಪ್ರೀತಿಯ ಅಕ್ಕನ ಹೆಸರು "ಪ್ರತಿಭಾ"...

ನಾವೆಲ್ಲಾ ಒಂದೇ ರಕ್ತ ಹಂಚಿಕೊಂಡು ಹುಟ್ಟಲಿಲ್ಲ..ಆದರೆ ಒಂದೇ ಉಸಿರಿನಲ್ಲಿ ಬೆರೆತು ಹೋಗಿದ್ದೇವೆ...ಕೆಲಸಕಾರ್ಯಗಳ ಒತ್ತಡಗಳ ನಿಮಿತ್ತ...ಒಬ್ಬರಿಗೊಬ್ಬರು ಸದಾ ಭೇಟಿ ಆಗುತ್ತಿಲ್ಲ..ಆದರೆ ಆ ನೆನಪುಗಳ ಸರಮಾಲೆಯನ್ನೇ ಪೋಣಿಸುತ್ತ..ಒಂದೊಂದೇ ಹೂವನ್ನು ನೋಡುತ್ತಾ..ಆಸೆಯಿಂದ ಹಳೆ ದಿನಗಳತ್ತ ಸಾಗಲು ಅನುಕೂಲವಾಗಲೆಂದು ಈ ಬರಹವನ್ನು ನಮ್ಮ ಪ್ರೀತಿಯ ಗೆಳೆಯ ಶಶಿ ಹಾಗೂ ಅಕ್ಕ ಪ್ರತಿಭಾ ಅವರ ಹದಿನಾಲ್ಕನೇ ವಿವಾಹವಾರ್ಷಿಕೋತ್ಸವದ ಶುಭ ಸಂದರ್ಭಕ್ಕೆ ಈ ಲೇಖನವನ್ನು ಅವರಿಗೆ ಕಾಣಿಕೆಯಾಗಿ ನಮ್ಮ ಗೆಳೆಯರ ಪರವಾಗಿ ಕೊಡುತಿದ್ದೇನೆ...

ಶಶಿ ಮತ್ತು ಪ್ರತಿಭಕ್ಕ...ನಿಮ್ಮ ವಿವಾಹದ  ಶುಭದಿನಕ್ಕೆ ಶುಭಾಶಯಗಳು....

12 comments:

  1. ದಂಪತಿಗಳಿಗೆ ನಮ್ಮದೂ ಶುಭಾಶಯ ತಿಳಿಸಿರಿ.

    ಈ ಕಾಲದಲ್ಲಿ ಗೆಳೆತನಗಳಿಗೂ ಅರ್ಥ ವ್ಯಾಪ್ತಿ ಇವೆ. ಯಾವಾಗ ಅಂಟುತ್ತವೋ? ಯಾಕೆ ಮುರಿಯುತ್ತವೋ ಗೊತ್ತೇ ಆಗುವುದಿಲ್ಲ.

    ಇಷ್ಟು ಸುದೀರ್ಘ ಸ್ನೇಹ ಸೇತುವೆ ಕಟ್ಟಿದ ನೀವೆ ಧನ್ಯರು.

    ReplyDelete
    Replies
    1. ಧನ್ಯವಾದಗಳು ಬದರಿ ಸರ್...ಹೌದು ಗೆಳೆತನ ಅನ್ನುವ ಮದ್ದು ನಮ್ಮಲ್ಲಿದ್ದಾಗ ಅದು ಕೊಡುವ ಅನುಭವ ಅವರ್ಣನೀಯ!!!!

      Delete
  2. ರಕ್ತ ಸಂಬಂಧಗಳನ್ನೂ ಮೀರಿದ ಬಂಧಗಳು ನಮ್ಮನ್ನು ಹೇಗೆ ಆವರಿಸಿಕೊಂಡು ಬಿಡುತ್ತದಲ್ಲ...ಈ ಬಂಧ ಹೀಗೆ ಶಾಶ್ವತವಾಗಿರಲಿ.
    ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
    ಚಂದದ ನೆನಪುಗಳು ಅಣ್ಣಯ್ಯ...

    ReplyDelete
    Replies
    1. ನೀವು ಹೇಳುವುದು ಹೌದು ಪಿ.ಎಸ್ .. ರಕ್ತ ಸಂಬಂಧ ಮೀರಿದ ಸ್ನೇಹ ಬಂಧ..ಸದಾ ಹಸಿರಿನತ್ತಲೇ ಉಸಿರಾಡುತ್ತಿರುತ್ತದೆ...ಸುಂದರ ಪ್ರತಿಕ್ರಿಯೆ ನಿಮ್ಮದು.ಧನ್ಯವಾದಗಳು

      Delete
  3. ಸುಂದರ ಬರಹ ಶ್ರೀ...
    ಗೆಳೆತನ ಚಿರಾಯುವಾಗಲಿ...
    ಶುಭಾಷಯಗಳು ನಿಮ್ಮ ಗೆಳೆಯರಿಗೆ...

    ReplyDelete
    Replies
    1. ಚಿನ್ಮಯ್...ನಮ್ಮ ಸ್ನೇಹಿತನ ಪರವಾಗಿ ಧನ್ಯವಾದಗಳು...ಲೇಖನ ಮೆಚ್ಚುಗೆಯಾಗಿದ್ದಕ್ಕೆ ಸಂತಸವಾಗುತ್ತಿದೆ.

      Delete
  4. Thank you Sriki for a worderful present. Thank you all for the wishes

    ReplyDelete
    Replies
    1. ಸುಂದರ ಸ್ನೇಹಿತ...ಸುಮಧುರ ಸಹೋದರಿ ನಮಗೆ ಸಿಕ್ಕಿದ್ದಕೆ ನನಗೆ ನನ್ನ ಮೇಲೆಯೇ ಅಭಿಮಾನ ಹೆಚ್ಚುತ್ತಿದೆ..ಅಭಿನಂದನೆಗಳು ಗೆಳೆಯ...

      Delete
  5. Satish Kumar JagarlamudiDecember 3, 2012 at 6:12 PM

    ಅಣ್ಣ ಸಹಸ್ರ ನಮನ. ನಿನ್ನ ಬರಹ ಅಣಿಮುತ್ತುಗಳು. ನಿನ್ನ ಈ ಅಮೋಘ ಸ್ಮೃತಿಪಟಲ ತಾಜಾತನ ಮತ್ತು ಚಾಣಾಕ್ಷತೆ ನಮ್ಮೆಲ್ಲರಿಗೂ ಒಂದು ವಿಸ್ಮಯ. ಏನೆ ಅಗಲಿ ನಿನ್ನ ಈ ಪ್ರತಿಭೆ ಹಾಗೆ ಮುಂದುವರಿಯಲಿ.

    ReplyDelete
    Replies
    1. ಸೂಪರ್ ಗುರು...ಎಷ್ಟು ನವಿರಾಗಿ ಬರೆದಿರುವೆ...ಕೈಲಾದ, ಮನಸ್ಸಿಗೆ ಬಂದ ಈ ಘಟನೆಗಳನ್ನ ಪದಗಳಿಗೆ ಇಳಿಸಲು ನೀವೆಲ್ಲ ಸ್ಪೂರ್ತಿದಾಯಕರು...

      Delete
  6. Shashi & Pratibha happy aaniversary!!! Great narration kano Sriki

    ReplyDelete
    Replies
    1. ಧನ್ಯವಾದಗಳು ಗುರುವೇ..ನಿಮ್ಮ ಅಭಿಮಾನವೇ ನಮಗೆ ಶ್ರೀರಕ್ಷೆ..

      Delete