Monday, May 13, 2013

ಶತಮಾನಂಭವತಿ - ಸಂಗೀತದ ಅಲೆಗಳ ಮೇಲೆ 3K ಮೆರವಣಿಗೆ!

ಸಂಗೀತದ ಅಲೆಗಳ ಮೇಲೆ ಪ್ರೇಮದ ಮೆರವಣಿಗೆ
ಅ ಆ ಇ ಈ ಕಲಿಸಲು ಬರುವುದು ಮನೆಮನೆಗೆ
ಲಾ ಲಾ...  ಲಾ ಲಾ... ಲಾ ಲಾಆಅ!!!

ರೂಪ ಸತೀಶ್ ಅವರಿಗೆ ಆಶ್ಚರ್ಯ...  ಅರೆ... ಇದೇನು ಇವತ್ತು ಈ  ಪದಗಳು ತುಂಬಾ ನೆನಪಿಗೆ ಬರ್ತಾ ಇದೆ... ಹೀಗೆ ಯೋಚಿಸುತ್ತಾ ಕುಳಿತ ಮನಸ್ಸಿಗೆ ಮತ್ತೆ ಕಾಡಿಸಲು ಶುರುವಾಯಿತು ಇನ್ನೊಂದು ಪದಗಳ ಸಾಲು!


"ಯಾರ್ ಯಾರ ಚೆಲುವೆ ಎಲ್ಲಿಹಳೋ
ಯಾರ್ ಯಾರ ಋಣುವು ಎಲ್ಲಿಹುದೋ
ಒಂದೊಂದು ಅಕ್ಕಿಯಾ ಕಾಳಿನೋಳು
ತಿನ್ನೋರಾ ಹೆಸರು ಕೆತ್ತಿದೆಯೋ"

ಯಾಕೋ ಎಲ್ಲಾ ಸರಿ ಏನೋ ಮಿಸ್ ಆಗ್ತಾ ಇದೆ ಅನ್ನಿಸಲಿಕ್ಕೆ ಶುರುವಾಯಿತು..ಇರಲಿ ಒಂದು ಲೋಟ ತಣ್ಣಗೆ ನೀರು ಕುಡಿದು ಬರುತ್ತೇನೆ .... ಆಫೀಸ್ ನ ಕುರ್ಚಿ ಬಿಟ್ಟು ಹೊರಬಂದರು. ನೀರು ಕುಡಿದರು.. ನಿರಾಳವಾಯಿತು. ತಣ್ಣಗಿನ ನೀರು ಬಿಸಿ ತಲೆಯನ್ನು ಕೊಂಚ ತಂಪು ಮಾಡಿತು. ಈಗ ಮತ್ತೆ ಮನಸ್ಸಿನ ಮಿಕ್ಸರ್ ಶುರುವಾಯಿತು...


3K ಸ್ನೇಹದ ಅಲೆಗಳ ಮೇಲೆ ಹಂಸದ ಮೆರವಣಿಗೆ
ಮುನ್ನುಡಿ ಬರೆದು ಹರಸಿದ ಹಂಲೇ ಬರವರು ಕ ಸಾ ಪ ಗೆ (ಕನ್ನಡ ಸಾಹಿತ್ಯ ಪರಿಷತ್)
ಲಾ ಲಾ...  ಲಾ ಲಾ... ಲಾ ಲಾಆಅ!!!

ವಾರೆ ವಾಹ್ ಇದು ಸರಿಯಾಗಿದೆ  ಅನ್ನಿಸಿತು... ಇರಿ ಇನ್ನೊಂದು ಹಾಡಿಗೂ ಏನಾದರೂ ತಲೆಗೆ ಹೊಳೆಯಲಿ ಎಂದು ಇನ್ನೊಂದು ಲೋಟ ತಣ್ಣಗಿನ ನೀರು ಕುಡಿದರು.... ಮಾತೆ ರಾಗ ಮಾಲಿಕೆ ಶುರು...


ಯಾರ್ ಯಾರ ಕವನ ಎಲ್ಲಿಹುದೋ
ಯಾರ್ ಯಾರ ಕಥೆಯು ಹೇಗಿಹುದೋ
ಒಂದೊಂದು ಬುಕ್ಕಿನ ಹಾಳೆಯಲೂ
ಬರೆದೋರ  ಹೆಸರು ಬರೆದಿಹುದೋ
ಪ್ರೀತಿಯಿಂದ ಕ ಸಾ ಪ ಗೆ ಬನ್ನಿರಿ
ಅಲ್ಲಿ ಬಂದು ನಮ್ ಜೊತೆ ಬೆರೆಯಿರಿ!


ಎಲ್ಲರ ಆಸೆ ಆಕಾಂಕ್ಷೆಗಳ ಒಂದು ಸಣ್ಣ ಸಮಾಗಮ - ಚಿತ್ರ ಕೃಪೆ - 3 K  ತಂಡ

ಆಹಾ! ಇದು ಸರಿ ಇದೆ ಎನ್ನಿಸಿತು.. ಹೊರಟಿತು ಶತಮಾನಂಭವತಿ ಭಾವ ಕರೆಯೋಲೆ. ಮುಗಿ ಬಿದ್ದಿತು ಭಾವ ಲೋಕದ ಕವಿಮನಗಳ ಒಂದು ಜಾತ್ರೆ.
ಚಿತ್ರ ಕೃಪೆ - 3 K  ತಂಡ - ಭಾವ ಪೂರಿತ ಕರೆಯೋಲೆ 

ಮುಗ್ಧ ಮುಖದ ಮುದ್ದು ಮನಸ್ಸಿನ ಸಹೋದರಿಯ ಸೊಗಸಾದ ಪ್ರಾರ್ಥನಾ ಗೀತೆಯಿಂದ ಶುರುವಾದ ಕಾರ್ಯಕ್ರಮ ಜೋಗದ ಜಲಪಾತದ ಸೊಬಗಿನಂತೆ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು. 3K ತಂಡದ ಕೇಂದ್ರ ಬಿಂದುಗಳಾದ ಕೆಲವು ಸದಸ್ಯರಿಂದ ಅತಿಥಿಗಳ ಪರಿಚಯವಾಯಿತು.

ನಂತರ ಶ್ರೀ ವಸುಧೇಂದ್ರ ಅವರ ಸುಲಲಿತವಾದ ನುಡಿಮುತ್ತುಗಳಿಂದ ಮನಪುಳಕಿತವಾಯಿತು. ಶ್ರೀ ಹಂಸಲೇಖ ಅವರು ನುಡಿದ ಮಾತುಗಳು "ಟಿ ವಿ ಯನ್ನೇ ನೋಡದ ಇವರ ಠೀವಿ ನೋಡ್ರಿ"  ವಸುದೇಂದ್ರ ಅವರ ವ್ಯಕ್ತಿತ್ವಕ್ಕೆ ಒಂದು ಕಳಶವಾಯಿತು.  ಈ ಶತಮಾನಂಭವತಿ ಪುಸ್ತಕದ ಕವಿಗಳ ಸಾಧನೆ ತೋಟದಂತಲ್ಲ.. ಅದು ನಮ್ಮ ನಿಮ್ಮೆಲರ ಮನೆಯ ಹಿತ್ತಲಿನಂತೆ ಎನ್ನುವ ಮಾತು ಬಲು ಇಷ್ಟವಾಯಿತು. ತೋಟ ವಾಣಿಜ್ಯ ಉದ್ದೇಶಕ್ಕೆ ಆದರೆ... ಹಿತ್ತಲು ಮನಸ್ಸಿನ ಆಜ್ಯಕ್ಕೆ ತಂಪೆರೆಯುವ ಕೈದೋಟ ಎನ್ನುವ ಅರ್ಥ ಗರ್ಭಿತ ಮಾತುಗಳು ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ.

ನಂತರ ಮಾತಾಡಿದ ಪದಗಳ ಗಾರುಡಿಗ.. ಕನ್ನಡ ಚಿತ್ರ ಗೀತೆಗಳಿಗೆ ಇನ್ನೊಂದು ದಿಕ್ಕನ್ನು ತೋರಿಸಿದ ಜಾದುಗಾರ ಶ್ರೀ ಹಂಸಲೇಖ.. ಈ ಶತಮಾನಂಭವತಿ ಪುಸ್ತಕ ಸಿದ್ಧಾಂತದ ಪ್ರಪಂಚಕ್ಕೆ ಒಂದು ಬಾಗಿಲು ಎಂದರು. ಶತ"ಸಹಸ್ರ"ಮಾನಂಭವತಿ  ಎನ್ನುವ ಅವರ ಆಶೀರ್ವಾದ ದೇವಸ್ಥಾನದ ಘಂಟನಾದದಂತೆ ಮೊಳಗಿತು. ಸುಂದರ ಪದಗಳನ್ನು ತುಂಬಿದ ಮಾತುಗಳು, ಕಳಕಳಿ ತುಂಬಿದ ಪ್ರೇಮಮಯ ಭಾವ ಕಾರ್ಯಕ್ರಮಕ್ಕೆ ಹೊಳಪು ಕೊಟ್ಟಿತು. 3K ತಂಡದ ಶ್ರಮಗಾರ್ತಿ ನಾಯಕಿ  ರೂಪ ಅವರಿಗೆ ಕನ್ನಡದ ನಿಘಂಟಿನ ಕೆಲವು ಭಾಗಗಳ ಲಭ್ಯತೆ ಬಗ್ಗೆ ಕ ಸಾ ಪ ದಲ್ಲಿ  ವಿಚಾರಿಸಿ ಎಂದಾಗ.. ರೂಪ ಅವರು ನಿಘಂಟಿನ ಎಲ್ಲಾ ಎಂಟು ಸಂಪುಟಗಳನ್ನು ಕೊಟ್ಟಿದ್ದು ಸ್ಮರಿಸಿಕೊಂಡು..  ರೂಪ ಅವರ ಉದಾರ ನಿಷ್ಕಲ್ಮಷ ಮನಸ್ಸನ್ನು ಹೊಗಳಿದರು. 

ಶ್ರೀ ಮಂಜುನಾಥ  ಕೊಳ್ಳೇಗಾಲ ಅವರು ಎಲ್ಲಾ ನೂರು ಕವಿಗಳಿಗೂ ಅಭಿನಂದನೆ ಸಲ್ಲಿಸಿದರು. ಹೆಚ್ಚು ಮಾತಾಡದೆ ಹೇಳಬೇಕಾದ್ದುದನ್ನು ಸೂಕ್ಷವಾಗಿ ತಿಳಿಸಿದಾಗ... ತುಂಬಿದ ಕೊಡ ತುಳುಕಲು ಸಾಧ್ಯವೇ ಎಂದು ಪ್ರಶ್ನಿಸಿತು ಮನಸ್ಸು. ಸಾಧನೆ ಅಪಾರ ಆದರೆ ಅಷ್ಟೇ ನಯವಿನಯದ ಸಜ್ಜನ. (ಕಾರ್ಯಕ್ರಮ ಮುಗಿದನಂತರ.. ಶ್ರೀಕಾಂತ್ ಮಂಜುನಾಥ್ ಅವರೇ ನಿಮ್ಮ ಕೆಲ ಬರಹಗಳನ್ನು ನೋಡಿದ್ದೇ ನಿಮ್ಮನ್ನು ನೋಡಿರಲಿಲ್ಲ ಎಂದಾಗ 5 ಅಡಿ ೫ ಇಂಚು ಇದ್ದ ನಾನು  ಅವರ ಸರಳತೆ ಕಂಡು ಬಲಿ   ಚಕ್ರವರ್ತಿಯ ಹಾಗೆ ಭುವಿಯೊಳಗೆ  ಇಳಿದು ಹೋಗಿದ್ದೆ, ಏನು ಸಾಧನೆ ಮಾಡದ ತಲೆಯನ್ನು ಭುಜದ ಮೇಲೆ ಇಟ್ಟುಕೊಳ್ಳದೆ ಓಡಾಡುವ ನನ್ನ ತರಹದ ಮಂದಿಯೊಳಗೆ ಮಂಜುನಾಥ್ ಸರ್ ಒಂದು ಅನರ್ಘ್ಯ ರತ್ನ)

ಭಕ್ತಿ ಭಂಡಾರಿ ಬಸವಣ್ಣ ತಾವೇ ಬರೆದ "ನುಡಿದರೆ ಮುತ್ತಿನ ಹಾರದಂತಿರಬೇಕು" ವಚನವನ್ನು ಮೆಲುಕು ಹಾಕುತ್ತಿದ್ದರು... ಅಚಾನಕ್ಕಾಗಿ ಆಚೀಚೆ ನೋಡಿ "ಲಿಂಗ ಮೆಚ್ಚಿ  ಅಹುದು ಎನ್ನುತ್ತಿದೆ" ಎಂದರು. ಅಲ್ಲೇ ಇದ್ದ ಸಭಿಕರು "ಬಸವಣ್ಣನವರೇ ಏನಿದು ನಿಮ್ಮ ಮಾತು ನಮಗೆ ಸರಿಯಾಗಿ ಅರ್ಥೈಸಿಕೊಳ್ಳಲಾಗುತ್ತಿಲ್ಲ ಎಂದಾಗ.. ಭುವಿಯಲ್ಲಿ ನೋಡಿ 3K ತಂಡದ ರೂಪ ಸತೀಶ್ ಅವರು ಮಾತಾಡುತ್ತಿರುವ ರೀತಿ... ಸ್ಫಟಿಕದ ಸ್ಪಷ್ಟತೆ, ಮುತ್ತಿನಹಾರದಂತ ಗಾಂಭೀರ್ಯತೆ, ಭಾಷೆ ಸುಲಲಿತವಾಗಿ ತೇಲಿ ಬರುತ್ತಿರುವ ನಾದದಂತೆ ಇದೆ, ಕತ್ತಲಿನಲ್ಲಿ ದೀಪ ಹಾದಿ ತೋರುವಂತೆ ತಾವೂ ಮುನ್ನೆಡೆದು ತಂಡದವರನ್ನು ಮುನ್ನೆಡೆಸುತ್ತಿರುವ ಅವರ ಧೈರ್ಯ ಸ್ಥೈರ್ಯಕ್ಕೆ ನನ್ನ ಆಶೀರ್ವಾದಗಳು ಎಂದಾಗ ಕೈಲಾಸದಲ್ಲಷ್ಟೇ ಅಲ್ಲದೆ ಬೆಂಗಳೂರಿನ ಸಭಾಂಗಣದಲ್ಲೂ ಮಿಂಚಿನ ಕರತಾಡನ.


ಚಿತ್ರ ಕೃಪೆ - 3 K  ತಂಡ
ನಂತರ 3K ತಂಡದ ಮುಖ್ಯ ಸದಸ್ಯರನ್ನು ಕರೆದು ಗೌರವ ಸೂಚಕ ಫಲಕಗಳು, ಶತಮಾನಂಭವತಿ ಎನ್ನುವ ಹೆಸರನ್ನು ಸೂಚಿಸಿದ ಬದರಿನಾಥ್ ಪಲವಳ್ಳಿ ಅವರಿಗೆ , ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧಪಡಿಸಿದ ರೂವಾರಿಗಳಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಸತ್ಕರಿಸುವುದೊಂದಿಗೆ ಕಾರ್ಯಕ್ರಮ ಸುಂದರ ಅಂತ್ಯವನ್ನುಕಂಡಿತು .   

ರೂಪ ಕಣ್ಣು ತೆರೆದು ನೋಡುತ್ತಾರೆ... ಅರೆ ಅರೆ ಇದು ಕನಸಲ್ಲ.. ಇದೆಲ್ಲವೂ ನಿಜವಾಗಿಯೂ ನಡೆಯಿತೇ ಎನ್ನುವ ಒಮ್ಮೆಲೇ ಆನಂದದ ಪುಳಕ.   ನನ್ನ ಹುಟ್ಟು ಹಬ್ಬಕ್ಕೆ ಇದಕ್ಕಿಂತ ಬೇರೆ ಒಳ್ಳೆಯ ಉಡುಗೊರೆ ಸಿಕ್ಕಲಿಕ್ಕಿಲ್ಲ ಎನ್ನುತ್ತಾ ಕೂತಿದ್ದಾಗ ಮನಸ್ಸು ಮತ್ತೆ ತಣ್ಣನೆ ನೀರು ಕುಡಿಯುವ ಮನಸಾಯಿತು. ಮತ್ತೆ ಸೀಟ್ ಗೆ ಬಂದಾಗ

"ಒಂದಾನೊಂದು ಕಾಲದಲ್ಲಿ ಆರಂಭ
ಆರ್ಕುಟ್ ಫೇಸ್ ಬುಕ್ ಹಾಳೆಯಿಂದ ಪ್ರಾರಂಭ
ಹಂಸವು ಉಲಿಯಿತು ರೆಕ್ಕೆಯು ಬಲಿಯಿತು
ಭಾವ ಸಿಂಚನದಿಂದ ಶುರುವಾಗಿದ್ದು
ಶತಮಾನಂಭಾವತಿ ಆಯಿತು!!"


ಚಿತ್ರ ಕೃಪೆ - 3 K  ತಂಡ... ನೂರು ಕವಿ ಮನಗಳ ಹೆಸರು 
ಕಣ್ಣಂಚಲ್ಲಿ ಒಸರುತಿದ್ದ ಭಾವ ಸಿಂಚನವನ್ನು ಒಮ್ಮೆ ಮುಟ್ಟಿ  ನೋಡಿ ಅರೆ ಇದು .....  ಹಿರಿಯರ ಪಾದ ಧೂಳೀಯಿಂದ ಸಿಕ್ಕಿದ  "ಶತಮಾನಂಭವತಿ" ಆಶೀರ್ವಾದ... ಎಂದುಕೊಳ್ಳುತ್ತಾ ತಲೆ ಎತ್ತಿ ನೋಡಿದರೆ

"ನಗುತ ನಗುತ ಬಾಳಿ ನೀವು ನೂರು ವರುಷ
ಎಂದು ಹೀಗೆ ಇರಲಿ  ಹರುಷ 3K ವರುಷ ..." ಹಾಡು ತೇಲಿ ಬಂತು...

ಒಂದು ಸುಂದರ ಕಾರ್ಯಕ್ರಮ ಕಣ್ಣ ಮುಂದೆ ಹಾಗೆ ತೇಲಿ ಹೋಯಿತು...


ಚಿತ್ರ ಕೃಪೆ - 3 K  ತಂಡ 
ರೂಪ ಅವರಿಗೆ ಹುಟ್ಟುಹಬ್ಬಕ್ಕೆ ತಡವಾದ ಶುಭಾಶಯಗಳು .. ಹಾಗೆಯೇ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ ಪ್ರಾಯೋಜಿಸಿದ 3ಕ ತಂಡಕ್ಕೆ ಹಾಗೂ ಮುನ್ನೆಡೆಸಿದ ರೂಪ ಅವರಿಗೆ ಅಭಿನಂದನೆಗಳು!!!

Wednesday, May 1, 2013

ಪುಟ್ಟಿನ ಪರ್ಬದ ಹಾರೈಕೆ!

ಯೋಚನೆ ಮಾಡುತ್ತಾ ಕೂತಿದ್ದೆ!

ಅಚಾನಕ್ಕಾಗಿ ಕಿಟ್ಟು ಪುಟ್ಟು ಚಿತ್ರ ನೆನಪಿಗೆ ಬಂತು.. ಯಾಕೋ ಆ ಚಿತ್ರ ನೋಡಬೇಕು ಅನ್ನಿಸಿತು. ಪರದೆಯ ಮೇಲೆ ಚಿತ್ರ ಓಡುತ್ತಿತ್ತು. ಬೆರಳುಗಳು ಕೀಲಿ ಮಣೆಯ ಮೇಲೆ ನರ್ತನ ಮಾಡುತಿತ್ತು.

"ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ನುಡಿ"ಮುತ್ತೊಂದ" ಕಳಿಸಿರುವೆ ಮೆತ್ತಗೆ ಮೆತ್ತಗೆ ರೀಡ್"

ಅರೆ ಇದೇನು ಹಾಡಿನ ಸಾಹಿತ್ಯವೇ ಬದಲಾಯಿತೆ ಎನ್ನುತ್ತಾ ಕತ್ತೆತ್ತಿ ಸುತ್ತಲೂ ನೋಡಿದೆ! ಮೊಬೈಲ್ ಕ್ರೀಕ್ ಕ್ರೀಕ್ ಅಂತ ಸದ್ದು ಮಾಡಿತು. ಗಡಿಯಾರ ನೋಡಿದೆ.. ಹಲ್ಲು ಕಿರಿದೆ..

ಹೊರಗೆ ಓಡಿ ಬಂದು ಆಕಾಶದ ಕಡೆಗೆ ಕಣ್ಣು ಹಾಯಿಸಿದೆ...  ಸೂರ್ಯದೇವ ನಗುತ್ತಲಿದ್ದ..

ನನಗಿಂತಲೂ ಚೆನ್ನಾಗಿ ನಗುತ್ತಾರೆ  ಅಶೋಕ್ ಶೆಟ್ಟಿ! (ಚಿತ್ರಕೃಪೆ ಅಂತರ್ಜಾಲ)

ನಾನು "ಬೆಳಕು ಬೀರುತಾ ನೀ ಬರುವೆ ....  ಇಂದೇಕೆ ನಗುತಲಿರುವೆ" ಎಂದು ಕೇಳಿದೆ

ಆಗ ಸೂರ್ಯದೇವ "ಕಾಂತ.. ಪ್ರಕೃತಿಗೆ  ನಾನು  ಬೆಳಕನ್ನು ಕೊಡುತ್ತಿರುವೆ.. ಇನ್ನೊಬ್ಬರು ಜ್ಞಾನದ ಬೆಳಕನ್ನು ಕೊಡುತ್ತಲಿರುವರು... ನನ್ನ ಬೆಳಕು ಹೊರಜಗತ್ತಿಗೆ.. ಅವರ ಬೆಳಕು ಒಳ ಜಗತ್ತಿಗೆ... ಅಂತ ಹೇಳಿ ಕಪ್ಪು ಕನ್ನಡಕ ಧರಿಸಿ ಮೋಡದ ಮರೆಯಲ್ಲಿ ಮರೆಯಾದ!
ಅವರು ಕಲಿಸುವ ನುಡಿಮುತ್ತುಗಳು ಯಾವತ್ತಿಗೂ ಸೂಪರ್ ಕೂಲ್! (ಚಿತ್ರಕೃಪೆ - ಅಂತರ್ಜಾಲ)

ಯೋಚಿಸಿದೆ ಹೌದಲ್ವಾ! . ಅಶೋಕ ಸಾಮ್ರಾಟ ಕಳಿಂಗ ಯುದ್ಧವಾದ ಮೇಲೆ ಅಪಾರ ನಷ್ಟವನ್ನು ನೋಡಿ ಸಹಿಸಲಾರದೆ ಶಾಂತಿಯ ಮೊರೆ ಹೊಕ್ಕನು. ನಮ್ಮ  ಗೆಳೆಯ ಸುಂದರ ಹೃದಯದ ಅಶೋಕ್ ಸಾಮ್ರಾಟರು ನಮ್ಮ ಮನದೊಳಗೆ ನಡೆಯುತ್ತಿರುವ ಯುದ್ಧಕ್ಕೆ ಬಿಳಿ ಬಾವುಟ ತೋರಿಸುವ ಸುಂದರ ಸಂದೇಶ ಕಳುಹಿಸುತ್ತಿದ್ದಾರೆ. ಎಷ್ಟು  ಸಾಮ್ಯತೆ ಅಲ್ಲವೇ!. ಹೌದು ಆ ಹೆಸರಿನಲ್ಲೇ ಅಂಥಹ ಒಂದು ತಾಕತ್ ಇದೆ.

ಆ ಆಶೋಕ್ ಸಾಮ್ರಾಟ ಯುದ್ಧದ ನಂತರ ಶಾಂತಿ ಸ್ಥಾಪಿಸಿದರು.. ನಮ್ಮ ನುಡಿಮುತ್ತುಗಳ.. ಸ್ನೇಹಲೋಕದ ಸಾಮ್ರಾಟ್ ಮನದೊಳಗೆ ನಡೆಯುತ್ತಿರುವ ಕಾಳಗವನ್ನು ನಿಲ್ಲಿಸಲು ಸುಂದರ ನುಡಿಮುತ್ತುಗಳನ್ನು ಹೆಣೆಯುತ್ತಾರೆ.

ನುಡಿಮುತ್ತುಗಳು ತಂಡ ಒಂದು ಸುಂದರ ಸ್ನೇಹ ಲೋಕ ! (ಚಿತ್ರಕೃಪೆ ಅಂತರ್ಜಾಲ)

ಇಂತಹ ಅಮರ ಸ್ನೇಹ ಬಯಸುವ ಸುಂದರ ಹೂವಿನ ಮನಸ್ಸುಳ್ಳ ಅಶೋಕ್ ಅವರದು ಇಂದು ಹುಟ್ಟಿದ ಹಬ್ಬ. ಇಂತಹ ಸಹೃದಯದ ಸುಂದರ ಮನಸ್ಸಿನ ನಗುಮೊಗದ ವ್ಯಕ್ತಿತ್ವಕ್ಕೆ ಶುಭಾಶಯಗಳನ್ನು ಕೋರುವ ಭಾಗ್ಯ ನನ್ನದು. 


"ದಿನೋಲ ಸೂರ್ಯೇ ಮೂಡನಗ ಪೊಸತ್ ಭರವಸೆದ ಸಂದೇಶ ಪಥರ್ಪೆ
ಮಾತಾ ಭರವಸೆಲು ಜೀವನದ ಬೊಲ್ಪು ಆಪುಂಡು
ಜೀವನ ಶಾಂತಿದ ತಾದಿ ಆಪುಂಡು
ಶಾಂತಿ ಸಂತೋಷದ ತಾದಿ ಆಪುಂಡು
ಸಂತೋಷ ದಿನನು ಬೊಲ್ಪು ಮಲ್ಪವುಂಡು
ದಿನ ಪೂರ ಸಮಯ ಎಡ್ಡೆಡು ಇಪ್ಪಡು ಪಂದು ಬೇಡುವೆ
ಪುಟ್ಟಿನ ಪರ್ಬದ ಹಾರೈಕೆ!"

ಇದಪ್ಪಾ ನಗು ಅಂದ್ರೆ ಸದಾ ಹೀಗೆ ಇರಲಿ! (ಚಿತ್ರಕೃಪೆ - ವಿಜಯ್ ಆದಿತ್ಯ)
ಅಶೋಕ್ ಸರ್ ಹುಟ್ಟು ಹಬ್ಬದ ಶುಭಾಶಯಗಳು.  ಹೃದಯ ಸಿಂಹಾಸನದಲ್ಲಿ ಕುಳಿತಿರುವ ನಿಮ್ಮ ಸಂಸಾರದಲ್ಲಿ,  "ಕುಶಿ" ಎನ್ನುವ ನಿಮ್ಮ ಮನೆಯ ದೀಪ,  ಸದಾ "ವಿನೋದ"ದಿಂದ ನಗು ನಗುತ್ತಾ...  ನಿಮ್ಮ ಮುಗ್ಧ ಸುವಾಸಿತ ನಗುವಿನ ಜೊತೆಯಲ್ಲಿ  ಸದಾ ಜೀವನದಲ್ಲಿ ಬೆಳಕು ತುಂಬಿರಲಿ.  

(ಹುಟ್ಟು ಹಬ್ಬದ ಸಂದೇಶವನ್ನು ತುಳು ಭಾಷೆಯಲ್ಲಿ ಬರೆದು ಕೊಟ್ಟ ಸ್ಮೈಲಿಂಗ್ ಸಿಸ್ಟರ್ (ಎಸ್ ಎಸ್ = ಸುಲತ ಶೆಟ್ಟಿ ಅವರಿಗೆ ಧನ್ಯವಾದಗಳು)