Saturday, October 24, 2015

ನಿವಿ ಸ್ಪೆಷಲ್ ---- "ಅರ್ಪಿತ"ವಾಯ್ತು !!!

ಅದೊಂದು ಬೆಳಗಿನ ಜಾವ.. ದಿನಕರ ಆಗಷ್ಟೇ ಕಣ್ಣುಜ್ಜಿ ತನ್ನ ಸುಂದರ ಮೊಗವನ್ನು ತೋರಿಸಲೋ ಬೇಡವೋ ಎನ್ನುವಂತೆ ತಿಣುಕಾಡುತ್ತಿದ್ದ ಮೋಡಗಳ ಮರೆಯಲ್ಲಿ...

ಚಳಿಗಾಲ ಆರಂಭವಾಗಿತ್ತು. ಚುಮುಚುಮು ಚಳಿ ತಣ್ಣನೆ ನಡುಗಿಸುತ್ತಿತ್ತು

ಅಲ್ಲೊಂದು ಅರಳಿ ಮರ.. ಅದರಡಿಯಲ್ಲಿ ಸುಮಾರು ಮಂದಿ..

ಆ ಮರದ ವಿರುದ್ಧ ದಿಕ್ಕಿನಲ್ಲಿ ಒಂದು ಸಣ್ಣ ಚಹಾ ಅಂಗಡಿ.. ಕೆಲವರು ಚಳಿಯನ್ನು ಹೊಡೆದೋಡಿಸಲು ಚಹಾಕ್ಕೆ ಮೊರೆ ಹೋಗುತ್ತಿದ್ದರು.

ಹಕ್ಕಿಗಳ ಚಿಲಿಪಿಲಿ, ಹಸು ಕರುಗಳ ಅಂಬಾ ನಾದ, ಗೆಜ್ಜೆ ನಾದ, ಕೋಳಿಗಳ ಕುಕ್ಕುಕ್ ಕುಕ್ಕುಕ್ ಎನ್ನುವ ಸದ್ದನ್ನು ಮೀರಿ .. ಗುಜು ಗುಜು ಮಾತುಗಳ ಸದ್ದು ಬರುತ್ತಲೇ ಇತ್ತು..

ಹೆಸರಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು
ಯಾವ ಹೆಸರು, ಏನು ಹೆಸರು, ಹೆಂಗೆ ಇತ್ಯಾದಿ

ಮರದಡಿಯಲ್ಲಿ ನಿಂತು ಈ ವಿದ್ಯಾಮಾನವನ್ನೆಲ್ಲ ನೋಡುತ್ತಿದ್ದ ಅರ್ಪಿತ, ತನ್ನ ಕಡು ಕಪ್ಪು ನೀಳಗೂದಲನ್ನು  ಒಮ್ಮೆ ಅತ್ತಿತ್ತ ಸರಿ ಪಡಿಸಿಕೊಂಡು, ಬೆಕ್ಕಿನ ನಡಿಗೆಯಲ್ಲಿ ಬಂದಳು.

ಎಲ್ಲರಲ್ಲೂ ಕುತೂಹಲ, ಒಮ್ಮೆಲೇ ತಾವು ಚರ್ಚಿಸುತ್ತಿದ್ದ ವಿಚಾರವನ್ನು ಕ್ಷಣಕಾಲ ಮರೆತರೆನೋ ಎನ್ನುವಷ್ಟು ಸಹಜತೆಯಿಂದ ಆಕೆಯನ್ನು ನೋಡುತ್ತಾ ನಿಂತರು.

ಕಾರಣ, ಆಕೆಯ ಮುಗ್ಧ ಮುಖ... ಬ್ರಹ್ಮ ತುಂಬಾ ಯೋಚನೆ ಮಾಡಿ ಮಾಡಿ ಸೃಷ್ಟಿ ಮಾಡಿದ ಕಲಾರತ್ನ ಎನ್ನುವಂತಿತ್ತು.

"ನೋಡಿ, ಕೇಳಿ" ಎರಡೇ ಮಾತು ಆಡಿದ್ದು, ಅಲ್ಲಿದ್ದ ಜನರೆಲ್ಲಾ ಸುತ್ತಾ ಮುತ್ತಾ ನೋಡಿದರು, ವಸಂತ ಕಾಲ ಅಲ್ಲ, ಕೋಗಿಲೆ ಕುಹೂ ಕುಹೂ ಎನ್ನೋಕೆ.

ಇದೇನಪ್ಪ ಈ ಶರದೃತುವಿನಲ್ಲೂ ಕೋಗಿಲೆಯ ದನಿ ಸಾಧ್ಯವೇ ಎನ್ನುವಷ್ಟು ಕುತೂಹಲದ ಗಂಗೆ ಎಲ್ಲರ ಕಣ್ಣುಗಳಲ್ಲಿಯೂ ಉಕ್ಕುತ್ತಿತ್ತು.

ಆಕೆ ಮತ್ತೆ ತನ್ನ ಮಧುರ ದನಿಯಿಂದ...

"ನೋಡಿ ಇಲ್ಲಿ ಕೇಳಿ. ನಾ ಸುಮಾರು ಹೊತ್ತಿನಿಂದ ಈ ನಿಮ್ಮ ಚರ್ಚೆಯನ್ನು ಗಮನಿಸುತ್ತಿದ್ದೇನೆ.. ನಿಮ್ಮ ಚರ್ಚೆಯ ಮೂಲವಸ್ತು ಒಂದು ಹೆಸರಿನ ಅರ್ಥದ ಬಗ್ಗೆ ಅಲ್ಲವೇ.. ""

ಎಲ್ಲರೂ ಮಂತ್ರ ಮುಗ್ಧರಾದಂತೆ ನಿಂತೇ ಇದ್ದರು, ಯಾರು ಮಾತಿಲ್ಲ.. ವಶೀಕರಣ ಮಾಡಿದ್ದಾರೆಯೋ ಎನ್ನುವಷ್ಟು ಅಲ್ಲಿದ್ದವೆರೆಲ್ಲ ಆ ನೋಟದ ಮಾತಿನ ಬಂಧನಕ್ಕೆ ಒಳಗಾಗಿದ್ದರು.

ಆಕೆ ನಿಧಾನವಾಗಿ ಮರದ ಮರೆಯಲ್ಲಿ ಸಂಕೊಂಚದಿಂದ ನಿಂತಿದ್ದ ತನ್ನ ಆಪ್ತ ಗೆಳತಿಯನ್ನು ಕರೆದುತಂದು.. "ನೋಡಿ ಇವರೇ.. ಇವರೇ ಆ ಹೆಸರಿನ ಒಡತಿ.. ಈಗ ಹೇಳಿ, ನಿಮ್ಮ ಚರ್ಚೆ ಏನು ಎಂದು.... ಇವರು ಎರಡು ನಿಮಿಷಗಳಲ್ಲಿ ನಿಮ್ಮ ಚರ್ಚೆಗೆ ಒಂದು ಪೂರ್ಣ ವಿರಾಮ ಇಡುತ್ತಾರೆ.. "

ಭಗವಂತ ಅಚಾನಕ್ ಪ್ರತ್ಯಕ್ಷವಾದರೆ ಹೇಗಿರುತ್ತೋ ಆ ಸ್ಥಿತಿ ಅಲ್ಲಿ ನೆರೆದಿದ್ದ ಎಲ್ಲರದಾಗಿತ್ತು..

ಅರ್ಪಿತ ತಾನೇ ಮಾತಾಡಲು ಶುರುಮಾಡಿದರು "ನೋಡಿ.. ಕೇಳಿ.. (ಇವರೆಡೆ  ಪದಗಳು ಸಾಕಾಗಿತ್ತು ಅಲ್ಲಿದ್ದವರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು).. ನಾನು ಭಗವಂತನನ್ನು ನೋಡಿಲ್ಲ, ಆದರೆ ಆ ಕಾಣದ ಶಕ್ತಿಯ ಬಗ್ಗೆ ಕೇಳಿದ್ದೇನೆ... ನಾನು ಬ್ರಹ್ಮನ ಯಾವುದೋ ಸೃಷ್ಠಿಯ ಕಡತದಲ್ಲಿದ್ದೆ.. ಇವರೇ ನೋಡಿ ನನ್ನನ್ನು ಅಲ್ಲಿಂದ ಎಳೆದು ತಂದು ಬ್ರಹ್ಮನ ಸೃಷ್ಠಿಗೆ ಮರು ಸೃಷ್ಠಿ ಮಾಡಿದ್ದಾರೆ.. ನನ್ನ ಹೆಸರಿಗಿಂತ ಇವರ ಹೆಸರ ಮೇಲೆ ವ್ಯಾಮೋಹ ನನಗೆ.. "

ಮತ್ತೆ ಎಲ್ಲರ ದೃಷ್ಟಿ ಇನ್ನೊಬ್ಬ ಆಕೆಯ ಮೇಲೆ ನೆಟ್ಟಿತು.

"ದೇವರೇ ಒಮ್ಮೆ ತನಗೆ ತಾನೇ ಹೇಳಿಕೊಳ್ಳುತ್ತಾನೆ, ಅಥವಾ ನಿವೆದಿಸಿಕೊಳ್ಳುತ್ತಾನೆ .. ಅಥವಾ ತನ್ನ ಭಕ್ತರಿಗೆ ಶರಣಾಗುತ್ತಾನೆ. ಅಂಥಹ ಹೆಸರು ಇವರದು. ಪುರಾತನ, ಅವಿನಾಶ ಭಾವ ಹೊತ್ತಿರುವ ಇವರ ಹೆಸರಿನ ಅರ್ಥ ವಿಸ್ತಾರವನ್ನು ಹೇಳ ಹೊರಟರೆ ಮುಗಿಯಲಸಾಧ್ಯ. ನಾನು ಇವರ ಬಳಿ ನಿವೇದಿಸಿಕೊಳ್ಳೋಣ ಎಂದು ಕೊಂಡಿದ್ದೆ, ಆದರೆ ಅಷ್ಟರಲ್ಲಿಯೇ ನನ್ನ ಮನದಾಳದ ಬಯಕೆಯನ್ನು ಅರಿತು ಇವರು ನನಗೆ ಒಂದು ಪಾತ್ರವನ್ನೇ ಅರ್ಪಿಸಿದರು. ನನಗೆ ದೇವರು ಹೇಗೆ ಏನು ಗೊತ್ತಿಲ್ಲ ಆದರೆ ಇವರೇ ನನಗೆ ದೇವರು.. ಇವರ ಹೆಸರು ನಿವೇದಿತ ಚಿರಂತನ್ .. ಅಂದರೆ ದೇವರಿಗೆ ಅರ್ಪಿತವಾದ, ಕಲಾ ಸಾಮ್ರಾಜ್ಯಕ್ಕೆ ಅರ್ಪಿತವಾದ, ತಮ್ಮ ಪ್ರತಿಭೆಯನ್ನು ಕಲಾದೇವಿಗೆ ಅರ್ಪಿಸಿರುವ, ಅವಿನಾಶ ಭಾವ ಅಥವಾ ಶಾಶ್ವತ ಭಾವ ಹೊಂದಿರುವ ಸುಂದರ ಮಾನವ ಸೃಷ್ಠಿ ಎಂದು ಅರ್ಥ"

"ಇದೆ ಪದಕ್ಕೆ / ಹೆಸರಿಗೆ ಅಲ್ಲವೇ ನೀವೆಲ್ಲಾ ಚರ್ಚೆ ಮಾಡುತ್ತಿದ್ದದ್ದು.. ನೋಡಿ ನಿವೇದಿತ ಚಿರಂತನ್ ಎನ್ನುವ ಹೆಸರೇ ನನ್ನ ಪಾತ್ರದ ಉಗಮಕ್ಕೆ ಕಾರಣವಾಗಿದ್ದು.. ಅದಕ್ಕಾಗಿಯೆ ಕಪಾಟಿನಲ್ಲಿದ್ದ ನನ್ನ ಪಾತ್ರ ಚಳಿಯನ್ನು ಲೆಕ್ಕಿಸದೆ ಹೊರಗೆ ಬಂದು ನಿಮ್ಮಗಳ ಅನುಮಾನ ಪರಿಹರಿಸಿದೆ. "

ಮತ್ತೆ ಇನ್ನೊಂದು ವಿಷಯ.. ಇಂದು ನನ್ನ ಒಡತಿಯ ಜನುಮದಿನ.. ಅವರಿಗೆ ಶುಭಾಶಯ ಹೇಳಲು ನಾ ಹೊರಗೆ ಬರಬೇಕು ಎಂದುಕೊಂಡಿದ್ದೆ. ಅವರು ಸೃಷ್ಠಿಸಿದ್ದ ಪಾತ್ರಗಳೆಲ್ಲ ಜೊತೆಯಾಗಿ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು, ಆದರೆ ನನಗೆ ಇವರ ಮೇಲೆ ಅದೇನೋ ಪ್ರೀತಿ.. ಹಾಗೆಯೇ ಇವರಿಗೆ ನನ್ನ ಮೇಲೆ ಅದೇನೋ ಪ್ರೀತಿ.. ಅ ಕಾರಣಕ್ಕೆ ನಾ ಬೇಗ ಪುಸ್ತಕದಿಂದ ಧುಮುಕಿ ಹೊರಗೆ ಬಂದೆ.. ಬನ್ನಿ ಬನ್ನಿ ಎಲ್ಲರೂ ಈ ಚುಮುಚುಮು ಚಳಿಯಲ್ಲಿ ಚಹಾ ಕುಡಿದು, ಶುಭಾಷಯ ಹೇಳೋಣ, ಮತ್ತೆ ನನ್ನ ಸಹ ಪಾತ್ರಗಳೆಲ್ಲ ನಮ್ಮ ಒಡತಿಯ ಸಂಭ್ರಮದ ದಿನಕ್ಕೆ ಒಂದು ಪುಟ್ಟ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.. ನಾ ಬೇಗನೆ ಹೋಗಬೇಕು ಅಲ್ಲಿಗೆ"

ಜಾದುಗಾರನ ವಶೀಕರಣದ ಮಂತ್ರದ ನೋಗದಿಂದ ಕಳಚಿಕೊಂಡವರಂತೆ ಜೋರಾಗಿ ಆ ಚಳಿಗೆ ಅನುಕೂಲವಾಗುವಂತೆ "ನಿವೇದಿತ ಚಿರಂತನ್" ಮೇಡಂ ನಿಮ್ಮ ಕಲಾ ಸಾಮ್ರಾಜ್ಯ ಪ್ರಜ್ವಲಿಸಲಿ, ನೀವು ಸೃಷ್ಠಿಸಿದ ಪ್ರತಿ ಪಾತ್ರಗಳು ಜೀವಂತವಾಗಿ ಓಡಾಡಲಿ, ನಿಮ್ಮ ಬರಹಗಳು ಪ್ರಪಂಚದ ಮೂಲೆ ಮೂಲೆಗೂ ಮುಟ್ಟಲಿ. ನಿಮ್ಮ ಚಿತ್ರಕಲೆ ಇನ್ನಷ್ಟು ಬೆಳಗಲಿ. ನೀವು ಅಡಿ ಇಟ್ಟ ಪ್ರತಿ ಪಥದಲ್ಲೂ ಮಾತೆ ಸರಸ್ವತಿ ಮತ್ತು ಮಾತೆ ಲಕ್ಷ್ಮಿ ಇವರಿಬ್ಬರ ಅನುಗ್ರಹ ಶಾಶ್ವತವಾಗಿ ನೆಲಸಲಿ" ಎಂದು ಜೋರಾಗಿ ಒಕ್ಕುರುಲಿನಿಂದ ಶುಭಾಷಯಗಳ ಸಂದೇಶವುಳ್ಳ ತಾಳೆಗರಿಗಳನ್ನು ಒಬ್ಬೊಬ್ಬರಾಗಿ ನಾಚಿಕೆಯಿಂದ ನಿಂತಿದ್ದ ನಿವೇದಿತ ಚಿರಂತನ್  ಅವರಿಗೆ ಕೊಟ್ಟರು.

ನಿವೇದಿತ ಚಿರಂತನ್ ಎಂದಿನಂತೆ ಮಾತು ಕಮ್ಮಿ. ಅತ್ತಿತ್ತ ನೋಡಿದರು ಕೀಲಿ ಮಣೆ ಇದ್ದರೇ ಮಾತಾಡೋಣ ಎಂದು.. ಆದರೆ ಹೃದಯ ತುಂಬಿಬಂದಿತ್ತು.. ಪದಗಳು ಹುಡುಕಾಡುತ್ತಿದ್ದವು

ಚಹದ ಅಂಗಡಿಯಲ್ಲಿ ವಿವಿಧ ಭಾರತಿಯಲ್ಲಿ ಬರುತ್ತಿತು "ಇದು ಆಕಾಶವಾಣಿ ಬೆಂಗಳೂರು ಕೇಂದ್ರದ ವಾಣಿಜ್ಯ ವಿಭಾಗ.. ಈಗ ಕೇಳಿ ನಮ್ಮೆಲ್ಲರ ಪ್ರೀತಿಯ ನಿವೇದಿತ ಚಿರಂತನ್ ಅವರ ಹುಟ್ಟು ಹಬ್ಬಕ್ಕೆ ಅರ್ಪಿತವಾದ ಈ ಸುಂದರ ಹಾಡು...

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಹಾಡದೆ ಉಳಿದಿಹ ಮಾತು ನೂರಿದೆ"

****

ಅಂತರ್ಜಾಲದಲ್ಲಿ ಸಿಕ್ಕ ಅದ್ಭುತ ಸ್ನೇಹಿತೆ ಇವರು. ಇವರು ಬರೆವ ಲೇಖನಗಳ ಅಭಿಮಾನಿ. ಅದ್ಭುತ ಅದ್ಭುತ ಎನ್ನಿಸುವ ಪಾತ್ರಗಳು, ಕಥೆಗಳನ್ನು ಹೆಣೆಯುವ ಇವರ ಕಲೆಗೆ ನಾ ಮೂಕನಾಗಿದ್ದೇನೆ. ಎಲ್ಲಾ ಕಥೆಗಳು ಕುತೂಹಲಕಾರಿಯಾಗಿರುತ್ತದೆ, ಒಂದು ಕಥೆ ಇನ್ನೊಂದರ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಬೆರಳುಗಳ ಹಾಗೆ, ಎಲ್ಲವೂ ವಿಭಿನ್ನ. ಇನ್ನು ಇವರು ಚಿತ್ರಕಲೆಯ ಬಗ್ಗೆ ಮಾತಿಲ್ಲ ಕಥೆಯಿಲ್ಲ, ನೋಡಿಯೇ ಆನಂದಿಸಬೇಕು.

ಇವರ ಮಾತಿನ ಶಕ್ತಿ ಬಹು ಪರಿಣಾಮಕಾರಿ. ಯಾವುದೇ ಗೊಂದಲವಿರಲಿ ಇವರ ಬಳಿ ಒಮ್ಮೆ ಮಾತಾಡಿದರೆ ಸಾಕು ಸ್ಪಟಿಕದಷ್ಟೇ ಸ್ಪಷ್ಟವಾಗುತ್ತದೆ. ಮಾತು ಮುಗಿದೊಡನೆ ಮನಸ್ಸು ನಿರಾಳವಾಗುತ್ತದೆ ಜೊತೆಯಲ್ಲಿ ಆ ಗೊಂದಲಗಳನ್ನು ಪರಿಹರಿಸುವ ಮಾರ್ಗವೂ ನಮಗೆ ಹೊಳೆದುಬಿಡುತ್ತದೆ. ಇದು ಅವರ ವಿಶ್ಲೇಷಣೆಯ ಚತುರಗಾರಿಕೆ.

ಹೊಗಳಿಕೆ ಅಲ್ಲಾ.. ಇದು ನನ್ನ ಮನದಾಳದ ಮಾತುಗಳು, ಲೇಖನವಾಗಿ ಮೂಡಿ ಬಂದಿದೆ. ದೇವರಿಗೆ ಒಂದು ದೊಡ್ಡ ಧನ್ಯವಾದ ಹೇಳಲೇ ಬೇಕು ಇಂಥಹ ಅದ್ಭುತ ಸ್ನೇಹಿತೆಯನ್ನು ಕೊಟ್ಟದ್ದಕ್ಕೆ, ಜೊತೆಯಲ್ಲಿ ಕುವೈತ್ ನಲ್ಲಿ ಪ್ರತಿಭಾ ಕಣಜವಾಗಿರುವ ಶ್ರೀ ಅಜಾದ್ ಅವರಿಗೂ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆ ಕಾರಣ, ಫೇಸ್ ಬುಕ್ ನಲ್ಲಿ ಅಜಾದ್ ಸರ್ ಕೊಟ್ಟ ನಿವೇದಿತ ಅವರ ಒಂದು ಬ್ಲಾಗ್ ಲೇಖನ ನನ್ನನ್ನು ಈ ನಿವೇದಿತ ಎಂಬ ಮಹಾನ್ ಪ್ರತಿಭೆಯ ಪರಿಚಯವಾಗಲುಕಾರಣವಾಯಿತು .

********

ನಿವಿ ಸಂಕೊಂಚ ಎನ್ನಿಸಿದರೆ ನನ್ನ ಕ್ಷಮೆ ಇರಲಿ.. ನಿಮ್ಮ ಹುಟ್ಟುಹಬ್ಬಕ್ಕೆ ಒಂದು ನಾಲ್ಕು ಸಾಲು ಬರೆಯಬೇಕೆಂಬ ಹಂಬಲ ಹೊತ್ತು ಶುರುಮಾಡಿದ್ದು ಒಂದು ಲೇಖನವೇ ಆಗಿ ಹೋಯಿತು.

*******

ಹುಟ್ಟು ಹಬ್ಬಕ್ಕೆ ಶುಭಾಶಯಗಳು ನಿವಿ, ನೀವು ಕಂಡ ಕನಸುಗಳೆಲ್ಲ ನನಸಾಗಲಿ. ಆ ನನಸಿನಲ್ಲಿ ನೆಮ್ಮದಿ, ಶಾಂತಿ, ನಗು ಎಲ್ಲವೂ ಸದಾ ನಿಮ್ಮ ಜೊತೆಯಲ್ಲಿ ಸಾಗಲಿ. ಮತ್ತೊಮ್ಮೆ ನನ್ನ ಪರಿವಾರದ ಸಮಸ್ತ ಅಭಿಮಾನಿ ದೇವರುಗಳ ಕಡೆಯಿಂದ ಶುಭಾಶಯಗಳು.. 

4 comments:

  1. ಅಕ್ಷರಗಳ ಗಾರುಡಿಗ ಹೀಗೆ ಜನುಮದಿನದ ಹಾರೈಸಿದರೆ ಯಾರಿಗೆ ತಾನೇ ತಮ್ಮ ಬಗ್ಗೆ ಹೆಮ್ಮೆ ಅನ್ನಿಸೋಲ್ಲ ಶ್ರೀಕಾಂತ್, ನಿಮ್ಮ ಖಜಾನೆಯಲ್ಲಿ ಅದೆಷ್ಟು ಒಳ್ಳೆಯ ವಿಚಾರಗಳ ಅಕ್ಷರ ಸಂಪತ್ತು ಇದೆಯೋ ಆ ಜ್ಞಾನ ಸರಸ್ವತಿಗೆ ಗೊತ್ತು. ನಿಜಕ್ಕೂ ನಮ್ಮೆಲ್ಲರ ಪ್ರೀತಿಯ ಸಹೋದರಿಗೆ ಒಂದು ಅದ್ಭುತ ನೆನಪಿನ ಉಡುಗೊರೆ . ನಿವೇದಿತ ಚಿರಂತನ್ ನಿಮ್ಮ ಜನುಮದಿನಕ್ಕೆ ನನ್ನದೂ ಕೂಡ ಶುಭ ಹಾರೈಕೆಗಳು . ನಿಮಗೆ ಸದಾ ಒಳಿತಾಗಲಿ, ನಿಮ್ಮ ಅಭೂತ ಪೂರ್ವ ಕೆಲಸಗಳು ನಿರಂತರ ಸಾಗಿ ಎಲ್ಲರಿಗೂ ಸಂತಸ ಕೊಡಲಿ. ನಮ್ಮೆಲ್ಲರ ಪ್ರೀತಿಯ ಸಹೋದರಿಯಾಗಿ ನಗು ನಗುತ್ತಾ ಹೀಗೆ ಬಾಳಿ . ಶುಭವಾಗಲಿ ನಿವೇದಿತ ಹಾಗು ಉಡುಗೊರೆ ನೀಡಿದ ಶ್ರೀ ಗೆ

    ReplyDelete
  2. ನಿಮಗೆ ನೆನಪಿದೆ ಅನ್ನೋದು ಆಶ್ಚರ್ಯವಾಗಬಾರದು ನನಗೆ. ಆದರೆ ನನಗೆ ಮರೆತು ಹೋಗಿತ್ತು ನನ್ನ ಹೆಸರಿನ ಅರ್ಥ ಕೇಳಿದ್ದರ ಬಗ್ಗೆ :D . ಹುಟ್ಟಿದ ಹಬ್ಬಕ್ಕೆ ಒಂದೆ ಸಾರಿಗೆ ಅಳು ನಗು ಎರಡು ಬರುವಂತೆ ಮಾಡೋದು ಯಾರಾದ್ರೂ ನೋಡಿ ಕಲಿಬೇಕು. ಧನ್ಯವಾದ ಬಹಳ ಚಿಕ್ಕ ಪದ ಆಯಿತು ಅಂತ ಬೇಜಾರಾಗ್ತಾ ಇದೆ. ಹೃದಯದಿಂದ ಧನ್ಯವಾದ ಅಷ್ಟೇ ಹೇಳಬಹುದು :D :D

    ReplyDelete
  3. ದ್ವಿಭಾಷಾ ಬ್ಲಾಗಿಣಿ, ಉತ್ತಮ ಛಾಯಾಗ್ರಾಹಕಿ ಮತ್ತು ಅಪರೂಪದ ವ್ಯಕ್ಯಿತ್ವದ ನಿವೇದಿತಾಜೀ ಅವರಿಗೆ ಜನುಮದಿನದ ಶುಭಾಶಯಗಳು.

    ReplyDelete
  4. ನಿವಿಯ ಪರಿಚಯ ಮತ್ತು ಶ್ರೀಮನ್ ನಿಮ್ಮ ಪರಿಚಯ ಮಾಡಿಸಿದ್ದು ಈ ಬ್ಲಾಗ್ ಪ್ರಪಂಚವೇ, ವಾಹ್ ವಾಹ್ ಸುಂದರ ಮನದಾಳದ ಮಾತುಗಳು. ನಿವಿ ಹೇಳಿದ್ದು ನಿಜ ಭಾವಪೂರ್ಣತೆಯ ಅಮಲು ಎಷ್ಟು ಹಿಡಿಸುತ್ತೀರೆಂದರೆ ಮಂದಹಾಸ ಮತ್ತು ಭಾವಪೂರ್ಣ ಧನ್ಯತೆಯ ಕಂಬನಿ ಒಮ್ಮೆಗೇ ತರುವ ಲೇಖಗಳಿಂದ. ನಿವಿ ದೇವರು ನಿನ್ನನ್ನು ನಿನ್ನ ಕುಟುಂಬವನ್ನು ನಿನ್ನನ್ನು ಈ ರೀತಿ ಹಾರೈಸಿದ ಶ್ರೀಮನ್ ರನ್ನು ಸದಾಕಾಲ ಖುಶ್ ಖುಶಿಯಾಗಿಟ್ಟಿರಲಿ.

    ReplyDelete