Wednesday, November 30, 2016

ಅಪ್ರತಿಭಾ ಜೋಡಿ ಶಶಿ-ಪ್ರತಿಭಾ!!!

ತುಂಹೆ ಕೊಹಿ ಔರ್ ದೇಕೆ
ತೊ ಜಲ್ ತಾ ಹೇ ದಿಲ್
ಬಡಿ ಮುಷ್ಕಿಲೋ ಸೆ ಫಿರ್ ಸಂಬಲ್ತಾ ಹೇ ದಿಲ್

ಪ್ರತಿಭಾ ಅಕ್ಕಯ್ಯನನ್ನ ನೆನೆಸಿಕೊಂಡಾಗೆಲ್ಲ (ಮರೆಯೋಕೆ ಅವರು ಎಲ್ಲಿ ಅವಕಾಶ ಕೊಡ್ತಾರೆ) ಈ ಮೇಲಿನ ಹಾಡು ನೆನಪಿಗೆ ಬರುತ್ತೆ. ಅದೇನೋ ಗೊತ್ತಿಲ್ಲ ನನ್ನ ಮೇಲಿನ ಅವರ ಅಭಿಮಾನ ೧೮ ವರ್ಷಗಳಿಂದ ಹಾಗೆ ಹೆಚ್ಚುತ್ತಲೇ ಇದೆ. ನಿಮಗೆ ಸ್ನೇಹಿತರು, ಬ್ಲಾಗ್, ಫೇಸ್ಬುಕ್, ವಾಟ್ಸಾಪ್ ಬಳಗ ಹೆಚ್ಚಾಯಿತು.. ನಾವೆಲ್ಲಾ ಎಲ್ಲಿ ನೆನಪಲ್ಲಿ ಇರ್ತೀವಿ. ಇದು ಈಚೆಗೆ ನಾಲ್ಕೈದು ವರ್ಷಗಳಿಂದ ನನ್ನ ಮೇಲಿರುವ ದೊಡ್ಡ ಆಪಾದನೆ ಅಕ್ಕಯ್ಯನ ಕಡೆಯಿಂದ.. :-(

ಶಾಂತವಾಗಿದ್ದ ಶಶಿ.. ಕಾಲಚಕ್ರದ ಜೊತೆಯಲ್ಲಿ ಹಲವಾರು ಬಾರಿ ತಾಳ್ಮೆ ಕಳೆದುಕೊಂಡು ಕೂಗಾಡಿದ್ದು ನೋಡಿದ್ದಿದೆ (ತಿರುಪತಿ ಪ್ರವಾಸ :-) ) ಆದರೆ ಅಕ್ಕಯ್ಯ.. ನನ್ನ ಮೇಲೆ ಕೂಗುವುದು ಅಂದಿಗೂ ಹಿಟ್ ಎಂದೆಂದಿಗೂ ಹಿಟ್..

೧೯೯೮ ರ ನವೆಂಬರ್ ೩೦ ರಂದು ವಿವಾಹ ಬಂಧನದಲ್ಲಿ ಒಂದಾದ ಈ ಸುಮಧುರ ಮನಸ್ಸಿನ ಜೋಡಿಗಳು ಅಮೋಘ ೧೮ ವಸಂತಗಳನ್ನು ದಾಟಿದ್ದಾರೆ..

ಈ ಶುಭ ಸಂದರ್ಭದಲ್ಲಿ ಬರೆಯೋದಾ, ಏನು ಬರೆಯೋದು.. ಹೇಗೆ ಬರೆಯೋದು.. ನೀಟಾಗಿ ಬಾಚಿಕೊಂಡಿದ್ದ ಕೂದಲನ್ನು ಒಮ್ಮೆ, ಮತ್ತೊಮ್ಮೆ ಕೆರೆದುಕೊಂಡು ಕೆದರಿಕೊಂಡೇ..

ನನ್ನ ಮದುವೆಗೆ ಮುಂಚಿನ ದಿನಗಳು.. ಹೀಗೆ ರಾಮನಗರಕ್ಕೆ ವೆಂಕಿಯ ಮನೆಗೆ ಹೋಗೋದು ಎಂದು ತೀರ್ಮಾನಿಸಿ..  ನಾವು ನಾಲ್ವರು ಪಾಂಡವರು (ಶಶಿ, ವೆಂಕಿ, ಲೋಕಿ ಮತ್ತು ನಾನು .. ಜೆ ಎಂ ಅವಾಗ ಅಮೇರಿಕಾದಲ್ಲಿದ್ದ)   ಜೊತೆಯಲ್ಲಿ ಪ್ರತಿಭಾ ಅಕ್ಕಯ್ಯ ಹೊರಟೆವು.. ..

ವೆಂಕಿಯ ಮನೆಯಲ್ಲಿ ರಾಜಾತಿಥ್ಯ.. ಹೊಟ್ಟೆ ತುಂಬಾ ತಿಂಡಿ ಊಟ ಎಲ್ಲವೂ ಆಯಿತು.. ಮಾತಾಡಿದಷ್ಟು ಕಡಲಲ್ಲಿ ಅಲೆಗಳು ಮತ್ತೆ ಮತ್ತೆ ಬಂದು ಬಡಿಯುವ ಹಾಗೆ, ವಿಷಯಗಳು ಹೊರಬರುತ್ತಲೇ ಇದ್ದವು.. ಮೊದಲೇ ಆತಿಥ್ಯದಿಂದ ಊದುಕೊಂಡಿದ್ದ ಹೊಟ್ಟೆ, ನಕ್ಕು ನಕ್ಕು ಇನ್ನಷ್ಟು ದೊಡ್ಡದಾಯಿತು.. ನಾವೆಲ್ಲಾ ಅಕ್ಷರಶಃ ಹೆಬ್ಬಾವಿನ ತರಹ ಆಗಿದ್ದೆವು.. ಒಂದು ನಿಮಿಷ ಸುಮ್ಮನೆ ಕೂತರೆ.. ನಿದ್ರಾದೇವಿ "ಬಾರ್ಲಾ ಶ್ರೀಕಾಂತ ಅಲ್ಲೇ ಮರದ ಕೆಳಗೆ ನಿದ್ದೆ ಮಾಡುವಂತೆ.. " ಅಂತ ಕೈಬೀಸಿ ಕರೆಯುತ್ತಿದ್ದಳು..

ಶಶಿ ನಿದ್ರಾದೇವಿಗೆ ಸ್ಟೇ ಆರ್ಡರ್ ಕೊಟ್ಟು "ನಿದ್ರಾದೇವಿಯಮ್ಮ ಶ್ರೀಕಿ ಬಸ್ ನಲ್ಲಿ ನಿಂತು ಕೊಂಡೆ ನಿದ್ದೆ ಮಾಡುವ ಆಸಾಮಿ ಅವನಿಗೆ ಈ ರೀತಿಯ ಓಪನ್ ಪರ್ಚೆಸ್ ಆರ್ಡರ್ ಕೊಡಬೇಡ.." ಅಂತ ಹೇಳ್ತಾ ಇದ್ರೆ ಪಕ್ಕದಲ್ಲಿದ್ದ ಅಕ್ಕಯ್ಯ..

"ಶ್ರೀ ನಿದಿರಾಪೋಥಾರು.. ಲಿಪಿಂಚಂಡಿ.. ಮಲಿ,  ವಾಕ್ ಚೆಸೆಕಿ ಪೊದಾಮು" .. ಆರ್ಡರ್ ಸಿಕ್ಕ ಕ್ಷಣ  ಎಲ್ಲರೂ ನಿಧಾನವಾಗಿ ಕಾಳೆದುಕೊಂಡು ಹೊರಗೆ ಬಂದೆವು.. ಯಥಾ ಪ್ರಕಾರ.. ಬಂದೂಕಿನ ನಳಿಗೆ ನನ್ನ ಕಡೆ ತಿರುಗಿತು.. "ಜಾನಪದ ಲೋಕ" ಅಂದೇ..

ಎಲ್ಲರೂ ಲೋಕಾಭಿರಾಮವಾಗಿ ಮಾತಾಡುತ್ತಾ.. ಅಲ್ಲಿಗೆ ಬಂದೆವು.. ಸೊಗಸಾಗಿತ್ತು.. ಉದ್ಯಾನವನದಲ್ಲಿ ಓಡಾಡಿ, ಜಾನಪದ ಲೋಕದ ಆ ಪ್ರತಿಕೃತಿಗಳನ್ನು ನೋಡುತ್ತಾ, ಇಡೀ ಲೋಕದ ಕತೃವನ್ನು ಮನದಲ್ಲಿಯೇ ನೆನೆಸಿಕೊಂಡು, ಅವರ ಸಾಹಸಕ್ಕೆ ಅಭಿನಂದನೆ ಸಲ್ಲಿಸಿ.. ಒಂದೆರಡು ಘಂಟೆಗಳನ್ನು ಕಳೆದೆವು.. ಹೆಬ್ಬಾವಾಗಿದ್ದ ದೇಹ ನಿಧಾನವಾಗಿ ಹಕ್ಕಿಯ ಹಾಗೆ ಹಗುರಾಯಿತು.. ಜೊತೆಯಲ್ಲಿದ್ದ ಶಶಿಯ ಕ್ಯಾಮೆರಾ ತನ್ನ ಕೈಚಳಕ ನೀಡುತ್ತಲೇ ಇತ್ತು.. ಸುಮಾರು ಹೊತ್ತು ಹುಲ್ಲು ಹಾಸಿನ ಮೇಲೆ ಕೂತು.. ವಿಶ್ರಮಿಸಿಕೊಂಡೆವು.. ಒಂದು ಗ್ರೂಪ್ ಫೋಟೋ ತೆಗೆದುಕೊಳ್ಳೋಣ ಅಂದು ಕೊಂಡಾಗ.. ಒಬ್ಬೊಬ್ಬರಿಗೆ ಒಂದು ವಿಚಿತ್ರ ಭಂಗಿ ಕೊಡುವುದು ಎಂದು ನಿರ್ಧಾರವಾಯಿತು..

ಮೊದಲಿಗೆ ಶಶಿ ಮತ್ತು ಅಕ್ಕಯ್ಯನ ಜೋಡಿ ಫೋಟೋ ತೆಗೆದುಕೊಂಡೆವು.. ನಂತರ.. ಶಶಿ ಮತ್ತು ಪ್ರತಿಭಾ ಒಂದು ಕಲ್ಲಿನ ಮೇಲೆ ಕೂತಿರುವ ಭಂಗಿಯಲ್ಲಿ ಫೋಟೋ ತೆಗೆದಿದ್ದು ಆಯ್ತು.. ನಾನು ಶಶಿ ಪ್ರತಿಭಾರನ್ನು ನೀನು ಕೂರಿಸಿಕೋ ಒಂದು ಫೋಟೋ ತೆಗೆಯುವ ಅಂದೇ.. ಆಗ ಸುಮ್ಮನಿದ್ದ ಅಕ್ಕಯ್ಯ.. ಫೋಟೋ ತೆಗೆದ ಮೇಲೆ.. "ಅಣ್ಣ.. ಈಗ ನಿಮ್ಮ ಸರದಿ ಎಂದರು.. ಆಗ ಮದುವೆಯಾಗಿದ್ದು ಶಶಿ ಮಾತ್ರ.. ನಾನು ಹಲ್ಲು ಬಿಟ್ಟೆ.. ವೆಂಕಿ ಮಗನೆ ಸರಿಯಾಗಿ ಸಿಕ್ಕಿಕೊಂಡೆ ಸಾಯಿ ನೀನು ಅಂತ ಬಯ್ದ..

ಆಗ ಪ್ರತಿಭಾ ಅಕ್ಕ ಒಂದು ಅದ್ಭುತ ಉಪಾಯ ಕೊಟ್ಟರು.. "ಶ್ರೀಕಿ ಮತ್ತು ವೆಂಕಿ ಯಾವಾಗಲೂ ಜೊತೆಯಲ್ಲಿಯೇ ಓಡಾಡುತ್ತಾರೆ. ಹಾಗಾಗಿ ಅವರಿಬ್ಬರೂ ಒಬ್ಬರ ಮೇಲೆ ಒಬ್ಬರು ಕೂರಿಸಿಕೊಂಡಿರುವ ಭಂಗಿಯಲ್ಲಿ ಫೋಟೋ ತೆಗೆಯೋಣ.. " ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆ ಅಂದು..

ಹಠದಲ್ಲಿ ಕಿತ್ತೂರು ಚನ್ನಮ್ಮ ನಮ್ಮ ಪ್ರತಿಭಾ ಅಕ್ಕಯ್ಯ.. ಸರಿ ಆ ಹಠಕ್ಕೆ ಸೋಲಲೇ ಬೇಕಾಯಿತು (ಬೇರೆ ದಾರಿ ಇತ್ತೇ).. ನಾ ಮೊದಲು ವೆಂಕಿಯನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಫೋಟೋ ತೆಗಿಸಿಕೊಂಡೆ.. ನಂತರ ವೆಂಕಿ ತೊಡೆಯ ಮೇಲೆ ನಾನು..

ನಮ್ಮ ಸ್ನೇಹ ಬಳಗದಲ್ಲಿ ಪಂಕ್ತಿ ಭೇದವಿಲ್ಲ ಎನ್ನುವುದಕ್ಕೆ ಈ ಪ್ರಸಂಗ ಉದಾಹರಣೆ.. ನಾವು ಯಾರೂ ಕಮ್ಮಿ ಅಲ್ಲ.. ಯಾರೂ ಹೆಚ್ಚು ಅಲ್ಲ.. ಎಲ್ಲರೂ ಸಮಾನರು .. ಈ ನಮ್ಮ ಗೆಳೆತನದ ಭದ್ರ ಕೋಟೆಗೆ.. ಇನ್ನಷ್ಟು ಭದ್ರತೆಯ ಗೋಡೆ ಕಟ್ಟಿ ಸುಭದ್ರಾ ಮಾಡಿದವರು ನಮ್ಮ ಪ್ರತಿಭಾ ಅಕ್ಕಯ್ಯ..

ಅಕ್ಕಯ್ಯ ಮತ್ತು ಶಶಿಯ ವಿವಾಹ ದಿನದ ಸಂದರ್ಭದಲ್ಲಿ.. ಶುಭಾಶಯಗಳನ್ನು ಕೋರುವ ಸಂತಸ ನಮ್ಮದು.

ನಾ ಕಂಡ ಅದ್ಭುತ ಜೋಡಿಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಶಶಿ ಮತ್ತು ಪ್ರತಿಭಾ.. ವಿವಾಹ ದಿನಕ್ಕೆ ಶುಭಾಶಯಗಳು!!!


1 comment:

  1. Wish you both happy wedding anniversary Shashi Anna and Pratibha Akka.. God bless with more happiness

    ReplyDelete