"ಸಡಗರದಿಂದ ಗಗನದ ಅಂಚಿಂದ
ಸುರರು ಬಂದು,
ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ
ಎನುತಿರಲು ನಾದಮಯ ಈ ಲೋಕವೆಲ್ಲಾ"
ಎಷ್ಟು ನಿಜ ಈ ಸಾಲುಗಳು.. ಶ್ರೀ ಚಿ ಉದಯಶಂಕರ್ ಅವರ ಬರೆದ ಸರಳ ಸುಂದರ ಸಾಲುಗಳು ಇವು..
ನಮ್ಮನ್ನು ಸ್ವಾಗತಿಸಿದ ಫಲಕ |
ಈ ಭುವಿಯೇ ನಾದಮಯವಾಗಿರುವಾಗ.. ನಾದಕ್ಕೆ ಅಧಿದೇವತೆ ಶಾರದೆ.... ಅವಳ ವರಪ್ರಸಾದವೇ ಈ ವಿದ್ಯೆ. ಮನುಜನಿಗೆ ಜ್ಞಾನ ದಾಹವನ್ನು ಕೊಟ್ಟು ಅದನ್ನು ಇಂಗಿಸಿಕೊಳ್ಳಲು ಗುರುಗಳನ್ನು ಸೃಷ್ಟಿಸಿ.. ಆ ಗುರುಗಳು ಇರಲು ಗುರುಕುಲ ಸೃಷ್ಟಿಸಿ ಅಲ್ಲಿ ವಟುಗಳು ಎಂಬ ವಿದ್ಯಾರ್ಥಿಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಈ ಗುರುಕುಲಗಳು ಅರ್ಥಾತ್ ಶಾಲೆಗಳು ಮಾಡುತ್ತಲೇ ಇವೆ ..
ಆಗಾಗ ಕತ್ತೆತ್ತಿ ಆಕಾಶ ನೋಡುತ್ತಿದ್ದೆ.. ನಿಮ್ಮ ಊಹೆಗೆ ಉತ್ತರ ಕೊಡುವೆ.. ಬೆಂಗಳೂರನ್ನು ವಾರಗಳ ಗಟ್ಟಲೆ ಕಾಡಿದ ಮಳೆ ಬರುತ್ತದೆ ಎನ್ನುವ ಆತಂಕವಿರಲಿಲ್ಲ.. ಬದಲಿಗೆ ಮೇಲೆ ಹೇಳಿದ ಹಾಡಿನ ಸಾಲಿನಂತೆ.. ನೆಡೆಯುತ್ತೇನೋ ಅನ್ನುವ ಕುತೂಹಲ..
ಜನಸಾಗರ ಸೇರುತ್ತಿತ್ತು ಮೆಲ್ಲಗೆ |
ಉತ್ಸಾಹದಿಂದ ನೆರೆದಿದ್ದ ವಿದ್ಯಾರ್ಥಿ ವೃಂದ |
ಶ್ರೀಮತಿ ಆನಿಬೆಸಂಟ್ ಶುರುಮಾಡಿದ ಈ ಶಾಲೆಗೆ ಈಗ ಶತಮಾನದ ಸಂಭ್ರಮ..೧೯೧೭ ರಿಂದ ಅವಿರತವಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ವಿದ್ಯಾರ್ಥಿಗಳನ್ನು ನೀಡುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ನಾವು ಓಡಾಡಿದ್ದೇವೆ ಓದಿದ್ದೇವೆ ಎನ್ನುವುದೇ ನಮಗೆ ಹೆಮ್ಮೆಯೆನಿಸುತ್ತದೆ... ಅಂತಹುದರಲ್ಲಿ ಈ ಶಾಲೆಯ ಏಳಿಗೆಗೆ ತನು ಮನ ಧನ ಅರ್ಪಿಸಿದ ಸಾವಿರಾರು ಗುರುಗಳ ಮನಸಿಗೆ ಎಂಥಹ ಅನುಭವ ಅಲ್ಲವೇ ..!
ಈ ಶಾಲೆಯಲ್ಲಿ ಸಿಕ್ಕಿದ ಜ್ಞಾನದ ಅನುಭವಾಮೃತವನ್ನು ಸವಿದು ಸಮಾಜದಲ್ಲಿ ತಮ್ಮ ತಮ್ಮ ಸ್ಥಾನ ಕಂಡುಕೊಂಡ ಪ್ರತಿಭಾ ಪುಂಜವೇ ಇಲ್ಲಿದೆ.. ಏನನ್ನೂ ಹೇರದೆ.. ಭಾರವನ್ನು ಭಾರವೆಂದು ಗಮನ ಬಾರದ ಹಾಗೆ ಇಲ್ಲಿಯ ಗುರುಗಳು ಹೇಳಿಕೊಟ್ಟ ಪ್ರತಿ ಪದವೂ ನಮ್ಮ ಹೃದಯದೊಳಗೆ ಇಳಿದು ಕೂತಿದೆ..
ಬರಿ ಅಂಕಪಟ್ಟಿಯನ್ನು ತುಂಬಿಸೋದೇ ಶಾಲೆಯಲ್ಲ ಬದಲಿಗೆ ಅಂಕೆಗೆ ಸಿಗದ ಮನಸ್ಸಿಗೆ ಒಂದು ನಿರ್ದಿಷ್ಟ ಗುರಿಯನ್ನು ಹಾಕಿಕೊಟ್ಟು ಅದನ್ನು ಸಾಧಿಸುವ ಪರಿ ಹೇಳಿಕೊಟ್ಟ ರೀತಿ ಅನನ್ಯ ..
ನೂರರ ಸಂಭ್ರಮಕ್ಕೆ ಒಂದು ವೇದಿಕೆಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಹಿಂದೆ ಓದಿದ ವಿದ್ಯಾರ್ಥಿಗಳನ್ನು ಸೇರಿಸುವ ಒಂದು ಅವಕಾಶವಾಗಿ ಕೂಡಿ ಬಂದಿದ್ದು ಸಂಗೀತ ಸಂಜೆ.. ತಿಥಿ ವಾರ ನಕ್ಷತ್ರ ಹೇಗೆ ಕೂಡಿ ಬಂದಿದೆ ನೋಡಿ.. ಇಂದಿನ ವಾರ ಶುಭವಾರ ಇಂದಿನ ಕರಣ ಶುಭ ಕರಣ ಎನ್ನುವಂತೆ.. ಸುಂದರ ಸಂಜೆಗೆ ಸಜ್ಜಾಗಿತ್ತು ನ್ಯಾಷನಲ್ ಹೈ ಸ್ಕೂಲು..
ಇಂದಿನ ವಾರ ಶುಭವಾರ ಇಂದಿನ ಕರಣ ಶುಭಕರಣ |
ಶಾಲೆಯ ಆವರಣದಲ್ಲಿ ಬಂದಿದ್ದ ವಿದ್ಯಾರ್ಥಿಗಳ ಸಂಪರ್ಕ ವಿಳಾಸ ಸಂಗ್ರಹಿಸುತ್ತಿದ್ದ ತಂಡ.. ಬಂದವರನ್ನು ನಗುಮೊಗದಿಂದ ಸ್ವಾಗತಿಸಿ ಅವರ ವಿವರಗಳನ್ನು ಪಡೆದುಕೊಂಡು ಶಾಲೆಯ ಪ್ರಾರ್ಥನಾ ಗೀತೆಯನ್ನು ಕೊಡುತ್ತಿದ್ದರು ..
ವಯಸ್ಸು ಬರಿ ಸಂಖ್ಯೆ ಅಷ್ಟೇ.. ಉತ್ಸಾಹಕ್ಕೆ ಎಲ್ಲಿದೆ ಎಲ್ಲೇ |
ವಿವರಗಳನ್ನು ತುಂಬುತ್ತಿರುವ ಸಹಪಾಠಿ |
ಶಾಲೆಯೊಳಗೆ ಹೆಜ್ಜೆ ಹಾಕಿದಾಗ.... "ಹೌದು ಇಲ್ಲೇನೋ ಇದೆ" ಎನ್ನುವ ಒಂದು ತರಂಗದ ಕಂಪನ ಅಲ್ಲಿಗೆ ಬಂದಿದ್ದವರನ್ನು ಒಮ್ಮೆ ಅಲುಗಾಡಿಸಿದದ್ದು ಸುಳ್ಳಲ್ಲ.. ಬಂದವರು ಶಾಲೆಯ ಒಳಗೆಲ್ಲ ಓಡಾಡುತ್ತಾ ತಮ್ಮ ಶಾಲೆಯ ಕೊಠಡಿಯನ್ನು ಕಂಡು ತೃಪ್ತರಾದವರು ಕೆಲವರು.. ತಮ್ಮ ಮಕ್ಕಳ ಜೊತೆಯಲ್ಲಿ ಬಂದು.. ನೋಡು ಮಗು ಇದೆ ಕೊಠಡಿಯಲ್ಲಿ ಓದುತ್ತಿದ್ದದು.. ಇಲ್ಲೇ ಕೂರುತ್ತಿದ್ದೆ... ಎಂದು ಒಂದು ಕ್ಷಣಕ್ಕೆ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿದ್ದರು..
ನಾ ಒಂಭತ್ತು ಹತ್ತನೇ ತರಗತಿ ಓದಿದ ಕೊಠಡಿ |
ಪ್ರಾರ್ಥನಾ ಗೀತೆಯೊಂದಿಗೆ ಶುರುವಾದಾಗ.. ನನ್ನ ಮೈಮನ ನಿಧಾನವಾಗಿ ಕಂಪಿಸುತ್ತಿತ್ತು.. ರೋಮಾಂಚಕಾರಿ ಅನುಭವ ನನಗಾದದ್ದು ನಿಜ..
ಪ್ರಾರ್ಥನೆ |
ಕಾರ್ಯಕ್ರಮ ಶುರುವಾಯಿತು.. ದೀಪವ ಬೆಳಗುವ ಮೂಲಕ..
ಆರಂಭ |
ನಂತರ ಶ್ರೀ ಎ ಎಚ್ ಆರ್ ರವರು ಶಾಲೆಯ ಮುಂದಿನ ಯೋಜನೆಗಳನ್ನು ಹಾಗೂ ಶಾಲೆಯ ಶತಮಾನದ ಸಂಭ್ರಮಾಚರಣೆಯ ಬಗ್ಗೆ ಹೇಳಿದರು..
ಶ್ರೀ ಎಚ್ ಏನ್ ಆರ್ ರವರು ಫೋರಮ್ಮಿನ ಅಚ್ಚುಕಟ್ಟಾದ ಕಾರ್ಯಗಳನ್ನು ಹೇಳಿದರು..
ಅಗಲಿದ ಹಲವಾರು ಗುರುಗಳಿಗೆ ಒಂದು ಕ್ಷಣ ಕಾಲ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಿದೆವು.
ನಂತರ ಶುರುವಾಯಿತು..
ನಾದಮಯ….
ಎನ್ ಎಚ್ ಎಸ್ ಎಲ್ಲಾ ನಾದಮಯ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಎನ್ ಎಚ್ ಎಸ್ ಎಲ್ಲಾ ನಾದಮಯ
ಗುರುಗಳ ಮಾಧುರ್ಯ ಪಾಠದ ಸೌಂದರ್ಯ
ಶಿಷ್ಯರ ತಣಿಸೆ, ವಿದ್ಯಾರ್ಥಿಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ,
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು, ಹರಿಯ ಕಂಡು ಹರುಷದಿ
ಎನ್ ಎಚ್ ಎಸ್ ಸ್ವರ್ಗ... ಎನ್ ಎಚ್ ಎಸ್ ಸ್ವರ್ಗ ಎನುತಿರಲು
ನಾದಮಯ ಈ ಎನ್ ಎಚ್ ಎಸ್ ಎಲ್ಲಾ
ಶಿಕ್ಷಣದಿಂದ ಗುರುಗಳು ಆನಂದ ತಂದಿರಲು
ನಾದಮಯ....ಈ ಎನ್ ಎಚ್ ಎಸ್
ನಾದಮಯ ನಾದಮಯ..
ಸಂಗೀತ ಸಾಗರದ ಹರಿಸಿದ ಪ್ರತಿಭಾವಂತರು |
ಗಾನ ಸುಧೆ |
ನಲವತ್ತೈದು ಐವತ್ತು ನಿಮಿಷಗಳು ಕ್ಷಣಕಾಲದಂತೆ ಓಡಿತು.. ಸಂಗೀತ ಶಾರದೆಯನ್ನು ಧರೆಗೆ ಇಳಿಸಿದ್ದರೆ .. ಕೆಲ ವಿದ್ಯಾರ್ಥಿಗಳ ತಂಡ ತಮ್ಮನ್ನು ಬೆಳೆಸಿದ ಶಾಲೆಗೇ ಅಳಿಲು ಸೇವೆ ಎಂದು ತಾಯಿ ಲಕ್ಷ್ಮಿ ಕಟಾಕ್ಷವನ್ನು ಶಾಲೆಯ ಮುಖ್ಯಸ್ಥರಿಗೆ ನೀಡಿದರು..
ರಂಗಿನಲ್ಲಿ ಸಂಭ್ರಮ |
ಜ್ಞಾನದ ಒಡತಿ ಮತ್ತು ಧನದ ಒಡತಿ ಒಂದೇ ಕಡೆ ಸೇರಿ ಜ್ಞಾನ ಧನವಾದರು..
ಹೆಮ್ಮೆಯ ಕಲಾವಿದೆ |
ನೂರರ ಸಂಗೀತ ಸಂಜೆಗೆ ಇನ್ನಷ್ಟು ಮೆರುಗು ನೀಡಿದ್ದು ಅಲ್ಲೇ ನಿಂತು ಬಿಡಿಸಿದ ಚಿತ್ರ.. ಶ್ರೀಮತಿ ಸುಮನ ಜಗದೀಶ್ ಅವರು ರಚಿಸಿದ ಸುಂದರ ಚಿತ್ರ.. ಇಲ್ಲಿ ಎಲ್ಲವೂ ಇತ್ತು.. ನೂರರ ಸಂಭ್ರಮ.. ಆದಿ ಪೂಜಿತ ಗಣಪ.. ನಮ್ಮ ಶಾಲೆಯ ಹೆಮ್ಮೆಯ ಗಡಿಯಾರದ ಗೋಪುರ.. ಎಲ್ಲವೂ ಒಳಗೊಂಡಿತ್ತು.. ಅವರಿಗೆ ಅಭಿನಂದನೆಗಳು ..
ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಸುತ್ತುವರೆದು ತಮ್ಮ ತಮ್ಮ ಗೌರವಗಳನ್ನು ಸಲ್ಲಿಸಿದ್ದು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿತ್ತು..
ಸುಮಾರು ಎರಡುಘಂಟೆಗಳು ಹೃದಯಕ್ಕೆ ಸಂತಸ ನೀಡಿದರೆ.. ಕಾರ್ಯಕ್ರಮದ ಅಂಚಿನಲ್ಲಿ ಉಪಹಾರ ನಾಲಿಗೆಯ ರುಚಿಕೋಶಗಳನ್ನು ತಣಿಸಿದವು..
"ಸ್ನೇಹಿತರೆ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ" ಅಕ್ಷರಶಃ ನಿಜಯಾಗಿತ್ತು ..
ಮನೆಗೆ ಹೊರಟಾಗ ಮನಸ್ಸು ಹಾಡುತಿತ್ತು.. "ಈ ಭಾವ ಗೀತೆ ನಿನಗಾಗಿ ಹಾಡಿದೆ.. "
"ಓ ನನ್ನ ಗುರುಕುಲವೇ ನನ್ನ ಹೆಜ್ಜೆಗಳನ್ನು ರೂಪಿಸಿದ
ನಿನಗೆ ಹೇಗೆ ಧನ್ಯವಾದಗಳನ್ನು ಅರ್ಪಿಸಲಿ
ಧನದಿಂದಲೇ ಮನದಿಂದಲೇ ತನುವಿನಿಂದಲೇ?"
ಶಾಲೆ ಹೇಳಿತು..
ಶ್ರದ್ಧಾ ಹೀ ಪರಮಾಗತಿಹಿ!!!
ಶ್ರೀ HVR ವಿಶ್ವಮಹಾಯುಧ್ಧವನ್ನು ಕಣ್ಣ ಮುಂದೆ ತಂದಿಟ್ಟ ಗುರುಗಳು |
ಹೆಸರಾಂತ ವಿದ್ಯಾರ್ಥಿ |
ನೆಚ್ಚಿನ ಗುರುಗಳ ಜೊತೆಯಲ್ಲಿ ನನ್ನ ಗೆಳೆಯರು |
ಭದ್ರ ಬುನಾದಿ ಹಾಕಿಕೊಟ್ಟಾ ಗುರುಗಳು ಶ್ರೀ MKL |
ಗುರುಗಳ ಜೊತೆಯಲ್ಲಿ ಕಲಾವಿದೆ |
ಇನ್ನೊಂದು ವಿದ್ಯಾರ್ಥಿಗಳ ತಂಡ ನಮ್ಮ ಗುರುಗಳ ಜೊತೆಯಲ್ಲಿ |
ನೂರರ ಸಂಭ್ರಮದ ಒಂದು ಝಲಕ್ ನಮಗೆ ನೀಡಿದ ವಿದ್ಯಾರ್ಥಿ ತಂಡಕ್ಕೂ.. ಅಧ್ಯಾಪಕರ ತಂಡಕ್ಕೂ.... ಹೇಳುವ ಒಂದೇ ಮಾತು "ಎಂದರೋ ಮಹಾನುಭಾವುಲು ಅಂದರೇಕಿ ವಂದನಮೂ"
ಎಂದರೋ ಮಹಾನುಭಾವುಲು ಅಂದರೇಕಿ ವಂದನಮು |