Sunday, October 15, 2017

ಸ್ನೇಹಕ್ಕೆ ಒಂದೇ ಮಾತು - ನ್ಯಾಷನಲ್ ಹೈ ಸ್ಕೂಲ್ ನಲ್ಲಿ ಬಂಗಾರದ ಕ್ಷಣಗಳು

"ಕಾಲವನ್ನು ತಡೆಯೋರು ಯಾರು ಇಲ್ಲ.. ಗಾಳಿಯನ್ನು  ಹಿಡಿಯೋರು ಎಲ್ಲೂ ಇಲ್ಲ.. ನಿಮ್ಮಿಂದ ನನ್ನ ನನ್ನಿಂದ ನಿಮ್ನ ದೂರ ಮಾಡಲು ಎಂದೂ ಆಗಲ್ಲ"  ಕಿಟ್ಟು ಪುಟ್ಟು ಚಿತ್ರದ ಹಾಡು ಪದೇ ಪದೇ ನೆನಪಾಗುತ್ತಿತ್ತು..

ಹೌದು ನೆನಪುಗಳು ಕೊಡುವ ಕಿಕ್ ಯಾವ ಮದ್ಯವೂ ಕೊಡೋಲ್ಲ.. ಆ ನೆನಪುಗಳ ದಿನಕ್ಕೆ ಹೋಗಿ ತೇಲಿಬರುವಾಗ ಸಿಗುವ ಖುಷಿ ಸದಾ ಅಮರ ಮಧುರ.. :-)

ಹಲವಾರು ಮಾಸಗಳೇ ಕಳೆದು ಹೋಗಿದ್ದವು.. ಶಾಲಾ ದಿನಗಳಿಗೆ ಮರಳುವ ಒಂದು ಅವಕಾಶ ಹಠಾತ್ ಒದಗಿಬಂತು.. ಸುಮ್ಮನೆ ಶುರುಮಾಡಿದ ಒಂದು ಸಂದೇಶದ ಸರಪಣಿ.. ಅನೇಕ ಸ್ನೇಹಿತರನ್ನು ಭೇಟಿ ಮಾಡುವ ಸದವಕಾಶ ಸಿಕ್ಕಿತು.. ನಾನು ಬರುವೆ ಅಂತ ಕಡ್ಡಿ ಮುರಿದಹಾಗೆ ಕೆಲವರು .. ನಾ ಬಂದರೆ ಬರುವೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಎರಡು ಕಡೆ ಪ್ರಕಾಶ ಚೆಲ್ಲುವ ದೀಪದಂತೆ ಉತ್ತರ ಕೊಟ್ಟವರು ಕೆಲವರು.. ಕರೆ ಮಾಡಿದ್ದಕ್ಕೆ ಕಾರಣಾಂತರಗಳಿಂದ ಬರಲು ಆಗದೆ ಇದ್ದವರು ಕೆಲವರು.. ಹೀಗೆ ನಮ್ಮ ಶಾಲಾ ಗುಂಪು ಒಂದು ಕಡೆ ಬೆಳೆಯುತ್ತಲೇ ಇದೆ..

ಸಾಮಾಜಿಕ ತಾಣ ನಮ್ಮ ಶಾಲಾದಿನಗಳಲ್ಲಿ ಇರಲಿಲ್ಲ.. ಆದರೆ ಒಬ್ಬರಿಗೊಬ್ಬರು ಸಂಪರ್ಕ ಹೊಂದಬೇಕು ಎಂಬ ತುಡಿತ ಅಂದಿನಿಂದ ಇದ್ದೆ ಇತ್ತು..

ಹೇ ಶ್ರೀ.. ಈ ಕಥೆ ಗೊತ್ತು ಬೇರೆ ಏನಾದರೂ ಹೇಳು..

ತಲೆ ತಿರುಗಿಸಿ ಧ್ವನಿ ಬಂದ ಕಡೆ ನೋಡಿದೆ.. ನನ್ನ ಕಪಾಟಿನಲ್ಲಿದ್ದ ******* ಕೂಗುತ್ತಿತ್ತು..  ಬರೋಬ್ಬರಿ ಮೂರುವರೆ ತಿಂಗಳು ಅದರಿಂದ ದೂರವಿರಬೇಕಿತ್ತು..

ಮೆಲ್ಲಗೆ ಅದರ ಮೈ ಸವರಿದೆ.. ತಕ ತಕ ಕುಣಿಯುವ ಅದರ ಹೃದಯ ಬಡಿದ ಕೇಳುತ್ತಿತ್ತು.. "ಎಷ್ಟು ದಿನ ಆಯಿತು ಶ್ರೀ "

"ಹೌದು ಹೌದು ಕಾರಣ ನಿನಗೆ ಗೊತ್ತಲ್ವಾ.. "

"ಶ್ರೀ.. ನಾನೇ ಹೇಳುತ್ತೇನೆ ಇಂದಿನ ಕಥೆಯನ್ನ"

ನಾ ಹೂಂ ಗುಟ್ಟದೆ ಬೇರೆ ದಾರಿಯಿರಲಿಲ್ಲ..

ಸರಿ ಮುಂದಿನ ಕಥೆ.... ಕಪಾಟಿನಲ್ಲಿದ ********** ಕಡೆಯಿಂದ

*****

ಹೊಟ್ಟೆ ಹಸಿದಿತ್ತು .. ಹಲವಾರು ದಿನಗಳಿಂದ ಕತ್ತಲೆ ಗೂಡಲ್ಲಿ ಕೂತಿದ್ದೆ.. ಒಂದು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದ ನಾನು ನನ್ನ ಯಜಮಾನನ ಬೇಡಪ್ಪ ಅನ್ನುವಂತಹ ಕ್ಷಣಗಳಿಗೂ ನಾ ಸಾಕ್ಷಿಯಾಗಿದ್ದೆ..

ಇಂದು ನನ್ನ ಯಜಮಾನ ನನ್ನ ಮೈ ಸವರಿದಾಗ.. ಏನೋ ಒಂದು ರೀತಿಯ ಪುಳಕ .. ತನ್ನ ಪ್ರಾಣದಂತೆ ನೋಡಿಕೊಂಡಿದ್ದ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟಿದ್ದ.. ತನ್ನ ಮಾಮೂಲಿ ಅಭ್ಯಾಸದಂತೆ ಬಾಸಿನ ಚಿತ್ರ ತೆಗೆದು ಹೊರಟಾಗ.. ಕುಪ್ಪಳಿಸಿ ಕುಪ್ಪಳಿಸಿ ಕುಣಿದಿದ್ದೆ.. ಅರೆ ಇದಕ್ಕಿಂತ ಮುಂಚೆ ನನ್ನ ಹೊಟ್ಟೆಗೆ ತುಂಬಾ ಊಟ ಹಾಕಿದ್ದ.. ನಾ ಸಿದ್ಧವಾಗಿದ್ದೆ..

ವಾಣೇಶ.. ವೆಂಕಿ ಮತ್ತು ರೂಪ ಶ್ರೀ ಕಾಯುತ್ತಲಿದ್ದರು.. ನಾ ಗಾಡಿಯಲ್ಲಿ ಬಂದಿದ್ದು ಚಳಿಯಾಗಿತ್ತು.. ಮೆಲ್ಲಗೆ ಮೈ ನಡುಗುತ್ತಿತ್ತು.. "ಯಾಕೋ ಶ್ರೀಕಿ ಚಳಿಯೇನೋ ಶ್ರೀಕಿ" ಅಂದ ವೆಂಕಿ... "ಹೌದು ಕಣೋ" ಎಂದು ಬಂದಿದ್ದವರಿಗೆ ವಿಶ್ ಮಾಡಿ ಇನ್ನೂ ಬರದಿದ್ದವರಿಗೆ ಕರೆ ಮಾಡಲು ಶುರುಮಾಡಿದ ನನ್ನ ಯಜಮಾನ!

ಒಬ್ಬೊಬ್ಬರಾಗಿ ಬರಲು ಶುರುಮಾಡಿದರು .. ಇಪ್ಪತ್ತು ನಿಮಿಷ.. ಶಾಲಾದಿನಗಳಲ್ಲಿ ಅಲ್ಲಿಗೆ ಹೋಗುವುದೇ ಒಂದು ಅಪರಾಧ ಅಥವಾ ಅಪರಾಧ ಮಾಡಿದವರು ಮಾತ್ರ ಅಲ್ಲಿಗೆ ಹೋಗುವುದು ಎನ್ನುವ ಭಾವ ಹುಟ್ಟಿಸಿದ್ದ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬಂದವರೆಲ್ಲ ಕೂತಿದ್ದರು.. !

ಶ್ರೀ ಡಿ ವಿ ಎನ್ ಸರ್ ಬಂದವರನ್ನು ಕರೆದು ಮಾತಾಡಿಸಿದರು.. ಉಭಕುಶಲೋಪರಿ ಸಾಂಪ್ರತ ಆಯಿತು.. ಒಂದು ಅದ್ಭುತವಾದ ವಿಚಾರ ಹೇಳಿದರು.. ಶಾಲಾದಿನಗಳ ಬಗ್ಗೆ ನಂತರ ಬದಲಾದ ಸಮಾಜದ ಸ್ಥಿತಿ ಗತಿ ಶಾಲೆಯ ಸ್ಥಿತಿ ಎಲ್ಲವನ್ನು ಹಾಗೆ ಕಣ್ಣ ಮುಂದೆ ತಂದರು.. ನಾನು ಅಲ್ಲಿನ ದೃಶ್ಯಗಳನ್ನು ನನ್ನ ಹೊಟ್ಟೆಯೊಳಗೆ ತುಂಬಿಸಿಕೊಳ್ಳುತ್ತಿದ್ದೆ..  ನನಗೇನೋ ಐತಿಹಾಸಿಕ ಕ್ಷಣಕ್ಕೆ ನಾ ಸಾಕ್ಷಿಯಾಗುತ್ತಿದ್ದೀನಿ ಅನ್ನುವ ಭಾವ..
ಇಂದಿನ ಕಥೆ ಹೇಳಿದ ನನ್ನ ಗೆಳೆಯ  :-)

ಒಂದು ರೀತಿಯಲ್ಲಿ ನಿಜವೂ ಆಗಿತ್ತು.. ಗೆಳೆತನ ಎಂಬುದು ಒಂದು ಐತಿಹಾಸಿಕ ಕ್ಷಣವೇ ಅಲ್ಲವೇ.. ಅಂದು ಅಲ್ಲಿ ಸೇರಿದ್ದವರು  ಅಸಾಧ್ಯವಾದ ರೀತಿಯಲ್ಲಿ ಒಬ್ಬರಿಗೊಬ್ಬರು ಸೆಳೆತಕ್ಕೆ ಒಳಗಾಗಿದ್ದರು . ೧೯೮೮ರಲ್ಲಿ ಶಾಲೆ ಮುಗಿಸಿ ಅವರವರ  ಬದುಕು ತೋರಿದಂತೆ ಅಥವಾ ಅವರವರ ಯೋಗ್ಯತೆಗೆ ತಕ್ಕಂತೆ ಸಮಾಜದಲ್ಲಿ ಅವರ ಸ್ಥಾನಕ್ಕೆ ತಲುಪುವ ಪಥಕ್ಕೆ ತೆರಳಿದ್ದೆರು . ಮತ್ತೆ ಆ ನಂಟು ಹೀಗೆ ಅನೇಕ ಭೇಟಿಗಳಲ್ಲಿ ಬೆಸೆದು ಬಂದಿತ್ತು..

ನನ್ನ ಯಜಮಾನನ ಸ್ನೇಹಿತ ಸತೀಶ ಟಿ ಎನ್ ಅನೇಕ ಭೇಟಿಗಳ ನಂತರ ಸಿಕ್ಕಿದ್ದ.. ಇವನ ನೆನಪಿನ ಶಕ್ತಿ ಅದ್ಭುತ.. ಶಾಲಾದಿನಗಳ ಚಿಕ್ಕ ಪುಟ್ಟ ಸಂಗತಿಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಹೇಳುತ್ತಿದ್ದ ರೀತಿ ಸಕತ್ ಖುಷಿ ಕೊಟ್ಟಿತ್ತು.. ಹೌದಾ ಇವೆಲ್ಲಾ ನೆಡೆದಿತ್ತಾ ಅಥವಾ ಹೌದು ಇವೆಲ್ಲ ನೆಡೆದಿತ್ತು.. ಆದರೆ ಅವರಿಗೆಲ್ಲಾ ಬೇಕಾದ ಹಾಗೆ ನೆನಪುಗಳ ಗುಚ್ಛ ಸಂತಸ ತಂದಿತ್ತು..

ಅಸಾಧಾರಣ ಎನ್ನುವ ರೀತಿಯಲ್ಲಿ ಒಬ್ಬೊಬ್ಬರು ತಮ್ಮ ನೆನಪಿನ ಬುಟ್ಟಿಗಳನ್ನು ಬಿಚ್ಚುತ್ತಾ ಹೋಗಿದ್ದು ಇಂದಿನ ದಿನಕ್ಕೆ ಇನ್ನಷ್ಟು ಉತ್ಸಾಹ ತುಂಬಿತ್ತು.. ಕೆಲವು ಘಟನೆಗಳು ಜೀವನವನ್ನು ಬದಲಿಸಿ ಬಿಡುತ್ತೆ.. ಹೌದು ಶಾಲಾದಿನಗಳ ಆ ಪಾಠಗಳು,ಆಟಗಳು ಎಲ್ಲರ ಹವ್ಯಾಸಗಳು ಬದುಕಿಗೆ ಒಂದು ತಿರುವು ಕೊಡುವಲ್ಲಿ ಸಫಲವಾಗಿತ್ತು.

ವೆಂಕಿಯ ನಗೆಚಟಾಕಿಗಳು, ಯೋಗೀಶನ ಎಲ್ಲಾ ಮರಗಳಿಗೂ ಕಲ್ಲು ಹೊಡೆಯುವ ತಾಕತ್ತು, ಪ್ರಸಾದ್ ಮತ್ತು ಶ್ರೀಧರನ ಜಯಂಟ್ ರೋಬಾಟ್ ಕಥೆಗಳು, ಕ್ರಿಶ್ನೋಜಿ ಕ್ರಿಕೆಟ್ ಕಥೆಗಳು.. ಶಶಿಯ ಹ್ಯಾಂಡ್ ಟೆನ್ನೀಸ್.. ಬಾಲಾಜಿಯ ಟೆನಿಸ್ ಫುಟ್ಬಾಲ್.. ನಮಮ್ ಉಪಾಧ್ಯಾಯರ ಪಾಠ ಹೇಳುವ ವೈಶಿಷ್ಟ್ಯ ಎಲ್ಲವೂ ಮಾತುಗಳಲ್ಲಿ ನುಗ್ಗಿ ಬಂದಿತ್ತು..

ಕೆಲವೊಮ್ಮೆ ಆ ದಿನಗಳಲ್ಲಿ ನೆಡೆದ  ಆದರೆ ಇವರ ಗಮನಕ್ಕೆ ಬಾರದ ಅಥವಾ ಇವರು ಆ ಘಟನೆಗಳ ಕಡೆಗೆ ಮುಖ ಮಾಡದ ಎಷ್ಟೋ ಕಥೆಗಳು ಇಂದು ಅನಾವರಣಗೊಳ್ಳುತ್ತಿದ್ದವು.. ಅವಿರತವಾಗಿ ಮಾತನಾಡುವ ಎಲ್ಲರ ತವಕ ಖುಷಿ ನೀಡಿತ್ತು..

ಶಾಲಾ ಉಪಾಧ್ಯಾಯರ ಜೊತೆಯಲ್ಲಿ ಮಾತುಕತೆ.. ಒಂದಷ್ಟು ಚಿತ್ರಗಳು.. ಈ ಘಟನೆಗಳಿಗೆ ಪುರಾವೆ ನೀಡಿದ್ದವು..
ಮುಖ್ಯೋಪಾಧ್ಯಾಯರು ಶ್ರೀ ಡಿ ವಿ ಎನ್  ಸರ್ 






ಎಷ್ಟು ಮಾತಾಡಿದರೂ ದಣಿಯದ ಮನಸ್ಸು.. ಇನ್ನಷ್ಟು ಹೊತ್ತು ಇರಬೇಕು ಎನ್ನುವ ಹಂಬಲ ಎಲ್ಲರಿಗೂ ಇತ್ತು.. ಆದರೆ... ರೇ ರೇ ರೇ..

ಮತ್ತೊಂದು ದಿನಕ್ಕೆ ಮನಸ್ಸು ಹಾತೊರೆಯುತ್ತಾ ಎಲ್ಲರಿಗೂ ಶುಭ ವಿದಾಯ ಹೇಳಿತು .

ನನ್ನ ಯಜಮಾನ ನನ್ನನ್ನು ಮತ್ತೆ ನನ್ನ ಗೂಡಿಗೆ ಸೇರಿಸಿದಾಗ ನನಗೆ ಅರಿವಾಗಿದ್ದು ಅನೇಕ ದಿನಗಳ ನನ್ನ ವನವಾಸ ಮುಗಿದು ಮತ್ತೆ ಮರಳಿ ಜಗತ್ತಿಗೆ ಬಂದಿದ್ದು ನನಗೆ ಹೊಸತನ ನೀಡಿತ್ತು..

ನನ್ನ ಲೇಖನ ಸಪ್ಪೆ ಅನ್ನಿಸುತ್ತಿದೆಯೇ.. ಇಲ್ಲಾ ಮಸಾಲೆ ಕಡಿಮೆ ಆಯಿತೇ.. ಹೌದು ಅಲ್ಲವೇ.. ನಾಲಿಗೆ ರುಚಿ ಕಡಿಮೆಯಾಗಿದ್ದಾಗ ಹೊಸ ರುಚಿ ನಾಲಿಗೆ ಹತ್ತದ ರೀತಿಯಿರಬಹುದೇ.. ಕತ್ತಲೆಯಲ್ಲಿದ್ದ ನಾನು ಈಗ ತಾನೇ ಹೊರಗೆ ಬಂದಿದ್ದೇನೆ.. ಮತ್ತೆ ಮರಳಿ ಬರುವ ಚೈತನ್ಯ ಸಿಕ್ಕಿದೆ ನನ್ನ ಯಜಮಾನನ ಹುಮ್ಮಸ್ಸಿನಿಂದ.. ಒಂದು ಅದ್ಭುತ ಭರ್ಜರಿ ಕಥೆಯೊಡನೆ ಮತ್ತೆ ಬರುವೆ.. ಅಲ್ಲಿಯ ತನಕ ನನಗೆ ಅನುಮತಿ ನೀಡಿ.. ಜೊತೆಯಲ್ಲಿ ನಾ ಇಂದು ತೆಗೆದ ಕೆಲವು ಚಿತ್ರಗಳನ್ನು ನೋಡಿ.. ಸಾಧಾರಣ ಅನ್ನಿಸುತ್ತೆ ಆದರೆ.. ಇದಕ್ಕೆ ಹೊಂದಿಕೊಂಡಿರುವ ಆ ಮಧುರ ನೆನಪುಗಳು ಹಾಡುವ ಹಾಡು ಒಂದೇ..

"ಸ್ನೇಹಕ್ಕೆ ಒಂದೇ ಮಾತು.. ಹೃದಯಗಳು ಆಡೋ ಮಾತು.. ಈ ಮೌನ ಇನ್ನೂ ಏತಕೆ.. ಕೂಡುವ ಹಾಡುವ ಹಾರುವ.. "

******

ಗೆಳೆಯರೇ ನಮ್ಮ ಶಾಲೆ ಆರಂಭವಾಗಿ ನೂರು ವರ್ಷಗಳು ತುಂಬಲಿವೆ.. ಆ ಅದ್ಭುತ ಕ್ಷಣಗಳನ್ನು ಸೆರೆಹಿಡಿಯಲು ಮತ್ತು ಇನ್ನೂ ಅನೇಕ ಸ್ನೇಹಿತರರನ್ನು ಭೇಟಿ ಮಾಡಲು ಎಲ್ಲರ ಮನಸ್ಸು ಹಾತೊರೆಯುತ್ತಿದೆ..

ಇದೆ ತಿಂಗಳು ೨೮ರಂದು ಶನಿವಾರ ಸಂಜೆ ೪. ೦೦ ಘಂಟೆಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಂಭ್ರಮದಿಂದ ನೆಡೆಸುವ ಸಂಗೀತ ಕಾರ್ಯಕ್ರಮ ಮತ್ತಷ್ಟು ಸ್ನೇಹಿತರವನ್ನು ಸೇರಿಸಬಹುದು ಅಥವಾ ಅವರ ಬಗ್ಗೆ ವಿವರಗಳು ಸಿಗಬಹುದು..
ಅಕ್ಟೋಬರ್ ೨೮ ರಂದು ಶನಿವಾರ ಸಂಗೀತ ಸಂಜೆ 


"ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ. " ... ಬರಲೇ  ಬೇಕು ಅಲ್ಲವೇ.. ಸ್ನೇಹದ ತಾಕತ್ತೇ ಅದು..

ಮುಂದಿನ ಕಾರ್ಯಕ್ರಮಕ್ಕೆ ಕಾಯುತ್ತಿರುವ  :-)

3 comments:

  1. Samayakke koneyide....maathigalla....

    ReplyDelete
  2. ಕಳೆದ ಶಾಲಾ ದಿನಗಳ ನೆನಪುಗಳಿಗೆ ಸ್ನೇಹಿತರ ಸಾಕ್ಷಿಯಲ್ಲಿ ಮರುಜೀವ ಕೊಟ್ಟು ನಿಮ್ಮ ಬ್ಲಾಗ್ ಪುಟಗಳಲ್ಲಿ ಮೂಡಿಸಿದ ನಿಮ್ಮ ಗೆಳೆಯನಿಗೊಂದು ಪ್ರೀತಿಯ ಗುದ್ದು..
    ಮತ್ತೆ ಮತ್ತೆ ಈ ಸವಿ ನೆನಪುಗಳು ಮರುಕಳಿಸುತ್ತಿರಲಿ.. ನಿಮ್ಮ ಬರಹಗಳಿಗೆ ಪ್ರೇರಣೆಯಾಗಲಿ..
    ಸುಂದರ ಭಾವಚಿತ್ರಗಳ ಜೊತೆ ಸುಂದರ ಬರಹ..

    ReplyDelete
  3. Beautiful write up. Thanks for the memories. Wish I could have been there yesterday. But for a previous commitment. Dr.shankara prasad

    ReplyDelete