Sunday, December 30, 2018

ಮತ್ತೆ ಬಾಲ್ಯಕ್ಕೆ ಶಾಲಾದಿನಗಳ ಕಡೆಗೆ.. 30.12.2018

​​
ಗೆಳೆತನ ಎಂದರೇನು..

ಶಾಲೆದಿನಗಳಲ್ಲಿಯಾಗಲಿ, ಸಹೋದ್ಯೋಗಿಗಳ ಜೊತೆಯಾಗಲಿ ಒಂದಷ್ಟು ಅದ್ಭುತ ಕ್ಷಣಗಳನ್ನು ನೆನೆಪಿಸಿಕೊಂಡು ಖುಷಿ ಪಡುವ ಆ ಘಳಿಗೆಗಳು ಅತ್ಯಮೂಲ್ಯ..

ಗೆಳೆತನ ಶುರುವಾಗೋದು ನಮ್ಮ ಪದವಿ, ಅಂತಸ್ತು, ಸಾಮಾಜಿಕ ಸ್ಥಾನಗಳಿಂದಲ್ಲ.. ಶುದ್ಧ ಮನಸ್ಸಿನ ಸರೋವರವದು.. ನಾವೆಲ್ಲಾ ಭೇಟಿಯಾಗೋದು ಇಂದು ನಾವೇನಾಗಿದ್ದೇವೆ ಎಂಬುದಕ್ಕಲ್ಲ.. ಅಂದು ನಾವು ಗೆಳೆಯರಾಗಿದ್ದೆವು ಇಂದೂ ಆ ಗೆಳೆತನದ ಭಾವವನ್ನು ಮುಂದುವರೆಸಿಕೊಂಡು ಹೋಗೋಣ ಎನ್ನುವ ಮನೋಸ್ಥಿತಿಯಿಂದ ಮಾತ್ರ ಭೇಟಿ ಸಾಧ್ಯ..

ಹೇಗೆ ನಿಂತಿದ್ದೇವೆ ಎನ್ನುವುದಕ್ಕಿಂತ ಗೆಳೆಯರ ಜೊತೆ ನಿಲ್ಲುವುದು ಮುಖ್ಯ..
(ಎಲ್ಲಾ ಗಾಡಿಗಳು ಒಂದು ದಿಕ್ಕಿನಲ್ಲಿ ನಿಂತಿದ್ದಾರೆ...
ಒಂದೇ ಒಂದು ಗಾಡಿ ವಿರುದ್ಧ ದಿಕ್ಕಿನಲ್ಲಿ ನಿಂತಿದೆ..
ಈ ಚಿತ್ರ ತೆಗೆಯಲು ಸ್ಫೂರ್ತಿ ನೀಡಿದ ರೂಪಶ್ರೀಗೆ ವಂದನೆಗಳು) 

ನ್ಯಾಷನಲ್ ಹೈ ಸ್ಕೂಲಿನಲ್ಲಿ ಓದಿದ್ದ ನಮ್ಮ ಸಹಪಾಠಿಗಳನ್ನು ಸುಮಾರು ೨೦೧೧ಇಸವಿಯಿಂದ ಅಂದ್ರೆ ಸುಮಾರು ಏಳು ವರ್ಷಗಳಿಂದ  ಭೇಟಿ ಮಾಡುತ್ತಲೇ ಇದ್ದೇವೆ.. ವರ್ಷ ವರ್ಷಕ್ಕೂ ಬರುವ ಗೆಳೆಯರ ಸಂಖ್ಯೆ ಬೆಳೆಯುತ್ತಿದೆ.. ಖುಷಿಯ ಸಂಗತಿ..  ಹಲವಾರು ವರ್ಷಗಳ ನಂತರ ಭೇಟಿಯಾದಾಗ ಸಿಗುವ ಆ ಖುಷಿ.. ಸಾಮಾಜಿಕ ಜಾಲತಾಣಗಳಿಲ್ಲದ ನಮ್ಮ ಆ ದಿನಗಳಿಂದ.. ಇಂದು ಬೆರಳಿನ ತುದಿಯಲ್ಲಿ ಪ್ರಪಂಚವೇ ಸಿಗುವ ಈ ದಿನಗಳ ನಡುವೆ ನಮ್ಮ ಗೆಳೆತನ ಗಟ್ಟಿಯಾಗಿ ನಿಂತಿರುವುದು ನಮ್ಮ ಶುದ್ಧ ಮನಸ್ಥಿತಿಯಿಂದ, ಗೆಳೆತನಕ್ಕೆ ಹಾತೊರೆಯುವ ನಮ್ಮೆಲ್ಲರ ಮನಸ್ಸಿನಿಂದ ಮಾತ್ರ..

ಅನಿಲ್,  ಗಿರೀಶ್ (ಎಚ್ ಡಿ ಮತ್ತು ಕೆ ಎಸ್), ಕಿರಣ್, ವೆಂಕಟೇಶ, ಚಂದ್ರಪ್ರಭ, ಕುಸುಮ, ನರೇಂದ್ರ ಇವರೆಲ್ಲಾ ಮೊದಲ ಬಾರಿಗೆ ಸಿಕ್ಕಾಗ ಸಂಭ್ರಮಿಸಿದ ಘಳಿಗೆಗಳು ಸೊಗಸಾಗಿದ್ದವು..

ಇಂದು ಕುಸುಮ ಮೊದಲ ಬಾರಿಗೆ ನಮ್ಮ ಗೆಳೆತನದ ಭೇಟಿಗೆ ಬಂದಾಗ.. ಅವರ ಮಾತುಗಳಲ್ಲಿ ನಾ ಕಂಡಿದ್ದು.. ಹೇಗೆ ಮಾತಾಡುವುದು, ಏನು ಮಾತಾಡುವುದು ಎನ್ನುವ ಗೊಂದಲ ಎನ್ನುವುದಕ್ಕಿಂತ ಹಿಂಜರಿಕೆ.. ಆದರೆ ನಮ್ಮ ವೆಂಕಿ ಇದ್ದಾನಲ್ಲ. ಅವನು ಯಾರನ್ನು ಆ ಗೊಂದಲದಲ್ಲಿ ಇರಲು ಬಿಡುವುದಿಲ್ಲ.. ಅವರ ಲೆವೆಲ್ಲಿಗೆ ಹೋಗಿ ಮೆಲ್ಲಗೆ ಕೈಹಿಡಿದು ನಮ್ಮೆಲ್ಲರ ಲೆವೆಲ್ಲಿಗೆ ಕರೆತರುವ ಅವನ ಮಾತುಗಳಿಗೆ ಸೋಲದವರು ಯಾರಿದ್ದಾರೆ..


ಸ್ವಲ್ಪ ಹೊತ್ತಿನಲ್ಲಿಯೇ ಕುಸುಮ ಸಹಜವಾಗಿ ಮಾತಾಡಲು ಶುರುಮಾಡಿದಳು... ಶಶಿ ಜೊತೆ ಫಾರ್ಮಲ್ ಆಗಿ ಆಡುತ್ತಿದ್ದ ಮಾತುಗಳು ವೆಂಕಿ ಬಂದಮೇಲೆ ಆರಾಮಾಗಿ ಶುರುವಾಯಿತು.. ನಂತರ ಲೀಲಾ, ರೂಪ, ಚಂದ್ರಪ್ರಭ ಬಂದ ಮೇಲೆ ಇನ್ನಷ್ಟು ಹಗುರಾಯಿತು.. ಆಗ ಸಿಕ್ಕಿದ್ದು ಮಾಸ್ಟರ್ ಸ್ಟ್ರೋಕ್ ಗಿರೀಶ್.. ಅವನ ಲೀಲಾಜಾಲವಾದ ಮಾತುಗಳು ಎಲ್ಲರನ್ನು ಇನ್ನಷ್ಟು ಹಗುರ ಮಾಡಿತು.. ಇಂದು ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬೆಳೆದು ನಿಂತಿದ್ದೇವೆ ನಿಜ.. ಆದರೆ ನಮ್ಮ ಭೇಟಿ ನಾವು ಮೂರು ವರ್ಷ ಹೈ ಸ್ಕೂಲ್ ದಿನಗಳ ಗೆಳೆತನದ ಸುತ್ತ ಮಾತ್ರ ಸುತ್ತುತ್ತಿತ್ತು..


ಅಮೆರಿಕಾದಲ್ಲಿರುವ ರಮೇಶ್ ಸ್ಕೈಪ್ ಆಪ್ ಮೂಲಕ ನಮ್ಮೆಲ್ಲರ ಜೊತೆ ಮಾತಾಡಿದ್ದು..  ಬಹಳ ವರ್ಷಗಳ ನಂತರ ಸಿಕ್ಕಿದ್ದು ಅವನಿಗೂ ಖುಷಿ.. ಗೆಳೆಯನ ಜೊತೆ ಮಾತಾಡಿದ್ದು ನಮಗೂ ಖುಷಿ.. ಸುಮಾರು ಹದಿನೈದು ನಿಮಿಷಗಳು ಕರೆ ಮೂವತ್ತು ವರ್ಷಗಳ ಇತಿಹಾಸವನ್ನು ರೀವೈ೦ಡ್ ಮಾಡಿತ್ತು...

ಪ್ರಸಾದ್ ಬಂದ...  ಮಾತುಗಳು ಇನ್ನಷ್ಟು ಹಾಸ್ಯವನ್ನು ತುಂಬಿಕೊಂಡವು.. ಗೆಳೆಯರ ಕಾಲು ಎಳೆಯುವುದು, ನಗುವುದು ನೆಡೆದಿತ್ತು.. ಶ್ರೀಧರ ಬಂದ ಮೇಲೆ ವೆಂಕಿಯ ಸುತ್ತಾ ಮಾತುಗಳು ಜಾಸ್ತಿಯಾದವು.. (ಇಲ್ಲ ಇಲ್ಲ ಮುತ್ತತ್ತಿ ಅಡಿಗೆಯ ವಿಷಯ ಮಾತಾಡೋಲ್ಲ). ಮಾತು ಮಾತು ಮಾತು ಮುಗಿಯದಷ್ಟು ಮಾತುಗಳು.. ಗಿರೀಶನ ಶಾಲಾದಿನಗಳ ಘಟನೆಗಳು, ಹದಿನೈದು ವರ್ಷಗಳು ಸತತವಾಗಿ ಈ ಕೆಳಗಿನ ಶ್ಲೋಕವನ್ನು ಹೇಳಿದ ದಾಖಲೆ ಅವನದು ..

ಯಂ ಬ್ರಹ್ಮಾವರುಣೇಂದ್ರ ರುದ್ರಮರುತಃ
ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದ್ಯೆಸ್ಸಾಂಗಪದಕ್ರಮೋಪನಿಷದೈಃ
ಗಾಯಂತಿ ಯಂ ಸಾಮಗಾಃ
ಧ್ಯಾನಾವಸ್ಥಿತ ತದ್ಗತೇನ ಮನಸಾ
ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ಮಿದುಸ್ಸುರಾಸುರ ಗಣಾಃ
ದೇವಾಯ ತಸ್ಮೈ ನಮಃ.. ಇನ್ನೂ ಇದೆ..


ಮಾತುಗಳ ಬತ್ತಳಿಕೆ ಮುಗಿದಿರಲಿಲ್ಲ.. ಆದರೆ ಹೊಟ್ಟೆ ಚುರುಗುಟ್ಟುತ್ತಾ ಇತ್ತು.. ಹಾಗಾಗಿ.. ಎಸ್ ಎಲ್ ವಿ ಕಡೆಗೆ ಹೆಜ್ಜೆ ಹಾಕಿದೆವು.. ಅಲ್ಲಿ ತಿಂದದ್ದು ಹೋಟೆಲಿನವ ತಂದು ಕೊಟ್ಟಿದ್ದನ್ನು ಆದರೆ.. ಅದರಿಂದ ಹೊಟ್ಟೆ ತುಂಬಿದ್ದಕಿಂತ ನಮ್ಮೆಲ್ಲರ ಹಾಸ್ಯ ಚಟಾಕಿಗಳಿಂದ ಹೊಟ್ಟೆ ತುಂಬಿದ್ದು ಹೆಚ್ಚು.. ಕೆಲವರಿಗೆ ಕಣ್ಣಲ್ಲಿ ನೀರು ತರಿಸುವಷ್ಟು ನಗೆ ಬಂದರೆ, ಇನ್ನು ಕೆಲವರಿಗೆ ಮಾತಾಡಲು ಆಗದಷ್ಟು ನಗೆ ಹೂರಣ ಬಡಿಸಿತ್ತು.. ಗಿಜಿಗಿಜಿ ಗುಟ್ಟವ ಭಾನುವಾರದ ದಿನವೂ, ನಮ್ಮ ಮಾತುಗಳಿಂದ ಅಲ್ಲಿ ಒಂದು ದೊಡ್ಡ ಸ್ಫೋಟವೇ ಆಗಿತ್ತು... ಅಕ್ಕಪಕ್ಕದವರ ಪರಿವೆ ನಮಗ್ಯಾರಿಗೂ ಇರಲಿಲ್ಲ.. ನಾವು  ನಮ್ಮ ಮಾತುಗಳು ನಮ್ಮ ಗೆಳೆಯರು.. ಇಷ್ಟೇ ತಲೆಯಲ್ಲಿದ್ದದ್ದು..


ಅನೂಪ್ ನಮ್ಮ ಗ್ಯಾಂಗ್ ಸೇರಿದ್ದು ತಡವಾಗಿದ್ದರೂ ... ಅವನ ಮಾತುಗಳು ಹಾಸ್ಯರಸವನ್ನು ಇನ್ನಷ್ಟು ಮೇಲಕ್ಕೇರಿಸಿತ್ತು .. ಇನ್ನೊಂದಷ್ಟು ಮಾತುಗಳು, ಅವನ ಕೆಲವು ಅನುಭವಗಳು ಮುದನೀಡಿತ್ತು..

ನಾವು ಸೇರಿದ್ದೇವೆ ಅಂದರೆ ಏನಾದರೂ ತರಲೆ ಇರಲೇ ಬೇಕಲ್ಲವೇ.. ಲೀಲಾ.. ಫೈರ್ ಪಾನ್ ತಿಂತೀನಿ ಅಂದಾಗ ನಮ್ಮೆಲ್ಲರ ಮೊಬೈಲ್, ಕ್ಯಾಮೆರಾ ಅತ್ತ ಕಡೆ ತಿರುಗಿತ್ತು.. ಮುಂದೆ ನೆಡೆದದ್ದು ಇನ್ನೊಂದು ನಗೆಯ ಮೆರವಣಿಗೆ.. ಫೈರ್ ಪಾನ್ ಹೇಗಿತ್ತು ಹೇಗಿರಲಿಲ್ಲ ಎನ್ನುವುದಕ್ಕಿಂತ... ನಮ್ಮ ನಗೆಯ ತೇರನ್ನು ಎಳೆಯೋಕೆ ಇನ್ನೊಂದು ಅಸ್ತ್ರ ಸಿಕ್ಕಿದ್ದು ಸುಳ್ಳಲ್ಲ..



ಈ ಭೇಟಿಗಳಲ್ಲಿ ಸಾಮಾನ್ಯ ಎರಡು ಘಂಟೆ ಕಳೆಯುವ ನಾವು ಇಂದು.. ಬೆಳಿಗ್ಗೆ ಹನ್ನೊಂದರಿಂದ ಓಹ್ ಸಾರಿ ಹತ್ತು ಮುಕ್ಕಾಲು ಘಂಟೆಯಿಂದ ಮದ್ಯಾನ್ಹ ಮೂರುವರೆ ಘಂಟೆಯ ತನಕ ನಾನ್ ಸ್ಟಾಪ್ ಹಾಸ್ಯ ಬಸ್ಸಲ್ಲಿ ಓಡಾಡಿದ್ದು ವಿಶೇಷ..



ಮೂರು ದಾರಿ ಸೇರುವ ಜಾಗದಲ್ಲಿ ಗಣಪತಿಯ ವಿಗ್ರಹ, ಫೋಟೋ ಇಟ್ಟು ಪೂಜಿಸುತ್ತಾರೆ.. ಎಲ್ಲೆಡೆಯೂ ಕಾಣುವ ಆ ಮಹಾಮಹಿಮನನ್ನ ಮರದಲ್ಲಿ ಕಂಡರೆ.. ಎಲ್ಲಾ ದಿಕ್ಕುಗಳಲ್ಲಿಯೂ ಪಸರಿಸಿರುವ ನಮ್ಮ ಗೆಳೆತನದ ಅಧಿನಾಯಕ ನಮ್ಮೆಲ್ಲರ ಮನಸ್ಸು. ಅದನ್ನು ನಮ್ಮ ಎಲ್ಲಾ ಗೆಳೆಯರ ಮನದಲ್ಲಿ ಕಾಣುತ್ತಿದ್ದೇವೆ..  ಅದಕ್ಕೆ ಒಂದು ಸಲಾಂ ಹೇಳೋಣ ಅಲ್ಲವೇ..
ಲೋ ಶ್ರೀಕಿ ಈ ಚಿತ್ರ ತೆಗೆಯೋ ನಿನಗೆ ಬರೆಯೋದಕ್ಕೆ
ಉಪಯೋಗವಾಗುತ್ತದೆ ಎಂದ ವೆಂಕಿಗೆ ಒಂದು ಸಲಾಂ 
ಒಂದು ಭಾನುವಾರವನ್ನು ಆಲಸ್ಯವಾಗಿ ಅದರಲ್ಲೂ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆರಾಮಾಗಿ ಕಳೆಯುವ ಭಾನುವಾರವನ್ನು ಸಂತಸ, ಉಲ್ಲಾಸಯುಕ್ತ ದಿನವನ್ನಾಗಿ ರೂಪಿಸಿಕೊಂಡಿದ್ದು ನಮ್ಮ ಗೆಳೆತನದ ವಿಶೇಷವಾಗಿತ್ತು..

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. ಗೆಳೆತನ ಇರಲಿ ಚಿರಕಾಲ.. 

No comments:

Post a Comment