Wednesday, November 30, 2016

ಅಪ್ರತಿಭಾ ಜೋಡಿ ಶಶಿ-ಪ್ರತಿಭಾ!!!

ತುಂಹೆ ಕೊಹಿ ಔರ್ ದೇಕೆ
ತೊ ಜಲ್ ತಾ ಹೇ ದಿಲ್
ಬಡಿ ಮುಷ್ಕಿಲೋ ಸೆ ಫಿರ್ ಸಂಬಲ್ತಾ ಹೇ ದಿಲ್

ಪ್ರತಿಭಾ ಅಕ್ಕಯ್ಯನನ್ನ ನೆನೆಸಿಕೊಂಡಾಗೆಲ್ಲ (ಮರೆಯೋಕೆ ಅವರು ಎಲ್ಲಿ ಅವಕಾಶ ಕೊಡ್ತಾರೆ) ಈ ಮೇಲಿನ ಹಾಡು ನೆನಪಿಗೆ ಬರುತ್ತೆ. ಅದೇನೋ ಗೊತ್ತಿಲ್ಲ ನನ್ನ ಮೇಲಿನ ಅವರ ಅಭಿಮಾನ ೧೮ ವರ್ಷಗಳಿಂದ ಹಾಗೆ ಹೆಚ್ಚುತ್ತಲೇ ಇದೆ. ನಿಮಗೆ ಸ್ನೇಹಿತರು, ಬ್ಲಾಗ್, ಫೇಸ್ಬುಕ್, ವಾಟ್ಸಾಪ್ ಬಳಗ ಹೆಚ್ಚಾಯಿತು.. ನಾವೆಲ್ಲಾ ಎಲ್ಲಿ ನೆನಪಲ್ಲಿ ಇರ್ತೀವಿ. ಇದು ಈಚೆಗೆ ನಾಲ್ಕೈದು ವರ್ಷಗಳಿಂದ ನನ್ನ ಮೇಲಿರುವ ದೊಡ್ಡ ಆಪಾದನೆ ಅಕ್ಕಯ್ಯನ ಕಡೆಯಿಂದ.. :-(

ಶಾಂತವಾಗಿದ್ದ ಶಶಿ.. ಕಾಲಚಕ್ರದ ಜೊತೆಯಲ್ಲಿ ಹಲವಾರು ಬಾರಿ ತಾಳ್ಮೆ ಕಳೆದುಕೊಂಡು ಕೂಗಾಡಿದ್ದು ನೋಡಿದ್ದಿದೆ (ತಿರುಪತಿ ಪ್ರವಾಸ :-) ) ಆದರೆ ಅಕ್ಕಯ್ಯ.. ನನ್ನ ಮೇಲೆ ಕೂಗುವುದು ಅಂದಿಗೂ ಹಿಟ್ ಎಂದೆಂದಿಗೂ ಹಿಟ್..

೧೯೯೮ ರ ನವೆಂಬರ್ ೩೦ ರಂದು ವಿವಾಹ ಬಂಧನದಲ್ಲಿ ಒಂದಾದ ಈ ಸುಮಧುರ ಮನಸ್ಸಿನ ಜೋಡಿಗಳು ಅಮೋಘ ೧೮ ವಸಂತಗಳನ್ನು ದಾಟಿದ್ದಾರೆ..

ಈ ಶುಭ ಸಂದರ್ಭದಲ್ಲಿ ಬರೆಯೋದಾ, ಏನು ಬರೆಯೋದು.. ಹೇಗೆ ಬರೆಯೋದು.. ನೀಟಾಗಿ ಬಾಚಿಕೊಂಡಿದ್ದ ಕೂದಲನ್ನು ಒಮ್ಮೆ, ಮತ್ತೊಮ್ಮೆ ಕೆರೆದುಕೊಂಡು ಕೆದರಿಕೊಂಡೇ..

ನನ್ನ ಮದುವೆಗೆ ಮುಂಚಿನ ದಿನಗಳು.. ಹೀಗೆ ರಾಮನಗರಕ್ಕೆ ವೆಂಕಿಯ ಮನೆಗೆ ಹೋಗೋದು ಎಂದು ತೀರ್ಮಾನಿಸಿ..  ನಾವು ನಾಲ್ವರು ಪಾಂಡವರು (ಶಶಿ, ವೆಂಕಿ, ಲೋಕಿ ಮತ್ತು ನಾನು .. ಜೆ ಎಂ ಅವಾಗ ಅಮೇರಿಕಾದಲ್ಲಿದ್ದ)   ಜೊತೆಯಲ್ಲಿ ಪ್ರತಿಭಾ ಅಕ್ಕಯ್ಯ ಹೊರಟೆವು.. ..

ವೆಂಕಿಯ ಮನೆಯಲ್ಲಿ ರಾಜಾತಿಥ್ಯ.. ಹೊಟ್ಟೆ ತುಂಬಾ ತಿಂಡಿ ಊಟ ಎಲ್ಲವೂ ಆಯಿತು.. ಮಾತಾಡಿದಷ್ಟು ಕಡಲಲ್ಲಿ ಅಲೆಗಳು ಮತ್ತೆ ಮತ್ತೆ ಬಂದು ಬಡಿಯುವ ಹಾಗೆ, ವಿಷಯಗಳು ಹೊರಬರುತ್ತಲೇ ಇದ್ದವು.. ಮೊದಲೇ ಆತಿಥ್ಯದಿಂದ ಊದುಕೊಂಡಿದ್ದ ಹೊಟ್ಟೆ, ನಕ್ಕು ನಕ್ಕು ಇನ್ನಷ್ಟು ದೊಡ್ಡದಾಯಿತು.. ನಾವೆಲ್ಲಾ ಅಕ್ಷರಶಃ ಹೆಬ್ಬಾವಿನ ತರಹ ಆಗಿದ್ದೆವು.. ಒಂದು ನಿಮಿಷ ಸುಮ್ಮನೆ ಕೂತರೆ.. ನಿದ್ರಾದೇವಿ "ಬಾರ್ಲಾ ಶ್ರೀಕಾಂತ ಅಲ್ಲೇ ಮರದ ಕೆಳಗೆ ನಿದ್ದೆ ಮಾಡುವಂತೆ.. " ಅಂತ ಕೈಬೀಸಿ ಕರೆಯುತ್ತಿದ್ದಳು..

ಶಶಿ ನಿದ್ರಾದೇವಿಗೆ ಸ್ಟೇ ಆರ್ಡರ್ ಕೊಟ್ಟು "ನಿದ್ರಾದೇವಿಯಮ್ಮ ಶ್ರೀಕಿ ಬಸ್ ನಲ್ಲಿ ನಿಂತು ಕೊಂಡೆ ನಿದ್ದೆ ಮಾಡುವ ಆಸಾಮಿ ಅವನಿಗೆ ಈ ರೀತಿಯ ಓಪನ್ ಪರ್ಚೆಸ್ ಆರ್ಡರ್ ಕೊಡಬೇಡ.." ಅಂತ ಹೇಳ್ತಾ ಇದ್ರೆ ಪಕ್ಕದಲ್ಲಿದ್ದ ಅಕ್ಕಯ್ಯ..

"ಶ್ರೀ ನಿದಿರಾಪೋಥಾರು.. ಲಿಪಿಂಚಂಡಿ.. ಮಲಿ,  ವಾಕ್ ಚೆಸೆಕಿ ಪೊದಾಮು" .. ಆರ್ಡರ್ ಸಿಕ್ಕ ಕ್ಷಣ  ಎಲ್ಲರೂ ನಿಧಾನವಾಗಿ ಕಾಳೆದುಕೊಂಡು ಹೊರಗೆ ಬಂದೆವು.. ಯಥಾ ಪ್ರಕಾರ.. ಬಂದೂಕಿನ ನಳಿಗೆ ನನ್ನ ಕಡೆ ತಿರುಗಿತು.. "ಜಾನಪದ ಲೋಕ" ಅಂದೇ..

ಎಲ್ಲರೂ ಲೋಕಾಭಿರಾಮವಾಗಿ ಮಾತಾಡುತ್ತಾ.. ಅಲ್ಲಿಗೆ ಬಂದೆವು.. ಸೊಗಸಾಗಿತ್ತು.. ಉದ್ಯಾನವನದಲ್ಲಿ ಓಡಾಡಿ, ಜಾನಪದ ಲೋಕದ ಆ ಪ್ರತಿಕೃತಿಗಳನ್ನು ನೋಡುತ್ತಾ, ಇಡೀ ಲೋಕದ ಕತೃವನ್ನು ಮನದಲ್ಲಿಯೇ ನೆನೆಸಿಕೊಂಡು, ಅವರ ಸಾಹಸಕ್ಕೆ ಅಭಿನಂದನೆ ಸಲ್ಲಿಸಿ.. ಒಂದೆರಡು ಘಂಟೆಗಳನ್ನು ಕಳೆದೆವು.. ಹೆಬ್ಬಾವಾಗಿದ್ದ ದೇಹ ನಿಧಾನವಾಗಿ ಹಕ್ಕಿಯ ಹಾಗೆ ಹಗುರಾಯಿತು.. ಜೊತೆಯಲ್ಲಿದ್ದ ಶಶಿಯ ಕ್ಯಾಮೆರಾ ತನ್ನ ಕೈಚಳಕ ನೀಡುತ್ತಲೇ ಇತ್ತು.. ಸುಮಾರು ಹೊತ್ತು ಹುಲ್ಲು ಹಾಸಿನ ಮೇಲೆ ಕೂತು.. ವಿಶ್ರಮಿಸಿಕೊಂಡೆವು.. ಒಂದು ಗ್ರೂಪ್ ಫೋಟೋ ತೆಗೆದುಕೊಳ್ಳೋಣ ಅಂದು ಕೊಂಡಾಗ.. ಒಬ್ಬೊಬ್ಬರಿಗೆ ಒಂದು ವಿಚಿತ್ರ ಭಂಗಿ ಕೊಡುವುದು ಎಂದು ನಿರ್ಧಾರವಾಯಿತು..

ಮೊದಲಿಗೆ ಶಶಿ ಮತ್ತು ಅಕ್ಕಯ್ಯನ ಜೋಡಿ ಫೋಟೋ ತೆಗೆದುಕೊಂಡೆವು.. ನಂತರ.. ಶಶಿ ಮತ್ತು ಪ್ರತಿಭಾ ಒಂದು ಕಲ್ಲಿನ ಮೇಲೆ ಕೂತಿರುವ ಭಂಗಿಯಲ್ಲಿ ಫೋಟೋ ತೆಗೆದಿದ್ದು ಆಯ್ತು.. ನಾನು ಶಶಿ ಪ್ರತಿಭಾರನ್ನು ನೀನು ಕೂರಿಸಿಕೋ ಒಂದು ಫೋಟೋ ತೆಗೆಯುವ ಅಂದೇ.. ಆಗ ಸುಮ್ಮನಿದ್ದ ಅಕ್ಕಯ್ಯ.. ಫೋಟೋ ತೆಗೆದ ಮೇಲೆ.. "ಅಣ್ಣ.. ಈಗ ನಿಮ್ಮ ಸರದಿ ಎಂದರು.. ಆಗ ಮದುವೆಯಾಗಿದ್ದು ಶಶಿ ಮಾತ್ರ.. ನಾನು ಹಲ್ಲು ಬಿಟ್ಟೆ.. ವೆಂಕಿ ಮಗನೆ ಸರಿಯಾಗಿ ಸಿಕ್ಕಿಕೊಂಡೆ ಸಾಯಿ ನೀನು ಅಂತ ಬಯ್ದ..

ಆಗ ಪ್ರತಿಭಾ ಅಕ್ಕ ಒಂದು ಅದ್ಭುತ ಉಪಾಯ ಕೊಟ್ಟರು.. "ಶ್ರೀಕಿ ಮತ್ತು ವೆಂಕಿ ಯಾವಾಗಲೂ ಜೊತೆಯಲ್ಲಿಯೇ ಓಡಾಡುತ್ತಾರೆ. ಹಾಗಾಗಿ ಅವರಿಬ್ಬರೂ ಒಬ್ಬರ ಮೇಲೆ ಒಬ್ಬರು ಕೂರಿಸಿಕೊಂಡಿರುವ ಭಂಗಿಯಲ್ಲಿ ಫೋಟೋ ತೆಗೆಯೋಣ.. " ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆ ಅಂದು..

ಹಠದಲ್ಲಿ ಕಿತ್ತೂರು ಚನ್ನಮ್ಮ ನಮ್ಮ ಪ್ರತಿಭಾ ಅಕ್ಕಯ್ಯ.. ಸರಿ ಆ ಹಠಕ್ಕೆ ಸೋಲಲೇ ಬೇಕಾಯಿತು (ಬೇರೆ ದಾರಿ ಇತ್ತೇ).. ನಾ ಮೊದಲು ವೆಂಕಿಯನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಫೋಟೋ ತೆಗಿಸಿಕೊಂಡೆ.. ನಂತರ ವೆಂಕಿ ತೊಡೆಯ ಮೇಲೆ ನಾನು..

ನಮ್ಮ ಸ್ನೇಹ ಬಳಗದಲ್ಲಿ ಪಂಕ್ತಿ ಭೇದವಿಲ್ಲ ಎನ್ನುವುದಕ್ಕೆ ಈ ಪ್ರಸಂಗ ಉದಾಹರಣೆ.. ನಾವು ಯಾರೂ ಕಮ್ಮಿ ಅಲ್ಲ.. ಯಾರೂ ಹೆಚ್ಚು ಅಲ್ಲ.. ಎಲ್ಲರೂ ಸಮಾನರು .. ಈ ನಮ್ಮ ಗೆಳೆತನದ ಭದ್ರ ಕೋಟೆಗೆ.. ಇನ್ನಷ್ಟು ಭದ್ರತೆಯ ಗೋಡೆ ಕಟ್ಟಿ ಸುಭದ್ರಾ ಮಾಡಿದವರು ನಮ್ಮ ಪ್ರತಿಭಾ ಅಕ್ಕಯ್ಯ..

ಅಕ್ಕಯ್ಯ ಮತ್ತು ಶಶಿಯ ವಿವಾಹ ದಿನದ ಸಂದರ್ಭದಲ್ಲಿ.. ಶುಭಾಶಯಗಳನ್ನು ಕೋರುವ ಸಂತಸ ನಮ್ಮದು.

ನಾ ಕಂಡ ಅದ್ಭುತ ಜೋಡಿಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಶಶಿ ಮತ್ತು ಪ್ರತಿಭಾ.. ವಿವಾಹ ದಿನಕ್ಕೆ ಶುಭಾಶಯಗಳು!!!


Monday, October 24, 2016

ಸಿಬಿ ಈಸ್ ಸಿಬಿ ನೋ ಪ್ಯಾರಲಲ್!!!!

ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ಆ ದೇವರೇ ನಮಗಾಗಿಯೇ ಬ್ಲಾಗ್ ಲೋಕಕ್ಕೆ ನೀಡಿದ ಈ ಅದ್ಭುತ ಬರಹಗಾರ್ತಿ

ಇವರು ಡಿಮಾಂಡಿಂಗ್ ಫ್ರೆಂಡ್ ಅಂದರೂ ತಪ್ಪಿಲ್ಲ.. ನಾನು ಇವರು ಸುಮಾರು ನಾಲ್ಕು ವರ್ಷಗಳಿಂದ ಸ್ನೇಹಿತರು. ನನ್ನ ಎಲ್ಲಾ ಪ್ರಶ್ನೆಗಳಿಗೂ, ಸಂದೇಹಗಳಿಗೂ ಉತ್ತರ ಇದ್ದೆ ಇರುತ್ತದೆ. ಕೆಲವೊಮ್ಮೆ ನಾ ಹನುಮಾನ್ ಭಕ್ತನಾಗಿ ನನ್ನ ಬಗ್ಗೆಯೇ ಅನುಮಾನ ಹೆಚ್ಚಾದಾಗ, ಇವರಿಗೆ ಮೊರೆ ಹೋಗುತ್ತೇನೆ. ಹೀಗಿದೆ ನನ್ನ ಪಾಡು ಎಂದು.

ಶ್ರೀ.. ಅಂತ ಮಾತು ಶುರುಮಾಡುವ ಇವರು, ಜೋಗದ ಜಲಪಾತ ಹರಿಯುವ ಹಾಗೆ ಜರ್ ಅಂತ ಭೋರ್ಗರೆದು ಪದಗಳ ಸಮುದ್ರವನ್ನೇ ಹರಿಸಿ, ನನ್ನ ಎಲ್ಲಾ ಪ್ರಶ್ನೆಗಳಿಗೂ, ಸಂದೇಶಗಳಿಗೂ ಉತ್ತರ ನೀಡುತ್ತಾರೆ. ಗುರಿಕಾರ ತನ್ನ ಗುರಿಗೆ ಕಣ್ಣು ಮುಚ್ಚಿಕೊಂಡು ಬಿಟ್ಟ ಬಾಣ ಸರಿಯಾಗಿ ಗುರಿ ಸೇರಿಸುವಂತೆ ಸೀದಾ ನನ್ನ ಎಲ್ಲಾ ಅನುಮಾನ, ಗೊಂದಲಗಳಿಗೆ ಸರಿಯಾದ ರಾಮ ಬಾಣ ಬಿಟ್ಟಿರುತ್ತಾರೆ.

ಅದ್ಭುತ ಸ್ನೇಹಿತೆ ಇವರು. ಜೊತೆಯಲ್ಲಿ (ಸಿಬಿಗೆ ಇಷ್ಟವಾಗೋದಿಲ್ಲ.. ಆದರೂ ಹೇಳುತ್ತೇನೆ) ನಾ ಓದಿದ ಒಂದು ಅದ್ಭುತ ಪಾತ್ರ ಅರ್ಪಿತಾ.. ಅದನ್ನು ಸೃಷ್ಠಿಸಿದ್ದು ಇವರೇ.

ನಾ ಯಾವುದೇ ಬ್ಲಾಗ್ ಬರೆದರೂ ಮೊದಲ ಓದುಗರು ಇವರು.. ಅದರ ತಪ್ಪು ಒಪ್ಪು ಓರೇ ಕೋರೆ ಎಲ್ಲವನ್ನು ಎಷ್ಟು ನಾಜೂಕಾಗಿ ತೆರೆದಿಡುತ್ತಾರೆ ಎಂದರೆ ನಿಪುಣರು ಹಲಸಿನ ಹಣ್ಣನ್ನು ಬಿಡಿಸಿದ ಹಾಗೆ. ಹಣ್ಣು, ಹಲಸಿನ ಬೀಜ ಎಲ್ಲವನ್ನು ಒಪ್ಪ ಓರಣವಾಗಿ ತೆಗೆದಿಟ್ಟು, ಶ್ರೀ ಇದು ಇಷ್ಟವಾಯಿತು, ಇಲ್ಲಿ ಇನ್ನಷ್ಟು ಒತ್ತು ಬೇಕಿತ್ತು, ನಿಮ್ಮ ಬರಹದ ಶೈಲಿ ಸುಂದರ ಹೀಗೆ, ಅಲ್ಲಿನ ಎಲ್ಲಾ ಸರಿಯನ್ನು, ಎಲ್ಲಾ ಹಾಗೆ ಇರುವುದನ್ನು ಸರಿಯಾಗಿ ಅರ್ಥೈಸಿಕೊಂಡು, ಅದನ್ನು ತಿಳಿಯಾಗಿ ನನಗೆ ತಿಳಿಸುತ್ತಾರೆ. ಅರೆ ನಾ ಬರೆದ ಒಂದು ಭಾವದಲ್ಲಿ ಈ ಪಾಟಿ ಕವಲುಗಳು ಉಂಟೆ ಎಂದು ನನಗೆ ಆಶ್ಚರ್ಯವಾಗುತ್ತದೆ.

ಇದನ್ನು ತಿಳಿಯುವ ಸಲುವಾಗಿ ಒಮ್ಮೆ ಬ್ರಹ್ಮ ತಪಸ್ಸು ಮಾಡತೊಡಗಿದ. ಬ್ರಹ್ಮನ ತಪಸ್ಸಿಗೆ ಮೆಚ್ಚಿದ ಈ ಜಗತ್ತಿನ ಕತೃ ವಿಷ್ಣು, ಏನಪ್ಪಾ ನಿನ್ನ ಕೋರಿಕೆ ಎಂದಾಗ, ಬ್ರಹ್ಮ.. ಪಿತಾಮಹನೇ.. ನಾ ಸೃಷ್ಠಿ ಮಾಡಿದ ಪ್ರತಿಜೀವಿಯೂ ವಿಭಿನ್ನ. ಅದರಲ್ಲಿ ತೀರಾ ವಿಭಿನ್ನ ಎಂದರೆ, ನೀವಿ, ನಿವೇದಿತಾ, ನಿವೇದಿತಾ ಚಿರಂತನ್, ಸಿಬಿ, ನಿವ್ಸ್ ಹೀಗೆ ನಾನಾ ರೀತಿಯಲ್ಲಿ ಗುರುತಿಸಿಕೊಂಡಿರುವ ಇವರು ಇಂತಹುದೇ ಅಲ್ಲಾ ಎಂತಹುದೇ ಸಮಸ್ಯೆ ಕೊಟ್ಟರೂ ಸರಿಯಾದ ತೀರ್ಪು, ಸರಿಯಾದ ಅರ್ಥೈಸುವಿಕೆ, ಹಾಗೂ ಆ ಕಡೆಯಿರುವ ಜೀವಿಗೆ ತನ್ನ ಸಮಸ್ಯೆಗೆ ಬೇಕಾದ ಸರಿಯಾದ ಮಾಹಿತಿಯುಳ್ಳ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಇದು ಹೇಗೆ ಸಾಧ್ಯ.. ಇದು ನನ್ನ ಸಂದೇಹ.

ವಿಷ್ಣು ಜೋರಾಗಿ ಒಮ್ಮೆ ನಸು ನಕ್ಕ.. ನಂತರ ಗಂಟಲು ಸರಿಪಡಿಸಿಕೊಂಡು "ವತ್ಸ.. ಸಿಬಿ ಅಂದರೆ ಸಿಬಿ... ಅದಕ್ಕೆ ಸರಿಸಾಟಿಯಿಲ್ಲ ಕಾರಣ ಗೊತ್ತೇ.. "

ಬ್ರಹ್ಮ ತನ್ನ ನಾಲ್ಕು ತಲೆಯ ಕೂದಲನ್ನು ಒಮ್ಮೆ ಪರ ಪರ ಕೆರೆದುಕೊಂಡು, ಹಾಗೆ ನಕ್ಕ.. ಆವನ ನಾಲ್ಕುಮೊಗದಿಂದ ನಗೆಯ ಸಮುದ್ರವೇ ಅರಳಿತು. ಆದರೂ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂಬ ಪ್ರಶ್ನೆಯನ್ನು ತನ್ನ ಮೊಗದಲ್ಲಿ ತೋರಿಸಿದ .

ವಿಷ್ಣು " ಸರಿ ಸರಿ ವತ್ಸ... ನೋಡು ಸಿಬಿ ಅದ್ಭುತ ಛಾಯಾಗ್ರಾಹಕಿ.. ಒಂದು ಚಿತ್ರವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾಗ ತನ್ನ ಗಮನವನ್ನೆಲ್ಲ  ಕೇಂದ್ರೀಕರಿಸಿ ಸಾಮಾನ್ಯ ಅನ್ನಿಸುವ ದೃಶ್ಯವನ್ನು ಅಸಾಧಾರಣ ರೀತಿಯಲ್ಲಿ ಸೆರೆ ಹಿಡಿಯುತ್ತಾರೆ.
ಸಿಬಿ ಪ್ರೊಫೈಲ್ ಇಂದ ಎತ್ತಿದ್ದು!!!

ಹಾಗೆಯೇ ಅವರು ಒಂದು ಪಾತ್ರವನ್ನು ಸೃಷ್ಠಿಸುವಾಗ... ತಮ್ಮ ಎಲ್ಲಾ ಗಮನವನ್ನು ಅಲ್ಲಿ ಹಾಕಿ, ತಾವು ಜಗತ್ತನ್ನು ನೋಡುವ ಪರಿಯನ್ನು, ಹಾಗೆ ಪಾತ್ರವಾಗಿ ಹೆಣೆದು  ನಮ್ಮ ಕಣ್ಣ ಮುಂದೆ ಅದ್ಭುತ ಲೋಕವನ್ನೇ ತೆರೆದಿಡುತ್ತಾರೆ.

ಬ್ರಹ್ಮ ಆಶ್ಚರ್ಯ ಚಕಿತನಾಗಿ, "ಅರೆ.. ಹೀಗೆ ಹೇಗೆ ಸಾಧ್ಯ" ಎಂದು ಸರಸ್ವತಿಯ ಹತ್ತಿರ ಓರೇ ನೋಟ ಬೀರಿದಾಗ, ಸರಸ್ವತಿ ತನಗೆ  ತಿಳಿಯದು ಎನ್ನುವ ರೀತಿಯಲ್ಲಿ ವೀಣೆಯನ್ನು ಮೀಟುತ್ತಾ ಕೂರುತ್ತಾಳೆ.

ಅಲ್ಲಿಗೆ ವಿಷ್ಣು ನಿಲ್ಲುವುದಿಲ್ಲ..

"ಬ್ರಹ್ಮ.. ಇವರ ಇನ್ನೊಂದು ಅದ್ಭುತ ಮುಖ ಅಂದರೆ.. ಅದ್ಭುತ ಕಲಾಕೃತಿಯನ್ನು ಮೂಡಿಸುವ ಕಲೆಗಾರ್ತಿ. ... "
ಸಿಬಿ ಪ್ರೊಫೈಲ್ ಇಂದ ಎತ್ತಿದ್ದು!!!

ಇಷ್ಟು ಹೇಳುವ ಹೊತ್ತಿಗೆ ಭಕ್ತ ಕುಂಬಾರ ಚಿತ್ರದ "ನಾನೂ ನೀನು ನೆಂಟರಯ್ಯ.. ನಮಗೆ ಭೇದವಿಲ್ಲ ವಿಠಲ.. " ಹಾಡು ಮೂಡಿ ಬಂದಿತು.

ಬ್ರಹ್ಮ ತಲೆದೂಗಿದ..  ಪೂರ್ಣ ಅರ್ಥವಾಯಿತು..

ಮನಸ್ಸಲ್ಲೇ ಅಂದುಕೊಂಡ "ನಾನು ಜೀವಿ ಎನ್ನುವ ಬೊಂಬೆಯನ್ನು ಸೃಷ್ಠಿಮಾಡುತ್ತೇನೆ .. ಈಕೆ ಮಡಿಕೆ ಕುಡಿಕೆಗೆ ಅದ್ಭುತ ಪೋಷಾಕು ತೊಡಿಸಿ, ಅದಕ್ಕೆ ಒಂದು ಸೌಂದರ್ಯ ಎನ್ನುವ ಪದ ಸೇರಿಸಿಬಿಡುತ್ತಾರೆ.. ಅಂತಹ ಅದ್ಭುತ ಜೀವಿ ಈ ಸಿಬಿ."

ವಿಷ್ಣು ಇನ್ನೂ ಏನೋ ಹೇಳಲು ಹೋದಾಗ.. ಬ್ರಹ್ಮ ನನಗೆ ಅರ್ಥವಾಯಿತು ತಂದೆ. ಸಿಬಿ ನನ್ನ ಸೃಷ್ಠಿಯಲ್ಲಿನ ಅದ್ಭುತಗಳಲ್ಲಿ ಒಂದು. ಶ್ರೀ ಹೇಳುವುದು ನಿಜ. ಸಿಬಿ ಈಸ್ ಸಿಬಿ ನೋ ಪ್ಯಾರಲಲ್ ಟು ಹರ್..

ಬ್ರಹ್ಮ.. ತಲೆದೂಗಿದ.. ವಿಷ್ಣು ಪ್ರಸನ್ನನಾದ.. ಸರಸ್ವತಿ ವೀಣೆಯನ್ನು ಇನ್ನಷ್ಟು ಉತ್ಸಾಹದಲ್ಲಿ ಮೀಟಲು ತೊಡಗಿದಳು..

ಅಲ್ಲಿಯ ತನಕ ಸುಮ್ಮನಿದ್ದ ಲಕ್ಷ್ಮಿ..

"ಹ್ಯಾಪಿ ಬರ್ತ್ ಡೇ ಸಿಬಿ.. ನಿನಗೆ ನನ್ನ ಆಶೀರ್ವಾದ.. ಹಾಗೂ ಶಾರದೆಯ ಆಶೀರ್ವಾದದ ಬಲ ಸದಾ ಸದಾ ಇರುತ್ತದೆ.. "

ಶ್ರೀ ಮನಸ್ಸಲ್ಲೇ ಅಂದುಕೊಂಡ.. ನಾ ಸಿಬಿಗೆ ಜನುಮದಿನದ ಶುಭಾಶಯಗಳನ್ನು ಹೇಳಲು ತಡ ಮಾಡಿದರೆ ಇನ್ನಷ್ಟು ದೇವತೆಗಳು ಬಂದು ಹರಸುತ್ತಾರೆ.. ನಾ ಕೂಡ ಸ್ವಲ್ಪ ತಡವಾದರೂ ಹಾರೈಸಿಯೇ ಬಿಡುತ್ತೇನೆ ಎಂದು ನಿರ್ಧರಿಸಿ..

ಸಿಬಿ ನಿಮ್ಮ ಜನುಮದಿನಕ್ಕೆ ಬರೆಯಬೇಕೆಂದಾಗ ಹೀಗೆಲ್ಲ ಬರೆಸಿತು ನನ್ನ ಮನ.. ನನ್ನ ಅದ್ಭುತ  ಗೆಳತಿಗೆ ಜನುಮದಿನದ ಶುಭಾಶಯಗಳನ್ನು ಹೇಳುತ್ತಾ ಇದ್ದೇನೆ.. ದಯಮಾಡಿ ಒಪ್ಪಿಸಿಕೊಳ್ಳಿ ಎನ್ನುವಲ್ಲಿಗೆ ಶ್ರೀ ಪುರಾಣ ಮುಂದಿನ ವರ್ಷದ ತನಕ ಮುಂದುವರೆಯುತ್ತಲೇ ಇರುತ್ತದೆ..

ಸಿಬಿ ಹ್ಯಾಪಿ ಬರ್ತ್ಡೇ.. !!! 

Monday, July 11, 2016

ಚಲನಚಿತ್ರಮಂದಿರ & ಶುಭಾಶಯಗಳು

ಚಲನಚಿತ್ರಮಂದಿರ ತುಂಬಿ ತುಳುಕುತ್ತಿದೆ..

ಎಲ್ಲೆಲ್ಲೂ ಶಿಳ್ಳೆಗಳು, ಚಪ್ಪಾಳೆಗಳು, ಕೂಗು, ಕಿರುಚಾಟ..

ಚಿತ್ರಮಂದಿರದ ಹೊರಗೆ ಹೌಸ್ ಫುಲ್ ಬೋರ್ಡು ನಗುತ್ತಿತ್ತು.

ಒಂದೊಂದಾಗಿ ದೀಪಗಳು ಆರಿ ಹೋದವು.. ಬೆಳ್ಳಿ ಪರದೆ ಕಪ್ಪಗೆ ಕಾಣತೊಡಗಿತು.

ಅದರ ಮಧ್ಯೆ ಒಂದು ಸಣ್ಣ ಬೆಳಕಿನ ಗೋಳ ದೊಡ್ಡದಾಗುತ್ತಾ ಹೋಯಿತು

ಎಲ್ಲರೂ ಉಸಿರು ಬಿಗಿ ಹಿಡಿದು ತಮ್ಮ ತಮ್ಮ ಕುರ್ಚಿಯಲ್ಲಿ ಆಸೀನರಾದರು. ಚಿತ್ರಮಂದಿರದ ಒಳಗೆ ತಮ್ಮ ಉಸಿರು ತಮಗೆ ಕೇಳುವಷ್ಟು ಮೌನ..

"ಬ್ಲಾಗ್ ಲೋಕ ಕ್ರಿಯೇಷನ್ಸ್" ಎಂಬ ಫಲಕ ಬಂದೊಡನೆ ಮತ್ತೆ ಶಿಳ್ಳೆ ಚಪ್ಪಾಳೆ ಚೀರಾಟ..

ಮತ್ತೆ ಹತ್ತು ಸೆಕೆಂಡ್ಸ್ ಬರಿ ರಜತ ಪರದೆ ಮಾತ್ರ

ನಂತರ ಬಂತು..

"ಬ್ಲಾಗ್ ಸ್ಟಾರ್"
"ಕವಿತಾ ಸ್ಟಾರ್"
"ಗುಡ್ ಫ್ರೆಂಡ್ ಸ್ಟಾರ್"
"ಟು ಮಿನಿಟ್ಸ್ ಸ್ಪೆಷಲ್ ಸ್ಟಾರ್"

ಚಪ್ಪಾಳೆ, ಶಿಳ್ಳೆ.. ಹೃದಯದ ಬಡಿತವನ್ನು ಮೀರಿಸುತ್ತಿತ್ತು..

ಮೊದಲ ಅಕ್ಷರ B.. ನಂತರ P..

"BP"

ಇನ್ನಷ್ಟು ಜೋರಾಗಿ ಕೂಗಲು ಶುರುಮಾಡಿದರು..

BP.. ಈ ಎರಡು ಅಕ್ಷರಗಳ ಮಧ್ಯೆ ಅಂತರ ಹೆಚ್ಚುತ್ತಾ ಹೋಯಿತು.. ಮದ್ಯೆ ಮದ್ಯೆ ಅಕ್ಷರಗಳು ಸಾಲಾಗಿ ನಿಲ್ಲುತ್ತಾ ಹೋದವು..

"BADARINATH PALAVALLI"

"ಬದರಿನಾಥ್ ಪಲವಳ್ಳಿ"

ಈ ಹೆಸರು ತೆರೆಯ ಮೇಲೆ ಬಂದಾಗ ಹಿನ್ನೆಲೆ ಸಂಗೀತ ತಾರಕಕ್ಕೆ ಏರಿತ್ತು.. ಚಿತ್ರಮಂದಿರದಲ್ಲಿ ಒಬ್ಬರು ಮಾತಾಡಿದ್ದು ಅವರಿಗೆ ಕೇಳುತ್ತಿರಲಿಲ್ಲ..

ತೆರೆಯ ಮೇಲೆ ಬದರಿನಾಥ್ ಮೂಡಿಬಂದಾಗ..ಬಿಡಿ .. ಅಣ್ಣಾವ್ರ ಚಿತ್ರಗಳು, ವಿಷ್ಣುದಾದಾ, ಅಂಬಿ, ರಜನಿಕಾಂತ್ ಬಿಗ್ ಬಿ... ಸಿನೆಮಾಗಳು ಬಿಡಿ.. ಅದಕ್ಕಿಂತ ಜೋರಾದ ಸ್ವಾಗತ..

ಬದರಿನಾಥ್ ಕೈ ಎತ್ತಿ ಎಲ್ಲರನ್ನು ಸಮಾಧಾನ ಪಡಿಸಿದರು..

ಎಲ್ಲರೂ ಬದರಿನಾಥ್ ಅವರಿಗೆ ಗೌರವ ತೋರಿಸಲು ಎದ್ದು ನಿಂತರು..

ನಿಶ್ಯಬ್ಧ.. ಪಿನ್ ಡ್ರಾಪ್ ಸೈಲೆನ್ಸ ಅಂತಾರಲ್ಲ ಹಾಗೆ.. ಎಲ್ಲರ ಹೃದಯದ ಬಡಿತ ಕೇಳುತ್ತಿತ್ತು..

"ಬ್ಲಾಗ್ ಲೋಕದ ಎಲ್ಲಾ ಸದಸ್ಯರಿಗೂ ನನ್ನ ನಮಸ್ಕಾರಗಳು.. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ, ಶುಭಶಯಗಳು ನನ್ನನ್ನು ಇಲ್ಲಿ ಕೂರಿಸಿದೆ.. ಇದಕ್ಕೆ ನಿಮಗೆ ನಾ ಆಭಾರಿಯಾಗಿದ್ದೇನೆ.. ನಾ ಯಶಸ್ಸು ಕಂಡಿದ್ದೇನೆ ಎಂದರೆ.. ಅದಕ್ಕೆ ನೀವೇ ಕಾರಣ.. ಈ ಯಶಸ್ಸಿನ ಪೂರ್ಣ ಭಾಗ ನಿಮಗೆ ಸೇರಬೇಕಾದ್ದು.
ನಿಮಗೆಲ್ಲ ನನ್ನ ಅನಂತ ಧನ್ಯವಾದಗಳು.. ಮತ್ತೆ... "

ಏನೋ ಹೇಳೋಕೆ ಹೊರಟರು.. ಅವರ ಕೈಯಲ್ಲಿದ್ದ "ಪಾತ್ರ ಅನ್ವೇಷಣಾ" ಕವನ ಸಂಕಲನದಿಂದ ಒಂದು ಕವಿತೆ ಹೊರಗೆ ಕೈ ತೋರಿ.. ನಿಧಾನವಾಗಿ ಹೊರಗೆ ಬಂತು..

"ನನ್ನ ಜನುಮದಾತನೇ.. ನನ್ನದೊಂದು ಕೋರಿಕೆ.. ನೀವು ಇಂತಹ ಚಂದವಾದ ಕವಿತೆಗಳ ಗುಚ್ಚವನ್ನೆ ಸೃಷ್ಠಿಸಿದ್ದೀರಿ, ಈ ಪುಸ್ತಕದಲ್ಲಿ ಮತ್ತು ನಿಮ್ಮ ಬ್ಲಾಗ್ ನಲ್ಲಿ ಇರುವ ಎಲ್ಲರ ಪರಿಚಯ ನಮಗಾಗಿದೆ.. ನಮಗೆ ಇನ್ನಷ್ಟು ಸ್ನೇಹಿತರು ಬೇಕು.. ಇನ್ನಷ್ಟು ಕವಿತಾ ಮನಸ್ಸು ಬೇಕು.. ನೀವು ಹೊಸ ಹೊಸ ಕವಿತೆ ಬರೆಯುತ್ತಿರಿ.. ಓದುಗರು ಇದ್ದೆ ಇರುತ್ತಾರೆ ನಿಮ್ಮ ಬೆನ್ನ ಹಿಂದೆ.. ಅಲ್ಲಿ ನೋಡಿ ನಮ್ಮೆಲ್ಲರ ತಾಯಿ ಸರಸಮ್ಮ ಕೂಡ ವೀಣೆ ನುಡಿಸುತ್ತಾ ನಿಮಗೆ ಅದನ್ನೇ ಹೇಳುತ್ತಿದ್ದಾಳೆ.. ಜೊತೆಯಲ್ಲಿ ನನ್ನ ಹಾಗೂ ನನ್ನ ಗೆಳೆತಿಯರ ಜನುಮದಾತ ಜನುಮ ಪಡೆದುಕೊಂಡ ದಿನ.. ಅದಕ್ಕಾಗಿ ಈ ಪುಸ್ತಕದಿಂದ ನಾ ಹೊರಗೆ ಬಂದು ನಿಮಗೆ ನನ್ನ ಆಶಯ ಮತ್ತು ಶುಭಾಶಯ ಎರಡನ್ನು ಹೇಳುತ್ತಿದ್ದೇನೆ ... "

ಇಷ್ಟು ಹೇಳಿ.. ಪುಸಕ್ ಅಂಥ ಪುಸ್ತಕದೊಳಗೆ ಮಾಯವಾಯಿತು..

ಬದರಿನಾಥ್.. ತಮ್ಮ ಕನ್ನಡ ತೆಗೆದು ಒಮ್ಮೆ ಕಣ್ಣನ್ನು ಮತ್ತು ಕನ್ನಡಕವನ್ನು ಒರೆಸಿಕೊಂಡು.. "ನಿಮ್ಮೆಲ್ಲರ ಆಶೀರ್ವಾದ.. ಹಾರೈಕೆ ನನ್ನನ್ನು ಮೂಕನನ್ನಾಗಿಸಿದೆ.. ಖಂಡಿತ ಮತ್ತೆ  ನನ್ನ ರಚನೆಗಳನ್ನು ಹರಿಯಬಿಡುತ್ತೇನೆ.. ನಮ್ಮೆಲ್ಲರನ್ನು ಬಂಧಿಸಿರುವುದು ಅಕ್ಷರಗಳು ಮತ್ತು ಬ್ಲಾಗ್ ಲೋಕ.. ಖಂಡಿತ ಮತ್ತೆ ನಾ ಆ ಲೋಕದಲ್ಲಿ ಸಕ್ರಿಯನಾಗುತ್ತೇನೆ.. ನಿಮಗೆಲ್ಲರಿಗೂ ನಮ್ಮ ಅನಂತ ಅನಂತ ಧನ್ಯವಾದಗಳು.. ಇದೋ ನಿಮಗಾಗಿ ನನ್ನ ಮೊಬೈಲ್ ನಲ್ಲಿ ಒಂದು ಹಾಡು ಹಾಕುತ್ತೇನೆ

"ಎಂದರೋ ಮಹಾನುಭಾವುಲು ಅಂದರೇಕಿ ವಂದನಮು"

ಎಲ್ಲರೂ ಹೋ ಹೊ ಬದರಿ ಸರ್ ಹುಟ್ಟು ಹಬ್ಬದ ಶುಭಾಶಯಗಳು ಎಂದು ಕೂಗುತ್ತಾ ಮತ್ತೆ ತಮ್ಮ ತಮ ಸೀಟ್ ನಲ್ಲಿ ಕುಳಿತರು..

ಅಲ್ಲಿದ್ದ ಒಂದು ಪುಟಾಣಿ ಎದ್ದು ನಿಂತು.. "ಬದರಿ ಅಂಕಲ್.. ನಿಮ್ಮ ಕವಿತೆಗಳನ್ನು ನಾ ಓದಿದ್ದೇನೆ.. ಕೆಲವನ್ನು ನಮ್ಮ ಅಪ್ಪ ಓದಿ ಹೇಳಿದ್ದಾರೆ.. ನನಗೆ ನಿಮ್ಮಿಂದ ಒಂದಷ್ಟು ಕಥೆಗಳು ಬೇಕು.. ಕವಿತೆಗಳನ್ನು ಬರೆಯಿರಿ.. ಜೊತೆಯಲ್ಲಿ ಕಥೆಗಳನ್ನು ಬರೆಯಿರಿ.. ಇದು ನನ್ನ ಪುಟ್ಟ ಕೋರಿಕೆ"

ಬದರಿನಾಥ್.. "ಆ ಪುಟಾಣಿಗೆ ಕೈ ಬೀಸಿ.. ಖಂಡಿತ ಬಂಗಾರಿ.. ಈಗ ನಾ ಬರೆದ ಕಥೆಯೇ ಸಿನೆಮಾ ಆಗಿರುವುದು ಅದನ್ನೇ.. ನೀವೆಲ್ಲಾ ನೋಡಲು ಬಂದಿರುವುದು.. ಇನ್ನೊಂದು ಸ್ವಲ್ಪ ಹೊತ್ತು ಚಲನಚಿತ್ರ ಶುರುವಾಗುತ್ತದೆ.. ನೀವೆಲ್ಲಾ ನೋಡಿರಿ.. ಹಾರೈಸಿರಿ.. ನಿಮ್ಮ ಅಭಿಮಾನಕ್ಕೆ ನಾ ಶಿರಬಾಗಿ ನಮಿಪೆ"

ಬೆಳ್ಳಿ ಪರದೆಯ ಮತ್ತೆ ಮಾಯವಾಯಿತು.. ಸ್ವಲ್ಪ ಹೊತ್ತು ಮತ್ತೆ ಬಿಳಿಯ ಬೆಳಕಿನ ಕಿರಣ.. ಪರದೆಯ ಮೇಲೆ ಬಂದಿತು..

ಎಲ್ಲರೂ ಆ ಬೆಳಕಿನ ಕಿರಣಗಳನ್ನು ನೋಡುತ್ತಾ ಹಾಗೆ ಹಿಂದೆ ತಿರುಗಿದರು.. ಮಾತೇ ಸರಸ್ವತಿ ತನ್ನ ಅಭಯ ಹಸ್ತವನ್ನು ತೋರುತ್ತಾ ನಿಂತಿದ್ದಳು.. ಆ ಕೈಯಿಂದ ಆ ಬೆಳಕಿನ ಕಿರಣಗಳು ಮೂಡಿ ಬಂದು ಮೂಡಿಸಿದ ಅಕ್ಷರಗಳು

"ಬದರಿನಾಥ್ ಪಲವಳ್ಳಿ.. ಕಂದಾ ಜನುಮದಿನದ ಶುಭಾಶಯಗಳು.. ಈ ಚಿತ್ರವು ಶತದಿನೋತ್ಸವ ಆಚರಿಸಲಿ. ಮತ್ತೆ ಬ್ಲಾಗ್ ಲೋಕದಲ್ಲಿ ನಿಮ್ಮ ಹೆಸರು ಮಿನುಗಲಿ ಮಿಂಚಲಿ.. "


(ದಯವಿಟ್ಟು ನೋಡಿ: ಈ ಚಿತ್ರವು ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ (ಸ್ವಲ್ಪ ದಿನದಲ್ಲಿಯೇ) ಶುರುವಾಗುತ್ತದೆ.. ಬದರಿಸರ್ ಜನುಮದಿನಕ್ಕೆ ಶುಭಾಶಯಗಳು ಕೋರುತ್ತಾ ಈ ಲೇಖನಕ್ಕೆ ಸಶೇಷ ಹಾಕಿದ್ದೇನೆ.. ಚಿತ್ರ ಶುರುವಾಗಲಿದೆ ಆದಷ್ಟು ಬೇಗ)

ಬದರೀಸರ್ ಜನುಮದಿನಕ್ಕೆ ಶುಭಾಶಯಗಳು!!!!

Sunday, April 10, 2016

ಶಾಲೆ ಎನ್ನುವ ದೇಗುಲ...!

ಜೀವನದಲ್ಲಿ ಬೇಕಾದ್ದು ಬೇಡವಾದ್ದು ಎಲ್ಲವೂ ಬದಲಾಯಿತು..

ಟರ್ ಟರ್ ಎಂದು ಕೀಲಿ ಕೊಟ್ಟು ನೆಡೆಸಬೇಕಾಗಿದ್ದ ಗೋಡೆ ಗಡಿಯಾರ ಇಂದು ಡಿಜಿಟಲ್ ಆಗಿದೆ, ವಿದ್ಯುತ್ ಇಲ್ಲವೇ ಚಿಕ್ಕ ಚಿಕ್ಕ ಬ್ಯಾಟೆರಿ, ಇಲ್ಲವೇ ಸೂರ್ಯ ರಶ್ಮಿ ಚಾಲಿತವಾಗಿದೆ.

ಕೈಗೆ ಕಟ್ಟುವ ಗಡಿಯಾರಕ್ಕೆ ದಿನವೂ ಕೀಲಿ ಕೊಡಬೇಕಿತ್ತು, ಇಲ್ಲವೇ ಅದು ನಿಂತು ಹೋಗಿ ಮತ್ತೆ ಬೇರೆ ಒಬ್ಬರ ಹತ್ತಿರ ಸಮಯ ಕೇಳಿ ಮತ್ತೆ ಕೈಗಡಿಯಾರದ ಸಮಯವನ್ನು ಸರಿ ಮಾಡಬೇಕಿತ್ತು.. ಆದ್ರೆ ಇಂದು ಅದೆಲ್ಲಾ ಇಲ್ಲವೇ ಇಲ್ಲ.. ದೇಹದ ಉಷ್ಣತೆ ಇಂದ ಚಲಿಸುವ ಕೈ ಗಡಿಯಾರ, ಬ್ಯಾಟೆರಿ, ದಿನಕರನ ಕರುಣೆಯಿಂದ ನಡೆಯುವ ಹಂತಕ್ಕೆ ಬಂದಿದೆ.. 

ಆದರೆ ಒಂದು ಕ್ಷಣ ಹಿಂದಕ್ಕೆ ಹೋದಾಗ ಆಗಿನ ಕಾಲ ಎಷ್ಟು ಚೆನ್ನ ಅನ್ನಿಸುವುದು ಸುಳ್ಳಲ್ಲ.. ಇರಲಿ ಕಾಲ ಬದಲಾಗುತ್ತದೆ, ಬದಲಾಗಲೇ ಬೇಕು. 
ಈ ದೇಗುಲದ ಹೆಸರು!!!
ನಾವು ಎಂಟನೆ ತರಗತಿಯಲ್ಲಿ ಓದುತ್ತಿದ್ದಾಗ ಭೂಗೋಳ ಶಾಸ್ತ್ರ ಹೇಳಿಕೊಡುತ್ತಿದ್ದ ಶ್ರೀ HVR ಹೇಳುತ್ತಿದ್ದರು, ಬೆಂಗಳೂರನ್ನು ನೋಡಲು ಬರುವ ಪ್ರವಾಸಿಗರನ್ನು ಹೊತ್ತು ತರುತ್ತಿದ್ದ ಬಸ್ಸು, ಎಲ್ಲಾ ಸ್ಥಳಗಳನ್ನು ಸುತ್ತುವ ಮೊದಲು ಅಥವಾ ನಂತರ, ನಮ್ಮ ಶಾಲೆ ನ್ಯಾಷನಲ್ ಹೈ ಸ್ಕೂಲ್ ಮುಂದೆ ಬಂದು, ಪ್ರವಾಸಿಗರಿಗೆ ಹೇಳುತ್ತಿದ್ದರಂತೆ.. ಇದು ಈ ಸ್ಕೂಲ್, ಇದು ಪ್ರಸಿದ್ಧಿಯಾದದ್ದು, ಬೆಂಗಳೂರಿನ ಅನೇಕ ಅತ್ಯುತ್ತಮ ಶಾಲೆಗಳಲ್ಲಿ ಇದು ಕೂಡ ಒಂದು.. ಹೀಗೆ ನಮ್ಮ ಶಾಲೆಯ ಮಹಿಮೆಯನ್ನು ಬಣ್ಣಿಸುತ್ತಿದ್ದರಂತೆ.. ನಮಗೆ ಆಗ ಈ ವಿಷಯ ಹಾಸ್ಯಕರ ಅನ್ನಿಸಿದ್ದರೂ ಆಶ್ಚರ್ಯವಿಲ್ಲ.. ಯಾಕೆ ಅಂದರೆ ದೀಪದ ಕೆಳಗೆ ಕತ್ತಲೆ ಅಲ್ಲವೇ.. ನಮಗೆ ಅರಿವಿರಲಿಲ್ಲ ನಾವು ಒಂದು ಅದ್ಭುತ ಶಾಲೆಯ ಭಾಗವಾಗಿ ಹೋಗಿದ್ದೇವೆ ಎಂದು. 

ಕಾಲ ಘಟ್ಟದಲ್ಲಿ ಓದು ಮುಗಿದು, ಜೀವನೋಪಾಯಕ್ಕೆ ಕೆಲಸ, ಸಂಸಾರ, ಮನೆ ಮಕ್ಕಳು ಎಂಬ ಜಂಜಾಟದಲ್ಲಿ ಎಲ್ಲವನ್ನು ಮರೆತು ಪ್ರಾಪಂಚಿಕ ಕುದುರೆ ಓಟದಲ್ಲಿ ಗಳಿಸಿದ್ದು ಕಳೆದದ್ದು ತುಲನೆ ಮಾಡುತ್ತಾ ಕೂತಾಗ, ಗಡಿಯಾರಕ್ಕೆ ಕೀಲಿ ಕೊಟ್ಟ ಹಾಗೆ ಮತ್ತೆ ನಮ್ಮ ಜೀವನ ಇಂದಿನಿಂದ  ಮೂರು ದಶಕಗಳ ಹಿಂದಕ್ಕೆ ಓಡಿತು,

೧೯೮೫ - ೧೯೮೮ ರಲ್ಲಿ ಪ್ರೌಢಶಾಲೆ ಓದಿದ ಶಾಲೆ ನ್ಯಾಷನಲ್ ಹೈ  ಸ್ಕೂಲ್ ಗೆ ನಾವು ಹನ್ನೆರಡು ಮಂದಿ ಶಾಲೆಗೆ ಹೋದೆವು. ಹನ್ನೆರಡು ಮಂದಿಯಲ್ಲಿ ಕೆಲವರು ಮೊತ್ತ ಮೊದಲ ಬಾರಿಗೆ ನಮ್ಮ ಭೇಟಿಗೆ ಬಂದಿದ್ದರು. (ಕಳೆದ ಐದು ವರ್ಷಗಳಿಂದ ಹೀಗೆ ಕನಿಷ್ಠ ಪಕ್ಷ ವರ್ಷಕ್ಕೆ ಒಮ್ಮೆಯಾದರು ಭೇಟಿಯಾಗುತ್ತಿದ್ದೇವೆ). 

ಒಬ್ಬರೊಬ್ಬರ ಪರಿಚಯವಾದ ಮೇಲೆ, ನಮ್ಮ ದೈಹಿಕ ಶಿಕ್ಷಣ ತಜ್ಞ ಶ್ರೀ KC ಕಂಡರು. ನಾವೆಲ್ಲಾ ನಮಸ್ಕರಿಸಿದೆವು. ಅವರಿಗೆ ನಮ್ಮೆಲ್ಲರ ಪರಿಚಯ ಹತ್ತಲಿಲ್ಲ.. ನಾವು ನಮ್ಮ ಕಾಲದ ಕೆಲವು ಪ್ರಸಿದ್ಧ ಗೆಳೆಯರ ಹೆಸರು ಹೇಳಿದ ತಕ್ಷಣ ಓಹೊ ಸರಿ ಸರಿ ಈಗ ಗೊತ್ತಾಯಿತು.. ಎಂದು ಹೇಳಿ ಒಬ್ಬೊಬ್ಬರ ಪರಿಚಯ ಮಾಡಿಕೊಂಡರು. ನಮಗೂ ಖುಷಿ ಇಷ್ಟು ವರ್ಷಗಳಾದ ಮೇಲೆ ನಮ್ಮ ಗುರುಗಳಲ್ಲಿ ಒಬ್ಬರನ್ನು ನೋಡುತ್ತಿದ್ದೇವೆ, ಮಾತಾಡಿಸುತ್ತಿದ್ದೇವೆ ಎಂದು. 
ಶ್ರೀ KC ಅವರೊಂದಿಗೆ ನಾವೆಲ್ಲರು... 
ಒಳಗೆ ಹೋಗ್ರಪ್ಪ, ನೀವು ಓದಿದ ಶಾಲೆಯನ್ನು ನೋಡಿ, ನೀವು ಓದಿದ್ದ ಕೊಠಡಿಗೆ ಹೋಗಿ ಓಡಾಡಿಬನ್ನಿ ಎಂದರು. ಸರಿ ಅದಕ್ಕೆ ಕಾಯುತ್ತಿದ್ದ ನಾವೆಲ್ಲರೂ ದೊಡ್ಡಿಯಿಂದ ಬಿಟ್ಟ ಹಸು ಕರುಗಳ ತರಹ ನುಗ್ಗಿದೆವು. ಅಲ್ಲಿದ್ದ ಒಬ್ಬ ಹಿರಿಯರು, ಒಳಗೆ ಹೋಗುವ ಮುನ್ನ ಮುಖ್ಯ ಅಧ್ಯಾಪಕರು ಇದ್ದಾರೆ ಒಮ್ಮೆ ಅವರ ಅನುಮತಿ ಕೇಳಿಬಿಡಿ ಎಂದರು. 

ಸರಿ ಹಿರಿಯರ ಮಾತು ನಿಜ, ನಾವು ಹಿಂದೊಮ್ಮೆ ಓಡಾಡಿದ ಶಾಲೆಯಾದರೂ, ಈಗ ನಾವುಗಳು ಗೂಳಿಗಳ ತರಹ ನುಗ್ಗಬಾರದು ಎಂದು ನಾ ಮುಖ್ಯ ಅಧ್ಯಾಪಕರ ಕೋಣೆಗೆ ಹೋದೆ, ನನ್ನ ಕೈಲಿದ್ದ ಕ್ಯಾಮೆರ, ನನ್ನ ವೇಷ ಭೂಷಣ ನೋಡಿ, ಈತ ಯಾರೋ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದವರು ಇರಬೇಕು ಎಂದು, ಬನ್ನಿ ಬನ್ನಿ ಒಳಗೆ ಕೂತುಕೊಳ್ಳಿ ಏನು ಸಮಾಚಾರ ಎಂದರು. 

ಗುರುಗಳೇ ನಾನು ಈ ಶಾಲೆಯ ವಿದ್ಯಾರ್ಥಿ, ನಾವುಗಳು ೮೮ರಲ್ಲಿ ಈ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ಹೋಗಿದ್ದೆವು, ಶಾಲೆಯನ್ನು ನೋಡುವ ಮನಸ್ಸಾಯಿತು, ಪ್ರತಿ ವರ್ಷವೂ ಇಲ್ಲಿಯೇ ಭೇಟಿ ಆಗುತ್ತಿದ್ದೆವು, ಆದರೆ ಭಾನುವಾರ ಬರುತ್ತಿದ್ದರಿಂದ, ಶಾಲೆಯೊಳಗೆ ಬರಲು ಅವಕಾಶವಿರಲಿಲ್ಲ, ಇಂದು ಶನಿವಾರ ನಿಮ್ಮನ್ನು ಭೇಟಿಯಾಗಲು ಬಂದೆವು ಎಂದೆ. 

ಓಹೊ ಹೌದಾ.. ಒಳ್ಳೆಯಾದಾಯಿತು ಬನ್ರಪ್ಪಾ.. ಎಂದು ಎಲ್ಲರನ್ನು ಒಳಗೆ ಕರೆದು ಕೂರಲು ಹೇಳಿದರು. ಒಂದು ಕಾಲದಲ್ಲಿ ಈ ಕೋಣೆಗೆ ಹೋಗುತ್ತಿದ್ದೇವೆ ಎಂದರೆ ಅದ್ಭುತ ಅಪರಾಧ ಮಾಡಿದ್ದೇವೆ ಎನ್ನುವ ಅಳುಕು ಮನದಲ್ಲಿ ಇರುತ್ತಿತ್ತು, ಹಾಕಿದ ಅಂಗಿ ಒದ್ದೆಯಾಗಿರುತ್ತಿತ್ತು, ಆದರೆ ಇಂದು ಒಂದು ರೀತಿಯಲ್ಲಿ ರಾಜ ಮರ್ಯಾದೆ :-). ಗುರು ಶಿಷ್ಯರ ಅದ್ಭುತ ಸಾಮರಸ್ಯಕ್ಕೆ ಒಂದು ಉತ್ತಮ ಉದಾಹರಣೆ. ಅವರು ನಮಗೆ ಮರ್ಯಾದೇ ಕೊಡುತ್ತಿದ್ದ ರೀತಿ, ನಾವುಗಳು ನಮ್ಮ ಶಿಕ್ಷಕರನ್ನು ನೆನೆಯುತ್ತಿದ್ದ ರೀತಿ ಎಲ್ಲವೂ ನಮಗೆ ಉತ್ತಮ ಅನುಭವ ಕೊಡುತ್ತಿತ್ತು. 
ನಗು ಮೊಗದ ಶ್ರೀ DVN 
ಸುಮಾರು ಒಂದು ಘಂಟೆ ನಮ್ಮ ಪರಿಚಯ, ಶಾಲೆಯ ಈಗಿನ ಸ್ಥಿತಿ ಗತಿ ಎಲ್ಲವೂ ವಿನಿಮಯವಾಯಿತು. ರಾಸಾಯನಿಕ ವಿಜ್ಞಾನವನ್ನು ಹೇಳಿಕೊಡುತ್ತಿದ್ದ ನಮ್ಮ ನೆಚ್ಚಿನ ಶ್ರೀ DVN ಅವರ  ಮಾತುಗಳು,  ಮತ್ತು ಗುರು ಶಿಕ್ಷಕರ ಬಾಂಧವ್ಯದಲ್ಲಿ ಒಳ್ಳೆಯ ಕೆಮಿಸ್ಟ್ರಿ ಇದ್ದದ್ದು ಇಬ್ಬರಿಗೂ ಹೇಳಿಕೊಳ್ಳಲಾರದ ಸಂತಸ ನೀಡುತ್ತಿತ್ತು. 
ಹೋಗಲಿಕ್ಕೂ ಹೆದರುತ್ತಿದ್ದ ಕೋಣೆಯಲ್ಲಿ ಕೂತದ್ದು
ಮೂರು ವರ್ಷ ಹಿಂದಿ ಭಾಷೆಯನ್ನ ಕಲಿಸಿ ಕೊಟ್ಟ ಶ್ರೀ SH (ಶ್ರೀಧರ್ ಹೆಗ್ಡೆ) ನಮ್ಮೆನ್ನೆಲ್ಲ ನೋಡಿ ಖುಷಿ ಪಟ್ಟದ್ದು, ಆಗಿನ ವಿದ್ಯಾರ್ಥಿಗಳೇ ವಿದ್ಯಾರ್ಥಿಗಳು ಎನ್ನುವ ಬೆನ್ನು ತಟ್ಟುವಂತಹ ನುಡಿಗಳು ನಮಗೆ ಹುಮ್ಮಸ್ಸು ತುಂಬಿತು. 
ಶ್ರೀ SH 
೨೦೧೭ಇಸವಿಯಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಶುರುವಾಗಿ ನೂರು ವರ್ಷದ ಸಂಭ್ರಮದಲ್ಲಿ ತೇಲಲಿದೆ, ಅದರ ಸಮಾರಂಭಕ್ಕೆ ನಮಗೆ ಆಹ್ವಾನ ಬರುತ್ತದೆ ಎನ್ನುವಾಗ ನಮಗೆ ಮತ್ತೆ ನಮ್ಮ ಶಾಲೆಯನ್ನು, ಮತ್ತು ನಮ್ಮ ಶಿಕ್ಷಕರನ್ನು ನೋಡಬಹುದು ಎನ್ನುವ ಸಂತಸ. ಆ ಘಳಿಗೆಗಳಿಗೆ ಮನಸ್ಸು ಕಾಯುತ್ತಿದೆ. 
ಈ ದೇಗುಲದ ಇತಿಹಾಸ 
ಕಾಲನ ಹೊಡೆತದಲ್ಲಿ ಎಷ್ಟೂ ಬದಲಾಗುತ್ತೆ, ದೇವರ ಆಲಯ ಕೆಲವೊಮ್ಮೆ ಕಾಲನ ದಾಳಿಯಲ್ಲಿ ನಲುಗುವುದು ಸಹಜ, ಆದರೆ ದೇಗುಲ ದೇಗುಲವೇ ಸರಿ. ಅದಕ್ಕೆ ಯಾವುದೇ ಭಿನ್ನವೂ ಆಗಿರೋಲ್ಲ, ಅಂಥಹ ಮನಸ್ಸು ನಮ್ಮದು. 
ದೇಗುಲಕ್ಕೆ ಒಂದು ಘಂಟೆ ಬೇಕಲ್ಲವೇ!!!
ನಾವು ಎಂಟನೆ ತರಗತಿ ಓದಿದ ಮೆಟ್ಟಿಲು ಮೆಟ್ಟಿಲು ಇದ್ದ ಕೊಠಡಿ.. ಅಂದು ದೊಡ್ಡದಾಗಿ ಕಾಣುತ್ತಿದ್ದ ಕೊಠಡಿ ಎಂದು ಮೆಟ್ಟಿಲುಗಳೆಲ್ಲ ಹೋಗಿ ಪ್ರಯೋಗಾಲಯವಾಗಿದೆ.. ಆದರೂ ಅಲ್ಲಿ ಕೆಲ ಕ್ಷಣಗಳು ನಿಂತು ನಾವುಗಳು ಅನುಭವಿಸಿದ ಆ ಸುಂದರ ಕ್ಷಣಗಳು ಪದಗಳಿಗೆ ನಿಲುಕುವುದಿಲ್ಲ. 
ಎಂಟನೆ ತರಗತಿ ಕಳೆದದ್ದು ಈ ಕೊಠಡಿಯಲ್ಲಿ 
ನಾವು ಒಂಭತ್ತು ಮತ್ತು ಹತ್ತನೇ ತರಗತಿ ಓದಿದ ಕೋಣೆಗೆ ಹೋಗಬೇಕೆಂಬ ಆಸೆಯಿತ್ತು, ಆದರೆ ಶನಿವಾರ ಶಾಲೆ  ಸಮಯ ಮುಗಿದ್ದಿದ್ದರಿಂದ ಅವಕಾಶವಿರಲಿಲ್ಲ, ಆದರೆ  ಮನಸ್ಸು ಒಮ್ಮೆ ಬಾಸ್ ನ ಕೇಳಿಯೇ ಬಿಡೋಣ ಅನ್ನಿಸಿ, ಮತ್ತೆ ಮುಖ್ಯ ಅಧ್ಯಾಪಕರ ಕೊಠಡಿಗೆ ಓದಿದೆ, ಅವರು ನಸು ನಗುತ್ತಾ "ಬೇಗ ಹೋಗಿ ಬಂದು ಬಿಡಿ ಶಾಲಾ ಸಮಯ ಮುಗಿದಿದೆ, ಎಲ್ಲರೂ ಮ್ಯಾನೇಜ್ ಹೋಗಬೇಕು.. " ಎಂದರು. ನಮ್ಮ ಹುಮ್ಮಸ್ಸನ್ನು, ಉತ್ಸಾಹವನ್ನು ಹಾಗೆ ಇರಲು ಬಿಟ್ಟು ಶಾಲೆಯೊಳಗೆ ಓಡಾಡಲು ಅವಕಾಶ ನೀಡಿದ ಮುಖ್ಯ ಅಧ್ಯಾಪಕರಿಗೆ ಮತ್ತು ಸಿಬ್ಬಂಧಿ ವರ್ಗಕ್ಕೆ ಒಂದು ಸಲಾಂ. 
ಮೊದಲನೇ ಮಹಡಿಯ ಈ ಓಣಿಯಲ್ಲಿ ಓಡಾಡಿದ ಸವಿ ನೆನಪು 

ಸುಂದರ ಭವಿಷ್ಯ ರೂಪಿಸಿದ ಅಂಗಣ 

ಯಂ ಬ್ರಹ್ಮ ವರುಣೇಂದ್ರ ರುದ್ರಮರುತಃ.


ಜ್ಞಾನ ಪ್ರಕಾಶ ಬೀರುವ ಪಾವಟಿಗೆಗಳು 

ಮಾತೆ ಸರಸ್ವತಿ 

ಪ್ರತಿಭಾವಂತರು ಬೆಳಗಿದ ಸಭಾಂಗಣ 
LKG ಮಕ್ಕಳ ಉತ್ಸಾಹ ತುಂಬಿದ್ದ ಮನಸ್ಸು ಮೊದಲನೇ ಮಹಡಿಗೆ ಓಡಿತು.  ಕೊನೆಯ ಬಾಗಿಲಿನ ಬೇಗ ತೆಗೆಯುವುದೇ ಕಾಯುತ್ತಿದ್ದೆವು.. ಒಳಗೆ ನುಗ್ಗಿ ನಾ ಇಲ್ಲಿ ಕೂರುತ್ತಿದ್ದೆ, ನಾ ಇಲ್ಲಿ, ಅವನು ಇಲ್ಲಿ ಎಂದು ಗುಜು ಗುಜು ಮಾತಾಡುತ್ತಾ, ಅವರವರು ಕೂರುತ್ತಿದ್ದ ಸ್ಥಳಗಳಲ್ಲಿ ಕೂತಾಗ, ಅರೆ, ನಮ್ಮ ದೇಹಕ್ಕೆ ವಯಸ್ಸಾಗಿದೆ, ಈ ಮೂರು ದಶಕಗಳಲ್ಲಿ ಬುದ್ದಿ ಚಿಗುರಿದೆ, ನಮ್ಮ ನಮ್ಮ ಅಂತಸ್ತು ನಮ್ಮ ನಮ್ಮ ಯೋಗ್ಯತೆಗೆ ತಕ್ಕಂತೆ ಬೆಳೆದಿದೆ, ಆದರೆ ಆದರೆ ಮನಸ್ಸು ಮಾತ್ರ ಶಾಲೆಯಿಂದ ಹೊರ ಪ್ರಪಂಚಕ್ಕೆ ಬರುವಾಗ ಹೇಗಿತ್ತೋ ಹಾಗೆ ಇದೆ ಅನ್ನಿಸಿತು . 

 ಒಂದಷ್ಟು ಹೊತ್ತು ಅಲ್ಲಿಯೇ ನಿಂತು, ನಂತರ ಹೊರಗೆ ಬಂದೆವು.. ನಮಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಶಾಲೆಯಲ್ಲಿ ಚಿತ್ರಕಲೆಯನ್ನು ಸೊಗಸಾಗಿ ಹೇಳಿಕೊಟ್ಟ ನಮ್ಮ ಗುರುಗಳು ಶ್ರೀ CSP ಸಿಕ್ಕರು. ರೂಪಶ್ರೀ ಮತ್ತು ಲೀಲಾ ತಾವು ಶಾಲೆಯ ೭೫ನೆ ವರ್ಷದ ಸಂಭ್ರಮದಲ್ಲಿ ತಾವು ಏರ್ಪಾಡು ಮಾಡಿದ್ದ ಅಲಂಕಾರ ವಸ್ತುಗಳ ಬಗ್ಗೆ ಹೇಳಿದರು, ಅದನ್ನು ನೆನಪಿಗೆ ತಂದ ಕೂಡಲೇ ಅದನ್ನು ಗುರುಗಳು ಸಂಭ್ರಮಿಸಿದ ರೀತಿ ಸೂಪರ್ ಇತ್ತು.  ಗುರುಗಳು ಎಂಟನೆ ತರಗತಿಯಲ್ಲಿ ತಾವೇ ಬಿಡಿಸಿದ ಒಂದು ಚಿತ್ರ "ಉದ್ದನೆ ಮೊಳಕೈ.. ಅದರ ಕೆಳಗೆ ಒಂದಷ್ಟು ನಾಯಿ ನರಿ ತೋಳಗಳು ಕೈಯನ್ನು ತಿನ್ನುತ್ತಿರುವ ಚಿತ್ರ.. ಇವುಗಳನ್ನು ನೆನಪಿಗೆ ತಂದು ಕೊಟ್ಟ ನನ್ನ ಮಿತ್ರರಿಗೆ ಒಂದು ಜೈ. ಒಂದು ಅದ್ಭುತ ಭೇಟಿ ಅದಾಗಿತ್ತು.
ಶ್ರೀ CSP 

ಚಿತ್ರಕಲಾಕರರ ಜೊತೆಯಲ್ಲಿ ನಾವು 

ಐದು ವರ್ಷಗಳಿಂದ ನಾವೆಲ್ಲರೂ ಭೇಟಿ ಆಗುತ್ತಿದ್ದರೂ, ಏಳು, ಎಂಟು ಗೆಳೆಯರಷ್ಟೇ ಸಿಗುತ್ತಿದ್ದದ್ದು. ಆದರೆ ಈ ಬಾರಿ ಬಂಪರ್.. ಹನ್ನೆರಡು ಮಂದಿ ಬಂದದ್ದು , ಇನ್ನು ಆರು ಗೆಳೆಯರು ಕಾರಣಾಂತರಗಳಿಂದ ಬರಲು ಆಗದಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿದ್ದು ನೋಡಿದರೆ ಈ ಗುಂಪು ಬಾಳಿ ಬದುಕುತ್ತದೆ ಎಂದು ಅನ್ನಿಸಿತು. 
ನಮ್ಮದೇ ಕೊಠಡಿಯ ಮುಂದೆ !!!
ಇಂದು ಬಂದವರು..ಕ್ರಮವಾಗಿ ಎಡದಿಂದ ಬಲಕ್ಕೆ.. 
ಕೃಷ್ನೋಜಿ ರಾವ್, ಶ್ಯಾಮ್, ಅನುಪ್, ಶ್ರೀಕಾಂತ್, ಸತೀಶ್ ಜೆ ಎಂ, ರೂಪಶ್ರೀ, ಲೀಲಾ, ಬಾಲಾಜಿ, ವೆಂಕಟಾಚಲ, ಯೋಗೇಶ್ , ವಾಣೇಶ್, ಪ್ರಸಾದ್.. 

ಬರಬೇಕಿದ್ದವರು.. ಶಶಿಧರ್, ಬ್ರಹ್ಮಾನಂದ, ಕಿರಣ್, ಸತೀಶ್ ಬಿ ಎಂ, ಸತೀಶ್ ಟಿ ಏನ್, ಚಂದ್ರಪ್ರಭ, ವಿನೋದ್, ಪದ್ಮನಾಭ. ಇವರು ಬಂದಿದ್ದಾರೆ ಹಾಜರಿ ಇಪ್ಪತ್ತು ಆಗುತ್ತಿತು.. ಇರಲಿ ಇರಲಿ ಮತ್ತೊಮ್ಮೆ ಸಿಕ್ಕೆ ಸಿಗುತ್ತೇವೆ.. ಮೊದಲಬಾರಿಗೆ ಎರಡಂಕೆ ತಲುಪಿದ ನಮ್ಮ ಹಾಜರಿ ಖಂಡಿತ ಇನ್ನಷ್ಟು ಹೆಚ್ಚಾಗುತ್ತದೆ. 

ಸುಮಾರು ನಾಲ್ಕು ಘಂಟೆಗಳು ಹೇಗೆ ಕಳೆದೆವು ಅರಿಯದಾಯಿತು .. ಮಾತು ಮಾತು ಮಾತು ಮಾತು ಮತ್ತು ಮಾತು. ಯೋಗೇಶನ ನಿಲ್ಲದ ಮಾತುಗಳು, ವೆಂಕಿ ಅದಕ್ಕೆ ಸಾತ್ ಕೊಟ್ಟದ್ದು, ಶ್ಯಾಮ್ ಹೊಟ್ಟೆ ಹಸಿವು ಕಣ್ರೋ ಅಂದ್ರೂ ಕೇಳದೆ ಮಾತಿನ ಲೋಕದೊಳಗೆ ಕಳೆದು ಹೋಗಿದ್ದ ಇತರರು ಸೂಪರ್ ಸೂಪರ್.. 
ಗುರುಗಳ ಜೊತೆಯಲ್ಲಿ ಶಿಷ್ಯರು 
ಒಂದು ಸಾರ್ಥಕ ಶನಿವಾರವನ್ನು ಅಷ್ಟೇ ಸಾರ್ಥಕ ರೀತಿಯಲ್ಲಿ ಕಳೆದದ್ದು, ಜೊತೆಯಲ್ಲಿ ಹೊಸ ಸಂವತ್ಸರದಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚಿನ ಗೆಳೆಯರು, ಸಹಪಾಠಿಗಳು ಒಂದೇ ಕಡೆ ಸೇರಿದ್ದು ಈ ವರುಷದ ಹರುಷದ ಸಂಗತಿ....!

ಮತ್ತೊಮ್ಮೆ ಕರೆಗೆ ಓಗೊಟ್ಟು ಬಂದ ಎಲ್ಲರಿಗೂ ಒಂದು ಸಲಾಂ!!!