ರಥದಲ್ಲಿದ್ದ ಅರ್ಜುನ ಕಣ್ಣು ಒರೆಸಿಕೊಂಡ.. .. ಪಾರ್ಥಸಾರಥಿ ಶ್ರೀ ಕೃಷ್ಣ ಒಮ್ಮೆ ಮುಗುಳು ನಕ್ಕ
ಕುರುಕ್ಷೇತ್ರದ ಯುದ್ಧವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಸಂಜಯ.. ಈ ವಿಷಯವನ್ನ ಹೇಳಿದಾಗ ಧೃತರಾಷ್ಟ್ರ "ಸಂಜಯ.. ಶ್ರೀ ಕೃಷ್ಣನಿಗೆ ರಥವನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದಾನೆ.. ಆ ಧೂಳಿನ ಕಣಗಳು ಅರ್ಜುನನ ಕಣ್ಣಿಗೆ ಧೂಳು ತುಂಬಿಕೊಂಡು ಕಣ್ಣನ್ನು ಮಬ್ಬಾಗಿಸುತ್ತಿದೆ.. ಇದು ಗೊತ್ತಿದ್ದೂ ಶ್ರೀ ಕೃಷ್ಣ ನಿಧಾನವಾಗಿ ರಥ ಓಡಿಸಬಾರದೇ.... ಇಷ್ಟಕ್ಕೂ.. ಶ್ರೀ ಕೃಷ್ಣ ಮುಗುಳ್ ನಕ್ಕಿದ್ದು ಏತಕ್ಕಾಗಿ?"
ಟವರಿಂದ ಸಿಗ್ನಲ್ ಸರಿಯಾಗಿ ಬರುತ್ತಿರಲಿಲ್ಲ.. ಒಮ್ಮೆ ತನ್ನ ಮೋಡೆಮ್ ಅನ್ನು ಮತ್ತೊಮ್ಮೆ ಸರಿಯಾಗಿ ಅಡ್ಜಸ್ಟ್ ಮಾಡಿಕೊಂಡು ಸಂಜಯ ಮತ್ತೆ ಶುರುಮಾಡಿದ
 |
ಸಿಗ್ನಲ್ ಸಿಕ್ಕಿದ ಟವರ್!!! |
"ಮಹಾರಾಜ.. ಯುದ್ಧದ ಬಗ್ಗೆ ನಿಮಗೆ ಮೊದಲನೇ ದಿನದಿಂದ ಹೇಳುತ್ತಿದ್ದೇನೆ.. ನಿಮಗೆ ಬೇಸರವಾಗಿರಬಹುದು.. ಇಂದು ಸ್ವಲ್ಪ ಹೊತ್ತು ಬೇರೆ ಕಥೆ ಹೇಳುತ್ತೀನಿ.. ಇದು ಇನ್ನೊಂದು ಕಡೆ ಮುಂದೆ ಕಲಿಯುಗದಲ್ಲಿ ನೆಡೆಯುತ್ತಿರುವ ಘಟನೆ.. ಸ್ವಲ್ಪ ನಿಮಗೂ ಬೇಸರ ಕಳೆಯುತ್ತದೆ.. "
"ಆಗಲಿ ಸಂಜಯ.. ಕೌರವ ಪಡೆ ದಿನೇ ದಿನೇ ಕ್ಷೀಣಿಸುತ್ತಿದೆ.. ಮನಸ್ಸಿಗೆ ಕೊಂಚ ಮುದ ಕೊಡುವ ಬೇರೆ ಏನಾದರೂ ಹೇಳು."
"ಆಗಲಿ ಮಹಾರಾಜ.. ಶುರು ಮಾಡುತ್ತೇನೆ"
Over to Sanjaya from Kurukshetra .. with Cameraman "TIME".. for Kaliyuga TV
******
ಬಿಂಬ ಹೇಳುತ್ತದೆ.. ನೀ ಸರಿ ಇದ್ದರೇ.. ನಾ ನಿನ್ನ ಸರಿಯಾಗಿ ತೋರುತ್ತೇನೆ..
ಹೀಗೆ ಆಯಿತು.. ಕಮಲಾ ನೆಹರು ಶಾಲೆಯ ಮಕ್ಕಳಿಗೆ ಒಂದು ಭದ್ರ ಅಡಿಪಾಯ ಹಾಕಿಕೊಟ್ಟದ್ದು.. ಆ ಶಾಲೆಯ ಶಿಕ್ಷಕ ಶಿಕ್ಷಕಿಯರು.. ಆ ಕಾಲದಲ್ಲಿ ಬಹಳ ಹೆಸರಾಗಿದ್ದ ಆ ಶಾಲೆಯಲ್ಲಿ ಉತ್ತಮ ಶಿಕ್ಷಣ ಮಕ್ಕಳಿಗೆ ಸಿಗುತ್ತಿತ್ತು .. ಪ್ರತಿಹಂತದಲ್ಲಿಯೂ ಶಿಕ್ಷಕ(ಕಿಯ)ರು ಶಿಕ್ಷೆ ಶಿಕ್ಷಣ ಎರಡನ್ನು ನಾಣ್ಯದ ಎರಡು ಮುಖವನ್ನಾಗಿ ಮಾಡಿಕೊಂಡು ಉತ್ತಮ ವಿಚಾರಗಳನ್ನು ಹೇಳಿಕೊಡುತ್ತಾ ವಿದ್ಯಾರ್ಥಿಗಳ ಮನದಲ್ಲಿ ಹಸಿಯಾದ ಸಿಮೆಂಟ್ ನೆಲದ ಮೇಲೆ ಮೂಡುವ ಹೆಜ್ಜೆ ಗುರುತಿನಂತೆ ಅಚ್ಚಳಿಯದ ಛಾಪನ್ನು ಹಾಕಿಬಿಟ್ಟಿದ್ದರು.. ಅವರಿಗೆ ಅರಿವಿರಲಿಲ್ಲ.. ಈ ಛಾಪು ಬರಿ ಶಾಲೆಯ ಮಕ್ಕಳ ಸ್ಲೇಟು ಅಥವಾ ಪುಸ್ತಕದ ಮೇಲೆ ಮಾತ್ರವೇ ಅಲ್ಲ.. ಇದು ವಿದ್ಯಾರ್ಥಿಗಳ ಮನದ ಮೇಲೆ ಕೈ ಮೇಲಿನ ಹಚ್ಚೆಯಂತೆ ಶಾಶ್ವತವಾಗಿ ಉಳಿದಿಬಿಟ್ಟಿತು.. ವರುಷಗಳು ಎಷ್ಟೇ ಉರುಳಿದ್ದರೂ ನೆನಪುಗಳು ಮಾತ್ರ ಭದ್ರ ಕಪಾಟಿನಲ್ಲಿ ತನ್ನನ್ನು ತಾನು ಕಾಪಾಡಿಕೊಂಡಿತ್ತು.. !!!
ಹೇವಿಳಂಬಿ ನಾಮ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಗುರುವಂದನಾ ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಮಕ್ಕಳೆಂದು ಹೇಳಿ.. ತಮ್ಮ ಮನೆಗೆ ಮಕ್ಕಳನ್ನು ಒಮ್ಮೆ ಕರೆತರಬೇಕು ಎಂದು ಹಂಬಲ ಹೊತ್ತಿದ್ದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿ ಶ್ರೀಮತಿ ಗೀತಾ ಮೇಡಂ.. ಆತಿಥ್ಯದ ಜವಾಬ್ಧಾರಿ ಹೊತ್ತು ಆ ದಿನವನ್ನು ಹೇವಿಳಂಬಿ ನಾಮ ಸಂವತ್ಸರದ ಶುಕ್ಲ ಪಕ್ಷದ ದಶಮಿಯಂದು ಅಂದರೆ ಜೂನ್ ೪ ೨೦೧೭ ರ ಭಾನುವಾರದಂದು ತಮ್ಮ ಮನೆಗೆ ಪ್ರೀತಿಯ ಆಹ್ವಾನವನ್ನು ಕೊಟ್ಟಿದ್ದರು.. ಅಂದು ಎಲ್ಲಾ ದಾರಿಯೂ ಹನುಮಗಿರಿಯ ಕಡೆಗೆ ತಿರುಗಿತ್ತು.. !!!
ಈ ದಿನದ ವಿಶೇಷಕ್ಕೆ ಶ್ರೀಮತಿ ಗೀತಾ ಮೇಡಂ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಅವರ ಪತಿ ದೇವರು, ಮತ್ತು ಬಂಧು ಮಿತ್ರರು ಜೊತೆಯಲ್ಲಿ ಅವರ ಮೆಚ್ಚಿನ ವಿದ್ಯಾರ್ಥಿನಿಯರು ಸುಧಾ ಮತ್ತು ನಂದಿನಿ.. ಮೆಚ್ಚಿನ ಶಿಕ್ಷಕರನ್ನು ಕರೆದುಕೊಂಡು ಬರುವ ಜವಾಬ್ಧಾರಿ ಹೊತ್ತವರು ಮೋಹನ ಮತ್ತು ವಿಜಯನಾರಸಿಂಹ...
ಸುಮಾರು ಹನ್ನೊಂದು ಘಂಟೆಗೆ.. ಶ್ರೀಮತಿ ಪುಷ್ಪ ಮೇಡಂ, ಶ್ರೀಮತಿ ಜಾನಕಮ್ಮ ಮೇಡಂ, ಶ್ರೀಮತಿ ಈಶ್ವರಿ ಮೇಡಂ ಅವರನ್ನು ಮೋಹನ ಕರೆ ತಂದ... ಸ್ವಲ್ಪ ಸಮಯದಲ್ಲಿಯೇ ಶ್ರೀ ಮಹಾಲಿಂಗಯ್ಯ ಮಾಸ್ತರು ವಿಜಯನಾರಸಿಂಹ ಜೊತೆಯಲ್ಲಿ ಬಂದರು..
ಶ್ರೀ ಮಹಾಲಿಂಗಯ್ಯ ಮಾಸ್ತರು.. ಕಾರ್ಯಕ್ರಮದ ನಿರೂಪಣೆಯ ಭಾರವನ್ನು ಹೊತ್ತರು.. ಎಲ್ಲರನ್ನು ಮಾತಾಡಿಸುತ್ತಾ.. ಶಾಲೆಯ ಆ ದಿನಗಳ ಬಗ್ಗೆ ಕೆಲವು ವಿಷಯಗಳನ್ನ ಹೇಳುತ್ತಾ.. ವಿದ್ಯಾರ್ಥಿಗಳ ಆ ಕಾಲದ ಮನೋಭಾವವನ್ನು ಕೊಂಡಾಡುತ್ತಾ, ಆ ದಿನಗಳು ಮತ್ತು ಈಗಿನ ದಿನಗಳ ವ್ಯತ್ಯಾಸವನ್ನು ಹೇಳಿದರು.. ಮಧ್ಯೆ ಮಧ್ಯೆ ಚೆನ್ನವೀರಕಣವಿ, ಕುವೆಂಪು, ದಿನಕರ ದೇಸಾಯಿ, ವಚನಗಳ ರೂಪದಲ್ಲಿ ಶರಣರು ಮತ್ತು ಕೆಲವು ಸ್ವವಿರಚಿತ ಕವನಗಳನ್ನು ಹಾಡಿದರು..
 |
ಅಧ್ಯಕ್ಷತೆವಹಿಸಿದ ಶ್ರೀ ಮಹಾಲಿಂಗಯ್ಯ ಮಾಸ್ತರು |
ಮಧ್ಯೆ ಮಧ್ಯೆ ಹುಡುಗರ ಜೊತೆಯಲ್ಲಿ ಅದೇ ಧಾಟಿಯಲ್ಲಿ ಇಷ್ಟವಾಗುವ ಹಾಗೆ ಮಾತಾಡುತ್ತಾ, ಮನೆ ಮಕ್ಕಳನ್ನು ಮಾತಾಡಿಸುವ ಹಾಗೆ ಮನೆಯ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದರು ಶ್ರೀಮತಿ ಗೀತಾ ಮೇಡಂ..
 |
ಮಂತ್ರಮುಗ್ದರಾಗಿ ಕುಳಿತಿದ್ದ ವಿದ್ಯಾರ್ಥಿಗಳು |
ಪುಷ್ಕಳ ಭೋಜನ ಸಿದ್ಧವಾಗಿತ್ತು.. ಅಲ್ಲಿ ಏನಿರಲಿಲ್ಲ.. ಏನಿತ್ತು ಅನ್ನುವುದಕ್ಕಿಂತ. ಅಲ್ಲಿನ ಪ್ರತಿಯೊಂದು ಖಾದ್ಯ ಪದಾರ್ಥದಲ್ಲಿಯೂ ಮಸಾಲೆ ರೂಪದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಮಮತೆ ಎಲ್ಲವೂ ತುಂಬಿತ್ತು.. ಪ್ರತಿಯೊಂದು ತಿನಿಸುಗಳು ರುಚಿಕರವಾಗಿತ್ತು.. ನೋಡಪ್ಪ ನೀನು ಇದನ್ನು ತಿಂದಿಲ್ಲ.. ಇದನ್ನು ಹಾಕಿಸಿಕೊಂಡಿಲ್ಲ, ಇದನ್ನು ಹಾಕಿ.. ಹೀಗೆ ಪ್ರತಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸುತ್ತಾ, ಬಂದಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಟ್ಟೆ ತುಂಬಾ ಊಟ ಮಾಡುವಂತೆ ನೋಡಿಕೊಂಡರು ಶ್ರೀಮತಿ ಗೀತಾ ಮೇಡಂ...
 |
ಪುಷ್ಕಳ ಭೋಜನ |
ಸುಖಭೋಜನ ಉಂಡು ವಿಶ್ರಾಂತಿ ತೆಗೆದುಕೊಳ್ಳುವಾಗ.. ಮತ್ತೆ ಮಾತು, ಹಾಸ್ಯ, ನಗೆ ಬಗ್ಗೆ ಎಲ್ಲವೂ ಮೂಡಿ ಬಂತು.. ಜೊತೆಯಲ್ಲಿ
ಅರೆವಳಿಕೆ ತೆಗೆದುಕೊಂಡ ಹಾಗೆ ಎಲ್ಲರೂ ಗಪ್-ಚುಪ್.. ಸುಮ್ಮನೆ ವಶೀಕರಣಕ್ಕೆ ಒಳಗಾದಂತೆ ಮಂತ್ರ ಮುಗ್ಧರಾಗಿ ಆ ಅನುಭವದಲ್ಲಿ ಮುಳುಗೇಳುತ್ತಿದ್ದರು... ಪ್ರತಿಯೊಬ್ಬ ವಿದ್ಯಾರ್ಥಿಗಳ ಪರಿಚಯವಾಯಿತು.. ಅವರವರ ಕ್ಷೇತ್ರದಲ್ಲಿ ಅವರವರ ಪ್ರಗತಿ ಕಂಡು ಶಿಕ್ಷಕರು ಖುಷಿ ಪಟ್ಟರು.. ತಮಗೆ ಕೊಟ್ಟ ಶಿಕ್ಷಕರ ಪಟ್ಟ. ಜೊತೆಯಲ್ಲಿ ತಾವು ಹೇಳಿಕೊಟ್ಟ ಪಾಠವನ್ನು ಕಲಿತು.. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಪಡುತ್ತಾ.. ಮುಂದಿನ ಪೀಳಿಗೆಯೂ ಇದನ್ನು ಪಾಲಿಸಲಿ ಎನ್ನುವ ಆಶಯವನ್ನು ಹೊತ್ತು ಹರಸಿದರು.
ಇದಕ್ಕೆಲ್ಲ ಕಲಶವಿಟ್ಟಂತೆ..
- ವಿದ್ಯಾರ್ಥಿ ನಾರಾಯಣ ಅವರ ಸುಪುತ್ರಿ ಮಹಾಲಕ್ಷ್ಮಿ ಅಲಿಯಾಸ್ ಮಾನಸಿ ತಾನೇ ಹಾಡಿಕೊಂಡು ಪುಟ್ಟ ನೃತ್ಯವನ್ನು ಮಾಡಿದರು..ಸೊಗಸಾಗಿತ್ತು .. ಈ ಮಗು ನೃತ್ಯದಲ್ಲಿ ಚೆನ್ನಾಗಿ ಹೆಸರು ಮಾಡಲಿ, ಹಾಗೆಯೇ ತಾನಂದು ಕೊಂಡ ಹಾದಿಯಲ್ಲಿ ಯಶಸ್ಸು ಕಾಣಲಿ ಎಂದು ಹರಸಿದರು.
- ವಿದ್ಯಾರ್ಥಿನಿ ಸುಧಾಳ ಮಗಳು ಸುರಭಿ ಹಾಗೂ ಸುಪ್ರಿಯಾ ಸುಂದರ ಗಾಯನ ಎಲ್ಲರ ಮನಸ್ಸನು ಉಲ್ಲಸಿತಗೊಳಿಸಿತು..
 |
ಕಲಾ ಕುಸುಮಗಳು!!! |
ಸುಂದರ ಸಮಾರಂಭ ತಾಂಬೂಲವಿಲ್ಲದೆ ಎಂದೂ ಮುಗಿಯುವುದಿಲ್ಲ.. ಪ್ರತಿಯೊಬ್ಬರಿಗೂ ಫಲ ತಾಂಬೂಲ ಕೊಟ್ಟು ಹಾರೈಸಿದ ಹಾಗೂ ಹರಸಿದ ಆತಿಥ್ಯವಹಿಸಿದ ಶ್ರೀಮತಿ ಗೀತಾ ಮೇಡಂ ಮತ್ತು ಮನೆಯವರಿಗೆ ಅನಂತವಂದನೆಗಳು..
 |
ಸಂಸ್ಕಾರ.. ಸಂಸ್ಕೃತಿ.. |
ಈ ಕಾರ್ಯಕ್ರಮದ ಕೆಲವು ಸುಂದರ ಚಿತ್ರಗಳನ್ನು ನಿಮ್ಮ ವಿವರಿಸುತ್ತೇನೆ.. ಎಂದು ಸಂಜಯ ಹೇಳಿದಾಗ.. ಧೃತರಾಷ್ಟ್ರ ಆನಂದ ಭಾಷ್ಪವನ್ನು ತಡೆದುಕೊಳ್ಳಲಾಗದೇ.. ಅತ್ತು ಬಿಟ್ಟರು..
"ಅದೆಲ್ಲಾ ಸರಿ ಸಂಜಯ.... ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.. ಅದನ್ನು ನೀನು ಇನ್ನೂ ಉತ್ತರಿಸಿಲ್ಲ.. "
ಸಂಜಯ ತಾನೂ ಆನಂದ ಭಾಷ್ಪವನ್ನು ಒರೆಸಿಕೊಂಡು... "ಹೇಳಿ ಮಹಾರಾಜಾ" ಎಂದಾ
"ಅರ್ಜುನ ಯಾಕೆ ಕಣ್ಣು ಒರೆಸಿಕೊಂಡ.. ರಣರಂಗದ ಧೂಳಿನಿಂದಲೇ.. ಅಥವಾ ಬೇರೆ ಏನಾದರೂ ಕಾರಣವಿದೆಯೇ.. ?"
"ಮಹಾರಾಜ.. ಈ ಕಾರ್ಯಕ್ರಮದ ಬಗ್ಗೆ ಶ್ರೀ ಮಹಾಲಿಂಗಯ್ಯನವರು ತಮಗೆ ಇಷ್ಟವಾದ ರೀತಿಯಲ್ಲಿ ವಂದನಾರ್ಪಣೆ ಮಾಡಿದರು, ಜೊತೆಯಲ್ಲಿ ತಮ್ಮ ದೊಡ್ಡಬಳ್ಳಾಪುರದ ಮನೆಗೆ ಎಲ್ಲರೂ ಬರಬೇಕೆಂಬ ಆಹ್ವಾನವಿತ್ತರು... ಎಲ್ಲರೂ ಒಂದು ದಿನ ನಿಗದಿ ಮಾಡಿಕೊಂಡು ಬರುವುದಾಗ ವಾಗ್ಧಾನ ಮಾಡಿದರು.. ನಂತರ ಮಾತಾಡಿದ ಶ್ರೀಮತಿ ಈಶ್ವರಿ ಮೇಡಂ ಈ ಕಾರ್ಯಕ್ರಮ, ಗುರುವಂದನಾ ಕಾರ್ಯಕ್ರಮ ಮತ್ತು ತಮ್ಮ ವಿದ್ಯಾರ್ಥಿಗಳ ಖುಷಿ ಪಡುತ್ತಾ.. ನಿಮ್ಮಂತಹ ವಿದ್ಯಾರ್ಥಿಗಳು ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದಾಗ.. ವಿದ್ಯಾರ್ಥಿಗಳ ಕಣ್ಣಾಲಿಗಳು ಮಂಜಾದವು.. ತಕ್ಷಣ ಎಲ್ಲರೂ ಹೇಳಿದ್ದು.. ನಿಮ್ಮಂತಹ ಶಿಕ್ಷಕರು ನಮಗೆ ಸಿಕ್ಕಾಡಿದ್ದು ನಮ್ಮ ಪುಣ್ಯ ಎಂದರು.. "
 |
ನಮ್ಮ ಜೀವನದ ರೇಖೆಗಳನ್ನು ಸೇರಿಸಿ ರಂಗವಲ್ಲಿಯಾಗಿಸಿದ ಗುರುಗಳು!! |
"ಹೌದು .. ಅಲ್ಲಿ ನೆಡೆದ ಪ್ರತಿಯೊಂದು ಘಟನೆಯೂ ಮನಸ್ಸಿಗೆ ಮುದನೀಡುವಂತದ್ದೇ.. ಸಂಜಯ ಅದೆಲ್ಲಾ ಸರಿ.. ಆದರೆ ಮತ್ತೆ ನನ್ನನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದೀಯ.. ಅರ್ಜುನ ಕಣ್ಣನ್ನು ಒರೆಸಿಕೊಂಡದ್ದು ಯಾಕೆ ಇದು ನನಗೆ ಅರ್ಥವಾಗ್ತಾ ಇಲ್ಲ"
"ಮಹಾರಾಜ.. ಅರ್ಜುನ ಯುದ್ಧ ಮಾಡುತ್ತಲೇ ಇದ್ದಾ... ಕೃಷ್ಣ ಒಮ್ಮೆ ಕುದುರೆಗಳಿಗೆ ಆಯಾಸವಾಗಿದೆ.. ಸ್ವಲ್ಪ ನೀರು ಕುಡಿಸಿ ಬೆನ್ನು ನೀವಿದರೆ ಕುದುರೆಗಳಿಗೆ ಚೈತನ್ಯ ಬರುತ್ತದೆ ಎಂದಾಗ.. ಅರ್ಜುನ ಮರು ಮಾತಾಡದೆ ತನ್ನ ಗಾಂಡೀವಕ್ಕೆ ಅಂಬನ್ನು ಹೂಡಿ ಭುವಿಗೆ ಬಿಟ್ಟಾಗ.. ನೀರು ಜಿಲ್ ಎಂದು ಚಿಮ್ಮಿ ಬಂತು... ಕುದುರೆಗಳಿಗೆ ಯಥೇಚ್ಛವಾಗಿ ನೀರು ಕುಡಿಸಿ ಮೈದಡವಿದ ಶ್ರೀ ಕೃಷ್ಣ... ಅರ್ಜುನನಿಗೆ.. ಪಾರ್ಥ.. ನೀನು ಗಂಗಾ ಮಾತೆಗೆ ನಮಿಸಿ.. ಸ್ವಲ್ಪ ದಾಹ ಇಂಗಿಸಿಕೊ.. ಇದರ ಮದ್ಯೆ ನಾ ಒಂದು ಪುಟ್ಟ ಘಟನೆ ಹೇಳುತ್ತೇನೆ.. ಎಂದಾ"
"ಸರಿ ಮುಂದೆ ಹೇಳು ಸಂಜಯ"
"ಮಹಾರಾಜ.. ಶ್ರೀ ಕೃಷ್ಣ ಅರ್ಜುನನಿಗೆ.. ಕಿರೀಟಿ.. ನಾ ಉಪದೇಶಿಸಿದ ಗೀತೆ ಭಗವದ್ಗೀತೆ ಎಂದು ಹೆಸರಾಗಿದೆ.. ಅದೇ ಹೆಸರನ್ನು ಹೊತ್ತ ಶ್ರೀಮತಿ ಗೀತಾ ಮೇಡಂ ಅವರು ಹೇಳಿದ ಒಂದು ಮಾತು ನಿನಗೆ ಹೇಳುತ್ತೇನೆ.. ಗುರುಗಳು ಶಿಷ್ಯರನ್ನು ತಮ್ಮ ಮಕ್ಕಳ ಹಾಗೆ ನೋಡಿಕೊಂಡಾಗ .. ಶಿಷ್ಯರು ಗುರುಗಳನ್ನು ತಮ್ಮ ಹೃದಯದಲ್ಲಿ ಆರಾಧಿಸುತ್ತಾರೆ.. ಇದು ಕೊಡು ಕೊಳ್ಳು ಸಂಸ್ಕೃತಿ.. ಶ್ರೀಮತಿ ಗೀತಾ ಮೇಡಂ ಇಂದು ಆತಿಥ್ಯ ವಹಿಸಿದ್ದರೂ ಕೂಡ ಮುಖ್ಯ ವಾಹಿನಿಗೆ ಬರದೇ.. ಮೆಲ್ಲನೆ ಪರದೆಯ ಹಿಂದೆಯೇ ಸರಿದಿದ್ದರು.. ಊಟೋಪ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.. ಕಾರ್ಯಕ್ರಮದ ಅಂಚಿನಲ್ಲಿ ಅವರಾಡಿದ ಒಂದು ಮಾತು ಇಡೀ ಕಾರ್ಯಕ್ರಮದ ಸಾರ್ಥಕತೆಯನ್ನು ಸಾರುತ್ತಿತ್ತು.. ..ಅವರಾಡಿದ ಮಾತುಗಳನ್ನು ಹೇಳುತ್ತೇನೆ ಕೇಳು ಪಾರ್ಥ ಎಂದ ಪಾರ್ಥಸಾರಥಿ"
 |
ಈ ಕಾರ್ಯಕ್ರಮಕ್ಕೆ ವರ್ಣ ತುಂಬಿದ
ಶ್ರೀಮತಿ ಗೀತಾ ಮೇಡಂ |
"ನನ್ನ ನೆಚ್ಚಿನ ಸಹೋದ್ಯೋಗಿಗಳೇ.. ನನ್ನ ವಿದ್ಯಾರ್ಥಿಗಳೇ.. ನನ್ನ ನೆಚ್ಚಿನ ವಿದ್ಯಾರ್ಥಿಗಳೇ.. ನನಗೆ ಒಬ್ಬನೇ ಮಗ ಎಂದುಕೊಂಡಿದ್ದೆ.. ನೀವೆಲ್ಲರೂ ನನ್ನ ಮಕ್ಕಳೇ.. ನೀವು ಬಂದದ್ದು ಖು... ಷಿ.. ಯಾ.. ಯಿ ... ತು... ಇಷ್ಟು ಹೇಳೋಕೆ ಅವರಿಗೆ ಆಗಲಿಲ್ಲ.. ಕಣ್ಣುಗಳು ತುಂಬಿಬಂದಿದ್ದವು.. ಕಣ್ಣೀರು ಒರೆಸಿಕೊಳ್ಳಲು ಪಕ್ಕಕ್ಕೆ ತಿರುಗಿದರು.. "
ಇದನ್ನು ಕೇಳಿದ ಪಾರ್ಥ.. ಹೌದು ಪರಮಾತ್ಮ.. ಗುರುಗಳನ್ನು ಗೌರವಿಸುವ ಶಿಷ್ಯರು.. ಶಿಷ್ಯರನ್ನು ಮಕ್ಕಳು ಎಂದು ಕೊಳ್ಳುವ ಗುರುಗಳು ಇರುವಾಗ.. ಗುರುಗಳಿಗೆ ಕೊಂಬು ಯಾವಾಗಲೂ ಇದ್ದೆ ಇರುತ್ತದೆ.. ಸಾರ್ಥಕ ಕ್ಷಣಗಳು ಇವು.. ಈ ಮಾತುಗಳನ್ನು ಕೇಳಿ ನನಗೂ ಆನಂದ ಭಾಷ್ಪ ಉಕ್ಕುತ್ತಿದೆ.. ಈಗ ಮೊರೆಯನ್ನು ತೊಳೆದುಕೊಂಡರೆ.. ಆ ಆನಂದ ಭಾಷ್ಪಗಳು ನೀರಲ್ಲಿ ಕರಗಿಹೋಗುತ್ತದೆ.. ಹಾಗೆ ಇರಲಿ.. ಸುಮ್ಮನೆ ಕೈಯಲ್ಲಿ ಒರೆಸಿಕೊಂಡು ನನ್ನ ವಸ್ತ್ರಕ್ಕೆ ಅಂಟಿಸಿಕೊಂಡು ಬಿಡುತ್ತೇನೆ.. ಇದು ನನಗೂ ಮಾದರಿಯಾಗಲಿ" ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡ..
 |
ಸುಂದರ ಸಮಯಕ್ಕೆ ಕಾರಣಕರ್ತರು |
"ಇದೆ ಕಾರಣ ಮಹಾರಾಜ ಅರ್ಜುನ ಕಣ್ಣು ಒರೆಸಿಕೊಂಡದ್ದು.. "
"ಸಂಜಯ.. ಅದು ಸರಿ.. ಈ ಕಾರ್ಯಕ್ರಮ ನೆಡೆದ ಮನೆಯ ಹೆಸರೇನು... ಹೇಳು.. "
ಈಗ ಕಣ್ಣನ್ನು ಒದ್ದೆ ಮಾಡಿಕೊಳ್ಳುವ ಸರದಿ ಸಂಜಯನದು.. "ಹೌದು ಮಹಾರಾಜಾ.. ಇದರ ಕಡೆಗೆ ಗಮನ ಹರಿದೇ ಇರಲಿಲ್ಲ.. ಸರಿಯಾಗಿದೆ.. ಆದರೆ ಒಂದು ಸಣ್ಣ ದೋಷವಿದೆ.. ಇದು ಆನಂದ ನಿಲಯ ಮಾತ್ರವಲ್ಲ.. "ಆನಂದ-ಭಾಷ್ಪ-ನಿಲಯ.. "
 |
ಇದು ಆನಂದ ನಿಲಯ ಮಾತ್ರವಲ್ಲ.. ಆನಂದ ಭಾಷ್ಪ ನಿಲಯ
|
"ಸಂಜಯ.. ತುಂಬಾ ಖುಷಿಯಾಯಿತು.. ನಿನಗೆ ಕೋಟಿ ಕೋಟಿ ನಮಸ್ಕಾರ.. ಹಾಗೆಯೇ.. ಈ ಗುರು-ಶಿಷ್ಯ ಪರಂಪರೆ ಹೀಗೆಯೇ ಮುಂದುವರೆಯಲಿ.. ಸರಿ ನಾ ಸ್ವಲ್ಪ ಹೊತ್ತು ವಿಶ್ರಮಿಸುತ್ತೇನೆ.. ನಂತರ ಮತ್ತೆ ನೀ ಧರ್ಮಕ್ಷೇತ್ರ ಕುರುಕ್ಷೇತ್ರದ ಸಂಗತಿಗಳನ್ನು ಮುಂದುವರೆಸು"
"ಸರಿ ಮಹಾರಾಜಾ ಹಾಗೆಯೇ ಆಗಲಿ"
With Cameraman "TIME" .. narrated by Sanjaya from Kurukshetra for KALIYUGA TV"
*****
ನಿಜ ಗೆಳೆಯರೇ ಇಂದಿನ ಕಾರ್ಯಕ್ರಮ ಸುಂದರ ಸುಮಧುರ ಮಧುರ ಮಧುರ ಮಧುರ.. ಸದಾ ನೆನಪಲ್ಲಿ ಉಳಿಯುವಂತೆ ಕಾರ್ಯಕ್ರಮ ಮೂಡಿಬಂದಿದ್ದು ಎಲ್ಲರಿಗೂ ಖುಷಿ ತಂದಿತು.. ಅದರ ಕೆಲವು ಮಧುರ ಕ್ಷಣಗಳು ಚಿತ್ರಗಳಾಗಿ ಮೂಡಿ ಬಂದಿವೆ..
ನೋಡಿ .. ಖುಷಿ ಪಡಿ.. ಆನಂದಿಸಿ.. ಮುಂದಿನ ಪೀಳಿಗೆಗೆ ಕೊಂಡೊಯ್ಯಿರಿ..
ಶುಭವಾಗಲಿ.. ಮತ್ತೊಮ್ಮೆ ಸೇರುವ ತನಕ ತಾತ್ಕಾಲಿಕ ವಿರಾಮ ತೆಗೆದುಕೊಳ್ಳೋಣ.. ವಾಟ್ಸಾಪ್ ಗ್ರೂಪ್ ಇದ್ದೆ ಇದೆ.. ಮಾತಾಡಲಿಕ್ಕೆ ಹರಟೆ ಹೊಡೆಯಲಿಕ್ಕೆ ಮತ್ತು ಒಬ್ಬರ ಯಶಸ್ಸನ್ನು ಇನ್ನೊಬ್ಬರು ಗೌರವಿಸಿ ಸಂಭ್ರಮಿಸೋಕೆ.. !!!
 |
ಒಂದು ಬ್ರೇಕ್ |
ಇಲ್ಲಿಗೆ ಶುಭವಾರ್ತ ಪ್ರಸಾರಕ್ಕೆ ಕಮರ್ಷಿಯಲ್ ಬ್ರೇಕ್.!!!!