Thursday, November 30, 2017

ಶಶಿಯ ಪ್ರತಿ ನಿಶ್ಚಿತಾರ್ಥವಾದ ಮಧುರ ಕ್ಷಣ

ಶ್ರೀಕರ ಶುಭಕರ ಶಶಿಧರ ಮೊದಲ ಪ್ರತಿ ಮೊದಲ ಪ್ರತಿಭಾ ಮೊದಲ ಪ್ರತಿಭಾಕ್ಕ

ಏನಾಯಿತು ಅಂತೀರಾ .. ಕೈಗೆ  ಕಟ್ಟಿದ ಗಡಿಯಾರವನ್ನು ರಿವ್ ಅಂತ ತಿರುಗಿಸಿದೆ.. ೧೯೯೮ ರ ಆಸುಪಾಸಿಗೆ ಓಡಿತು.. 

"ಶಶಿ.. ನಿನ್ನ ಫ್ರೆಂಡ್ಸ್ ಬಂದ್ರ.. ಮೊದಲೇ ಲೇಟ್ ಆಗ್ತಾ ಇದೆ.. ಅಲ್ಲಿ ತನಕ ಹೋಗಬೇಕು"

"ಬರ್ತಾರೆ ಡ್ಯಾಡಿ..  ಅವರಿಗೆ ಹೇಳಿದ್ದೆ.. ಸರಿಯಾದ ಸಮಯಕ್ಕೆ ಬರಬೇಕು ಅಂತ.. "

"ಏನೂ ಬರ್ತಾರೋ.. ಯಾವಾಗಲೂ ನಿನ್ನ ಫ್ರೆಂಡ್ಸ್ ಲೇಟ್"

"ಹೂಂ.. ಹೂಂ"

ಶಶಿ ಮತ್ತು ಶಶಿಯ ಅಪ್ಪ ಆಡುತ್ತಿದ್ದ ಮಾತುಗಳು.. ನಿಶ್ಚಿತಾರ್ಥಕ್ಕೆ ಮಾಲೂರಿಗೆ ಹೋಗಲು ಸಿದ್ಧವಾಗಿದ್ದರು.. ನಾವು ಬೇಗ ಹೋಗಬೇಕಿತ್ತು.. ಕಾರಂತರಗಳಿಂದ ಕೊಂಚ ತಡವಾಗಿತ್ತು.. ಆಗ ಮೊಬೈಲ್, ಬೈಕ್ ಇರಲಿಲ್ಲ. ಬಸ್ಸೇ ಗಟ್ಟಿ.. ನಾನೂ ಲೋಕಿ ಕೊರವಂಗಲದ ಶಶಿ ಮನೆಗೆ ಹೋದೆವು.. ವೆಂಕಿ  ಬರಲ್ಲ ಅಂದಿದ್ದ.. ಆದರೂ ನಾವು ಬಿಡಲಿಲ್ಲ.. ಆಗ ಬಿಟಿಎಂ ಲೇಔಟ್ ನಲ್ಲಿದ್ದ ಅವನನ್ನು ಬಿಡದೆ ಕಾಡಿಸಿದೆವು.. ಅವನು ಸೀದಾ ಮಾಲೂರಿಗೆ ಬರುತ್ತೇನೆ ಎಂದು ಹೇಳಿದ ..  

ನಾನು, ಲೋಕಿ, ಶಶಿ ಜೊತೆಯಲ್ಲಿ  ಹರಟುತ್ತಾ ಮಾಲೂರಿಗೆ ವಾಹನ ಬಂದು ನಿಂತಿತು .. ಹೊಟ್ಟೆಗೆ ಒಂದಷ್ಟು ಆಧಾರವಾಯಿತು.. ನಿಶ್ಚಿತಾರ್ಥದ ಕಾರ್ಯಕ್ರಮ ಆರಾಮಾಗಿ ನೆರವೇರಿತು.. ನಾವು ಛತ್ರದ ಬಾಗಿಲಿನ ಕಡೆಗೆ ನೋಡುತ್ತಿದ್ದೆವು.. ವೆಂಕಿ ಬರ್ತಾನೆ ಅಂತ.. ಹಾಗೂ ಹೀಗೂ ವೆಂಕಿ ಆ ಬಸ್ಸು ಈ ಬಸ್ಸು ಅಂತ ಹಿಡಿದು ಮಾಲೂರಿಗೆ ಬಂದ.. 

ಕ್ಲೀನ್ ಶೇವ್ ಮಾಡಿದ ಮುಖ.. ಮಧ್ಯಕ್ಕೆ ಬೈತಲೆ ಬಾಚಿಕೊಂಡು.. ಕಡು ನೀಲಿ ಬಣ್ಣದ  ಶರ್ಟ್ ತೊಟ್ಟಿದ್ದ ಅವನು ಬಂದು ಕೂತಾಗ ನಗು ಬರುತ್ತಿತ್ತು.. ಅವನ ಪಕ್ಕದಲ್ಲಿ ಮಾಲೂರಿನ ಕೆಲವು ಸಾಬರು ಕೂತಿದ್ದರು.. ಇವನ ಮೊಗವನ್ನು ನೋಡಿ ಇವ ನಮ್ಮವ ಅಂದುಕೊಂಡು.. ಚೂರು ಪಾರು ಉರ್ದುವಿನಲ್ಲಿ ಮಾತಾಡಿದರು.. ಇವನೂ ಕಮ್ಮಿಯೇ ಉರ್ದು, ಹಿಂದಿ, ಕನ್ನಡ, ತೆಲುಗು ಸೇರಿಸಿ, ಬೆರೆಸಿ ಕಾಕ್ಟೈಲ್ ಭಾಷೆಯಲ್ಲಿ ಮಾತಾಡುತ್ತಿದ್ದ.. ನಮಗೆ ನಗು.. ಮಕ್ಕಳ ನಗ್ರಿ ನಗ್ರಿ ಅಂತ ಬಯ್ದ ವೆಂಕಿ.. 

ಪೊಗದಸ್ತಾದ ಊಟ ಆಯಿತು.. ಬನ್ರೋ ಪ್ರತಿ ಮನೆಗೆ ಹೋಗೋಣ ಅಂದ ಶಶಿ.. ನಮಗೆ ಸಂಕೋಚ.. ಹೋಗೋದಾ.. ಏನೋ ಮಾಡೋದು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.. ಬೇರೆ ದಾರಿ ಇರಲಿಲ್ಲ.. ಒಟ್ಟಿಗೆ ಗಾಡಿಯಲ್ಲಿ ಬಂದಿದ್ದೆವು.. ಗಾಡಿ ಎಲ್ಲಿ ಹೋಗುತ್ತೋ ನಾವು ಅಲ್ಲಿಗೆ ಹೋಗಲೇಬೇಕಿತ್ತು.. 

ವಾಹನ ಭವ್ಯವಾದ ಮನೆಯ ಮುಂದೆ ನಿಂತಿತು.. "ಲೋ ಇದೆ ಮೆಟ್ಟಿಲ ಮೇಲೆ ನಿಂತು ತೆಗೆದಿರೋ ಪ್ರತಿಭಾ ಫೋಟೋ ತೋರಿಸಿದ್ದು ಕಣೋ ಶಶಿ.." ಅಂದೇ.. ಹೌದು ಕಣೋ.. ಅಂದ ಶಶಿ.. ಮನೆಯೊಳಗೇ ಹೋದೆವು.. 

ಭಾರತದ ಅನಧಿಕೃತ ರಾಷ್ಟ್ರೀಯ ಕ್ರೀಡೆ ಕ್ರಿಕೆಟ್ ಮ್ಯಾಚ್ ಬರುತ್ತಿತ್ತು.. ಮನೆಯೊಳಗೇ ಹೋದ ತಕ್ಷಣ ಒಂದು ರೀತಿಯ ಬಾವಿಯ ತರಹ ಅಂಗಣ.. ಟಿವಿ ಇತ್ತು.. ಟಿವಿ ಎದುರಿಗೆ ದೊಡ್ಡ ಸೋಫಾ ಸೆಟ್.. ಅಲ್ಲಿ ನಮ್ಮ ವಯಸ್ಸಿನ ಹಲವಾರು ಮಂದಿ ಕೂತಿದ್ದರು.. ಪ್ರತಿಭಾ ಅವರ ಅಣ್ಣಂದಿರು.. ಮತ್ತು ಸಂಬಂಧಿಕರು ಅಂತ ಆಮೇಲೆ ತಿಳಿಯಿತು.. 

ಸೋಫಾ ಪಕ್ಕದಲ್ಲಿ ಪುಟ್ಟ  ಮೆಟ್ಟಿಲುಗಳನ್ನು ಹತ್ತಿದರೆ .. ಅಲ್ಲಿ ಊಟ ಮಾಡುವ ಸ್ಥಳ.. ಎರಡು ಪಕ್ಕದಲ್ಲಿ ಕೋಣೆಗಳು ಇದ್ದವು.. ಸೋಫಾ ಪಕ್ಕದಲ್ಲಿ ವಿಷ್ಣು ಚಕ್ರ ಸುತ್ತುವ ಹಾಗೆ ಫ್ಯಾನ್ ಸುತ್ತುತ್ತಿತ್ತು.. ನನಗೆ ಬಿಸಿಲು.. ಪ್ರಯಾಣ.. ಕಾಫಿ ಇಲ್ಲದೆ..  ತಲೆ ನೋವು ಶುರುವಾಗಿತ್ತು.. ಮಿಕ್ಕವರಿಗೆ ಫ್ಯಾನ್ ಇಲ್ಲ ಅಂದ್ರೆ ಕೂರೋಕೆ ಆಗುತ್ತಿರಲಿಲ್ಲ.. ನಾನು ಆದಷ್ಟು ಫ್ಯಾನ್ ಇಂದ ದೂರ ಕೂತಿದ್ದೆ ಆದರೂ ಆ ಗಾಳಿ ನನಗೆ ಹಿಂಸೆ ಮಾಡುತ್ತಿತ್ತು.. 

ಛತ್ರದಲ್ಲಿ ನೋಡಿದ್ದ ಹುಡುಗಿ ಶಶಿಯ ಹಿಂದೆ ಬಂದರು.. ಇವನು ವೆಂಕಟಾಚಲ.. ಇವನು ಲೋಕೇಶ.. ಇವನು ಶ್ರೀಕಾಂತ.. ಪರಿಚಯವಾಯಿತು.. ಗಂಭೀರವಾದ ಧ್ವನಿಯಲ್ಲಿ ನಮಸ್ಕಾರ ಎಂದು ಹೇಳಿ ಆ ಹುಡುಗಿ ನಮ್ಮೆಲ್ಲರಿಗೂ ಕಾಫಿ, ಮತ್ತೆ ಮಿಕ್ಸ್ಚರ್ ಕೊಟ್ಟರು.. ಅವತ್ತಿನ ಮಿಕ್ಸ್ಚರ್ ರುಚಿ ಇನ್ನೂ ನೆನಪಾಗುತ್ತೆ.. 

ವೆಂಕಿ ಕ್ರಿಕೆಟ್ ಮ್ಯಾಚಿನಲ್ಲಿ ಮುಳುಗಿದ್ದ .. ಫೋರ್ ಸಿಕ್ಸ್ ಹೊಡೆದಾಗೆಲ್ಲ ಇವನ ಕಾಮೆಂಟರಿ ನೆಡೆಯುತ್ತಿತ್ತು.. ಅಲ್ಲಿದ್ದವರೊಡನೆ ಇವನು ಸೇರಿಕೊಂಡಿದ್ದ.. 

ಶಶಿ ನೆಡಿರೋ ಒಂದು ರೌಂಡ್ ಹೋಗಿ ಬರೋಣ ಅಂದ.. ಸರಿ ನಾವೆಲ್ಲ ಒಂದು ಪುಟ್ಟ ಸುತ್ತು ಮಾಲೂರು ದರ್ಶನವಾಯಿತು.. 

ಮತ್ತೆ ನಾವು ಬರುವ ಹೊತ್ತಿಗೆ.. ಮಿಕ್ಕವರು ಸಿದ್ಧವಾಗಿದ್ದರು.. ಅಲ್ಲಿದ್ದವರಿಗೆ ಬರುತ್ತೇವೆ ಎಂದು ಹೇಳಿ ಹೊರಟೆವು.. ನನ್ನ ತಲೆನೋವು ಕಾಡುತ್ತಲೇ ಇತ್ತು .. ಹಾದಿಯಲ್ಲಿ ಹಾಗೆ ಸಣ್ಣ ನಿದ್ದೆ ಮಾಡಿದೆ.. ಜೇಬಿನಲ್ಲಿದ್ದ ಮಾತ್ರೆಯನ್ನು ತೆಗೆದುಕೊಂಡಿದ್ದೆ.. ಬೆಂಗಳೂರಿಗೆ ಬರುವ ಹೊತ್ತಿಗೆ ಸ್ವಲ್ಪ ಸಮಾಧಾನವಾಗಿತ್ತು.. ಕೋರಮಂಗಲಕ್ಕೆ ಬಂದು.. ವಿಜಯನಗರದಲ್ಲಿದ್ದ ನನ್ನ ಮನೆಗೆ ಸೇರಿ.. ಮಲಗಿದ್ದೆ ಗೊತ್ತು.. 

ಮತ್ತೆ ಮಾರನೇ ದಿನದಿಂದ ಆಫೀಸ್ ಕೆಲಸ ಅದರಲ್ಲಿ ಬ್ಯುಸಿ.. ಅದಾದ ಕೆಲವು ತಿಂಗಳಾದ ಮೇಲೆ ಮದುವೆ ನೆಡೆಯಿತು.. ಮದುವೆ ದಿನದ ಸಂಭ್ರಮದ ಬಗ್ಗೆ ಕಳೆದ ವರ್ಷಗಳಲ್ಲಿ ಬರೆದಿದ್ದೇನೆ.. ಆದರೆ ಇಂದಿಗೂ ಆ ಮೆಟ್ಟಿಲ ಮೇಲೆ ನಿಂತ ಫೋಟೋದಲ್ಲಿದ್ದ ಪ್ರತಿಭಾಕ್ಕ ಇವರೇನಾ ಅನ್ನಿಸುತ್ತೆ.. ಭವ್ಯವಾದ ಬಂಗಲೆಯಲ್ಲಿ ರಣಚಂಡಿಯಂತೆ ಎಲ್ಲರನ್ನು ಗೋಳುಹುಯ್ಕೊಳ್ಳುತ್ತಾ.. ನಾ ಹೇಳಿದ್ದೆ ಆಗಬೇಕು ಎನ್ನುವ ಹಠದ ಅಕ್ಕ ಇಂದು.. ಎಲ್ಲರೊಡನೆ ನಾನು ಎಂದು ನಮ್ಮನ್ನು ಸ್ವಂತ ಅಣ್ಣಂದಿರನ್ನಾಗಿ ಮಾಡಿಕೊಂಡಿರುವ ಈ ಸುಂದರ ಮನಸ್ಸಿನ ಅಕ್ಕ ನಮ್ಮ ಅದ್ಭುತ ಗೆಳೆಯ ಶಶಿಯ ಬದುಕಲ್ಲಿ ಕಾಲಿಟ್ಟು ೧೯ ವರ್ಷಗಳು ಆದವು .. 

ನಮ್ಮ ಗೆಳೆಯನಿಗೆ ಸಿಕ್ಕ ಅದ್ಭುತ ಸಂಗತಿ ಪ್ರತಿಭಾಕ್ಕ.. ಜನುಮದ ಜೋಡಿಯಾಗಿರುವ ಶಶಿ ಪ್ರತಿಭಾ ಅವರಿಗೆ ವಿವಾಹ ದಿನದ ಶುಭ ಕೋರಲು ಗಡಿಯಾರವನ್ನು ಹಿಂದಕ್ಕೆ ಓಡಿಸಿದ್ದೆ.. ಈಗ ಗಡಿಯಾರ ಉಸ್ಸಪ್ಪ ಸಾಕಪ್ಪ ಅದೆಷ್ಟು ಬಾರಿ ನನ್ನ ಹಿಂದಕ್ಕೆ ಮುಂದಕ್ಕೆ ಓಡಿಸುತ್ತೀಯಾ ಶ್ರೀಕಿ ನೀನು ಎಂದು ಬಯ್ದು.. ಮತ್ತೆ  ತನ್ನ ಸುಸ್ಥಿತಿಗೆ ಬಂದು ನಿಂತು.. 

"ಶಶಿ ಪ್ರತಿಭಾ.. ಸಮಯದ ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ನಿಮಗೆ ನನ್ನ ಕಡೆಯಿಂದಲೂ ಶುಭಾಶಯಗಳು.. .. ಹೀಗೆ ಇರಿ.. ನಗುತ್ತಾ ಇರಿ.. ಜೊತೆಯಲ್ಲಿರುವವರನ್ನು ನಗಿಸುತ್ತಾ ಇರಿ.. ಮತ್ತೆ ಬಾಂಬೆ ಪ್ರವಾಸದ ಫೋಟೋಗಳನ್ನು ಮಾತ್ರ ಯಾರಿಗೂ ಕೊಡಬೇಡಿ . ವಿವಾಹಾದಿನದ ಶುಭಾಶಯಗಳು ಮತ್ತೊಮ್ಮೆ" ಎಂದು ಹೇಳಿ ಹಲ್ಲು ಕಿರಿಯಿತು.. 

ಶುಭಾಶಯಗಳು ಶಶಿ ಪ್ರತಿಭಾಕ್ಕ .. ವಿವಾಹ ದಿನದ ಆ ಮಧುರ ನೆನಪುಗಳ  ಮೆರವಣಿಗೆಯಲ್ಲಿ ಮಿಂದು ಬನ್ನಿ!!!
ಚಿತ್ರ ಕೃಪೆ ಶಶಿ

1 comment:

  1. Thank you Sriki, you took us back in time and your writing makes memories sweeter

    ReplyDelete