Sunday, January 21, 2018

ಕಾಲೇಜು ದಿನಗಳ ನಮ್ಮೆಲ್ಲರ ಸ್ನೇಹಕ್ಕೆ ಒಂದು ಜೈ... !!!

ಕಡ್ಲೆಮಿಠಾಯಿ (ಬರ್ಫಿ) ತಿಂದಾಗ ಹಲ್ಲುಗಳ ಮಧ್ಯೆ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ.. ಅಯ್ಯೋ ಇಷ್ಟು ಬೇಗ ಮುಗಿದು ಹೋಯಿತಲ್ಲ ಎಂದಾಗ... ಆ ಸವಿಯನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಂಡು  ಅದನ್ನು ಅನುಭವಿಸುವಾಗ ಸಿಗುವ ಸಂತಸ ಜಗತ್ತಿನ ಯಾವುದೇ ಕರೆನ್ಸಿ (ಮೊಬೈಲ್ ಕರೆನ್ಸಿ ಅಲ್ಲ) ಕೊಟ್ಟರೂ ಸಿಗೋಲ್ಲ..

ಒಂದು ಭೇಟಿಗಾಗಿ ಈ ಪದವಿ ಕಾಲೇಜು ದಿನಗಳ ಸ್ನೇಹಿತರು ಕಾಯುತ್ತಲೇ ಇದ್ದರು.. ಅವತ್ತು ಇವತ್ತು ಅಲ್ಲಿ ಇಲ್ಲಿ ಹೀಗೆ ಕಾರಣಗಳು, ಜಾಗಗಳು, ದಿನಗಳು ಬದಲಾಗುತ್ತಲೇ ಇದ್ದವು..

ಕಡೆಗೆ ನಾ ತಡೆಯಲಾರದೆ.. ಸುಮ್ಮನೆ ಒಂದಷ್ಟು ಪದಗಳನ್ನು ಜೋಡಿಸಿ ಕವಡೆ ಹಾಕಿದೆ..

"​ಇ​​ಬ್ಬರಿರಲಿ
ಮೂವರಿರಲಿ
ಒಂದು ಕಾಫೀ
ಒಂದು ಟೀ
ಒಂದು ಬೊಂಡ
ಒಂದು ದೋಸೆ
ಇದೇ ಸಾಕೆ ಅಂತಾ ಕೇಳಿದೆ‌ ಜೇನುನೊಣವನ್ನ

ಅಯ್ಯೋ ಶ್ರೀ... ಒಬ್ಬ ಬಂದರೂ ಸಾಕು
ಗೆಳೆತನದ ಹಣತೆಗೆ ತೈಲ ಹಾಕಲು ಎಂದು ಹೇಳಿ ಮಕರಂದ ತರಲು ಹೋಯಿತು
....

ಅಷ್ಟೇ... ಶುರು ಮಾಡಿದರೆ ಸಾಕು...
ನಿರಂತರವಾಗುರುತ್ತೆ"

ಪಗಡೆ ಆಡುವಾಗ ಒಳ್ಳೆಯ ಗರ ಬಿದ್ದರೆ ಖುಷಿಯಾಗುವ ಹಾಗೆ.. ಎಲ್ಲರೂ ಖುಷಿ ಪಟ್ಟರು..

ಐದು ಘಂಟೆ ಶನಿವಾರ ಮಯ್ಯ ..

"ಶ್ರೀ ಎಲ್ಲಿದೀಯಾ.. "
ನಿಂತ ಜಾಗ ಹೇಳಿದೆ.. ಭೂಮಿ  ಗುಂಡಾಗಿದೆ ಆಲ್ವಾ.. ಆ ಕಡೆಯೂ ಅದೇ ಫಲಕ.. ಈ ಕಡೆಯೂ ಇದೆ ಫಲಕ.. ಸರಿ ಒಂದತ್ತು ಸೆಕೆಂಡ್ಸ್.. ಇಬ್ಬರೂ ಭೇಟಿಯಾದೆವು..

ಅನಿಲ್ ಹೇಳಿದಾ.. "ಶ್ರೀ This meeting is for the past.. not for the present" ಅದ್ಭುತ ಮಾತುಗಳು ..

ನಾವು ಕಾಲೇಜು ದಿನಗಳಲ್ಲಿ ಇದ್ದ ಸಂಕೋಚವೂ, ಮಸ್ತಿ, ಜೋರು.. ಎಲ್ಲವೂ ಕಾಲನ ಹೊಡೆತಕ್ಕೆ ಸಿಕ್ಕಿ ಬದಲಾಗಿರಬಹುದು.. ಅಂದು ಸಂಕೋಚದ ಮುದ್ದೆಯಾಗಿದ್ದ ನಾನು ಇಂದು ಎಲ್ಲರೊಡನೆ ಮಾತಾಡುವ ಹಂತಕ್ಕೆ ತಲುಪಿದ್ದು ಇತ್ತು.. ಇನ್ನೂ ಕೆಲವರು.. "ಕಾಲವನ್ನು ತಡೆಯೋರು ಯಾರೂ ಇಲ್ಲ.. ನಮ್ಮನ್ನು ಬದಲಾಯಿಸೋರು ಎಲ್ಲೂ ಇಲ್ಲ"  ಎನ್ನುತ್ತಾ ಅಂದಿನ ದಿನಗಳಲ್ಲಿ ಇದ್ದ ಅದೇ ಗುಣವನ್ನು ಉಳಿಸಿಕೊಂಡಿದ್ದರು..

ಇವೆಲ್ಲಾ ಸರಿ.. ಆದರೆ ಆ ದಿನಗಳ ಗೆಳೆಯರನ್ನು ಭೇಟಿ ಮಾಡಬೇಕು .. ಸಂಪರ್ಕದಲ್ಲಿರಬೇಕು ಎನ್ನುವ ತವಕ ಎಲ್ಲರಲ್ಲೂ ಇತ್ತು..

ಒಂದು ಸುಂದರ ಸಂಜೆ ಇದಕ್ಕೆ ಸಾಕ್ಷಿಯಾಗಿತ್ತು..

ತ್ಸುನಾಮಿ ಒಮ್ಮೆಲೇ ಬರುವುದಿಲ್ಲ .. ಕೊಂಚ ಕುರುಹುಗಳನ್ನು ಕೊಡುತ್ತದೆ..

ನಾ ಒಬ್ಬನೇ ಪ್ಯಾದೆ ತರಹ ನಿಂತಿದ್ದೆ..
ನಗುವಿನ ಸುಂದರಾಂಗ ಅನಿಲ ಜೊತೆಯಾದ
ನಾಯಕನ ನಾನೇ ಈ ಕಥೆಗೆ ಎಂದು ಹರಿನಾಥ ಬಂದ
ಶ್ರೀ I was in to everything now am in to my own ಅಂತ ಅನು ಬಂದಳು
ಇಂದಿನ ತಣ್ಣನೆ ನಗುವಿನ ಜೊತೆ happy new year ಅಂತ ನಂದಿನಿ ಕಾಲಿಟ್ಟಳು
ನೆನಪಿನ ಗಣಿಯಾಗಿ.. ಆ ದಿನಗಳ ನೆನಪಿನ ಮೂಟೆ ಹೊತ್ತು ವೃಂದಾ ಅಡಿಯಿಟ್ಟಳು

ಆರು ಮಂದಿ ಇದ್ದೇವೆ.. ನಡೀರಿ ಮಯ್ಯಕ್ಕೆ ಲಗ್ಗೆ ಹಾಕೋಣ ಅಂದಾ ಹರಿ..

ಬಿಸಿ ಬಿಸಿಯ "ತಣ್ಣನೆ" ಜಾಮೂನು ಮಸಾಲೆ ದೋಸೆಯ ಸವಿಯನ್ನು ಕದ್ದಿತ್ತು..
ರವೇ ಇಡ್ಲಿ ತನ್ನ ಜಾದೂವನ್ನು ಮೂಡಿಸಿತ್ತು..

ನಾ ಬಂದೆ ಕಣೋ ಎನ್ನುತ್ತಾ ಚೆಲುವ ರಾಜಶೇಖರ್ ಬಂದ..
ಪಾಟೀಲ.. ನಾ ನಾನು ಇದ್ದೇನೆ ನಗುಮೊಗದ  ಅರಸ ರವೀಂದ್ರ..
ಇದಕ್ಕಾಗಿ ಸ್ವಲ್ಪ ಸಮಯ ಮಾಡಿಕೊಂಡು ಬಂದೆ ಎಂದ ಎಂದಿನ ಹಾಸ್ಯ ಮಾತುಗಳ ಆನಂದ

ಈ ಭೇಟಿಗೆ  ಇನ್ನೂ ಸ್ವಲ್ಪ ಫಿಟ್ನೆಸ್ ತೂಕ ಬೇಕಿತ್ತು.. ಅಷ್ಟರಲ್ಲಿ ಕಾಲೇಜು ದಿನಗಳ ಮೂರು ವರ್ಷಗಳ ಸಂತಸವನ್ನು ಹೆಕ್ಕಿ ಹೆಕ್ಕಿ ಬಡಿಸಲು ಶುರುವಾಗಿತ್ತು..

ತಮಾಷೆ ಎಂದರೆ.. ಇದು ನಮ್ಮ ಸ್ನೇಹದ ರಜತ ಮಹೋತ್ಸವ.. ಹೌದು ೧೯೯೩ ರಂದು ಕಾಲೇಜು ಮುಗಿಸಿದ ಮೇಲೆ.. ೨೫ ವರ್ಷಗಳ ನಂತರ ಮತ್ತೆ ಒಂದು ಭೇಟಿ (ಮಧ್ಯೆ ಮಧ್ಯೆ ಅಲ್ಲಿ ಇಲ್ಲಿ ಸಿಗುತಿದ್ದರೂ.. ಒಂದು ದೀಪದ ಹಣತೆಯನ್ನು ಮತ್ತೆ ಹಚ್ಚಲೇ ಬೇಕು ಎನ್ನುವ ಬಲವಾದ ನಿರ್ಧಾರ ತಳೆದ ದಿನ ಇದಾಗಿತ್ತು.. ಹಾಗಾಗಿ ರಜತ ಸಂಭ್ರಮ)

ಆಗ ಬಂದ ಫಿಟ್ನೆಸ್ ಫ್ರೀಕ್ ಮಧುಸೂದನ್.. ಹ ಹ ಹ ಹ.. ನಾಲ್ಕು ಮೆಟ್ಟಿಲುಗಳ ನಗು ಅವನ ಪ್ರತಿ ವಾಕ್ಯಕ್ಕೂ ಇತ್ತು.. ನಗು ನಗು ನಗು..

ಮಯ್ಯದ ಎರಡನೇ ಮಹಡಿಯಲ್ಲಿ ನಮ್ಮ ಟೇಬಲ್ ಮಸ್ತಿ ನಗು.. ಎಲ್ಲರೂ ಒಮ್ಮೆ  ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ..

ಅಚಾನಕ್ ಭೇಟಿ ಇದಾಗಿದ್ದರೂ.. ಹತ್ತು ಮಂದಿಸಿಕ್ಕಿದ್ದು .. ಖುಷಿಯಾಗಿತ್ತು..

ದೊಡ್ಡ ದೊಡ್ಡ ಭೇಟಿ ಬಿಟ್ಟು.. ಹೀಗೆ ಬೆಳಗಿನ ತಿಂಡಿಗೆ, ಊಟಕ್ಕೆ, ಸಂಜೆ ಲಘು ಉಪಹಾರಕ್ಕೆ ಭೇಟಿ ಮಾಡುತ್ತಲೇ ಇರಬೇಕು ಎನ್ನುವ ಸುಗ್ರೀವಾಜ್ಞೆಯನ್ನು ಹೊರಡಿಸಿ ಈ ಭೇಟಿಗೆ ಶುಭಮಂಗಳ ಹಾಡಿದೆವು..




ದೀಪದಲ್ಲಿ ಬತ್ತಿ ಇರುತ್ತೆ
ದೀಪದ ಎಣ್ಣೆ ಇರುತ್ತೆ
ಬೆಂಕಿ ಪೊಟ್ಟಣದಿಂದ ದೀಪವನ್ನು ಬೆಳಗುತ್ತೇವೆ..
ಆದರೆ ಆ ದೀಪ ಸದಾ ಉರಿಯಲು ಏನೂ ಮಾಡಬೇಕು
ದೀಪದ ಬತ್ತಿಯನ್ನು ಸರಿ ಮಾಡುತ್ತಿರಬೇಕು
ಮತ್ತೆ ದೀಪಕ್ಕೆ ದೀಪದ ಎಣ್ಣೆಯನ್ನು ಹಾಕುತ್ತಿರಬೇಕು
ಆ ಕೆಲಸವೇ ಈ ಗೆಳೆಯರ ಭೇಟಿ..

ಸಿಗುತ್ತಿರೋಣ ಅಲ್ಲವೇ.
ಸಿಗುತ್ತಿರಲೇ ಬೇಕು
ಸಿಗ್ಗುತ್ತಿರಲಿ ಎಂದೇ ಈ ವಾಟ್ಸಾಪ್ ಗ್ರೂಪ್ ಮಾಡಿರೋದು
ಭೂಪಟದಲ್ಲಿ ನಲಿದಾಡುತ್ತಿರುವ ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದು ಅದಕ್ಕೆ ಆಲ್ವಾ
ನಾವು ಕೈಯೆತ್ತಿದರೆ ವಿದ್ಯಾರ್ಥಿ ಭವನ ದೋಸೆ ಸಿದ್ಧ ಮಾಡುತ್ತೆ
ಮಯ್ಯ ಹೋಟೆಲಿನಲ್ಲಿ ಸ್ಟ್ರಾಂಗ್ ಕಾಫಿ ರೆಡಿ ಇರುತ್ತೆ
ಕ್ಲಬ್, ರೆಸಾರ್ಟ್, ಹೋಟೆಲು ನಮಗಾಗಿ ಕಾದಿರುತ್ತೆ ..

(ಆರ್ಮುಗಂ ಸಂಭಾಷಣೆ ಅಲ್ಲಾ.. ನಿಮ್ಮೆಲ್ಲರ ಮನದಲ್ಲಿರುವ ಸ್ನೇಹದ ಮಾತುಗಳು)

ಕಾಲೇಜು ದಿನಗಳ ನಮ್ಮೆಲ್ಲರ ಸ್ನೇಹಕ್ಕೆ ಒಂದು ಜೈ... !!!

10 comments: