Thursday, December 20, 2018

ರಂಗೋಲಿ ಹತ್ರ .. !!!

ರಾಜೀವನಿಗೆ ತಲೆ ಪೂರ್ತಿ ಕೆಟ್ಟುಹೋಗಿತ್ತು.. ಖುಷಿ ಪಡಬೇಕೋ ಇಲ್ಲಾ ಹೀಗಾಯ್ತಲ್ಲ ಅಂತ ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗುತ್ತಿರಲಿಲ್ಲ.. ವೃತ್ತಿಯಲ್ಲಿ ಬಹುಮಟ್ಟಿಗೆ ಯಶಸ್ಸು ಸಾಧಿಸಿದ್ದ ತನ್ನ ನೂರಾರು ವೃತ್ತಿ ಸಂಬಂಧಿ ಕಂಪನಿಗಳ ನೊರೆಂಟು ಸಮಸ್ಯೆಗಳನ್ನು ನಗು ನಗುತ್ತ ಬಿಡಿಸಿದವನಿಗೆ ತಲೆ ಚಿಟ್ಟು ಹಿಡಿದಿತ್ತು..

ತನ್ನ ಆಪ್ತ ಗೆಳೆಯ ರವೀಂದ್ರನಿಗೆ ಹೇಳಿಕೊಂಡ.. "ಲೋ ಗುರು.. ಇದಕ್ಕೆ ಯಾಕೆ ಅಷ್ಟೊಂದು ತಲೆ ಕೆಡಿಸ್ಕೊತೀಯ.. ಪಾನಿ ಪುರಿ ಕೊಡಿಸ್ತೀಯಾ.. ಐಡಿಯಾ ಕೊಡ್ತೀನಿ"

"ಅಷ್ಟೇ ತಾನೇ.. ಆಗಲಿ" ಹೊಟ್ಟೆ ತುಂಬಾ ಪಾನಿ ಪುರಿ ಸೇವೆ ಆಯಿತು..

 ರವೀಂದ್ರ.. ಮೆಲ್ಲಗೆ ಕಿವಿಯಲ್ಲಿ ಏನೋ ಉಸುರಿದ ..

ಮತ್ತೇನೂ ಮಾಡದೆ.. ಹೊಸದಾಗಿ ಕೊಂಡಿದ್ದ ಜಾವಾ ಬೈಕ್ ಹತ್ತಿ ಹೊರಟ .. ಮನಸ್ಸು ಹಗುರಾಗಿರಲಿಲ್ಲ ಆದರೆ ಕತ್ತಲೆ ಸುರಂಗದಲ್ಲಿ ಎಲ್ಲೋ ಒಂದು ಬೆಳಕಿನ ಬಿಂದು ಕಂಡ ಹಾಗಿತ್ತು ರವೀಂದ್ರನ ಮಾತುಗಳು..

ದೊಡ್ಡದಾದ ಕಟ್ಟಡ.. ಆಧುನಿಕ ವಿನ್ಯಾಸದಿಂದ ಸೊಗಸಾಗಿತ್ತು.. ಸೆಕ್ಯೂರಿಟಿ ಕಚೇರಿಯಲ್ಲಿ ತನ್ನ ಹೆಸರು ವಿಳಾಸ ಯಾರನ್ನು ಭೇಟಿ ಮಾಡಬೇಕು ಎಲ್ಲಾ ವಿವರವನ್ನು ಬರೆದು.. ಲಿಫ್ಟ್ ಇದ್ದರೂ ೨೮ನೇ ಮಹಡಿಗೆ ಮೆಟ್ಟಿಲುಗಳನ್ನೇ ಆಶ್ರಯಿಸಿದ.. ಏನೂ ಹೇಳಬೇಕು ಏನು ಕೇಳಬೇಕು.. ಹೇಗೆ ವಿವರಿಸಬೇಕು ಎಂದೆಲ್ಲ ಮನದಲ್ಲಿಯೇ ತಾಲೀಮು ಮಾಡಿಕೊಳ್ಳಲು ಈ ಮೆಟ್ಟಿಲು ಶ್ರಮ ಸಹಾಯ ಮಾಡುವುದು ಎನ್ನುವುದು ಅವನ ಎಣಿಕೆಯಾಗಿತ್ತು..

"ನಮಸ್ಕಾರ ನಾನು ರಾಜೀವ್.. ರವೀಂದ್ರ ಕಳಿಸಿದ್ದಾರೆ.. ಮೃಣಾಲಿನಿ ಮೇಡಂ ಅವರನ್ನು ಭೇಟಿ ಮಾಡಬೇಕಿತ್ತು.. " ಇಷ್ಟು ಹೇಳಿ ಸುಸ್ತಾಗಿತ್ತು.. ಅಲ್ಲಿಯೇ ಇದ್ದ ಸೋಫಾದ ಮೇಲೆ ಸ್ವಾಗತಕಾರಿಣಿ ಹೇಳುವುದಕ್ಕೆ ಮೊದಲೇ ಹೋಗಿ ಕೂತ...

ರಾಜೀವ್ ಸರ್... ಐದು ನಿಮಿಷ ಬಿಟ್ಟು.. ಮೇಡಂ ಅವರ ಕ್ಯಾಬಿನಿಗೆ ಹೋಗಬಹುದು.."

ಕ್ಯಾಬಿನ್ ಸುಂದರವಾಗಿ ಸಜ್ಜಾಗಿತ್ತು.. ಅಲ್ಲಿದ್ದ ಒಂದು ಚಿತ್ರ ಅವನು ಬಂದಿದ್ದು ಸರಿಯಾದ ಸ್ಥಳ ಎಂದು ಅರಿವಾಯಿತು..

"ಹೇಳಿ ರಾಜೀವ್.. ರವೀಂದ್ರ ಎಲ್ಲಾ ಹೇಳಿದ್ದಾರೆ.. ಎಲ್ಲಿ ಕೊಡಿ ಆ ವಿವರಗಳನ್ನು"

ಏಕ್ ದಂ ವಿಷಯಕ್ಕೆ ಬಂದಿದ್ದು.. ಆಕೆಯ ವೃತ್ತಿಪರತೆಯನ್ನು ಎತ್ತಿ ತೋರಿಸಿತು.

ಅಲ್ಲಿದ್ದದ್ದು ೩೦೦ ಸೆಕೆಂಡ್ಸ್.. ೩೦೧ ಸೆಕೆಂಡ್ ಕ್ಯಾಬಿನ್ ಹೊರಗಡೆ ಇದ್ದ.. ಹೋಗುವ ಮುನ್ನ.. ಬ್ಯಾಂಕ್ ಅಕೌಂಟ್ ವಿವರ ಕೊಟ್ಟಿದ್ದರು.. ಒಂದು ವಾರ ಕಳೆದ ಮೇಲೆ.. ಅಕೌಂಟಿಗೆ ಹಣ ಜಮಾ ಮಾಡಿದ ಮೇಲೆ ಬರೋಕೆ ಹೇಳಿದ್ದರು.. 

ಕೆಲಸದ ಗಡಿಬಿಡಿಯಲ್ಲಿ ವಿಚಾರ ಮರೆತು ಹೋಗಿತ್ತು.. ಆತನ ಸಹಾಯಕ .. "ಸರ್.. ನಿಮ್ಮ ಕ್ಯಾಲೆಂಡರ್ ಪ್ರಕಾರ ನಾಳೆ ೧೨ ಘಂಟೆಗೆ #$#$#$ ಆಫೀಸ್ ನಲಿ ಮೀಟಿಂಗ್ ಇದೆ" ಎಂದ ಮೇಲೆ ಅರಿವಾಗಿದ್ದು..

"ಸರಿ  ಥ್ಯಾಂಕ್ ಯು"

ಮಾರನೇ ದಿನ ಹೊರಟಿದ್ದ ..ಮತ್ತೆ ಜಾವ ಬೈಕಿನಲ್ಲಿ..

ಮೃಣಾಲಿನಿ ಎದ್ದು ನಿಂತು.. ಬನ್ನಿ ರಾಜೀವ್.. ರಿಪೋರ್ಟ್ ನಿಮ್ಮ ಜಿ-ಮೈಲ್ ಗೆ ಕಳಿಸಿದ್ದೇನೆ.. ಇದಕ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ರಿ.. ಇದೊಂದು ಪ್ರೇಮಯಾಚನೆ ಅಷ್ಟೇ.. ಜಸ್ಟ್ ಚಿಲ್" ಎಂದು ಹಸ್ತ ಲಾಘವ ಮಾಡಿ.. ಕರೆ ಸ್ವೀಕರಿಸಿ ಮಾತಾಡತೊಡಗಿದರು ಮೃಣಾಲಿನಿ..

ಎಲ್ಲಾ ಗೊಂದಲ.. ಸ್ವಾಗತಕಾರಿಣಿ.. ಸರ್ ನೀವು ಆ ಗೆಸ್ಟ್ ಮೀಟಿಂಗ್ ರೂಮ್ ಉಪಯೋಗಿಸಬಹುದು.. ವೈಫೈ ಪಾಸ್ವರ್ಡ್ ಕೊಡ್ತೀನಿ.. ಮೇಲ್ ಚೆಕ್ ಮಾಡಿ. ನಿಮಗೆ ಸಮಾಧಾನವಾದ ಮೇಲೆ ನೀವು ಮೇಡಂ ಹತ್ರ ಮಾತಾಡಬಹುದು.. " ಎನ್ನುತ್ತಾ  ಹಲೋ ಯಸ್.. ಕಮ್ ಟು ಟ್ವೆಂಟಿ ಏಟ್ ಫ್ಲೋರ್" ಎನ್ನುತ್ತಾ ಬ್ಯುಸಿಯಾದಳು ಆಕೆ..

ಎಲ್ಲಾ ಅಯೋಮಯ.. ಇದು ಯಾರು ಬರೆದ ಕತೆಯೋ ನನಗಾಗಿ ಬಂದ ವ್ಯಥೆಯೋ ಎನ್ನುತ್ತಾ ಲ್ಯಾಪ್ಟಾಪ್ ಬಿಚ್ಚಿದ..

"ಹಲೋ ರಾಜೀವ್.. ಇದೊಂದು ಪ್ರೇಮ ಪತ್ರ . ನೋಡಿ ವಿವರವಾಗಿ ನೀಡುತ್ತೇನೆ.. PPT ಓಪನ್ ಮಾಡಿ.. "

PPT ಬಿಚ್ಚಿಕೊಳ್ಳುತ್ತಾ ಹೋಯಿತು..

ಪ್ರಿಯ ರಾಜೀವ್ ನಾನು ನಿಮ್ಮನ್ನು ಪ್ರೀತಿಸುತ್ತೇನೆ.. ಇದಕ್ಕೆ ಸಾಕ್ಷಿ ಶಂಖ .. ನನ್ನ ಪ್ರೀತಿ ಶಂಖದ ಹಾಗೆ.. ಪ್ರೀತಿಯನ್ನು ಕೂಗಿ ಹೇಳುತ್ತದೆ.. ಚಕ್ರ.. ನಿಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ.. ನಕ್ಷತ್ರಗಳು.. ನನ್ನ ಕಣ್ಣಿನಲ್ಲಿ ನಿಮ್ಮನ್ನು ಕಂಡಾಗ ಹೊಮ್ಮುವ ಮಿಂಚು ಅದು.. ಅದರ ಸುತ್ತಲೂ ಇರುವ ವೃತ್ತವೆ ನಮ್ಮ ಜೀವನದ ಪರಿಧಿ.. !!!



ನಿಮ್ಮನ್ನು ನಾನು ಎಷ್ಟು ಇಷ್ಟ ಪಡುತ್ತೇನೆ ಹುಲಿ ಮುದ್ದು ಎನ್ನುತ್ತಾರೆ ಅಲ್ವ.. ಹಾಗೆ ಮಧ್ಯದಲ್ಲಿರುವ ಹುಲಿಯ ಮೈಮೇಲಿನ ಪಟ್ಟೆಗಳು ಹೇಳುತ್ತವೆ.. ನಾ ನಿಮ್ಮನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತೇನೆ ಎನ್ನುವುದಕ್ಕೆ ಆ ಹುಲಿ ಪಟ್ಟೆಗೆ ಹಾಕಿರುವ ಗಟ್ಟಿ ಬೇಲಿಯೇ ಸಾಕ್ಷಿ.. !

 ವಯ್ಯಾರದಿಂದ ನಿಮ್ಮನ್ನು ಆಕರ್ಷಿಸೋಕೆ ಆಗೋಲ್ಲ ಅಂತ ಗೊತ್ತು.. ನಿಮ್ಮ ಪ್ರೀತಿ ಹಸಿರಿನ ಹಾಗೆ.. ಉಸಿರು ಸೇರಿದಾಗ ಮಾತ್ರ ನಳನಳಿಸೋದು.. ನಿಮಗೆ ಬಿಳಿ ಬಣ್ಣ ಇಷ್ಟ .. ಅದಕ್ಕೆ ಆ ಹಸಿರಾದ ಪ್ರೀತಿಗೆ ಬಿಳಿಯ ಸಂಕೋಲೆ ಹಾಕಿದ್ದೇನೆ.. !

 ನನಗೆ ಗೊತ್ತು.. ಮೇಲಿನ ರಂಗೋಲಿಗಳನ್ನು ನೋಡಿದ ಮೇಲೆ.. ನಿಮ್ಮ ಮನಸ್ಸಿಗೆ ಅನುಮಾನ ಶುರುವಾಗಿರುತ್ತೆ... ಯಾರಪ್ಪ ಇವಳು. ಹೀಗೆ ಕಾಡುತ್ತಿದ್ದಾಳೆ ಅಂತ.. ಅದಕ್ಕೆ ಬೂದು ಬಣ್ಣ ಉಪಯೋಗಿಸಿದ್ದೇನೆ.. ಆದರೆ ರಾಜೀವ ನೀವು ನನ್ನ ಜೀವ ಕಣ್ರೀ ಅದಕ್ಕೆ ಗೆರೆಗಳು ಇವೆ. ಅಂಕುಡೊಂಕಾದ ಗೆರೆಗಳು ಇವೆ.. ಇದು ನಿನಗೆ ಹೇಗೆ ಬೇಕೋ ಹಾಗೆ ನಾ ಬದಲಾಗುತ್ತೇನೆ ಎನ್ನುವುದು ತೋರಿಸುತ್ತದೆ.. !!!

ಆಹಾ ಕಳ್ಳ.. ಮೇಲಿನ ವಿವರಣೆ ಓದಿದ ತಕ್ಷಣ.. ಮುಖ ನೋಡಿ ಕೆಂಪಾಯಿತು.. ರಾಜೀವ ನಿಮ್ಮನ್ನು ಸದಾ ನಗು ನಗುತ್ತಾ ಇರುವಂತೆ ನೋಡಿಕೊಳ್ಳುವುದೇ ನನ್ನ ಉದ್ದೇಶ.. ಹಸಿರಾದ ಪ್ರೀತಿ ನಿಮ್ಮ ನಾಚಿಕೆಯಿಂದ ಕೆಂಪಾದ ಮೊರೆಯನ್ನು ಕಾಪಾಡುತ್ತದೆ.. ಎಂಗೆ.. !


ನಿಮ್ಮ ಕಣ್ಣುಗಳು ಬಾಗಿದೆ.. ಹೃದಯ ಮಿಡಿಯುತ್ತಿದೆ.. ನಿಮ್ಮ ಕಣ್ಣುಗಳಲ್ಲಿ ಹೊಳಪನ್ನು ಕಾಣುತ್ತಿದ್ದೇನೆ.. ಮಳೆಬಂದಾಗ ಗರಿ ಬಿಚ್ಚಿ ಹಾಡುವ ನವಿಲಿನಂತೆ ನನ್ನ ಮನಸ್ಸಾಗಿದೆ.. ಹಾರಲೇ.. ಕುಣಿಯಲೇ.. ನಲ್ಲ ನಿನಗಾಗಿ ನಾ ಇರುವೆ.. !!!


ನಿನ್ನ ಒಪ್ಪಿಗೆ ಸಿಕ್ಕಿದ್ದು ನನಗೆ ಖುಷಿಯಾಗುತ್ತಿದೆ.. ಅದಕ್ಕೆ ಮೆಟ್ಟಿಲುಗಳ ಸೋಪಾನ ಮಾಡಿದ್ದೇನೆ.. ಈ ಪ್ರೀತಿಯ ವೃತ್ತದಲ್ಲಿ ಒಂದೊಂದೇ ಮೆಟ್ಟಿಲನ್ನು ಏರಿ ಬನ್ನಿ.. ಜೊತೆಯಾಗೋಣ.. ಜೊತೆ ಹಾಡೋಣ.. !!!


 ನನಗಾಗಿ ನಾ ಏನೂ ಕೇಳಿಕೊಳ್ಳುವುದಿಲ್ಲ.. ಆದರೆ ನನಗೆ ಮೂಗಿನ ನತ್ತು ಎಂದರೆ ಬಹಳ ಇಷ್ಟ.. ಅದರಲ್ಲೂ ಸುಮ್ನೆ..  ಹರಳಿನ ಮೂಗುತಿ ಹಾಕಿಕೊಳ್ಳುವುದಕ್ಕಿಂತ ರಿಂಗ್ ಹಾಕಿಕೊಳ್ಳೋದು ಇಷ್ಟ.. ನಿಮಗೂ ಇಷ್ಟ ಅಂತ ಗೊತ್ತು .. ಕೊಡಿಸ್ತೀರಾ ಆಲ್ವಾ.. !!!

ನಿಮ್ಮ ಮನದಲ್ಲಿ ಹಾಡುತ್ತಿರುವ ಹಾಡು ಹೇಳಲೇ.. "ಆನೆಯ ಮೇಲೆ ಅಂಬಾರಿ ಕಂಡೆ.. ಅಂಬಾರಿ ಒಳಗೆ ನಿನ್ನನ್ನೇ ಕಂಡೆ.. ನನ್ನೇ ನಾ ಕಂಡೇ.. ಪಕ್ಕದಲ್ಲಿ ನನ್ನೇ ನಾ ಕಂಡೆ.. !!! ಬಾರೋ ರಾಜೀವ ನೀನೆ ರಾಜ.. ನಾನೇ ರಾಣಿ.. ಈ ಜಗತ್ತೇ ನಮ್ಮ ರಾಜ್ಯ.. ಆಳೋಣ.. ಅರಳೋಣ.. ಬೆಳೆಯೋಣ.. ಪ್ರೀತಿಯಲ್ಲಿ ಮೀಯೋಣ !!!


 ರಾಜೀವ ನಿಮ್ಮ ತಲೆ ಗರ ಗರ ತಿರುಗುತ್ತಿದೆಯೇ.. ಖಂಡಿತ ಬೇಡ.. ನೋಡಿ ಇದು ಬರಿ ಚಕ್ರವಲ್ಲ ..ನಮ್ಮ ಜೀವನ ಚಕ್ರ.. ತಿರುಗುತ್ತ ತಿರುಗುತ್ತ ಎಲ್ಲ ಬಣ್ಣಗಳು ಒಂದಾಗಿ ಬಿಳಿಯ ಬಣ್ಣವಾಗುತ್ತದೆ.. ಏಳು ಸ್ವರವು ಸೇರಿ ಸಂಗೀತವಾಯಿತು.. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಅಂತ ಹಾಡಿಲ್ಲವೇ.. ಹಾಗೆ ಹತ್ತು ರಂಗೋಲಿ ಸೇರಿ ನಮ್ಮ ಜೀವನವಾಯಿತು.. ಹತ್ತು ಚಿತ್ರಗಳು ನನ್ನ ಪ್ರೇಮ ಪಾತ್ರವಾಯಿತು .. ಐ ಲವ್ ಯು ರಾಜೀವ.. !!!

 ರಾಜೀವನ ಮೊಗದಲ್ಲಿ ನಗು, ಸಂತೋಷ.. "ಹುರ್ರೆ ಹುರ್ರೇ ಹುರ್ರೇ" ತಾನು ಕೂತಿದ್ದು ಬೇರೆಯವರ ಆಫೀಸಿನಲ್ಲಿ ಎನ್ನುವುದನ್ನು ಮರೆತು ತುಸು ಜೋರಾಗಿಯೇ ಕೂಗಿದ..

ಮೃಣಾಲಿನಿ ಏನಾಯಿತು ಎಂದು ತನ್ನ ಕ್ಯಾಬಿನ್ ಇಂದ ಹೊರಗೆ ಬಂದು ನೋಡಿದರೆ.. ರಾಜೀವ ಸಂತಸದಲ್ಲಿದ್ದಾನೆ.. ಹತ್ತಿರ ಬಂದು.. ರಾಜೀವನ ಬೆನ್ನು ತಟ್ಟಿ ಮೆಲ್ಲನೆ ಮೆಲ್ಲನೆ ಎನ್ನುವ ಸನ್ನೆ ಮಾಡಿ.. ಅವನ ಕೈಕುಲುಕಿ.. "ಅಲ್ ದಿ ಬೆಸ್ಟ್ ರಾಜೀವ್.. ನಿಮ್ಮ ಪ್ರಿಯತಮೆಗೆ ನನ್ನ ಶುಭಾಶಯ ತಿಳಿಸಿ.. "  

ಮೇಡಂ.. ಇದನ್ನು ಹೇಗೆ ಡಿಕೋಡ್ ಮಾಡಿದಿರಿ ಹೇಳ್ತೀರಾ ಪ್ಲೀಸ್.. ನನಗೆ ಬಂದ ಲಕೋಟೆಯ ಮೇಲೆ ಕಳಿಸಿದವರ ವಿಳಾಸವಿಲ್ಲ.. ಫೋನ್ ಇಲ್ಲ .. ಹ್ಯಾಂಡ್ ಡೆಲಿವೆರಿ ಮಾಡಿದ್ದಾರೆ.. ಹಾಗಾಗಿ ಯಾರು ಬಂದಿದ್ದಾರೆ ಎನ್ನುವುದನ್ನು ಸಿಸಿಟಿವಿ ಯಲ್ಲಿ ನೋಡಿದೆ.. ಆದರೆ ನಮ್ಮ ಇಡೀ ಕಟ್ಟಡಕ್ಕೆ ಪೇಪರ್ ಹಾಕುವಾಗ ಪೇಪರ್ ಜೊತೆ ಇದು ಬಂದಿದೆ. .ಹಾಗಾಗಿ ಖಚಿತವಾಗಿ ಇವರೇ ಅಂತ ಹೇಳೋಕೆ ಆಗೋಲ್ಲ.. ಪೇಪರ್ ಏಜೆಂಟ್ ಹತ್ರ ವಿಚಾರಿಸಿದೆ.. ಅವ ಹೇಳಿದ್ದು ಸಾರ್ ನಮಗೆ ಸಾವಿರ ಪಾಂಪ್ಲೆಟ್ ಹಾಕಿದರೆ ಇಷ್ಟು ದುಡ್ಡು ಅಂತ ಹೇಳುತ್ತಾರೆ.. ಕೆಲವೊಮ್ಮೆ ಪೇಪರ್ ಹಾಕುವ ಹುಡುಗರನ್ನು ಅಡ್ಜಸ್ಟ್ ಮಾಡಿಕೊಂಡು ಹಾಕಿಸುತ್ತಾರೆ.. ಹಾಗಾಗಿ ಇವರೇ ಅಂತ ಹೇಳೋಕೆ ಆಗೋಲ್ಲ ಸರ್ ಎಂದು ಹೇಳಿ ಕೈ ತೊಳೆದುಕೊಂಡ.. ಪ್ಲೀಸ್ ಹೇಳಿ.. "

ಮೃಣಾಲಿನಿ ಒಂದು ಸುಂದರ ನಗೆ ಬೀರಿ.. "ಅದೆಲ್ಲ ಬಿಡಿ.. ಈ ರಂಗೋಲಿ ನೋಡಿ ನನ್ನ ಮನದಲ್ಲಿ ಏನೋ ಹೊಳೆಯಿತು.. ಗೂಗಲ್ ಹುಡುಕಿದೆ . .ಯಾವ ಯಾವ ಬಣ್ಣ ಯಾವುದಕ್ಕೆ ಅಂತ ತಿಳಿಯಬೇಕಿತ್ತು.. ಅದು ಗೊತ್ತಾದ ಮೇಲೆ. ಪ್ರತಿದಿನವೂ ಈ ರಂಗೋಲಿಯ ವಿನ್ಯಾಸವನ್ನು ಅರ್ಥ ಮಾಡಿಕೊಳ್ಳತೊಡಗಿದೆ.. ರಂಗೋಲಿಯ ಆಕಾರ, ಬಣ್ಣ, ವಿನ್ಯಾಸ ಬದಲಾಗುತ್ತಲೇ ಹೋಗಿದ್ದು ಅರಿವಾಯಿತು.. ನನಗೆ ತೋಚಿದ ಎಲ್ಲಾ ವಿಚಾರವನ್ನು ಬರೆದಿಟ್ಟುಕೊಂಡು ಒಂದೊಂದೇ ಚಿತ್ರವನ್ನು ಅದರ ಕ್ರಮಾಂಕದ ಅನುಸಾರವಾಗಿ ಜೋಡಿಸಿಕೊಂಡೆ.. ವಿವರ ಸಿಕ್ಕಿತು.. "

"ಧನ್ಯವಾದಗಳು ಮೇಡಂ.. ನಿಮ್ಮಿಂದ ನನ್ನ ಭುಜದ ಮೇಲಿದ್ದ ಒಂದು ಹೊರೆ ಕಡಿಮೆಯಾಯಿತು.. ಧನ್ಯವಾದಗಳು ಮದುವೆಗೆ ಖಂಡಿತ ನೀವು ಬರಲೇ ಬೇಕು.. ".

ಇದೇನ್ರಿ. ಆಕೆ ನಿಮಗೆ ಬರಿ ಪ್ರೇಮ ಪಾತ್ರ ಕೊಟ್ಟಿರೋದು ಅಷ್ಟೇ.. ಆಗಲೇ ಮದುವೆಯ ತನಕ ಹೋಗಿಬಿಟ್ಟಿದ್ದೀರಾ. ಶಭಾಷ್.. "

"ಮೇಡಂ. ಇಷ್ಟು ತಿಳುವಳಿಕೆಯುಳ್ಳ ಹುಡುಗಿ ನನ್ನ ಮನೆ ಮನ ತುಂಬಲು ಸರಿಯಾಗಿದ್ದಾಳೆ.. ಅವಳೇ ನನ್ನ ಹುಡುಗಿ.. " ಕಣ್ಣು ಮಿಟುಕಿಸಿ ಸರ ಸರ ಮೆಟ್ಟಿಲಿಳಿದು ಮರೆಯಾದ...

"ಕಿರಣ್.. ಈ ಕೇಸ್ ಆಯ್ತು.. ಅಕೌಂಟ್ ಕ್ಲೋಸ್ ಮಾಡಿ.. ಮುಂದಿನ ಕೇಸ್ ಆ ಪರ್ಪಲ್ ರೈನ್ ಕೋಟ್ ಅದನ್ನು ಓಪನ್ ಮಾಡು .. ಮುಂದಿನ ವಾರದೊಳಗೆ ಅದಕ್ಕೆ ಒಂದು ದಾರಿ ಕಾಣಿಸೋಣ.. " ಎನ್ನುತ್ತಾ "ಬಣ್ಣ ನನ್ನ ಒಲವಿನ ಬಣ್ಣ" ಹಾಡುತ್ತ ತನ್ನ ಕ್ಯಾಬಿನಿಗೆ ಹೋದರು.. !!!

ಇತ್ತ ರಾಜೀವ ತನ್ನ PPT ಪ್ರಿಯತಮೆಯನ್ನು ಊಟಕ್ಕೆ ಆಹ್ವಾನಿಸಿ.. ಆ ಹೋಟೆಲಿನ ಕಡೆಗೆ ಹೊರಟ!!!

                                                             **********

ನನ್ನ ಸಹೋದರ ಜ್ಞಾನೇಶನ ಮಡದಿ ಆಶಾ ಸರ್ಜಾ... ಇವರನ್ನು ನಾ ದೇವಿ ಎನ್ನುತ್ತೇನೆ... .ಕಾರಣ ಅವನ ಕಂಗಳಲ್ಲಿನ ಹೊಳಪು.. ಆಕೆಯ ಕೈ ಬೆರಳುಗಳಲ್ಲಿ ಅದೇನೋ ಜಾದು ಇದೆ.. ರಂಗೋಲಿ ಪುಡಿ ಆಕೆಯ ಮಾತಿಗೆ ನೆಲದ ಮೇಲೆ ನರ್ತಿಸುತ್ತವೆ. .. ನಗುತ್ತೀರಾ.. ನಗೋದು ಬೇಡವೇ ಬೇಡ.. ಆ ಮೇಲಿನ ರಂಗೋಲಿಗಳು ಆಕೆಯ ಸೃಷ್ಟಿಯೇ.. ದಸರಾಗೆ ಹತ್ತು ದಿನವೂ ವಿಭಿನ್ನ ಆಯಾಮದ ರಂಗೋಲಿ ಹಾಕಿದ್ದು ನೋಡಿ.. ಆಕೆಗೆ ಹೇಳಿದ್ದೆ "ದೇವಿ ನೀವು ಅನುಮತಿ ಕೊಟ್ಟರೆ.. ನಿಮ್ಮ ಹತ್ತು ದಿನದ ರಂಗೋಲಿ ವಿನ್ಯಾಸವನ್ನು ಇಟ್ಟುಕೊಂಡು ಒಂದು ಪ್ರೇಮಕತೆ ಮಾಡುತ್ತೇನೆ.. " ಗಾಬರಿಯಾಗಿದ್ದ ಆಕೆ. ."ಸರಿ ಬಾವ ಆಗಲಿ ಅದಕ್ಕೆ ಅನುಮತಿ ಯಾಕೆ.. ನನಗೂ ಕುತೂಹಲವಿದೆ  ಹೇಗೆ ಮೂಡುತ್ತವೆ" ಅಂತ ಹೇಳಿದ್ದರು..

ಆಶಾ ಸರ್ಜಾ & ಜ್ಞಾನೇಶ ಶುಭಾಶಯಗಳು!!!
ಇಂದು ಜ್ಞಾನೇಶ ಮತ್ತು ಆಶಾ ಅವರ ಹತ್ತನೆಯ ವಿವಾಹ ವಾರ್ಷಿಕೋತ್ಸವ.. ಈ ಸುಂದರ ದಿನಕ್ಕೆ ಶುಭಾಶಯಗಳು.. ನೀವು ಶುಭಾಶಯಗಳನ್ನೂ ಕೋರುತ್ತೀರಾ ಅಲ್ಲವೇ..!!! 

7 comments:

  1. Wowww...Super baavaaa..thanks a lot for this wonderful writeup

    ReplyDelete
  2. Super Guru, lovely use of rangolis, thank you for the wishes!

    ReplyDelete
  3. ನಿಜಕ್ಕೂ ಅದ್ಭುತ ಕಲೆ!! ನವ ವಧುವಂತೆ ವಸುಂಧರೆಯು ತನ್ನೆರಡೂ ಹಸ್ತಗಳನ್ನೂ ಸಿಂಗರಿಸಲು ಮದರಂಗಿಗೆ ಒಪ್ಪಿಸಿದಂತಿದೆ. ಬಣ್ಣದ ಕುಸುರಿಗೆ ನಿಮ್ಮ ಕಲ್ಪನೆಯ ಸೊಗಡು ತೆರೆದಿಟ್ಟ ಕಥೆಯೂ ಅಬ್ಬಾ ಎನ್ನುವಂತಿದೆ.. ನವ ದಿನದ ರಂಗೋಲಿಗೆ ನವವಿಧದ ಭಾವನೆಗಳ ಕುಸುರಿ.. ಪಿಸುಗುಟ್ಟಿದ ಮನದಾಳದ ಮಾತುಗಳು ನಿಮ್ಮ ತೆರೆದ ಹೃದಯಕ್ಕೆ ಇಳಿದ ಪರಿ ಸೊಗಸು..

    ReplyDelete
  4. ಸುಂದರವಾದ ರಂಗವಲ್ಲಿಗಳು....
    ..
    ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ...
    ..
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in (already site viewed 1,31,131+)
    &
    https://T.me/spn3187 (already Joined 500+)
    ..
    & this groups Share your friends & family also subscribe (join)

    ReplyDelete