ಎಲ್ಲೋ ಓದಿದ ನೆನಪು..
"ಮಗು ಅತ್ತಾಗ ಅಮ್ಮಾ ನಗೋದು ಒಂದೇ ಬಾರಿ.. ಅದು ಮಗು ಹುಟ್ಟಿದಾಗ ಮಾತ್ರ"
ಮಹಾಭಾರತದಲ್ಲಿ ಓದಿದ್ದೇವೆ ತನ್ನ ಅಂಗವನ್ನೇ ಧಾರೆ ಎರೆದು ಕೊಟ್ಟಾ ದಾನ ಶೂರ ಕರ್ಣನ ಬಗ್ಗೆ..
ಕರ್ಣ ಚಲನಚಿತ್ರದಲ್ಲಿ ವಿಷ್ಣು ತನ್ನ ತಂಗಿಯ ಮದುವೆಗಾಗಿ ತನ್ನ ದೇಹದ ಮುಖ್ಯ ಅಂಗವನ್ನೇ ದಾನ ಮಾಡುತ್ತಾರೆ
ಕನ್ನಡ ಚಿತ್ರರಂಗದ ಮರೆಯಲಾರದ ನಟ ಲೋಕೇಶ್ (ಪರಸಂಗದ ಗೆಂಡತಿಮ್ಮ) ತನ್ನ ದೇಹವನ್ನು ಸಂಶೋಧನಾ ಕಾರ್ಯಕ್ಕೆ ವೈದ್ಯಕೀಯ ವಿಭಾಗಕ್ಕೆ ದಾನ ಮಾಡಿದರು..
ಹೌದು ಈ ಸುದ್ಧಿಯನ್ನೆಲ್ಲ ಕೇಳಿದಾಗ ಓದಿದಾಗ ಆಶ್ಚರ್ಯವಾಗುತ್ತದೆ.. ಓದುತ್ತೇವೆ ಮರೆತು ಬಿಡುತ್ತೇವೆ.. ಮುಂದೆ ಯಾವಾಗಲೋ ಇದೆ ರೀತಿಯ ಘಟನೆಯ ಬಗ್ಗೆ ಕೇಳಿದಾಗ ಹೌದು ಹೌದು.. ಅದು ಇದು ಅಂಥಾ ಹೇಳಿ ನಮ್ಮ ಜೀವನದಲ್ಲಿ ಸುತ್ತಾ ಮುತ್ತಾ ಕಂಡ ಘಟನೆಯನ್ನು ಹೇಳಿ ಕೊಂಡು ಸಮಾಧಾನ ಪಟ್ಟು ಕೊಳ್ಳುತ್ತೇವೆ.. ಮತ್ತೆ ನಮ್ಮ ಜೀವನಕ್ಕೆ ಹೊರಳಿ ಕೊಳ್ಳುತ್ತೇವೆ..
ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಬೆಂಗಳೂರಿನ ಗಿರಿನಗರದ ಶ್ರೀ ವೆಂಕಟೇಶ್ವರ ಟೆಂಟ್ ನಲ್ಲಿ ಡಾನ್ಸ್ ರಾಜ ಡಾನ್ಸ್ ಚಿತ್ರ ನೋಡುತ್ತಿದ್ದೆ.. ಮಾಮೂಲಿ ಚಿತ್ರವಾಗಿತ್ತು ಅಂಥಹ ವಿಶೇಷ ಇರಲಿಲ್ಲ.. ಆದ್ರೆ ಕನ್ನಡ ನಾಡಿಗೆ ಬ್ರೇಕ್ ಡಾನ್ಸ್ ಬೆಳ್ಳಿ ಪರದೆಯ ಮೇಲೆ ಮೂಡಿ ಬಂದ ಚಿತ್ರ ಅದು.... ಚಿತ್ರದ ಅಂತಿಮ ದೃಶ್ಯದಲ್ಲಿ "ಅಮ್ಮ ಅಮ್ಮಾ ನಿನ್ನ ತ್ಯಾಗಕೆ ಸರಿ ಸಾಟಿ ಯಾರೂ ಇಲ್ಲ ನಿನಗಿಂತ ದೇವರಿಲ್ಲ" ಹಾಡು ಶುರುವಾಗುತ್ತದೆ..
"ನೀ ಕೊಟ್ಟ ಪ್ರಾಣವನ್ನು ನಿನಗಾಗಿ ನೀಡುವಾಗ ನಾ ಕಾಣದ ಆನಂದವೋ" ಸಾಲು ಬಹಳ ಗಮನ ಸೆಳೆದಿತ್ತು ಮತ್ತು ಕಾಡಿತ್ತು.. ಚಿ ಉದಯಶಂಕರ್ ಅಮ್ಮನ ಎಲ್ಲಾ ಪ್ರೀತಿಯನ್ನು ಸೇರಿಸಿ ಬರೆದ ಸಾಲಿದು..
ಇಂಥಹ ಒಂದು ಜೀವಂತ ಉದಾಹರಣೆ ಪತ್ರಿಕೆ ಮಾಧ್ಯಮ ಅಲ್ಲಿ ಇಲ್ಲಿ ಕೇಳಿದ್ದರೂ ನಮ್ಮ ಹತ್ತಿರದಲ್ಲೆ ನಡೆದಾಗ ಒಂದು ರೀತಿ ಮೈ ಜುಮ್ ಎನ್ನುತ್ತದೆ..
ಹೀಗೆ ಒಂದು ಫೇಸ್ಬುಕ್ ಕಾಮೆಂಟ್ ನೋಡಿ ನನ್ನ ಪ್ರೀತಿಯ ಗೆಳೆಯ ವೆಂಕಿ ಹೇಳಿದ.. ಲೋ ಶ್ರೀಕಿ ಬ್ರಹ್ಮ ಹೀಗೆ ಮಾಡೋಕೆ ಹೊರಟಿದ್ದಾನೆ.. ಬಾ ಹೋಗಿ ನೋಡಿ ಬರೋಣ..
ವೆಂಕಿ ಕೊಟ್ಟಾ ಲಿಂಕ್ ... ಓದಿಯೇ ಸುಸ್ತಾಗಿ ಹೋಗಿದ್ದೆ.. ಹಾಟ್ಸ್ ಆಫ್ ಬ್ರಹ್ಮ |
ಸರಿ ನಮ್ಮ ಗೆಳೆಯರ ಬಳಗಕ್ಕೆ ಚಕ ಚಕ ಫೋನಾಯಿಸಿದೆ.. ನಾನು, ವೆಂಕಿ, ಎಸ್ ಏನ್, ಎಸ್ ಕೆ ಹೋದೆವು ಬ್ರಹ್ಮನ ಮನೆಗೆ..
ಅವನ ಹೆಸರು ಬ್ರಹ್ಮಾನಂದ.. ಎಂಟನೆ ತರಗತಿಯಿಂದ ಪರಿಚಯ.. ಅವನು ಜೀವನದಲ್ಲಿ ಕಂಡ ತಿರುವುಗಳು ನಮ್ಮ ಪಶ್ಚಿಮ ಘಟ್ಟವನ್ನು ನಾಚಿಸುತ್ತದೆ..
ಅವನು ಶುರುಮಾಡಿದ.. ನಾವುಗಳು ಪ್ರಶ್ನೆ ಕೇಳಿದ್ದು ಕಡಿಮೆ.. ಎಲ್ಲಾ ಪ್ರಶ್ನೆಗಳಿಗೂ ಅವನೇ ಉತ್ತರ ಕೊಟ್ಟು ಬಿಟ್ಟಿದ್ದ.. ಅವನ ಮಾತಿನ ಸಾರಾಂಶ ಇಷ್ಟು
ಅವನ ಅಮ್ಮ ಕಿಡ್ನಿ ತೊಂದರೆಯಿಂದಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.. ಡಯಾಲಿಸಿಸ್ ನೋವು.. ಅವರಿಗೆ ಗೊತ್ತು.. ಸುಮ್ಮನೆ ದೇಹ ಉಸಿರಾಡಿಕೊಂಡು ಇರುತ್ತೆ.. ಬಿಟ್ಟರೆ ಇನ್ಯಾವುದೇ ಫಲವಿಲ್ಲ ಎನ್ನುತ್ತದೆ ವೈದ್ಯಕೀಯ ಚಿಕಿತ್ಸೆ.. ಆದರೂ ಅಂತಿಮದಿನಗಳನ್ನು ಮುಂದು ಹಾಕುತ್ತಾ ಇರುತ್ತದೆ.. ಆದರೆ ಯಾತನಮಯ ಆ ಚಿಕಿತ್ಸೆ ಎನ್ನುವುದು ಎಲ್ಲರ ಅಭಿಪ್ರಾಯ.. ನನ್ನ ಅಪ್ಪ ಕೂಡ ತಮ್ಮ ಅಂತಿಮ ದಿನಗಳಲ್ಲಿ ಈ ಯಾತನೆ ಅನುಭವಿಸಿದ್ದು ಕಣ್ಣಾರೆ ನೋಡಿದ್ದೇ..
ದೇವರಂತ ಅಮ್ಮ ಕರ್ಣನಂಥಹ ಮಗ |
ಅವನ ಸೋದರಮಾವ ಅಂದರೆ ತಾಯಿಯ ತಮ್ಮನ ಮಗನಿಗೆ ಇದೆ ತೊಂದರೆಯಾಗಿ ಯಾವ ಯಾವ ಡಾಕ್ಟರ ಮುಖಾಂತರ ಕೊಯಮತ್ತೂರಿನ ವಿವೇಕ್ ಪಾಟಕ್ ಎನ್ನುವ ಪ್ರಖ್ಯಾತ ವೈದ್ಯರ ಪರಿಚಯವಾಗಿ.. ಡಾಕ್ಟರ ಹೇಳಿದರಂತೆ ನಿಮ್ಮ ಅಮ್ಮನ ಆರೋಗ್ಯವನ್ನು ಮತ್ತು ಅವರ ಆಯಸ್ಸನ್ನು ಹತ್ತು ಹದಿನೈದು ವರ್ಷ ನೆಮ್ಮದಿಯಿಂದ ಕಳೆಯೋಕೆ ನೀ ಏಕೆ ನಿನ್ನ ಕಿಡ್ನಿ ದಾನಮಾಡಬಾರದು.. ನಿನಗೆ ಯಾವ ತೊಂದರೆ ಬರದ ಹಾಗೆ ನೋಡಿಕೊಳ್ಳೋದು ನನ್ನ ಜವಾಬ್ಧಾರಿ ಎನ್ನುವ ಭರವಸೆ ಕೊಟ್ಟರಂತೆ...
ಮನೋಜ್ಞ ಕಾಯಕಕ್ಕೆ ನೆರವಾದ ಅಂಗಳ |
ಡಯಾಲಿಸಿಸ್ ಮಾಡಿಸಿಕೊಂಡು ವರ್ಷಗಟ್ಟಲೆ ನೋವು ಅನುಭವಿಸುತ್ತ ಇರುವುದಕ್ಕಿಂತ ನೀನು ನಿನ್ನ ಅಮ್ಮನ ಮೊಗದಲ್ಲಿ ದೇಹದಲ್ಲಿ ನಲಿವು ತರಲು ಸಹಾಯ ಮಾಡಬಹುದು ಎಂದರಂತೆ... ಇವನ ಮೊದಲ ಉತ್ತರ ಕಣ್ಣು ಮಿಟುಕಿಸುವದಕ್ಕಿಂಥ ಮೊದಲೇ ಹೇಳಿದ್ದು ಓಕೆ ಡಾಕ್ಟರ್..
ಆಸ್ಪತ್ರೆ ಎನ್ನುವ ದೇವಾಲಯ |
ನಂತರ ಜನವರಿ ೨೦೧೪ ರಿಂದ ಶುರುವಾದ ಪರೀಕ್ಷೆ, ಕುಟುಂಬದ ಜೊತೆ ಮಾತುಕತೆ, ಅದು ಇದು ಎನ್ನುತ್ತಾ ಸೆಪ್ಟೆಂಬರ್ ಎರಡನೆ ತಾರೀಕು ೨೦೧೪ ಇಸವಿ ನಿಗದಿಯಾಯಿತು.. ಮಕ್ಕಳ ಜೀವನದ ಒಂದು ಅತ್ಯುತ್ತಮ ಘಟ್ಟ.. ಜೀವ ಕೊಟ್ಟು ಜನ್ಮ ನೀಡುವ ತಾಯಿಗೆ ಒಂದು ರೀತಿಯಲ್ಲಿ ಮರುಜನ್ಮ ನೀಡುವ ಒಂದು ಅಳಿಲು ಸೇವೆ..
ಅವನ ಮಾತಲ್ಲಿ ಈ ಘಟನೆಯನ್ನು ಕೇಳುತ್ತಾ ಹೋದ ಹಾಗೆ ಮೈಯೆಲ್ಲಾ ಒಂದು ಬಾರಿ ತಣ್ಣಗಾಯಿತು ನನಗೆ.. ಅರೆ ಕೇಳಿದ್ದೇವೆ ಓದಿದ್ದೇವೆ.. ಹೀಗೆ ಉಂಟಾ ಜಗತ್ತಿನಲ್ಲಿ.. ಕಾರಣ ಏನೇ ಇರಬಹುದು.. ನಮ್ಮ ಜೇಬಿಂದ ಒಂದು ಹತ್ತು ರೂಪಾಯಿ ಕೊಡುವಾಗ ಹತ್ತು ಬಾರಿ ಯೋಚಿಸುವ ವ್ಯಾಪಾರಿ ಮನಸ್ಸು ನಮ್ಮದು.. (ಎಲ್ಲರದಲ್ಲ).. ಅಂಥಹುದರಲ್ಲಿ ದೇಹದ ಒಂದು ಮುಖ್ಯ ಅಂಗವನ್ನೇ ಕೊಡುವುದು.. ಇದರ ಬಗ್ಗೆ ಕೇಳಿದಾಗ ದಾನ ಶೂರ ಕರ್ಣ ಬಗ್ಗಿ ನೋಡಿ ಸಲಾಂ ಮಾಡಿದ ಅನ್ನಿಸಿತು..
ಹೌದು ಕೊಯಮತ್ತೂರಿನ ಕೊವೈ ಮೆಡಿಕಲ್ ಸೆಂಟರ್ ಹಾಸ್ಪಿಟಲ್ (KHMC) ಇದೆ ಸೆಪ್ಟೆಂಬರ್ ೨ರಂದು ತನ್ನ ತಾಯಿಗೆ ಮರು ಜನ್ಮ ನೀಡಿದ ನಮ್ಮ ಸ್ನೇಹಿತನನ್ನು ಭೇಟಿ ಮಾಡಿದಾಗ ಮನಸ್ಸು ದೇಹ ಎರಡು ಕಂಪಿಸುತ್ತಿತ್ತು..
ಕೊಡುಗೆ ಕೊಟ್ಟ ನಂತರದ ಚಿತ್ರ - ಬ್ರಹ್ಮಾನಂದ |
ಅಮ್ಮ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ.. ವೈದ್ಯರ ಸಲಹೆ ಮೇರೆ ನನ್ನ ಸ್ನೇಹಿತ ಒಂದು ಹತ್ತು ದಿನ ಸಂಪೂರ್ಣ ವಿಶ್ರಾಂತಿ ಪಡೆದು ಬೆಂಗಳೂರಿಗೆ ಬರಲಿದ್ದಾನೆ.. ತಾಯಿ ಇನ್ನೊಂದು ಆರು ತಿಂಗಳು ಕೊಯಮತ್ತೂರಿನಲ್ಲಿಯೇ ಇದ್ದು ಬೇಕಾದ ಶುಶ್ರೂಷೆ ಪಡೆದು ಆರೋಗ್ಯಭಾಗ್ಯ ಪಡೆದು ಬೆಂಗಳೂರಿಗೆ ಬರಲಿದ್ದಾರೆ..
ಅದ್ಭುತ ಗೆಳೆಯನೊಡನೆ ಕಳೆದ ಆ ಸಮಯ.. ಮೈ ರೋಮಾಂಚನ!!! |
ನಮ್ಮೆಲ್ಲರ ಪ್ರಾರ್ಥನೆ ಹಾರೈಕೆ ಈ ಕಣ್ಣಿಗೆ ಕಾಣುವ ದೇವರ ಹಾಗೂ ಆಕೆಯ ದೇವರಂತಹ ಪುತ್ರನ ಜೊತೆಯಲ್ಲಿ ಇದೆ ಮತ್ತು ಇರುತ್ತದೆ..
ಬ್ರಹ್ಮನ ನೀ ನಿಜವಾಗಿಯೂ ತಾಯಿಗೆ ಮರುಜನ್ಮ ನೀಡಿದ ಬ್ರಹ್ಮ..
ನಿನ್ನ ಮನೋತ್ಯಾಗಕ್ಕೆ ನಮ್ಮೆಲ್ಲರ ಕಡೆಯಿಂದ ನಮಸ್ಕಾರಗಳು!!!